ಹಸಿರಾಯ್ತು ಮರಳಿ ಜೀವನ… ಗ್ರೀಷ್ಮಗಳೆಷ್ಟು ಉರುಳಿ ಹೋದರೂ…ಉಳಿದಿದೆ…ಚೈತ್ರ ತಂದ ಅದೇ ಹೊಸತನ….ಕವಿಯತ್ರಿ ಶಿವದೇವಿ ಅವನೀಶಚಂದ್ರ ಅವರ ಲೇಖನಿಯಲ್ಲಿ ಮೂಡಿದ ಕವಿತೆಯನ್ನು ತಪ್ಪದೆ ಮುಂದೆ ಓದಿ…
ಕತ್ತಲಾವರಿಸಿದಂತೆ ಚಿತ್ತದಲಿ
ನಿನ್ನ ಚಟುವಟಿಕೆ ಆರಂಭವಾಗಿ
ಹಗಲಿನೆಲ್ಲ ಹತಾಶೆಗಳ ಒತ್ತಟ್ಟಿಗಿರಿಸಿ
ನನ್ನೆದೆಯ ತುಂಬಾ ನಿನ್ನದೇ ಬೆಳಕು….
ಎಲ್ಲ ಸದ್ದೂ ನಿನ್ನೆದೆಯಲ್ಲಿಯೇ ಹುದುಗಿ
ಒಂದೇ ನಾದವುಳಿದು….
ಮೀಟುತಿದೆ ಮಧುರನಾದ
ನಿನ್ನ ಪ್ರೀತಿಯ ಬೆರಳು
ಹೇಗಾದೆನೋ ನಿನ್ನ ಕೈಯ ತಂತಿ ನಾನು…
ನೀನು ತುಟಿಗಿರಿಸಿದ ಕೊಳಲು
ಎದೆಯ ಭಾವದುಸಿರ….ಈ
ಬುರುಡೆಯಲ್ಲಿ ತುಂಬಿ…..
ನಾನಾದೆ ಜೀವಂತ…ಇನ್ನಿಲ್ಲ ನನಗೆ ಯಾವ ಧಾವಂತ
ಎಲ್ಲವೂ ಶಾಂತ…
ನಿಜವಾದ ಉಸಿರು ತುಂಬಿದೆ
ನನ್ನಲ್ಲಿ
ನೀ
ಹಸಿರಾಯ್ತು ಮರಳಿ ಜೀವನ… ಗ್ರೀಷ್ಮಗಳೆಷ್ಟು ಉರುಳಿ ಹೋದರೂ…ಉಳಿದಿದೆ…ಚೈತ್ರ ತಂದ ಅದೇ ಹೊಸತನ….
ನಿನ್ನ ಬೆರಳಲ್ಲಿ ಏನಿದೆಯೋ ಮಾಂತ್ರಿಕತೆ….ಆ ಆರ್ದ್ರ ನೋಟದಲಿ ಅದು ಎಂತಹ
ಅಭಯ… ಎಲ್ಲಾ ವಾತ್ಸಲ್ಯ ಭಾವಗಳ ತುಂಬಿ…..
ನಿತ್ಯವೂ ಹೊಸತಾಯಿತು….
ಅನಿತ್ಯವೆಂಬ ಭೀತಿಯನಳಿಸಿ
ನನ್ನ ಉಸಿರಲ್ಲೇ ಇರಲಿ ಸದಾ ನಿನ್ನ ಹೆಸರು….
ನನ್ನ ಚಿರಂತನತೆಯ ಭರವಸೆಯಾಗಿ….
- ಶಿವದೇವಿ ಅವನೀಶಚಂದ್ರ – ನಿವೃತ್ತ ಶಿಕ್ಷಕಿ, ಕೊಡಗು
