ಬಾಹ್ಯಾಕಾಶದಲ್ಲಿ ಇತಿಹಾಸ ಸೃಷ್ಟಿಸಲಿರುವ : ಶುಭಾಂಶು ಶುಕ್ಲಾ

ಭಾರತೀಯ ಬಾಹ್ಯಾಕಾಶ ಇತಿಹಾಸದಲ್ಲಿ ಮತ್ತೊಂದು ಐತಿಹಾಸಿಕ ದಾಖಲೆಯನ್ನು ಸೃಷ್ಟಿಸಲು ಭಾರತ ಸಜ್ಜಾಗಿದೆ. ಭಾರತೀಯ ವಾಯುಪಡೆಯ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲ ಅವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ISS) 40 ವರ್ಷಗಳ ಬಳಿಕ ಪ್ರಯಾಣಿಸುವ ಮೊದಲ ಭಾರತೀಯ ಗಗನಯಾತ್ರಿಯಾಗಿ ಇತಿಹಾಸ ನಿರ್ಮಿಸಲಿದ್ದಾರೆ. ಅವರ ಕುರಿತು ಇನ್ನಷ್ಟು ರೋಚಕ ವಿಷಯಗಳನ್ನು ಲೇಖಕರಾದ ಡಾ.ಗುರುಪ್ರಸಾದ ರಾವ್ ಹವಲ್ದಾರ್ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

1984ರಲ್ಲಿ ವಿಂಗ್ ಕಮಾಂಡರ್ ರಾಕೇಶ್ ಶರ್ಮಾ ಅವರು ಸೋವಿಯತ್ ಒಕ್ಕೂಟದ ಸೊಯುಜ್ ಟಿ-11 ಮಿಷನ್ ಮೂಲಕ ಬಾಹ್ಯಾಕಾಶಕ್ಕೆ ತೆರಳಿದ ನಂತರ, 40 ವರ್ಷಗಳ ಬಳಿಕ ಭಾರತದಿಂದ ಮತ್ತೊಬ್ಬ ಗಗನಯಾತ್ರಿ ISSಗೆ ಪ್ರಯಾಣಿಸುತ್ತಿದ್ದಾರೆ. ಈ ಮಿಷನ್ ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಮತ್ತು ಆಕ್ಸಿಯಮ್ ಸ್ಪೇಸ್‌ನ ಸಹಯೋಗದ ಫಲವಾಗಿದೆ.

ಅಮೆರಿಕದ ಫ್ಲೋರಿಡಾದಲ್ಲಿರುವ ಕೆನೆಡಿ ಸ್ಪೇಸ್ ಸೆಂಟರ್​ನಿಂದ ಸ್ಪೇಸ್​​ಎಕ್ಸ್ ಡ್ರಾಗನ್ ನೌಕೆ ಗಗನಕ್ಕೆ (SpaceX Crew Dragon C213) ಹಾರಲಿದೆ. ಸ್ಪೇಸ್​​ಎಕ್ಸ್​ಗೆ ಸೇರಿದ ಫಾಲ್ಕಂ 9 ರಾಕೆಟ್ (Falcom 9) ಈ ಗಗನನೌಕೆಯನ್ನು ಆಗಸಕ್ಕೆ ಹೊತ್ತಯ್ಯಲಿದೆ. ಆ್ಯಕ್ಸಿಯಮ್ ಮಿಷನ್-4 28 ಗಂಟೆ ಕಾಲ ಆಗಸದಲ್ಲಿ ಪ್ರಯಾಣಿಸಿ ಜೂನ್ 11, ಬುಧವಾರ ರಾತ್ರಿ 10 ಗಂಟೆಗೆ (ಭಾರತೀಯ ಕಾಲಮಾನ) ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS- International Space Station) ತಲುಪಲಿದೆ. ಈ ಗಗನನೌಕೆಯಲ್ಲಿ ಶುಭಾಂಶು ಶುಕ್ಲ ಹಾಗೂ ಇತರ ಮೂವರು ವ್ಯಕ್ತಿಗಳು ಇರಲಿದ್ದಾರೆ.

1998ರಲ್ಲಿ ಸ್ಥಾಪನೆಯಾದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್‌ಎಸ್‌)ವನ್ನು ಪ್ರವೇಶಿಸುತ್ತಿರುವ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಶುಭಾಂಶು ಪಾತ್ರವಾಗಲಿದ್ದಾರೆ. ಅಷ್ಟೇ ಅಲ್ಲದೆ 1984ರ ರಾಕೇಶ್‌ ಶರ್ಮಾ ಅವರ ಐತಿಹಾಸಿಕ ಬಾಹ್ಯಾಕಾಶ ಯಾತ್ರೆಯ ನಂತರ ಬಾಹ್ಯಾಕಾಶಕ್ಕೆ ತೆರಳುವ ಎರಡನೇ ಭಾರತೀಯನೂ ಇವರಾಗಲಿದ್ದಾರೆ.

ಫೋಟೋ ಕೃಪೆ : ಅಂತರ್ಜಾಲ

ಇಲಾನ್ ಮಸ್ಕ್ ಅವರ ಸ್ಪೇಸ್​​ಎಕ್ಸ್ ಕಂಪನಿಯ ಫಾಲ್ಕನ್ 9 ರಾಕೆಟ್ ಮೂಲಕ ಕ್ರ್ಯೂ ಡ್ರಾಗಾನ್ ಸಿ213 ಎನ್ನುವ ಗಗನನೌಕೆ ಹತ್ತಿ ನಾಲ್ವರು ವ್ಯಕ್ತಿಗಳು ಐಎಸ್​​ಎಸ್​​ಗೆ ಹೋಗಲಿದ್ದಾರೆ. ಇದು ಖಾಸಗಿ ಕಂಪನಿಯಾದ ಏಕ್ಸಿಯಾಮ್ ಆಯೋಜಿಸಿರುವ ಪ್ರಯಾಣ. ಆ ಕಂಪನಿಗೆ ಇದು ನಾಲ್ಕನೇ ಮಿಷನ್. 2022, 2023 ಮತ್ತು 2024ರಲ್ಲೂ ಇದೇ ಮಿಷನ್ ಕೈಗೊಂಡು ಯಶಸ್ವಿಯಾಗಿದೆ.

ನಾಲ್ಕನೇ ಮಿಷನ್​​ನಲ್ಲಿ ಶುಭಾಂಶು ಶುಕ್ಲ ಮುಖ್ಯ ಪೈಲಟ್ ಆಗಿರುತ್ತಾರೆ. ಪೆಗ್ಗಿ ವಿಟ್ಸನ್ ಅವರು ಕಮಾಂಡರ್ ಆಗಿರುತ್ತಾರೆ. ಹಂಗೆರಿ ಟಿಬೋರ್ ಕಾಪು ಮತ್ತು ಪೋಲ್ಯಾಂಡ್​​ನ ಸ್ಲಾವೋಜ್ ಉಜ್ನಾನ್​ಸ್ಕಿ ವಿಸ್ನಿಯೆವಸ್ಕಿ ಅವರಿರುತ್ತಾರೆ.

ರಾಕೇಶ್ ಶರ್ಮಾ 1984ರಲ್ಲಿ ರಷ್ಯಾದ ಸೋಯುಜ್ ಟಿ-11 ಮಿಷನ್ 8 ದಿನ ಇದ್ದರು. ಅದು ಭಾರತಕ್ಕೆ ಹೊಸ ಇತಿಹಾಸ ಪುಟ ತೆರೆಯಲ್ಪಟ್ಟ ಅವಿಸ್ಮರಣೀಯ ಘಟನೆ. ಬಾಹ್ಯಾಕಾಶಕ್ಕೆ ಏರಿದ ಮೊದಲ ವ್ಯಕ್ತಿ ಎನಿಸಿದ್ದರು ರಾಕೇಶ್. ಆ ಸ್ಪೇಸ್​​ಶಿಪ್​​ನಲ್ಲಿ ರಾಕೇಶ್ ಶರ್ಮಾ ಪೇಲೋಡ್ ಸ್ಪೆಷಲಿಸ್ಟ್ ಆಗಿ ಕಾರ್ಯನಿರ್ವಹಿಸಿದ್ದರು.

ಕಲ್ಪನಾ ಚಾವ್ಲಾ (Kalpana Chawla) ಅವರು ಬಾಹ್ಯಾಕಾಶಕ್ಕೆ ಪ್ರಯಾಣಿಸಿದ ಮೊದಲ ಭಾರತೀಯ ಮಹಿಳೆ ಎನಿಸಿದ್ದರು. 2003ರಲ್ಲಿ ಅವರು ನಾಸಾದ ಸ್ಪೇಸ್​​ಶಿಪ್​​ನಲ್ಲಿ ಹೋಗಿದ್ದರು. ಐಎಸ್​​ಎಸ್​​​ನಲ್ಲಿ ಉಳಿದಿರಲಿಲ್ಲ. ಆದರೆ, ಮರಳುವಾಗ ದುರ್ಮರಣವಪ್ಪಿದ್ದರು. ಸುನೀತಾ ವಿಲಿಯಮ್ಸ್ ಅವರು ಎರಡು ಬಾರಿ ಐಎಸ್​​ಎಸ್​​ಗೆ ಹೋಗಿದ್ದಾರೆ. ಇವರು ಪೂರ್ಣಪ್ರಮಾಣದ ಗಗನಯಾತ್ರಿಯಾಗಿ ಹೋಗಿದ್ದಾರೆ. ಭಾರತ ಮೂಲದವರಾದರೂ ಅಮೆರಿಕವನ್ನು ಪ್ರತಿನಿಧಿಸಿ ಇವರು ಬಾಹ್ಯಾಕಾಶ ನಿಲ್ದಾಣಕ್ಕೆ ಹೋಗಿ ಬಂದಿದ್ದಾರೆ.

ಶುಭಾಂಶು ಶುಕ್ಲಾ : 

ಉತ್ತರಪ್ರದೇಶದ ಲಕ್ನೋ ಸಂಜಾತರಾದ ಶುಭಾಂಶು ಶುಕ್ಲಾ ಹುಟ್ಟಿದ್ದು 1985, ಅಕ್ಟೋಬರ್ 10ರಂದು ಶಂಭು ದಯಾಳ್ ಶುಕ್ಲಾ ಮತ್ತು ಆಶಾ ಅವರ ಪುತ್ರ ನಾಗಿ ಜನಿದರು , ಸಹೋದರಿಯರು ಸುಚಿ, ನಿಧಿ  ಪತ್ನಿ ಕಮ್ನಾ ಶುಕ್ಲಾ ಆರು ವರ್ಷದ ಇದ್ದಾನೆ.ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ (NDA), ಪುಣೆಯಿಂದ ಪದವಿ ಪಡೆದರು.

ಕುಟುಂಬದ ಜೊತೆ (ಫೋಟೋ ಕೃಪೆ : ಅಂತರ್ಜಾಲ)

ಕಾರ್ಗಿಲ್‌ ಯುದ್ಧ ನೋಡಿ ಶುಕ್ಲಾ ಸೇನೆಗೆ :

1999ರಲ್ಲಿ ನಡೆದ ಪಾಕಿಸ್ತಾನದ ವಿರುದ್ಧದ ಭಾರತದ ಕಾರ್ಗಿಲ್‌ ಯುದ್ಧದಿಂದ ಪ್ರಭಾವಿತರಾಗಿ ಸೇನೆ ಸೇರಿದರು. ಯುಪಿಎಸ್‌ಸಿಯಲ್ಲಿ ಎನ್‌ಡಿಎ ಪರೀಕ್ಷೆ ಉತ್ತೀರ್ಣರಾದ ಶುಕ್ಲಾ ಬಳಿಕ 2005ರಲ್ಲಿ ರಾಷ್ಟ್ರೀಯ ರಕ್ಷಣಾ ಅಕಾಡೆಮೆಯಿಂದ ಕಂಪ್ಯೂಟರ್ಸ್‌ ಸೈನ್ಸ್ನಲ್ಲಿ ಪದವಿ ಪಡೆದರು. ಬಳಿಕ ಬೆಂಗಳೂರಿನ ಐಐಎಸ್‌ಸಿಯಲ್ಲಿ ಏರೋಸ್ಪೇಸ್ ಎಂಜಿನಿಯರಿಂಗ್‌ನಲ್ಲಿ ಮಾಸ್ಟರ್‌ ಆಫ್‌ ಟೆಕ್ನಾಲಜಿ ಪದವಿ ಪಡೆದರು.

ಬಳಿಕ ಸೇನೆಯಲ್ಲಿ ಫ್ಲೈಯಿಂಗ್‌ ಬ್ರ್ಯಾಂಚ್‌ಗೆ ಸೇರಿದ ಶುಕ್ಲಾರನ್ನು ತರಬೇತಿ ಬಳಿಕ ಭಾರತೀಯ ವಾಯುಪಡೆಯ ಯುದ್ಧ ವಿಮಾನ ಪೈಲಟ್‌ ಆಗಿ ನೇಮಿಸಲಾಯಿತು. 2000 ಗಂಟೆಗಳಿಗೂ ಹೆಚ್ಚು ವಿಮಾನ ಹಾರಾಟದ ಅನುಭವ ಹೊಂದಿರುವ ಇವರು ಸುಖೋಯ್‌ 30 ಎಂಕೆಐ, ಮಿಗ್ಗ್ 21, ಮಿಗ್‌ 29, ಜಾಗ್ವಾರ್‌, ಹಾಕ್‌, ಡೋರ್ನಿಯರ್‌ 228, ಎನ್‌ 32 ವಿಮಾನ ಹಾರಿಸಿದ ಅನುಭವ ಹೊಂದಿದ್ಧಾರೆ.

ಆಯ್ಕೆಗೆ ಕಾರಣ

ಭಾರತದ ಗಗನಯಾನ ಯೋಜನೆಗೆ ಸಮರ್ಥ ವ್ಯಕ್ತಿಗಳನ್ನು ಆಯ್ಕೆ ಮಾಡುವ ಸಲುವಾಗಿ ವಾಯುಪಡೆಯ ಇನ್ಸ್​​ಟಿಟ್ಯೂಟ್ ಆಫ್ ಏರೋಸ್ಪೇಸ್ ಮೆಡಿಸಿನ್ ಮತ್ತು ಇಸ್ರೋ ಜಂಟಿಯಾಗಿ ಅಭ್ಯರ್ಥಿಗಳ ಆಯ್ಕೆಗೆ ನಿಂತವು. ಗಗನಯಾತ್ರಿಗಳಾಗಲು ಅರ್ಜಿ ಹಾಕಿದ ನೂರಾರು ಮಂದಿಯಲ್ಲಿ ಶುಭಾಂಶು ಒಬ್ಬರು.

ಭಾರತೀಯ ವಾಯುಪಡೆಯ ಗ್ರೂಪ್ ಕ್ಯಾಪ್ಟನ್ ಆಗಿರುವ ಶುಭಾಂಶು, ಸುಖೋಯ್ 30, ಜಾಗ್ವಾರ್, ಹಾಕ್, ಮತ್ತು ಡಾರ್ನಿಯರ್ ಜೆಟ್ ವಿಮಾನಗಳನ್ನು 2,000 ಗಂಟೆಗಳ ಕಾಲ ಹಾರಾಟ ಮಾಡಿದ ಅನುಭವಿ ಪೈಲಟ್ ಆಗಿದ್ದಾರೆ. ಭಾರತದ ಗಗನಯಾನ ಯೋಜನೆಗಾಗಿ ISRO ಮತ್ತು ವಾಯುಪಡೆಯ ಇನ್‌ಸ್ಟಿಟ್ಯೂಟ್ ಆಫ್ ಏರೋಸ್ಪೇಸ್ ಮೆಡಿಸಿನ್ ಜಂಟಿಯಾಗಿ ಆಯ್ಕೆ ಪ್ರಕ್ರಿಯೆ ನಡೆಸಿದಾಗ, ನೂರಾರು ಅರ್ಜಿದಾರರಲ್ಲಿ ಶುಭಾಂಶು ಶುಕ್ಲ ಸೇರಿದಂತೆ ನಾಲ್ವರು ಅಂತಿಮಗೊಂಡರು. 2019ರಲ್ಲಿ ಶುಕ್ಲಾ ಸೇರಿದಂತೆ ಹಲವರನ್ನು ಗಗನಯಾತ್ರಿ ಆಯ್ಕೆ ಪಟ್ಟಿಗೆ ಸೇರಿಸಲಾಗಿತ್ತು. 2020ರಲ್ಲಿ ಅಂತಿಮ ನಾಲ್ವರ ಪಟ್ಟಿಯಲ್ಲಿ ಸ್ಥಾನ ಪಡೆದ ಶುಕ್ಲಾ ಹೆಸರನ್ನು, ಐಎಸ್‌ಎಸ್‌ ಪ್ರಯಾಣದ ವ್ಯಕ್ತಿ ಎಂದು 2021ರಲ್ಲಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದರು.

ಅಮೆರಿಕದ ಆ್ಯಕ್ಸಿಯಮ್​​ನ ನಾಲ್ಕನೇ ಬಾಹ್ಯಾಕಾಶ ಪ್ರಯಾಣಕ್ಕೆ ಮುಖ್ಯ ಪೈಲಟ್ ಆಗಿ ಶುಭಾಂಶು ಶುಕ್ಲ ಅವರನ್ನು ಆಯ್ಕೆ ಮಾಡಲಾಯಿತು. ವಾಯುಪಡೆಯಲ್ಲಿ ಫೈಟರ್ ಜೆಟ್​​ಗಳನ್ನು ಚಲಾಯಿಸಿದ ಅನುಭವವು ಅವರಿಗೆ ಈ ಜವಾಬ್ದಾರಿ ಸಿಗುವಂತೆ ಮಾಡಿದೆ. ಇದಕ್ಕೆ ಮುನ್ನ ಶುಭಾಂಶು ಶುಕ್ಲ ಅವರು ರಷ್ಯಾ, ಯೂರೋಪ್, ಅಮೆರಿಕದ ನಾಸಾ ಇತ್ಯಾದಿ ಹಲವೆಡೆ ಗಗನಯಾತ್ರೆಗೆ ಸಂಬಂಧಿಸಿದ ಎಲ್ಲಾ ರೀತಿಯ ತರಬೇತಿ ಮತ್ತು ನೈಪುಣ್ಯ ಪಡೆದು ಬಂದಿದ್ದಾರೆ.

ಶುಭಾಂಶು ಹಾಗೂ ತಂಡ ಹಲವು ರೀತಿಯ ತರಬೇತಿ ಪಡೆದಿದೆ.ಎತ್ತರದ ಪ್ರದೇಶ, ಕಡಿಮೆ ಒತ್ತಡವಿರುವ ವಾತಾವರಣದಲ್ಲಿ ಬದುಕುವ, ಶೂನ್ಯ ಗುರುತ್ವದಲ್ಲಿ ಬದುಕುವ ತರಬೇತಿಯನ್ನು ತಂಡ ಪಡೆದಿದೆ. ಜತೆಗೆ ತುರ್ತು ಪರಿಸ್ಥಿತಿಗಳನ್ನು ಎದುರಿಸುವುದು, ಅಗತ್ಯ ತಾಂತ್ರಿಕ ಜ್ಞಾನವನ್ನು ಪಡೆದುಕೊಳ್ಳಲಾಗಿದೆ.

ಸಾಮಾನ್ಯವಾಗಿ ಬಾಹ್ಯಾಕಾಶಕ್ಕೆ ತೆರಳುವ ಮುನ್ನ ಗಗನಯಾತ್ರಿಗಳು ಕೈಗೊಳ್ಳುವ ಕ್ವಾರಂಟೈನ್‌ ಹಂತದಲ್ಲಿ ಪ್ರಸ್ತುತ ಶುಭಾಂಶು ತಂಡವಿದೆ ಈಗ ಇದನ್ನು ಮುಗಿಸಿರುವ ತಂಡ ನಭಕ್ಕೆ ಹಾರಲು ತಯಾರಾಗಿದೆ. ಗಗನಯಾತ್ರಿಗಳ ಆರೋಗ್ಯ ಸ್ಥಿರವಾಗಿರಿಸಲು ಹಾಗೂ ಯಾವುದೇ ಸೋಂಕು ಬಾರದಂತೆ ತಡೆಯಲು ಸಹಾಯ ಮಾಡುತ್ತದೆ.

ಶುಭಾಂಶು ಶುಕ್ಲಾ ಅವರು ಕಮರ್ಷಿಯಲ್ ಸ್ಪೇಸ್​​ಫ್ಲೈಟ್​​ನಲ್ಲಿ ಪ್ರಯಾಣಿಸುವ ಮೊದಲ ಭಾರತೀಯ ವ್ಯಕ್ತಿ. ಐಎಎಸ್​​ಗೆ ಹೋಗುವ ಮೊದಲ ಭಾರತೀಯ ಪ್ರಜೆ. ಸ್ಪೇಸ್​ಫ್ಲೈಟ್​​ನ ಪೈಲಟ್ ಆದ ಮೊದಲ ಭಾರತೀಯ ವ್ಯಕ್ತಿ ಎನ್ನುವ ಗರಿಮೆಯೂ ಅವರಿಗಿದೆ.

 (ಫೋಟೋ ಕೃಪೆ : ಅಂತರ್ಜಾಲ)

ಬಾಹ್ಯಾಕಾಶದಲ್ಲಿ ಪ್ರಯೋಗ :

ಬಾಹ್ಯಾಕಾಶ ನಿಲ್ದಾಣದ ವಾಸದ 14 ದಿನಗಳ ವರೆಗೆ ವಾಸಮಾಡಲಿದ್ದಾರೆ.ಸಂದರ್ಭದಲ್ಲಿ ಶುಭಾಂಶುರಿಂದ ಬಾಹ್ಯಾಕಾಶದಲ್ಲಿ 7 ಪ್ರಯೋಗಗಳನ್ನು ಮಾಡಲಿದ್ದಾರೆ.ಕರ್ನಾಟಕದಲ್ಲಿ ಅಭಿವೃದ್ಧಿಪಡಿಸಲಾದ 4 ಸೇರಿ 7ಪ್ರಯೋಗಗಳ ಬಗ್ಗೆ ಶುಭಾಂಶು ಶುಕ್ಲಾ ಐಎಸ್‌ಎಸ್‌ನಲ್ಲಿ ಅಧ್ಯಯನ ಕೈಗೊಳ್ಳಲಿದ್ದಾರೆ. ಬೆಂಗಳೂರಿನ ಐಐಎಸ್‌ಸಿ ನೆರವಿ ನೊಂದಿಗೆ ಬಾಹ್ಯಾಕಾಶದಲ್ಲಿ ವಾಟರ್‌ ಬಿಯರ್‌ ಸೂಕ್ಷ್ಮ ಜೀವಿಗಳ ಬದುಕುಳಿ ಯುವಿಕೆ, ಸಂತಾನೋತ್ಪತ್ತಿಯ ಅಧ್ಯ ಯನ ಹಾಗೂ ಎಲೆಕ್ಟ್ರಾನಿಕ್‌ ಪರದೆಗಳಲ್ಲಿ ಮಾನವನ ಸಂವಾದ ವಿಶ್ಲೇಷಿಸಲಿದ್ದಾರೆ. ಬೆಂಗಳೂರಿನ ಇನ್‌ಸ್ಟೆಮ್‌ ನೆರವಿ ನೊಂದಿಗೆ ಪೂರಕ ಆಹಾರಗಳು ಬಾಹ್ಯಾಕಾಶದಲ್ಲಿ ಮಾನವನ ಮಾಂಸಖಂಡ ಬೆಳವಣಿಗೆ ಮೇಲೆ ಬೀರುವ ಪರಿಣಾಮ ಹಾಗೂ ಧಾರವಾಡ ಕೃಷಿ ವಿವಿ ಸಹಯೋ ಗದೊಂದಿಗೆ ಬೀಜಗಳ ಮೊಳಕೆಗಳ ಬಗ್ಗೆ ಅಧ್ಯಯನ ನಡೆಸಲಿದ್ದಾರೆ. ಇದರ ಜತೆಗೆ ದೆಹಲಿಯ 2, ಕೇರಳದ 1 ಸಂಸ್ಥೆಗಳಿಗೆ ಸಂಬಂಧಿಸಿದ ಅಧ್ಯಯನವನ್ನು ಅವರು ನಡೆಸಲಿದ್ದಾರೆ.

ಬಾಹ್ಯಾಕಾಶದಲ್ಲೂ  ಮನೆಯೂಟ:

ಬಾಹ್ಯಾಕಾಶ ನಿಲ್ದಾಣದಲ್ಲಿ ಗಗನಯಾತ್ರಿಗಳು ಸೇವಿಸುವ ಹೆಚ್ಚಿನ ಆಹಾರವನ್ನು ನಾಸಾ ಸಂಸ್ಥೆಯೇ ಸಿದ್ಧಪಡಿಸುತ್ತದೆ. ಆದಾಗ್ಯೂಇಸ್ರೋ ಪ್ರಯತ್ನದಿಂದಾಗಿ ಶುಭಾಂಶು ಅವರು ಹೆಸರು ಬೇಳೆ ಹಲ್ವಾ, ಕ್ಯಾರಟ್‌ ಹಲ್ವಾ, ಮಾವಿನ ಹಣ್ಣಿನ ರಸ ಹಾಗೂ ಅನ್ನವನ್ನು ತಮ್ಮೊಂದಿಗೆ ಕೊಂಡೊಯ್ಯುತ್ತಿದ್ದಾರೆ. 2006ರಲ್ಲಿ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದ್ದ ಭಾರತ ಮೂಲದ ಗಗನಯಾನಿ ಸುನೀತಾ ವಿಲಿಯಮ್ಸ್‌ ವಿಶೇಷವಾಗಿ ತಯಾರಿಸಿದ್ದ ಸಮೋಸಾಗಳನ್ನು ತಮ್ಮೊಂದಿಗೆ ತಗೆದುಕೊಂಡು ಹೋಗಿದ್ದರು.

ಶುಭಾಂಶು ಶುಕ್ಲಾ ಅವರು ಐಎಸ್​ಎಸ್​​ಗೆ ಹೋಗಿ ಬರುತ್ತಿರುವುದು ಭಾರತಕ್ಕೆ ಹಲವು ರೀತಿಯಲ್ಲಿ ಮಹತ್ವದ್ದಾಗಿದೆ. 2027ರಲ್ಲಿ ಭಾರತವು ಗಗನಯಾನ ಯೋಜನೆ ಹಮ್ಮಿಕೊಂಡಿದೆ. ಶುಭಾಂಶು ಅವರು ಈಗ ಏಕ್ಸಿಯಾಂ ಮಿಷನ್​ನಲ್ಲಿ ಪೈಲಟ್ ಆಗಿ ಅನುಭವ ಪಡೆದು ಬಂದರೆ ಭಾರತದ ಗಗನಯಾನ ಯೋಜನೆಗೆ ಒಂದು ದೊಡ್ಡ ಬಲ ಸಿಕ್ಕಂತಾಗುತ್ತದೆ. ಗಗನಯಾನದ ವೇಳೆ ಎದುರಾಗುವ ಪ್ರತ್ಯಕ್ಷ ಸಮಸ್ಯೆಗಳಿಗೆ ಸಜ್ಜಾಗಲು ಅನುಕೂಲವಾಗುತ್ತದೆ. ಅಂದಹಾಗೆ, ಆ್ಯಕ್ಸಿಯಮ್ ಜೊತೆ ಈ ಮಿಷನ್​​ಗೆ ಇಸ್ರೋ ಕೂಡ ಭಾಗಿಯಾಗಿದೆ. ಇಸ್ರೋಗೆ ಈ ಮಿಷನ್​​ನಿಂದ ಆಗುವ ಒಟ್ಟು ವೆಚ್ಚ 550 ಕೋಟಿ ರೂ. ಆದರೆ, ಇದು 2027ರ ಗಗನಯಾನ ಮಿಷನ್​​ಗೆ ಒಂದು ಉತ್ತಮ ಪೂರ್ವಭಾವಿ ತಯಾರಿ ಎಂದು ಹೇಳಬಹುದು.

ಪ್ರಧಾನಿ ಯೊಂದಿಗೆ ಮಾತುಕತೆ :

1984ರಲ್ಲಿ ರಷ್ಯಾದ ಸುಯೇಜ್ ಸ್ಪೇಸ್ ಕ್ರಾಫ್ಟ್‌ನಿಂದ ಭಾರತದ ರಾಕೇಶ್ ಶರ್ಮಾ ಅವರು ಬಾಹ್ಯಾಕಾಶ ನಿಲ್ದಾಣಕ್ಕೆ ಹೋಗಿದ್ದರು. ಅದಾದ ಬಳಿಕ 41 ವರ್ಷಗಳ ಬಲಿಕ ಶುಭಾಂಶು ಶುಕ್ಲಾ ಅವರು ಭಾರತದಿಂದ ಬಾಹ್ಯಾಕಾಶ ಯಾತ್ರೆ ಹೋಗುವ ಅವಕಾಶ ಸಿಕ್ಕಿದೆ.1984ರಲ್ಲಿ 8 ದಿನಗಳ ಕಾಲ ಬಾಹ್ಯಾಕಾಶದಲ್ಲಿದ್ದ ರಾಕೇಶ್ ಶರ್ಮಾ ಅವರು ಅಂದಿನ ಪ್ರಧಾನಮಂತ್ರಿ ಇಂದಿರಾಗಾಂಧಿ ಜೊತೆ ಬಾಹ್ಯಾಕಾಶದಿಂದಲೇ ಮಾತನಾಡಿದ್ದರು. ಆಗ ಇಂದಿರಾಗಾಂಧಿ ಅವರು ಬಾಹ್ಯಾಕಾಶದಿಂದ ಭಾರತ ಹೇಗೆ ಕಾಣುತ್ತೆ ಎಂದು ಕೇಳಿದ್ದರು. ಅದಕ್ಕೆ ರಾಕೇಶ್ ಶರ್ಮಾ ಅವರು ಸಾರೇ ಜಹಂಸೇ ಅಚ್ಚಾ ಎಂದಿದ್ದರು. ಈಗ ಅದೇ ರೀತಿ ಶುಭಾಂಶು ಶುಕ್ಲಾ ಕೂಡ ಪ್ರಧಾನಿ ನರೇಂದ್ರ ಮೋದಿ ಜೊತೆ ಮಾತುಕತೆಗೆ ವ್ಯವಸ್ಥೆ ಮಾಡಲಾಗಿದೆ.

” ನಾನು ಭಾಗಿಯಾಗಿರುವ ಯೋಜನೆ ನನ್ನ ಜೀವಮಾನದ ಕನಸಾಗಿತ್ತು. ಎಲ್ಲಿಂದಲೋ ಆರಂಭವಾಗಿದ್ದ ನನ್ನ ಪ್ರಯಾಣ, ಎಲ್ಲಿಗೆ ಬಂದು ತಲುಪಲಿದೆ ಎಂಬ ಅಂದಾಜಿರಲಿಲ್ಲ. ಜೀವನಪೂರ್ತಿ ಆಗಸದಲ್ಲಿ ಹಾರುವುದು ನನ್ನ ಕನಸು, ಅಂತಹ ಅವಕಾಶ ನನಗೆ ದೊರೆತಿದೆ”-ಎಂದು ಶುಭಾಂಶು ಹೇಳಿದ್ದಾರೆ.

ಭಾರತೀಯರೆಲ್ಲರೂ ಶುಭಾಂಶು ಶುಕ್ಲಾ ಅವರಿಗೆ ಆಲ್ ದಿ ಬೆಸ್ಟ್ ಹೇಳೋಣ.


  • ಡಾ.ಗುರುಪ್ರಸಾದ ರಾವ್ ಹವಲ್ದಾರ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading