ನದಿ ನೈರ್ಮಲ್ಯವನ್ನು ಕುರಿತ ಕೆಲವು ವಿಚಾರಗಳನ್ನೂ, ಕೆಲವು “ಪ್ರಾಚೀನ ಮತ್ತು ಪ್ರಚಲಿತ” ನದಿಗಳ ಹಾಗೂ “ಪಂಚನದಿ”ಗಳ ಸ್ವಾರಸ್ಯದ ಸಂಗತಿಗಳನ್ನೂ ಈ ಕೆಳಗಿನ ‘ನಾಲ್ಕು ವಿಭಾಗ’ಗಳಲ್ಲಿ ಹರಿಸಲಾಗಿದೆ. ಸೀತಾರಾಮ ಮೈಸೂರು ಅವರು ನದಿಗಳ ಕುರಿತು ಬರೆದ ಲೇಖನವನ್ನು ತಪ್ಪದೆ ಮುಂದೆ ಓದಿ…
- ಜಗದ ಕೊಳೆ ತೊಳೆವ ಹೊಳೆಯ ಕೊಳೆ ತೊಳೆವರಾರಯ್ಯ?
“ಪಾಪಿಗಳ ಪಾಪಗಳನ್ನು ತೊಳೆದೂ ತೊಳೆದೂ, (ತಾನು) ಮಯ್ಲಿಯಾದಳು ಗಂಗೆ” ಎಂಬ ಹಾಡೊಂದು ದನಿಸುವಂತೆ, ಮಂದಿ-ಮಂದೆಗಳ ಬೆಟ್ಟಗಟ್ಟಳೆ ಕೊಳಕು-ಹುಳುಕುಗಳನ್ನು ಹೀರಿ-ಹೀರಿ, ಹೊಳೆಗಳು ಈಗ “ಕೊಳೆ ಕಡಲು”ಗಳೇ ಆಗಿವೆ. ಆದರೆ, ಈ ಕೇಡಿಗೆ ಎದೆಗೊಟ್ಟು ಹೋರಾಡುತ್ತಿರುವ ಕೆಲವೇ ’ಜೀವಪರ’ ಜನರನ್ನು ಬಿಟ್ಟರೆ, ಉಳಿದ “ಪುಣ್ಯಕೋಟಿ”ಗಳಿಗೆ, “ಪಾಪ!”, ಹೊಳೆಗಳ ಸೌಖ್ಯದ ಯೋಚನೆಯೇ ಹೊಳೆಯದು! ಇನ್ನು ಮುಂದಾಳುಗಳಿಗಂತೂ, ಹೊಳೆಗಳನ್ನು ಸ್ವಂತಕ್ಕೆ ಬಳಸಿಕೊಳ್ಳಲು ಅವರು “ಉಗ್ರ ಹೋರಾಟ”ಗಳಲ್ಲಿ ಮುಳುಗಿರುವಾಗ, ಅವುಗಳ ಗಲೀಜಿನ ಇಲಾಜಿಗೆ ಓಗೊಡಲು ಅವರಿಗೆ ಸಮಯವಾದರೂ ಎಲ್ಲುಂಟು?!ನದಿಗಳೆಲ್ಲವೂ “ಕರುಣಾನದಿ”ಗಳಾಗಿ, ಅನಂತರಾಶಿ ವಿಷ-ಕಲ್ಮಷಗಳನ್ನು ನುಂಗಿಕೊಂಡಿವೆ. ಈಗ ಅವು ಅವನ್ನು ‘ಕಕ್ಕತೊಡಗಿದರೆ’ ಏನಾದೀತು? ವಾತಾವರಣವೂ, ಜಲಾವರಣವೂ ‘ಮಲಾವರಣ’ ಆಗಿಬಿಟ್ಟರೆ, ಜೀವಿಸುವುದೆಂತು? ನದಿ ಹಕ್ಕುಗಳಿಗಾಗಿ “ರಕ್ತ-(‘ಸಿಂದೂರ’) ಕೋಡಿ ಹರಿಸುವ ಯುದ್ಧಬುದ್ಧಿಯನ್ನು ತೊರೆದು, ನದಿಗಳ ಆರೋಗ್ಯವನ್ನು ಕಾಪಾಡುವ ಉಪಾಯಗಳಿಗಾಗಿ ಈಗ ಎಲ್ಲರೂ “Creatiವತಿ” ನದಿಯನ್ನು ಹಾಯಿಸಬೇಕಿದೆ. ತಿಳಿನೀರಿನ ಕಸುವಿನ ಬಗ್ಗೆ ತಿಳಿವಳಿಕೆಯನ್ನು ಉಕ್ಕಿಸಬೇಕಿದೆ. ಮತ್ತೂ ಮುಂದುವರಿದು, ಸಕಲ ಜೀವರಾಶಿಯನ್ನೂ “ದಯಾಸಾಗರ”ದಲ್ಲಿ ಮೀಯಿಸಬೇಕಿದೆ.“Albert Schweitzer” ಮಹೋದಯನ “Reverence for Life” ಎಂಬ ಅಮರವಾಣಿಯು ಈ ಹೊತ್ತು ಎಲ್ಲೆಡೆ ಮಾರ್ದನಿಗೊಳ್ಳಲಿ! ಹೊಳೆಗಳ ಮತ್ತು ಇಡೀ ಬುವಿಯ ಹದುಳಕ್ಕಾಗಿ ನಮ್ಮೆಲ್ಲರ “ಹೊಳೆಯೊಲವು” ಹೊಳೆಯುತ್ತ ಹೊನಲಿಡಲಿ! ಹಿರಿದು ಪಾಪವ ಮಾಡಿ ಹರಿವ ನೀರೊಳು ಮುಳುಗೆ ಕರಗುವುದೇ ಪಾಪ?
- ಪಂಚನದಿ : ನದ ಸಂಗಮದ ಸುನಾದ “ಐದು” ಮತ್ತು “ನೀರು” ಎನ್ನುವುದಕ್ಕೆ ಸಂಸ್ಕೃತದಲ್ಲಿ “ಪಂಚ” ಮತ್ತು “ಅಪ್”, ಮತ್ತು ಪಾರಸೀಯಲ್ಲಿ “ಪಂಜ್” ಮತ್ತು “ಅಬ್”. ಈ ಕಾರಣದಿಂದಾಗಿ, “ಪಂಚ ನದಿ” ಪ್ರಾಂತವು “ಪಂಜಾಬ್” (“ಪಂಚ-ಅಬ್”) ಆಯಿತು ಮತ್ತು ಆ ಐದು ನದಿಗಳು ಇಂತಿವೆ : ೧) ವಿತಸ್ತಾ: Jhelum (ಹಳೇ ಗ್ರೀಕ್‍ನಲ್ಲಿ Hydaspes);
- ಚಂದ್ರಭಾಗಾ (ಅಸಿಕ್ನೀ):
- Chenab; (“ಗರ್ಜಿಸುತ್ತಿರುವ”)
- ರಾವಿ (ಇರಾವತೀ, ಪರೂಷ್ಣೀ): Raavi;
- ವಿಪಾಶ (ಯಾವುದೇ ’ಪಾಶ’ವಿಲ್ಲದೆ ಹರಿಯುವುದು), ಅಥವಾ “ವ್ಯಾಸ್” (ಹಳೇ ಗ್ರೀಕ್‌ನಲ್ಲಿ Hyphasis): Beas;
- (100 ಶಾಖೆಗಳ) ಶತದ್ರು (ಶುತದ್ರಿ): Sutlej. [ಈ ಗ್ರೀಕ್ ಹೆಸರುಗಳು, ಇಲ್ಲಿ Alexander ದಂಡಯಾತ್ರೆ ಮಾಡಿದ ಕಾಲದವು (ಕ್ರಿ.ಪೂ. ೩೨೬). ಪಶ್ಚಿಮವಾಹಿನಿಯಾದ ಸಿಂಧು, (’ಚೀಣ’ದ ವಶದಲ್ಲಿರುವ) ಟಿಬೆಟ್‌ನ ಮಾನಸ್-ಕೈಲಾಶ್ ಬಳಿಯ ಹಿಮರಾಶಿಯೊಂದರಲ್ಲಿ ಹುಟ್ಟಿ, “Leh” ಘಾಟಿಯಲ್ಲಿ ಭಾರತದ ಒಳಹೊಕ್ಕು, ಪಾಕ್-ಆಕ್ರಮಿತ ಕಾಶ್ಮೀರದಲ್ಲಿ ಹರಿದು, “ಸಿಂಧ್” ಪ್ರಾಂತದ “ಕರಾಚಿ” ಬಳಿ ಅರಬ್ಬೀ ಸಮುದ್ರದಲ್ಲಿ ಐಕ್ಯವಾಗುತ್ತದೆ. ಹಿಂದು-ಖುಶ್ ಪರ್ವತಶ್ರೇಣಿಯಲ್ಲಿ ಹುಟ್ಟುವ “ಕಾಬೂಲ್” (“ಕುಭಾ”) ನದಿಯು ಸಿಂಧುವಿನ ಉಪನದಿಯಾಗಿದೆ. “ಪಂಚ-ಅಬ್” ನಮೂನೆಯಲ್ಲೇ, ಎರಡು ನದಿಗಳ ಅನೇಕ “ದೋ-ಅಬ್” (“Doab”) ಗಳಿದ್ದು, ಅವುಗಳಲ್ಲಿ ಸಿಂಧು “ದೋ-ಅಬ್” ಮತ್ತು ಗಂಗಾ “ದೋ-ಅಬ್” ಪ್ರಸಿದ್ಧವಾಗಿವೆ. “Mesopotamia” ಎಂದರೆ “ಎರಡು ನದಿಗಳ ನಡುವೆ” ಎಂದಾಗುತ್ತದೆ].
- “ತಿರುವಯ್ಯಾರು” ಎಂಬುದು ಸಂಗೀತ ರಸಿಕರಿಗೊಂದು ಯಾತ್ರಾಸ್ಥಳ. ಈ ಶಬ್ದವನ್ನು ಸೀಳಿದರೆ: ’ತಿರು’= ಶ್ರೀ (ಪವಿತ್ರ); ’ಐ’= ಐದು; “ಅರು”= ಹೊಳೆ’; “ತಿರುವಯ್ಯಾರು”= (ಪವಿತ್ರ) “ಪಂಚನದಿ” ಅಥವಾ “ಐಹೊಳೆ” ಎಂದಾಗುತ್ತದೆ. ಈ ಸ್ಥಳದಲ್ಲಿ “ಅಯ್ಯಾರಪ್ಪರ್” (“ಐಹೊಳೆಯಪ್ಪ”) ಅಥವಾ “ಪಂಚನದೇಶ್ವರ” ಹೆಸರಿನ ದೇವಾಲಯವಿದೆ. “ಹೊಳೆ” ಎಂಬುದು ಸಂಸ್ಕೃತದಲ್ಲಿ “ನದ” ಅಥವಾ “ಆಪಗಾ”ಎಂದೂ ಆಗುವುದರಿಂದ, ಮತ್ತು ತ್ಯಾಗರಾಜರು ತಿರುವಯ್ಯಾರಿನವರಾದ್ದರಿಂದ, ಅವರ ಅಣ್ಣಂದಿರಲ್ಲಿ ದೊಡ್ಡವರಿಗೆ “ಪಂಚಾಪಗೇಶ” (ಪಂಚ + ಆಪಗಾ + ಈಶ) ಎಂದೂ, ಚಿಕ್ಕವರಿಗೆ “ಪಂಚನದ” ಎಂದೂ ಹೆಸರು ಬಂದಿರಬಹುದು. (ಕೆಲವು ಕಡೆ ಈ ಎರಡೂ ಅಣ್ಣಂದಿರನ್ನು “ಜಪ್ಯೇಶ” ಎಂದಿರುವುದೂ ಉಂಟು).
- “ಪಂಚಗಂಗಾ”: ಕಿರಣಾ, ಧೂತಪಾಪಾ, ಸರಸ್ವತೀ, ಗಂಗಾ, ಯಮುನಾ.
- “ತೆಂಕಣ ಐಹೊಳೆ”: ತಾಮ್ರಪರ್ಣೀ (ಪೊರುಣೈ), ಕೃತಮಾಲಾ (ವೈಗೈ, ಭಾಗೈ), ಪಯಸ್ವಿನೀ (ಚಂದ್ರಗಿರಿ, ಪೆರುಂಪುೞ), ಕಾವೇರೀ (“ಅರ್ಧಜಾಹ್ನವೀ”), ಪ್ರತೀಚೀ (ಪೆರಿಯಾರ್). ’ಏಳು ಹೊಳೆ’ ಕೂಡಿ ’ಸಂಗೀತ ’ವಾಯಿತು. “ಸಪ್ತ ಸಿಂಧು” ಎಂಬುದಕ್ಕೆ ವಿಭಿನ್ನ ವ್ಯಾಖ್ಯೆಗಳಿವೆ, ನಾಮಗಳಿವೆ. ಒಟ್ಟಾರೆ ನದಿಗಳ ಇತಿಹಾಸ ಕುರಿತೇ, “potamologists” ಅರ್ಥಾತ್ “ನದಿಶಾಸ್ತ್ರಜ್ಞ”ರಲ್ಲಿ ಭಿನ್ನಾಭಿಪ್ರಾಯಗಳಿವೆ. ಅವುಗಳ ಒಂದು ಕಿರುನೋಟವು ಈ ಕೆಳಗಿದೆ. (ಇಲ್ಲಿಯ ಸಾಲುಗಳಲ್ಲಿ ಅಕ್ಷರದೋಷಗಳಿರಬಹುದು; ಒಂದೇ ನದಿಗೆ ಬೇರೆ-ಬೇರೆ ಕಾಗುಣಿತಗಳಿರಬಹುದು.
- ಶಿಶುಗಳಿಗೆ ವಿನೂತನ ನಾಮಕರಣ ಮಾಡಲು ಇಲ್ಲಿ ಸಾಕಷ್ಟು ಆಯ್ಕೆಗಳಿವೆ):
- ಸ್ವಾತ (ಪಾಕೀಸ್ತಾನದ Swat ಕಣಿವೆಯ “ಸುವಾಸ್ತು” ನದಿ?), ಗೋಮತೀ, ವಿತಸ್ತಾ, ಚಂದ್ರಭಾಗಾ, ಇರಾವತೀ (ಬರ್ಮಾದ Irrawaddy?), ಸರಸ್ವತೀ, ಸಿಂಧು.
- ಗಂಗಾ, ಯಮುನಾ, ಸರಸ್ವತೀ, ಶತದ್ರೀ, ಪರೂಷ್ಣೀ, ಮರುದ್‌ವೃಧಾ [ಮರುತ(ಮಾರುತ)ಗಳಲ್ಲಿ ಹಿಗ್ಗುತ್ತಿರುವ], ಆರ್ಜೀಕೀಯ (ಸೋಮ ಪಾತ್ರೆ; ಪಾಕಿಸ್ತಾನದ “Haro” ನದಿ?).
- ಗಂಗಾ, ಯಮುನಾ, ಗೋದಾವರೀ, ಸರಸ್ವತೀ, ನರ್ಮದಾ, ಸಿಂಧು, ಕಾವೇರೀ.
- ದೃಷದ್ವತೀ, ತೃಷ್ಟಮಾ, ಸುಸರ್ತು (ಸುಸರತಾ?), ರಸಾ, ಸ್ವೇತಿ, ಗೋಮತಿ, ಮೆಹತ್ನು [ಅಥವಾ “ಕ್ರುಮು” (ಪಾಕಿಸ್ತಾನದ “Kurram”) ನದಿ].ಸಿಂಧು, ವಿತಸ್ತಾ, ಅಸಿಕ್ನೀ, ಪರುಷ್ಣೀ, ವಿಪಾಶ, ಶುತದ್ರಿ, ಸರಸ್ವತೀ.
ಶೋಣ, ಸಿಂಧು, ಹಿರಣ್ಯ, ಕೋಕಿಲ, ಘರ್ಘರ, ಲೋಹಿತ, ಶತಲಜ್ಜ.

- ಕೆಲವು ಆಕರ್ಷಕ ಸಂಗತಿಗಳು :
ವೈದಿಕ ಯುಗದ ಹಲವು ನದಿಗಳು ಈಗಿನ ಪಾಕಿಸ್ತಾನ, ಅಫ಼್ಗಾನಿಸ್ತಾನ ಮತ್ತು ಸುತ್ತಲ ಪ್ರದೇಶಗಳಲ್ಲಿ ಬೇರೆ-ಬೇರೆ ಹೆಸರುಗಳಲ್ಲಿ ಹರಿಯುತ್ತಿವೆ. ಉದಾಹರಣೆಗೆ: ಅಫ಼್ಗಾನಿಸ್ತಾನದ ಪ್ರಸಿದ್ಧ “Helmand” ನದಿಯು, Iranian-Avestan ಭಾಷೆಯಲ್ಲಿ, ಪ್ರಾಚೀನ “Haraxvati” ಅಥವಾ “Harahvaiti” ಆಗಿದೆ. ಇದನ್ನೇ “ಸರಸ್ವತೀ” ನದಿಯೆಂದೂ, ಅಫ಼್ಗಾನಿಸ್ತಾನದ “Herat” ನಗರದ “Haroiiu” (“Haroiva”), ಅಥವಾ “Harirud” ನದಿಯನ್ನು ಪೂರ್ವಕಾಲೀನ “ಸರಯೂ” ಎಂದೂ ಗುರುತಿಸುವುದುಂಟು. (“ಸರಸ್ವತೀ” ನದಿಯನ್ನು “ನದಿತಮ” ಅರ್ಥಾತ್ “ಸರ್ವೋತ್ತಮ ನದಿ” ಎಂದೂ, ಅದರ ಈಗಿನ ’ಕೃಶ ರೂಪ’ವೇ “ಘಗ್ಗರ್-ಹಕರಾ” (“ಘರ್ಘರ”, ಗೊರಕೆ, gurgling) ನದಿಯೆಂದೂ ದಾಖಲೆಗಳಿವೆ. ಪಟಿಯಾಲಾದಲ್ಲಿ ಹರಿಯುವ “ಘಗ್ಗರ್” ನದಿಯೇ ಪುರಾತನ “ಸರಯೂ” ಎಂದೂ ಕೆಲವರು ವಾದಿಸುವುದುಂಟು.“ಸೋನ್” ಅಥವಾ “ಸೋನಾ” ಎಂದು ಕರೆಯಲ್ಪಡುವ “ಶೋಣಭದ್ರ” ಅಥವಾ “ಸುಷೋಮಾ” ನದಿಯು ಬಿಹಾರದಲ್ಲಿದ್ದು, ಇದರ ತಪ್ಪಲಿನಲ್ಲಿರುವ “ಡೆಹ್ರಿ” ಎಂಬ ಪಟ್ಟಣವು “Dehri-on-Sone” ಎಂದೇ ನಾಮಾಂಕಿತಗೊಂಡಿದೆ. ಇದು “Newcastle-upon-Tyne” ಮತ್ತು ಶೇಕ್ಸ್‌ಪಿಯರ್ ಮಹಾಕವಿಯ “Stratford-upon-Avon” ಮಾದರಿಯಲ್ಲಿದೆ.Portuguese ಮತ್ತು Spanish ಭಾಷೆಗಳಲ್ಲಿ “Rio” ಎಂದರೆ “River”. ಹೀಗಾಗಿ, “Río de Janeiro” ಎಂದರೆ “River of January”.
T. ನರಸೀಪುರವನ್ನು “ತಿರು-ಮುಕ್ಕೂಡಲು” ನರಸೀಪುರ ಎಂದು ಬಿಡಿಸುವುದುಂಟು. ಅಲ್ಲೊಂದು “ಗುಪ್ತಗಾಮಿನಿ ಸ್ಫಟಿಕ ಸರೋವರ” ಇದೆಯೆಂದು ನಂಬುವವರು, ಈ ಸ್ಥಳವನ್ನು “ತ್ರಿವೇಣಿ ಸಂಗಮ” ಎಂದಿರುವರು.
ಪುರಾಣಗಳ ಪ್ರಕಾರ ಸೂರ್ಯನಿಗೆ, ಇನ್ನುಳಿದ ಮಕ್ಕಳೊಂದಿಗೆ, “ಸಂಜ್ಞಾ” ಎಂಬ “ಅಸಲಿ” ಮಡದಿಯಿಂದ “ಯಮ” ಮತ್ತು ಆತನ “ಅವಳಿ-ಸೋದರಿ” “ಯಮೀ” [ಯಮುನೆ, ಯಮಾನುಜೆ, ಜಮುನಾ, “ಕಾಲಿಂದೀ” (“ಕಾಳ” ಬಣ್ಣದಿಂದಾಗಿ), ಅಂಶುಮತೀ, ದಿನಕರಾತ್ಮಜೆ ಇತ್ಯಾದಿ], ಮತ್ತು “ಛಾಯಾ” ಎಂಬ “ನಕಲಿ” ಮಡದಿಯಿಂದ “ಶನಿ” ಮತ್ತು “ತಪತೀ” (“ತಾಪ”ದಿಂದಾಗಿ) ಜನಿಸಿದರೆಂಬುದು ಇಲ್ಲಿ ಮನಸೆಳೆಯಬಹುದು. ಹೀಗಾಗಿ, “ಯಮುನಾ ಮತ್ತು ತಪತೀ”, “stepsisters”ಆಗುತ್ತಾರೆ!
“ಗಂಗಾ-ಜಮುನೀ (ಅಥವಾ “ಹಿಂದುಸ್ತಾನಿ”) ತಹಜೀಬ್” ಎಂಬುದು ಭಾರತದ ಹಿಂದು-ಮುಸಲ್ಮಾನ ಸಂಸ್ಕೃತಿಗಳ ವಿಶಿಷ್ಟ ಸಮನ್ವಯವನ್ನು ಸೂಚಿಸುವ ಒಂದು ಲೋಕೋಕ್ತಿ.
“ನರ್ಮದಾ”: “ನರ್ಮ”= “ವಿನೋದ” ಅಥವಾ “ಆನಂದ” + “ದಾ”= “ಕೊಡುವಂಥದ್ದು”.
“ಅಚಿರಾ”ವತೀ [“lightning” in rapidity?]= ಐರಾವತೀ= (ಜೈನ-ಬೌದ್ಧ ಮಹತ್ತ್ವದ, “ಘಗ್ಗರ್”ನ ಉಪನದಿ) “ರಾಪ್ತೀ” ನದಿ.
- ಸೀತಾರಾಮ ಮೈಸೂರು
