ಅಹೋಬಲ ಕ್ಷೇತ್ರದ ಮಹಿಮೆ :  ಅಶ್ವಿನಿ ಸುನಿಲ್

ಅಹೋಬಲ ಕ್ಷೇತ್ರದ ವಿಶೇಷವೆಂದರೆ ಇಲ್ಲಿ ಯಾವ ದಿಕ್ಕಿನಲ್ಲಿ ಹೋದರೂ ನರಸಿಂಹ ಸ್ವಾಮಿಯ ದರ್ಶನವಾಗುತ್ತದೆ.ಬೆಂಗಳೂರಿನಿಂದ 370 ಕಿಲೋಮೀಟರ್ ದೂರದಲ್ಲಿರುವ ಅಹೋಬಲವನ್ನು ರೈಲು, ಬಸ್ಸು ಅಥವಾ ಖಾಸಗಿ ವಾಹನಗಳ ಮೂಲಕ ತಲುಪಬಹುದು. ಅಹೋಬಲ ಕ್ಷೇತ್ರದ ಮಹಿಮೆಯ ಕುರಿತು ಅಶ್ವಿನಿ ಸುನಿಲ್ ಅವರು ಮಾಹಿತಿಯನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ನಿಸರ್ಗ ಸೌಂದರ್ಯ, ಸಾಹಸ ಮತ್ತು ಆಧ್ಯಾತ್ಮಿಕತೆಯ ಸಮ್ಮಿಲನ- ನವ ನಾರಸಿಂಹ ಕ್ಷೇತ್ರ ಶ್ರೀ ಅಹೋಬಲ ಮಹಾವಿಷ್ಣುವಿನ ನಾಲ್ಕನೇ ಅವತಾರವಾದ ನರಸಿಂಹಾವತಾರದ ಬಗ್ಗೆ ಯಾರಿಗೆ ತಾನೇ ತಿಳಿದಿಲ್ಲ ? ವಿಷ್ಣುವಿನ ದ್ವಾರ ಪಾಲಕರಾದ ಜಯ- ವಿಜಯರು ಮುನಿಗಳ ಶಾಪಕ್ಕೆ ಗುರಿಯಾಗಿ ಭೂಲೋಕದಲ್ಲಿ ವಿಷ್ಣು ದ್ವೇಷಿಗಳಾಗಿ ಮೂರು ಜನ್ಮಗಳನ್ನು ಕಳೆಯಬೇಕಾಗುತ್ತದೆ. ಮೊದಲನೆಯ ಜನ್ಮದಲ್ಲಿ ಹಿರಣ್ಯಾಕ್ಷ – ಹಿರಣ್ಯಕಶಿಪುಗಳಾಗಿ, ಎರಡನೆಯ ಜನ್ಮದಲ್ಲಿ ರಾವಣ – ಕುಂಭಕರ್ಣರಾಗಿ, ಮೂರನೇ ಜನ್ಮದಲ್ಲಿ ದಂತವಕ್ರ- ಶಿಶುಪಾಲರಾಗಿ ಜನಿಸಿ, ಶ್ರೀಹರಿಯಿಂದಲೇ ವಧಿಸಲ್ಪಟ್ಟು , ಶಾಪವಿಮುಕ್ತರಾದ ಕಥೆ ಎಲ್ಲರಿಗೂ ಗೊತ್ತಿದೆ.

ಮೊದಲನೆಯ ಜನ್ಮದಲ್ಲಿ ಹಿರಣ್ಯಾಕ್ಷ ಮತ್ತು ಹಿರಣ್ಯಕಶಿಪುಗಳಾಗಿ ಭೂಲೋಕದಲ್ಲಿ ಜನಿಸಿದ ಜಯ- ವಿಜಯರು, ಹರಿ ದ್ವೇಷಿಗಳಾಗಿ ದೇವತೆಗಳಿಗೆ ಅತೀವ ಉಪಟಳ ನೀಡುತ್ತಾರೆ. ವರಾಹರೂಪಿ ಶ್ರೀಮನ್ನಾರಾಯಣನು ಹಿರಣ್ಯಾಕ್ಷನನ್ನು ಕೊಂದರೆ, ಹಿರಣ್ಯಕಶಿಪುವಿನ ಅಂತ್ಯಕ್ಕೆ ವಿಷ್ಣು ನರಸಿಂಹಾವತಾರ ಎತ್ತಬೇಕಾಗುತ್ತದೆ. ಹೀಗೆ, ದುಷ್ಟ ಶಿಕ್ಷಣೆ, ಶಿಷ್ಟ ರಕ್ಷಣೆ ಮಾಡಲು ಶ್ರೀ ಹರಿಯು ನರಸಿಂಹಾವತಾರ ಎತ್ತಿದ ಪುಣ್ಯ ಕ್ಷೇತ್ರವೇ ಅಹೋಬಲ ಕ್ಷೇತ್ರ.

ಅಹೋಬಲ ಕ್ಷೇತ್ರವು ಕೇವಲ ಭಕ್ತಿ ಯ ತಾಣವಷ್ಟೇ ಅಲ್ಲ, ನಿಸರ್ಗ ಸೌಂದರ್ಯದ ಜೊತೆ ಸಾಹಸವನ್ನು ಇಷ್ಟಪಡುವ ಚಾರಣಿಗರನ್ನೂಆಕರ್ಷಿಸುತ್ತದೆ.

ಒಂದೇ ಊರಿನಲ್ಲಿ ಹಲವು ದೇವಸ್ಥಾನಗಳಿರುವುದು ಸಾಮಾನ್ಯ. ಆದರೆ ಅಹೋಬಿಲಂ ನಲ್ಲಿ ಒಂಬತ್ತು ನರಸಿಂಹ ಸ್ವಾಮಿಯ ದೇವಸ್ಥಾನವಿರುವುದೇ ಅಲ್ಲಿಯ ವಿಶೇಷತೆ. ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ನಂದ್ಯಾಲದಿಂದ ಸುಮಾರು 60 ಕಿಲೋಮೀಟರ್ ದೂರದಲ್ಲಿರುವ ಅಹೋಬಲ ಕ್ಷೇತ್ರವು ಪೂರ್ವ ಘಟ್ಟದ ಬೆಟ್ಟಸಾಲಿನ ಮಧ್ಯದಲ್ಲಿದೆ. ಅಹೋಬಲ ಕ್ಷೇತ್ರದಲ್ಲಿ ನರಸಿಂಹ ಸ್ವಾಮಿಯ ಒಂಬತ್ತು ದೇವಸ್ಥಾನಗಳು ಇರುವುದರಿಂದ ನವ ನಾರಸಿಂಹ ಕ್ಷೇತ್ರವೆಂದು ಹೆಸರು ಪಡೆದಿದೆ. ಇಲ್ಲಿಯ ಪ್ರತಿಯೊಂದು ದೇವಾಲವೂ ಒಂದೊಂದು ಕಥೆಯನ್ನು, ಇತಿಹಾಸವನ್ನು ಹೇಳುತ್ತದೆ.

ಅಹೋಬಲ ಕ್ಷೇತ್ರದ ದೇವಾಲಯಗಳನ್ನು ಮೇಲಿನ ಅಹೊಬಲ ಮತ್ತು ಕೆಳಗಿನ ಅಹೋಬಲ ಎಂದು ವಿಂಗಡಿಸಿದ್ದಾರೆ. ಕೆಳಗಿನ ಅಹೋಬಲದಿಂದ ಎಂಟು ಕಿಲೋಮೀಟರ್ ದೂರದಲ್ಲಿರುವ ಮೇಲಿನ ಅಹೋಬಲವನ್ನು ಖಾಸಗಿ ವಾಹನಗಳ ಮೂಲಕ ತಲುಪಬಹುದು. ಮೇಲಿನ ಅಹೋಬಲಕ್ಕೆ ಇನ್ನೂ ಒಂದು ಕಿಲೋಮೀಟರ್ ದೂರ ಇರುವಂತೆಯೇ ಕಾರಂಜಿ ನರಸಿಂಹಸ್ವಾಮಿ ದೇವಾಲಯ ಸಿಗುತ್ತದೆ. ಅಲ್ಲಿಂದ ಮುಂದೆ ಮೇಲಿನ ಅಹೋಬಲ ಬೆಟ್ಟದ ಬುಡದಲ್ಲಿ ವಾಹನಗಳನ್ನು ನಿಲ್ಲಿಸಿ ಮುಂದಕ್ಕೆ ನಡೆದುಕೊಂಡೆ ಹೋಗಬೇಕು. ಮೆಟ್ಟಿಲುಗಳನ್ನು ಏರುತ್ತಾ ಹೋದಂತೆ ಅಹೋಬಲ ನರಸಿಂಹ ಸ್ವಾಮಿಯ ದೇವಸ್ಥಾನ, ಮಾಲೋಲ ನರಸಿಂಹ ಸ್ವಾಮಿಯ ದೇವಸ್ಥಾನ, ಶ್ರೀ ವರಾಹ ನರಸಿಂಹ ಸ್ವಾಮಿ / ಕ್ರೋಡನರಸಿಂಹ ಸ್ವಾಮಿ ದೇವಸ್ಥಾನ, ಶ್ರೀ ಜ್ವಾಲಾ ನರಸಿಂಹ ಸ್ವಾಮಿ ದೇವಾಲಯ ಗಳನ್ನು ದರ್ಶಿಸಬಹುದು.

ಕಡಿದಾದ ಮಾರ್ಗವನ್ನು ಕ್ರಮಿಸಿ ಬೆಟ್ಟದ ತುದಿಯನ್ನು ಏರಿದಾಗ ಸಿಗುವುದೇ ಶ್ರೀ ಜ್ವಾಲಾ ನರಸಿಂಹ ಸ್ವಾಮಿ ದೇವಾಲಯ. ದುರ್ಗಮವಾದ ದಾರಿಯನ್ನು ಕ್ರಮಿಸಿ ಉಂಟಾಗುವ ಆಯಾಸವನ್ನು ಪರಿಹರಿಸಲು ಎನ್ನುವಂತೆ ಭವನಾಶಿನಿಯ ಜಲಧಾರೆ ಕೆಳಗೆ ಬೀಳುತ್ತಿರುತ್ತದೆ. ದೇವರ ದರ್ಶನಕ್ಕೂ ಮೊದಲು ಪ್ರಕೃತಿಯೇ ನಮ್ಮ ತನು ಮನವನ್ನು ಶುದ್ಧೀಕರಿಸುವಂತೆ ತೋರುತ್ತದೆ. ನಿಸರ್ಗದತ್ತವಾದ, ಸ್ವಚ್ಛವಾದ, ಸಿಹಿಯಾದ ಆ ನೀರನ್ನು ಕುಡಿದು ಆಯಾಸವನ್ನು ಪರಿಹರಿಸಿಕೊಂಡು, ಜ್ವಾಲಾ ನರಸಿಂಹ ಸ್ವಾಮಿಯ ದರ್ಶನ ಮಾಡಬಹುದು. ಇಲ್ಲಿಯ ಪ್ರಕೃತಿ ಸೌಂದರ್ಯ, ಜಲಧಾರೆಯ ಸೊಬಗನ್ನು ಸವಿಯುತ್ತಾ ಇದ್ದರೆ ಕೆಳಗಡೆ ಬರುವ ಮನಸ್ಸಾಗದು. ಗಾಳಿ ಬೀಸುತ್ತಿದ್ದಂತೆ ಮುಖಕ್ಕೆ ನೀರಿನ ಪ್ರೋಕ್ಷಣೆಯಾಗುತ್ತಿದ್ದರೆ, ದುಗುಡುಗಳೆಲ್ಲ ಕಳೆದು ಮನಸ್ಸು ಹಗುರವಾದ ಭಾವ ಮೂಡುತ್ತದೆ.

ಭಕ್ತನ ರಕ್ಷಣೆಗಾಗಿ ಜ್ವಾಲಾಮುಖಿಯಂತೆ ಸ್ಪೋಟಿಸಿ ನರಸಿಂಹಸ್ವಾಮಿ ಪ್ರತ್ಯಕ್ಷನಾದ ಕಾರಣ ಜ್ವಾಲಾ ನರಸಿಂಹಸ್ವಾಮಿ ಎನ್ನುವ ಹೆಸರು ಬಂದಿದೆ. ಈ ದೇಗುಲದ ಬಳಿ ‘ರಕ್ತಕುಂಡ’ ಕೊಳವಿದೆ. ಹಿರಣ್ಯಕಶಿಪುವನ್ನು ಕೊಂದ ನಂತರ ಪರಮಾತ್ಮನು ಕೈ ತೊಳೆದುಕೊಂಡ ಜಾಗವಿದು ಎನ್ನಲಾಗುತ್ತದೆ.

ಅಲ್ಲಿಂದ ಇನ್ನೂ ಮೇಲಕ್ಕೆ ಏರಿದರೆ ಅಚಲಾಚಯ ಪರ್ವತವಿದೆ. ಹಿರಣ್ಯಕಶಿಪುವಿನ ಅರಮನೆಯ ಕಂಬವನ್ನು ನರಸಿಂಹ ಸ್ವಾಮಿ ಸೀಳಿ ಬಂದಿದ್ದಕ್ಕೆ ಸಾಕ್ಷಿ ಎನ್ನುವಂತೆ ಕಂಬ ಒಂದನ್ನು ಕಾಣಬಹುದು. ಮೇಲಕ್ಕೆ ಏರಿದಂತೆಲ್ಲ ಮಾರ್ಗವು ದುರ್ಗಮವಾಗುತ್ತಾ, ಹತ್ತುವುದು ಕಷ್ಟವಾಗುತ್ತಾ ಹೋದರೂ, ನಿಸರ್ಗದ ರಮಣೀಯ ದೃಶ್ಯಗಳು ಆಯಾಸವನ್ನು ತಣಿಸುತ್ತದೆ.

ಶ್ರೀ ಭಾರ್ಗವ ನರಸಿಂಹ ಸ್ವಾಮಿ ದೇವಾಲಯ

ಕೆಳಗಿನ ಅಹೋಬಲದಿಂದ ಎರಡು ಕಿಲೋಮೀಟರ್ ದೂರದಲ್ಲಿರುವ ಈ ದೇವಸ್ಥಾನಕ್ಕೆ ಕಲ್ಲು, ಮಣ್ಣಿನ ರಸ್ತೆಯಲ್ಲಿಯೇ ಹೋಗಬೇಕು. ದೇವಸ್ಥಾನವನ್ನು ಪ್ರವೇಶಿಸಲು ಸುಮಾರು 130 ಮೆಟ್ಟಲು ಏರಬೇಕು. ಮೆಟ್ಟಿಲಿನ ಸಮೀಪವೇ ಅಕ್ಷಯ ತೀರ್ಥವೆಂಬ ಸುಂದರ ಕೊಳವಿದೆ.

ಅಲ್ಲದೆ ಯೋಗಮುದ್ರೆಯಲ್ಲಿರುವ ಶ್ರೀ ಯೋಗಾನಂದ ನರಸಿಂಹ ಸ್ವಾಮಿ ದೇವಾಲಯ, ನರಸಿಂಹಮೂರ್ತಿಗಳಲ್ಲಿಯೇ ಅತ್ಯಂತ ದೊಡ್ಡದಾದ, ಜೊತೆಗೆ ಸುಂದರವಾಗಿರುವ ಮೂರ್ತಿ ಇರುವ ಶ್ರೀ ಛತ್ರವಟ ನರಸಿಂಹ ಸ್ವಾಮಿ ದೇವಾಲಯಗಳು ಕೂಡಾ ಇಲ್ಲಿನ ವಿಶೇಷ.

ಶ್ರೀ ಪಾವನ ನರಸಿಂಹ ಸ್ವಾಮಿ

ಕೆಳಗಿನ ಅಹೋಬಲದಿಂದ ಸುಮಾರು 16 ಕಿಲೋಮೀಟರ್ ದೂರದಲ್ಲಿ ದುರ್ಗಮವಾದ ಕಾಡು ಪ್ರದೇಶದಲ್ಲಿ ಇರುವ ಶ್ರೀ ಪಾವನ ನರಸಿಂಹ ಸ್ವಾಮಿ ದೇವಾಲಯಕ್ಕೆ ಹೋಗುವುದೇ ಒಂದು ದೊಡ್ಡ ಸಾಹಸ. ಕೆಳಗಿನ ಅಹೋಬಲದಿಂದ ಜೀಪು ಅಥವಾ ಟ್ರ್ಯಾಕ್ಟರ್ ನಲ್ಲಿ ಇಲ್ಲಿಗೆ ತಲುಪಬಹುದು. ಮೇಲಿನಅಹೋಬಲದಿಂದ ಇಲ್ಲಿಗೆ ನಡೆದುಕೊಂಡು ಬಂದರೆ ಕೇವಲ ಏಳು ಕಿಲೋಮೀಟರ್ ದೂರವಾದರೂ ಕೆಳಗಿನ ಅಹೋಬಲದಿಂದ ಜೀಪಿನಲ್ಲಿ ಹೋಗುವುದೇ ಸೂಕ್ತ.

ಕಾಡಿನ ಮಧ್ಯದಲ್ಲಿ ಹಾದು ಹೋಗುವ ಈ ದಾರಿಯಲ್ಲಿ ರಸ್ತೆಯೇ ಇಲ್ಲ ಎನ್ನಬಹುದು. ಕಲ್ಲು ಬಂಡೆಗಳ ಈ ರಸ್ತೆ ಯಲ್ಲಿ ಹೋಗುವುದು ದುಸ್ತರವಾದರೂ ಭಕ್ತರು ಮಾತ್ರ ತಂಡೋಪತಂಡವಾಗಿ ಇಲ್ಲಿಗೆ ಬರುತ್ತಾರೆ. ಪ್ರಯಾಣಿಸುವುದು ಜೀಪಿನಲ್ಲಾದರೂ ಒಂದು ರೀತಿ ಸಾಹಸಮಯ ಯಾತ್ರೆ ಎಂದೇ ಹೇಳಬಹುದು. ಮಾರ್ಗ ಮಧ್ಯದಲ್ಲಿ ವಾಹನವೇನಾದರೂ ಕೆಟ್ಟು ಹೋದರೆ ಹೊರಗಿನ ಪ್ರಪಂಚವನ್ನು ಸಂಪರ್ಕಿಸಲು ಮುಂದಿನ ವಾಹನ ಬರುವ ತನಕ ಕಾಯುವುದು ಅನಿವಾರ್ಯ. ಕಾಡುದಾರಿಯಲ್ಲಿ ಹೋಗಬೇಕಾದ ಕಾರಣ ಮಧ್ಯಾಹ್ನ ಒಂದು ಗಂಟೆಯ ನಂತರ ಇಲ್ಲಿ ಪ್ರವೇಶ ನಿಷೇಧವಿದೆ.

ಅಹೋಬಲ ಕ್ಷೇತ್ರದ ವಿಶೇಷವೆಂದರೆ ಇಲ್ಲಿ ಯಾವ ದಿಕ್ಕಿನಲ್ಲಿ ಹೋದರೂ ನರಸಿಂಹ ಸ್ವಾಮಿಯ ದರ್ಶನವಾಗುತ್ತದೆ. ಅದರಲ್ಲೂ ಒಂದೇ ಊರಿನಲ್ಲಿ, ವಿಭಿನ್ನ ರೀತಿಯ,ವಿಭಿನ್ನ ರೂಪಗಳಲ್ಲಿ ನರಸಿಂಹನ ದರ್ಶನವಾಗುವುದು ವಿಶೇಷ. ಕ್ಷೇತ್ರದ ದರ್ಶನವನ್ನು ಮಾಡುವಾಗ ನಮ್ಮಜೊತೆಗೆ ಮಾರ್ಗದರ್ಶಕರನ್ನು ಕರೆದುಕೊಂಡು ಹೋದರೆ ಪ್ರತಿಯೊಂದು ದೇವಾಲಯದ ವೈಶಿಷ್ಟ್ಯ, ಇತಿಹಾಸವನ್ನು ಅರಿತುಕೊಳ್ಳಬಹುದು. ಜೊತೆಗೆ ಪುಟ್ಟ ಮಕ್ಕಳು, ವಯಸ್ಸಾದವರಿದ್ದರೆ ಗೈಡ್ ಗಳ ಸಹಾಯ ಅನುಕೂಲವಾಗುತ್ತದೆ . ದುರ್ಗಮವಾದ ಬೆಟ್ಟವನ್ನು ಹತ್ತುವಾಗ ಆಯಾಸವಾಗುವ ಸಾಧ್ಯತೆ ಇರುವುದರಿಂದ ಅಗತ್ಯವಾದ ನೀರು, ಚಾಕಲೇಟ್, ಬಿಸ್ಕೆಟ್ ಗಳನ್ನು ಜೊತೆಗೆ ಕೊಂಡೊಯ್ಯುವುದು ಸೂಕ್ತ. ಬೆಟ್ಟವನ್ನು ಕಾಲ್ನಡಿಗೆಯಲ್ಲಿ ಏರಲಾರದವರು ಡೋಲಿಯ ವ್ಯವಸ್ಥೆಯನ್ನು ಉಪಯೋಗಿಸಿಕೊಳ್ಳಬಹುದು ಇಲ್ಲಿ ಜಾತಿ, ಭೇದವಿಲ್ಲದೆ ಎಲ್ಲಾ ವರ್ಣದವರು ಬಂದು ಪೂಜೆ ಸಲ್ಲಿಸುತ್ತಾರೆ. ಆದಿ ಶಂಕರಾಚಾರ್ಯರ ಪ್ರಾಣವನ್ನು ಇಲ್ಲಿ ಶ್ರೀ ಲಕ್ಷ್ಮಿನರಸಿಂಹ ಸ್ವಾಮಿ ರಕ್ಷಿಸಿರುವ ಉಲ್ಲೇಖವಿದೆ.

ಮಾಧ್ವ ಯತಿಗಳಾದ ವಿಜಯೇಂದ್ರತೀರ್ಥರು ತಮಗೆ ಒದಗಿದ ಸವಾಲನ್ನು ಸ್ವೀಕರಿಸಿ ವಿಷವನ್ನು ಕುಡಿದಾಗ ಅವರ, ಅವರಿಂದ ನರಸಿಂಹ ಸ್ತೋತ್ರ ರಚಿತವಾದ ಪವಿತ್ರ ಸ್ಥಳವಿದು. ಇನ್ನೋರ್ವ ಯತಿಗಳಾದ ವಾದಿರಾಜ ತೀರ್ಥರು ಕೂಡ ತಮ್ಮ ಶ್ಲೋಕಗಳಲ್ಲಿ ಅಹೋಬಲ ಕ್ಷೇತ್ರದ ವರ್ಣನೆಯನ್ನು ಮಾಡಿದ್ದಾರೆ . ಶ್ರೀ ಪುರಂದರದಾಸರು, ವಿಜಯದಾಸರು, ಗೋಪಾಲ ದಾಸರು ಕನ್ನಡದಲ್ಲಿ ಅಹೋಬಲದ ನರಸಿಂಹ ದೇವರ ಕುರಿತು ಹಾಡುಗಳನ್ನು ರಚಿಸಿದ್ದಾರೆ.

ತಲುಪುವುದು ಹೇಗೆ?

ಬೆಂಗಳೂರಿನಿಂದ 370 ಕಿಲೋಮೀಟರ್ ದೂರದಲ್ಲಿರುವ ಅಹೋಬಲವನ್ನು ರೈಲು, ಬಸ್ಸು ಅಥವಾ ಖಾಸಗಿ ವಾಹನಗಳ ಮೂಲಕ ತಲುಪಬಹುದು. ರೈಲಿನ ಮೂಲಕ ಮೂಲಕ ಹೋಗುವುದಾದರೆ ನಂದ್ಯಾಲಕ್ಕೆ ಹೋಗಿ ಅಲ್ಲಿಂದ ಬೇರೆ ವಾಹನದಲ್ಲಿ ಅಹೋಬಲಕ್ಕೆ ಹೋಗಬಹುದು. ಅಥವಾ ಬಸ್ಸು ಅಥವಾ ಖಾಸಗಿ ವಾಹನದಲ್ಲಿಯೂ ಅಹೋಬಲವನ್ನು ತಲುಪಬಹುದು.

ಬೆಂಗಳೂರಿನಿಂದ ಅಹೋಬಲಕ್ಕೆ ಹೋಗುವವರು ಹತ್ತಿರದಲ್ಲಿಯೇ ಇರುವ ಹಲವಾರು ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಬಹುದು. ಬೇಲಂ ಗುಹೆ, ಮಹಾನಂದಿ , ಯಾಗಂಟಿ ದೇವಸ್ಥಾನ, ಗಂಡಿ ಕೋಟೆ, ಗ್ರಾಂಡ್ ಕ್ಯಾನಿಯನ್ ಮೊದಲಾದ ಸ್ಥಳಗಳಿಗೆ ಭೇಟಿ ನೀಡಿದರೆ ನಿಮ್ಮ ಯಾತ್ರೆ ಪರಿಪೂರ್ಣವಾದಂತೆ.

ಅಹೋಬಲ ಕ್ಷೇತ್ರದ ಕುರಿತು ಲೇಖನ :


  •  ಅಶ್ವಿನಿ ಸುನಿಲ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW