‘ಇಷ್ಟು ಕಾಲ ಒಟ್ಟಿಗಿದ್ದು’ ಕೃತಿ ಪರಿಚಯ

ಈ ವರ್ಷ ಓದಿದ್ದು ಬೆರಳೆಣಿಕೆಯ ಪುಸ್ತಕಗಳನ್ನು, ಅವುಗಳಲ್ಲಿ ತೀರಾ ತೀರಾ ಇಷ್ಟವಾದ ಪುಸ್ತಕ ಇದು. ಇದನ್ನು ಓದೋಕೆಂದು ಕೈಗೆತ್ತಿಕೊಳ್ಳುವ ಮುಂಚೆ, ಯಾವುದೋ ವಿಚಾರಕ್ಕೆ ಒಂದಿಷ್ಟು ಜನರ ಬಳಿ ಶರಂಪರ ಜಗಳ ಆಡಿದ್ದೆ, ಆಮೇಲೆ ನನಗೆ ಎಲ್ಲದರಿಂದ ಬಿಡುಗಡೆ ಬೇಕು ಅನ್ನಿಸಿತ್ತು, ಈ ಪುಸ್ತಕ ಎತ್ತಿಕೊಂಡು ಓದಿದೆ ಅಥವಾ ಅದೇ ನನ್ನ ಹೆಗಲು ಬಳಸಿ ಓದಿಸಿಕೊಂಡು ಹೋಯಿತು.. ಓದಿ ಮುಗಿಸಿದ ನಂತರ  ಫಾತಿಮಾ ರಲಿಯಾ ಅವರ ಮಾತುಗಳು ಇವು…

ಪುಸ್ತಕ: ಇಷ್ಟು ಕಾಲ ಒಟ್ಟಿಗಿದ್ದು
ಲೇಖಕಿ: ಸಂಧ್ಯಾರಾಣಿ
ಪ್ರಕಾಶನ: ಸಾವಣ್ಣ
ಪ್ರಕಾರ: ಕಾದಂಬರಿ
ಪುಟ:212
ಬೆಲೆ: 250/

ಜಿದ್ದು ನನ್ನನ್ನು ದಣಿಸುವಂತೆ ಬಹುಶಃ ಪ್ರಪಂಚದ ಯಾವ ಸಂಗತಿಗಳೂ ದಣಿಸುವುದಿಲ್ಲ. ನಮ್ಮದೊಂದು ಪುಟ್ಟ ವಾಟ್ಸಪ್ ಗ್ರೂಪಿದೆ, ನಿನ್ನೆ ರಾತ್ರಿ ಹತ್ತು ಗಂಟೆಯಿಂದ ನಾನಲ್ಲೊಂದು ಜಗಳವನ್ನು ಶುರು ಮಾಡಿದ್ದೆ, ಗ್ರೂಪಿನ ಅಷ್ಟೂ ಮಂದಿಗೆ ‘ನ್ಯಾಯ’ ಕೊಡಿಸುವ ಜಿದ್ದಿಗೆ ಬಿದ್ದಿದ್ದೆ. ಕೋಪ, ಅಸಹನೆ, ತರ್ಕ, ವಾದ, frustration… ಎಲ್ಲದರ ನಡುವೆ, ಮಧ್ಯಾಹ್ನ ತಲುಪುವ ಹೊತ್ತಿಗೆ ನಾನು ದಣಿದು ಬಿಟ್ಟಿದ್ದೆ, ಮತ್ತದು ತೀರಾ ಸ್ಪಷ್ಟವಾಗಿ ನನಗೇ ಗೊತ್ತಾಗುತ್ತಿತ್ತು. ನನಗೆ ದಣಿವಿನಿಂದ ಪಾರಾಗಬೇಕಿತ್ತು, ಆಳ ಬಾವಿಯಿಂದ ಮೇಲೆ ಹತ್ತಿಕೊಂಡು ಬರಲು ನಾನು ಒಂದು ನಾರಿನ ಹಗ್ಗದ ಹುಡುಕಾಟದಲ್ಲಿದ್ದೆ, ಮತ್ತು ಹಗ್ಗ ಸಪೂರ ನೂಲಿನಂತೆ ನನ್ನ ಕಣ್ಣೊಳಗಿಳಿದು ಪೂರ್ತಿ ನೀರು ತುಂಬಿ, ಕಣ್ಣೊಳಗಿದ್ದ ಕಸಗಳನ್ನೆಲ್ಲಾ ಹೊರಗೆ ಎಳೆದೆಳೆದು ತೆಗೆದು ಹಾಕುವಂತಿರಬೇಕಿತ್ತು. ಆಗಲೇ ನನ್ನ ಕೈಗೆ‌ ಸಿಕ್ಕಿದ್ದು ‘ಇಷ್ಟು ಕಾಲ ಒಟ್ಟಿಗಿದ್ದು…’

‘ನಾತಿಚರಾಮಿ’ ಓದಿದ ಗುಂಗಿನಲ್ಲೇ ಇನ್ನೂ ಇದ್ದ ನನ್ನನ್ನು ಇದೂ ಈ ಪರಿ ಆವರಿಸಿಬಿಡುತ್ತದೆ ಅಂತ ಮೊದಲ ಹತ್ತು ಪುಟ ಓದುವಾಗಲೇ ಗೊತ್ತಾಗಿತ್ತು. ಸರೋಜಿನಿ, ನಿರಂಜನ್, ಶಾಪ ಹಾಕಿದ ಆ ಅಸಹಾಯಕ ಹೆಣ್ಣುಮಗಳು, ಅರು, ಅವಳ ಸೋದರತ್ತೆ, ರೆಡ್ಡಿ, ರಾಮ್, ಗೌರಿ, ಇನಾಯ, ಅವಳ ಅತ್ತೆ, ರಫಿ, ರಿನೇವೇಟ್ ಆಗುತ್ತಿದ್ದ ಆ ಹಳೆಯ ಮನೆ, ಅಭಿ…. ಓಹ್! ಎಷ್ಟೊಂದು ಸಂಬಂಧಗಳು, ಎಷ್ಟೊಂದು ಗೋಜಲುಗಳು, ಎಷ್ಟೊಂದು ನಿಟ್ಟುಸಿರುಗಳು, ಸಮಾಧಾನಗಳು, ಸಾಂತ್ವನಗಳು, trust issues…..! ಪ್ರತಿ ಪಾತ್ರಗಳು ನನ್ನೊಳಗೆ ಇಳಿಯುತ್ತಿದ್ದಂತೆ ನಾನು ಬರಿದಾಗುತ್ತಿದ್ದೆ, ಬೆರಗಾಗುತ್ತಿದ್ದೆ, ಬೆತ್ತಲಾಗುತ್ತಿದ್ದೆ. ಎಲ್ಲಾ ಪಾತ್ರಗಳಲ್ಲೂ ನಾನಿದ್ದೆ, ಎಲ್ಲಾ ಘಟನೆಗಳಲ್ಲೂ ನಾನಿದ್ದೆ, ಎಲ್ಲಾ ಪಾತ್ರಗಳೂ ನನ್ನೊಳಗೇ ಇದ್ದವು, ಎಲ್ಲಾ ಘಟನೆಗಳು ನನ್ನೊಳಗೇ ಇದ್ದವು, yet ಅವೆಲ್ಲವೂ ನನ್ನಿಂದ ಒಂದಂಗುಲ ದೂರ ನಿಂತು ಮಾತಾಡುತ್ತಿದ್ದವು, ಒಂದು ಸ್ಪಷ್ಟತೆಯ ಬೆಳಕನ್ನು ನನ್ನೊಳಗೆ ತುಂಬುತ್ತಿದ್ದವು.

ಈ ಕಾದಂಬರಿಯ ಪ್ರತಿ ಪಾತ್ರಗಳು ನನ್ನೊಳಗಿನ ಮನುಷ್ಯಳನ್ನು ಹೆಚ್ಚು ಹೆಚ್ಚು ತಿದ್ದಿದೆ, ತೀಡಿದೆ, ಪ್ರಶ್ನೆ ಮಾಡುವಂತೆ ಮಾಡಿದೆ, ಒಳಗನ್ನು ಪರೀಕ್ಷಿಸಿದೆ, ಕೆಲವೊಮ್ಮೆ ಬೆಚ್ಚಿ ಬೀಳುವಂತೆ ಮಾಡಿದೆ. ಇಲ್ಲಿ ಯಾವ ಪಾತ್ರವೂ ಅಮುಖ್ಯವಲ್ಲ. ಮೇಲ್ನೋಟಕ್ಕೆ ಸುಮ್ಮನೆ ಬಂದು ಹೋಗುವ ಪಾತ್ರದಂತೆ ಕಾಣುವ ಪುಟ್ಟತಾಯಿ ಚಿಚ್ಚಿಯ ಪಾತ್ರ ಆಮೇಲೆಲ್ಲೂ ಕಾಣಿಸದೇ ಹೋದರೂ ಒಳಗೊಂದು ಕಿಚ್ಚು, ಕೆಂಡ ಇಟ್ಟುಕೊಂಡಂತೆ, ಇರದೆಯೂ ಇದ್ದಂತೆ ಕಾದಂಬರಿಯುದ್ದಕ್ಕೂ ಉರಿಯುತ್ತದೆ. ಸರೋಜಿನಿಯ ಸೀಮಾತೀತ ಪ್ರೀತಿ, ಪ್ರತಿಯೊಂದಕ್ಕೂ ಉರಿದು ಬೀಳುವ ಗೌರಿ, ಇನಾಯಾಳ ದಿಟ್ಟತನ, ಅರುಂಧತಿಯ ಛಾತಿ ಎಲ್ಲಾ ಪಾತ್ರಗಳಲ್ಲೂ ಆ ಪುಟ್ಟತಾಯಿಯ ಛಾಯೆ ಇದ್ದೇ ಇದೆ, ಮತ್ತು ಆ ಛಾಯೆಯನ್ನು ನಿರಾಯಾಸವಾಗಿ ಪಾತ್ರಗಳೊಂದಿಗೆ ಮಾತು ಆಡುತ್ತಾ ಆಡುತ್ತಲೇ ನೀವು ನಮ್ಮೊಳಗೂ ದಾಟಿಸಿ ಬಿಡುತ್ತೀರಿ.

ಕಾದಂಬರಿಯೊಂದು ಈ ಪರಿ ನನ್ನನ್ನು ಕಾಡದೇ ತುಂಬ ವರ್ಷಗಳೇ ಕಳೆದು ಹೋದವೇನೋ! ಒಂದು ಫ್ರೆಶ್ ಓದಿನ, ಜೀವನ ನೋಟವನ್ನು ನನಗೀ ಕಾದಂಬರಿ ನೀಡಿದೆ. ಇಲ್ಲಿ ಕಟ್ಟಿಕೊಟ್ಟಿರುವ ಸಂಬಂಧಗಳು, ಅವು ಹೊರಳಿಕೊಳ್ಳುವ ಹೊರಳುಗಳೆಲ್ಲಾ ಲಾಜಿಕಲೀ ಎಷ್ಟು ಪಾಸಿಬಲ್ ಎನ್ನುವುದು ಯೋಚಿಸಲೂ ಪುರುಸೊತ್ತಿಲ್ಲದಂತೆ ಕಥೆ ಮುಂದೆ ಸಾಗುತ್ತಲೇ ಇರುತ್ತದೆ. ಎಲ್ಲಿವರೆಗೆ ಅಂದರೆ, ಪುಸ್ತಕ ಓದಿ ಮುಗಿಸಿದ ಮೇಲೂ ಕಥೆ ಮುಗಿಯುವುದೇ ಇಲ್ಲ. ತ್ಯಾಂಕ್ಯೂ ಸಂಧ್ಯಾ ರಾಣಿ ಮಾ, ಇಷ್ಟು ಒಳ್ಳೆಯ ಪುಸ್ತಕ ಕೊಟ್ಟಿದ್ದಕ್ಕೆ.

ಈಗ ನನ್ನ ಕಣ್ಣು ಶುಭ್ರವಾಗಿದೆ, ದಣಿವು ಆರಿ ಹೋಗಿದೆ.

(ಸದ್ಯಕ್ಕೆ ಇಷ್ಟು ಸಾಕು, ಇದರ ಬಗ್ಗೆ ಮತ್ತಷ್ಟು ಮಾತಾಡೋದಿದೆ)


  • ಫಾತಿಮಾ ರಲಿಯಾ

5 1 vote
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW