ಮೆನೋಪಾಸ್ ಎಂಬ ಅಗ್ನಿಪರೀಕ್ಷೆ

ಆರಂಭದಲ್ಲಿ ಹದಿಹರೆಯದ ಹೆಣ್ಣು ಮಕ್ಕಳಲ್ಲಿ ಋತುಬಂಧ ತಂದೊಡ್ಡುವ ಸಮಸ್ಯೆಗಳು ಅನೇಕ. ಹಾಗೆಯೇ ಅದು ನಿಲ್ಲುವಾಗಲೂ ಸುಮ್ಮನೆ ಹೋಗದೆ ಒಂದಿಷ್ಟು ತರಲೆ ತಾಪತ್ರೆಯ ತಂದೊಡ್ಡಿಯೇ ಹೋಗುತ್ತದೆ. ಋತುಬಂಧ ಸಮಸ್ಯೆ 50ರ ವಯೋಮಾನದ ನಂತರ ಆರಂಭವಾಗುವುದಾದರೂ ಪೂರ್ವ ಋತುಬಂಧ ಸಮಸ್ಯೆಗಳು 40ರ ಆಸು ಪಾಸಿನಲ್ಲಿ ಮೈದೊಳೆಯ ತೊಡಗುತ್ತವೆ. ಈ ಕುರಿತು ಸುಜಾತಾ ರವೀಶ್ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

೪೪ ರ ಪ್ರಾಯದ ವನಿತಾ ಇಬ್ಬರು ಮಕ್ಕಳ ತಾಯಿ. ಹದಿಹರಯದ ಮಕ್ಕಳ ಮೇಲೆ ಸದಾ ಅಸಹನೆಯಿಂದ ಹರಿಹಾಯುತ್ತಲೇ ಇರುತ್ತಾಳೆ. ಮನೆಗೆ ಬಂದರೆ ಶಾಂತಿಯೇ ಇಲ್ಲ ಅಂತ ಗಂಡ ಮಕ್ಕಳ ದೂರು. ನನ್ನ ಬಗ್ಗೆ ಯಾರೂ ಯೋಚಿಸಲ್ಲ ಅಂತ ಅವಳ ಅಳಲು.

೫೦ ರ ಸವಿತಾಳ ಮಗಳು ಮದುವೆಯಾಗಿ ಅಮೆರಿಕಾದಲ್ಲಿ ಮಗ ಸಹ ವಿದೇಶಲ್ಲೇ ಕೆಲಸದಲ್ಲಿ. ಇಲ್ಲಿ ಇವಳಿಗೆ ಏನು ಮಾಡಲೂ ಮನಸಿಲ್ಲ. ಖಿನ್ನತೆಗೆ ಜಾರಿದ್ದಾಳೆ. ಗಂಡ ಸದಾ ಕೆಲಸದಲ್ಲೇ ವ್ಯಸ್ತ ಅನ್ನುವುದು ಅವಳ ದೂರು.

ಯಾವುದರಲ್ಲೂ ಆಸಕ್ತಿಯಿಲ್ಲ ಮೊದಲಿನ‌ ಲವಲವಿಕೆ ಇಲ್ಲ ಹಾಸಿಗೆಯಲ್ಲೂ ಸಹಕರಿಸುವುದಿಲ್ಲ ಎಂದು ಭಾರತಿಯ ಗಂಡನ‌ ಸಿಡಿಮಿಡಿ, ಮಕ್ಕಳು ಅವರವರ ಲೋಕದಲ್ಲೇ ಮಗ್ನ. ಕಾಲುನೋವು ನಿದ್ರಾಹೀನತೆಯಿಂದ ಬಳಲುವ ತನ್ನ ಬಗ್ಗೆ ಯಾರೂ ಕಾಳಜಿ ವಹಿಸಲ್ಲ ಎಂದು ಚಿಂತಿಸಿ ಮತ್ತಷ್ಟು ಆರೋಗ್ಯ ಕಳೆದುಕೊಳ್ಳುತ್ತಿದ್ದಾಳೆ ಅವಳು.

ಮೇಲಿನ‌ ಎಲ್ಲಾ ಪ್ರಸಂಗಗಳಲ್ಲೂ ಮುಖ್ಯವಾದ ಕಾರಣ ನಡುವಯಸ್ಸಿನ ಹೆಣ್ಣುಮಕ್ಕಳಲ್ಲಿ ಕಂಡುಬರುವ ಋತುಬಂಧ ಅಥವಾ ಮೆನೋಪಾಸ್ ಸಮಸ್ಯೆ. ಸೃಷ್ಟಿ ಕಾರ್ಯಕ್ಕೆ ಮೂಲ ಕಾರಣವಾದ ಮಾಸಿಕ ರಕ್ತಸ್ರಾವ. ಅದು ಆರಂಭವಾಗುವ ಮೊದಲು ಹದಿಹರೆಯದ ಹೆಣ್ಣು ಮಕ್ಕಳಲ್ಲಿ ತಂದೊಡ್ಡುವ ಸಮಸ್ಯೆಗಳು ಅನೇಕ. ಹಾಗೆಯೇ ಅದು ನಿಲ್ಲುವಾಗಲೂ ಸುಮ್ಮನೆ ಹೋಗದೆ ಒಂದಿಷ್ಟು ತರಲೆ ತಾಪತ್ರೆಯ ತಂದೊಡ್ಡಿಯೇ ಹೋಗುತ್ತದೆ ಅನ್ನುವುದು ವಿಶೇಷ. ಚಿಕ್ಕ ವಯಸ್ಸು ಅಪ್ಪ ಅಮ್ಮ ವಹಿಸುವ ಕಾಳಜಿ ಅವರ ರಕ್ಷಣೆಯಲ್ಲಿ ರಜಸ್ವಲೆ ಆಗುವ ಮುಂಚಿನ ಹಾಗೂ ಆ ಸಮಯ ಒಂದು ಸಂಭ್ರಮವಾಗುತ್ತದೆ ವಿನಃ ಸಮಸ್ಯೆಗಳು ಅಷ್ಟೇನೂ ಹೆಚ್ಚೆನಿಸುವುದಿಲ್ಲ. ಆದರೆ ಅದು ನಿಲ್ಲುವಾಗಿನ ಋತುಬಂಧದ ಸಮಯ ಮಾತ್ರ ನಿಜಕ್ಕೂ ಕಷ್ಟಕರ, ಕೆಲವರಿಗಂತೂ ದುಃಸ್ವಪ್ನವೇ ಸೈ.

ಫೋಟೋ ಕೃಪೆ : ಅಂತರ್ಜಾಲ

ಹಾಗಾದರೆ ಈ ಋತುಬಂಧ ಅಂದರೆ ಏನು. ದೇಹದಲ್ಲಿ ಈಸ್ಟ್ರೋಜನ್ ಹಾರ್ಮೋನ್ ಸ್ರಾವ ವಯಸಾಗುತ್ತಾ ಆಗುತ್ತಾ ಕಡಿಮೆಯಾಗುತ್ತಾ ಹೋಗುತ್ತದೆ. ಹಾಗೆಯೇ ಮಾಸಿಕ ಸ್ರಾವದ ಅಂತರ ತಿಂಗಳಿನಿಂದ ತಿಂಗಳಿಗೆ ಜಾಸ್ತಿಯಾಗುತ್ತಾ ಹೋಗಿ ಕಡೆಗೆ ನಿಂತು ಹೋಗುತ್ತದೆ. ಅತಿ ಹೆಚ್ಚಿನ ರಕ್ತಸ್ರಾವ ಅಥವಾ ಅತಿ ಕಡಿಮೆ ರಕ್ತಸ್ರಾವ ,ದೇಹದಲ್ಲಿ ಹಾಟ್ ಫ್ಲೆಶಸ್ ಜಾಸ್ತಿ ಆಗುತ್ತಾ ಹೋಗುತ್ತದೆ, ಇದ್ದಕ್ಕಿದ್ದಂತೆ ಮೈ ಶಾಖ ಏರುತ್ತದೆ ರಾತ್ರಿಗಳಲ್ಲಿ ಮೈಯಿಡೀ ಬೆವರುತ್ತದೆ.‌ ನಿದ್ರಾ ಹೀನತೆ ಸಾಮಾನ್ಯ. ಇನ್ನು ಮೂಡ್ ನಲ್ಲಿ ಅತೀವ ವ್ಯತ್ಯಾಸ. ಯೋನಿ ಪ್ರದೇಶದಲ್ಲಿ ಶುಷ್ಕತೆ ಅತಿ ಸಾಮಾನ್ಯ. ಜೊತೆಯಲ್ಲಿ ಬೋನಸ್ ಎಂಬಂತೆ ಸ್ಥೂಲಕಾಯ ಮೂಳೆಗಳ ಸಮಸ್ಯೆ ಮಂಡಿ ನೋವು ಇವುಗಳು ಅಡಿ ಇಡಲು ಆರಂಭವಾಗುತ್ತದೆ. ನಿಜವಾದ ಋತುಬಂಧ ಸಮಸ್ಯೆ 50ರ ವಯೋಮಾನದ ನಂತರ ಆರಂಭವಾಗುವುದಾದರೂ ಪೂರ್ವ ಋತುಬಂಧ ಸಮಸ್ಯೆಗಳು 40ರ ಆಸು ಪಾಸಿನಲ್ಲಿ ಮೈದೊಳೆಯ ತೊಡಗುತ್ತವೆ. ಉತ್ತರ ಋತುಬಂಧ ಸಮಸ್ಯೆಗಳು 55 – 56 ವರ್ಷಗಳ ನಂತರ ಕಂಡು ಬರುವುದಾದರೂ ಆ ವೇಳೆಗೆ ಸಮಸ್ಯೆಯೊಂದಿಗೆ ಸಮತೋಲನ ಹೊಂದಿಬಿಟ್ಟಿರುವುದರಿಂದ ಇದು ಅಷ್ಟಾಗಿ ಕಾಡುವುದಿಲ್ಲ.

ಇವೆಲ್ಲ ದೈಹಿಕ ಸಮಸ್ಯೆಗಳು ಬೇರೆಯವರ ಕಣ್ಣಿಗೆ ಅನುಭವಕ್ಕೆ ಬರುವಂತದ್ದಲ್ಲ ಹಾಗಾಗಿ ಬಾಯಿ ಬಿಟ್ಟು ಹೇಳಿಕೊಳ್ಳದ ಹೊರತು ಯಾರಿಗೂ ಅರ್ಥವಾಗುವುದಿಲ್ಲ. ಅದೊಂದು ಬೇಸರ ಆದರೆ, ಯಾರೂ ತಾವಾಗಿ ಅರಿತು ಸಹಕರಿಸುವುದಿಲ್ಲ ಎಂಬ ಮಾನಸಿಕ ಭಾವನೆ ಯಾರಿಗೂ ಬೇಡದವರು ನಾವು ಎಂಬ ಖಿನ್ನತೆಗೆ ಗುರಿಯಾಗುವಂತೆ ಮಾಡುತ್ತದೆ ಒಟ್ಟಿನಲ್ಲಿ ಮನೋ ದೈಹಿಕ ಅಸ್ವಸ್ಥತೆ ಇದರ ಪ್ರಮುಖ ಲಕ್ಷಣ. ಹೆಚ್ಚಾದ ದೈಹಿಕ ನೋವುಗಳ ಜೊತೆಗೆ ಅವುಗಳನ್ನು ಉಪಚರಿಸಲು ಯಾರು ಇರದಂತಹ ನೋವು ಇನ್ನಷ್ಟು ಅದನ್ನು ಉಲ್ಬಣಗೊಳಿಸುತ್ತದೆ . ಕೆಲವರು ಎಲ್ಲವನ್ನು ನುಂಗುತ್ತಾ ಖಿನ್ನತೆಗೆ ಒಳಗಾದರೆ ಮತ್ತೆ ಕೆಲವರು ಸಿಡುಕಾಡಿ ಎಗರಾಡಿ ಮನೆಯವರ ನೆಮ್ಮದಿಯು ಹಾಳಾಗುತ್ತದೆ. ಜೊತೆಗೆ ಮೊದಲಿನಿಂದ ಮಾಡುತ್ತಾ ಬಂದ ಕೆಲಸಗಳನ್ನು ಬಿಡಲು ಆಗದೆ ಮಾಡಲು ಆಗದ ಅಶಕ್ತತೆ ಒಂದು ರೀತಿಯ ಅಸಹನೆ ನಮ್ಮ ಮೇಲೆ ನಮಗೆ ಉಂಟಾಗುತ್ತಾ ಹೋಗುತ್ತದೆ.‌

ಇದಕ್ಕೆಲ್ಲಾ ಪರಿಹಾರ ಇಲ್ಲವೇ ಎಂದರೆ ಖಂಡಿತ ಇದೆ. ರೋಗ ಇದ್ದಮೇಲೆ ಔಷಧಿ ಇದ್ದೆ ಇರುತ್ತದೆ. ತೀರ ಹೆಚ್ಚಿನ ಸಮಸ್ಯೆ ಎನಿಸಿದಾಗ ವೈದ್ಯರನ್ನು ಕಂಡು ವೈದ್ಯಕೀಯ ಉಪಚಾರ ಕೈಗೊಳ್ಳಬೇಕು. ಹೆಚ್ ಆರ್ ಟಿ ಎಂದರೆ ಹಾರ್ಮೋನ್ ರಿವರ್ಸಲ್ ಟ್ರೀಟ್ಮೆಂಟ್ ಎಂಬ ಚಿಕಿತ್ಸೆಯ ಮೂಲಕ ಹಾರ್ಮೋನ್ ಮಟ್ಟವನ್ನು ಸಮತೋಲನಗೊಳಿಸಿ ಸಮಸ್ಯೆಯ ಗಂಭೀರತೆಯನ್ನು ಕಡಿಮೆ ಮಾಡಬಹುದು. ಹಾಗೆಯೇ ಹಾರ್ಮೋನ್ ಟ್ರೀಟ್ಮೆಂಟ್ ಅಲ್ಲದೆಯು ಬೇರೆ ಚಿಕಿತ್ಸೆಯ ಮೂಲಕ ಋತುಬಂಧದ ಲಕ್ಷಣಗಳನ್ನು ಉಪಚರಿಸುವ ಚಿಕಿತ್ಸೆ ನಡೆಸುತ್ತಾರೆ . ಇದರೊಂದಿಗೆ ಜೀವನ ಶೈಲಿ ಉತ್ತಮಗೊಳಿಸುವ ವ್ಯಾಯಾಮ ಯೋಗ ನಡಿಗೆ ಇವುಗಳ ಮೂಲಕ ದೇಹದ ಆರೋಗ್ಯ ಕಾಪಾಡಿಕೊಳ್ಳಬಹುದು. ಹಾಗೆಯೇ ಆಹಾರದಲ್ಲಿಯೂ ಸಹ ಉತ್ತಮ ಗುಣಮಟ್ಟ ಕಾಪಾಡಿಕೊಂಡು ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂ ಗಳನ್ನು ಸೇವಿಸಿ ಮೂಳೆಯ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಹಾಗಾಗಿಯೇ ಏನೊಂದು ಸಮಸ್ಯೆ ಇಲ್ಲದಿದ್ದರೂ ನಿಯಮಿತವಾಗಿ ಸ್ತ್ರೀರೋಗ ತಜ್ಞರ ಭೇಟಿ ನಡೆಸಿದರೆ ಈ ಎಲ್ಲಾ ಸಮಸ್ಯೆಗಳು ಉಂಟಾಗುವ ಮೊದಲೇ ತಡೆಗೆ ಕ್ರಮಗಳನ್ನು ಕೈಗೊಳ್ಳಬಹುದು.

ಫೋಟೋ ಕೃಪೆ : ಅಂತರ್ಜಾಲ

ಇದು ಮನೋ ದೈಹಿಕ ಸಮಸ್ಯೆ ಆದ್ದರಿಂದ ಮನೆಯವರ ಸುತ್ತು ಮುತ್ತಲಿನವರ ಸಹಾಯವು ಚಿಕಿತ್ಸೆಯಲ್ಲಿ ಹೆಚ್ಚಿನ ಪಾತ್ರವಹಿಸುತ್ತದೆ. ಪತಿ ಮೊದಲಿಗೆ ಈ ಸಮಸ್ಯೆಯ ಆಳ ಗಂಭೀರತೆಯನ್ನು ಅರಿತು ತಮ್ಮ ಸಹಕಾರವನ್ನು ನೀಡಿ ಸಂಗಾತಿಯೊಂದಿಗೆ ಪೂರ್ಣ ಸಹಕಾರ ನೀಡಿದರೆ ಈ ಅಗ್ನಿಪರೀಕ್ಷೆಯನ್ನು ತುಂಬಾ ಸುಲಭವಾಗಿ ಪತ್ನಿ ದಾಟಿ ಬರುತ್ತಾಳೆ. ಮಕ್ಕಳು ಅಷ್ಟೇ ತಾಯಿಯ ಈ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಸೂಕ್ತವಾಗಿ ವರ್ತಿಸಿದಾಗ ಮನೆಯಲ್ಲಿ ನಿಜಕ್ಕೂ ನೆಮ್ಮದಿ ಮೂಡುತ್ತದೆ. ದೈಹಿಕ ಸಮಸ್ಯೆಗಳಿದ್ದರೂ ಮಾನಸಿಕವಾಗಿ ನಿನ್ನೊಂದಿಗೆ ನಾನಿದ್ದೇನೆ ಎನ್ನುವ ಕುಟುಂಬದ ಸದಸ್ಯರ ಮನೋಭಾವ ಹೆಚ್ಚಿನ ಪ್ರಸಂಗಗಳಲ್ಲಿ ಸಕಾರಾತ್ಮಕ ಪರಿಣಾಮ ಬೀರುತ್ತದೆ.

ಇನ್ನು ಋತುಬಂಧದ ಸಮಯದಲ್ಲಿ ಮಹಿಳೆಯರು ತಮ್ಮ ಆರೋಗ್ಯ ಕಾಪಾಡಿಕೊಳ್ಳುವ ಜೊತೆಗೆ ಇಷ್ಟವಾದ ಹವ್ಯಾಸವನ್ನು ರೂಡಿಸಿಕೊಂಡು ಸಮಾನ ಮನಸ್ಕರು ಜೊತೆಗೆ ಸಹವಾಸ ಸ್ನೇಹ ಬಾಂಧವ್ಯ ಮುಂದುವರಿಸಿಕೊಂಡು ಹೋದಾಗ ಮನಸ್ಸಿಗೆ ಹೆಚ್ಚಿನ ನೆಮ್ಮದಿ ಮೂಡುತ್ತದೆ ದೈಹಿಕ ಸಮಸ್ಯೆಗಳ ಕಡೆಗೆ ಅಷ್ಟಾಗಿ ಗಮನ ಹೋಗುವುದಿಲ್ಲ.

ಮಹಿಳೆಯರ ಈ ಬಹು ಮುಖ್ಯ ಸಮಸ್ಯೆಯನ್ನು ಅರಿತುಕೊಂಡು ಅದನ್ನು ಪ್ರಚುರಪಡಿಸಿ ನಿವಾರಣೆಯ ಮಾರ್ಗಗಳನ್ನು ಹೇಳಲೆಂದೇ “ಅಂತರಾಷ್ಟ್ರೀಯ ಋತುಬಂಧ ಸೊಸೈಟಿ” International Menopause Society 1978 ರಲ್ಲಿ ಆರಂಭವಾಯಿತು. ಋತುಬಂಧ ಒಂದು ಕಾಯಿಲೆ ಅಲ್ಲ ಎಂದು ಪ್ರತಿಪಾದಿಸಿ ಅದರಿಂದ ಬಳಲುತ್ತಿರುವ ಮಹಿಳೆಯರಿಗೆ ಪರಿಹಾರ ಕಾಣಲು ಬೆಂಬಲ ನೀಡುತ್ತಾ ಬರುತ್ತಿರುವ ಈ ಸಂಸ್ಥೆ ವಿಶ್ವ ಋತುಬಂಧ ದಿನವನ್ನು ಅಕ್ಟೋಬರ್ 18ರಂದು ಆರಂಭಿಸುವ ಪರಿಪಾಠವನ್ನು 2009 ರಿಂದ ಆರಂಭಿಸಿದೆ ಈ ವರ್ಷ ಅಂದರೆ 2025ರ ಥೀಮ್

“ಋತುಬಂಧ ಆರೋಗ್ಯದಲ್ಲಿ ಜೀವನ ಶೈಲಿ ಸುಧಾರಣೆಯ ಪಾತ್ರ”

The role of lifestyle medicine in menopausal health.

IMS ನ ಅಧ್ಯಕ್ಷಯಾಗಿರುವ ಪ್ರೋಸಿಲ ನಾಪ್ಪಿ ಅವರು ಹೀಗೆ ಹೇಳುತ್ತಾರೆ.

This years white paper highlights life style medicine as a strong non pharmalogical foundation for health.

ಔಷಧಿ ಮಾತ್ರೆಗಳ ವೈದ್ಯಕೀಯ ಪದ್ಧತಿಗಳನ್ನು ಮಾತ್ರ ಅನುಸರಿಸುವುದನ್ನು ಬಿಟ್ಟು ಜೀವನ ಶೈಲಿಯಲ್ಲಿ ಸುಧಾರಣೆಗಳನ್ನು ಮಾಡಿಕೊಂಡರೆ ಋತುಬಂಧದ ಸಮಸ್ಯೆಗಳನ್ನು ಸುಲಭವಾಗಿ ನಿವಾರಿಸಿಕೊಳ್ಳಬಹುದು. ಹಾಗಾದರೆ ಈ ಜೀವನಶೈಲಿ ಸುಧಾರಣೆಗಳು ಅಂದರೆ ಏನು ಎಂದು ನೋಡುವುದಾದರೆ

೧. ಸತ್ವಯುತ ಆಹಾರ
೨. ದೈಹಿಕ ಚಟುವಟಿಕೆಗಳು
೩. ಮಾನಸಿಕ ಸಂತುಲತೆ
೪. ಅಪಾಯಕಾರಿ ವಸ್ತುಗಳಿಂದ ದೂರವಿರುವುದು
೫. ಪುನರ್ಜೀವನಗೊಳಿಸುವಷ್ಟು ನಿದ್ರೆ ಹಾಗೂ
೬. ಆರೋಗ್ಯ ಪೂರ್ಣ ಸಂಬಂಧಗಳು

ಇಂದಿನ ಧಾವಂತದ ಜೀವನದಲ್ಲಿ, ಹಣದ ಹಿಂದೆ ಓಡುತ್ತಿರುವ ನಾಗಾಲೋಟದಲ್ಲಿ ಈ ಮೂಲಭೂತ ವಿಷಯಗಳ ಬಗ್ಗೆ ಅರಿವಿದ್ದೋ ಅರಿವಿಲ್ಲದೆಯೋ ನಾವು ವಿಮುಖ ರಾಗಿದ್ದೇವೆ. ಈ ಅಂಶವನ್ನು ಮನಗಂಡು ಒಳ್ಳೆಯ ಜೀವನ ಶೈಲಿಯನ್ನು ರೂಡಿಸಿಕೊಂಡರೆ ಋತುಬಂಧ ಮಾತ್ರವಲ್ಲ ಬೇರೆ ಯಾವುದೇ ಆರೋಗ್ಯದ ಸಮಸ್ಯೆಗಳು ನಮ್ಮನ್ನು ಕಾಡಲಾರವು.

ಮೇಲೆ ಹೇಳಿದ ವನಿತಾ ಗೆಳತಿಯೊಬ್ಬಳ ಸಲಹೆಯ ಮೇಲೆ ವೈದ್ಯರನ್ನು ಸಂಪರ್ಕಿಸಿ ಅವರಿಂದ ಎಚ್ ಆರ್ ಟಿ ಚಿಕಿತ್ಸೆ ಪಡೆದು ಯೋಗ ಕ್ಲಾಸಿಗೆ ಸೇರಿ ಸಂಪೂರ್ಣ ಗುಣಮುಖಳಾಗಿದ್ದಾಳೆ. ಬಹಳ ಹಿಂದೆಯೇ ಬಿಟ್ಟು ಹೋಗಿದ್ದ ಬರವಣಿಗೆಯನ್ನು ಮುಂದುವರೆಸಿದ ನಂತರವಂತೂ ಅವರ ಮನೆ ಈಗ ಶಾಂತಿ ನಿವಾಸ.

ಸವಿತಾಳನ್ನು ಅವಳ ಪತಿ ಮಾನಸಿಕ ತಜ್ಞರ ಬಳಿ ತೋರಿಸಿ ಅವರ ಸಲಹೆಯ ಮೇಲೆ ಸ್ತ್ರೀರೋಗ ತಜ್ಞರನ್ನು ಸಂದರ್ಶಿಸಿ ಅವಳೀಗ ಚೈತನ್ಯದ ಚಿಲುಮೆ. ಒಂದು ಎನ್‌ಜಿಓ ನಲ್ಲಿ ಸಂಪೂರ್ಣ ಚಟುವಟಿಕೆಯಿಂದ ತೊಡಗಿಸಿಕೊಂಡಿದ್ದಾಳೆ. ಈಗ ಖಿನ್ನತೆ ಅವಳ ಬಳಿಯೂ ಸುಳಿಯಲೂ ಹೆದರಿಕೊಂಡಿದೆ.

ಭಾರತಿಯ ಅಕ್ಕ ಅವಳನ್ನು ಸ್ತ್ರೀರೋಗ ತಜ್ಞರ ಬಳಿ ಕಳೆದುಕೊಂಡು ಹೋಗಿ ಅವಳು ಈಗ ಋತುಬಂಧದ ಸಮಸ್ಯೆಯ ಚೌಕಟ್ಟಿನಿಂದ ಹೊರಬಂದಿದ್ದಾಳೆ. ತನಗೆ ಮೊದಲಿನಿಂದ ಪ್ರಿಯವಾಗಿದ್ದ ಸಂಗೀತದಲ್ಲಿ ಮತ್ತೆ ತೊಡಗಿಸಿಕೊಂಡು ಖುಷಿಯಾಗಿದ್ದಾಳೆ.

ನೋಡಿದಿರಲ್ಲ ಗೆಳೆಯರೇ ಈ ಸಮಸ್ಯೆ ಸರಿಯಾಗಿ ನಿವಾರಿಸಿಕೊಳ್ಳದೆ ಉಗುರಿನಿಂದ ಹೋಗುವುದನ್ನು ಕೊಡಲಿಯಲ್ಲಿ ಕತ್ತರಿಸಿದ ಹಾಗೆ ಮಾಡಿಕೊಳ್ಳುವುದು ಸರಿಯಲ್ಲ. ನಿಮ್ಮದೇ ಸಮಸ್ಯೆ ಆದರೆ ಖಂಡಿತ ಅದನ್ನು ಮುಚ್ಚಿಟ್ಟುಕೊಂಡು ಕೊರಗದೆ ತಕ್ಷಣ ವೈದ್ಯರ ಬಳಿ ಹೋಗಿ. ಮನೆಯ ಸದಸ್ಯರಿಗೆ ಈ ರೀತಿಯ ಸಮಸ್ಯೆ ಆದರೆ ನಿಮ್ಮ ಸಂಪೂರ್ಣ ಸಾಂತ್ವನ ಸಹಕಾರ ಅವರೊಟ್ಟಿಗೆ ಇರಲಿ ಅವರನ್ನು ಪೂರ್ಣ ಅರ್ಥಮಾಡಿಕೊಳ್ಳಿ. ದೈಹಿಕ ಹಾಗೂ ಮಾನಸಿಕವಾಗಿ ಬಳಲುವ ಅವರಿಗೆ ನಿಮ್ಮ ಪ್ರೀತಿಯ ಆರೈಕೆ ಹಾರೈಕೆ ಸದಾ ಇರಲಿ.


  • ಸುಜಾತಾ ರವೀಶ್ – ಮೈಸೂರು.

5 1 vote
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW