ಜನಪ್ರಿಯ ಧಾರವಾಹಿ ಮೂಡಲಮನೆಯಲ್ಲಿ ಸಹ ನಿರ್ದೇಶಕರಾಗಿದ್ದ ಚಕ್ರವರ್ತಿ ರಾಮಗೋಪಾಲಾರ್ಯ ಅವರು ಮೂಡಲಮನೆ ಧಾರವಾಹಿ ಶೂಟಿಂಗ್ ಸಂದರ್ಭದಲ್ಲಿ ಅಪರ್ಣಾ ಅವರೊಂದಿಗಿನ ಒಡನಾಟದ ಕುರಿತು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ….
“ಹೆಸರಲ್ಲೇನಿದೆ? ಬಿಡಿ ಸ್ವಾಮಿ” !! ಅನ್ನೋವ್ರಿಗೆ ಹೋಗಿ “ಅಪರ್ಣ” ಅನ್ನೋ ಹೆಸರು ಹೇಳಿ ನೋಡಿ. ಆಗ ಗೊತ್ತಾಗತ್ತೆ. ಆ ಹೆಸರಲ್ಲಿ ಕನ್ನಡತನದ ಸೊಗಡು ಇದೆ, ಕನ್ನಡಾಭಿಮಾನದ ಸಾಗರ ಇದೆ, ಪರಿಶುದ್ಧವಾದ ಉಚ್ಛಾರಣೆ ಇದೆ, ಎಲ್ಲಕ್ಕೂ ಮಿಗಿಲಾಗಿ ಅವರಾಡೋ ಕನ್ನಡದ ಪದಗಳಲ್ಲಿ ಲಾಲಿತ್ಯ ಇದೆ… ಅಷ್ಟೇ ಅಲ್ಲ, ಹೇಳೋಕ್ಕೆ ಇನ್ನೂ ಸಾಕಷ್ಟೂ ಇದೆ !!

ಅಪರ್ಣ ಅವರನ್ನ ನಾನು ಮೊದಲು ಮುಖತಃ ಭೇಟಿ ಆಗಿದ್ದು ನಮ್ಮ “ಮೂಡಲ ಮನೆ” ಸೆಟ್ನಲ್ಲಿ. ನಮ್ಮ ಶೂಟಿಂಗ್ ಶುರುವಾಗಿ ಕೆಲವು ದಿನಗಳಾದ ಮೇಲೆ ಅವರು ಬಂದಿದ್ದು. ಮೊದಲ ದಿನ ಭೇಟಿ ನೆನಪಿಟ್ಕೋಳೋ ತರಹದ್ದೇ. ಅವರನ್ನ ಟಿವಿ ಶೋಗಳಲ್ಲಿ, ಸಿನಿಮಾಗಳಲ್ಲಿ ನೋಡಿದ್ರೂ, ಮುಖತಃ ಭೇಟಿ ಆಗಿದ್ದು ಇಲ್ಲೇ ಹಾವೇರಿಯ ಹಂದಿಗನೂರು ವಾಡೆಯಲ್ಲಿ. ಮೊದಲೇ ಟಿವಿ ಆರ್ಟಿಸ್ಟು, ಫಿಲಂ ಸ್ಟಾರು. ಅವರು ಹೇಗೋ ಏನೋ? ಅನ್ಕೊಂಡು, ಹೇಗಿದ್ರೂ ಶೂಟಿಂಗ್ ಗೆ ಬಂದಿದ್ದಾರೆ, ವೈಶಾಲಿ ಮೇಡಂ ಪರಿಚಯ ಮಾಡ್ಕೊಟ್ರೆ ಓಕೆ. ಇಲ್ಲಾ ಅಂದ್ರೆ, ಹೇಗೂ ಒಟ್ಟಿಗೇ ಕೆಲಸ ಮಾಡ್ಲೇಬೇಕಾಗತ್ತೆ, ಆಗ ನೋಡ್ಕೋಳೋಣ ಅನ್ಕೊಂಡು ಬೆಳಿಗ್ಗೆ ತಿಂಡಿ ತಿಂತಾ ಇದ್ವಿ. ಅಲ್ಲಿ ಒಬ್ಬೊಬ್ಬರಿಗೆ ಒಂದೊಂದು ಕಡೆ ತಿಂಡಿ, ಊಟ ಇರ್ಲಿಲ್ಲ. ಕಲಾಕ್ಷೇತ್ರದ ಕಾರಂತ್ ಅವರದ್ದೇ ಕೇಟರಿಂಗ್ ಇದ್ದಿದ್ದು. ಎಲ್ಲಿ ಜಾಗ ಸಿಗತ್ತೋ ಅಲ್ಲೇ ಕೂತ್ಕೊಂಡು ತಿಂತಾ ಇರ್ತಿದ್ವಿ. ನಾನು ಒಂದು ಕಡೆ ಜಗಲಿಯ ಮೇಲೆ ಸ್ಕ್ರಿಪ್ಟ್ ಹರಡ್ಕೊಂಡು, ಆ ದಿನದ ಯಾವ ಸೀನ್ ಆದ್ಮೇಲೆ ಯಾವ ಸೀನ್ ಅಂತ ಸಂಧ್ಯಾ ಶಾಸ್ತ್ರಿ ಮೇಡಂ ಮೊದಲೇ ಹೇಳಿದ್ರಿಂದ ಜೋಡಿಸಿಟ್ಕೊಂಡು ಅಂದಿನ ತಿಂಡಿ ಪೊಂಗಲ್ ತಿಂತಾ ಇದ್ದೆ. ಸಡನ್ನಾಗಿ ಬಂದ ಅಪರ್ಣಾ ಅವರು ನನ್ನ ತಟ್ಟೆಯಲ್ಲಿದ್ದ ಪೊಂಗಲಿನಲ್ಲಿದ್ದ ಗೋಡಂಬಿಗಳನ್ನ ಎತ್ಕೊಂಡು, ನೀವು ಬೇಜಾರ್ ಮಾಡ್ಕೊಂಡ್ರೂ ಪರ್ವಾಗಿಲ್ಲ, ನಾನು ಗೋಡಂಬಿ ತೆಗೋತೀನಿ ಅಂತ ತೆಗೊಂಡು ಬಿಟ್ರು. ಪರಿಚಯ ಆಗೋಕ್ಕೆ ಇದಕ್ಕಿಂತ ಬೇರೆ ಏನು ಬೇಕು? ಅಲ್ಲಿಂದ ಮುಂದೆ ನಮ್ಮಿಬ್ಬರ ಒಡನಾಟ, ಸೀರಿಯಲ್ ಮುಗಿದ್ರೂ ಮುಂದುವರೆಸ್ಕೊಂಡು ಬಂದ್ರು. ಅವರ ಸ್ನೇಹದ ಆಳ ಗೊತ್ತಿರೋವ್ರಿಗೆಲ್ಲಾ ಈ ವಿಷಯ ಗೊತ್ತರತ್ತೆ.

ನಮ್ಮ ಮೂಡಲ ಮನೆ ಸೀರಿಯಲ್ನಲ್ಲಿ ಸುಕನ್ಯಾ ಪಾತ್ರಧಾರಿಯಾದ ಅಪರ್ಣಾ ಅವರ ಸಾವಿನ ಸೀಕ್ವೆನ್ಸ್ ಶೂಟ್ ಮಾಡಿದ ದಿನ ನಮಗೂ ಒಂದು ತರಹದ ಆತಂಕ. ಕ್ಯಾಮೆರಾಮೆನ್ ಆಗಿದ್ದ ನಾಗರಾಜ ಆದವಾನಿಯವರ ಸೂಚನೆ ಮೇರೆಗೆ ಅಪರ್ಣಾ ಅವರು ಒಂದು ಚೂರೂ ಅಲುಗಾಡದೆ ಮಲಗಿದ್ರು. ಶಾಟ್ ಮುಗಿದ ಮೇಲೆ ಸಾವಿನ ಆಕ್ಟಿಂಗ್ ಮಾಡಿದ ಪಾತ್ರಧಾರಿ ಮುಂದಿನ ಶಾಟ್ನಲ್ಲಿ ಎದ್ದು ಕೂತು ಕ್ಯಾಮೆರಾಗೆ ನಕ್ಕು, ಅಲ್ಲೇ ದೃಷ್ಟಿ ತೆಗೆಯುವುದು ನಮ್ಮ ಸೀರಿಯಲ್ ಸಂಪ್ರದಾಯದ ವಾಡಿಕೆ. ಆ ದಿನವೂ ಅಪರ್ಣಾ ಅವರು ಆ ಸೀಕ್ವೆನ್ಸ್ ಮುಗಿದ ಮೇಲೆ ಎದ್ದು ಕೂತು ಬಾಯ್ತುಂಬಾ ನಕ್ಕು, ದೃಷ್ಟಿ ತೆಗೆಸಿಕೊಂಡಿದ್ರು. ಈ ದಿನ ಅವರನ್ನ ಗ್ಲಾಸ್ ಬಾಕ್ಸ್ ಒಳಗೆ ಮಲಗಿರೋದನ್ನ ನೋಡೋಕ್ಕೆ ನಮ್ಮ ಇಡೀ ತಂಡ ಬಂದಾಗ, ಈಗಲೂ ಅವರು ಎದ್ದು ಕೂತು ನಕ್ಕುಬಿಡಬಾರದೆ ಅನ್ನಿಸಿದ್ದು ಸುಳ್ಳಲ್ಲ.

ಅವರ ಒಡನಾಟದ ನೆನಪುಗಳ ಜೊತೆ ಈಗ ಅವರೂ ನೆನಪಾಗಿ ಉಳಿದಿರೋದು ನಮ್ಮೆಲ್ಲರ ದುರ್ದೈವ. ಅವರ ನಗುವಿನಷ್ಟೇ ಆ ಸರಳ, ಸಹಜ ಸುಂದರವಾದ ಮನಸ್ಸನ್ನ ಅವರ ಜೊತೆ ಇದ್ದವರೆಲ್ಲರೂ ಅನುಭವಿಸಿರುತ್ತಾರೆ. ಸ್ಟೇಜಿನ ಮೇಲಿನ ನಿರೂಪಣೆಯಲ್ಲಿ ಅವರಲ್ಲಿರ್ತಿದ್ದ ಗಾಂಭೀರ್ಯ ಮತ್ತೆ ಇನ್ನಿತರ ಸಂಧರ್ಭಗಳಲ್ಲಿ ಅವರ ನಡವಳಿಕೆಯಲ್ಲಿನ ಮುಗ್ಧ ಮನಸ್ಸಿನ ಕೂಸಿನಂತಹಾ ಕುತೂಹಲ ಎರಡನ್ನೂ ನೋಡಿದವರಲ್ಲಿ ನಾನೂ ಒಬ್ಬ.

ಅಂತ್ಯಾಕ್ಷರಿ ಹಾಡೋವಾಗ ನಮ್ಮಿಬ್ಬರಲ್ಲಿ ಬರೀ ಕನ್ನಡ ಗೀತೆಗಳನ್ನೇ ಹಾಡಬೇಕೆಂಬ ಒಪ್ಪಂದ, ಶೂಟಿಂಗ್ ಸಮಯದಲ್ಲಿ ಎಲ್ಲರನ್ನೂ ಇಮಿಟೇಟ್ ಮಾಡಿ ಮಿಮಿಕ್ರಿ ಮಾಡುತ್ತಾ ಇದ್ದ ಪ್ರಸಂಗಗಳು, ಒಂದು ಕನ್ನಡ ಪದ ತೆಗೆದುಕೊಂಡು ಅದಕ್ಕೆ ಸೂಕ್ತವಾದ ಕನ್ನಡ ಚಿತ್ರಗೀತೆಗಳನ್ನು ಹೆಕ್ಕಿ ತೆಗೆಯೋಕ್ಕೆ ನಾವು ಮಾಡುತ್ತಿದ್ದ ಸಾಹಸ, ನಮ್ಮ ಮನೆಯಲ್ಲಿ ಮಾಡುತ್ತಿದ್ದ ಪುಳಿಯೋಗರೆಯಲ್ಲಿ ಒಂದು ಅಳತೆ ಅನ್ನಕ್ಕೆ ಒಂದು ಅಳತೆ ಗೋಡಂಬಿ ಇರಲೇಬೇಕೆಂಬ ತಾಕೀತು, ರೇಡಿಯೊ ಸ್ಟೇಷನ್ ನಲ್ಲಿ ಕೂತು ಅವರಿಂದ ಬರ್ತಿದ್ದ ಅಫಿಷಿಯಲ್ ಕಾಲ್ಗಳು, ನಾಗಮಂಡಲದ ಶ್ರೀ ಗೋಪಾಲ್ ವಾಜಪೇಯಿ ಅವರ ಹಾಡುಗಳನ್ನ ಹಾಡುತ್ತಾ ಅದರ ಒಳಾರ್ಥಗಳ ಬಗ್ಗೆ ನಾವು ಮಾಡುತ್ತಿದ್ದ ಸಮಾಲೋಚನೆಗಳು, ಕನ್ನಡ ಸಾಹಿತ್ಯ ಲೋಕದ ದಿಗ್ಗಜರ ಬಗ್ಗೆ ನಾವು ಹಂಚಿಕೊಂಡ ಎಷ್ಟೋ ಸನ್ನಿವೇಷಗಳು, ಕನ್ನಡ ಪುಸ್ತಕಗಳ ಬಗ್ಗೆ ನಾವೇ ಮಾಡ್ಕೋತಿದ್ದ ವಿಮರ್ಷೆಗಳು, ಸಿನಿಮಾರಂಗದ ಬಗ್ಗೆ ನಾವು ನಡೆಸುತ್ತಿದ್ದ ಚರ್ಚೆಗಳು, ಒಂದಾ ಎರಡಾ?

ನೋಡುವ ಆ ಅಚ್ಚಳಿಯದ ಕಂಗಳು, ಆಡುವ ಆ ಪರಿಶುದ್ಧ ಕನ್ನಡ ಪದಪುಂಜಗಳು, ನುಡಿವ ಆ ಸುಂದರ ಕಂಠಸಿರಿ, ನಾವು ಬದುಕಿರೋವರ್ಗೂ ನಮ್ಮನ್ನು ಕಾಡಿಸೋಕ್ಕೆ ಇಷ್ಟು ಸಾಲದಾ?
ಅಪರ್ಣಾ ಅನ್ನೋ ಹೆಸರಲ್ಲೇ ಎಲ್ಲಾ ಇದೆ… ಇನ್ನೂ ಇದೆ !!!
- ಚಕ್ರವರ್ತಿ ರಾಮಗೋಪಾಲಾರ್ಯ
