೧೯೮೩ ರ ದಶಕದಲ್ಲಿ ರೂ ೩೫೦ ಪಾವತಿಸಿದೆ, ಆಗ ಅದೇ ದೊಡ್ಡ ಮೊತ್ತವಾಗಿತ್ತು. ಹೇಗೇಗೋ ಈ ಮೊತ್ತ ಹೊಂದಿಸಿ ಮನಿ ಆರ್ಡರ್ ಮಾಡಿದೆ. ಇನ್ನೇನು ಟೇಪ್ ರಿಕಾರ್ಡರ್ ಬರುತ್ತಲ್ಲ. ಯಕ್ಷಗಾನದ, ಹರಿಕಥೆಗಳ, ಚಿತ್ರಕಥೆಗಳ, ಉತ್ತಮ ಹಾಡುಗಳ ಅನೇಕ ಕ್ಯಾಸೆಟ್ಟುಗಳನ್ನು ಖರೀದಿಸಿದೆ ಮತ್ತೆ ಕೆಲವನ್ನು ಬಾಡಿಗೆಗೆ ಪಡೆದೆ. ದಿನವೂ ಅಂಚೆ ಅಣ್ಣನ ಆಗಮನವನ್ನೇ ಕಾಯುವುದು ಸಾಮಾನ್ಯವಾಗಿ ಹೋಗಿತ್ತು. ಡಾ. ಎನ್.ಬಿ.ಶ್ರೀಧರ ಅವರ ಮೋಸ ಹೋದ ಕತೆಯನ್ನು ತಪ್ಪದೆ ಮುಂದೆ ಓದಿ…
ದಿನ ಬೆಳಗಾದರೆ ಪತ್ರಿಕೆಗಳಲ್ಲಿ “ ಚಿನ್ನದ ಆಮಿಷವೊಡ್ಡಿ ವಂಚನೆ” “ಆಭರಣ ಹೊಳೆಯುವಂತೆ ಮಾಡಿ ಟೊಪ್ಪಿ” ಲಾಟರಿ ನಂಬಿ ಮೋಸ ಹೋದ ರೈತ” ಇತ್ಯಾದಿ ತರಹೆವಾರಿ ತಲೆಬರಹಗಳ ಸುದ್ಧಿಗಳು ಬರುತ್ತಲೇ ಇರುವುದನ್ನೂ ನೀವೂ ಸಹ ಗಮನಿಸಿರುವಿರಿ. ಕೆಲವೊಮ್ಮೆ ಸ್ವಲ್ಪ ಯಾಮಾರಿದರೂ ಸಹ ಆ ಅನುಭವ ನಿಮಗೇ ಆಗಬಹುದು ಅಥವಾ ಈಗಾಗಲೇ ಆಗಿರಬಹುದು. ನಾವು ನಮ್ಮ ಹುಶಾರಿಯಲ್ಲಿ ಎಷ್ಟೇ ಇದ್ದರೂ ಸಹ ಮೋಸ ಮಾಡುವ ಖದೀಮರು ಹೇಗಾದರೂ ಮಾಡಿ ನಯ ವಿನಯ ತೋರಿ ಹಳ್ಳಕ್ಕೆ ಕೆಡವಿಯೇ ಬಿಡುತ್ತಾರೆ. ಹೌದು ! ನಾನೂ ಸಹ ಒಮ್ಮೆ ಇಂತಹ ಮೋಸಕ್ಕೆ ತುತ್ತಾಗಿದ್ದಿದೆ.
೧೯೮೦ ರ ದಶಕ. ನಾನಿನ್ನೂ ಹೈಸ್ಕೂಲು ಹುಡುಗ. ಆಗ ಪತ್ರಿಕೆಗಳಲ್ಲಿ ಒಂದು ವಿಚಿತ್ರ ರೀತಿಯ ಜಾಹೀರಾತು. ಪದಬಂಧದಂತ ಒಂದಿಷ್ಟು ಪ್ರಶ್ನೆಗಳನ್ನು ಬಿಡಿಸಿ ಅದನ್ನು ದಿಲ್ಲಿಗೆ ಕಳಿಸಿದಲ್ಲಿ ರೇಡಿಯೋ ಕಳಿಸುತ್ತೀವಿ ಎಂದು. ಕಳಿಸಿದರೆ ಸ್ವಲ್ಪೇ ದಿನದಲ್ಲಿ “ ನೀವು ಈ ಸ್ಪರ್ಧೆಯಲ್ಲಿ ಗೆದ್ದಿದ್ದೀರಿ. ಇಂತಿಷ್ಟು ಹಣ ಕಳಿಸಿದರೆ ನಿಮಗೆ ರೇಡಿಯೋ ಕಳಿಸುತ್ತೀವಿ” ಎಂದು ಮಾರುತ್ತರ ಬರುತ್ತಿತ್ತು. ನಾನೂ ಸಹ ಕೆಲವೊಮ್ಮೆ ಮನಿಆರ್ಡರ್ ಮೂಲಕ ಈ ಹಣ ಕಳಿಸಿದಾಗ ರೇಡಿಯೋಗಳು ಬಂದದ್ದು ಇದ್ದೇ ಇತ್ತು. ಕೆಲವರಿಗೆ ನಾನು ಕೊಡಿಸಿಯೂ ಇದ್ದೆ. ಈ ರೇಡಿಯೋಗಳೆಲ್ಲಾ ಅತ್ಯಂತ ಕಳಪೆ ಗುಣಮಟ್ಟದ “ಡೆಲ್ಲಿ ಸೆಟ್ಟ್” ಎಂದೇ ಪ್ರಖ್ಯಾತವಾಗಿದ್ದವು.

ಫಿಲಿಪ್ಸ್ ಮತ್ತು ಮರ್ಫಿಯಂತ ಪ್ರಖ್ಯಾತ ಕಂಪನಿಗಳ ಒಂದು ಬ್ಯಾಂಡ್, ಎರಡು ಬ್ಯಾಂಡ್ ಅಥವಾ ಮೂರು ಬ್ಯಾಂಡ್ ರೇಡಿಯೋಗಳಿಗೆ ರೂ ೩೦೦ ರಿಂದ ೧೦೦೦ ವರೆಗೂ ಬೆಲೆ ಇದ್ದ ಕಾಲದಲ್ಲಿ ಮಧ್ಯಮ ವರ್ಗದವರಿಗೆ ರೇಡಿಯೋ ಖರೀದಿಸುವುದು ಗಗನ ಕುಸುಮವೇ ಆಗಿ ಬಿಟ್ಟಿತ್ತು. ರೇಡಿಯೋ ಖರೀದಿಸಿದ ತಕ್ಷಣ ತಹಶೀಲ್ದಾರ್ ಕಚೇರಿಗೆ ಅದನ್ನು ಒಯ್ದು, ಅದರ ನೋಂದಣಿ ಮಾಡಿಸಿ ರೂ. ೧೦ ನ್ನು ಲೈಸನ್ಸ್ ಶುಲ್ಕವಾಗಿ ಕಟ್ಟಿ, ಪ್ರತಿ ವರ್ಷ ರೂ. ೩ ನೀಡಿ ಅದನ್ನು ನವೀಕರಿಸಬೇಕಾಗಿತ್ತು. ಅದರಲ್ಲೂ ಸಹ ಒಂದು ಬ್ಯಾಂಡಿನಿಗಿಂತ ಜಾಸ್ತಿ ಸಾಮರ್ಥ್ಯದ ರೇಡಿಯೋಗಳಿಗೆ ತಾಲೂಕು ದೊರೆ ತಹಶೀಲ್ದಾರ್ ಕಚೇರಿಯಿಂದ ಲೈಸನ್ಸಿನ ಅಗತ್ಯವಿತ್ತು ಎಂದರೆ ಈ ಕಾಲದವರು ನಂಬಲಿಕ್ಕಿಲ್ಲ !!. ಈಗ ನಾವು ವಾಹನ ನೋಂದಣಿಗೆ ಎಷ್ಟೆಲ್ಲಾ ಶ್ರಮ ಪಡುತ್ತವೆಯೋ ಹಾಗೆಯೇ ರೇಡಿಯೋ ಎಷ್ಟು ಬ್ಯಾಂಡಿನದು? ಅದರ ಮೂಲ ಬೆಲೆ ಎಷ್ಟು? ಖರೀದಿಸಿ ಎಷ್ಟು ಸಮಯವಾಯಿತು? ಎಂಬಿತ್ಯಾದಿ ತರಹೇವಾರಿ ಕಾಲಮ್ಮುಗಳಿಗೆಲ್ಲಾ ಉತ್ತರ ನೀಡಿ ಸಾಕಾಗಿ ಹೋಗುತ್ತಿತ್ತು. ಅದರಲ್ಲೂ ತಹಸೀಲ್ದಾರ್ ಕಚೇರಿಯ ಗುಮಾಸ್ಥನಿಗೆ ೨ ರೂ ನೀಡಿ ಕೈಬಿಸಿ ಮಾಡದಿದ್ದರೆ ಹರೋ ಹರ, ಲೈಸನ್ಸ್ ರದ್ದಾಗುವುದು ಗ್ಯಾರಂಟಿಯಿತ್ತು. ಇವರ ಕಾಟ ತಾಳಲಾರದೇ ಜನ ದೂರಿದ್ದರಿಂದ, ಸರ್ಕಾರ ಅಂಚೆಕಚೇರಿಯಲ್ಲಿ ರೇಡಿಯೋ ಹೊತ್ತಯ್ದು ತೋರಿಸಿ ೩ ರೂಪಾಯಿ ನೀಡಿ ಲೈಸನ್ಸ್ ನವೀಕರಿಸಿಕೊಂಡು ಬರಬೇಕಿತ್ತು. ಅಂಚೆ ಮಾಸ್ತರು ಲೈಸನ್ಸಿನ ಪುಸ್ತಕಕ್ಕೆ ಸ್ಟಾಂಪ್ ಒಂದನ್ನು ಅಂಟಿಸಿ ಕರಿ ಮಸಿಯಿಂದ ಟಪ್ ಎಂದು ಮುದ್ರೆಯೊತ್ತಿ ನೀಡಿದರೆ ಇನ್ನೊಂದು ವರ್ಷ ನಿರಾಳವಾಗರಬಹುದಿತ್ತು. ಲೈಸನ್ಸ್ ಇರದ ಅಥವಾ ನವೀಕರಿಸದ ರೇಡಿಯೋಗಳನ್ನು ಸರ್ಕಾರದ ಅಧಿಕಾರಿಗಳು ಜಪ್ತಿ ಮಾಡಿ ಮುಟ್ಟುಗೋಲು ಹಾಕಿಕೊಳ್ಳಲು ಅಧಿಕಾರವಿತ್ತು. ಎಲ್ಲಾ ಜನರೂ ಸಹ ರೇಡಿಯೋ ಖರೀದಿಸಿದ ತಕ್ಷಣ ಸರ್ಕಾರದ ಮೇಲಿನ ಭಯ ಭಕ್ತಿಯಿಂದ ಲೈಸನ್ಸ್ ಮಾಡಿಸಿ ತಪ್ಪದೇ ಪ್ರತಿ ವರ್ಷ ಅದರ ನವೀಕರಣ ಮಾಡಿಸಿಕೊಳ್ಳುತ್ತಿದ್ದುದು ವಿಶೇಷ.
ನಮ್ಮ ಮನೆಯಲ್ಲಿ ಆಗಲೇ ಹಳೆಯ ಮರ್ಪಿ ರೇಡಿಯೋ ಒಂದು ಬೆಳಗಿನ ಸುಪ್ರಬಾತ ಹೇಳಿ ಎಬ್ಬಿಸುತ್ತಿತ್ತು. ಮಣಬಾರದ ಆ ರೇಡಿಯೋಗೆ ಪ್ರತಿ ವರ್ಷ ಲೈಸನ್ಸ್ ನವೀಕರಿಸಲು ಸಾಧ್ಯವಾಗದೇ ನಮ್ಮಜ್ಜ ಮರ್ಫಿ ರೇಡಿಯೋ ಯಾರಿಗೋ ಹುಟ್ಟಿದಷ್ಟಕ್ಕೆ ಮಾರಿಬಿಟ್ಟ ಎಂಬುದು ನೆನಪು. ಅದರಲ್ಲೂ ಮಣ ಭಾರದ ಟ್ಯುಬ್ಯುಲರ್ ಬ್ಯಾಟರಿ ಹೊಂದಿದ ಇವುಗಳ ನಿರ್ವಹಣೆಯೇ ದೊಡ್ಡ ಸವಾಲಿನ ಕೆಲಸವಾಗಿತ್ತು. ಒಂದು ಕುಟುಂಬದಲ್ಲಿ ಒಂದಕ್ಕಿಂತ ಜಾಸ್ತಿ ರೇಡಿಯೋ ಇಟ್ಟುಕೊಳ್ಳುವಂತಿಲ್ಲ ಎಂಬುದೂ ಒಂದು ನಿಯಮವಾಗಿತ್ತು ಎಂಬುದು ಈಗ ನೆನಪು ಮಾತ್ರ. ೧೯೯೧ ರಲ್ಲಿ ಕೇಂದ್ರ ಸರ್ಕಾರ ಈ ಪದ್ಧತಿಯನ್ನ ತೆಗದು ಹಾಕಿತು.

ಆಗಲೇ ಪ್ರಾರಂಭವಾಗಿದ್ದು ಈ ಡೆಲ್ಲಿ ಸೆಟ್ಟುಗಳ ಹಾವಳಿ. ಈಗ ಚೈನಾವಸ್ತುಗಳು ಹೇಗೋ ಹಾಗೆಯೇ ಆಗಿನ ಡೆಲ್ಲಿ ಸೆಟ್ ರೇಡಿಯೋಗಳು. ಗೊರ ಗೊರ ಶಬ್ದ ಮಾಡುತ್ತಾ ಟ್ಯೂನ್ ಆಗದೇ ಸತಾಯಿಸುತ್ತಿದ್ದವು. ತಲೆಯ ಮೇಲೆ ಪಾಪ ಪಾಂಡುವಿನ ಪಾಚೋ ಶ್ರೀಮತಿಯು ಪಾಂಡುವಿನ ತಲೆಯ ಮೇಲೆ ಲೊಟ್ ಎಂದು ಮೊಟಕುವ ಹಾಗೆ ಮೊಟಕಿದಲ್ಲಿ ಮಾತ್ರ ಚಂದದಿಂದ ಹಾಡುತ್ತಿದ್ದವು. ಕೆಟ್ಟು ಕೂತಾಗ ಇವುಗಳ ಹೊಟ್ಟೆ ಬಗೆದು ವಿವಿಧ ಬಗೆಯ ಬಣ್ಣ ಬಣ್ಣದ ವೈರುಗಳನ್ನು ಭೀಮಸೇನ ದುಶ್ಯಾಸನನ ಒಡಲು ಬಿರಿದು ಕರುಳ ಮಾಲೆಯನ್ನು ಧರಿಸಿದ ಹಾಗೇ ಈ ರೇಡಿಯೋಗಳೆಲ್ಲಾ ನಮ್ಮ ರಿಪೇರಿಯ ಪ್ರಯೋಗಕ್ಕೆ ಬಲಿ ಪಶುವಾಗುತ್ತಿದ್ದವು. ಡೆಲ್ಲಿ ಸೆಟ್ಟುಗಳ ಸಂಖ್ಯೆ ಜಾಸ್ತಿಯಾದಂತೆ ನಮ್ಮ ಹಳ್ಳಿಯಲ್ಲಿ ರೇಡಿಯೋ ರಿಪೇರಿ ಮಾಡುವ “ಹವ್ಯಾಸಿ” ರಿಪೇರಿಗರೂ ಸಹ ಮನೆಗೊಬ್ಬರಂತೆ ಹುಟ್ಟಿಕೊಂಡರು. ಬೆಸುಗೆ ಮಾಡುವ ಸೋಲ್ಡರಿಂಗ್ ಗನ್ ಮತ್ತ ಸ್ಕ್ರೂ ಡ್ರೈವರ್ ಅವರ ಕೈಯಲ್ಲಿ ರಾರಾಜಿಸುತ್ತಿತ್ತು.
ಇನ್ನು ಡೆಲ್ಲಿ ಸೆಟ್ಟಿನ ಪ್ರಕರಣಕ್ಕೆ ಬರೋಣ. ನಾನೂ ಸಹ ಎಲ್ಲರಂತೆ ಪದ ಬಂಧದಂತ ಪ್ರಶ್ನೆ ಬಿಡಿಸಿ ಪೋಸ್ಟ್ ಕಾರ್ಡಿನಲ್ಲಿ ಕಳುಹಿಸಿದ ಕೆಲವೇ ದಿನಗಳಲ್ಲಿ ದಿಲ್ಲಿಯಿಂದ ನಾವು ರೇಡಿಯೋವನ್ನು ಗೆದ್ದಿರುವೆನೆಂದೂ ಹಾಗೂ ಒಂದಿಷ್ಟು ಹಣ ಕಳಿಸಿದರೆ, ಅದನ್ನು ಕಳಿಸುವುದಾಗಿ ಪತ್ರ ಬರುತ್ತಿತ್ತು. ಹೀಗಿದ್ದಾಗ ಒಮ್ಮೆ ದಿನಪತ್ರಿಕೆಯಲ್ಲಿ ಪದಬಂಧದೊಂದಿಗೆ ಟೇಪ್ ರಿಕಾರ್ಡರ್ ನೀಡುವ ಆಫರ್ ಇತ್ತು. ಆಗ ಕ್ಯಾಸೆಟ್ ಕಾಲ. ಕನ್ನಡದ ಮಧುರವಾದ ಹಾಡುಗಳನ್ನು ಕ್ಯಾಸೆಟ್ ಹಾಕಿ ಕೇಳುವುದು ಆಗಿನ ಹುಚ್ಚು. ಮದುವೆ ಮನೆಗಳಲ್ಲಿ, ದೊಡ್ಡ ದೊಡ್ಡ ಕಾರ್ಯಕ್ರಮಗಳಲ್ಲಿ ಇವುಗಳನ್ನು ಬಾಡಿಗೆಗೆ ಪಡೆದು ಜೋರಾಗಿ “ಶರಣು ಶರಣಯ್ಯಾ.. ಶರಣು ಬೆನಕಾ.. ಎಂದು ಹಾಡು ಬಜಾಯಿಸುತ್ತಿದ್ದರೆ, ಜನ ತಾನಾಗಿಯೇ ಜಮಾಯಿಸಿಬಿಡುತ್ತಿದ್ದರು. ದುಂಡನೆಯ ಕಪ್ಪು ತಟ್ಟೆಯೊಂದರ ಮೇಲೆ ಮುಳ್ಳಿನಂತ ಹಿಡಿಕೆಯಲ್ಲಿ ಗಿರಿ ಗಿರಿ ಸುತ್ತಿಸುತ್ತಾ ಬರುವ ಗ್ರಾಮಾಫೋನಿನ ಕೀರಲು ಸ್ವರ ಕೇಳಿ ಬೋರು ಹೊಡೆಸಿಕೊಂಡ ಜನ ಕ್ಯಾಸೆಟ್ ಕಾಲಕ್ಕೆ ಬೇಗ ಮರುಳಾದರು.

ಆದರೆ ಹೊಸದಾಗಿ ಬಂದ ಟೇಪ್ ರಿಕಾರ್ಡರ್ ದುಬಾರಿಯಾಗಿದ್ದು, ಸಾಮಾನ್ಯ ಜನರ ಕೈಗೆ ಎಟಕುವಂತಿರಲಿಲ್ಲ. ಹೀಗಿರುವಾಗ ಟೇಪ್ ರಿಕಾರ್ಡರ್ ಆಫರ್ ಬಿಡುವಂತದ್ದೇ? ಪದಬಂಧ ತುಂಬಿ ಪೋಸ್ಟ್ ಕಾರ್ಡಿನಲ್ಲಿ ಕನ್ನಡದಲ್ಲಿಯೇ ದಿಲ್ಲಿ ವಿಳಾಸ ಬರೆದು ಕಳಿಸಿದೆ. ಸ್ವಲ್ಪೇ ದಿನಕ್ಕೆ ಮಾಮೂಲಿನಂತೆ ದಿಲ್ಲಿ ಸಂದೇಶ ಬಂದೇ ಬಿಟ್ಟಿತು, ರೂ:೩೫೦ ಪಾವತಿಸಿ, ಅದ್ಭುತ ಟೇಪ್ ರಿಕಾರ್ಡರ್ ಪಡೆಯಿರಿ ಎನ್ನುವ ಇಂಗಿತದ್ದು. ೧೯೮೩ ರ ದಶಕದಲ್ಲಿ ಇದೇ ಬಹಳ ದೊಡ್ಡ ಮೊತ್ತ. ಹೇಗೇಗೋ ಈ ಮೊತ್ತ ಹೊಂದಿಸಿ ಮನಿಆರ್ಡರ್ ಮಾಡಿದೆ. ಇನ್ನೇನು ಟೇಪ್ ರಿಕಾರ್ಡರ್ ಬರುತ್ತಲ್ಲ. ಯಕ್ಷಗಾನದ, ಹರಿಕಥೆಗಳ, ಚಿತ್ರಕಥೆಗಳ, ಉತ್ತಮ ಹಾಡುಗಳ ಅನೇಕ ಕ್ಯಾಸೆಟ್ಟುಗಳನ್ನು ಖರೀದಿಸಿದೆ ಮತ್ತೆ ಕೆಲವನ್ನು ಬಾಡಿಗೆಗೆ ಪಡೆದೆ. ದಿನವೂ ಅಂಚೆ ಅಣ್ಣನ ಆಗಮನವನ್ನೇ ಕಾಯುವುದು ಸಾಮಾನ್ಯವಾಗಿ ಹೋಗಿತ್ತು. ಅಂಚೆ ಕಚೇರಿಯೋ ನಮ್ಮನೆಯಿಂದ ೬ ಕಿಲೋ ಮೀಟರ್ ದೂರ. ಬಂದ ಪತ್ರಗಳನ್ನೆಲ್ಲಾ ಶೇಖರಿಸಿಕೊಂಡು ಒಂದು ವಾರದ ಮೇಲೆ ತಲುಪಿಸುವುದು. ನಾನಂತೂ ಅವರ ಬರುವನ್ನೇ ಕಾಯುವ ಚಾತಕ ಪಕ್ಷಿಯಾಗಿ ಹೋದೆ. ಆ ದಿನ ಬಂದೇ ಬಿಟ್ಟಿತು. ಅಂಚೆಯಣ್ಣ ಪರ್ಸಲ್ ತೆಗೆದುಕೊಂಡು ಬಂದೇ ಬಿಟ್ಟರು. ಆಗಲೇ ಟೇಪ್ ರಿಕಾರ್ಡರ್ ಬರುವ ಬಗ್ಗೆ ಸುಳಿವು ಕೊಟ್ಟಿದ್ದರಿಂದ ಅಡಿಕೆ ಸುಲಿಯಲು ಬಂದ ೧೦-೧೧ ಜನ, ಯಾವುದೋ ಕಾರ್ಯಕ್ರಮಕ್ಕೆಂದು ಬಂದ ನಮ್ಮ ನೆಂಟರಿಷ್ಟರು ಪಾರ್ಸಲ್ ಬಿಡಿಸುವುದನ್ನೇ ಬಿಟ್ಟ ಕಣ್ಣುಗಳಿಂದ ನೋಡುತ್ತಾ, ಟೇಪ್ ರಿಕಾರ್ಡರಿಗಾಗಿ ಮತ್ತು ಅದರಿಂದ ಬರುವ ಸುಮಧುರ ಸ್ವರದ ಹಾಡಿಗಾಗಿ, ಕೀರ್ತನೆಗಳಿಗಾಗಿ, ಯಕ್ಶಗಾನಕ್ಕಾಗಿ ಕುತೂಹಲಿಗಳಾದರು.
ಪಾರ್ಸಲ್ ತೆಗೆಯುತ್ತಾ ಇದ್ದ ಹಾಗೇ ಟೇಪ್ ರಿಕಾರ್ಡರ್ ಚಿಕ್ಕದೇನಾದರೂ ಕಳಿಸಿರಬಹುದು ಅಂದುಕೊಂಡೆ. ಏಕೆಂದರೆ ಪೆಟ್ಟಿಗೆಯೊಳಗೆ ಅಂತಹ ದೊಡ್ಡ ವಸ್ತುವಿರುವ ಯಾವ ಸೂಚನೆಯೂ ಕಾಣಿಸಲಿಲ್ಲ. ಅದರಲ್ಲಿರುವ ಹತ್ತಿಯಂತ ಮೆತ್ತನೇ ವಸ್ತುಗಳನ್ನು ತೆಗೆಯುತ್ತಾ ಹೋದಂತೆ ಸಣ್ಣ ಪೊಟ್ಟಣವೊಂದು ಉದ್ಭವವಾಯಿತು. ಆಗಲೇ ನನ್ನ ಜಂಗಾಬಲ ಉಡುಗಿತ್ತು. ನಡುಗುವ ಕೈಗಳಿಂದ ಆ ಪೊಟ್ಟಣ ಬಿಚ್ಚಿದೆ!. ಒಳಗೇನಿದೆ ಅಂತಿರಾ? ಐದು ಅತ್ತರದ (ಸುಗಂಧ ದ್ರವ್ಯ) ಬಾಟಲಿಗಳು ತಣ್ಣಗೇ ದಿಲ್ಲಿಯಿಂದ ಸಾಗಿ ಬಂದು ಕೂತಿದ್ದವು. ಅದರ ಜೊತೆ ಒಂದು ಆಂಗ್ಲ ಭಾಷೆಯ ಪತ್ರ. ಈ ಅತ್ತರು ಬಾಟಲಿಗಳನ್ನು ಐದು ಜನರಿಗೆ ಹಂಚಿ. ಅವರು ಮತ್ತು ಐದು ಅತ್ತರು ಬಾಟಲಿ ಪಡೆಯುತ್ತಾರೆ. ಹಾಗೆಯೇ ೧೦೦ ಜನ ಗಮ್ಮೆಂದು ನಾರುವ ಈ ಕಳಪೆ ಗುಣಮಟ್ಟದ ಅತ್ತರು ತರಿಸಿ ಬಳಿದುಕೊಂಡರೆ ನಿಮ್ಮ ಟೇಪ್ ರಿಕಾರ್ಡರ್ ಬಂದು ಬಿಡುವುದು ಅಂತ. ನನ್ನನ್ನು ದಿಲ್ಲಿಯವರು ಪಕ್ಕಾ ಬಕರಾ ಮಾಡಿ ಮೋಸದ ಕೂಪಕ್ಕೆ ದೂಡಿದ್ದರು. ಎಲ್ಲರ ಮಧ್ಯೆ ಟೇಪ್ ರಿಕಾರ್ಡರ್ ತರಿಸುವೆ ಎಂದು ಬೋಂಗು ಬಿಟ್ಟಿದ್ದಕ್ಕಾಗಿ ಮತು ಅದು ಸುಳ್ಳಾಗಿ ಮೋಸ ಹೋಗಿರುವುದರಿಂದ ಅವಮಾನದಲ್ಲಿ ಹೂತು ಹೋದೆ. ಅತ್ತರು ಬಾಟಲಿಗಳು ವಜ್ರಮುನಿ ತರ ಗಹಗಹಿಸಿ ನಕ್ಕಂತೆ ಭಾಸವಾಯಿತು. ಓಡಿ ಹೋಗಿ ಮಾಳ ಸೇರಿದವ ಊಟಕ್ಕೂ ಬರದೇ ಮುಸುಕು ಹಾಕಿ ಮಲಗಿಬಿಟ್ಟೆ. ಈಗಲೂ ಈ ಘಟನೆ ನೆನೆಸಿಕೊಂಡರೆ ಅಷ್ಟು ಸುಲಭಕ್ಕೆ ಮೋಸ ಹೋಗಿದ್ದನ್ನು ನೆನೆಸಿಕೊಂಡು ನಗು ಬಂದರೂ ವಿಷಾಧ ಭಾವ ಮೂಡುತ್ತದೆ.
- ಡಾ. ಎನ್.ಬಿ.ಶ್ರೀಧರ (ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಭಾಗ ಪಶುವೈದ್ಯಕೀಯ ಮಹಾವಿದ್ಯಾಲಯ) ಶಿವಮೊಗ್ಗ
