ವಾಕಿಂಗ್ ಹೋಗುವಾಗ ಮೋರಿ ಪಕ್ಕದಲ್ಲಿ ನಿಂತಿದ್ದ ಒಂದು ಬಿಳಿ ನಾಯಿ ಮರಿಯನ್ನು ಮಗ ತಂದಿದ್ದ ಅದಕ್ಕೆ ರಾಮು ಎಂದು ನಾಮಕರಣವೂ ಮಾಡಿದೆವು. ಮನೆಯ ಎಲ್ಲರ ಪ್ರೀತಿ ಪಾತ್ರವಾಗಿದ್ದ ರಾಮು ಒಂದು ದಿನ ಜ್ವರ ಬಂದು ತೀರಿಕೊಂಡ. ಆ ದುಃಖದಲ್ಲಿದ್ದಾಗ…ಮುಂದೇನಾಯಿತು. ಲೇಖಕಿ ಕೆ ಸಿ ರತ್ನಶ್ರೀ ಶ್ರೀಧರ್ ಅವರ ‘ಮೂಕ ಜಗತ್ತಿನ ಸುತ್ತ ನಮ್ಮ ಜಗತ್ತು’ ಅಂಕಣವನ್ನು ತಪ್ಪದೆ ಮುಂದೆ ಇದೆ…
ನಾನು ಚಿಕ್ಕವಳಿದ್ದಾಗ ನಾಯಿ, ಬೆಕ್ಕು, ಹಸು, ಕರು, ಎತ್ತು ಮುಂತಾದ ಸಾಕು ಪ್ರಾಣಿಗಳು ಜೊತೆಗೆ ನನ್ನ ಒಡನಾಟವಿತ್ತು. ನಮ್ಮ ಕೊಟ್ಟಿಗೆಯ ತುಂಬಾ ದನ ಕರುಗಳು ಸಾಕಷ್ಟಿದ್ದವು. ಆಮೇಲಾಮೇಲೆ ಕೃಷಿಯ ನಿರ್ವಾಹಣೆ ಸಾಧ್ಯವಿಲ್ಲ ಎಂದಾದಾಗ ಅವುಗಳ ಸಂಖ್ಯೆ ಕ್ರಮೇಣ ಕಡಿಮೆಯಾಗಿತ್ತು. ನಂತರದಲ್ಲಿ ನನ್ನ ವಿದ್ಯಾಭ್ಯಾಸದ ಸಲುವಾಗಿ ಸಿಟಿಗೆ ವಾಸ್ತವ್ಯ ಬದಲಾದಾಗ ದನಕರುಗಳು ನಮ್ಮಿಂದ ದೂರಾಗಿದ್ದವು. ಆದರೆ ಈಗಲೂ ಅವುಗಳ ಮೇಲಿನ ಪ್ರೀತಿ ಮನದಲ್ಲಿ ಹಾಗೇ ಉಳಿದಿದೆ.
ಮದುವೆಯಾಗಿ ಬೆಂಗಳೂರಿಗೆ ಬಂದ ಮೇಲೆ ನಮ್ಮದು ಕೂಡು ಕುಟುಂಬವಾಗಿತ್ತು. ಅಲ್ಲಿ ಸಾಕು ಪ್ರಾಣಿಗಳನ್ನು ಸಾಕಲು ಅವಕಾಶವಿರಲಿಲ್ಲ. ನಮ್ಮ ಮಗನಿಗೆ ನಾಯಿ ಸಾಕಬೇಕೆಂಬ ಹಂಬಲ ಹೇಳತೀರದಾಗಿತ್ತು. ಆದರೆ ಮನೆಯಲ್ಲಿ ಅದಕ್ಕೆ ಅವಕಾಶವಿರಲಿಲ್ಲ. ನಮ್ಮನೆಯಲ್ಲಿ ನನಗೆ, ನನ್ನ ಪತಿ ಮತ್ತು ನನ್ನ ಮಗನಿಗೆ ಪ್ರಾಣಿಗಳೆಂದರೆ ಪಂಚ ಪ್ರಾಣ. ಯಾವುದೇ ಪ್ರಾಣಿ ಕಂಡರೂ ಮಾತಾಡಿಸದೇ ಬರುವ ಜಾಯಮಾನವಲ್ಲ ನಮ್ಮದು. ಅದರಲ್ಲೂ ಬೀದಿ ನಾಯಿ, ಬೆಕ್ಕು, ದನ-ಕರುಗಳೆಂದರೆ ಒಂದು ಹಿಡಿ ಹೆಚ್ಚಿನ ಪ್ರೀತಿ.
ನಾವು ಹೊಸ ಮನೆ ಕಟ್ಟಿ, ಅಲ್ಲಿಗೆ ನಮ್ಮ ವಾಸ್ತವ್ಯ ಬದಲಾಗುತ್ತಿದ್ದಂತೆ ಹತ್ತು ವರ್ಷದ ನಮ್ಮ ಮಗನಿಗೆ ನಾಯಿ ಸಾಕಬೇಕೆಂಬ ಅವನ ಹಂಬಲ ಹೆಚ್ಚಾಯಿತು. ಒಂದು ದಿನ ವಾಕಿಂಗ್ ಹೋಗುವಾಗ ಮೋರಿ ಪಕ್ಕದಲ್ಲಿ ನಿಂತಿದ್ದ ಒಂದು ಬಿಳಿ ನಾಯಿ ಮರಿಯನ್ನು ನಮ್ಮ ಮಗ ಓಡಿ ಹೋಗಿ ಎತ್ತಿಕೊಂಡ. ಅದಾಗಲೇ ಅದು ಎರಡು ತಿಂಗಳ ಮರಿಯಾಗಿತ್ತು. ಸ್ವಲ್ಪ ಬಡವಾದಂತೆ ಕಂಡರೂ ತುಂಬಾ ಮುದ್ದಾಗಿತ್ತು. ಸುತ್ತಲೆಲ್ಲೂ ಬೇರೆ ನಾಯಿ ಕಾಣಿಸಲಿಲ್ಲ. ಸ್ವಲ್ಪ ಹೊತ್ತು ಕಾದು ನೋಡಿದೆವು. ಯಾವ ನಾಯಿಯ ಸುಳಿವೂ ಇರಲಿಲ್ಲ. ನಾವು ಅದನ್ನು ಮನೆಗೆ ತಂದು ರಾಜು ಅಂತ ಹೆಸರಿಟ್ಟೆವು.

ಫೋಟೋ ಕೃಪೆ : ಅಂತರ್ಜಾಲ
ಬಿಸಿ ನೀರು ಸ್ನಾನ ಮಾಡಿಸಿ, ಊಟ ಕೊಟ್ಟು ಪಶುವೈದ್ಯರ ಬಳಿ ಕರೆದೊಯ್ದು ವ್ಯಾಕ್ಸಿನ್ ಕೊಡಿಸಿ, ಮಲ್ಟಿ ವಿಟಮಿನ್ ಟಾನಿಕ್, ಹೊಟ್ಟೆ ಹುಳುವಿಗೆ ಔಷಧಿ, ಸ್ನಾನದ ಶಾಂಪು, ಮೈಗೆ ಹಾಕಲು ಪೌಡರ್ ಎಲ್ಲಾ ತಂದೆವು. ನಂತರದ ದಿನಗಳಲ್ಲಿ ನಮ್ಮ ಮಗನ ಅಚ್ಚುಮೆಚ್ಚಿನ ಗೆಳೆಯನಾದ ರಾಜು. ಮಗ ಸ್ಕೂಲಿಗೆ ಹೋದಾಗ ಮಾತ್ರ ಅವನಿಂದ ದೂರವಿರುತ್ತಿದ್ದ. ನಿಜ ಅರ್ಥದಲ್ಲಿ ನಮ್ಮ ಮನೆಯ ಪುಟ್ಟ ಮಗುವೇ ಆಗಿಬಿಟ್ಟ ರಾಜು. ಅವನ ಸ್ಪಂಜಿನಂಥ ಪುಟ್ಟ ಪಿಂಕ್ ಕಾಲುಗಳು ಅದೆಷ್ಟು ಸೊಗಸು. ತುಂಬಾ ಮೃದು ಸ್ವಭಾವದ ರಾಜು ನಮ್ಮೆಲ್ಲರನ್ನೂ ತುಂಬಾ ಹಚ್ಚಿಕೊಂಡಿದ್ದ. ನನ್ನವರು ಎಲ್ಲಿಯೇ ಕುಳಿತುಕೊಂಡರೂ ತಕ್ಷಣ ಅವರ ತೊಡೆ ಏರಿ ಕುಳಿತುಕೊಳ್ಳುತ್ತಿದ್ದ.
ಪ್ರತಿ ಭಾನುವಾರ ನಮ್ಮ ಮನೆಯ ಹತ್ತಿರದಲ್ಲಿದ್ದ ಬೆಟ್ಟಕ್ಕೆ ಬೆಳೆಗ್ಗೆಯೇ ವಾಯು ವಿಹಾರಕ್ಕೆ ಹೋಗುತ್ತಿದ್ದೆವು. ಬಂಡೆಯನ್ನು ಹತ್ತಿ ತುದಿಯಲ್ಲಿ ವಿಶಾಲವಾದ ಜಾಗದಲ್ಲಿ ಕುಳಿತು ಮನೆಯಿಂದ ತಂದಿರುತ್ತಿದ್ದ ಕಾಫಿ, ಬನ್ನು, ಬಿಸ್ಕೆಟ್ ತಿಂದು ರಾಜುವಿನ ಜೊತೆ ಆಟ ಆಡಿ ಮರಳುತಿದ್ದೆವು. ಅಲ್ಲಿಗೆ ಹೋಗುವುದೆಂದರೆ ರಾಜುಗೆ ಬಲು ಇಷ್ಟ. ಬೆಟ್ಟದ ಮೇಲೆಲ್ಲಾ ಓಡಾಡುತ್ತಿದ್ದ. ವಾಪಸ್ ಬರುವಾಗ ಕೆಲವೊಮ್ಮೆ ರಾಜು ದಾರಿಯಲ್ಲಿ ನಡೆಯಲಾರದೇ ಕುಳಿತು ಬಿಡುತ್ತಿದ್ದ. ಆಗ ನನ್ನ ಪತಿ ಅವನನ್ನು ಎತ್ತಿಕೊಂಡು ಬರುತ್ತಿದ್ದರು.
ಹೀಗೇ ಐದಾರು ತಿಂಗಳು ಅವನೊಂದಿಗೆ ಕಳೆದ ಕ್ಷಣಗಳು ಮರೆಯಲಾರದಂಥವು. ನಮ್ಮೆಲ್ಲರ ಕಣ್ಮಣಿಯಾಗಿದ್ದ ರಾಜು ಒಂದು ದಿನ ಜ್ವರ ಬಂದು ಊಟ ಮಾಡಲಿಲ್ಲ. ವೈದ್ಯರ ಬಳಿ ಕರೆದೊಯ್ದು ಇಂಜಕ್ಷನ್ ಕೊಡಿಸಿಕೊಂಡು ಬಂದೆವು. ಮಧ್ಯಾಹ್ನ ಅವನಿಷ್ಟದ ಅಡಿಗೆ ಮಾಡಿ ಊಟ ಹಾಕಿದೆ. ಸ್ವಲ್ಪ ಊಟ ಮಾಡಿದ ಅವನು ಮಲಗಿ ನಿದ್ರಿಸಿದ.
ಒಂದು ಗಂಟೆಯ ನಂತರ ಜ್ವರ ಬಿಟ್ಟಿದೆಯಾ ಎಂದು ಮುಟ್ಟಿ ನೋಡಿದರೆ, ಮೈ ತಣ್ಣಗೆ ಕೊರೆಯುತ್ತಿತ್ತು. ಉಸಿರು ನಿಂತಿತ್ತು. ನಾನು ಒಮ್ಮೆಗೇ “ಅಯ್ಯೋ ರಾಜೂ”..ಅಂತ ಚೀರಿಕೊಂಡೆ. ನನ್ನವರು ಬಂದು ಕಣ್ಣೀರು ಹಾಕುತ್ತಲೇ ನನಗೂ ಮಗನಿಗೂ ಸಂತೈಸಿದರು. ನಾವು ಮೂವರೂ ಅವನನ್ನೂ ಕಳೆದುಕೊಂಡು ತಿಂಗಳ ಕಾಲ ದುಃಖಿಸಿದೆವು. ನಮ್ಮ ಮಗ ಮನೆಯ ಗೋಡೆ ಮೇಲೆ, ಕ್ಯಾಲೆಂಡರ್ ಮೇಲೆ, ಅವನ ಪುಸ್ತಕದಲ್ಲಿ ರಾಜು ತೀರಿ ಹೋದ ದಿನಾಂಕವನ್ನು ಎಲ್ಲೆಂದರಲ್ಲಿ ಬರೆದಿದ್ದ.
ಅದಾದ ಮೇಲೆ ಇನ್ಯಾರೋ ಕೊಟ್ಟರೆಂದು ಕಪ್ಪು ಮೈ ಕಂದು ಬಣ್ಣದ ಕಾಲುಗಳ ನಾಯಿ ಮರಿಯೊಂದನ್ನು ತಂದು ಸಾಕಿದೆವು. ಅದಕ್ಕೆ ರಾಮು ಅಂತ ಹೆಸರಿಟ್ಟೆವು. ಅವನಂತೂ ಬಲು ಚೂಟಿ, ಭಯ ಅಂತೂ ಇರಲೇ ಇಲ್ಲ, ಭಯಂಕರ ಬುದ್ಧಿವಂತ. ನನ್ನವರ ಮಾತು ಮಾತ್ರ ಆಜ್ಞಾದಾರಕನಂತೆ ಪಾಲಿಸುತ್ತಿದ್ದ. ನನಗಾಗಲಿ ನಮ್ಮ ಮಗನಿಗಾಗಲಿ ಹೆದರುತ್ತಿರಲಿಲ್ಲ. ನಮ್ಮ ಮಾತಿಗೂ ಗಮನ ಕೊಡುತ್ತಿರಲಿಲ್ಲ. ಅದೇ ಮಾತನ್ನು ನನ್ನವರು ಹೇಳಿದರೆ ತಕ್ಷಣ ಕೇಳುತ್ತಿದ್ದ.
ಮನೆ ಮುಂದಿನ ಪಾರ್ಕಿನಲ್ಲಿ ಆಟ ಆಡಿಸಲು ಕರೆದುಕೊಂಡು ಹೋದರೆ ಅವನೇ ನಮ್ಮನ್ನು ಆಟ ಆಡಿಸುತ್ತಿದ್ದ. ನಮ್ಮ ಮಗನಿಗಂತೂ ಬಾಲಿನಲ್ಲಿ ಆಟ ಆಡಿಸಿ ಸುಸ್ತು ಮಾಡಿಸಿ ಬಿಡುತ್ತಿದ್ದ. ಮನೆಯಲ್ಲಿ ರಾಮುಗೆ ಸ್ನಾನ ಮಾಡಿಸಿದ ಮೇಲೆ ಮೈ ಒರೆಸಲು ಬಿಡದೇ ಟವಲ್ ಕಿತ್ತುಕೊಂಡು ಹೋಗಿ, ಟೈಲ್ಸ್ ಮೇಲೆ ಹರಡಿಕೊಂಡು ಬೆನ್ನು ಕೆಳಗೆ ಮಾಡಿಕೊಂಡು ಉರುಳಾಡಿ ತಾನೇ ಮೈ ಎಲ್ಲಾ ಒರೆಸಿಕೊಂಡು ಬಿಡುತ್ತಿದ್ದ ತರಲೆ ಅವನು.
ಬೆಳಗ್ಗೆ ಎಷ್ಟೇ ಅವಸರವಿದ್ದರೂ ಅವನಿಗೇ ಮೊದಲು ತಿಂಡಿ ಕೊಡಬೇಕಿತ್ತು. ಮಗನಿಗೆ ಸ್ಕೂಲಿಗೆ ಲೇಟಾಗುತ್ತೆ ಎಂದು ಅವನಿಗೆ ತಿಂಡಿ ಮೊದಲು ಕೊಟ್ಟರೆ ಮುಗಿಯಿತು ಕಥೆ. ತನ್ನ ಬಟ್ಟಲು ಎತ್ತಿಕೊಂಡು ಬಂದು ಜೋರು ಮಾಡುತ್ತಿದ್ದ. ನಮ್ಮ ಮಗನೊಂದಿಗೆ ಎಲ್ಲಾ ವಿಚಾರದಲ್ಲೂ ಪ್ರತಿಸ್ಪರ್ಧಿಯಂತೆ ಆಡುತ್ತಿದ್ದ. ಇವನು ಪಟಾಕಿ ಹೊಡೆದರೆ, ಹೆದರಿಕೊಳ್ಳದೇ, ತಾನೂ ಪಟಾಕಿ ಹೊಡೆಯುವಲ್ಲಿಗೆ ಓಡಿ ಹೋಗಿ ಕಿತ್ತುಕೊಳ್ಳುವ ಹುಡುಗು ಬುದ್ದಿ ಅವನದು.
ಅವನ ತುಂಟತನ ಕಂಡ ನಾವು, “ರಾಮು ಅಂತ ಹೆಸರಿಟ್ಟರೆ ನೀನು ಇಷ್ಟು ತುಂಟತನ ಮಾಡುವೆಯಲ್ಲೋ” ಅನ್ನುತ್ತಿದ್ದೆವು. ನಮ್ಮೆಲ್ಲರನ್ನೂ ಕಂಡರೆ ಅವನಿಗೆ ಅಷ್ಟೇ ಪ್ರೀತಿ. ಹಾಗೆಯೇ ಬೇರೆ ಯಾರಾದರೂ ಕರೆದರೆ ಅವರಿಗೂ ಬಾಲ ಆಡಿಸುತ್ತಾ ಆಟ ಆಡಿಸಲು ಕರೆಯುತ್ತಿದ್ದ ಹುಡುಗು ಬುದ್ಧಿಯವನು.
ಹೀಗೆ ಒಂದು ದಿನ ರಾಮುವಿಗೆ ಸ್ನಾನ ಮಾಡಿಸಿದ ಮೇಲೆ ಸ್ವಲ್ಪ ಹೊತ್ತು ಬಿಸಿಲಿನಲ್ಲಿರಲಿ ಎಂದು ಗೇಟಿಗೆ ಕಟ್ಟಿ ಹಾಕಿ ಒಳಗೆ ಏನೋ ಕೆಲಸದಲ್ಲಿ ನಿರತಳಾಗಿದ್ದೆ. ಆಮೇಲೆ ಬಂದು ನೋಡಿದರೆ ಅಲ್ಲಿ ರಾಮು ಇರಲಿಲ್ಲ. ಎಲ್ಲಾ ಕಡೆ ಹುಡುಕುತ್ತಾ, ಎಲ್ಲರನ್ನೂ ಕೇಳುತ್ತಾ ಅಲೆದಾಡಿದೆ. “ಯಾರೋ ನಾಯಿಯನ್ನು ಮಾತಾಡಿಸಿ ಎತ್ತಿಕೊಂಡು ಓಡಿ ಹೋದನೆಂದು” ಹತ್ತಿರದಲ್ಲಿ ಕಟ್ಟಡ ಕೆಲಸ ಮಾಡುತ್ತಿದ್ದವರು ಹೇಳಿದರು. ಒಂದು ವಾರದ ತನಕ ಎಲ್ಲಾ ಕಡೆ ಹುಡುಕಿದೆವು. ನಾಯಿ ಮರಿ ವಾಪಸ್ಸು ತಂದು ಕೊಟ್ಟವರಿಗೆ ಹಣ ಕೊಡುವುದಾಗಿ ಹೇಳಿ, ಏನೆಲ್ಲಾ ಪ್ರಯತ್ನ ಮಾಡಿದರೂ ಅವನು ಕೊನೆಗೂ ಸಿಗಲಿಲ್ಲ.
ಹೀಗೆ ಮನೆಯಲ್ಲಿ ನಾಯಿ ಸಾಕುವುದು, ಕಳೆದುಕೊಂಡು ದುಃಖ ಪಡುವುದು ಬೇಡವೆಂದು ತೀರ್ಮಾನಿಸಿಕೊಂಡು ಬೀದಿ ನಾಯಿಗಳಿಗೇ ಊಟ ಹಾಕುತ್ತಿದ್ದೆವು. ಈ ನಡುವೆ ನಮ್ಮ ಬೀದಿಗೆ ಸಂಪೂರ್ಣ ಬೆಳೆದಿದ್ದ ಕಂದು ಬಣ್ಣದ ಬಾರ್ಡರ್ ಕೂಲಿ ಜಾತಿಯ ಸುಂದರವಾದ ಗಂಡು ನಾಯಿಯೊಂದು ಬಂದಿತು. ಅದರ ಬಾಲ ಕುಂಚದ ರೀತಿ ತುಂಬಾ ಆಕರ್ಷಕವಾಗಿತ್ತು. ಅದು ಹೇಗೆ? ಮತ್ತು ಎಲ್ಲಿಂದ ಇಲ್ಲಿಗೆ ಬಂದಿತ್ತೋ ಗೊತ್ತಿಲ್ಲ. ಅದಕ್ಕೆ ಸಂತಾನ ಹರಣ ಶಸ್ತ್ರಚಿಕಿತ್ಸೆಯೂ ಅಗಿತ್ತು.
ಸ್ವಲ್ಪ ದಿನಗಳಲ್ಲಿ ಅದರ ಜೊತೆಗೆ ಇನ್ನೊಂದು ಶೀಬಾ ಜಾತಿಯ ಬಿಳಿ ಕಂದು ಬಣ್ಣದ ಹೆಣ್ಣು ನಾಯಿಯೂ ಎಲ್ಲಿಂದಲೋ ಬಂದು ಸೇರಿಕೊಂಡಿತು. ಅದೆಷ್ಟು ಸುಂದರಿ ಅವಳು, ಅವಳ ಕಣ್ಣುಗಳಿಗೆ ತಿದ್ದಿ ತೀಡಿಟ್ಟ ಕಣ್ಕಪ್ಪು ನೋಡಲು ಎಂಥ ಚೆಂದ. ಮಾಟವಾದ ಮೈಕಟ್ಟು, ಮುಂಗಾಲನ್ನು ಒಂದರ ಮೇಲೊಂದು ಕಾಲು ಹಾಕಿ ಕೂರುವ ಅವಳ ಭಂಗಿ ನೋಡಿದರೆ, ಬಲು ಶೋಕಿಯವಳು ಎನಿಸುತ್ತಿತ್ತು. ಅದಕ್ಕೂ ಸಂತಾನ ಹರಣ ಶಸ್ತ್ರಚಿಕಿತ್ಸೆಯಾಗಿತ್ತು.
ಮುಂದುವರೆಯುವುದು..
- ಕೆ ಸಿ ರತ್ನಶ್ರೀ ಶ್ರೀಧರ್
