ಮೂಕ ಜಗತ್ತಿನ ಸುತ್ತ ನಮ್ಮ ಜಗತ್ತು – (ಭಾಗ-೨)

ಗುಂಡನಿಗೆ ಊಟವೇನೋ ಯಾರಾದರೂ ಹಾಕುತ್ತಿದ್ದರು. ಆದರೆ ಅವನನ್ನು ಅಕ್ಕರೆಯಿಂದ ಮೈದಡವಿ ಮಾತನಾಡಿಸುವವರು ಇರಲಿಲ್ಲ. ಮುಂದೆ ಗುಂಡನ ಕತೆ ಏನಾಯಿತು ತಪ್ಪದೆ ಓದಿ ಲೇಖಕಿ ಕೆ ಸಿ ರತ್ನಶ್ರೀ ಶ್ರೀಧರ್ ಅವರ ‘ಮೂಕ ಜಗತ್ತಿನ ಸುತ್ತ ನಮ್ಮ ಜಗತ್ತು’ ಅಂಕಣ…

ನಮ್ಮ ಬೀದಿಯಲ್ಲಿ ಈ ಎರಡೂ ನಾಯಿಗಳೂ ಯಾವಾಗಲೂ ಒಟ್ಟಿಗೆ ಆಟ ಆಡಿಕೊಳ್ಳುತ್ತಿದ್ದವು. ಸದಾ ಎರಡೂ ನಾಯಿಗಳೂ ಜೊತೆಯಾಗೇ ಇರುತ್ತಿದ್ದವು. ಅವುಗಳಿಗೆ ನಾವು ಗುಂಡ, ಗುಂಡಿ ಎಂದು ಹೆಸರಿಟ್ಟೆವು. ನಮ್ಮ ಮನೆಯಲ್ಲಿ ತಪ್ಪದೇ ಊಟ ಹಾಕುತ್ತಿದ್ದೆ. ಅವುಗಳು ಊಟ ತಿನ್ನುತ್ತಿದ್ದುದೂ ತೀರಾ ಕಡಿಮೆ. ನಾವು ಎಲ್ಲಿಗಾದರೂ ಊರಿಗೆ ಹೋಗುವುದಿದ್ದರೆ, ಗುಂಡ-ಗುಂಡಿಗೆ ಸ್ವಲ್ಪ ಊಟ ಹಾಕುವಂತೆ ಪಕ್ಕದ ಮನೆಯವರಿಗೆ ಹೇಳಿ ಹೋಗುತ್ತಿದ್ದೆವು.

ಗುಂಡ ಬಹಳ ಜಾಣ ನಾಯಿ. ಮಾತುಗಳನ್ನಂತೂ ಬಹಳ ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಿದ್ದ. ಬೆಳಿಗ್ಗೆ ಗೇಟಿನ ಬಳಿ ಬಂದು “ಕುಯ್ ಕುಯ್” ಎಂದು ಊಟ ಕೇಳುತ್ತಿದ್ದ. ನಾನು ಒಳಗಿನಿಂದಲೇ “ಬಂದೆ ಇರೋ ಗುಂಡ” ಎಂದರೆ, ಊಟ ತರುವವರೆಗೂ ಐದ್ಹತ್ತು ನಿಮಿಷ ಕಾಯುತ್ತಾ ನಿಲ್ಲುತ್ತಿದ್ದ. ಒಂದು ವೇಳೆ ನಾನೇನಾದರೂ “ಏನೋ ಗುಂಡ, ಬೇಗ ಬಂದಿದ್ದೀಯಾ, ಇನ್ನೂ ತಿಂಡಿ ಆಗಿಲ್ಲ” ಎಂದರೆ, ಒಂದು ಕ್ಷಣವೂ ನಿಲ್ಲದೆ ಓಡಿ ಬಿಡುತ್ತಿದ್ದ.

ಗುಂಡನಿಗೆ ನಾವು ‘ಗುಂಡ’ ಎಂದು ಕರೆಯುತ್ತಿದ್ದೆವು. ನಮ್ಮ ಬೀದಿಯ ಕೊನೆ ಮನೆಯವರು ‘ಸಿಂಬಾ’ ಎನ್ನುತ್ತಿದ್ದರು. ನಮ್ಮ ಹಿಂದಿನ ಬೀದಿಯವರು ‘ಬ್ರೌನಿ’ ಎಂದು ಕರೆಯುತ್ತಿದ್ದರು. ತನ್ನನ್ನು ಯಾರು ಯಾವ ಹೆಸರಿನಿಂದ ಕರೆಯುತ್ತಾರೆ ಎಂಬುದನ್ನು ಬಹಳ ಚೆನ್ನಾಗಿ ಅರಿತಿದ್ದ ಗುಂಡ ಎಲ್ಲರಿಗೂ ಪ್ರತಿಕ್ರಿಯಿಸುತ್ತಿದ್ದ. ಬೇರೆ ಮನೆಯವರು ಅವನನ್ನು ಮಾತನಾಡಿಸುತ್ತಿದ್ದರಾದರೂ, ನಾವು ಮಾತ್ರ ಅವನ ಮೈದಡವಿ, ತಲೆ ಸವರಿ, ಮುದ್ದು ಮಾಡಿ ಮಾತನಾಡಿಸುತ್ತಿದ್ದು ಅವನಿಗೆ ಬಲು ಇಷ್ಟವಾಗುತ್ತಿತ್ತು.

ಫೋಟೋ ಕೃಪೆ : ಗೂಗಲ್

ಯಾರನ್ನಾದರೂ ಪ್ಲೀಸ್ ಮಾಡುವುದೆಂದರೆ ಗುಂಡನಿಗೆ ಬಹಳ ಇಷ್ಟ. ನಮ್ಮ ಮನೆಗೆ ಯಾರಾದ್ರೂ ಬಂಧು ಮಿತ್ರರು ಬಂದಾಗ, ಅವರೆದುರು ಅವನನ್ನು ಹೊಗಳಿದರೆ ಬಹಳ ಖುಷಿ ಪಡುತ್ತಿದ್ದ. ಬಂದವರಿಗೂ ತನ್ನೆರಡು ಕಾಲುಗಳನ್ನು ಎತ್ತಿ ಎತ್ತಿ ಶೇಕ್ ಹ್ಯಾಂಡ್ ಕೊಡುತ್ತಿದ್ದ. “ನೀನು ತುಂಬಾ ಜಾಣ ಗುಂಡ” ಎಂದರೆ ಮೈಯೆಲ್ಲಾ ಕುಣಿಸಿಕೊಂಡು, ಜೋರಾಗಿ ಬಾಲ ಅಲ್ಲಾಡಿಸುತ್ತಾ ಖುಷಿಯಿಂದ ಕುಣಿಯುತ್ತಿದ್ದ.

ಗುಂಡ ಗುಂಡಿ ಎರಡು ನಾಯಿಗಳೂ ನಮ್ಮ ಮಾತುಗಳನ್ನು ತುಂಬಾ ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಿದ್ದವು. ಇವೆರಡೂ ನಾಯಿಗಳೂ ಜಾತಿ ನಾಯಿಗಳೇ ಆದರೂ ಬೀದಿ ನಾಯಿಗಳಂತೆಯೇ ಬದುಕುತ್ತಿದ್ದವು. ಬೇರೆ ನಾಯಿಗಳ ತಂಟೆಗೆ ಹೋಗದೇ, ಯಾವುದೇ ರೋಗ ರುಜಿನಗಳಿಲ್ಲದೇ ನಮ್ಮ ಬೀದಿಯಲ್ಲಿಯೇ ಓಡಾಡಿಕೊಂಡಿದ್ದವು. ಗುಂಡನಿಗೆ ಗುಂಡಿಯ ಬಗ್ಗೆ ಒಂದು ರೀತಿಯ ಪೊಸೆಸಿವ್ನೆಸ್. ಅವಳನ್ನು ಯಾರೂ ಮುಟ್ಟಲು ಬಿಡುತ್ತಿರಲಿಲ್ಲ. ನಮ್ಮ ಮಗ, ಗುಂಡ-ಗುಂಡಿ ಇಬ್ಬರಿಗೂ ಶೇಕ್ ಹ್ಯಾಂಡ್ ಕೊಡುವುದನ್ನು ಕಲಿಸಿದ್ದ.

ಗುಂಡಿಗೆ ಶೇಕ್ ಹ್ಯಾಂಡ್ ಕೇಳಿದರೆ ಸಾಕು, ಗುಂಡ ಅವಳನ್ನು ಹಿಂದಕ್ಕೆ ತಳ್ಳಿ ತಾನೇ ಶೇಕ್ ಹ್ಯಾಂಡ್ ಕೊಡಲು ಮುಂದಾಗುತ್ತಿದ್ದ. ಒಟ್ಟಿನಲ್ಲಿ ಅವಳನ್ನು ಯಾರೂ ಮುಟ್ಟಬಾರದೆಂಬುದು ಗುಂಡನ ಇರಾದೆಯಾಗಿತ್ತು. ನಾವೂ ಕೂಡ ಬೇರೆ ಯಾವುದೇ ಪ್ರಾಣಿಗಳನ್ನು ಮುದ್ದು ಮಾಡಿದ್ದು ನೋಡಿದರೆ ಗುಂಡ ಬೇಜಾರು ಮಾಡಿಕೊಂಡು ದೂರ ಹೋಗಿ ಬಿಡುತ್ತಿದ್ದ. ನಮ್ಮ ಮನೆಗೆ ಬೆಕ್ಕಿನ ಮರಿಯೊಂದನ್ನು ತಂದ ಹೊಸತರಲ್ಲಿ ಅದನ್ನು ನೋಡಿ ಮುನಿಸಿಕೊಂಡು ಹೋದವನು ಮೂರು ದಿನ ನಮ್ಮ ಮನೆಯ ಕಡೆಗೇ ಬರಲಿಲ್ಲ. ಆಮೇಲೆ ನಿಧಾನಕ್ಕೆ ಅಭ್ಯಾಸವಾಯಿತು. ನಂತರ ಬೆಕ್ಕಿನ ಮರಿ ಅವನ ಮೈ ಮೇಲೆ ನಡೆದುಕೊಂಡು ಓಡಾಡಿದರೂ ಸುಮ್ಮನಿರುತ್ತಿದ್ದ.

(ನಮ್ಮ ಮನೆಯ ಬೆಕ್ಕುಗಳ ಬಗ್ಗೆ ಸಾಕಷ್ಟು ವಿಷಯಗಳಿವೆ. ಅವುಗಳ ಜೊತೆಗಿನ ನಲಿವು- ನೋವುಗಳನ್ನು ನಂತರದ ಸಂಚಿಕೆಗಳಲ್ಲಿ ಬರೆಯುವೆ)

ಪ್ರತಿ ದಿನ ಸಂಜೆ ಹೊತ್ತಿನಲ್ಲಿ ನಮ್ಮ ಅಕ್ಕ ಪಕ್ಕದವರೆಲ್ಲಾ ಸುಮಾರು 7-8 ಜನರು ಪಾರ್ಕ್‌ ಒಳಗೆ ಶೆಟಲ್ ಬ್ಯಾಡ್ ಮಿಂಟನ್ ಆಡುತ್ತಿದ್ದೆವು. ಆಗ ನನ್ನ ಜೊತೆಗೆ ಗುಂಡ ಪಾರ್ಕ್ ಒಳಗೆ ಬಂದು, ಬೌಂಡ್ರಿ ಲೈನ್ ಬಿಟ್ಟು ಪಕ್ಕದಲ್ಲಿ ಕುಳಿತು ಆಟ ನೋಡುತ್ತಾ ಕುಳಿತಿರುತ್ತಿದ್ದ. ಅವನಿಗೆ ಶೆಟ್ಲ್ ಕೋರ್ಟಿನ ಬೌಂಡರಿ ಲೈನ್ ಅದು ಹೇಗೆ ತಿಳಿಯುತ್ತಿತ್ತು ಗೊತ್ತಿಲ್ಲ. ಬೌಂಡರಿ ಲೈನ್ ಬಿಟ್ಟು ಒಂದು ಅಡಿ ಆಚೆ ಕೂರುತ್ತಿದ್ದ. ಒಂದು ದಿನವೂ ಬೌಂಡರಿ ಲೈನ್ ಒಳಗೆ ಕಾಲಿಟ್ಟವನಲ್ಲ ನಮ್ಮ ಮುದ್ದು ಗುಂಡ. ಗುಂಡಿ ಮಾತ್ರ ಒಂದು ಕಡೆ ಕೂರುತ್ತಿರಲಿಲ್ಲ. ರಸ್ತೆಯಲ್ಲಿಯೇ ಓಡಾಡಿ ಕೊಂಡಿರುತ್ತಿದ್ದಳು.

ಫೋಟೋ ಕೃಪೆ : ಗೂಗಲ್

ಮಾಟಾದ ಮೈಕಟ್ಟಿನ, ಕಾಡಿಗೆ ಕಂಗಳ ಚಂದದ ಗುಂಡಿಗೆ ಸ್ವಲ್ಪಮಟ್ಟಿನ ಬೆಕ್ಕಿನ ಗುಣವಿತ್ತು. ಬೆಕ್ಕಿನ ಚುರುಕುತನ, ಮೈ ಕೈ ನೆಕ್ಕಿಕೊಂಡು ಸ್ವಚ್ಛಗೊಳಿಸಿಕೊಳ್ಳುವುದು, ಎತ್ತರದ ಗೇಟ್ ಹಾರುವುದು ಮಾಡುತ್ತಿದ್ದಳು. ಕೆಲವೊಮ್ಮೆ ನಮ್ಮ ಗೇಟ್ ಹಾರಿಕೊಂಡು ಬಂದು ವಾರಂಡದಲ್ಲಿ ಕುಳಿತುಕೊಳ್ಳುತ್ತಿದ್ದಳು. ಗುಂಡನಿಗೆ ಗೇಟ್ ಹಾರಲು ಆಗದೇ, ಆಚೆ ನಿಂತು ಅಳುತ್ತಿದ್ದ. ಅವನ ದ್ವನಿ ಕೇಳಿ ನಾವು ಹೊರಗೆ ಬಂದು ಗೇಟ್ ತೆಗೆದರೆ ಒಳಗೆ ಬಂದು ಗುಂಡಿಯೊಂದಿಗೆ ಕೂರುತಿದ್ದ.

ನಾನು ಟು ವೀಲ್ಹರ್ ನಲ್ಲಿ ಎಲ್ಲಿಗಾದರೂ ಹೊರಟರೆ ಸಾಕು, ಗಾಡಿಯ ಪಕ್ಕದಲ್ಲಿ ಓಡುತ್ತಾ ಬೇರೆಯವರು ನನ್ನ ಗಾಡಿಗೆ ದಾರಿ ಬಿಡುವಂತೆ ಜೋರಾಗಿ ಬೊಗಳಿಕೊಂಡು ನಮ್ಮ ರಸ್ತೆ ತುದಿವರೆಗೂ ಓಡಿ ಬರುತ್ತಿದ್ದಳು. ನಮ್ಮ ಮನೆಯ ಯಾವುದೇ ವಸ್ತು ಯಾರಿಗೂ ಕೊಡುವಂತಿಲ್ಲ. ಒಮ್ಮೆ ಚಿಂದಿ ಆಯುವ ಹೆಂಗಸಿಗೆ ನಾನೇ ಕರೆದು ಯಾವುದೋ ಹಳೆಯ ವಸ್ತುಗಳನ್ನು ಕೊಟ್ಟೆ. ಇದನ್ನು ದೂರದಿಂದ ನೋಡಿದ ಗುಂಡಿ, ಪಾಪ ಹೆಂಗಸಿನ ಸೀರೆ ಹಿಡಿದು ಎಳೆಯತೊಡಗಿದಳು. ಕೊನೆಗೆ ಗುಂಡಿಗೆ ಬೈದು ನಮ್ಮ ಗೇಟ್ ಒಳಗೆ ಕರೆದುಕೊಂಡು ಆ ಹೆಂಗಸನ್ನು ಕಳಿಸಿದೆ.

ಒಮ್ಮೆ ಗುಂಡಿ ಮೋರಿಯಲ್ಲಿ ಇಳಿದು ಮೈ ಕೈ ಕೊಳೆ ಮಾಡಿಕೊಂಡಿದ್ದಳು. ನಾನು ಮತ್ತು ನಮ್ಮ ಮಗ ಸೇರಿಕೊಂಡು ಗುಂಡಿಗೆ ಸ್ನಾನ ಮಾಡಿಸಲು ಗೇಟ್ ಒಳಗೆ ಅವಳನ್ನು ಕೂಡಿ ಹಾಕಿಕೊಂಡು ನೀರು, ಸೋಪು ಹಾಕಿ ಮೈ ಉಜ್ಜುವಾಗ, ಒಮ್ಮೆಗೆ ಮೈ ಕೊಡವಿ ಗೇಟ್ ಹಾರೇ ಬಿಟ್ಟಳು. ನೀರನ್ನು ಕಂಡರೆ ಹೆದರುತ್ತದ್ದ ಅವಳು, ಮೈಗೆ ಹಚ್ಚಿದ್ದ ಸೋಪು ತೊಳೆಯುವ ಮೊದಲು ತಪ್ಪಿಸಿಕೊಂಡು ಓಡಿಬಿಟ್ಟಳು. ನಂತರ ರಸ್ತೆಯಲ್ಲಿ ಉರುಳಾಡಿ ಮೈ ಒರೆಸಿಕೊಂಡಳು. ಇಂದಿಗೂ ಆ ಚಿತ್ರ ಕಣ್ಣಲ್ಲಿದೆ.

ದೀಪಾವಳಿ ಹಬ್ಬ ಬಂತೆಂದರೆ ನಮ್ಮ ಗುಂಡನಿಗೆ ಎಲ್ಲಿಲ್ಲದ ಭಯ. ಪಟಾಕಿ ಸದ್ದಿಗೆ ಹೆದರಿ ನಡುಗುತ್ತಿದ್ದ. ಎಂದೂ ಮನೆ ಒಳಗೆ ಬಾರದ ಅವನು ದೀಪಾವಳಿ ಸಮಯದಲ್ಲಿ ಮಾತ್ರ ಸಂಜೆಯಾದರೆ ಮನೆಯ ಬಾಗಿಲೊಳಗೆ ನುಗ್ಗಿ ಬಾಗಿಲ ಸಂಧಿಯಲ್ಲಿ ಅವಿತುಕೊಳ್ಳಲು ಪ್ರಯತ್ನಿಸುತ್ತಿದ್ದ. ಪುಕ್ಕಲು ಸ್ವಭಾವದ ಮುಗ್ಧ ಮಗುವಿನಂತ ಮನಸ್ಸಿನ ಮುದ್ದು ಗುಂಡನನ್ನು ಆ ಸ್ಥಿತಿಯಲ್ಲಿ ನೋಡಿದಾಗ ನಮಗೆ ಮರುಕವಾಗುತ್ತಿತ್ತು.

ಪ್ರತಿದಿನ ಗುಂಡಗುಂಡಿ ಇಬ್ಬರೂ ನಮ್ಮ ರಸ್ತೆಯ ಆ ತುದಿಯಿಂದ ಈ ತುದಿಯವರೆಗೆ ರನ್ನಿಂಗ್ ಮಾಡುತ್ತಿದ್ದವು. ಚುರುಕಿನ ಚೆಲುವೆ ಗುಂಡಿ ಯಾವಾಗಲೂ ಓಟದಲ್ಲಿ ಮುಂದೆ. ಅರ್ಧ ದಾರಿಗೆ ಗುಂಡಿಯ ಜೊತೆಗೆ ಓಡಿದ ಗುಂಡ ಅಲ್ಲಿಯೇ ನಿಂತು ಬಿಡುತ್ತಿದ್ದ. ಗುಂಡಿ ರಸ್ತೆಯ ಆ ತುದಿ ಮುಟ್ಟಿ ವಾಪಸ್ ಬರುವಾಗ ಮತ್ತೆ ಅವಳೊಂದಿಗೆ ಅರ್ಧದಾರಿ ಓಡುತ್ತಿದ್ದ. ಅವುಗಳ ಈ ರನ್ನಿಂಗ್ ರೇಸ್ ನೋಡಲು ಬಹಳ ಮಜಾ ಅನಿಸುತ್ತಿತ್ತು.

ಸುಮಾರು ಐದಾರು ವರ್ಷಗಳ ಕಾಲ ಗುಂಡ-ಗುಂಡಿ ಹೀಗೇ ಜೊತೆಗಿದ್ದವು. ಒಂದು ದಿನ ಇದ್ದಕ್ಕಿದ್ದಂತೆ ಗುಂಡಿ ಕಾಣೆಯಾಗಿಬಿಟ್ಟಳು. ಮೂರ್ನಾಲ್ಕು ದಿನಗಳಾದರೂ ಅವಳ ಸುಳಿವು ಇಲ್ಲದೇ ಹೋದಾಗ ಅಕ್ಕ-ಪಕ್ಕದವರನ್ನು ಕೇಳಿದೆ. ಯಾರೂ ಅವಳನ್ನು ನೋಡಿಲ್ಲವೆಂದರು. ನಮ್ಮ ಸುತ್ತ ಮುತ್ತಲ ಬಡಾವಣೆಗಳಲೆಲ್ಲಾ ಹುಡುಕಾಡಿದರೂ ಎಲ್ಲೂ ಅವಳು ಪತ್ತೆಯಾಗಲಿಲ್ಲ. ಎಲ್ಲಿ ಹೋದಳೆಂದು ಕೊನೆಗೂ ತಿಳಿಯಲೇ ಇಲ್ಲ.

ಗೆಳತಿಯ ಕಣ್ಮರೆಯಿಂದ ಸ್ವಲ್ಪ ದಿನ ಮಂಕಾದ ಗುಂಡ ಕ್ರಮೇಣ ಒಬ್ಬನೇ ಇರುವುದನ್ನು ರೂಡಿಸಿಕೊಂಡ. ಪುಟ್ಟ ಮಕ್ಕಳನ್ನು ಕಂಡರೆ ಅವನಿಗೆ ತುಂಬಾ ಪ್ರೀತಿ. ಯಾರಾದರೂ ಚಿಕ್ಕ ಮಕ್ಕಳನ್ನು ಎತ್ತಿಕೊಂಡು ಪಾರ್ಕಿಗೆ ಬಂದರೆ ಸಾಕು ಅವರ ಜೊತೆಗೇ ಓಡಾಡುತ್ತಿದ್ದ. ಬೀದಿಯ ಮಕ್ಕಳಿಗೆಲ್ಲಾ ಗುಂಡನೆಂದರೆ ಅಚ್ಚು ಮೆಚ್ಚು. ಎಷ್ಟೋ ತರಲೆ ಮಕ್ಕಳು ಅವನ ಬಾಲ ಎಳೆಯುವುದು, ಕೈಯಲ್ಲಿ ಹೊಡೆಯುವುದು ಮಾಡಿದರೂ ಸಮ್ಮನೇ ಇರುತ್ತಿದ್ದ.

ಫೋಟೋ ಕೃಪೆ : ಗೂಗಲ್

ಹೀಗೇ ಒಂದು ದಿನ ಗುಂಡನೂ ಕಾಣೆಯಾದ. ಎಲ್ಲಿ ಹೋದನೆಂದು ತಿಳಿಯದೆ ಬೇಸರವಾಗಿತ್ತು. ಮೂರು ವಾರದ ನಂತರ ಒಂದು ದಿನ ಮುಂಜಾನೆ ನಮ್ಮ ಪಕ್ಕದ ಮನೆಯವರು ಒಂದೂವರೆ ಕಿಲೋಮೀಟರ್ ದೂರದ ಇನ್ನೊಂದು ಪಾರ್ಕಿನ ಬಳಿ ವಾಕಿಂಗ್ ಹೋಗಿದ್ದಾಗ ಅವರನ್ನು ನೋಡಿ ಅವರ ಹಿಂದೆ ಹಿಂದೆಯೇ ಬಂದಿದ್ದ. ಅವನನ್ನು ನೋಡಿ ನಮಗೆ ಕಳೆದು ಹೋದ ನಿಧಿ ಸಿಕ್ಕಂತಾಗಿತ್ತು. ಕೊನೆಯವರೆಗೂ ಮತ್ತೆಂದೂ ಅವನು ನಮ್ಮ ಬೀದಿಯನ್ನು ಬಿಟ್ಟು ಹೋಗಲಿಲ್ಲ.

ಬರು ಬರುತ್ತಾ ಅವನಿಗೆ ವಯಸ್ಸಾಗುತ್ತಾ ಬಂತು. ಮೈ ತುಂಬಾ ಟಿಕ್ಸ್ (ಉಣುಗು) ಗಳ ಕಾಟ ಜಾಸ್ತಿಯಾಯಿತು. ಅವುಗಳ ಉಪಟಳ ಜಾಸ್ತಿಯಾದಾಗ ಪಶುವೈದ್ಯರಲ್ಲಿ ಕೇಳಿ ಮಾತ್ರೆ ಬರೆಸಿಕೊಂಡು ಬಂದೆ. ಮೂರು ವಾರಗಳ ಡೋಸ್ ಮಾತ್ರೆ ಹಾಕಲು ಶುರು ಮಾಡಿದೆ. ಮೈತುಂಬಾ ಮೆತ್ತಿಕೊಂಡಿದ್ದ ಉಣುಗುಗಳು ಒಂದೂ ಇಲ್ಲದಂತೆ ಉದುರ ತೊಡಗಿದವು. ಆದರೆ ಅವನ ಕಾಲುಗಳಿಗೆ ಆರ್ಥರೈಟೀಸ್ ಆಗಿ ನಡೆದಾಡಲು ಕಷ್ಟ ಪಡುತ್ತಿದ್ದ.

ಅಂಥ ಸಮಯದಲ್ಲೇ ನಾವು ಬೆಂಗಳೂರಿನಿಂದ ಗುರುಗ್ರಾಮಕ್ಕೆ ಹೋಗಬೇಕಾಯಿತು. ಆಗ ನಮ್ಮ ಅಕ್ಕ ಪಕ್ಕದವರಿಗೆಲ್ಲಾ ಅವನಿಗೆ ಊಟ ಹಾಕಲು ಹೇಳಿ ಹೋಗುತ್ತಿದ್ದೆ. ಊಟವೇನೋ ಯಾರಾದರೂ ಹಾಕುತ್ತಿದ್ದರು. ಆದರೆ ಅವನನ್ನು ಅಕ್ಕರೆಯಿಂದ ಮೈದಡವಿ ಮಾತನಾಡಿಸುವವರು ಇರಲಿಲ್ಲ. ಗುರುಗ್ರಾಮದಲ್ಲಿದ್ದರೂ ಎರಡು ದಿನಗಳಿಗೊಮ್ಮೆ ಪಕ್ಕದ ಮನೆಯವರಿಗೆ ಫೋನ್ ಮಾಡಿ ಅವನ ಆರೋಗ್ಯದ ಬಗ್ಗೆ ವಿಚಾರಿಸುತ್ತಿದ್ದೆ. ಎರಡು ತಿಂಗಳಿಗೊಮ್ಮೆ ಬೆಂಗಳೂರಿಗೆ ಬಂದು ಹೋಗುತ್ತಿದ್ದೆವು. ನಾವು ಬೆಂಗಳೂರಿನಲ್ಲಿರುವಷ್ಟು ದಿನ ನಮ್ಮ ಮನೆಯಲ್ಲಿಯೇ ಇರುತ್ತಿದ್ದ. ಮನಸ್ಸಿಲ್ಲದ ಮನಸ್ಸಿನಿಂದ ಅವನನ್ನು ಬಿಟ್ಟು ಹೋಗುತ್ತಿದ್ದವು.

ಮೂರನೇ ಬಾರಿ ಬೆಂಗಳೂರಿಗೆ ಬಂದು ಹೋಗಿ ಒಂದು ವಾರವಾಗಿತ್ತು. ಪಕ್ಕದ ಮನೆಯವರಿಗೆ ಫೋನ್ ಮಾಡಿದಾಗ, ಎರಡು ದಿನಗಳಿಂದ ಗುಂಡ ಊಟವನ್ನೂ ಮಾಡದೇ, ಮೇಲೇಳಲಾಗದೇ ರಸ್ತೆಯ ಮೂಲೆಯಲ್ಲೇ ಮಲಗಿರುವುದಾಗಿ ಹೇಳಿದರು. ತಕ್ಷಣವೇ ಗುರುಗ್ರಾಮದಿಂದಲೇ ಬೆಂಗಳೂರಿನಲ್ಲಿರುವ ಅನಿಮಲ್ ಆಂಬುಲೆನ್ಸ್ ಗೆ ಫೋನ್ ಮಾಡಿ, ನಮ್ಮ ಬೆಂಗಳೂರಿನ ಮನೆಯ ವಿಳಾಸ ಮತ್ತು ಅವನ ಫೋಟೋ ಕಳಿಸಿದೆ. ಅನಿಮಲ್ ಆಸ್ಪತ್ರೆಗೆ ಸೇರಿಸುವಂತೆ ವಿನಂತಿಸಿ ಹಣವನ್ನು ಆನ್‌ಲೈನ್‌ನಲ್ಲಿ ಪಾವತಿಸಿದೆವು. ಆಸ್ಪತ್ರೆಯಲ್ಲಿ ಅವನಿಗೆ ತಕ್ಷಣವೇ ಅಡ್ಮಿಟ್ ಮಾಡಿಕೊಂಡು ಡ್ರಿಪ್ ಹಾಕಿದರು. ಅವರೊಂದಿಗೆ ಆಗಾಗ ಫೋನ್ ಸಂಪರ್ಕದಲ್ಲಿದ್ದು ಅವನ ಆರೋಗ್ಯ ವಿಚಾರಿಸುತ್ತಿದ್ದೆ.

ಅಲ್ಲಿ ಸ್ವಲ್ಪ ಚೇತರಿಸಿಕೊಂಡನಾದರೂ ವಯಸ್ಸಿನ ಕಾರಣದಿಂದ ಗುಣಮುಖನಾಗದೇ ಆಸ್ಪತ್ರೆಯಲ್ಲಿಯೇ 17ನೇ ದಿನ ತೀರಿಕೊಂಡ. ಅವನ ಅಗಲಿಕೆಯಿಂದ ಒಂದು ವಾರ ದುಃಖಿಸಿದೆವು. ಆದರೂ ಅವನ ಕೊನೆಗಾಲದಲ್ಲಿ ಬೀದಿಯಲ್ಲಿ ನರಳಾಡದೇ ಅವನಿಗೊಂದು ಸೂರಿನಡಿ ಚಿಕಿತ್ಸೆ ಕೊಡಿಸಿದೆವಲ್ಲಾ ಎನ್ನುವ ಸಮಾಧಾನ ಮಾತ್ರ ಉಳಿದಿದೆ.

(ಮುಂದುವರೆಯುವುದು)

ತಪ್ಪದೆ ಓದಿ, ಹಿಂದಿನ ಸಂಚಿಕೆಗಳು :


  • ಕೆ ಸಿ ರತ್ನಶ್ರೀ ಶ್ರೀಧರ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW