ಚಂದ ನಗೆ ಚೆಲ್ಲುವಾ ಚೆಲುವೆ ಇವಳು … ಕತ್ತಲನು ಸೀಳುವಾ ಬೆಳಕ ಕೋಲು… ಕವಿಯತ್ರಿ ಸುಮತಿ ಕೃಷ್ಣಮೂರ್ತಿ ಅವರ ಲೇಖನಿಯಲ್ಲಿ ಮೂಡಿದ ಕವಿತೆಯನ್ನು ತಪ್ಪದೆ ಮುಂದೆ ಓದಿ…
ಅಡಗಿದ್ದ ದುಗುಡಗಳ ಎಲ್ಲೆ ದಾಟಿ
ಹುದುಗಿದ್ದ ಗೊಂದಲದ ಮೇರೆ ಮೀರಿ
ಬಚ್ಚಿಟ್ಟ ಭಯದ ಹೊಸ್ತಿಲಿನಾಚೆಗೂ
ಶುಭ್ರ ನಗೆ ಸೂಸುವಾ ಮುಗುದೆ ಇವಳು
ಕತ್ತಲನು ಸೀಳುವಾ ಬೆಳಕ ಕೋಲು
ಸೆಣೆಸಾಟ ವಿಧಿ ಬರೆದ ಉಯಿಲಾದರೂ
ಹೋರಾಟಕೆ ಅಂತ್ಯ ಇರದಿದ್ದರೂ
ನಡೆವ ಹಾದಿಯುದ್ದ ಚುಚ್ಚು ಮುಳ್ಳಿದ್ದರೂ
ಚಂದ ನಗೆ ಚೆಲ್ಲುವಾ ಚೆಲುವೆ ಇವಳು
ಕತ್ತಲನು ಸೀಳುವಾ ಬೆಳಕ ಕೋಲು
ತುಮುಲಗಳ ತಹಬದಿಗೆ ತಂದುಕೊಂಡು
ಕಳವಳದ ಕ್ಷಣವೆಲ್ಲ ನುಂಗಿಕೊಂಡು
ಕನಸುಗಳ ಆವರಣವನ್ನು ತೊರೆದು
ಮುಕ್ತ ನಗೆ ಬೀರುವ ದಿಟ್ಟೆ ಇವಳು
ಕತ್ತಲನು ಸೀಳುವಾ ಬೆಳಕ ಕೋಲು
ಚೌಕಟ್ಟಿನಲ್ಲಿದ್ದೂ ಪೂರ್ಣಳಿವಳು
ಚೈತನ್ಯಕೆ ಆದಿ ಮೂಲ ಇವಳು
ಚರಾಚಾರದ ಶಕ್ತಿ ಕೇಂದ್ರ ಇವಳು
ಸ್ನಿಗ್ಧ ನಗೆ ಹೊತ್ತಿರುವ ಪ್ರಾಜ್ಞಳಿವಳು
ಕತ್ತಲನು ಸೀಳುವಾ ಬೆಳಕ ಕೋಲು
- ಸುಮತಿ ಕೃಷ್ಣಮೂರ್ತಿ
