ವಸುಧಾ ಪ್ರಭು ಅವರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಲೇಖನದಿಂದ ನನಗೆ ಪರಿಚಿತರು. ಅವರ ‘ಮುಂಬೈ ಜೀವನ’ ಪುಸ್ತಕ ಮುಂಬೈ ಬದುಕನ್ನಷ್ಟೇ ಈ ಪುಸ್ತಕ ಪರಿಚಿಸಿಲ್ಲ, ಒಬ್ಬ ಯಶಸ್ವಿ ಹೆಣ್ಣಿನ ಜೀವನ ಕತೆಯನ್ನು ಹೇಳಿದೆ. ತುಂಬಾ ಇಷ್ಟಪಟ್ಟು ಓದಿದ ಪುಸ್ತಕದ ಕುರಿತು ನನ್ನ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ ತಪ್ಪದೆ ಮುಂದೆ ಓದಿ…- ಶಾಲಿನಿ ಹೂಲಿ ಪ್ರದೀಪ್…
ಪುಸ್ತಕ : ಮುಂಬೈ ಜೀವನ
ಲೇಖಕಿ : ವಸುಧಾ ಪ್ರಭು
ಪ್ರಕಾಶನ : ಹೆಚ್ ಎಸ್ ಆರ್ ಎ ಪ್ರಕಾಶನ
ಬೆಲೆ :೨೦೦.೦೦
ಪುಟ : ೧೮೬
ಖರೀದಿಗಾಗಿ : ೭೮೯೨೭೯೩೦೫೪
ಈ ಕತೆ ಮೊಬೈಲ್ ನೆಟ್ ವರ್ಕ್, ಮುಂಬೈಗೆ ರೈಲಿನ ವ್ಯವಸ್ಥೆ ಇಲ್ಲದ ಕಾಲದಲ್ಲಿ ಅಂದರೆ 1968 ನೆಯ ಇಸ್ವಿಯಿಂದ ನಡೆಯುವ ಅನುಭವದ ಕಥನ.
ಚಿಕ್ಕವಯಸ್ಸಿನಲ್ಲಿಯೇ ಸೋದರತ್ತೆಯ ಮಗನನ್ನು ವರಿಸುವ ಕಥಾನಾಯಕಿ ಮುಂಬೈ ಜಗತ್ತನ್ನು ಆಗ ತಾನೇ ಹುಟ್ಟಿದ ಕಂದಮ್ಮನಂತೆ ನೋಡುವುದರ ಮೂಲಕ ಕತೆ ಆರಂಭವಾಗುತ್ತದೆ. ಮೊದಲ ಬಾರಿಗೆ ತವರು ಮನೆ ಬಿಟ್ಟು ದೂರದ ಗಂಡನ ಮನೆ ಮುಂಬೈಗೆ ಬಸ್ ನಲ್ಲಿ ಬರುವಾಗ ಯಾವ ಭಯ, ಆತಂಕ ಕಥಾ ನಾಯಕಿಯಲ್ಲಿ ಇರುವುದಿಲ್ಲ, ಬದಲಾಗಿ ಮುಂಬೈ ನೋಡುವ ಕುತೂಹಲ ಆ ಪುಟ್ಟ ಹುಡುಗಿಯ ಕಣ್ಣುಗಳಲ್ಲಿ ತುಂಬಿರುತ್ತದೆ. ಮುಂಬೈನಲ್ಲಿರುವ ಗಂಡನ ನಾಲ್ಕು ಅಂತಸ್ತಿನ ಕಟ್ಟಡವನ್ನು ನೋಡಿ ಮುಂಬೈ ನಗರಿಯಲ್ಲಿ ದೊಡ್ಡ ಮನೆ ಎಂದು ಬೆರಗಾಗುತ್ತಾಳೆ. ಆದರೆ ಆ ನಾಲ್ಕು ಅಂತಸ್ತಿನ ಮನೆಯಲ್ಲಿ ನೂರಾರು ಜನ ವಾಸಿಸುತ್ತಾರೆ, ಅದನ್ನು ಚಾಳ್ ಎಂದು ಕರೆಯುತ್ತಾರೆ, ಆ ಚಾಳ್ ನಲ್ಲಿ ಒಂದು ಪುಟ್ಟ ಗೂಡಷ್ಟೇ ತನ್ನದು ಎನ್ನುವ ವಾಸ್ತವ ನಾಯಕಿಗೆ ಅರ್ಥವಾದಾಗ ಹೃದಯವೇ ಅಲ್ಲೋಲ್ಲ ಕಲ್ಲೋಲವಾಗುತ್ತದೆ. ತುಂಬು ಕುಟುಂಬದಲ್ಲಿ ಹುಟ್ಟಿ ಸ್ವಚ್ಛoದವಾಗಿ ಹಾರಾಡಿದ ಹಕ್ಕಿ ಈಗ ಮಾಯನಗರಿಯ ಒಂದು ಚಾಳ್ ನ್ನ ಪುಟ್ಟ ಗೂಡಿನಲ್ಲಿ ಬಂಧಿಯಾದ ಅನುಭವ ಕಥಾ ನಾಯಕಿಯಲ್ಲಿ ಕಾಡುತ್ತದೆ.

ಮೊದಮೊದಲು ಭಾಷೆ ಬಾರದ ಮರಾಠಿಗರ ಮಧ್ಯೆ ಒದ್ದಾಡುವ ಕಥಾನಾಯಕಿ ಕ್ರಮೇಣ ಅವರ ಮಧ್ಯೆ ಜೀವನ ಸವಿಸುತ್ತಾ, ಅತ್ತೆ ಮನೆಯ ಜೊತೆಗೆ ಚಾಳ್ ಜನರ ಮಧ್ಯೆ ಬೆರೆತು ಅವರಲ್ಲಿ ಒಬ್ಬರಾಗಿ ಹೋಗುತ್ತಾಳೆ. ಮುಂದೆ ಕನ್ನಡದ ಹುಡುಗಿ ನಡೆದದ್ದೇ ದಾರಿ… ಮರಾಠಿ ಸುಲಲಿತವಾಗಿ ಮಾತಾಡುವುದನ್ನು ಕಲಿಯುತ್ತಾಳೆ, ಟೈಲರಿಂಗ್ ಕಲಿಯುತ್ತಾಳೆ, ಜ್ಯೋತಿಷ್ಯ ಕಲಿಯಲು ಮುಂದಾಗುತ್ತಾಳೆ. ಮುಂಬೈ ನಾಗರಿಯಲ್ಲಿ ತನ್ನನ್ನು ಮುಕ್ತವಾಗಿ ಒಂದೊಂದಾಗಿ ತೆರೆದುಕೊಳ್ಳುತ್ತಾಳೆ. ಮದುವೆಯಾಗಿ ಎಷ್ಟೋ ವರ್ಷದ ಮೇಲೆ ಮುದ್ದಾದ ಹೆಣ್ಣಿಗೆ ಜನ್ಮ ಕೊಡುವ ಕಥಾನಾಯಕಿಯ ಜೀವನದಲ್ಲಿ ಸಂಭ್ರಮ ಮೂಡುವಷ್ಟರಲ್ಲಿ ಒಂದು ದುರಂತ ಘಟನೆ ನಡೆಯುತ್ತದೆ. ಅದ್ದುವೇ ಬೆಂಕಿ ಅನಾಹುತ. ಆ ಬೆಂಕಿ ಹೇಗೆ ಹತ್ತಿಕೊಳ್ಳುತ್ತದೆ. ಅದರಿಂದ ಕಥಾನಾಯಕಿ ಕತೆ ಏನಾಗುತ್ತದೆ ಕುತೂಹಲವನ್ನು ಓದುಗರಿಗೆ ಬಿಡುತ್ತೇನೆ.
ಎದುರಾದ ಸಮಸ್ಯೆಗಳನ್ನು ಮೆಟ್ಟಿ ನಿಲ್ಲುತ್ತಾ ಮುಂಬೈ ನಗರಿಯಲ್ಲಿ ತನ್ನದೇ ಛಾಪು ಮೂಡಿಸುವ ಕಥಾನಾಯಕಿ ಮುಂದೆ ಸೌಂದರ್ಯ ತಜ್ಞೆಯಾಗಿ, ಲೇಖಕಿಯಾಗಿ, ಉತ್ತಮ ವಾಗ್ಮಿಯಾಗಿ ಗುರುತಿಸಿಕೊಳ್ಳುತ್ತಾಳೆ. ಇದು ನಾನು ಓದಿದ ‘ಮುಂಬೈ ಜೀವನ’ ಪುಸ್ತಕದ ಕತೆಯ ಸಾರಾಂಶ. ಈ ಪುಸ್ತಕದಲ್ಲಿ ಬರುವ ಕಥಾನಾಯಕಿಯ ಹೆಸರು ವಸುಧಾ ಪ್ರಭು. 71 ವರ್ಷದ ಉತ್ಸಾಹಿ ಬರಹಗಾರ್ತಿ. 54 ವರ್ಷ ಮುಂಬೈ ಜೀವನ ಕಂಡ ವಸುಧಾ ಅವರ ಅನುಭವ ಕಥನ ಈ ಪುಸ್ತಕವಾಗಿದೆ. ಪುಸ್ತಕ ಓದುವಾಗ ಯಶಸ್ವಿ ಮಹಿಳೆಯ ಕುರಿತಾದ ಸಿನಿಮಾ ನೋಡಿದಂತೆ ಅನುಭವ ನನಗೆ ನೀಡಿತು. ಅರಿಯದ ಭಾಷೆ, ನಮ್ಮವರು ಅಲ್ಲದ ಜನರ ಮಧ್ಯೆ ಎದೆಗುಂದದೆ ಮರಾಠಿ ಭಾಷೆ ಕಲಿತು, ಅಲ್ಲಿಯೇ ಸ್ವತಂತ್ರ ಉದ್ಯಮಿಯಾಗಿ ನೆಲೆಗೊಳ್ಳುತ್ತಾರೆ. ಸ್ವಲ್ಪೇ ವರ್ಷ ಕರ್ನಾಟಕ ನೆಲ, ಜಲ ಬಿಟ್ಟು ಬೇರೆಡೆ ಹೋದ ಎಷ್ಟೋ ಕನ್ನಡಿಗರು ಕನ್ನಡವನ್ನೇ ಮರೆತು ಬಿಡುತ್ತಾರೆ. ಆದರೆ ವಸುಧಾ ಅವರು ೫೪ ವರ್ಷ ಮುಂಬೈಯಲ್ಲಿಯೇ ಸವೆದಿದ್ದರು ಕನ್ನಡ ಭಾಷೆಯನ್ನು ಮರೆಯದೆ ಕೊನೆಗೆ ಕನ್ನಡದಲ್ಲಿಯೇ ತಮ್ಮ ಅನುಭವದ ಕಥನವನ್ನು ಹೊರ ತಂದದ್ದು ಮೆಚ್ಚುವಂತದ್ದು. ಅವರ ಅನುಭವಗಳು ಓದುವಾಗ ಮನಸ್ಸು ಆಚೀಚೆ ಹೋಗದೆ ಗಟ್ಟಿಯಾಗಿ ಮುಂಬೈಯಲ್ಲಿಯೇ ಕೂತಿತ್ತು.

ವಸುಧಾ ಪ್ರಭು ಅವರು ಹುಟ್ಟಿ ಬೆಳೆದ ವಾತಾವರಣ, ಮದುವೆಯಾಗಿ ಹೋದ ಮನೆಯ ವಾತಾವರಣ, ಮೊಬೈಲ್ ಇಲ್ಲದ ಕಾಲ ಅಜಗಜಾಂತರ ಬದಲಾವಣೆಗಳಿದ್ದರೂ ಲೇಖಕಿ ಯಾವುದಕ್ಕೂ ಬೇಸರಿಸಿಕೊಳ್ಳದೆ ಪ್ರತಿಯೊಂದನ್ನು ತಾಳ್ಮೆಯಿಂದ ಒಂದೊಂದೆ ಹಂತ ಗೆಲ್ಲುವಾಗ ಓದುಗರಿಗೆ ಅವರ ಯಶಸ್ಸನ್ನು ನೋಡಿ ಚಪ್ಪಾಳೆ ತಟ್ಟಬೇಕು ಎನ್ನುವಷ್ಟು ಖುಷಿ ಕೊಡುತ್ತದೆ.
ಸಣ್ಣ ಸಣ್ಣ ವಿಷಯಕ್ಕೂ ಡಿವೋರ್ಸ್ ಮೊರೆ ಹೋಗುವ ಇಂದಿನ ಕಾಲದಲ್ಲಿ ಈ ಪುಸ್ತಕ ಗಂಡ ಹೆಂಡತಿಯ ನಡುವೆ ಒಳ್ಳೆ ಬಾಂಧವ್ಯ ಬೆಸೆಯಲು ಮತ್ತು ಮನ ಪರಿವರ್ತನೆ ಮಾಡಲು ನೇರವಾಗಬಲ್ಲದು ಎನ್ನುವುದು ನನ್ನ ಅಭಿಪ್ರಾಯ. ಸರಳ ಭಾಷೆಯ ಮೂಲಕ ಮುಂಬೈ ಜಗತ್ತನ್ನು ಹೊಕ್ಕಿ ನೋಡಿದ ಅನುಭವ ಈ ಪುಸ್ತಕ ಕೊಟ್ಟಿತು.
ವಸುಧಾ ಪ್ರಭು ಅವರು ಬಹುಮುಖ ಪ್ರತಿಭೆಯುಳ್ಳವರು, ಕಲಿಯಬೇಕು ಎನ್ನುವ ಉತ್ಸಾಹ ಇರುವಂತ ವ್ಯಕ್ತಿತ್ವ…. ಕತೆಗಳನ್ನು ಬರೆದಿದ್ದಾರೆ. ಪುಸ್ತಕ ಓದುತ್ತಾ ಹೋದಾಗ ಅವರ ಬಗ್ಗೆ ಅರ್ಥವಾಗಿದ್ದು ಜೀವನದಲ್ಲಿ ಸಾಕಷ್ಟು ಸವಾಲುಗಳನ್ನು ಗಟ್ಟಿಯಾಗಿ ಎದುರಿಸಿ, ಗೆದ್ದಿದ್ದಾರೆ ಮತ್ತು ಒಂದೆಡೆಯೇ ನಿಲ್ಲದೆ ನದಿಯಂತೆ ಸದಾ ಹರಿಯುತ್ತಾ ಜೀವನದಲ್ಲಿ ಮುಂದೆ ನುಗ್ಗಿದ್ದಾರೆ.
ವಸುಧಾ ಪ್ರಭು ಅವರಿಗೆ ಆ ಭಗವಂತ ಆಯಸ್ಸು ಅರೋಗ್ಯ ನೀಡಲಿ ಎಂದು ಶುಭ ಹಾರೈಸುತ್ತಾ ಎಲ್ಲರೂ ಓದಬೇಕಾದಂತಹ ಪುಸ್ತಕ ‘ಮುಂಬೈ ಜೀವನ’, ಅದರಲ್ಲಿಯೂ ಹೆಣ್ಣು ಮಕ್ಕಳು ಈ ಪುಸ್ತಕ ಓದಲೇಬೇಕು.
- ಶಾಲಿನಿ ಹೂಲಿ ಪ್ರದೀಪ್ – ಆಕೃತಿ ಕನ್ನಡ ಸಂಪಾದಕಿ
