ನಾಳೆ ನನ್ನ ಮದುವೆಯಂತೆ..! (ಹಾಸ್ಯ ಪ್ರಬಂಧ)



ನಾಳೆ ಮಹಾದೇವನ ಮದುವೆ, ಬೀಗರ ಕಡೆಯರು ಬಸವಣ್ಣನ ಗುಡಿಯಲ್ಲಿ ಕೂತಿದ್ದಾರೆ. ಆದರೆ ಮಹಾದೇವ ಮದುವೆ ಮನೆಯಲ್ಲಿ ಕಾಣುತ್ತಿಲ್ಲ, ಮತ್ತೆ ಎಲ್ಲಿ ಹೋದ?…ಮದುವೆ ಮನೆಯಲ್ಲಿ ಹುಡುಕಾಟ ಶುರುವಾಗಿದೆ. ಮಹಾದೇವನಿಗೆ ಮದುವೆ ಇಷ್ಟವಿರಲಿಲ್ವಾ?…ಹೀಗ್ಯಾಕೆ ಮಾಡಿದಾ?… ಮಂಜಯ್ಯ ದೇವರಮನಿ ಅವರ ‘ನಾಳೆ ನನ್ನ ಮದುವೆಯಂತೆ..! ಹಾಸ್ಯ ಪ್ರಬಂಧವನ್ನು ಮುಂದೆ ಓದಿ…

ಸಂಗಾಪುರದಲ್ಲಿ ಮಹಾದೇವ ಮೊದಲ ಪದವೀಧರ. ತುಂಬಾ ಬುದ್ದಿವಂತ, ಸ್ವಭಾವತಃ ಬಹಳ ಮೆತ್ತನ ಮನುಷ್ಯ. ತಂದೆ ಸತ್ತ ಮೇಲೆ ಮನಿ ಮನಿತ್ಯಾನ ನಿಭಾಯಿಸೋರು ಯಾರು ಇಲ್ಲ ಅಂತೇಳಿ ಪದವಿಗೆ ಮಂಗಳ ಹಾಡಿ ಕಮ್ಮತಕ್ಕೆ ಬಾರುಕೋಲು ಹಚ್ಚಿದ್ದ. ಎಲ್ಲರೂ ಸಂಜೆ ಮನೆಗೆ ಹಿಂದಿರುಗುವ ಹೊತ್ತಿನಲ್ಲಿ ನಮ್ಮ ಮಹಾದೇವ ಬೇಸಾಯ ಹೂಡುತ್ತಿದ್ದ. ‘ಏನು ಮಹಾದೇವ ನಿನ್ನ ಒಕ್ಕಲುತನಕ್ಕೆ ಈಗ ಬೆಳಕರಿತು ಅಂತ ಕಾಣ್ಸತೈತಿ’ ಎಂದು ಜನ ಚಾಷ್ಟಿ ಮಾಡುತ್ತಿದ್ದರು. ಇಲ್ಲ ಹಗುರುಕ ನಾಕು ತಿರುವು ತಿರುವಿ ಬರ್ತೀನಿ ಅಂತೇಳಿ ರಾತ್ರಿ ಒಂಬತ್ತು ಗಂಟೆವರೆಗೂ ಹೊಲ ಹೊಡೆಯುತ್ತಿದ್ದ. ಊರೆಲ್ಲಾ ಬಿತ್ತಿದ ಮೇಲೆ ಇವ್ನ ಬಿತ್ತಿಗಿ. ಕಣ ಮಾಡೋದು ಅಷ್ಟೇ ಎಲ್ಲರಿಗಿಂತ ನಾಕು ಹೆಜ್ಜೆ ಅಲ್ಲ ನಲವತ್ತು ಹೆಜ್ಜೆ ಹಿಂದೆ ಅಂದ್ರೆ ತಪ್ಪಿಲ್ಲ. ‘ಚಾ ಚಾ…. ಬಸವ… ಆತು ಮುಗಿತು ಸಾಕು… ಬಿಟ್ಟೆ ಮನಿಗೆ ಹೋಗೋಣ ಸಾಲು ತಪ್ಪಬ್ಯಾಡ್ರಿ… ಹರ್ರಿಕಾ ಪ್ರ… ಪ್ರ… ಹವ್ವ… ಹವ್ವ… ಅಂದು ಎತ್ತು ಕೊಳ್ಳ ಹರಿಯೋತ್ತಿಗೆ ಊರು ಬರೋಬ್ಬರಿ ಉಂಡು ಮಲಗಿರುತ್ತಿತ್ತು.

ಫೋಟೋ ಕೃಪೆ : google

ಹೆಂಡತಿ ಉಮಾಳಿಗೆ “ಸ್ನಾನಕ್ಕೆ ನೀರು ತರ್ತೀನಿ ನಿರೋಲೆಗೆ ಬೆಂಕಿ ಹಾಕು” ಅಂತೇಳಿ ಗಡಿಗೆ ತೆಗೊಂಡು ಊರ ಮುಂದಿನ ಸೇದು ಬಾವಿಗೆ ಮಿಣಿ ಹಾಕುತ್ತಿದ್ದ. ಕವ್ವ ಕತ್ತಲಲ್ಲಿ ಕೆಲಸ ಮಾಡೋದು ಮಹಾದೇವನಿಗೆ ನಿರೋಳ್ಳ ದಾರಿಯಷ್ಟೇ ಸಲೀಸಾಗಿತ್ತು. ಮೂರ್ನಾಕು ಬಾರಿ ಸೇದಿ ಗಡಿಗೆ ತುಂಬಿಸಿ ನಾಲ್ಕು ದಾರಿ ನೀರು ತಂದರೆ ನೀರಿನ ಕಂದು ಹರಿಯುತ್ತಿತ್ತು. ಅಷ್ಟೋತ್ತಿಗಾಗಲೇ ಅವನೇಣ್ತಿ ಉಮಾ ನಿರೋಲೆಗೆ ಒಳ್ಕಿ ತುರುಕಿರುತ್ತಿದ್ದಳು. ನೀರು ಕಾಯೋತ್ತಿಗೆ ಗಂಟೆ ಹನ್ನೊಂದು ದಾಟಿ ಹನ್ನೆರಡಕ್ಕೆ ಬೀಳುತ್ತಿತ್ತು. ಬಿಸಿ ಬಿಸಿ ನೀರನ್ನು ನೆತ್ತಿಮ್ಯಾಲ ಸುರಿದುಕೊಂಡರೆ ಮಾತ್ರ ಮಹಾದೇವನ ದಿನದ ಆಯಾಸವೆಲ್ಲ ಕರಗಿ ಮೈ ಹಗುರಾಗುತ್ತಿತ್ತು. ದೇವರ ಗುಣ್ಣಿಯಲ್ಲಿನ ದೀಪ ಮುಡಿಸಿ ಮೈ ತುಂಬಾ ವಿಭೂತಿ ಪಟ್ಟೆ ಬಳಿದುಕೊಂಡು ಲಿಂಗಪೂಜೆ ಮಾಡಿ ಮುಗಿಸಿದ ಮೇಲೆಯೇ ಉಣ್ಣಲು ಕುರುತ್ತಿದ್ದ. ಮಹಾದೇವನಿಗೆ ರಾತ್ರಿಯೂಟಕ್ಕೆ ಬಿಸಿ ಜೋಳದ ರೊಟ್ಟಿಯೇ ಆಗಬೇಕು. ಬಿಸಿ ರೊಟ್ಟಿ ಕೆಂಪಿಂಡಿ ಮೇಲೊಂದಿಷ್ಟು ಬೆಣ್ಣಿ ಬಿದ್ದರೆ ಸ್ವರ್ಗ ಅಂಗೈ ರೊಟ್ಟಿಯಲ್ಲಿ ಕುಣಿಯುತ್ತಿತ್ತು. ಸರಿಹೊತ್ತಿನಲ್ಲಿ ರೊಟ್ಟಿ ಬಡಿಯುತ್ತಿದ್ದ ಏಕೈಕ ಮನೆ ಅಂದ್ರೆ ಅದು ಮಹಾದೇವನ ಮನೆ. ಅವನೇಣ್ತಿ ಬಡಿಯುವ ಕೊಣಬಿ ಹಲಗೆ ಸದ್ದಿಗೆ ಅಕ್ಕಪಕ್ಕದ ಮನೆಯವರ ನಿದ್ದೆ ಕರಗಿ ಜಂಪು ನಿದ್ದೆಯ ಸಾಲಕ್ಕೆ ಹ್ಯಾಂಗಾರು ಮಾಡಿ ಬಡ್ಡಿ ತೀರಿಸಬೇಕೆಂದು ಕಾಯುತ್ತಿದ್ದರು.

ಮಹಾದೇವನಿಗೆ ಮೆತ್ತನ ಎಂಬ ಹೆಸರು ಬರಲು ಅವನ ಸ್ವಭಾವವೇ ಕಾರಣ. ನನ್ನ ಅನುಭವದ ಪ್ರಕಾರ ಅವನು ಇವತ್ತಿಗೂ ಯಾರ ಮೇಲೆ ಕೋಪ ಮಾಡಿಕೊಂಡಿಲ್ಲ, ಜಗಳವಂತೂ ಗೊತ್ತೇ ಇಲ್ಲ. ಎಲೆ… ತಲೆ… ಯಾಕಲೇ…ಮಾತುಗಳಂತೂ ಅವನ ಬಳಿ ಇಲ್ಲವೇ ಇಲ್ಲ. ಬೈಗುಳ ಜೋರುಮಾಡಿ ಮಾತಾಡಿದ್ದು ನಾ ನೋಡಿಯೇ ಇಲ್ಲ. ಅವನ ಮಾತಿಗೆ ಎಲ್ಲರೂ ತಲೆದೂಗಬೇಕು ಹಾಗೆ ಮಾತನಾಡುತ್ತಿದ್ದ. ಹೊತ್ತು ಗೊತ್ತು ಎಲ್ಲ ಮರೆತು ಮಾತಿಗೆ ಕುಳಿತು ಬಿಡುತ್ತಿದ್ದ. ಅದಕ್ಕೊಂದು ಸ್ವಾರಸ್ಯಕರ ಘಟನೆಯನ್ನು ಹೇಳದಿದ್ದರೆ ನನ್ನ ಈ ಪ್ರಬಂಧಕ್ಕೆ ಬೆಲೆಯಿಲ್ಲ, ಹೇಳುತ್ತೇನೆ ಕೇಳಿ…
ನಮ್ಮೂರು ಸಂಗಾಪುರ ಅಲ್ಲಿಂದ ಮೂರ್ನಾಲ್ಕು ಫರ್ಲಾಂಗು ನಡೆದರೆ ಹೊಳೆ ಸಿಗುತ್ತದೆ, ದೋಣಿಯಲ್ಲಿ ಹೊಳೆದಾಟಿದರೆ ಪಾಳ್ಯ ಎಂಬ ಕೊಪ್ಪಲಿದೆ. ಆ ಕೊಪ್ಪಲಿನಲ್ಲಿ ಮಹಾದೇವನ ದೂರದ ಸಂಬಂಧಿಕರು ನೆಲಸಿದ್ದರು. ಒಂದು ದಿನ ಮಹಾದೇವ ಪಾಳ್ಯಕೊಪ್ಪಲಿಗೆ ಹೋಗಲು ದೋಣಿಸಾಲುಗುಂಟ ನಡೆದು ದೋಣಿಗಾಗಿ ಕಾದು ಕುಳಿತ. ಸಂಜೆ ಹೊತ್ತು, ಮಳೆಗಾಲ ಬೇರೆ ತುಂಗೆ ತುಂಬಿ ಹರಿಯುತ್ತಿದ್ದಳು. ಕೊನೆ ದೋಣಿ ಏರಿ ಹೊಳೆದಾಟಿ ಮತ್ತೇರೆಡು ಪರ್ಲಾಂಗು ನಡೆದು ಪಾಳ್ಯಕೊಪ್ಪಲು ತಲುಪಿದ. ರಬ್ಬರ್ ಸುತ್ತಿದ್ದ ತನ್ನ ಹಳೇ ಕೀ ಪ್ಯಾಡ್ ಮೊಬೈಲ್ ಬ್ಯಾಟರಿ ಕಡಿಮೆಯಾಗಿ ಕಾಲು ಮುರಿದುಕೊಂಡ ನಾಯಿಮರಿಯಂತೆ ಟೀವ್… ಟೀವ್… ಎಂದು ಮಲಗಿಬಿಟ್ಟಿತು. ಗಜಿಬಿಜಿಯಲ್ಲಿ ಎರೆಡು ದಿನದಿಂದ ಅದಕ್ಕೆ ಕೂಳು ಕಾಣಿಸಿರಲಿಲ್ಲ.

ಕೇರಿಯ ಜನರು ಅಪರೂಪಕ್ಕೆ ಬಂದ ಮಹಾದೇವನನ್ನ ಮಾತಿಗೆಳೆಯುತಿದ್ದರು. ತಾಸು ದೀಡು ತಾಸು ಮಾತಿನ ವರಸೆ ತೋರಿಸುತ್ತ ಸಂಬಂಧಿಕರ ಮನೆ ತಲುಪಿದಾಗ ಟಿವಿಯಲ್ಲಿ ಮುಂಬೈ ವರ್ಸೆಸ್ ಚೆನ್ನೈ ಟ್ವೆಂಟಿ ಟ್ವೆಂಟಿ ಮ್ಯಾಚು ಚಾಲುವಾಗಿತ್ತು.

ಫೋಟೋ ಕೃಪೆ : google

ಮಹಾದೇವ ಬಂದಿದ್ದ ಕಂಡ ದೊಡ್ಡಪ್ಪ ಸಿದ್ದಮಲ್ಲ “ಯಾವತ್ತೂ ಬಾರದ ನಮ್ಮ ಮಾದೇವ ಹುಡ್ಕೆಂದು ಮನೇಗಂಟ ಬಂದವ್ನೆ” ಎಂದು ಕರೆದು ಕೂರಿಸಿ ಚಾ ಎಲೆಡಿಕೆ ಕೊಟ್ಟು ಮಾತಿಗಿಳಿದ. ಹೊಲ ಗದ್ದೆ… ಮಳೆ… ಬಿತ್ತಿಗಿ… ಕಳೆ ಗೊಬ್ಬರ ಅದು ಇದು ಮಾತಾಗುತ್ತಲೇ ರಾತ್ರಿ ಊಟದ ಹೊತ್ತಾಗಿತ್ತು. ಅಪರೂಪಕ್ಕೆ ಬಂದಿದ್ದಕ್ಕೆ ಸಂಬಂದಿಕರು ಜವೇ ಗೋಧಿ ಹಾಕಿ ಘಮಾಡಿಸುವ ಹುಗ್ಗಿ ಮಾಡಿದ್ದರು. ಮಹಾದೇವನಿಗೂ ಹುಗ್ಗಿಯ ಮೇಲೆ ಆಸೆ… ಹುಗ್ಗಿಯನ್ನು ಚೆನ್ನಾಗಿ ಬಾರಿಸಿ ತೇಗು ಹಾಕಿದ. “ದೊಡವ್ವ ಹುಗ್ಗಿ ಒಳ್ಳೆ ಇರ್ದಾಗಿತ್ತಬೆ… ಬೆಲ್ಲ ಮುಂದುಮಾಡಿ ಹಾಕಿದ್ರೆ ನಾಲಿಗೆ ಕಚ್ಚಿಕೊಳ್ಳಬೇಕು ನೋಡಬೆ ಹಾಂಗ ಮಾಡಿತಿ… ನಿನ್ನ ಗೋಧಿಹುಗ್ಗಿ ಉಣ್ಣದೆ ಬಾಳ ದಿನ ಆಗಿತ್ತು ನೋಡು” ಎಂದು ಎಲೆಗೆ ಸುಣ್ಣ ಸವರಿ ಜಗಿಯುವ ಅಡಿಕೆಗೆ ಕೊಟ್ಟ. ಮ್ಯಾಚು ಇನ್ನೇನು ಮುಗಿಯೋ ಹಂತಕ್ಕೆ ಬಂದಿತ್ತು. ಹೊತ್ತು ಹೊಳೆ ನೀರಿನಂತೆ ಹರಿಯುತ್ತಿತ್ತು.

ಸಿದ್ದಮಲ್ಲನ ಹೆಂಡ್ತಿ ಯಲ್ಲವ್ವ “ಯಾಕೋ ಮಾದೇವ ನೆನ್ಸಿಗೆಂದು ಬಂದಿ.. ಸುಮ್ ಸುಮ್ನೆ ಹಿಂಗೆಲ್ಲಾ ಊರು ಕೇರಿ ತಿರುಗೋನಲ್ಲ ಬಿಡಪ್ಪ ನೀನು. ಇವತ್ಯಾಕೋ ನಿಮ್ಮ ದೊಡ್ಡಪ್ಪನ ಹುಡ್ಕೆಂದು ಬಂದಿ ಏನು ಇಷ್ಯಾ” ಎಂದಾಗ ಗೆಪ್ತಿಮಾಡಿಕೊಂಡ ಮಹಾದೇವ ತಾನು ತಂದಿದ್ದ ಸಣ್ಣ ಚೀಲದಲ್ಲಿನ ಲಗ್ನಪತ್ರಿಕೆ ಹೊರತೆಗೆದು “ಇಲ್ಲಬೇ ದೊಡ್ಡವ್ವ ನನ್ನ ಮದಿವಿ ಅದ್ಕೆ ಕರಿಯಾಕ ಬಂದೀನಿ, ಇಬ್ರುವೆ ತಪ್ಪದೆ ಲಗ್ಣಕ್ಕೆ ಬರ್ಬೇಕು” ಅಂತೇಳಿ ಲಗ್ನಪತ್ರಿಕೆ ಕೊಟ್ಟನು.



“ಬಾಳ ಚಲೋ ಇಷ್ಯಾ ಹೇಳ್ದೆ ಬಿಡು. ಮಗನಿಗೆ ವಯಸ್ಸಾದ್ರೂ ಹೆಣ್ಣು ಗೊತ್ತಾಗಲಿಲ್ಲ ಅಂತಾ ನಿಮ್ಮವ್ವ ಗೋಳೋ ಅಂತಿದ್ಲು”

ಸಿದ್ದಮಲ್ಲ “ಅಂದಂಗೆ ಲಗ್ಣ ಯಾವಾಗ ಹಮ್ಮಿಕೇಂದಿರಿ”

“ನಾಳೇನೇ…”

“ನಾಳೇನೇ..! ಚಾಷ್ಟಿ ಮಾಡ್ಬ್ಯಾಡ ತ್ಯಗಿ…”

“ನಿಜವಾಗ್ಲೂ ದೊಡಪ್ಪ… ನಾನ್ಯಾಕ ಸುಳ್ಳ ಹೇಳಲಿ”

ಗಾಬರಿ ಬಿದ್ದ ಸಿದ್ದಮಲ್ಲ ಲಗ್ನಪತ್ರಿಕೆಯ ತೆಗೆದು ನೋಡಿದ. ಬೆಳಕರಿದ್ರೆ ದಾರಿ ಮುಹೂರ್ತ!

“ಅಯ್ಯೋ ಸಿವನೇ…. ಇವ್ನು ಮುಖಕ್ಕೆ ಬಿಸಿ ನೀರು ಹುಗ್ಗಾ… ಬೆಳಕರದ್ರೆ ಮದ್ವಿ ಇಟ್ಟಗೊಂಡು ಕುಂಡಿ ಮರೆತು ಕುಂತಾನಲ್ಲಪ್ಪ… ಏನು ಮಾಡೋದು”

ದೊಡವ್ವ “ಎಂತಾ ಕೆಲಸ ಮಾಡಿದೋ ಮಾದೇವ… ಬಂದೇಟಿಗೆ ಹೇಳಿದ್ರೆ ನಿ ಕುಂದ್ರಾಕೆ ಬಿಡ್ತಿರಲಿಲ್ಲ… ಏನು ಮೆತ್ತನ ಮನಸ್ಯ ಅದಿಯಪ್ಪ” ಈ ಸರೋತನ್ಯಾಗ ಇದೊಳ್ಳೆ ಪಜೀತಿಯಾತಲ್ಲ ಚಿಂತಿಗೆ ಬಿದ್ದಳು.
*
ಇತ್ತಕಡೆ ‘ಹಿಂಗೆ ಹೋಗಿ ಹಾಂಗ ಬರ್ತೀನಿ’ ಅಂತೇಳಿ ಹೋಗಿದ್ದ ಮಹಾದೇವ ಬಾರದಿದ್ದನ್ನು ಕಂಡು ಮದುವೆ ಮನೆಯಲ್ಲಿ ತಳಮಳ ಶುರುವಾಗಿತ್ತು. ಮದಲಿಂಗ ನಾಪತ್ತೆಯಾಗಿದ್ದು, ಗುಸು ಗುಸು ಪಿಸು ಪಿಸು ಹುಳಿ ಹುಳಿ ಮಾತುಗಳ ಮದುವಿ ಊಟದ ಪಂತಿ ಚಾಲುವಾಗಿತ್ತು.

ಫೋಟೋ ಕೃಪೆ : google

ಅರಿಶಿಣಶಾಸ್ತ್ರ ವೀಳ್ಯಶಾಸ್ತ್ರಕ್ಕೆ ಎಲ್ಲರೂ ಹಣಿಮಾಡಿಕೊಂಡಿದ್ದರು. ಬೀಗರು ಬಂದು ಬಸವಣ್ಣನ ಗುಡಿಯಲ್ಲಿ ಕುಂತಿದ್ದರು. ಒಂದಿಬ್ಬರು ಬೆಲ್ಲಕೊಟ್ಟು ಕರೆಯಲು ಹೋಗಿದ್ದರು. ‘ನಿದ್ದೆ ಬರ್ತಿಲ್ಲ ನಂಗೆ ನಿದ್ದೆ ಬರ್ತಿಲ್ಲ ನಾಳೆ ನನ್ನ ಮದುವೆಯಂತೆ ನಿದ್ದೆ ಬರ್ತಿಲ್ಲ’ ಸಾಂಗನ್ನು ಮೈಕ್ ಸೆಟ್ಟು ಊರು ಕೇಳುವಂತೆ ವದರುತ್ತಿತ್ತು. ಚಪ್ಪರಕ್ಕೆ ಹಾಕಿದ್ದ ಲೈಟಿನ ಸರಗಳು ಮಿಣುಗುತ್ತಿದ್ದವು. ಇದ್ದಕ್ಕಿದ್ದಂತೆ ಕರೆಂಟು ಹೋಯಿತು. ಊರಿಗೆ ಊರೇ ಗಪ್ಪಾಗಿ ಕುಂತಿತು.

“ಏನೋ ಯಪ್ಪ ಹುಡ್ಗಗೆ ಮದ್ವಿ ಇಷ್ಟ ಇತ್ತೋ ಇಲ್ವೋ ಯಾರಿಗೊತ್ತು… ಮೊದ್ಲೇ ಮೆತ್ತಂದು… ಯಾರ್ಜೊತಿಗೂ ಬಾಯ್ಬಿಟ್ಟಿಲ್ಲ ಎಲ್ಲೋತೋ ಏನೋ…” ಸಂಜಿ ಮುಂದ ಮಾದೇವ ದೋಣಿಸಾಲು ಹಿಡುದು ಹೋಗೋದ ನಾ ನೋಡಿದೆ ಅಂತ ತೆಪ್ಪಹಾಕಿ ಮೀನಿಗೆ ಬಲೆಹಾಕಿದ್ದ ದುರೆಗೇರ ಭರ್ಮ ಹೇಳಿದ್ದು ಕೇಳಿದ ಜನ ‘ಮಾದೇವ ಮದ್ವಿಯಾಗೋಕೆ ವಲ್ಲೆ ಎಂದು ಹೊಳೆ ಹಾರಿದ್ನಂತ..! ಹೊಳೆ ಹಾರಿದ್ನಂತ..!”

“ಇಲ್ಲ ತ್ಯಗಿ … ಅವ್ನಿಗೆ ಮದ್ವಿ ಅಂದ್ರೆ ಆಗಿಬರಲ್ಲ ಹೆಣ್ಣುಮಕ್ಕಳು ಕಂಡ್ರೆ ಒಂತರಾ… ಅದ್ಕೆ ಮಂಗಳೂರು ಕಡೆ ಓಡಿ ಹೋದ್ನಂತೆ…”

ಅನ್ನೋ ಹುಸಿ ಹೂಸಿನ ವಾಸನೆ ಜೋರು ಹಬ್ಬತೊಡಗಿತು. ಮಹಾದೇವನ ಅಪ್ಪ ಅವ್ವನ ಎದೆ ದಸ್ಸಕೆಂದು ಹಲಬತೊಡಗಿದರು.

“ಹಂಗೆಲ್ಲಾ ಏನೂ ಆಗಿರಲ್ಲ ಸುಮ್ಕಿರೀತಿರೋ ಇಲ್ವೋ” ಅಂತ ಒಂದು ವಯಸ್ಸಾದ ದ್ವನಿ ಹೇಳಿದ್ದಕ್ಕೆ ಎಲ್ಲರೂ ಸುಮ್ಮನಾದರು.

*

ಸಿದ್ದಮಲ್ಲ ಬಿಟ್ರೆ ಕೆಟ್ಟೋಕತಿ ಅಂದವನೇ “ಏ ಅಡ್ನಾಡಿ ಏಳುಮ್ಯಾಲ. ಹದಸೇರಿ ಬಿತ್ತಲಿಲ್ಲ; ಮೆದೆಕಟ್ಟಿ ಹೊಟ್ಟಲಿಲ್ಲ ಅನ್ನುವಂಗಾತು ನಿನ್ನ ಬಾಳೆವು” ಎಂದು ಎಬ್ಬಿಸಿಕೊಂಡು ಹೊಳೆದಂಡಿಗೆ ಬಂದ. ಹೊಳೆ ಮೈದುಂಬಿ ತುಳುಕಿ ತುಳುಕಿ ಹರಿಯುತ್ತಿತ್ತು. ದೋಣಿ ಕರಿಯಪ್ಪ ಹೆಂಡ್ತಿ ಜೊತೆ ಹಾಸಿಗೆ ಹಂಚಿಕೊಂಡು ಚೇಷ್ಟೆಯಲ್ಲಿ ತೊಡಗಿದ್ದ. ಇಬ್ಬರೂ ಇನ್ನೂ ಪರಾಕಷ್ಟೆ ತಲುಪುರಲಿಲ್ಲ ಕದ ಬಡಿದ ಸದ್ದಾಯಿತು. ಇಟೋತ್ತ್ಯಾನಾಗ ಯಾರಪ್ಪ ಅಂತ ಲುಂಗಿ ಕಟ್ಟಿಕೊಳ್ಳುತ್ತ ಹೊರಬಂದ.

ವಿಷಯ ತಿಳಿದ ಕರಿಯಪ್ಪ “ರಾತ್ರಿ ಹೊತ್ತು ದೋಣಿ ತುಳಿಬ್ಯಾಡ ಅಂತ ನಮ್ಮಪ್ಪ ಹೇಳಿ ಸತ್ತಾನ, ಬೇಡ ಬುದ್ದಿ, ಇವ್ರು ಇಲ್ಲೇ ಮಕ್ಕೊಳ್ಳಲಿ… ಮುಂಜೇಲಿ ಫಸ್ಟ್ ದೋಣಿಗೆ ಕರ್ಕೊಂಡು ಹೊಕ್ಕಿನಿ”

ಫೋಟೋ ಕೃಪೆ : google

“ಬೆಳಕರದ್ರೆ ಮದ್ವಿ… ಮನ್ಯಾಗ ಹೇಳಿಬಂದಿಲ್ಲ… ಅಲ್ಲಿ ಏನೇನು ನೆಡೆದೇತೋ ದೇವ್ರೇ ಬಲ್ಲ… ಮದ್ವಿ ಮನ್ಯಾಗ ಗಾಬ್ರಿ ಬಿದ್ದಿರ್ತಾರೆ ದೊಡ್ಡ ಮನಸು ಮಾಡು” ಅಂದಿದ್ದಕ್ಕೆ ಮನಕರಗಿ ದೋಣಿ ಬಿಚ್ಚಿ ಹುಟ್ಟು ಹಾಕತೊಡಗಿದ. ಅದೇ ತಾನೆ ಮೂಡಿದ ಹುಣ್ಣಿಮೆ ಚಂದ್ರ ದೋಣಿದಾರಿಗೆ ಹಾಲು ಬೆಳಕು ಚೆಲ್ಲುತ್ತಿದ್ದ.

ಮಾದೇವ ಸಿದ್ದಮಲ್ಲ ಊರು ತಲುಪಿ ಚಪ್ಪರದಡಿ ಕಾಲಿಡುತ್ತಿದ್ದಂತೆ ಹೋದ ಕರೆಂಟು ಜಗ್ಗನೆ ಬೆಳಗಿತು.

ಮಾದೇವ ಬಂದ..! ಮಾದೇವ ಬಂದ..! ಹಲವು ದನಿಗಳು ಒಮ್ಮಲೇ ಕೂಗಿದವು. ಒಳ ಜಗುಲಿಗೆ ಕೇಳಿದ ಧ್ವನಿ ಮದುವೆ ಮನೆಯನ್ನು ರಂಗೇರಿಸಿತು. ನಿದ್ದೆ ಬರ್ತಿಲ್ಲ… ನಂಗೆ ನಿದ್ದೆ ಬರ್ತಿಲ್ಲ… ನಾಳೆ ನನ್ನ ಮದ್ವೆಯಂತೆ ನಿದ್ದೆ ಬರ್ತಿಲ್ಲ… ಮತ್ತೆ ಮೈಕ್ ಸೆಟ್ಟು ಜೋರಾಗಿ ವದರತೊಡಗಿತು.


  • ಮಂಜಯ್ಯ ದೇವರಮನಿ, (ವೃತ್ತಿಯಲ್ಲಿ ಸರಕಾರಿ ಶಾಲಾ ಶಿಕ್ಷಕ. “ಕರಿಜಾಲಿ ಮರ” ಪ್ರಕಟಿತ ಕಥಾಸಂಕಲನ. ಚಾರಣ ಮತ್ತು ಚಿತ್ರಕಲೆ ನೆಚ್ಚಿನ ಹವ್ಯಾಸಗಳು) ಸಂಗಾಪುರ.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW