ಪ್ರಕೃತಿಯ ಕೂಸು ದೇವಸ್ಥಾನಗಳ ಬಾಸು ಭೀಮಾ ನದಿ

ಕರ್ನಾಟಕದ ನೆರೆಯ ರಾಜ್ಯವಾದ ಮಹಾರಾಷ್ಟ್ರದಲ್ಲಿ ಜನ್ಮ ತಾಳುವ ಪ್ರತಿ ಕ್ಷೇತ್ರಕ್ಕೂ ತನ್ನದೆಯಾದ ಕೊಡುಗೆ ನೀಡುತ್ತಿರುವ ಬಿಸಿಲು ನಾಡಿನ ಕಣ್ಮಣಿ ಭೀಮಾ ನದಿ, ಅವಿನಾಶ ಸೆರೆಮನಿ ಅವರು ‘ನದ – ನದಿಗಳ ನಿನಾದ’ ಅಂಕಣದಲ್ಲಿ ಪ್ರಕೃತಿಯ ಕೂಸು ದೇವಸ್ಥಾನಗಳ ಬಾಸು ಭೀಮಾ ನದಿ ಕುರಿತಾಗಿದ್ದು , ತಪ್ಪದೆ ಮುಂದೆ ಓದಿ…

ಕರ್ನಾಟಕದ ನೆರೆಯ ರಾಜ್ಯವಾದ ಮಹಾರಾಷ್ಟ್ರದಲ್ಲಿ ಜನ್ಮ ತಾಳಿ ತಾ ಹುಟ್ಟಿದ ಸ್ಥಳ ಮತ್ತು ಸುತ್ತ ಮುತ್ತಲಿನ ಜೀವ ಸಂಕುಲಗಳ ಪೋಷಿಸುತ್ತ ತನ್ನ ಸಾಮ್ರಾಜ್ಯ ಸ್ಥಾಪಿಸುತ ಕಿಕ್ಕಿರಿದಡವಿಗಳಂಚನು ಸ್ಪರ್ಶಿಸುತ ಮುನ್ನಡೆದು ದಿಕ್ಕು ದಿಕ್ಕುಗಳಲ್ಲಿ ಸದಾ ಹರಿಯುತ,ನಿಸರ್ಗದ ಮಡಿಲಲಿ ಮೈಮರೆಸುತ ,ನೈಸರ್ಗಿಕ ಸಂಪನ್ಮೂಲಗಳನ್ನು ದ್ವಿಗುಣಗೊಳಿಸುತ ವಯ್ಯಾರದಿ ಆಂಧ್ರದ ಗಡಿಗುಂಟ ಪ್ರಶಾಂತದಿ ಸಾಗುತ ಪ್ರತಿ ಕ್ಷೇತ್ರಕ್ಕೂ ತನ್ನದೆಯಾದ ಕೊಡುಗೆ ನೀಡುತ್ತಿರುವ ಬಿಸಿಲು ನಾಡಿನ ಕಣ್ಮಣಿ ಭೀಮಾ ನದಿ.

ಈ ನದಿಯು ಮಹಾರಾಷ್ಟ್ರದ ಪುಣೆಯ ಹತ್ತಿರ ಭೀಮಾಶಂಕರ ಅರಣ್ಯ ಪ್ರದೇಶದಲ್ಲಿ ಉಗಮವಾಗಿದೆ. ನದಿಗಳು ನಿರ್ದಿಷ್ಟ ಪ್ರದೇಶದ ತಟದಲ್ಲಿಯೇ ಜನ್ಮ ತಾಳುತ್ತವೆ ಎಂದು ಹೇಳಲಾಗದು. ನೀರಿನ ಸೆಲೆಯ ಅಥವಾ ಇನ್ನಾವುದೇ ಪ್ರಾಕೃತಿಕ ಕಾರಣಾಂತರಗಳಿಂದ ನದಿಗಳು ಜನ್ಮ ತಾಳುತ್ತವೆ.ಈ ನದಿಯು ಕೂಡ ಹಚ್ಚು ಹಸಿರಿನಿಂದ ಕೂಡಿದ ದೇಶದ ಉಸಿರಾದ ಅರಣ್ಯ ಪ್ರದೇಶದಲ್ಲಿ ಜನಿಸಿದ್ದು ಬಹಳ ವಿಶೇಷವಾಗಿದೆ. ಒಮ್ಮೊಮ್ಮೆ ಪ್ರಕೃತಿಯು ಕೂಡ ವಿಸ್ಮಯಕಾರಿ ಸನ್ನಿವೇಶಗಳಿಗೆ ಸಾಕ್ಷಿಯಾಗುತ್ತದೆ ಎಂಬುದಕ್ಕೆ ಈ ನದಿಯ ಹುಟ್ಟಿದ ಸ್ಥಳವೇ ಕಾರಣ. ಎಲ್ಲವನ್ನು ತನ್ನೊಳಗೆ ಇಟ್ಟುಕೊಂಡು ಪ್ರತಿ ಉಸಿರಿಗೂ ತನ್ನಿಂದ ಸಾಧ್ಯವಾದ ಜೀವಿಸಲಿಕ್ಕೆ ಅವಶ್ಯಕವಾದ ಎಷ್ಟು ದುಡ್ಡು ಕೊಟ್ಟರೂ ಕೊಂಡು ಕೊಳ್ಳಲಾಗದ ಆಮ್ಲಜನಕ, ಪ್ರಶಾಂತತೆ, ಗಾಳಿ, ನೆಮ್ಮದಿ, ನೀರು ಹೀಗೆ ಇನ್ನು ಕೆಲವು ನೈಸರ್ಗಿಕದತ್ತವಾದ ಅವಶ್ಯಕಗಳನ್ನು ಉಚಿತವಾಗಿ ನೀಡುತ ಪೊರೆಯುವ ಪ್ರಕೃತಿಯು ನದಿಗಳಿಗೆ ಆಧಾರ ಸ್ತಂಭವಾಗಿದೆ. ಅಂತಹದರಲ್ಲಿ ಈ ನದಿಯೂ ಕೂಡ ಒಂದು.

ಫೋಟೋ ಕೃಪೆ : google

ಇದು ಬಹಳ ವಿಸ್ತಾರವಾದ ಪ್ರದೇಶವನ್ನು ಹೊಂದಿದ್ದು ಆಂಧ್ರದ ಗಡಿಯ ಹತ್ತಿರ ನಮ್ಮ ನಾಡಿನ ಶ್ರೇಷ್ಠ ನದಿಯಾದ ಕೃಷ್ಣೆಯನ್ನು ಸೇರುತ್ತದೆ. ಇದು ಕರ್ನಾಟಕದಲ್ಲಿ ತನ್ನದೆಯಾದ ವಿಸ್ತಾರತೆಯನ್ನು ಹೊಂದಿದ್ದು ಒಟ್ಟು 861 ಕಿಮೀ ಪ್ರದೇಶವನ್ನು ಆವರಿಸಿಕೊಂಡಿದೆ. ತನ್ನದೆಯಾದ ವಿಶಿಷ್ಟತೆಗಳಿಂದ ಕೂಡಿದ್ದು ಈ ನದಿಗೆ ಚಂದ್ರಭಾಗ ನದಿ ಎಂತಲೂ ಕರೆಯುವರು.ಇದು ಪಶ್ಚಿಮ ಭಾರತ ಮತ್ತು ದಕ್ಷಿಣ ಭಾರತದ ಅತ್ಯಂತ ಪ್ರಮುಖ ಮತ್ತು ಪ್ರಾಮುಖ್ಯತೆಯನ್ನು ಹೊಂದಿರುವುದಾಗಿದೆ.

ಇದು ಕರ್ನಾಟಕದಲ್ಲಿ ಮೊದಲ 65 ಕಿಮೀಗಳ ನಂತರ ಕಿಕ್ಕಿರಿದ ಕಣಿವೆಯಲ್ಲಿ ಅಸಮತೋಲಿತವಾದ ಭೂಪ್ರದೇಶದ ಮೂಲಕ ಮುನ್ನುಗ್ಗುತ್ತಾ ಹಸಿರ ಸಿರಿಯನ್ನು ತಣಿಸುತ್ತಾ ಚೆಲುವನ್ನು ಧಾರೆ ಎರೆಯುತ್ತಾ ಮುನ್ನುಗ್ಗಿ ನೂರಾರು ಕಣಿವೆ ಮತ್ತು ಅಡವಿಗಳಿಗೆ ವರದಾನವಾಗಿದೆ.ಈ ನದಿ ಸುತ್ತಮುತ್ತಲೂ ಒರಟಾದ ಭೂಪ್ರದೇಶ ಇರುವುದರಿಂದ ಅಗಾಧವಾದ ಜನಸಂಖ್ಯೆ ಹೊಂದಿರುವ ಸಾವಿರಾರು ಎಕರೆಯ ಫಲವತ್ತಾದ ಕೃಷಿ ಭೂಮಿಯನ್ನು ರೂಪಿಸಿದ್ದು ಕೂಡ ಈ ನದಿಯ ಕಾಯಕಲ್ಪವನ್ನು ತಿಳಿಸುತ್ತದೆ.

ಇದು ಕರ್ನಾಟಕದ ಆಗ್ನೇಯ ದಿಕ್ಕಿನತ್ತ ಹರಿಯುತ್ತ ಅನೇಕ ಸಣ್ಣ ಸಣ್ಣ ನದಿಗಳನ್ನು ಸೇರುತ್ತ ಅವುಗಳಿಗೆ ಉಸಿರಾಗಿರುತ್ತದೆ.ಇದು ಮಹಾರಾಷ್ಟ್ರದ ಸಹ್ಯಾದ್ರಿಯ ಘಟ್ಟದ ಪುಣ್ಯ ಕ್ಷೇತ್ರದ ಭೀಮಾಶಂಕರ ದೇವಾಲಯದ ಹತ್ತಿರ ಜನಿಸುವುದರಿಂದ ಇದು ಧಾರ್ಮಿಕ ಕ್ಷೇತ್ರಕ್ಕೂ ಉಸಿರಾಗಿದೆ ಎಂಬುದು ಸ್ಪಷ್ಟವಾಗುತ್ತದೆ.ಅಲ್ಲದೆ ಇದರ ಜನ್ಮಸ್ಥಳದ ಹತ್ತಿರವೇ ಭೀಮಾಶಂಕರ ವನ್ಯಜೀವಿ ಅಭಯಾರಣ್ಯ ಇರುವುದರಿಂದ ಸುತ್ತಮುತ್ತಲಿನ ಪರಿಸರದ ಸ್ವಾಸ್ಥತೆಯನ್ನು ಕಾಪಾಡಿ ವೈವಿಧ್ಯಮಯ ಪ್ರಾಣಿಗಳು, ಪಕ್ಷಿಗಳ ಪ್ರಭೇದಗಳಿಗೆ ತಾಯಾಗಿ ಸದಾ ಪೊರೆಯುತ್ತದೆ. ಇಲ್ಲಿ ಇದು ಖೇಡ್ ತಾಲೂಕನ್ನು ಪ್ರವೇಶಿಸಿ ಜನರ ಜೀವನಕ್ಕೆ ಮತ್ತು ಕೃಷಿಗೆ ನೀರು ಒದಗಿಸುವುದರ ಮೂಲಕ ಅಸಂಖ್ಯಾತ ರೈತರ ಬಾಳಿಗೆ ದೀವಿಯಾಗಿದೆ.

ಫೋಟೋ ಕೃಪೆ : google

ಈ ನದಿಯು ಪ್ರಾಕೃತಿಕವಾದ ಅಗಮ್ಯ ಸಂಪನ್ಮೂಲಗಳ ತವರು. ಇದು ಹಲವಾರು ಉಪನದಿಗಳನ್ನು ಹೊಂದಿದ್ದು ಪ್ರತಿ ಉಪನದಿಗಳು ತಮ್ಮದೇ ಆದ ಬಹುಪಯೋಗಿ ಉದ್ದೇಶಗಳನ್ನು ಹೊಂದಿವೆ. ಪ್ರಮುಖವಾದ ಉಪನದಿಗಳೆಂದರೆ ಚಂದಾನಿ, ಕಾಮಿನಿ, ಮೊಶಿ ಬೋರಿ, ಸೀನಾ,ಮಾನ್ ಮತ್ತು ಭೋಗಾವತಿ ನದಿ.ಇಂದ್ರಾಯಣಿ ನದಿ, ಘೋಡ್ , ಪಾವನ, ಕಾಗ್ನ, ಬೆನಿಟುರಾ ನದಿ. ಇವುಗಳೆಲ್ಲವೂ ಸಾವಿರಾರು ಹೆಕ್ಟೇರ್ ಭೂಮಿಗೆ ನೀರುಣಿಸಿ ವಿದ್ಯುಚ್ಛಕ್ತಿ ಉತ್ಪಾದನೆಗೆ ಸಹಕಾರಿಯಾಗಿವೆ ಅಲ್ಲದೆ ಈ ಉಪನದಿಗಳಿಗೆ ಅಲ್ಲಲ್ಲಿ ಅಣೆಕಟ್ಟು ನಿರ್ಮಿಸಿ ಕೃಷಿ,ಕುಡಿಯುವ ನೀರಿಗೆ ಅನುಕೂಲವನ್ನು ಕಲ್ಪಿಸಲಾಗಿದೆ.

ಈ ಉಪನದಿಗಳು ಹರಿಯುವ ದಿಕ್ಕಿನಲ್ಲಿ ಅಲ್ಲಲ್ಲಿ ಡ್ಯಾಮ್ ಜಲಾಶಯಗಳನ್ನು ನಿರ್ಮಾಣ ಮಾಡಿ ಕೃಷಿ,ಕೈಗಾರಿಕೆ ಅಲ್ಲದೆ ಸುತ್ತಮುತ್ತಲಿರುವ ಎಲ್ಲ ಜೀವರಾಶಿಗಳಿಗೆ ಆಶ್ರಯವನ್ನು ನೀಡುತ್ತಾ,ಪೋಷಿಸುತ್ತಾ ಬದುಕಿಗೆ ಉಸಿರಾಗಿದೆ. ವಿವಿಧ ರೀತಿಯ ಅಣೆಕಟ್ಟುಗಳ ಮೂಲಕ ತನ್ನ ಪಥವನ್ನು ಬದಲಿಸುವ ಈ ನದಿ ಅಲ್ಲಲ್ಲಿ ನಿಸರ್ಗವನ್ನು ಪ್ರವೇಶಿಸುವ ಮೂಲಕ ಇನ್ನಷ್ಟು ಹಸಿರಸಿರಿಗೆ ಚೆಲುವು ,ಸೌಂದರ್ಯವನ್ನು ಧಾರೆ ಎರೆಯುತ ಮುನ್ನಡೆಯುತ್ತದೆ.ಗಿಡಗಳ ನಡುವೆ ಮುಂದೆ ಸಾಗುವ ದೃಶ್ಯವು ಪರಿಸರ ಪ್ರೇಮಿಗಳ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತದೆ.ಹಾಗಾಗಿ ಈ ನದಿ ಪ್ರಾಕೃತಿಕವಾಗಿ ಅಷ್ಟೇ ಅಲ್ಲದೆ ಮಾನಸಿಕವಾಗಿ ಮನುಜನಿಗೆ ನೆಮ್ಮದಿಯ ಸಂಜೀವಿನಿಯಾಗಿದೆ.

ಈ ನದಿಯ ಜಲಾನಯನ ಪ್ರದೇಶದ ಒಟ್ಟು ವಿಸ್ತೀರ್ಣ 70614 ಚದರ ಕಿಮೀ ಇದ್ದು .ಈ ನದಿಯ ತೀರದ ಪ್ರದೇಶ ವಾಸಿಸಲು ಯೋಗ್ಯವಿದ್ದು ಜನವಸತಿಗೆ ಸೂಕ್ತವಾಗಿದೆ.ಈ ತೀರದ ಒಟ್ಟು ಜನಸಂಖ್ಯೆ ಸುಮಾರು 12.33 ಮಿಲಿಯನ್ ಬರ ಬರುತ್ತಾ ವಾಸಿಸುವ ಜನರ ಸಂಖ್ಯೆ ಅಧಿಕವಾಗುತ್ತಿದ್ದು 2030ರ ವೇಳೆಗೆ 30.90 ಮಿಲಿಯನ್ ದಷ್ಟು ಜನರು ವಾಸಿಸಬಹುದು ಎಂದು ಅಂದಾಜಿಸಲಾಗಿದೆ. ಹಾಗಾಗಿ ಈ ನದಿ ತೀರ ಅಗಾಧ ಫಲವತ್ತಾದ ಮಣ್ಣು ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ಹೊಂದಿದ್ದು ಜನರನ್ನು ಆರ್ಥಿಕವಾಗಿ ಸದೃಢಗೊಳಿಸುತ್ತ ಸಂತೃಪ್ತ ಜೀವನಕ್ಕೆ ಉತ್ತೇಜಿಸುವುದರ ಜೊತೆಗೆ ನೆಮ್ಮದಿಯ ಬದುಕಿಗೆ ವರವಾಗಿದೆ.

ಫೋಟೋ ಕೃಪೆ : google

ಈ ಜಲಾನಯನ ಪ್ರದೇಶದ 75% ರಷ್ಟು ಮಹಾರಾಷ್ಟ್ರ ರಾಜ್ಯದಲ್ಲಿದ್ದು ಇಲ್ಲಿನ ಜನರಿಗೆ ಸಾಮಾಜಿಕವಾಗಿ, ಆರ್ಥಿಕವಾಗಿ, ಸಂಸ್ಕೃತಿಕವಾಗಿ,ಮುನ್ನಡೆಯಲು ಈ ನದಿಯು ಭದ್ರಬುನಾದಿಯಾಗಿದೆ.ಈ ನದಿಯು ಹರಿಯುವ ಬಹಳಷ್ಟು ತೀರದಲ್ಲಿ ದೇವಾಲಯಗಳು ಸ್ಥಾಪನೆಯಾಗಿ ಧಾರ್ಮಿಕ ಕ್ಷೇತ್ರಕ್ಕೆ ಈ ನದಿ ತನ್ನದೆಯಾದ ಕೊಡುಗೆಯನ್ನು ಕೂಡ ನೀಡಿದ್ದು ಈ ನದಿಯ ಎಲ್ಲ ಕ್ಷೇತ್ರಕ್ಕೂ ವರವಾಗಿದ್ದು ನಿಜಕ್ಕೂ ಪುಣ್ಯವೇ ಸರಿ. ಈ ನದಿ ತಟದಲ್ಲಿ ಸ್ಥಾಪಿತವಾದ ಪ್ರಮುಖ ದೇವಾಲಯಗಳು ಇಂತಿವೆ. ಭೀಮಾಶಂಕರ ಇದು ಹನ್ನೆರಡು ಜ್ಯೋತಿರ್ಲಿಂಗ ಗಳನ್ನು ಹೊಂದಿದ್ದು ಪ್ರಮುಖ ಪುಣ್ಯಕ್ಷೇತ್ರವಾಗಿದೆ.ದೇಶದ ಪ್ರಮುಖ ಧಾರ್ಮಿಕ ಕ್ಷೇತ್ರವಾದ ಪಂಢರಪುರದ ವಿಠ್ಠಲ ದೇವಸ್ಥಾನ,ಮಲ್ಲಿಕಾರ್ಜುನ ದೇವಸ್ಥಾನ ಚಿನ್ಮಲ್ಲಿ ಕಲಬುರಗಿ,ಸನ್ನತಿ ಚಂದ್ರಲಾ ಪರಮೇಶ್ವರಿ ದೇವಸ್ಥಾನ, ಘತ್ತರಗಿ ಭಾಗಮ್ಮ, ಕನಗನಹಳ್ಳಿ ಬೌಧಕ್ಷೇತ್ರ ಇನ್ನು ಹಲವಾರು ದೇವಸ್ಥಾನಗಳು ಈ ನದಿ ದಡದಲ್ಲಿ ಸ್ಥಾಪಿತವಾಗಿ ಧಾರ್ಮಿಕ ಕ್ಷೇತ್ರಕೆ ಅಮೂಲ್ಯ ಸಂಪತ್ತಾಗಿದೆ.

ಈ ನದಿಯ ಜಲಾನಯನ ಪ್ರದೇಶದಲ್ಲಿ ಒಟ್ಟು 22 ಅಣೆಕಟ್ಟುಗಳಿವೆ.ಪ್ರತಿ ಅಣೆಕಟ್ಟುಗಳು ಅಧಿಕ ಪ್ರಮಾಣದ ನೀರನ್ನು ಸಂಗ್ರಹಿಸುವ ಸಾಮರ್ಥ್ಯವನ್ನು ಹೊಂದಿವೆ.ಪ್ರಮುಖವಾದ ಅಣೆಕಟ್ಟುಗಳು. ಉಜ್ಜನಿ, ಭಟ್ಘರ್, ಮುಲ್ಶಿ, ವರಸಗಾಂವ್, ಡಿಂಬೆ, ಪಂಚೆಟ್, ವೀರ್, ಪಾವನ, ಯಡ್ ಗಾವ, ಖಡಕವಾಸಲ, ಕಲಾಮೋಡಿ ಇತ್ಯಾದಿ ಇತರ ಅಣೆಕಟ್ಟುಗಳನ್ನು ಹೊಂದಿದ್ದು ಮಹಾರಾಷ್ಟ್ರ, ಕರ್ನಾಟಕ ರಾಜ್ಯದ ಕೆಲ ಜಿಲ್ಲೆಗಳಿಗೆ ಉಸಿರಾಗಿದೆ.ಈ ಅಣೆಕಟ್ಟುಗಳು ಜಲವಿದ್ಯುತ್ ಶಕ್ತಿಯನ್ನು ಅಗಾಧ ಪ್ರಮಾಣದಲ್ಲಿ ಉತ್ಪಾದಿಸುತ್ತಿದ್ದು ನೂರಾರು ನಗರಗಳನ್ನು,ಹಳ್ಳಿಗಳನು ಬೆಳಗುತಿವೆ.

ಪ್ರಸ್ತುತ ಈ ನದಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದ್ದು ವಿದ್ಯುತ ಉತ್ಪಾದನೆಯನ್ನು ಕಡಿಮೆಗೊಳಿಸಿ ಕೃಷಿ ಮತ್ತು ಕುಡಿಯುವ ನೀರಿಗೆ ಮಾತ್ರ ಬಳಸುವ ಯೋಚನೆ ಮಾಡುತ್ತಿದ್ದಾರೆ. ಅಲ್ಲದೆ ಅಗಾಧ ಪ್ರಮಾಣದ ನೀರನ್ನು ನೀರಾವರಿಯ ಉದ್ದೇಶಗಳಿಗೆ ಬಳಸಲಾಗುತ್ತಿದ್ದು ರಾಯಚೂರು ಜಿಲ್ಲೆಯ ಕೆಲ ಮಟ್ಟಿಗೆ ಕೃಷಿಗೆ ಯೋಗ್ಯವಾಗಿದ್ದು.ಸರ್ಕಾರವು ಕೂಡ ಈ ನದಿಯ ನೀರು ಸಮರ್ಪಕವಾಗಿ ಬಳಸಲು ಯೋಜನೆಗಳನ್ನು ಹಾಕಿಕೊಂಡು ಈ ನದಿ ಹರಿಯುವ ನಾಡಿಗೆ ಸಾಧ್ಯವಾದಷ್ಟು ಇದರಿಂದಾಗುವ ಅನುಕೂಲ ಒದಗಿಸಿದರೆ ಈ ಭಾಗದ ಜನರು ಆರ್ಥಿಕವಾಗಿ ಪ್ರಬಲರಾಗುತ್ತಾರೆ.

ಒಟ್ಟಿನಲ್ಲಿ ಭೀಮಾನದಿ ದೇವಸ್ಥಾನದ ಸ್ಥಳದಲ್ಲಿಯೇ ಜನಿಸಿ ಧಾರ್ಮಿಕತೆಗೆ ಮುನ್ನುಡಿ ಬರೆದು ಆರ್ಥಿಕವಾಗಿ, ಸಾಮಾಜಿಕವಾಗಿ,ಮಾನಸಿಕವಾಗಿ,ಬೌದ್ಧಿಕವಾಗಿ ಈ ನದಿಯು ನಾಡಿನ ಮಿಡಿತವಾಗಿ ದೇಶದ ಜಲಸಂಪನ್ಮೂಲಗಳಿಗೆ ಉಸಿರಾಗಿದೆ. ಹಾಗಾಗಿ ಈ ನದಿಯನ್ನು ಉಳಿಸಿ ಬೆಳೆಸಿಕೊಂಡು ಸ್ವಾಸ್ಥತೆ ಕಾಪಾಡುವುದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯ.

ಹಿಂದಿನ ಸಂಚಿಕೆಗಳು :


  • ಅವಿನಾಶ ಸೆರೆಮನಿ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading