‘ರಸಋಷಿಗೊಂದು ನುಡಿನಮನ’ ಕವನ

ಕವಿ ವೆಂಕಟಪ್ಪ ಪುಟ್ಟಪ್ಪನೆಂಬ ದೊಡ್ಡ ಹೃದಯದ ಕವಿಯ ಸಾಧನೆಯ ಗಾಥೆಯ ಅನಾವರಣ  ಶಿವದೇವಿ ಅವನೀಶಚಂದ್ರ ಅವರ ಲೇಖನಿಯಲ್ಲಿ ಕುವೆಂಪು , ತಪ್ಪದೆ ಮುಂದೆ ಓದಿ…

ಕುವೆಂಪು ನಾಮವೇ ಕಂಪನು ತರುವುದು
ಕನ್ನಡ ಪ್ರೇಮಿಯ ನಾಸಿಕಕೆ
ಪೆಂಪಿಗಿನ್ನೊಂದು ಹೆಸರು ಕನ್ನಡದ ಕಾಜಾಣ ಪುಟ್ಟಪ್ಪಗೆ
ಮಲೆನಾಡ ಕುಪ್ಪಳಿ ಸಹ್ಯಾದ್ರಿ ಗಿರಿಶ್ರೇಣಿ
ಸಾಧನೆಗೆ ಇಂಬಾಯ್ತು ಕವಿವರ್ಯನ
ಕವಿಶೈಲದಲಿ ಸೂರ್ಯೋದಯ
ಕಾಣ್ಕೆ ನೀಡಿತು ಕವಿಗೆ
ಜಗಮಂದಿರದಲಿ ಶಿವಸುಂದರನ

ಒಂದೊಂದು‌ ಜಡವೂ ಚೇತನವಾಗಿ
ಮಲೆಗಳ ಮಡಿಲಲ್ಲಿ ರಸಸಂಚಲನ
ಕಾಜಾಣ ಗಿಳಿ ಕೋಗಿಲೆಗಳ
ಕಂಠವದು
ಹರಿಸಿತು ಲೇಖನಿಯಲ್ಲಿ
ಕಾವ್ಯ ರಸಾಯನ

ಇದು ಕವಿ ವೆಂಕಟಪ್ಪ ಪುಟ್ಟಪ್ಪನೆಂಬ ದೊಡ್ಡ ಹೃದಯದ ಕವಿಯ
ಸಾಧನೆಯ ಗಾಥೆಯ ಅನಾವರಣ
ಹಾಡಾಗಿ ಕತೆಯಾಗಿ
ರಂಗಚೇತನವಾಗಿ ಪಡೆದ
ಬಾಳಿನನುಭವಗಳ
ದಿಗ್ದರ್ಶನ
ಶ್ರೀ ಸಾಮಾನ್ಯನನು ಭಗವದ್ಮಾನ್ಯ
ವಾಗಿಸಿದ
ವಿಶ್ವಮಾನವನ ಜೀವನ ದರ್ಶನ

ಕನ್ನಡದ ಕಸುವಾಗಿ ಕುಸುರಿಯಾಗಿ
ಕಂಡ ಜಗವ ಕನ್ನಡಿಸಿದ ಮಹಾನ್ ಸಾಧಕ
ನಾಡಗೀತೆಯ ಉಡಿಗೆ ದೇಶಪ್ರೇಮವ ಬಸಿದು
ಸ್ವಾತಂತ್ರ್ಯದ ಕಹಳೆಯೂದಿ
ನಾಡಿನಲ್ಲೆಲ್ಲ ಅನುರಣಿಸಿದ ಉದ್ದೀಪಕ

ವಿಚಾರ ಕ್ರಾಂತಿಗೆ ಕರೆನೀಡಿ
ತರುಣರ ಎಚ್ಚರಿಸಿ
ವಿಜ್ಞಾನಮತಿಯ ಪ್ರಜ್ವಲಿಸಿದ
ಈ ಕಬ್ಬಿಗ
ತತ್ವಶಾಸ್ತ್ರದ ಹೊಳಹು ತರ್ಕಶಾಸ್ತ್ರದ ಬಲವು
ಅಧ್ಯಾತ್ಮ ಸಿದ್ಧಿಗಳ ಹೂರಣದ ಸವಿಯು

ನಿರ್ಭೀತ ವಿಚಾರ ಸ್ವಾಭಿಮಾನ
ಸಚ್ಚಿಂತನ
ನೂರು ದೇವರ ನೂಕಿ ಭಾರತಾಂಬೆಯ ಪೂಜಿಸಿ
ದೀನದಲಿತರಿಗೆ ಕಾವ್ಯಗುರುವಾಗಿಸಿ
ಮೇಲುಕೀಳುಗಳ ಬುಡಮಟ್ಟ ತೊಲಗಿಸಿ

ವಿಶ್ವವಿದ್ಯಾಲಯವ ಕುಲಪತಿಯಾಗಿ ಮುನ್ನಡೆಸಿ
ಕನ್ನಡದ ತೇರಿನಲಿ ಕನ್ನಡಾಂಬೆ ಶೋಭಾಯಮಾನ
ಕನ್ನಡದ ಹಲವು ಮೊದಲುಗಳ ಪುರಸ್ಕಾರಗಳ ಬಾಚಿ ತಬ್ಬಿದ ಮೇಧಾವಿ
ಆದರೂ ಕೀರ್ತಿಶನಿಯನು ತೊಲಗಾಚೆ ಎಂದ

ಕಾನೂರು ಹೆಗ್ಗಡತಿ
ಮಲೆಗಳಲ್ಲಿ ಮದುಮಗಳು
ಶ್ರೀ ರಾಮಾಯಣದರ್ಶನದಿಂ
ಹರಿಯಿತು ಅನುಭವಗಳ ರಸಧಾರೆ,
ಅನುಭಾವಿಯ ತತ್ವಸಿರಿಯಿಂದ

ತಾ ಕಂಡ ಜಗವ ಕನ್ನಡಿಸುವ ಕಲೆಗೆ
ಅಕ್ಷರಲೋಕ ತಲೆಬಾಗಿ ವಂದಿಸಿತು ಕವಿಗೆ
ಬಾನೆತ್ತರಕೆ ಏರಿದರೂ
ನೆಲವ ಮರೆಯದೆ
ಬದುಕಿನ ಬಾಳಿದ
ಮಹೋನ್ನತ ರೀತಿಗೆ

ಜ್ಞಾನ ಪೀಠಸ್ಥ ಕವಿ
ದೀಪಸ್ತಂಭ ವಾಗಿ
ವೃದ್ಧಿಸುತ ಕನ್ನಡಿಗರ ಸಾಹಿತ್ಯದಭಿರುಚಿಯ
ನಿರುತ ತೋರುತಲಿಹನು
ಸಮನ್ವಯದ ನಡೆಯ
ಅಲ್ಪ ಬಾಳಿನ ಮಹೋನ್ನತ
ಸಾಧನಾ ತತ್ವವ

ಆಡು ಮುಟ್ಟದ ಸೊಪ್ಪಿಲ್ಲ ವೆಂಬಂತೆ
ಕವಿ ಪುಂಗವ ಕೃಷಿ ಮಾಡದ ಪ್ರಕಾರವಿಲ್ಲ
ಕಾವ್ಯೋದ್ಯಾನದಲಿ ವಿಹಾರವೇ ಚೆಂದ
ಶಿಶು ಸಾಹಿತ್ಯದಲೂ ಪರಿಷ್ಕೃತ
ಬಂಧ
ಕರಿಯ ಕನ್ನಡಿಯಲ್ಲಿ ಸೆರೆಹಿಡಿಯಬಹುದೆ
ವೈರಿಗಳ ಮನಗೆದ್ದ ಪ್ರತಿಭೆಯ
ಮಹಾನ್ ಎನ್ನದಿರೆ ಅರ್ಥವುಂಟೆ..?


  •  ಶಿವದೇವಿ ಅವನೀಶಚಂದ್ರ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading