‘ಮಲೆನಾಡೊಳಗಡೆ ಬರೆಯುತ ಕುಳಿತರೆ ಮಲೆಯನು ಮೀರಿಸಿದೆತ್ತರ ಕೃತಿಗಳು’… ನಮ್ಮ ಹೆಮ್ಮೆಯ ಕುವೆಂಪು ಅವರ ಜನ್ಮದಿನ, ಅವರ ಕುರಿತು ಕವಿ ಚನ್ನಕೇಶವ ಜಿ ಲಾಳನಕಟ್ಟೆ. ಅವರು ಬರೆದ ಒಂದು ಕವನವನ್ನು ತಪ್ಪದೆ ಮುಂದೆ ಓದಿ…
ಕನ್ನಡ ನಾಡಿನ ಹೆಮ್ಮೆಯ ಕಬ್ಬಿಗ
ಚಿನ್ನದ ಸಾಲುಗಳಿಳಿಸಿದ ನಾವಿಕ
ಮುನ್ನುಡಿಯಾಗಿವೆ ನಿನ್ನಯ ಕಾವ್ಯವು ಕವಿಕುಲ ತಿಲಕನು ನೀ
ನಿನ್ನನು ನೆನೆಯದ ಕವಿಗಳ ಕಾಣೆನು
ಮುನ್ನವೆ ನಮಿಸುತ ಬರೆವರ ಕಂಡೆನು
ಭಿನ್ನತೆ ನಿಮ್ಮಯ ಕಾವ್ಯದ ಪರಿಯೊಳು ಕವಿಮನೆ
ಹಿರಿಯನು ನೀ
ಅವಿತಿಹೆ ಗೌಪ್ಯದಿ ಸಾಲುಗಳೊಳಗಡೆ
ಕವಿಮನ ಹುಡುಕಿರೆ ತಟ್ಟನೆ ಕಾಣುವೆ
ಬುವಿಯಲಿ ಬರೆಯುವ ದೇವರು ಹುಟ್ಟಿದ
ನಿನ್ನಯ ರೂಪದಲಿ
ಸವಿಸವಿ ಭಾಷೆಯ ಕೀರುತಿ ಬೆಳಗಿದೆ
ನವನವ ಕವಿತೆಯ ಮಾಲೆಯ ಕಟ್ಟಿದೆ
ಸವೆಸಿದೆ ಕಾಯವ ಕನ್ನಡಕೋಸ್ಕರ ಕಾವ್ಯವ ಬರೆಯುತಲಿ
ಮಲೆನಾಡೊಳಗಡೆ ಬರೆಯುತ ಕುಳಿತರೆ
ಮಲೆಯನು ಮೀರಿಸಿದೆತ್ತರ ಕೃತಿಗಳು
ನೆಲೆಯಾಗಿರುವುದು ಕವಿಶೈಲದೊಳಗೆ ನಿನ್ನಯ ಛಾಪಿಹುದು
ಝುಳುಝುಳು ನಾದದಿ ಹೊಮ್ಮಿದ ಕಾವ್ಯವು
ನೆಲೆನಿಂತಿಹುದೀ ಹಸಿರಿನ ತಡಿಯಲಿ
ತಲೆಯನು ಬಾಗಿಸಿ ಭಕ್ತಿಯ ಭಾವದಿ ನಮಿಸುವ
ಕಾಯವಿದು.
- ಚನ್ನಕೇಶವ ಜಿ ಲಾಳನಕಟ್ಟೆ.
