ಹೇಳುವವರು ಹೇಳುತ್ತಲೆ ಇರುತ್ತಾರೆ

ಕೆಲವರು ಅದೆಷ್ಟೇ ಪ್ರಯತ್ನ ಪಟ್ಟರು ಸಣ್ಣವಾಗಲಾರರು.ಇನ್ನು ಕೆಲವರು ಅದೆಷ್ಟೇ ಪ್ರಯತ್ನ ಪಟ್ಟರು ದಪ್ಪವಾಗಲಾರರು.ಮನುಷ್ಯನಲ್ಲಿರುವ 5 ಬೆರಳುಗಳು ಒಂದೇ ಸಮ ಇರುವುದಿಲ್ಲ ಅಂದ ಮೇಲೆ ದಪ್ಪ, ಸಣ್ಣ ಬೇರೆಯವರ ಆಡು ಮಾತಿಗೆ ತಲೆ ಕೆಡಿಸಿಕೊಳ್ಳದೆ ಖುಷಿಯಾಗಿರಿ, ಆಶ್ರಿತ ಕಿರಣ್ (ಆಕೆ) ಅವರ ಒಂದು ಲೇಖನವನ್ನು ತಪ್ಪದೆ ಮುಂದೆ ಓದಿ…

ಸಾಮಾನ್ಯವಾಗಿ ಯಾವುದೇ ಸಮಾರಂಭ ಅಥವಾ ವಿಶೇಷ ಸಂದರ್ಭಗಳಲ್ಲಿ ಪರಸ್ಪರ ಭೇಟಿಯಾದಾಗ ಒಂದಿಷ್ಟು ಜನರಿಗೆ ಒಂದು ಅಭ್ಯಾಸವಿರುತ್ತದೆ..ಅವರ ಮೊದಲು ಮಾತು ಪ್ರಾರಂಭವಾಗುವುದು ಹೀಗೆ.. ಸಣ್ಣ ಇರುವವರನ್ನು ಕಂಡೊಡನೆ “ಏನು ಇಷ್ಟು ಸಣ್ಣ ಆಗಿದ್ಯಾ ಸರಿಯಾಗಿ ತಿನ್ನಲ್ವ ಹೇಗೆ? ” ಎನ್ನುವವರು ದಪ್ಪ ಇದ್ದವರನ್ನು ಕಂಡ ಕೂಡಲೆ ಒಂದೋ ನೇರವಾಗಿ “ಇಷ್ಟು ದಪ್ಪ ಇರಬಾರದು ಆರೋಗ್ಯಕ್ಕೆ ಒಳ್ಳೆಯದಲ್ಲ, ಸ್ವಲ್ಪ ವ್ಯಾಯಾಮ ಮಾಡು” ಎಂದು ಬುದ್ದಿ ಹೇಳುವವರೂ ಇದ್ದಾರೆ. ಇಲ್ಲ, ಹಿಂದಿನಿಂದ ಮಾತನಾಡಿಕೊಂಡು ಆಡಿಕೊಳ್ಳುವವರೂ ಇದ್ದಾರೆ…ಈ ಮಾತುಗಳನ್ನು ಕೇಳಿಸಿಕೊಂಡವರಿಗೆ ಯಾಕಾದರೂ ಬಂದೆನೋ ಎನಿಸುವಷ್ಟು ಮುಜುಗರದ ವಾತಾವರಣ ಸೃಷ್ಟಿಸಿ ಅವರ ಪಾಡಿಗೆ ಅವರು ಊಟ ಮಾಡಿ ಎದ್ದು ಹೋಗುತ್ತಾರೆ.

ಅಷ್ಟಕ್ಕೂ ದಪ್ಪ ಆಗಿದ್ದಿ, ಸಣ್ಣ ಆಗಿದ್ದಿ… ಎಂದು ಹೇಳದೆ ಮಾತನ್ನು ಆರಂಭಿಸಲು ಸಾಧ್ಯವೇ ಇಲ್ಲವೇ? ಈ ಪ್ರಶ್ನೆಗೆ ಉತ್ತರ ಕೊಡುವವರು ಬಹುಶಃ  ಯಾರು ಇಲ್ಲ. ಎಲ್ಲಾ ವಯಸ್ಸಿನವರು ಇದೊಂದು ಪ್ರಶ್ನೆಯನ್ನು ಎಲ್ಲಿಯೇ ಹೋದರು ಎದುರಿಸಲೇಬೇಕು. ತೊಟ್ಟಿಲಲ್ಲಿರುವ ಮಗುವಿನಿಂದ ಹಿಡಿದು ಓಡಾಡಲಾಗದೆ ಹಾಸಿಗೆಯಲ್ಲಿ ಮಲಗಿರುವ ವೃದ್ಧರನ್ನು ಸಹ ಈ ಪ್ರಶ್ನೆಯನ್ನು ಕೇಳುವುದನ್ನು ಬಿಡಲಾರರು. ಅಷ್ಟಕ್ಕೂ ದಪ್ಪವಿರಲಿ ಸಣ್ಣವಿರಲಿ ಅವರನ್ನು ಮಾತನಾಡಿಸುವುದಕ್ಕೆ ಅದೇ ವಿಚಾರ ಬೇಕೆ? ಅವರವರ ಜೀವನವನ್ನು ಅವರಿಷ್ಟದಂತೆ ಇಷ್ಟ ಪಟ್ಟು ಬದುಕಲು ಬಿಡಲು ಅದು ಎಂದು ಕಲಿಯುತ್ತಾರೋ ತಿಳಿಯದಾಗಿದೆ.

ಫೋಟೋ ಕೃಪೆ :google

ದಪ್ಪವಿದ್ದ ಮಾತ್ರಕ್ಕೆ ತಿನ್ನದೇ ದಪ್ಪವಾಗಿದ್ದಾರೆ ಎಂದರ್ಥವಲ್ಲ. ಹಾರ್ಮೋನ್ ಗಳ ಏರಿಳಿತದಿಂದ ಅಥವಾ ವಿಪರೀತ ಒತ್ತಡದಿಂದ ದಪ್ಪವಾಗುವ ಸಂಭವವಿರುತ್ತದೆ. ಹಾಗೆಯೇ ತುಂಬಾ ಸಣ್ಣ ಇದ್ದಾರೆ ಎಂದ ಮಾತ್ರಕ್ಕೆ ಅವರು ಏನೂ ತಿನ್ನುವುದಿಲ್ಲವೆಂದು ಅರ್ಥವಲ್ಲ. ಅವರಲ್ಲಿಯೂ ಸಹ ಹಾರ್ಮೋನ್ ಗಳ ಕೊರತೆ ಅಥವಾ ಒತ್ತಡ ಕಾರಣವಾಗಿರಬಹುದು.ಆದರೆ ನೋಡುವವರ ದೃಷ್ಟಿಯಲ್ಲಿ ಸಣ್ಣಗಿರುವವರು ತಿನ್ನಲಾರರು ದಪ್ಪಗಿರುವವರು ಅತಿಯಾಗಿ ತಿನ್ನುವವರು ಎಂದು ವಿಂಗಡಿಸಿಕೊಂಡಿದ್ದಾರೆ.

ಕೆಲವರಿಗೆ ತಿನ್ನುವ ಆಸೆ ಆದರೆ ಆರೋಗ್ಯದ ಸಮಸ್ಯೆಯಿಂದ ತಿನ್ನಲಾಗದು .ಇನ್ನು ಕೆಲವರು ದಪ್ಪ ಆಗುತ್ತಿಯಾ ಎಂದು ಹೇಳುತ್ತಾರೆಂದು ತಿನ್ನುವುದನ್ನು ನಿಲ್ಲಿಸುವವರಿದ್ದಾರೆ.ಅಷ್ಟಕ್ಕೂ ಯಾರಿಗೋಸ್ಕರವೂ ಬದುಕುವುದಾದರೆ ನಮ್ಮ ಬದುಕನ್ನು ನಾವು ಯಾವಾಗ ಬದುಕಬೇಕು?.

ಮದುವೆಗೆ ಮೊದಲು ದಪ್ಪವಿದ್ದರೆ ನಿನ್ನನ್ನು ಯಾರು ಮದುವೆಯಾಗುತ್ತಾರೆ? ಮೊದಲು ಸ್ವಲ್ಪ ಸಣ್ಣವಾಗು ಎಂದು ಸಲಹೆ ಕೊಡುವವರೇ ಹೆಚ್ಚು. ಮದುವೆಯಾದ ಮೇಲೆ ದಪ್ಪವಾದರೆ ಅದರಲ್ಲೂ ಹೆಣ್ಣು ಮಕ್ಕಳು ಮದುವೆಯಾದ ಮೇಲೆ ದಪ್ಪವಾದರಂತೂ ಮಕ್ಕಳು ಹೇಗೆ ಆಗುತ್ತದೆ ಅಥವಾ ದಪ್ಪವಿರುವುದಕ್ಕೆ ಮಕ್ಕಳಾಗುತ್ತಿಲ್ಲ ಎಂದು ಹೇಳುವವರೇ ಹೆಚ್ಚು. ಮದುವೆಯಾದ ಗಂಡು ದಪ್ಪವಾದರೆ ಹೆಂಡತಿಯ ಕೈ ರುಚಿ ಚೆನ್ನಾಗಿ ಹಿಡಿಸಿದೆ ಇರಬೇಕು ಎಂದು ರೇಗಿಸುತ್ತಾರೆ. ಮಕ್ಕಳಾದ ಮೇಲೆ ದಪ್ಪವಾದರೆ ಬಹುಶಃ  ಮಗು ತಂಟೆ ಮಾಡುವುದಿಲ್ಲವೆಂದು ಕಾಣುತ್ತದೆ. ಆರಾಮಾಗಿ ತಿಂದು ದಪ್ಪವಾಗಿದ್ದಾಳೆ ಅನ್ನುತ್ತಾರೆ. ಇದರಲ್ಲಿ ಸ್ಪಷ್ಟವಾಗಿ ಗಮನಿಸಬೇಕಾದ ಒಂದು ಮುಖ್ಯವಾದ ವಿಷಯವಿದೆ. ಅದೇನಂದರೆ ಹೇಗಿದ್ದರೂ ದಪ್ಪಗಿರುವವರನ್ನು ಆಡಿಕೊಳ್ಳುವುದನ್ನು ಬಿಡಲಾರರು. ದಪ್ಪಗಿರುವವರು ಈ ರೀತಿಯಾಗಿ ಅವರ ಗೋಳನ್ನು ಹೇಳಿಕೊಂಡರೆ ಸಣ್ಣಗಿರುವವರು ಪಾಡು ಬೇರೆ.

ಯಾವುದಾದರೂ ಡಾಕ್ಟರ್ ಬಳಿ ತೋರಿಸು ಏನು ಇಷ್ಟು ಸಣ್ಣ ಆಗಿದ್ದೆ ಎಂದು ಹೇಳುವ ವರ್ಗವೊಂದಾದರೆ ಹಾಳು ಮೂಳು ಎಲ್ಲಾ ತಿಂತಿ. ಅದಕ್ಕೆ ಇಷ್ಟು ಸಣ್ಣ ಆಗಿದ್ದೆ ಸರಿಯಾಗಿ ಊಟ ತಿಂಡಿ ತಿನ್ನು ಎಂದು ಹೇಳುವ ವರ್ಗ ಒಂದಿದೆ. ಇದನ್ನು ಹೊರತುಪಡಿಸಿ ತುಂಬಾ ತೆಳ್ಳಗಿದ್ದಿಯ ನಿನ್ನನ್ನು ಯಾರು ಮದುವೆಯಾಗುತ್ತಾರೆ ಸಣ್ಣ ಮಕ್ಕಳಂತೆ ಕಾಣುತ್ತಿ ಎನ್ನುವ ವರ್ಗವೊಂದಾದರೆ ಮನಸ್ಸಿನಲ್ಲಿ ಅದೇನಿಟ್ಟು ಕೊರಗುತ್ತಿದ್ದೆ. ಇಷ್ಟು ಸಣ್ಣವಾಗಿದ್ಯಲ್ಲ ಎಂದು ಕನಿಕರದಿಂದ ವಿಚಾರಿಸುವ ವರ್ಗವು ಒಂದಿದೆ. ಸಣ್ಣಗಿದ್ದವರು ಮದುವೆಯಾದರೆ ಬಹುಶಃ  ಆ ಊರಿನ ವಾತಾವರಣ ಹಿಡಿಸುತ್ತಿಲ್ಲ ಎಂದು ಕಾಣುತ್ತದೆ ಅಥವಾ ಗಂಡನ ಮನೆಯಲ್ಲಿ ಒಗ್ಗಿಕೊಳ್ಳಲಾಗುತ್ತಿಲ್ಲ ಎಂದು ಕಾಣುತ್ತದೆ ಎಂದು ಮಾತನಾಡುವವರು ಒಂದೆಡೆಯಾದರೆ ಮದುವೆಯಾಗಿ ಮಕ್ಕಳನ್ನು ಪಡೆದ ಮೇಲೆ ಮಗು ವಿಪರೀತ ತೀಟೆ ಎಂದು ಕಾಣುತ್ತದೆ, ಒಂದು ಗಳಿಗೆ ಪುರುಸೊತ್ತಿಲ್ಲದಂತೆ ಕೆಲಸವಿರಬೇಕು. ಹಾಗಾಗಿ ಸಣ್ಣ ಆಗಿದ್ದಾರೆ ಎಂದು ನೋಡುಗರೆ ಪಟ್ಟಕೊಟ್ಟುಬಿಡುತ್ತಾರೆ.

ಫೋಟೋ ಕೃಪೆ : google

ಹಾಗಾದರೆ ನೋಡಲು ಹೇಗಿರಬೇಕು? ಸಣ್ಣಗೂ ಅಲ್ಲ.. ದಪ್ಪಗೂ ಅಲ್ಲ.. ಹೇಗಿದ್ದರೂ ಸಮಸ್ಯೆ. ಒಬ್ಬೊಬರ ಕಣ್ಣಿಗೆ ಒಂದೊಂದು ರೀತಿಯಲ್ಲಿ ಸಮಸ್ಯೆ ಕಂಡಿರುತ್ತದೆ. ಇತ್ತೀಚಿಗೆ ವಿದ್ಯಾರ್ಥಿನಿ ಒಬ್ಬಳು ತಾನು ದಪ್ಪಗಿದ್ದೇನೆ ನೋಡಲು ಚೆನ್ನಾಗಿ ಕಾಣುತ್ತಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಎಲ್ಲೆಡೆ ಸುದ್ದಿಯಾಗಿತ್ತು. ಆತ್ಮಹತ್ಯೆಯ ನಿಧಾರ ಮಾಡಲು ಆ ಹುಡುಗಿ ಅನುಭವಿಸಿದ ಮಾನಸಿಕ ವೇದನೆ ಅದೆಷ್ಟಿರಬಹುದು. ಅವಳನ್ನು ನೋಡಿದವರು ನೂರೆಂಟು ಸಲಹೆಗಳನ್ನು ಕೊಟ್ಟವರು ಅವಳ ಈ ಸಾವಾಗೆ ಒಂದರ್ಥದಲ್ಲಿ ಕಾರಣರು ಎಂದರೆ ತಪ್ಪಲ್ಲ ಅಲ್ಲವೇ? ದಪ್ಪಗಿರಲಿ ಸಣ್ಣಗಿರಲಿ ಮಾತನಾಡುವಾಗ ಆ ವಿಷಯವನ್ನು ಮಾತನಾಡದೆ ಇರುವುದು ಒಳಿತು.ಎದುರು ಸಿಕ್ಕಾಗ ಖುಷಿಯಿಂದ ನಾಲ್ಕು ಮಾತನಾಡಿದರೆ ಸಾಕು.ಆ ಮಾತು ಅವರ ಆಂತರಿಕ ಸೌಂದರ್ಯದ ಬಗ್ಗೆ ಅನವಶ್ಯಕ. ತೆಳ್ಳಗಿರುವವರಿಗೆ ಶಕ್ತಿ ಜಾಸ್ತಿ, ದಪ್ಪಗಿರುವವರಿಗೆ ಶಕ್ತಿ ಇರುವುದಿಲ್ಲ ದಪ್ಪಗಿದ್ದರೆ ಲಕ್ಷಣವಲ್ಲ ಅತಿ ತೆಳ್ಳಗಿದ್ದರೆ ಚಂದ ಕಾಣುವುದಿಲ್ಲ ಇಂತಹ ಮಾತುಗಳು ಆದಷ್ಟು ಬಾರದಂತೆ ನೋಡಿಕೊಳ್ಳುವುದು ಮಾನಸಿಕ ನೆಮ್ಮದಿಗಾಗಿ ಪ್ರಸ್ತುತ ಸಮಾಜದಲ್ಲಿ ಅತ್ಯವಶ್ಯಕವಾಗಿದೆ.

ಮನುಷ್ಯನಲ್ಲಿರುವ 5 ಬೆರಳುಗಳು ಒಂದೇ ಸಮ ಇರುವುದಿಲ್ಲ ಅಂತೆಯೇ. ಎಲ್ಲರೂ ಒಂದೇ ರೀತಿಯಲ್ಲಿ ಇರಲು ಸಾಧ್ಯವಿಲ್ಲ. ಕೆಲವರು ಅದೆಷ್ಟೇ ಪ್ರಯತ್ನ ಪಟ್ಟರು ಸಣ್ಣವಾಗಲಾರರು. ಇನ್ನು ಕೆಲವರು ಅದೆಷ್ಟೇ ಪ್ರಯತ್ನ ಪಟ್ಟರು ದಪ್ಪವಾಗಲಾರರು. ಹಾಗಾಗಿ ಅನವಶ್ಯಕ ಮಾತುಗಳಿಗೆ ತಲೆ ಕೆಡಿಸಿಕೊಂಡು ವಿಪರೀತ ಚಿಂತೆ ಮಾಡಿ ದಪ್ಪಗಿರುವವರು ಸಣ್ಣವಾಗಲು ಸಣ್ಣಗಿರುವವರು ದಪ್ಪವಾಗಲು ಪ್ರಯತ್ನಿಸಿ ಆರೋಗ್ಯವನ್ನು ಕೆಡಿಸಿಕೊಳ್ಳುವ ಬದಲು ಉತ್ತಮ ಆರೋಗ್ಯಕ್ಕೆ ಅದೇನು ಬೇಕೋ ಅಂತಹ ವ್ಯಾಯಾಮಗಳನ್ನು ಮಾಡಿ ತಿಂದುಂಡು ಮಲಗಿದರೆ ನೆಮ್ಮದಿಯಾಗಿ ಬದುಕಬಹುದು. ಮಾತನಾಡುವವರು ಮಾತನಾಡುತ್ತಲೇ ಇರುತ್ತಾರೆ ಮಾತಿಗೆ ತಲೆ ಕೆಡಿಸಿಕೊಳ್ಳದೆ ಮೊದಲು ನಾವಿರುವಂತೆ ನಮ್ಮನ್ನು ಪ್ರೀತಿಸುವುದನ್ನು ಕಲಿಯಬೇಕಿದೆ. ನಮ್ಮನ್ನು ನಾವೇ ಪ್ರೀತಿಸದಿದ್ದರೆ ಇನ್ಯಾರನೋ ಮೆಚ್ಚಿಸಿ ಬದುಕಿ ಏನು ಪ್ರಯೋಜನ? ಅಲ್ಲವೆ..?


  • ಆಶ್ರಿತ ಕಿರಣ್ (ಆಕೆ) – ಬೆಂಗಳೂರು

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading