“ನದಿ ದಾಟಿ ಬಂದವರು” ಪುಸ್ತಕ ಪರಿಚಯ

ಖ್ಯಾತ ಲೇಖಕರಾದ ಶಶಿಧರ ಹಾಲಾಡಿಯವರ “ನದಿ ದಾಟಿ ಬಂದವರು” ಕೃತಿಯು ಸಾಮಾಜಿಕ ಪರಿವರ್ತನೆಯ ಪ್ರತಿಬಿಂಬವಾಗಿದೆ. ಸ್ವಾತಂತ್ರ್ಯನಂತರ ಆಗುವ ಬದಲಾವಣೆಯನ್ನು ಈ ಕೃತಿಯ ಕಥೆಯಲ್ಲಿ ಓದಿ ತಿಳಿದರೆ ಚೆನ್ನಾಗಿರುತ್ತದೆ ಎಂದು ಲೇಖಕರಾದ ಎನ್.ವಿ.ರಘುರಾಮ್ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಲೇಖಕರು : ಶಶಿಧರ ಹಾಲಾಡಿ
ಪ್ರಕಾಶನ : ಅಂಕಿತ ಪುಸ್ತಕ.
ಬಿಡುಗಡೆ :೨೦೨೫
ಬೆಲೆ : ರೂ.೨೫೦/-

ಶ್ರೀಯುತ ಶಶಿಧರ ಹಾಲಾಡಿಯವರು ರಚಿಸಿದ “ನದಿ ದಾಟಿ ಬಂದವರು” ಕಾದಂಬರಿಯಲ್ಲಿ ಕಳೆದ ಶತಮಾನದ ಸುಮಾರು ನಲವತ್ತನೇಯ ದಶಕದಿಂದ ಎಪ್ಪತ್ತನೇ ದಶಕದವರೆಗೆ ಕಥೆಯ ಹರಿವು ಇದೆ. ಮಲೆನಾಡಿನ ಕರ್ಜೆ ಗ್ರಾಮದ ಗಟ್ಟಿ ಕುಳುವಾದ ನಾರಾಯಣ ಭಂಡಾರಿ ಬಳಿ ವಂಡಾರಿನಿಂದ ಓಡಿ ಬಂದು ಆರೆಂಟು ವರ್ಷಗಳಿಂದ ಗೇಣಿ ಮಾಡಿಕೊಂಡಿದ್ದ ಕುಯಿರ ನಾಯಕನ ಸಂಸಾರ ಈಗ ಮತ್ತೆ ಈ ಯಜಮಾನರ ಕೆಟ್ಟ ದೃಷ್ಟಿಯಿಂದ ತಪ್ಪಿಸಿಕೊಳ್ಳಲು ರಾತ್ರೋ ರಾತ್ರಿ ಊರು ಬಿಟ್ಟು, ನದಿಯೊಂದನ್ನು ದಾಟಿ, ದೂರ ಇರುವ ನೆಲ್ಯಾಡಿ ಎಂಬ ಹಳ್ಳಿಗೆ ವಲಸೆ ಹೋಗುವುದರಿಂದ ಕಥೆ ಪ್ರಾರಂಭವಾಗುತ್ತದೆ. ನೆಲ್ಯಾಡಿಯಲ್ಲಿ ವೆಂಕಣ್ಣಯ್ಯ ಮತ್ತು ಸಾಕಮ್ಮನ ಕುಟುಂಬ ಆಶ್ರಯ ಕೊಡುತ್ತದೆ. ನಂತರ ಹೊಸ ಜಾಗದಲ್ಲಿ ಆಶ್ರಯ ನೀಡಿದ ಕುಟುಂಬ ಹಾಗೂ ಆಶ್ರಯ ಪಡೆದ ಕುಟುಂಬಗಳ ನಡುವಿನ ಸಂಬಂಧಗಳ ಸುತ್ತ ಸುತ್ತುತ್ತಾ ಆಗಿನ ಕಾಲದ ಗ್ರಾಮೀಣ ಜನರ ಸಾಮಾಜಿಕ ಜೀವನ, ಆರ್ಥಿಕ ಸ್ಥಿತಿ-ಗತಿ, ಸಂಬಂಧಗಳ ಅನಾವರಣವಾಗುತ್ತದೆ.

ಸ್ವಾತಂತ್ರ್ಯ ಪೂರ್ವ ಕಾಲದಲ್ಲಿ ಆಶ್ರಯ ನೀಡಿದ ವೆಂಕಣ್ಣಯ್ಯ ಕುಟುಂಬ ಮತ್ತು ಆಶ್ರಯ ಪಡೆದ ಕುಯಿರ ನಾಯಕನ ಕುಟುಂಬದ ನಡುವೆ ಇದ್ದ ಸಂಬಂಧಗಳಲ್ಲಿ ಸಹಾನುಭೂತಿ, ನಂಬಿಕೆ ಮತ್ತು ನಿಯತ್ತುಗಳು ಪ್ರಧಾನವಾಗಿ ಕಂಡು ಬರುತ್ತದೆ. ಅದೇ ತರಹ ನಾರಾಯಣ ಭಂಡಾರಿಯ ತರಹ ಬಲಾಷ್ಟರು ಎಲ್ಲಾ ಕಡೆಯಲ್ಲೂ ಇರುವುದನ್ನು ಕಥೆ ತೋರಿಸುತ್ತದೆ. ಇವೆಲ್ಲಾ ಸ್ವಾತಂತ್ರ್ಯಾನಂತರ ಆಗುವ ಬದಲಾವಣೆಯನ್ನು ಕಥೆಯಲ್ಲಿ ಓದಿ ತಿಳಿದರೆ ಚೆನ್ನ.

ಈ ಕಾದಂಬರಿ ಓದುತ್ತಾ ಹೋಗುತ್ತಿರುವಂತೆ ನಾವು ಕೂಡ ಪಾತ್ರಧಾರಿಗಳ ಜೊತೆಗೆ ಮಲೆನಾಡಿನ ಗಿಡ, ಮರ, ಬಳ್ಳಿಗಳ ಸೌಂದರ್ಯವನ್ನು ಕಣ್ಣು ತುಂಬಿಸಿಕೊಳ್ಳುತ್ತಾ, ದಾರಿಯಲ್ಲಿ ಬರುವ ಸಂಕದ ಮೇಲೆ ಅಡ್ಡವಾಗಿ ಎಚ್ಚರಿಕೆಯಿಂದ ಹೆಜ್ಜೆ ಹಾಕುತ್ತಾ, ಗಂಜಿ ಊಟ ಮಾಡುತ್ತಾ, ಹಲಸಿನ ಹಪ್ಪಳ ತಿನ್ನುತ್ತಾ, ಉಪ್ಪಿನಕಾಯಿ ಬಾಯಿಗೆ ಹಚ್ಚಿಕೊಂಡು ನೀರು ಕಡಿಯುವ ಅನುಭವ ಆಗುತ್ತದೆ. ಕುಂದಾಪುರದ ಹತ್ತಿರವಿರುವ ಒಳನಾಡಿನ ಹಳ್ಳಿಯ ಚಿತ್ರಣದಲ್ಲಿ ಆಗಿನ ಕಾಲದ ಜೀವನ ಶೈಲಿ, ಮೂಢನಂಬಿಕೆಗಳು, ಸಂಬಂಧಗಳಿಗೆ ಕೊಡುತ್ತಿದ್ದ ಮಹತ್ವದ ಜೊತೆ ಜೊತೆಗೆ ಗಟ್ಟಿ ಕುಳಗಳ ಅಧಿಕಾರ, ದರ್ಪ, ಶೋಷಣೆ ಮತ್ತು ಮಲೆನಾಡಿನವರ ಸುಂದರ ಮನಸ್ಥಿತಿಯೂ ಅನಾವರಣವಾಗುತ್ತದೆ. ಸ್ವಾತಂತ್ರ್ಯ ಹೋರಾಟದ ಎಳೆಗಳು ಕಥೆಯಲ್ಲಿ ಹೆಣೆದುಕೊಂಡಿದೆ. ಸ್ವಾತಂತ್ರ್ಯ ತರುವ ಅಭಿವೃದ್ಧಿಯ ಬಗ್ಗೆ ಮೊದಲಿಗೆ ಆಶಾಭಾವನೆ ವ್ಯಕ್ತಪಡಿಸಿ, ನಂತರ ಸ್ವಾತಂತ್ರ್ಯ ಬಂದ ನಂತರ ಆದ ಸ್ಥಿತ್ಯಂತರದ ಚಿತ್ರಣವಿದೆ. ಹಾಗಾಗಿ “ಕುವೆಂಪು ಅವರ ಮಲೆನಾಡು ಮತ್ತು ಕಾರಂತರ ‘ಮರಳಿ ಮಣ್ಣಿಗೆ’ಯ ಕರಾವಳಿ – ಈ ಎರಡು ಸೀಮೆಗಳ ನಡುವಿನ, ಕರಾವಳಿಯ ಒಳಭಾಗದ ಕಾಡು, ಗುಡ್ಡ, ಗದ್ದೆ, ಹೊಳೆಗಳ ದಟ್ಟ ಪರಿಸರದಲ್ಲಿ ಬದುಕಿದ್ದವರ ಬದುಕಿನೊಳಗೆ ಲೇಖಕರು ಈ ಕಾದಂಬರಿಯಲ್ಲಿ ನಮ್ಮನ್ನು ಕರೆದೊಯ್ಯುತ್ತಾರೆ” ಎಂದು ಬೆನ್ನುಡಿಯಲ್ಲಿ ಡಾ.ಬಿ.ಜನಾರ್ದನ ಭಟ್ ಹೇಳಿರುವುದು ಅತ್ಯಂತ ಸೂಕ್ತವಾಗಿದೆ.

ದೂರದ ಎಲ್ಲೋ ನಡೆಯುವ ಎರಡನೇ ವಿಶ್ವಯುದ್ಧದ ಪರಿಣಾಮವಾಗಿ, ಬಹುಶಃ ‘ಜಾಗತೀಕರಣ’ ಪದ ಬಳಕೆ ಇಲ್ಲದೇ ಇರುವ ಕಾಲದಲ್ಲೂ, ಈ ಭಾಗದಲ್ಲಿ ಆಗುವ ಬೆಲ್ಲದ ಅಭಾವ ಮತ್ತು ಬೆಲ್ಲದ ಬೆಲೆ ಹೆಚ್ಚಳದ ವಿಷಯ ಗಮನ ಸೆಳೆಯುತ್ತದೆ. (ದೂರದ ಎಲ್ಲೋ ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುವ ಯುದ್ಧ ಭಾರತದ ಮೇಲೂ ಪರಿಣಾಮ ಬೀರಿರುವುದು ನಾವು ಈಗ ಕಾಣುತ್ತಿದ್ದೇವೆ).

ಬಹುಶಃ ಆಗಿನ ಜನರ ಜೀವನ ಈಗಿನ ಹಾಗೆ ಸಮಯದ ಹಿಂದೆ ಎಲ್ಲರೂ ಓಡುತ್ತಿರುವಂತೆ ಇರಲಿಲ್ಲ. ಹೊರಗಡೆಯಿಂದ ಚೆನ್ನಾಗಿಯೇ ಕಂಡರೂ ಆ ಕಾಲದ ಸಮಾಜದಲ್ಲೂ ಅಧಿಕಾರ ಚಲಾಯಿಸುವ, ಶೋಷಿಸುವ ಜನರಿಗೇನೂ ಕಡಿಮೆ ಇರಲಿಲ್ಲ. ಈ ರೀತಿಯ ಕಥೆಗೆ ತಕ್ಕಂತೆ ಕಥನದ ಶೈಲಿಯೂ ತನ್ನ ಒಡಲಿನಲ್ಲಿ ಅನೇಕ ಕಲ್ಲು, ಬಂಡೆಗಳನ್ನು ತುಂಬಿಕೊಂಡಿದ್ದರೂ, ಮೇಲುಗಡೆ ಪ್ರಶಾಂತವಾಗಿ ಹರಿಯುವ ನದಿಯಂತೆ ಇದ್ದು ಗಮನ ಸೆಳೆಯುತ್ತದೆ. ಅದರ ಜೊತೆಗೆ ಹಿತ ಮಿತವಾಗಿರುವ ಅಧ್ಯಾಯಗಳಲ್ಲಿ ಗ್ರಹಣದ ವಿಷಯ, ಸ್ವಾತಂತ್ರ್ಯೋತ್ಸವ ಆಚರಣೆ, ಪ್ರಥಮ ಬಾರಿ ಮತದಾನ ಮುಂತಾದ ಅನೇಕ ಘಟನೆಗಳ ಸುತ್ತ ಸಂಗತಿಗಳ ಅನಾವರಣ ಮಾಡಿಕೊಂಡು ಹೋಗಿರುವುದು ಈ ಕಥನದ ಇನ್ನೊಂದು ಮುಖ್ಯ ಅಂಶ. ಇದು ಕಾದಂಬರಿಯನ್ನು ಸರಾಗವಾಗಿ ಓದಿಸಿಕೊಂಡು ಹೋಗುವಂತೆ ಮಾಡುತ್ತದೆ.

ಗ್ರಹಣದ ಸಮಯದಲ್ಲಿ ಒನಕೆಯ ತುದಿಯಲ್ಲಿರುವ ಲೋಹದ ಭಾಗವನ್ನು ತೆಂಗಿನ ಮರಕ್ಕೆ ಬಡಿಯುವ ಪ್ರಸಂಗ ಮೂಢನಂಬಿಕೆಯ ಪ್ರತೀಕವಾಗಿ ಬಂದಿದೆ. ಸ್ವಾತಂತ್ರ್ಯ ಬಂದ ನಂತರ ಬರುವ ಸಾಕಮ್ಮನ ಪ್ರತಿಭಟನೆಯ ಫಟನೆಯು ಅಸ್ತಿತ್ವ ಉಳಿಸಿಕೊಳ್ಳಲು ಮಾಡುವ ಕೊನೆಯ ಪ್ರಯತ್ನದ ಪ್ರತೀಕವಾಗಿ ಬಂದಿದೆ. ಅದೇ ರೀತಿ ಕುಯಿರನಾಯಿಕನ ಮಗ ಸಿದ್ದ ನಾಯಕನ ಪತ್ನಿ ರೂಪ್ಲಿಬಾಯಿ ಬಸುರಿ ಆದಾಗ ಬಯಸುವ “ಗನಾ ಸೀರೆ”, ಶ್ರಮಿಕ ವರ್ಗದ ಹೊಸ ಆಶೋತ್ತರಗಳನ್ನು ಮೂಡಿಸಿರುವ ಪ್ರತೀಕವಾಗಿ ಬಂದಿದೆ. ಎಲ್ಲವನ್ನೂ ಅಲ್ಲಿಯ ಸ್ಥಳೀಯ ಭಾಷೆಯಲ್ಲಿ ನಿರೂಪಣೆ ಮಾಡಿರುವುದು ಕಾದಂಬರಿಗೆ ನೈಜತೆಯನ್ನು ತಂದುಕೊಟ್ಟಿದೆ.

ಕಾದಂಬರಿಯ ಪ್ರಮುಖ ಶಕ್ತಿಯೆಂದರೆ “ಅಧಿಕಾರ ಮತ್ತು ಹಕ್ಕು ಬದಲಾವಣೆ” ಎಂಬ ಅಂಶವನ್ನು ತೋರಿಸುವ ವಿಧಾನ. ಮೊದಲ ಚುನಾವಣೆ ಅಧಿಕಾರದ ಹಸ್ತಾಂತರವನ್ನು ತೋರಿಸಿದರೆ, ಪೂರ್ತಿಯಾದ ಸ್ವಾತಂತ್ರ್ಯ ಬರುವುದು ಆರ್ಥಿಕ ಸ್ವಾತಂತ್ರ್ಯ ಶ್ರಮ ಜೀವಿಗೆ ದೊರೆತಾಗ ಎಂದು ಹೇಳಿದಂತೆ ಇದೆ. ರೈತರ ಹಕ್ಕು, ಜಮೀನಿನ ಸ್ವಾಮ್ಯ, ಶ್ರಮ ಮತ್ತು ಶೋಷಣೆ, ವಲಸೆ, ಕಾನೂನು ಇತ್ಯಾದಿ ಅಂಶಗಳು ಇಲ್ಲಿ ಕೇವಲ ಕಥಾ ವಸ್ತು ಮಾತ್ರ ವಾಗಿರದೆ, ಸಾಮಾಜಿಕ ಪರಿವರ್ತನೆಯ ಸಾಕ್ಷಿಗಳೂ ಆಗಿವೆ. ಈ ಹಿನ್ನೆಲೆಯಲ್ಲಿ “ನದಿ ದಾಟಿ ಬಂದವರು” ಕಾದಂಬರಿಯು ಗೇಣಿ ಪದ್ಧತಿಯಲ್ಲಿ ಬದುಕುತ್ತಿದ್ದ ಕುಟುಂಬ ಮತ್ತು ಗೇಣಿ ಕೊಟ್ಟ ಕುಟುಂಬದವರ ಅನುಭವದ ಮೂಲಕ ಗ್ರಾಮೀಣ ಭಾರತದ ಸಾಮಾಜಿಕ ಇತಿಹಾಸದ ಮೇಲೆ ಬೆಳಕನ್ನು ಚೆಲ್ಲಿದೆ.

ಈ ಕಾದಂಬರಿಯಲ್ಲಿ ಆಶ್ರಯ ನೀಡಿದ ಕುಟುಂಬ ಮತ್ತು ಆಶ್ರಯ ಪಡೆದ ಕುಟುಂಬಗಳ ನಡುವಿನ ಸಂಬಂಧವು ಆರಂಭದಲ್ಲಿ “ಪೋಷಕ–ಅನುದಾನಿತ” ರೂಪದಲ್ಲಿ ಇದೆ. ಸ್ವಾತಂತ್ರ್ಯ ಬಂದ ನಂತರ ಮುಂದಿನ ಪೀಳಿಗೆಯ ಸಮಯದಲ್ಲಿ ಆಗುವ ಸ್ಥಿತ್ಯಂತರ ಈ ಕಾದಂಬರಿಯ ಪ್ರಧಾನ ವಸ್ತು. ಈ ರೀತಿಯ ವಿಷಯವನ್ನು ಇಟ್ಟುಕೊಂಡು ‘ಸಮಾಜವಾದ’ದ ನೆಲೆಯಲ್ಲಿ ಅಥವಾ ‘ಮಾರ್ಕ್ಸವಾದ’ದ ನೆಲೆಯಲ್ಲಿ ವಿಶ್ಲೇಷಣೆ ಮಾಡಲು ಹೋಗದೆ ಆಶ್ರಯ ಪಡೆದುಕೊಂಡುವರು ಮತ್ತು ಆಶ್ರಯ ಕೊಟ್ಟವರು ಮುಂದೆ ಹೇಗೆ ತಮ್ಮ ಸ್ವಾತಂತ್ರ್ಯವನ್ನು ಪಡೆದುಕೊಂಡರು ಎಂದು ತಣ್ಣಗೆ ಲೇಖಕರು ಓದುಗರ ಮುಂದೆ ತೆರೆದಿಡುತ್ತಾರೆ. ಈ ಕಾರಣದಿಂದಲೂ ಈ ಕಾದಂಬರಿ ಮನಸ್ಸಿಗೆ ಹತ್ತಿರವಾಗುತ್ತದೆ. ಆರ್ಥಿಕ ಪರಿವರ್ತನೆಗೆ ಪಟ್ಟಣಕ್ಕೆ ವಲಸೆ ಹೋಗುವ ಕುಟುಂಬ ನಗರೀಕರಣದ ಪ್ರಾರಂಭವನ್ನು ತೋರಿಸುವಂತೆ ಇದೆ.

“ನದಿ ದಾಟಿ ಬಂದವರು” ಗ್ರಾಮೀಣ ಭಾರತದಲ್ಲಿ ಶ್ರಮ, ಅಧಿಕಾರ ಮತ್ತು ಕಾನೂನಿನ ಪರಸ್ಪರ ಸಂಬಂಧಗಳ ಕುರಿತಾದ ಚಿಂತನೆಗೆ ದಾರಿ ಮಾಡಿಕೊಡುವ ಮನೋಜ್ಞ ಕಾದಂಬರಿ. ಈ ಕಾದಂಬರಿಯ ಮಹತ್ವವೆಂದರೆ, ಯಾವುದೇ “ಇಸಂ”ಗಳನ್ನು ಅಥವಾ “ವಾದ”ಗಳನ್ನು ಪ್ರತಿಪಾದಿಸಲು ಹೋಗದೆ, ಹಳ್ಳಿಯ ಇತಿಹಾಸವನ್ನು ಶುದ್ಧವಾದ ಜನಪರ ದೃಷ್ಟಿಕೋನದಿಂದ ನಿರೂಪಿಸಿರುವುದು. ಹೀಗಾಗಿ ಇದು ಸಾಹಿತ್ಯದ ಶುದ್ಧವಾದ ಕಾದಂಬರಿ ಆಗಿದ್ದರೂ ಸಮಾಜಶಾಸ್ತ್ರಕ್ಕೂ ಸಮಾನವಾಗಿ ಕೊಡುಗೆ ನೀಡುತ್ತದೆ.

ಶ್ರೀಯುತ ಶಶಿಧರ ಹಾಲಾಡಿಯವರ ಮೂರನೇ ಕಾದಂಬರಿ ಇದು. ಸಾಹಿತ್ಯ ವಿವಿಧ ಪ್ರಕಾರಗಳಲ್ಲಿ ಇವರು ಬರೆದ ೧೮ ಕೃತಿಗಳು ಇದುವರೆಗೆ ಪ್ರಕಟಗೊಂಡಿವೆ. ಇವರ ಸಾವಿರಕ್ಕೂ ಹೆಚ್ಚಿನ ಬರಹಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಕನ್ನಡ ನಾಡಿನ ಸಾರಸ್ವತ ಲೋಕ ಇವರ ಸಾಹಿತ್ಯ ಸೇವೆಯಿಂದ ಇನ್ನಷ್ಟು ಸಂಪದ್ಭರಿತವಾಗಲಿ ಎಂದು ಆಶಿಸುತ್ತೇನೆ.

ಉತ್ತಮ ಕಾದಂಬರಿ ಕೊಟ್ಟ ಶ್ರೀಯುತ ಶಶಿಧರ ಹಾಲಾಡಿಯವರಿಗೆ ಧನ್ಯವಾದಗಳು.


  • ಎನ್.ವಿ.ರಘುರಾಮ್ – ಕೆಪಿಸಿಎಲ್ ನಿವೃತ್ತ ಅಧಿಕಾರಿ, ಲೇಖಕರು, ಬೆಂಗಳೂರು

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW