‘ನಾಡೋಜ’ ನಾಟಕ ವಿಮರ್ಶೆ – ಡಾ.ಯಲ್ಲಮ್ಮ.ಕೆ

ಡಾ. ಮಾಧವ ಪೆರಾಜೆರವರ ‘ನಾಡೋಜ’ ನಾಟಕವು ಕೆಲವೊಂದು ಮಿತಿಗಳನ್ನು ಹೊಂದಿದ್ದಾಗಿಯೂ ಸಹ, ನೋಡುವ ದೃಷ್ಟಿಕೋನದಲ್ಲಿ ಹೊಸತನ್ನು ಕಾಣಬಹುದಾಗಿದೆ. ವಿದ್ಯಾರ್ಥಿಗಳನ್ನು ಗಮನದಲ್ಲಿರಿಸಿಕೊಂಡು ಬರೆದುದಾಗಿ ಸ್ವತಃ ನಾಟಕಾರರು ಹೇಳಿಕೊಂಡಿದ್ದರೂ ಇದನ್ನು ಸಾಹಿತ್ಯಾಸಕ್ತರೆಲ್ಲರೂ ಓದಲೇಬೇಕಾದ, ಸಂಗ್ರಹಯೋಗ್ಯವಾದ ಕೃತಿ ಎಂದು ಹೇಳಬಹುದು. ಡಾ.ಯಲ್ಲಮ್ಮ.ಕೆ ಅವರು ಈ ಕೃತಿಯ ಕುರಿತು ಬರೆದ ವಿಮರ್ಶೆಯನ್ನು ತಪ್ಪದೆ ಮುಂದೆ ಓದಿ…
ಪುಸ್ತಕ :ನಾಡೋಜ
ನಾಟಕಕಾರರರು : ಡಾ. ಮಾಧವ ಪೆರಾಜೆರವರ  
ಪ್ರಕಾರ : ನಾಟಕ 

ಪ್ರಾಚೀನತಮ ಕನ್ನಡ ಭಾಷೆಯು ಬೆಳೆದು ಬಂದ ಸುದೀರ್ಘ ಸಾಹಿತ್ಯ ಚರಿತ್ರೆಯನ್ನು ಅವಲೋಕನ ಮಾಡಿದಾಗ ಒಂಬತ್ತನೆಯ ಶತಮಾನದ ರಾಷ್ಟ್ರಕೂಟರ ಆಸ್ಥಾನಕವಿಯಾದ ಶ್ರೀವಿಜನು ರಚಿಸಿದನೆನ್ನಲಾದ, ಕನ್ನಡದ ಮೊದಲ ಲಾಕ್ಷಣಿಕ/ಶಾಸಸ್ತ್ರಕೃತಿಯೆಂದು ಪರಿಗಣಿಸಿದ ಕವಿರಾಜಮಾರ್ಗವು :  ‘ಕಾವೇರಿಯಿಂದಮಾ ಗೋದಾವರಿವರಮಿರ್ಪ ನಾಡದಾ ಕನ್ನಡದೊಳ್ ಭಾವಿಸಿದ ಜನಪದಂ ವಸುಧಾವಳಯವಿಲೀನ ವಿಶದ ವಿಷಯವಿಶೇಷಂ’ ಎಂದು ನಾಡು-ನುಡಿಯ ಬಗ್ಗೆ ಚಾರಿತ್ರಿಕವಾಗಿ ದಾಖಲಿಸಿದ ಕೃತಿಯೆಂದು ತಿಳಿಯಬಹುದಾಗಿದೆ. ಈ ಹಿಂದೆಯೂ ಕನ್ನಡ ಸಾಹಿತ್ಯವು ವಿಫುಲವಾಗಿ ಬೆಳೆದಿತ್ತು ಎನ್ನಬಹದಾದರೂ ಅಂದಿನ ಸಾಹಿತ್ಯ ಕೃತಿಗಳು ಲಭ್ಯವಾಗಿರದೇ – ಲಭ್ಯತೆಯಾಧಾರದ ಮೇಲೆ ಕವಿರಾಜಮಾರ್ಗಕಾರ ನಿಂದ್ಹಿಡಿದು ಹನ್ನೊಂದನೆಯ ಶತಮಾನದ ಕೊನೆಯವರೆಗೂ ರಾಜಾಶ್ರಯದಲ್ಲಿ ಬೆಳೆದು ಬಂದು ಸಾಹಿತ್ಯವೆಂದು, ಸಂಪೂರ್ಣವಾಗಿ ರಾಜಾಶ್ರಯವನ್ನು ತೊರೆದು ಹನ್ನೆರಡನೆಯ ಶತಮಾದಲ್ಲಿ ನವನವೀನ ಪ್ರಯೋಗವೆಂಬಂತೆ ವಚನ ವಾಙ್ಮಯವು ಬೆಳೆದು ಬಂದಿರುವದನ್ನು ಗುರುತಿಸಬಹದಾಗಿದೆ.

ಯಾವುದೇ ಒಂದು ಕಾವ್ಯ-ಕೃತಿಗಳ ಓದನ್ನು ಬಹುಶಿಸ್ತಿಗೆ ಒಳಪಡಿಸಿ ಪ್ರಸ್ತುತೆಗೆ ಮುಖಾಮುಖಿ ಯಾಗಿಸುವ ಸಂದರ್ಭದಲ್ಲಿ ನಮಗೆ ಹೊಸಹೊಸ ಹೊಳಹುಗಳು ಗೋಚರಿಸುತ್ತವೆ. ಹಿಂದಣದಲ್ಲಿ ನಾಟಕದ ಕುರಿತಾಗಿ ಲೇಖಕರು ಹೇಳಿಕೊಂಡಂತೆ : ‘ಈ ನಾಟಕ ಬರೆದುದು ಆದಮೇಲೆ ಪಂಪನ ಕುರಿತಾಗಿ ಈಗಾಗಲೇ ಮರ‍್ನಾಲ್ಕು ನಾಟಕಗಳು ಬಂದಿವೆ ಎಂಬುದು ಗಮನಕ್ಕೆ ಬಂದಿದೆ’ ಎಂಬುದು ಗಮನಿಸಬೇಕಾದ ಸಂಗತಿ. ಮೊದಲೇ ತಿಳಿದು ಆ ಕೃತಿಯನ್ನು ಆಮೂಲಾಗ್ರವಾಗಿ ಓದಿ ನಂತರ ‘ನಾಡೋಜ’ ರಚನೆಗೆ ತೊಡಗಿದ್ದರೆ ಈ ನಾಟಕದಲ್ಲೂ ನಾವು ಪಂಪನನ್ನು ಹುಡುಕಬೇಕಾಗುತ್ತಿತ್ತು ಎಂಬುದು ನನ್ನ ಖಚಿತ ಅಭಿಪ್ರಾಯ. ಯಾವುದರ..? ಯಾರ..? ಪ್ರಭಾವಲಯಕ್ಕೆ ಸಿಲುಕದೆ ಒಂದು ಕೃತಿಯನ್ನು ಓದಿದಾಗ ಮಾತ್ರ ಹೊಸ ಹೊಳವುಗಳನ್ನು ಕಾಣಲು ಸಾಧ್ಯ. ಇಲ್ಲವಾದರೇ ‘ಕಾಮಾಲೆ ಕಣ್ಣಿಗೆ ಕಾಣೋದೆಲ್ಲ ಹಳದಿ’ ಎಂಬತಾಗುತ್ತಿತ್ತು.

‘ಮೊದಲ ನೋಟದಲ್ಲಿ ಪ್ರೀತಿ ಅಂಕುರಿಸುತ್ತದೆ’ ಎನ್ನುವ ಮಾತಿನಂತೆ ಡಾ. ಮಾಧವ ಪೆರಾಜೆರವರ ಒಳಗಣ್ಣಿಗೆ ಮೊದಲ ನಾಟಕದಲ್ಲಿಯೇ ನಿಜಕ್ಕೂ ಪಂಪನ ದರ್ಶನವಾಗಿದೆ. ಅರಿಕೇಸರಿ ಮತ್ತು ಪಂಪನ ಅವ್ಯಾಜ್ಯ ಪ್ರೇಮದ ಪ್ರತಿಬಿಂಬವೆಂಬಂತೆ ಈ ‘ನಾಡೋಜ’ ನಾಟಕ ಮೂಡಿಬಂದಿದೆ ಎಂದು ಖಚಿತವಾಗಿ ಹೇಳಬಹುದು. ಇದು ಬರೀ ಕಡಲ ತಡಿಯ ಮೇಲಣ ಮಾತಾಗಬಹುದು ಕೃತಿಯಾಳಕ್ಕೆ ಇಳಿಯದಿದ್ದರೆ..,
ನಾಟಕದ ಒಳ ಮತ್ತು ಹೊರನೋಟ : 
ನಾಡೋಜ ನಾಟಕದ ಪಾತ್ರವರ್ಗ : ಅರಿಕೇಸರಿ (ಅರಿಗ) ಮಹಾರಾಜ : ತಾಯಿ ಜಾಕವ್ವೆ ಅಥವ ಕುಂತಳಾದೇವಿ, ಪಟ್ಟದರಾಣಿ ಮತ್ತು ಮಹಾರಾಣಿ. ಆದಿಕವಿ ಪಂಪ : ತಂದೆ ಭೀಮಪ್ಪಯ್ಯ, ತಾಯಿ ಅಬ್ಬಣಬ್ಬೆ. ಪೋಷಕ ಪಾತ್ರಗಳು : ಶ್ರೀಕೃಷ್ಣ, ದೇವೇಂದ್ರ, ಬ್ರಹ್ಮ, ವಶಿಷ್ಠ, ವಿಶ್ವಾಮಿತ್ರ, ಭಾರಧ್ವಾಜ, ಕಶ್ಯಪ, ವ್ಯಾಸ, ಧರ್ಮರಾಯ. ಇತರ ಪಾತ್ರಗಳು : ಸೂತ್ರಧಾರ, ಕುಲಪುರೋಹಿತರು, ಋಷಿಗಳು, ಮಂಗಳ ಪಾಠಕರು, ನಾಲ್ಕಾರು ಜನ ಆಸ್ಥಾನ ಪಂಡಿತರು, ನಟಿ, ಸಖಿಯರು. ದೂತರು, ದಂಡಧಾರಿಗಳು,
ಕವಿಯ ವಿಶೇಷತೆ ಹಾಗೂ ಬಿರುದುಗಳು : ಆಸ್ಥಾನ ಕವಿ, ಸುಕವಿ, ವತ್ಸಕುಲತಿಲಕ, ಸತ್ಕವಿ, ಕವಿತಾ ಗುಣಾರ್ಣವರು, ಸರಸ್ವತೀ ಮಣೀಹಾರ, ಆದಿಕವಿ, ವಾಗ್ವಿಲಾಸಿ, ಕದನ ಕಲಿ, ಕವಿಚಕ್ರವರ್ತಿ, ನಾಡೋಜ ಮುಂತಾದವುಗಳು.
ನಾಡೋಜ ನಾಟಕವನ್ನು ಸೂಕ್ಷ್ಮವಾಗಿ ಒಳಹೊಕ್ಕು ನೋಡಿದಾಗ ಮುಖ್ಯ ಅಂಶಗಳು ಗೋಚರಿಸುತ್ತವೆ. ರಾಜಾಶ್ರಯದಲ್ಲಿಯೇ ಬೆಳೆದು ಬಂದಿರುವ ಕಾವ್ಯವಾದರೂ ಬದಲಾದ ದೃಷ್ಟಿಕೋನದಲ್ಲಿ, ಕವಿ ಮತ್ತು ರಾಜನ ಸ್ನೇಹ ಮತ್ತು ಅವ್ಯಾಜ ಪ್ರೇಮದ ಹಿನ್ನಲೆಯಲ್ಲಿ ಪ್ರಸ್ತುತ ನಾಟಕವನ್ನು ಕಟ್ಟಿಕೊಡಲಾಗಿದೆ.
ರಾಜನ ಒಡ್ಡೋಲಗಕ್ಕೆ ಕವಿಗಳು ಅಪ್ಪಣೆ ಪಡೆದು ಬರುವ ಅಗತ್ಯವಿಲ್ಲದಿರುವ ಬಗ್ಗೆ ತಳೆದಿರುವ ನಿಲುವಿನಲ್ಲಿ ನಮ್ಮಂಥ ಸಾಮಂತ ರಾಜರಲ್ಲಿ ಕವಿಗಳಿಗೆ ಅಗೌರವವಾಗಬಾರದು ಎನ್ನುವಲ್ಲಿ ತನ್ನ ಮಿತಿ ಯನ್ನು, ಚಕ್ರವರ್ತಿಗಳೆನಿಸಿಕೊಂಡವರಲ್ಲಿನ ವಿದ್ವಾಂಸುರುಗಳ ಹೊಗಳುಭಟ್ಟಂಗಿತನವನ್ನು ಗುರುತಿಸಿರುವ ಅರಿಕೇಸರಿಯ ಅರಿವಿನ ಪರಿಧಿ ಗೋಚರಿಸುತ್ತದೆ. ತನ್ನ ತಾಯಿಯಂತೆ ಅರಿಗಾ ಎಂದು ಕರೆದರೆ ಸಾಲದೇ ..? ಎಂಬ ನುಡಿಯಲ್ಲಿ, ಅಭಿಮಾನದಿಂದ ಸಿಂಹಾಸನದಲ್ಲಿ ತಮ್ಮ ಪಕ್ಕದಲ್ಲಿಯೇ ಕುಳ್ಳಿರಿಸಿಕೊಳ್ಳುವ ರಾಜನ ನಡೆಯಲ್ಲಿ ನಿಷ್ಕಪಟವಾದ ಪ್ರೇಮವನ್ನು ಕಾಣಬಹುದಾಗಿದೆ.
‘ಅಪ್ಪಣೆ ಮಾಡಿ ಕಾವ್ಯ ಬರೆಸುವಷ್ಟು ಮೂರ್ಖ ನಾನಲ್ಲ, ಅದಕ್ಕೆ ಮಹಾಕವಿಗಳು ಮನಸ್ಸು ಮಾಡಬೇಕು. ಅದಕ್ಕೆ ಅವರಿಗೆ ಸ್ಫೂರ್ತಿ ಬರಬೇಕು. ಸ್ಫೂರ್ತಿ ಬರದೇ ಇದ್ದರೆ ಕಾವ್ಯ ಹುಟ್ಟುವುದಾದರೂ ಹೇಗೆ..?’ ಎಂಬ ಮಾತಿನಲ್ಲಿ ರಾಜಾಜ್ಞೆವಿರದೇ, ಆದೇಶವಿರದೇ ವ್ಯಕ್ತಿಯ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರದ ;  ಅದನ್ನು ಸಲಹೆ-ಸೂಚನೆಯ ರೂಪದಿ ಹೇಳುವ ರೀತಿಯಲ್ಲಿ ಜಾಗೃತ ಪ್ರಜ್ಞೆ ಅಥವ ಜಾಣ್ಮೆಯನ್ನು ಅರಿಕೇಸರಿಯಲ್ಲಿ ಕಾಣಬಹುದಾಗಿದೆ. ಇದರೊಂದಿಗೆ ರಾಜ ತನ್ನ ಆಶ್ರಯದಲ್ಲಿನ ಕವಿ-ವಿದ್ವಾಂಸರುಗಳಿಗೆ ಒಂದು ಮುಕ್ತವಾದ ವಾತಾವರಣವನ್ನು ಕಲ್ಪಿಸಿಕೊಟ್ಟಿದ್ದನೆಂದು ತಿಳಿಯಬಹುದಾಗಿದೆ.
 ಆರು ತಿಂಗಳಲ್ಲಿಯೇ ಆದಿಪುರಾಣವನ್ನು ಬರೆದಾದಮೇಲೆ.., ರಾಜ ಮತ್ತು ಪಂಡಿತರ ಆಶಯದಂತೆ ವೇದವ್ಯಾಸರ ಮಹಾಭಾರತ ಕಾವ್ಯವನ್ನು ಮೂರೇ ಮೂರು ತಿಂಗಳಲ್ಲಿ ಕನ್ನಡಕ್ಕೆ ತರುವುದಾಗಿ ವಾಗ್ದಾನಗೈದು ಬಂದ ಪಂಪನ ಕುರಿತು ‘ಅರಸರ ಸಹವಾಸ ಯಾವಾಗಲೂ ಸದರವಲ್ಲ. ಇದು ರಾಜಕೀಯದ ಮಾತಾಯಿತು. ಧರ್ಮದ ನೆಲೆಯಲ್ಲಿಯೂ ಒಂದು ವಿಷಯ ನಿನ್ನ ಸ್ಮರಣೆಯಲ್ಲಿರಲಿ’ ಎಂದ್ಹೇಳುವ ತಂದೆ ಭೀಮಪ್ಪಯ್ಯನ ಮಾತು ಅಧಿಕಾರಶಾಹಿಗಳೊಂದಿಗೆ ವ್ಯವಹರಿಸುವಾಗ, ಜಾತಿ-ಮತ-ಧರ್ಮಗಳ ವಿಷಯದಲ್ಲಿ ಉಪಕ್ರಮಿಸುವಾಗ ಹೇಗಿರಬೇಕು..? ಮತ್ಹೇಗೆ..? ನಡೆದುಕೊಳ್ಳಬೇಕೆನ್ನುವಲ್ಲಿ ಮಗನಾದ ಪಂಪನಿಗೆ ಎಚ್ಚರಿಕೆ ಗಂಟೆಯಾಗಿದೆ.
ಮಹಾಋಷಿಗಳಾದ ವೇದವ್ಯಾಸರು ರಚಿಸಿರುವ ಮಹಾಭಾರತ ಕಾವ್ಯವು ಹದಿನೆಂಟು ಪರ್ವಗಳಲ್ಲಿ ಒಂದು ಲಕ್ಷ ಶ್ಲೋಕಗಳಿಂದ ತುಂಬಿರುವ ಆ ಮಹಾಸಾಗರವನ್ನು ನಾನು ದಾಟುತ್ತೇನೆ ಎಂದರೆ..? ಗರ್ವವಾದೀತು ಎಂದರಿತ ಪಂಪನು ‘ವ್ಯಕ್ತಿಗೆ ಗರ್ವವು ದೋಷವೇ ಹೊರತು ಪ್ರೀತಿ ದೊಷವಲ್ಲ’, ‘ನಾನು ಆ ಮಹಾಸಾಗರವನ್ನು ತಮ್ಮ ಪ್ರೀತಿಯೆಂಬ ನಾವೆಯ ಮೂಲಕ, ಪಂಡಿತರ ಬೆಂಬಲದೊಂದಿಗೆ ದಾಟುತ್ತೇನೆ’ ಎಂಬ ಮಾತಿನಲ್ಲಿ ವಿಧೇಯತೆ, ವಿನಯತೆ, ಭಯದ ಜೊತೆ ಭಕ್ತಿಯ ಭಾವವನ್ನೂ ಕಾಣಬಹುದಾಗಿದೆ.
ತಾನು ಮಾಡಿರುವ ವಾಗ್ದಾನದಂತೆ ಸರಿಯಾಗಿ ಮೂರು ತಿಂಗಳಲ್ಲಿ ಕಾವ್ಯ ಬರೆದು ಮುಗಿಸಿ ರಾಜನ ಒಡ್ಡೋಲಗದಲ್ಲಿ ಪಂಡಿತರ ಮುಂದಿರಿಸಿದಾಗ ನಡೆಯುವ ತರ್ಕ ವಿಭಿನ್ನವಾಗಿ ಮೂಡಿಬಂದಿದೆ. ಆಸ್ಥಾನ ಪಂಡಿತರೆಲ್ಲರೂ ಒಬ್ಬೊಬ್ಬರಾಗಿ ಒಂದೊಂದು ಪದ್ಯಗಳನ್ನು ವಾಚಿಸುತ್ತ, ಅದರ ತಾತ್ರ‍್ಯವನ್ನು ತಿಳಿಸುತ್ತ ಸಾಗಿ ನಡುನಡುವೆ ಕೇಳಿ ಬರುವ ಟೀಕೆ-ಟಿಪ್ಪಣಿಗಳನ್ನು, ಪ್ರಶ್ನೆಗಳನ್ನು ಮುಕ್ತವಾಗಿ ಕೇಳುವಂತ ವಾತಾವರಣವನ್ನು ಕಲ್ಪಿಸಿದ ಸಂದರ್ಭದಲ್ಲಿ ಪಂಪನು ಹೇಳುವ ಮಾತು ಗಮನಿಸುವಂತದ್ದು. ‘ಕೇಳುವ ಪ್ರಶ್ನೆಯಲ್ಲಿ ದೋಷವಿರಬಾರದು. ಪ್ರಶ್ನೆ ಸರಿಯಾಗಿದ್ದರೆ ತಾನೇ ಉತ್ತರವೂ ಸರಿಯಾಗುವುದು..!’ ಇಲ್ಲಿ ಪ್ರಶ್ನಿಸುವಂಥ ಮುಕ್ತ ವಾತಾವರಣವು ಪಂಡಿತವರೇಣ್ಯರಿಗೆ ಮಾತ್ರ ಇತ್ತಾ..? ಸಾಮಾನ್ಯ ಜನರಿಗೆ ಲಭಿಸಿತ್ತಾ..? ನ್ಯಾಯದ ಗಂಟೆಯನ್ನು ಭಾರಿಸಲು ಎಲ್ಲರಿಗೂ ಅವಕಾಶವಿತ್ತಾ..? ಎನ್ನುವದನ್ನು ಪ್ರಶ್ನೆಯಾಗಿಯೇ ಉಳಿಯುತ್ತದೆ.
ಕಾವ್ಯ ವಾಚನದ ಮಧ್ಯೆ ಎತ್ತಿದ ಪ್ರಶ್ನೆಗೆ ರಾಜಾ ಅರಿಕೇಸರಿಯೇ ಉತ್ತರಿಸುತ್ತ.., ಅಥವ ತನ್ನ ಗೆಳೆಯನು ತನ್ನ ಕುರಿತಾಗಿಯೇ ಅರ್ಜುನನೊಂದಿಗೆ ಸಮೀಕರಿಸಿ ಬರೆದ ಕಾವ್ಯವನ್ನು ಸಮರ್ಥಿಸಿ ಕೊಳ್ಳುತ್ತ.., ‘ಸಂಸ್ಕೃತದ ಕಾವ್ಯ ಯಥಾವತ್ತಾಗಿ ಬೇಕೆಂದರೆ..! ಈಗಾಗಲೇ ಪ್ರಚಲಿತವಾಗಿರು ವುದೇ ಇದೆಯಲ್ಲ. ಲಕ್ಷ ಶ್ಲೋಕಗಳ, ಕುತ್ತಿಗೆಗೆ ಉರುಳು ಮಾಡಿಕೊಂಡು ಸಾಯುವಷ್ಟು ದಪ್ಪವೂ, ಬಿಗಿಯೂ ಆಗಿರುವಂತಹದ್ದು..! ಅದನ್ನು ಕನ್ನಡದಲ್ಲಿ ಹೇಳಬೇಕಾದ ಪರಿಯಲ್ಲಿ ಹೊಸತನ ಇರ ಬೇಡವೇ..?’ ಮುಂದುವರೆದು.., ‘ಸಂಸ್ಕೃತ ಕಾವ್ಯ ಪರಂಪರೆಯಲ್ಲಿ ಎಲ್ಲಿಯೂ ಆಶ್ರಯದಾತನ ಹಾಗೂ ಇಷ್ಟದೇವತೆಯ ಸ್ತುತಿ ಜೊತೆ ಜೊತೆಗೆ ಬರುವುದಿಲ್ಲ. ಎಂಬ ಮೂರನೆಯ ಪಂಡಿತನ ಮಾತಿಗೆ ಪ್ರತಿಯಾಗಿ ಪಂಪನ ಈ ಕಲ್ಪನೆಯೇ ನವನವೀನವಾದದ್ದು ಎಂಬಲ್ಲಿ ಸ್ವ-ಪ್ರತಿಷ್ಠೆತ ಛಾಯೆ ಕಾಣುತ್ತಿದೆ ಎಂದೆನಿಸುತ್ತದೆ. ಕಾವ್ಯ ವಾಚನ ಸಮಯದಲ್ಲಿ ಸಮಯ ಸರಿದದ್ದೇ ಗೊತ್ತಾಗಲಿಲ್ಲ. ನಾಳೆಯಿಂದ ನಿತ್ಯವೂ ನಮ್ಮ ಆಸ್ಥಾನದಲ್ಲಿ ಕಾವ್ಯವಾಚನ ನಡೆಯುತ್ತದೆ. ಪಂಡಿತರೆಲ್ಲರೂ ಈ ಮಹಾಕಾವ್ಯದ ವಾಚನ ಮತ್ತು ವಿವರಣದಲ್ಲಿ ಭಾಗವಹಿಸಬೇಕು. ಇದು ರಾಜಾಜ್ಞೆ..! ಎಂದು ಹೇಳುವ ಮಾತಿಗೂ ‘ಅಪ್ಪಣೆ ಮಾಡಿ ಕಾವ್ಯ ಬರೆಸುವಷ್ಟು ಮೂರ್ಖ ನಾನಲ್ಲ, ಅದಕ್ಕೆ ಮಹಾಕವಿಗಳು ಮನಸ್ಸು ಮಾಡಬೇಕು ಎನ್ನುವ ಮಾತನ್ನು ಒರೆಗೆ ಹಚ್ಚಿದಾಗ ಬದಲಾದ ರಾಜನ ಮನೋಧೋರಣೆಯನ್ನು ಕಾಣಬಹುದಾಗಿದೆ. ಕಾವ್ಯ ಬರೆಯು ವವರಿಗೆ ನೀಡುವ ಮುಕ್ತ ವಾತಾವರಣ ಓದುವ ಅಥವ ಬಿಡುವ ಮುಕ್ತತೆ ಸಹೃದಯಿ ಓದಗನಿಗೆ ಇಲ್ಲವಾಗುತ್ತದೆ. ಆಜ್ಞೆಮಾಡಿ ಕಾವ್ಯವಾಚನ ಮಾಡಬೇಕು ಎಂಬುದು ಎಷ್ಟು..? ಸರಿ. ತನ್ನ ಕುರಿತಾಗಿ, ತನ್ನ ವಂಶದ ಕುರಿತಾಗಿ ಬರೆದ್ದು, ಆ ಮೂಲಕ ತನ್ನ ಹೆಸರು ಚರಿತ್ರೆಯಲ್ಲಿ ಉಳಿಯುವಂತೆ ಆಗುತ್ತೆ ಎನ್ನುವ ಭರದಲ್ಲಿ ರಾಜಾಜ್ಞೆ ಮಾಡಿದ್ದು ಹೇರಿಕೆ ಎಂದೆನಿಸುತ್ತದೆ.
‘ನಾನು ಆ ಮಹಾಸಾಗರವನ್ನು ತಮ್ಮ ಪ್ರೀತಿಯೆಂಬ ನಾವೆಯ ಮೂಲಕ, ಪಂಡಿತರ ಬೆಂಬಲದೊಂದಿಗೆ ದಾಟುತ್ತೇನೆ’ ಎಂಬ ಮಾತಿನ ತದನಂತರಲ್ಲಿ ಕಾವ್ಯ ರಚನೆಯಾಗಿ ಅದು ಜಗದೆಲ್ಲಡೆ ಸುದ್ದಿಯಾಗಿ ಕಾವ್ಯ ಸ್ತೋತೃಗಳು, ಕಾವ್ಯ ವಾಚನ ಕೇಳಲಿಕ್ಕೆ ಒಡ್ಡೋಲಗಕ್ಕೆ ಧಾವಿಸಿ ಬರುವಂತಾದಮೇಲೆ ರಾಜನ ಮತ್ತು ಆಸ್ಥಾನ ಪಂಡಿತರ ಬೆಂಬಲ ಪಡೆದು ‘ಮುನ್ನಿನ ಕಬ್ಬಮನೆಲ್ಲ ಇಕ್ಕಿ ಮೆಟ್ಟಿದವು ; ನೆಗಳ್ದಾದಿ ಪುರಾಣಮುಂ ಸಮಸ್ತ ಭಾರತಮುಂ’ ಎಂದು ದೃಢವಾಗಿ ಹೇಳಿದ್ದನ್ನು ನೋಡಿದರೆ.., ಪಂಪನ ಮನೋಧೋರಣೆಯಲ್ಲಿ ಆದ ಸ್ವಲ್ಪ ಬದಲಾವಣೆಯನ್ನು ಗುರುತಿಸಬಹುದಾಗಿದೆ.
ಇನ್ನೂ ಇವರಿಬ್ಬರ ಸ್ನೇಹದ ಕುರಿತಾಗಿ ಎರಡು ಮಾತಿಲ್ಲ. ಕವಿ-ಕಾವ್ಯ ವಾಚನದಲ್ಲಿಯೇ ರಾಜ ಅರಮನೆಯ ಅಂತಃಪುರವನ್ನೂ, ಪಟ್ಟದರಾಣಿ, ಮಹಾರಾಣಿಯನ್ನು ಮರೆಸುವಷ್ಟು ಇರರ್ವರ ಸ್ನೇಹ ಗಾಢವಾಗಿತ್ತು ಎಂಬುದಕ್ಕೆ ಮಹಾರಾಣಿಯವರು ‘ನನ್ನ ನಿಜವಾದ ಸವತಿ ಈ ಮಹಾಕವಿಗಳು’ ಎಂದಿರುವುದು ಅತಿಶಯೋಕ್ತಿ ಎನಿಸಲಾರದು. ‘ಕಾವ್ಯದ ಪರಿಣಾಮ ಕಾಲ-ದೇಶಾತೀತವಾದುದು’ ಎಲ್ಲರನ್ನೂ ಅದು ಸೂಜಿಗಲ್ಲಿನಂತೆ ಸೆಳೆದುಬಿಡುತ್ತದೆ.
ಮತ್ತೊಂದೆಡೆ ಸೂತ್ರಧಾರನ ಈ ಮಾತನ್ನು ಗಮನಿಸಬೇಕು. ಅರಿಕೇಸರಿಯ ತಾಯಿ ಜಾಕವ್ವೆಯನ್ನು ಕಂಡು ‘ತಮ್ಮ ಮುಖದಲ್ಲಿರುವ ರಾಜಕಳೆಯನ್ನು ಕಂಡಾಗಲೇ ಕುಲೀನ ಮನೆತನದವರೆಂದುಕೊಂಡೆ’.  ಪಂಪನೇ ತನ್ನ ‘ವಿಕ್ರಮಾರ್ಜುನ ವಿಜಯಂ’ನಲ್ಲಿ ಹೇಳಿರುವ ಹಾಗೇ
ಕುಲಮನೆ ಮುನ್ನ ಮುಗ್ಗಡಿಪಿರೇಂ ಗಳ ನಿಮ್ಮ ಕುಲಂಗಳಾಂತು ಮಾ |
ರ್ಮಲೆವನನಟ್ಟಿ ತಿಂಬುವೆ ಕುಲಂ ಕುಲಮಲ್ತು ಚಲಂ ಕುಲಂ ಗುಣಂ ||
ಕುಲಭಿಮಾನದೊಂದೆ ಕುಲ [ಮಣ್ಮು ಕುಲಂ] ಬಗೆವಾಗಳೀ [ಗಳೀ] |
ಕಲಹದೊಳಣ್ಣ ನಿಮ್ಮ ಕುಲವಾಕುಲಮಂ ನಿಮಗುಂಟುಮಾಡುಗುಂ ||೨೧|| ಪು.ಸಂ: ೨೫೨; ದಶಮಾಶ್ವಾಸಂ. 
ಎಂದು ಕುಲದ ವಿಚಾರವಾಗಿ ಮುಂದುವರೆದು ತನ್ನ ಆಗಮಿಕ ಕಾವ್ಯವಾದ ಆದಿಪುರಾಣದಲ್ಲಿ –
ಆರುಂ ವೃತ್ತಿಗಳನಿವಂ |
ಮೀರಿದರಲ್ಲರ್ ದ್ವಿಜನ್ಮರೀ ವೃತ್ತಿಗಳಿಂ 
ಬೇರಾದರ್ ದ್ವಿಜರುಂತೇಂ | 
ಬೇರುಂಟೆ..? ಮನುಷ್ಯ ಜಾತಿ ತಾನೊಂದೆ ವಲಂ || 
ಆಯುಷಟ್ಕರ್ಮ (ಪೂಜೆ, ವಾರ್ತೆ, ದತ್ತಿ, ಸ್ವಾಧ್ಯಾಯ, ಸಂಯಮ ಮತ್ತು ತಪಸ್ಸು) ಗಳನ್ನು ಯಾರು ಆಚರಿಸುತ್ತಾರೋ ಅವರೇ ನಿಜವಾದ ದ್ವಿಜರು. (ದ್ವಿಜ ಎಂದರೆ..? ಎರಡು ಸಲ ಹುಟ್ಟಿದವರು. ತಾಯಿಯ ಗರ್ಭದಿಂದೊಮ್ಮೆ ನಂತರ ಉಪನಯನ ಸಂಸ್ಕಾರದ ಮೂಲಕ ಗುರುವಿನ ಉಪದೇಶ ಪಡೆದು ಮರುಜನ್ಮ ಪಡೆದವರು.) ಆದರೆ ಆಚರಣೆಯಲ್ಲಿಲ್ಲದೇ ಬರೀ ಹುಟ್ಟಿನಿಂದ ಬ್ರಾಹ್ಮಣರಾದರೆ ಅವರು ನಾಮಧಾರಕರಾದ ದ್ವಿಜರು ಅಷ್ಟೇ. ಆದರೆ ಮಾನವ ಜಾತಿ ಒಂದೇ ಆಗಿರುವುದರಿಂದ ಈ ವೃತ್ತಿಗಳನ್ನು ಯಾರು ನೇಮ-ನಿಷ್ಠೆಗಳಿಂದ ಕೈಗೊಳ್ಳುತ್ತಾರೋ ಅವರೆಲ್ಲ ದ್ವಿಜರೇ. ಅಂತವರು ದಾನ-ಧರ್ಮಗಳಿಗೆ ಸತ್ಪಾತ್ರರು – ಎನ್ನುವ ಆಶಯವುಳ್ಳವನು ಆದಿಕವಿ ಪಂಪ. ಇಲ್ಲಿ ಸೂತ್ರಧಾರನ ಬಾಯಿಂದ ಹೇಳಿಸಿದ ‘ತಮ್ಮ ಮುಖದಲ್ಲಿರುವ ರಾಜಕಳೆಯನ್ನು ಕಂಡಾಗಲೇ ಕುಲೀನ ಮನೆತನದವರೆಂದುಕೊAಡೆ’. ಎನ್ನುವ ಮಾತು ತೊಡಕೆನಿಸುತ್ತದೆ.
ಲೇಖಕರು ತಮ್ಮ ನಾಟಕದ ವಸ್ತು ವಿಷಯವನ್ನು ಪ್ರಸ್ತುತಕ್ಕೆ ಮುಖಾಮುಖಿಯಾಗಿಸುವ ಭರದಲ್ಲಿ – ಕಾವ್ಯದ್ದುದ್ದಕ್ಕೂ ಪಂಡಿತರ ಸಮೂಹದಲ್ಲಿ ಕಾವ್ಯ ವಾಚನ, ವಿವರಣೆ ನಡೆಯಿಸಿ, ಪ್ರಾಸಂಗೀಕವಾಗಿ ಮಹಾರಾಣಿಯ ಪಾಲ್ಗೊಳ್ಳುವಿಕೆಯು.., ಮುಂದೆ ಸೂತ್ರಧಾರನ ಕೈಯಿಂದ ಮತ್ತೊಂದೆಡೆ ಅಂತಃಪುರದ ನಟಿ ಮಣಿಯು (ಎಳೆಯ ಪಂಡಿತೆಯು) ಕಾವ್ಯದ ವರ್ಧಂತ್ಯುತ್ಸವದ ಭಾಗವನ್ನು ರಂಗಕ್ಕೆ ಅಳವಡಿಸಿದ್ದನ್ನು ಪ್ರಶಂಸಿಸದೇ ಆ ಕುರಿತು ಟೀಕಿಸುತ್ತ ನಿಮ್ಮದೇನಿದ್ದರೂ ‘ನವ್ಯಕಾವ್ಯ..!’ ಅವಲಕ್ಷಣವೇ ಅದರ ಲಕ್ಷಣ..! ಹೀನೋಪಮೆ, ಶ್ರುತಿ ದುಷ್ಟತೆ, ಅಶ್ಲೀಲತೆ – ಇವು ತಾನೇ ಅದರ ಗುಣಲಕ್ಷಣಗಳು’ ಎಂದು ಅಲ್ಲಗಳೆದಂತಾಗುತ್ತದೆ. ಅಶ್ಲೀಲತೆ ಹೊಂದಿರುವ ಯಾವ ಕಾವ್ಯ, ಕಥೆ, ಕಾದಂಬರಿಗಳು ಉತ್ತಮ ವಾದವುಗಳಲ್ಲವೇ..? ಉತ್ತಮ ಎನಿಸಿಕೊಂಡಂತಹವುಗಳಲ್ಲಿ ಅಶ್ಲೀಲತೆ ಒಡಮೂಡಿಬಂದಿಲ್ಲವೇ..? ಎನ್ನುವುದು ಪ್ರಶ್ನೆ. ನವ್ಯವನ್ನು ಸಾರಾಸಗಟಾಗಿ ಅವಲಕ್ಷಣವೆಂದು ಕರೆದದ್ದು ಸರಿಯೇ..?
ಅರಿಕೇಸರಿ ಮತ್ತು ಪಂಪನ ನಡುವಿನ ಸಂವಾದ : ನೀವು ಎಲ್ಲರ ಹಾಗೆ ದೂರ ಕುಳಿತುಕೊಳ್ಳ ಬಾರದು. ಮಹಾಕವಿಗಳೇ ನೀವು ನಮ್ಮೊಂದಿಗೆ ಕುಳಿತುಕೊಳ್ಳಬೇಕು. ಪ್ರಭುಗಳೇ ಅದು ಚಕ್ರವರ್ತಿಗಳು ಮಂಡಿಸುವ ಪೀಠ. ನಾವು ನಿಮ್ಮ ಊಳಿಗದವರು. ಹಾಗನ್ನಬಾರದು ನೀವು ಮಹಾಕವಿಗಳು, ನಮ್ಮ ಸಿಂಹಾಸನದಲ್ಲಿ ಕುಳಿತುಕೊಳ್ಳುವಂಥ ಯೋಗ್ಯತೆಯುಳ್ಳವರು. ಕುಳಿತುಕೊಳ್ಳಿ. ಪ್ರಭುಗಳೇ ತಮ್ಮ ಹೃದಯ ವೈಶ್ಯಾಲತೆಗೆ ನನ್ನ ನಮನಗಳು..! ಮುಜುಗರದೊಂದಿಗೆ ಕುಳಿತುಕೊಳ್ಳುವುನು. ಇಲ್ಲಿ ನಾವು ಊಳಿಗದವರು ಎಂಬ ಮಾತಿನಲ್ಲಿ ನಮ್ಮ ಎಲ್ಲೆಯನ್ನು ಮೀರಬಾರದೆಂದು ಮುಜುಗರದೊಂದಿಗೆ ಕುಳಿತುಕೊಳ್ಳುವದು ಏನನ್ನು ಸೂಚಿಸುತ್ತದೆ..? ಅರ್ಹತೆ ಇದೆ ಎಂದಮೇಲೆ ಮುಜುಗವೇತಕ್ಕೆ..?
ಮೌಲ್ಯಗಳು : ಈ ಕಾವ್ಯದಲ್ಲಿ ಮನುಷ್ಯ ಮಾತ್ರರಾಗಿ ಸಾಧನೆ ಮಾಡಿ, ಮಾನವತೆಯನ್ನು ಮೆರೆದು ಸಿದ್ಧಿಯನ್ನು ಪಡೆದು ದೈವತ್ವಕ್ಕೇರಿದವರ ಗುಣಗಾನ ಮಾಡುವುದರೊಂದಿಗೆ.., ಛಲ, ನನ್ನಿ-ಸತ್ಯ, ಧೈರ್ಯ, ಗಂಡಿ-ಬಲ, ಬಿಲ್ವಿದ್ಯೆ, ಅತ್ಯುನ್ನತಿ, ಸಾಹಸ ಮತ್ತು ಧರ್ಮ.., ಮೊದಲಾದವುಗಳನ್ನು ಮೌಲ್ಯಗಳೆಂದು ಬೆರಳು ಮಾಡಿ ತೋರಿಸಿದೆ. ಗುಣಗಳಿಗೆ-ಮೌಲ್ಯಗಳಿಗೆ ಅಸ್ತಿತ್ವ ಬಂದೊದಗುವುದು ವ್ಯಕ್ತಿಗಳು ಅದನ್ನು ಮೈಗೂಡಿಸಿಕೊಂಡಾಗ ಮಾತ್ರ. ಸಾಧಿಸಿದುದರಿಂದಲೇ ದರ‍್ಯೋಧನನಿಗೆ ಛಲದಂಕ ಮಲ್ಲನೆಂದೂ, ಬೇಡಿದ್ದನ್ನೆಲ್ಲ ನೀಡಿದುದರಿಂದಲೇ ಕರ್ಣನಿಗೆ ದಾನಶೂರನೆಂದು, ಎಷ್ಟೇ ಕಷ್ಟ ಬಂದರೂ ಸಳ್ಳನ್ನಾಡದವಗೆ ರಾಜಾ ಸತ್ಯ ಹರಿಶ್ಚಂದ್ರನೆಂದು ಕರೆದದ್ದು. ಸಾಧಿಸುವ ವ್ಯಕ್ತಿಯ ಮೂಲಕ ಆ ಗುಣಕ್ಕೊಂದು ಘತನೆ-ಗೌರವ ಒಡಮೂಡಿಬರುವುದು.

ಗುಣಕ್ಕೆ ಘನತೆ ಬರುವುದು ಯಾವಾಗ..? ಬದುಕಿನಲ್ಲಿ ಮೌಲ್ಯಗಳನ್ನು ಅಳವಡಿಸಿಕೊಂಡು ಬದುಕಿನುದ್ದಕ್ಕೂ ಕಾಯ್ದುಕೊಂಡು ಬಂದಾಗ ಮಾತ್ರ. ಅದೆಂತೆಂದು : ಇಚ್ಛಾಮರಣಿಯಾದ ಭೀಷ್ಮಾಚರ‍್ಯರು ತಮ್ಮ ಬ್ರಹ್ಮಚರ‍್ಯ ಪರಿಪಾಲನೆಯ ನಿಮಿತ್ತ ಬುವಿಯನ್ನು ಸಾಕ್ಷಾತ್ ತಾಯಿಯೆಂದು ತಿಳಿದದ್ದರಿಂದಲೇ ಶರಶಯ್ಯೆಯ ಮೇಲೇಯೇ ಮಲಗಿ ಕಾಲಕ್ಷೇಪ ಮಾಡಿದರು. ಇಂಥ ಆದರ್ಶ  ಮೌಲ್ಯಗಳನ್ನು ಕಾವ್ಯವು ಎತ್ತಿ ಹೇಳುತ್ತದೆ. ಈ ಮೂಲಕ ಕಾವ್ಯದ ಅಂತಃಸತ್ವ ಹೆಚ್ಚಿದೆ ಎಂದು ಹೇಳಬಹುದು.

ಅರಿಕೇಸರಿ ತನ್ನ ಜನ್ಮದಿನದ ಆಚರಣೆ ಹಾಗೂ ತಾನೇ ವಿಕ್ರಮಾರ್ಜುನನಾಗಿ ಪಟ್ಟಾಭಿಷೇಕಗೊಳ್ಳುವ ಸುಸಂದರ್ಭದಲ್ಲಿ ಉತ್ಸಾಹ ಇಮ್ಮಡಿಸಿ ಮಹಾಕವಿ ಪಂಪನಿಗೆ ‘ಕವಿಚಕ್ರವರ್ತಿ’ಎಂಬ ಪಟ್ಟದ ಜೊತೆ ಜೊತೆಗೆ ‘ನಾಡೋಜ’ ಪದವಿಯನ್ನು ನೀಡಿ ಗೌರವಿಸುವುದರೊಂದಿಗೆ.., ಬಳುವಳಿಯ ರೂಪದಲ್ಲಿ ಪಂಪನಿಗೆ ಕೇಳಿದಷ್ಟು ಊರುಗಳನ್ನು ದಾನವಾಗಿ, ನಿತ್ಯಕ್ಕೆ ತೊಡುವುದಕ್ಕೆ ಉಡುಪುಗಳನ್ನು, ಧರಿಸುವುದಕ್ಕೆ ಪಂಚರತ್ನಗಳನ್ನು ಅರಮನೆಯಿಂದಲೇ, ಇದರೊಂದಿಗೆ ಜೀವಧನವನ್ನೂ, ಲೆಕ್ಕವಿಲ್ಲದಷ್ಟು ವಾರನಾರಿಯರನ್ನು ಉಡುಗೊರೆಯಾಗಿ, ಕೊನೆಯಲ್ಲಿ ಬಚ್ಚಸಾಸಿರು ನಾಡಿನ ‘ಧರ್ಮಪುರ’ವನ್ನು ಅಗ್ರಹಾರವೆಂದು ಶಾಸನಾತ್ಮಕವಾಗಿ ಘೋಷಿಸಿ, ಇಂದಿನಿಂದಲೇ ನಾಡೋಜರಿಗೆ ಇವೆಲ್ಲವನ್ನು ದಾನವಾಗಿ ನೀಡಿರುತ್ತೇನೆ ಎಂದು ತನ್ನಾಜ್ಞೆಯನ್ನು ಸಾರುತ್ತಾನೆ.

ಯಾವುದೇ ಒಂದು ಕೃತಿ ರಚನೆಗೊಂಡ ಕಾಲದ ಅಂದಂದಿನ ಜನ-ಜೀವನದ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರ್ಥಿಕ ಸ್ಥಿತಿ-ಗತಿಗಳನ್ನು ಚಿತ್ರಿಸುತ್ತದೆ ಎನ್ನುವುದಾದರೆ.., ‘ಲೆಕ್ಕವಿಲ್ಲದಷ್ಟು ವಾರನಾರಿಯರನ್ನು ಉಡುಗೊರೆ’ಯಾಗಿ ನೀಡುತ್ತೇನೆ ಎನ್ನುವ ರಾಜನ ಮಾತನ್ನು ಗಮನಿಸುವುದಾದರೆ ಆ ಕಾಲಕ್ಕೆ ಕೆಳಸ್ತರದ ಸಮುದಾಯಗಳಲ್ಲಿನ ಹೆಣ್ಣುಮಕ್ಕಳ ಸಾಮಾಜಿಕ ಸ್ಥಾನಮಾನಗಳು ಹೇಗಿದ್ದವು..? ಎನ್ನುವುದು ನನ್ನ ಪ್ರಶ್ನೆ. ಅಗಣಿತ ವಾರನಾರಿ(ವೇಶ್ಯೆ)ಯರನ್ನು ಉಡುಗೊರೆಯಾಗಿ ನೀಡುವುದೆಂದರೆ..! ಏನರ್ಥ..? ಮಹಾಕವಿಯಾದ ಪಂಪ ಲೆಕ್ಕವಿಲ್ಲದಷ್ಟು ವಾರನಾರಿಯರನ್ನು ಉಡುಗೊರೆಯಾಗಿ ಪಡೆದು ಮಾಡುವುದಿದೇನಿದೆ..? ಅರಿಕೇಸರಿಯ ಸಾಮ್ರಾಜ್ಯದೆಲ್ಲಡೆ ವಾರನಾರಿಯರೇ ತುಂಬಿದ್ದರೆ..? ಬರೀ ಕಾವ್ಯ ವಾಚನದಲ್ಲಿ ಕಾಲಕ್ಷೇಪ ಮಾಡುವ ರಾಜ ಅವರುಗಳ ಬದುಕಿಗೆ ನೆಲೆ ಒದಗಿಸಬಹುದಿತ್ತಲ್ಲವೇ..? ಈ ಮೂಲಕ ಶತಶತಮಾನಗಳಿಂದಲೂ ಹೆಣ್ಣನ್ನು ಭೋಗದ ವಸ್ತುವನ್ನಾಗಿ ಕಂಡ ರಾಜಸತ್ತೆಗೂ, ಸಂಸ್ಕೃತ ಮಹಾಕಾವ್ಯಗಳನ್ನು ಕನ್ನಡಕ್ಕೆ ತರುವಾಗಿನ ಸಂದರ್ಭದಿ ಪಂಪನ ಮನಸ್ಥಿತಿಗೂ, ಪ್ರಸ್ತುತ ಬದಲಾದ ಸನ್ನಿವೇಶದಲ್ಲಿ ಪ್ರಜಾಸತ್ತೆಯ ವ್ಯವಸ್ಥೆಯೊಳಗಡೆ ಹಿರಿಯ ವಿದ್ವಾಂಸರುಗಳು ಪ್ರಾಚೀನತಮ ಮೌಲ್ಯಯುತ ಕೃತಿಗಳನ್ನು ಪುನರ್ ಶಿಸ್ತಿನ ಓದಿಗೆ ಒಳಪಡಿಸಿ ಕಾವ್ಯ, ಕಥೆ, ಕಾದಂಬರಿ, ನಾಟಕಗಳನ್ನು ಕಟ್ಟುವಾಗಲೂ ಹೆಣ್ಣಿನ ಕುರಿತಾಗಿ ಈ ಪುರುಷ ಪ್ರಧಾನ ವ್ಯವಸ್ಥೆಯ ದೃಷ್ಟಿ-ಧೋರಣೆಗಳಲ್ಲಿ ಒಂದಿನಿತು ಬದಲಾಗದೇ ಹೆಣ್ಣೊಂದನ್ನು ಭೋಗದ ವಸ್ತುವನ್ನಾಗಿಯೇ ಉಳಿಸಿಕೊಂಡಿದ್ದು, ಬಳಸಿಕೊಂಡಿದ್ದು ವಿಷಾದನೀಯ, ಖೇದದ ಸಂಗತಿ. ಹಿಂದಿನ ಸತ್ ಸಂಪ್ರದಾಯದಂತೆ ರಾಜರುಗಳು ಬಲಾಢ್ಯ ರಾಜರುಗಳಿಂದ ವಿಪತ್ತು ಎದುರಾದಾಗ ಮಗಳನ್ನು ನೀಡಿ ವೈವಾಹಿಕ ಸಂಬಂಧ ಬೆಳಸಿ ತಮ್ಮ ರಾಜ್ಯಾಧಿಕಾರ ಉಳಿಸಿಕೊಂಡಂತೆ ;  ಬಹು ಉದಾರವಾದಿಯಾಗಿದ್ದ ಅರಿಕೇಸರಿಯು ಪಂಪನ ಮೇಲೆ ಅಪಾರವಾದ ಪ್ರೀತಿ, ವಿಶ್ವಾಸ, ಅಭಿಮಾನವಿದ್ದರೆ ಅಕ್ಕ-ತಂಗಿ ಇಲ್ಲವೇ ಮಗಳನ್ನು ಕೊಟ್ಟು ವಿವಾಹ ಮಾಡಬಹುದಿತ್ತು ಬದಲಾಗಿ ಲೆಕ್ಕವಿಲ್ಲದಷ್ಟು ವಾರನಾರಿಯರನ್ನು ಉಡುಗೊರೆಯಾಗಿ ಕೊಡಲು ದೊಡ್ಡ ಮನಸ್ಸು ಮಾಡುತ್ತಾನೆ. ಇದರ ಹಿಂದಿನ ಘನ ಉದ್ದೇಶವೇನು..? ಮುಂದುವರೆದು ಪಂಪನು ತನ್ನ ಕಾವ್ಯದಲ್ಲಿ ಕಾವ್ಯ ಪ್ರಯೋಜನೆಯ ಕುರಿತಾಗಿ ಹೇಳುವ ಸಂದರ್ಭದಲ್ಲಿಯೂ..,

ಕರಮಳ್ಕಿರ್ತು ಸಮಸ್ತ ಭಾರತಕಥಾ ಸಂಬಂಧಮಂಬಾಜಿಸಲ್ |
ಬರೆಯಲ್ ಕೇಳಲೊಡರ್ಚುವಂಗಮಿರೊಳ್ ತನ್ನಿಷ್ಟವಪ್ಪನ್ನಮು ||
ತ್ತರಮಕ್ಕುಂ ಧೃತಿ ತುಷ್ಟಿ ಪುಷ್ಟಿ ವಿಭವಂ ಸೌಭಾಗ್ಯಮಿಷ್ಟಾಂಗನಾ |
ಸುರತಂ ಕಾಂತಿಯಗುಂತಿ ಶಾಂತಿ ವಿಭವಂ ಭದ್ರ ಶುಭಂ ಮಂಗಳಂ ||೬೫|| ಪು.ಸಂ: ೪೦೬
ತನ್ನ ಕಾವ್ಯವನ್ನು ಓದುವದರಿಂದ, ಓದಲು ಪ್ರಯತ್ನಿಸುವವರಿಗೆ ಧೈರ್ಯ ಮತ್ತು ಸ್ಥೈರ್ಯ,  ಧೀರತನ, ಕಲಿತನ, ಕೆಚ್ಚು, ತಾಳ್ಮೆ, ಸಹನೆ, ತೃಪ್ತಿ, ಆನಂದ, ತಣಿವು, ಸಿರಿ, ಸಂಪತ್ತು, ಅಂದ, ಸೊಗಸು, ಹಿರಿಮೆ-ಗರಿಮೆ, ಘನತೆ-ಗೌರವದ ಜೊತೆಜೊತೆಗೆ ಇಷ್ಟಪಟ್ಟ ಅಂಗನೆಯರ ಕೂಡ ಸುರತ, ಸಂಭೋಗ,  ಕೂಟವು ಲಭಿಸುತ್ತದೆ ಎಂದು ಮಾರ್ಮಿಕವಾಗಿ ನುಡಿದಿದ್ದಾನೆ. ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ..? ಬಹುಶಃ ಲೆಕ್ಕವಿಲ್ಲದಷ್ಟು ವಾರನಾರಿಯರು ಉಡುಗೊರೆಯಾಗಿ ಲಭಿಸಿದ್ದರಿಂದ ಅಂಗನೆಯರ ಬಗ್ಗೆ ಮಾತನಾಡಿರಬೇಕು. ‘ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ’ ಎಲ್ಲಿ ಮಹಿಳೆಯರನ್ನು ಗೌರವದಿಂದ ಕಾಣಲಾಗುತ್ತದೆಯೋ ಅಲ್ಲಿ ದೇವಾನುದೇವತೆಗಳು ನೆಲೆಸುತ್ತಾರೆ. ಎಲ್ಲಿ ಮಹಿಳೆಯರನ್ನು ಅಪಮಾನಿಸಲಾಗುತ್ತದೆಯೋ ಅಲ್ಲಿ ಎಲ್ಲ ಧರ್ಮ-ಕರ್ಮಗಳು ನಿಷ್ಪಲವಾಗುತ್ತವೆ ಎಂದು ಮನು ತನ್ನ ಧರ್ಮಶಾಸ್ತ್ರದಲ್ಲಿ ಉಲ್ಲೇಖಿಸಿರುವಂತೆ. ಮಹಿಳೆಯರನ್ನು ಕೀಳಾಗಿ ಕಂಡದ್ದರಿಂದಲೋ.., ಅಪಮಾನಿಸಿದ್ದರಿಂದಲೋ.., ತತ್ಪಲವೆಂಬಂತೆ ಮೆರೆದ ಎಲ್ಲ ಸಾಮ್ರಾಜ್ಯಗಳೂ  ಮಣ್ಣುಗೂಡಿದವು.
ಒಟ್ಟಂದದಲ್ಲಿ ಪ್ರಸ್ತುತ ನಾಡೋಜ ನಾಟಕವು ಕೆಲವೊಂದು ಮಿತಿಗಳನ್ನು ಹೊಂದಿದ್ದಾಗಿಯೂ ಸಹ, ನೋಡುವ ದೃಷ್ಟಿಕೋನದಲ್ಲಿ ಹೊಸತನ್ನು ಕಾಣಬಹುದಾಗಿದೆ. ವಿದ್ಯಾರ್ಥಿಗಳನ್ನು ಗಮನದಲ್ಲಿರಿಸಿಕೊಂಡು ಬರೆದುದಾಗಿ ಸ್ವತಃ ನಾಟಕಾರರು ಹೇಳಿಕೊಂಡಿದ್ದರೂ ಇದನ್ನು ಸಾಹಿತ್ಯಾಸಕ್ತರೆಲ್ಲರೂ ಓದಲೇಬೇಕಾದ, ಸಂಗ್ರಹಯೋಗ್ಯವಾದ ಕೃತಿ ಎಂದು ಹೇಳಬಹುದು. ಈ ಕೃತಿಯ ಕೊರತೆಯನ್ನು ನೀಗಿಸಿ ಇನ್ನಷ್ಟು ಮೆರಗು ಬರುವಂತೆ  ಸಂಶೋಧನಾ ವಿದ್ಯಾರ್ಥಿಗಳನ್ನು ಲಕ್ಷಿಸಿ.., ನಾಟಕ ಒಳಗೊಂಡಿರುವ ಹಳಗನ್ನಡ ಪದಾರ್ಥಗಳನ್ನು, ಪಂಪನ ‘ವಿಕ್ರಮಾರ್ಜುನ ವಿಜಯಂ’ ನಲ್ಲಿನ ಆಯ್ದುಕೊಂಡ ಪದ್ಯಗಳಿಗೆ ಮೂಲಾಧಾರ ಸೂಚಿಯನ್ನು ನೀಡಿದ್ದೇನೆ. ಓದುಗರಿಗೆ ಸದುಪಯೋಗವಾದರೆ ಆ ಮೂಲಕ ಗುರುವಿಗೆ ಸಲ್ಲುವ ಗುರುಕಾಣಿಕೆ ಎಂದು ಭಾವಿಸುತ್ತೇನೆ. ನಾಡೋಜ ನಾಟಕವು ಮರಮುದ್ರಣ ಕಾಣಲಿ ಎನ್ನುವ ಸದಾಶಯದೊಂದಿಗೆ ಅಲ್ಲಿ ಈ ಲೇಖನ ಪ್ರಕಟಿಸುವುದು ಸೂಕ್ತ ಎಂದೆನಿಸಿದರೆ..,  . ಈ ಕುರಿತಾಗಿ ಸಹೃದಯರ ಅಭಿಪ್ರಾಯಗಳನ್ನು ಮನಸಾ ಸ್ವೀಕರಿಸುತ್ತೇನೆ.

  • ಡಾ.ಯಲ್ಲಮ್ಮ.ಕೆ – ಸಹಾಯಕ ಪ್ರಾಧ್ಯಾಪಕರು, ಜಿವಿಪಿಪಿಜಿಎಫ್ ಕಾಲೇಜ, ಹಗರಿಬೊಮ್ಮ್ಮನ ಹಳ್ಳಿ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW