ಓಟ, ಹರ್ಡಲ್ಸ್, ಉದ್ದಜಿಗಿತ, ರಿಲೇ ಹಾಗೂ ಕಬಡ್ಡಿ ಕ್ರೀಡೆಗಳಿಗೆ ರಾಜ್ಯ ಮಟ್ಟದಲ್ಲಿ ಆಯ್ಕೆಯಾದ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನಲ್ಲಿ ಅರಳಿದ ಪ್ರತಿಭೆ ‘ನಾಗರತ್ನ’ ಟೀಚರ್. ಅವರ ಸಾಧನೆ ಕುರಿತು ಡಾ ಯುವರಾಜ ಹೆಗಡೆ ಅವರು ಬರೆದ ಒಂದು ಕಿರುಪರಿಚಯ ಲೇಖನ,ಮುಂದೆ ಓದಿ…
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕು ಎಂದೊಡನೆ ಹಸಿರು ಹೊದಿಕೆಯನ್ನು ಹೊದ್ದಿರುವ ಪಶ್ಚಿಮ ಘಟ್ಟ ಸಾಲುಗಳ ನಡುವೆ ಜೀವನಾಧಾರಿತ ಜಮೀನು, ಊರು ಕೇರಿಗಳನ್ನು ಮುಳುಗಡೆಗೆ ಅರ್ಪಿಸಿ ಅಸ್ತವ್ಯಸ್ತಗೊಂಡ ಬದುಕು, ಚದುರಿ ದಿಕ್ಕಾಪಾಲಾದ ಕುಟುಂಬಗಳು, ಹೊರಜಗತ್ತಿನ ಸಂಪರ್ಕ ಕಳೆದುಕೊಂಡು ಬಿಕೋ ಎನ್ನುವ ನಡುಗಡ್ಡೆಗಳು, ವರ್ಷದಲ್ಲಿ ಆರು ತಿಂಗಳು ಮಳೆ, ಮುಳುಗಡೆಯ ಶೀತದಿಂದ ಆವರಿಸಿದ ನಿಗೂಢ ಕಾಯಿಲೆಗಳು, ಒಂದು ಕಾಲದಲ್ಲಿ ನಕ್ಸಲ್ ಚಟುವಟಿಕೆಯಿಂದ ತತ್ತರಿಸಿದ ಬದುಕು, ಇವೆಲ್ಲವುಗಳ ನಡುವೆ ಕಮರಿ ಹೋಗುತ್ತಿರುವ ಮಕ್ಕಳ ಶಿಕ್ಷಣ, ಭವಿಷ್ಯ ಹಾಗೂ ಪ್ರತಿಭೆಗಳು ನಮ್ಮ ಕಣ್ಣಮುಂದೆ ನಿಲ್ಲುತ್ತವೆ. ಅದರಲ್ಲೂ ಮುಖ್ಯವಾಗಿ ವ್ಯಾಪಾರ ವಹಿವಾಟು ಉತ್ತಮವಾಗಿ ನಡೆಸುತ್ತಿದ್ದ ಯಡೂರು, ನಗರ, ನಿಟ್ಟೂರು ಭಾಗದ ಊರುಗಳು ಮುಳುಗಡೆಯೊಂದಿಗೆ ತಮ್ಮ ಅಸ್ತಿತ್ವವನ್ನೇ ಕಳೆದುಕೊಂಡು ಹಾಳು ಕೊಂಪೆಗಳಾಗಿ ಜನಜೀವನ ದುಸ್ತರವಾಗಿರುವುದು ತಿಳಿದಿರುವ ಸಂಗತಿಯಾಗಿದೆ . ಇಂತಹದೇ ಪ್ರತಿಕೂಲ ಪರಿಸ್ಥಿತಿಯಲ್ಲಿ ‘ನಿಟ್ಟೂರು’ ಪಂಚಾಯತ್ ವ್ಯಾಪ್ತಿಯ “ನಾಗೋಡಿ” ಗ್ರಾಮದ ಕರ್ಕಮಡಿ ವಾಸಿ ಶ್ರೀಮತಿ ಸುಶೀಲಾ ವಿಶ್ವನಾಥ ಪೂಜಾರಿ ಅವರ ಪುತ್ರಿ, ಪ್ರಸ್ತುತ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ “ಹೊಲಗಾರು”ವಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಶಿಕ್ಷಕಿ ನಾಗರತ್ನ ಅವರು ಕ್ರೀಡೆಯಲ್ಲಿ ತೋರುತ್ತಿರುವ ಅದ್ಭುತ ಪ್ರದರ್ಶನ, ಸಾಧನೆಗಳ ಒಂದು ಕಿರುಪರಿಚಯ ಇಲ್ಲಿದೆ.

2021-22 ನೇ ಸಾಲಿನ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟವು ಮಾರ್ಚ್ 26,27 ನೇ ತಾರೀಕಿನಂದು ಶಿವಮೊಗ್ಗದ ನೆಹರೂ ಕ್ರೀಡಾಂಗಣದಲ್ಲಿ ಜರುಗಿತು. ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಕ್ರೀಡಾಸ್ಪರ್ಧೆಗಿಳಿದ ಆಟಗಾರರಲ್ಲಿ ಕುಮಾರಿ ನಾಗರತ್ನ ಅವರು ಅಥ್ಲೆಟಿಕ್ ವಿಭಾಗ ಹಾಗೂ ಕಬ್ಬಡಿಯಲ್ಲಿ ತೋರಿದ ಪ್ರದರ್ಶನ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
- 100 ಮೀಟರ್ ಓಟ- ಪ್ರಥಮ
- 200 ಮೀಟರ್ ಓಟ – ಪ್ರಥಮ
- 100 ಮೀಟರ್ ಹರ್ಡಲ್ಸ್-ಪ್ರಥಮ
- ಉದ್ದ ಜಿಗಿತ(Long Jump)- ಪ್ರಥಮ
- 4×100 ರಿಲೇ – ದ್ವಿತೀಯ
* ಕಬಡ್ಡಿ- ಇವರು ನಾಯಕತ್ವ ವಹಿಸಿದ್ದ ಹೊಸನಗರ ತಂಡ ಪ್ರಥಮ ಇದರೊಂದಿಗೆ ಅವರು ಓಟ, ಹರ್ಡಲ್ಸ್, ಉದ್ದಜಿಗಿತ, ರಿಲೇ ಹಾಗೂ ಕಬಡ್ಡಿ ಕ್ರೀಡೆಗಳಿಗೆ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

2020-21 ರ ಸಾಧನೆ:
- 100 ಮೀಟರ್ ಓಟ- ಪ್ರಥಮ
- 100 ಮೀಟರ್ ಹರ್ಡಲ್ಸ್-ದ್ವಿತೀಯ
- ಥ್ರೋ ಬಾಲ್- ದ್ವಿತೀಯ
- ಕಬಡ್ಡಿ ತಂಡ( ನಾಯಕತ್ವ)- ಪ್ರಥಮ
- ರಾಜ್ಯ ಮಟ್ಟದ” 100 ಮೀಟರ್ ಹರ್ಡಲ್ಸ್ ನಲ್ಲಿ- ದ್ವಿತೀಯ ಸ್ಥಾನ
- 2019-20 ರಲ್ಲಿ100 ಮೀಟರ್ ಓಟ – ಪ್ರಥಮ

ಉತ್ತಮ ಕಬಡ್ಡಿ ಆಟಗಾರ್ತಿ: ಇವರ ನಾಯಕತ್ವದಲ್ಲಿ ಹೊಸನಗರ ತಂಡ ಸತತ ಎರಡು ವರ್ಷಗಳಿಂದ ಪ್ರಥಮ ಸ್ಥಾನ ಪಡೆದು ಹೊರ ಹೊಮ್ಮಿದೆ. ಅಷ್ಟೇ ಅಲ್ಲ, ಈಕೆ ಕಟ್ಟಿದ ತಂಡ ಕಳೆದ ವರ್ಷ ದಾವಣಗೆರೆಯಲ್ಲಿ ಜರುಗಿದ ರಾಜ್ಯ ಮಟ್ಟದ ಸರ್ಕಾರಿ ನೌಕರರು ಕ್ರೀಡಾ ಕೂಟದಲ್ಲಿ ಅದ್ಭುತ ಪ್ರದರ್ಶನ ನೀಡಿತು . ಹೆಚ್ಚೇನು ಅಭ್ಯಾಸ ಇಲ್ಲದ ಶಿವಮೊಗ್ಗ ತಂಡವನ್ನು ಮುನ್ನಡೆಸಿದ ಇವರು, ಸರಣಿಯಲ್ಲಿ ಪ್ರಶಸ್ತಿ ಗೆಲ್ಲುವಲ್ಲಿ ನೆಚ್ಚಿನ ತಂಡವೆನಿಸಿದ್ದ ಬಳ್ಳಾರಿಯನ್ನು ಪ್ರಾರಂಭಿಕ ಹಂತದಲ್ಲಿಯೇ ಸೋಲುಣಿಸಿದ್ದು ಈಗ ಇತಿಹಾಸ. ನಂತರ ನುರಿತ ಆಟಗಾರ್ತಿಯರನ್ನು ಹೊಂದಿದ್ದ “ಸಚಿವಾಲಯ ಬೆಂಗಳೂರು” ತಂಡವು ಇವರ ಕಲಾತ್ಮಕ ಆಟದ ಮುಂದೆ ಮಂಡಿಯೂರಿತು.
ಸೆಮಿಫೈನಲ್ ಹಂತದಲ್ಲಿ ಅನೇಕ ವೃತ್ತಿಪರ ಆಟಗಾರರನ್ನು ಹೊಂದಿದ್ದ ಮೈಸೂರು ತಂಡದೆದುರು ನಾಗರತ್ನ ಹಾಗೂ ತಂಡದವರು ನೀಡಿದ ವಿರೋಚಿತ ಹೋರಾಟವನ್ನು ಇಡೀ ಕ್ರೀಡಾಂಗಣವೇ ಎದ್ದು ನಿಂತು ಚಪ್ಪಾಳೆಯೊಂದಿಗೆ ಅಭಿನಂದಿಸಿದ್ದರು.ಎದುರಾಳಿಗಳಿಗೆ ಸಿಂಹಸ್ವಪ್ನದಂತೆ ಕಾಡಿದ ಈಕೆಯನ್ನು ಕಟ್ಟಿ ಹಾಕುವಲ್ಲಿ ಹರಸಾಹಸ ಪಟ್ಟ ಮೈಸೂರು ತಂಡದ ಮಹಿಳಾ ಆಟಗಾರರು ಕೂಡ ನಾಗರತ್ನ ಅವರ ಕಲಾತ್ಮಕ ಪ್ರದರ್ಶನವನ್ನು ಕಂಡು ಮೆಚ್ಚುಗೆ ವ್ಯಕ್ತ ಪಡಿಸಿದ್ದರು .
ಇಷ್ಟೆಲ್ಲಾ ಸಾಧನೆಗೈಯುತ್ತಿರುವ ಆಟಗಾರ್ತಿಯ ಅಭ್ಯಾಸ ಯಾವುದೇ ಸಿಂಥಟಿಕ್ ಟ್ರ್ಯಾಕ್ ಮೇಲಾಗಲಿ, ಮೈದಾನದಲ್ಲಾಗಲೀ ನಡೆಯುತ್ತಿಲ್ಲ. ಅವರ ಊರಿನಲ್ಲಿ ಅಥವಾ ಕರ್ತವ್ಯ ನಿರ್ವಹಿಸುತ್ತಿರುವ ಶಾಲೆಯಲ್ಲಾಗಲಿ ಕನಿಷ್ಟ ಮೈದಾನದ ವ್ಯವಸ್ಥೆಯೂ ಇರುವುದಿಲ್ಲ. ಇಂತಹ ಪ್ರತಿಕೂಲ ಪರಿಸ್ಥಿತಿಗಳನ್ನು ಮೆಟ್ಟಿನಿಂತು ಸಕಲ ಸೌಕರ್ಯಗಳುಳ್ಳ ಪಟ್ಟಣ ಪ್ರದೇಶಗಳ ಕ್ರೀಡಾಪಟುಗಳೊಂದಿಗೆ ಸ್ಪರ್ಧಿಸುವ ಮನೋಬಲ, ಅಚಲ ವಿಶ್ವಾಸ, ದೃಢತೆ, ಸಾಧಿಸುವ ಛಲ ರಕ್ತದಲ್ಲಿಯೇ ಅಡಗಿರುವಂತಿದೆ.

ಉತ್ತಮ ಶೈಕ್ಷಣಿಕ ಸಾಧನೆ ಹಾಗೂ ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚು:
ಬಾಲ್ಯದ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಗ್ರಾಮೀಣ ಭಾಗದಲ್ಲಿಯೇ ಪೂರೈಸಿದ ಇವರು ಕೊಲ್ಲೂರು, ಹೊಲಗಾರು, ನಿಟ್ಟೂರಿನ ಸರ್ಕಾರಿ ಕನ್ನಡ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡಿರುತ್ತಾರೆ. ದ್ವಿತೀಯ ಪಿ.ಯು.ಸಿ ಯನ್ನು ಕೊಲ್ಲೂರಿನಲ್ಲಿ ಮುಗಿಸಿ, ಸಾಗರದಲ್ಲಿ ಡಿ.ಎಡ್ ಪಡೆದರು.ನಂತರ ದೂರ ಶಿಕ್ಷಣ ವ್ಯವಸ್ಥೆಯಲ್ಲಿ, ಆಂಗ್ಲ ಭಾಷೆಯನ್ನು ಪ್ರಥಮ ಆದ್ಯತೆಯಾಗಿ ಆಯ್ಕೆ ಮಾಡಿಕೊಂಡು (ಮೈಸೂರು ವಿಶ್ವವಿದ್ಯಾನಿಲಯ) ಪದವಿ ಹಾಗೂ ಬಿ.ಎಡ್ ಮತ್ತು ಧಾರವಾಡ ವಿಶ್ವವಿದ್ಯಾಲಯದಲ್ಲಿ ಎಂ.ಎ ಪದವಿಗಳನ್ನು ಪಡೆದಿರುತ್ತಾರೆ.

2010 ರಲ್ಲಿ ತಮ್ಮ ವೃತ್ತಿ ಜೀವನ ಆರಂಭಿಸಿ ಎರಡು ವರ್ಷಗಳ ಕಾಲ ಹೊಸನಗರದ ರಾಮಕೃಷ್ಣ ಶಾಲೆಯಲ್ಲಿ ಶಿಕ್ಷಕಿಯಾಗಿ , ನಕ್ಸಲ್ ಪೀಡಿತ ಪ್ರದೇಶಗಳಿಗೆ ನೀಡಲಾಗುವ ವಿಶೇಷ ಪ್ಯಾಕೇಜಿನಲ್ಲಿ 1 ವರ್ಷ ಕಾಲ ಹಾಗೂ ಮೂರುವರ್ಷಗಳ ಕಾಲ ಅತಿಥಿ ಶಿಕ್ಷಕಿಯಾಗಿ ತಾವು ವಿದ್ಯಾಭ್ಯಾಸ ಕಲಿತ “ಹೊಲಗಾರು” ಶಾಲೆಯಲ್ಲಿಯೇ ಕರ್ತವ್ಯ ನಿರ್ವಹಿಸಿ, ಅದೇ ಶಾಲೆಯಲ್ಲಿ 2016 ರಿಂದ ಖಾಯಂ ಶಿಕ್ಷಕಿಯಾಗಿ ನೇಮಕಗೊಂಡು ಮುಂದುವರೆದಿರುವುದರ ಬಗ್ಗೆ ಕೂಡ ಆಕೆಗೆ ಹೆಮ್ಮೆ ಇದೆ.
ವಿಷಯ ಹಾಗೂ ಭಾಷೆಯ ಮೇಲಿನ ಹಿಡಿತ, ಮಕ್ಕಳ ಮೇಲೆ ತೋರುವ ಕಾಳಜಿ, ಜವಾಬ್ದಾರಿ, ಪ್ರೀತಿಯಿಂದಾಗಿ ಹೊಲಗಾರು ಶಾಲೆಯ ವಿದ್ಯಾರ್ಥಿಗಳಿಗೆ ನಾಗರತ್ನ ಟೀಚರ್ ಬಹಳ ಅಚ್ಚುಮೆಚ್ಚಿನ ಶಿಕ್ಷಕಿ ಕೂಡ ಹೌದು.
ಚಿತ್ರ ಕಲಾವಿದೆ:

ಕ್ರೀಡೆ, ಶೈಕ್ಷಣಿಕ ವಿಚಾರಗಳಲ್ಲಷ್ಟೇ ಅಲ್ಲದೆ, ನಾಗರತ್ನ ಅವರು ಉತ್ತಮ ಚಿತ್ರ ಕಲಾವಿದರೂ ಆಗಿರುತ್ತಾರೆ. ಅವರು ಬಿಡಿಸಿದ ಕೆಲವು ಅದ್ಭುತ ಚಿತ್ರಗಳನ್ನು ಕೂಡ ನೀವಿಲ್ಲಿ ಕಾಣಬಹುದಾಗಿದೆ. ಹವ್ಯಾಸಕ್ಕೆಂದು ರಚಿಸಿರುವ ಚಿತ್ರಗಳು ಯಾವ ವೃತ್ತಿಪರ ಚಿತ್ರಗಾರನ ರಚನೆಗಳಿಗಿಂತಲೂ ಕಡಿಮೆಯೇನಿಲ್ಲ.
ಹೀಗೆ ಒಬ್ಬ ಆದರ್ಶ ಶಿಕ್ಷಕಿಯಾಗಿ, ಉತ್ತಮ ಕ್ರೀಡಾಪಟುವಾಗಿ ,ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚು, ಅತ್ಯುತ್ತಮ ಹವ್ಯಾಸಿ ಚಿತ್ರಕಲಾವಿದೆಯಾಗಿ ಸೌಕರ್ಯವಂಚಿತ ಮುಳುಗಡೆ ಪ್ರದೇಶಗಳಲ್ಲಿ ಎಲೆಮರೆಕಾಯಿಯಂತೆ ಇದ್ದು, ಎಲ್ಲಿಯೂ ಪ್ರಚಾರ ಬಯಸದೆ ಸಾಧನೆಗೈಯುತ್ತಿರುವ ನಾಗರತ್ನ ಅವರ ಪ್ರತಿಭೆ ಹೊರಜಗತ್ತಿಗಿರಲಿ ಸ್ವತಃ ಅವರ ಊರಾದ ನಾಗೋಡಿ ಊರಿನವರಿಗೂ ತಿಳಿದಿಲ್ಲ.ಅವರ ಎಲ್ಲಾ ಕ್ರೀಡಾ ಹಾಗೂ ಕಾರ್ಯ ಚಟುವಟಿಕೆಗಳಿಗೆ ಶಾಲಾ ಮುಖ್ಯ ಶಿಕ್ಷಕಿಯಾದ ಶ್ರೀಮತಿ ಮಾಲತಿಯವರು ಬೆಂಬಲವಾಗಿದ್ದಾರೆ. ಮುಂಬರುವ ರಾಜ್ಯಮಟ್ಟದ ಕ್ರೀಡೆಯಲ್ಲಿ ಅವರಿಂದ ಉತ್ತಮ ಪ್ರದರ್ಶನ ಮೂಡಿಬರಲಿ, ಹಿಂದುಳಿದ ಪ್ರದೇಶದಲ್ಲಿನ ಗ್ರಾಮೀಣ ಪ್ರತಿಭೆಯೊಂದು ಪ್ರಜ್ವಲಿಸಲಿ ಎಂದು ಹಾರೈಸುತ್ತೇವೆ.

ಏಪ್ರಿಲ್ 05 , 2022 ರಂದು ಶಿವಮೊಗ್ಗೆಯಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘವು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು “ಸ್ಫೂರ್ತಿದಾಯಿನಿ…ಪ್ರಗತಿಗಾಮಿನಿ” ‘ನಾ ಹೆಣ್ಣೆಂಬುದೇ ಹೆಮ್ಮೆ’ ಎಂಬ ಶಿರೋನಾಮೆಯಡಿಯಲ್ಲಿ ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣು ಸಮಾಜಕ್ಕೆ ಸ್ಫೂರ್ತಿಯಾಗಿ , ಪ್ರಗತಿ ಗಾಮಿನಿಯಾಗಿ ಬದುಕಬಲ್ಲಳೆಂಬ ಹಲವಾರು ವಿಚಾರಗಳು ಮಂಡನೆಯಾಗಲಿವೆ. ಸಂಘದಲ್ಲಿಯೇ ನಾಗರತ್ನ ಅವರಂತಹ ಅನೇಕ ಸಾಧಕರು ಎಲೆಮರೆಕಾಯಿಯಂತೆ ನಮ್ಮ ಕಣ್ಣೆದುರೇ ಇದ್ದು ಇಂತಹ ಸ್ಫೂರ್ತಿದಾಯಿನಿಯರನ್ನು ಗುರುತಿಸಿ ಹೆಚ್ಚಿನ ತರಬೇತಿ, ಅವಕಾಶಗಳು, ಪ್ರಶಂಸೆ, ಪ್ರೋತ್ಸಾಹಗಳು ಹಾಗೂ ಸೂಕ್ತವೇದಿಕೆಗಳಲ್ಲಿ ಗೌರವಿಸುವ ಕೆಲಸಗಳಾದಲ್ಲಿ ಕಾರ್ಯಕ್ರಮಗಳು ಅರ್ಥಪೂರ್ಣವಾಗಿರುತ್ತದೆ ಎಂದು ನನ್ನ ಅಭಿಪ್ರಾಯವಾಗಿದೆ.
- ಡಾ ಯುವರಾಜ ಹೆಗಡೆ (ಪಶುವೈದ್ಯರು,ವೈದಕೀಯ ಬರಹಗಾರರು) ತೀರ್ಥಹಳ್ಳಿ
