ಲೇಖಕರು ಎಸ್ ನಾಗಶ್ರೀ ಅಜಯ್ ಅವರು ‘ನಾಲ್ಕು ಋತುಗಳ ಹುಡುಗಿ’ ಕೃತಿಯ ಕುರಿತು ಲೇಖಕರಾದ ನಾಗರೇಖಾ ಗಾಂವಕರ ಅವರು ತಮ್ಮ ಅಭಿಪ್ರಾಯವನ್ನು ತಪ್ಪದೆ ಮುಂದೆ ಓದಿ…
ಪುಸ್ತಕ : ನಾಲ್ಕು ಋತುಗಳ ಹುಡುಗಿ
ಲೇಖಕರು : ಎಸ್ ನಾಗಶ್ರೀ ಅಜಯ್
ಪ್ರಕಾಶಕರು : ಅಜೇಯ ಪ್ರಕಾಶನ
ಬೆಲೆ : 120.00
ಪ್ರೀತಿಗಂಗಳ ಹುಡುಗಿ ಎಸ್ ನಾಗಶ್ರೀ ಅಜಯ್ ಕವನ ಸಂಕಲನದ ಬಗ್ಗೆ. ನಾಲ್ಕು ಋತುಗಳ ಹುಡುಗಿಯ ಕವಿತೆ ಗುಂಗು
ಕವಿತೆಯ ಗುಂಗಿಗೆ ಬಿದ್ದವರ ಕಥೆ ಹೆಚ್ಚು ಕಮ್ಮಿ ಎಲ್ಲರದದ್ದೂ ಒಂದೇ ನಮೂನೆ. ಬದುಕಿನ ಹುಡುಕಾಟದ ಹಾದಿ ಹೇಗೆ ಭಿನ್ನ ಸ್ವರೂಪವೋ ಉದ್ದೇಶಗಳು ಹೇಗೆ ಬೇರೆ ಬೇರೆಯೋ ಹಾಗೇ. ಕವಿತೆಯ ಹುಡುಕಾಟದ ಹಾದಿಯೂ ಬೇರೆ ಬೇರೆಯದೇ! ಅದರಲ್ಲೂ ಕನ್ನಡದ ಮಟ್ಟಿಗೆ ಇಂದಿನ ಕಾವ್ಯ ಸಂವೇದನೆಯಲ್ಲಿ ಚಿಗಿತುಕೊಳ್ಳುತ್ತಿರುವ ಹೊಸ ಸಂವೇದನೆ ಬಹುಮುಖ್ಯವಾಗಿ ಮಹಿಳಾ ಪ್ರಜ್ಞೆ. ನಾನು ಹೀಗೆ ಹೇಳಿದರೆ ಇನ್ನೊಬ್ಬರ ಬಾಯಿಗೆ ಆಹಾರವಾಗುವೆನೋ? ಹೀಗೆ ನಡೆದರೆ ಗಂಡಸರು ಏನ್ನೆನ್ನುವರೋ ಎಂಬೆಲ್ಲ ಕ್ಲೀಷೆಗಳನ್ನು ಮೀರಿ ಮಹಿಳೆಯರು ವ್ಯಕ್ತವಾಗುತ್ತಿದ್ದಾರೆ. ಅದರಲ್ಲೂ ತಮಗೆ ತಮ್ಮ ವ್ಯಕ್ತಿತ್ವಕ್ಕೆ ತಕ್ಕುದಾದ ಮಾರ್ಗವನ್ನು ಅಭಿವ್ಯಕ್ತಿಯ ವಿಧಾನವನ್ನೂ ಅವರೇ ಗುರುತಿಸಿಕೊಂಡಿದ್ದಾರೆ. ಇದೊಂದು ಇಂದಿನ ಅತಿ ಜರೂರತ್ತಿನ ಮತ್ತು ನಮ್ಮ ಹುಡುಕಾಟಕ್ಕೆ ಉತ್ತರ ಕಂಡುಕೊಳ್ಳುವ ನಿಟ್ಟಿನ ಓಟವೂ ಹೌದು. ನಾಗಶ್ರೀ ಅಜಯ ಎಂಬ ನಾಲ್ಕು ಋತುಗಳ ಹುಡುಗಿ ಕೂಡಾ ಈ ಓಟದಲ್ಲಿ ನಿಂತಿದ್ದಾರೆ.

ಕೆಂಡ ಸಂಪಿಗೆಯಲ್ಲಿ ನಾಗಶ್ರೀ ಅಜಯ ಅವರ ಕಾಲಂ ಬರಹಗಳಲ್ಲಿ ಕೆಲವನ್ನು ಓದಿದ್ದೆ. ಇಷ್ಟು ಆಪ್ತವಾಗಿ, ಸಹಜವಾಗಿ ಬದುಕನ್ನು ನೋಡುವ, ಮತ್ತದನ್ನು ಅದೇ ಮಾದರಿಯಲ್ಲಿ ನಿರೂಪಿಸುವ ಕಲೆ ಅವರಿಗೆ ಇದೆ ಎನಿಸಿತ್ತು. ಗದ್ಯದಲ್ಲಿ ಕಾವ್ಯಾತ್ಮಕವಾಗಿ ಬರೆಯಬಲ್ಲ ಅವರು ಪದ್ಯದಲ್ಲೂ ಅದನ್ನು ನಿಜವಾಗಿಸಿದ್ದಾರೆ. ಈಗ ಅವರ ಕವನ ಸಂಕಲನ ‘ನಾಲ್ಕು ಋತುಗಳ ಹುಡುಗಿ ಓದಿದ ಮೇಲೆ ನನ್ನ ಗ್ರಹಿಕೆ ಇನ್ನಷ್ಟು ನಿಜ ಎನಿಸಿತು. ನಾಗಶ್ರೀ ನನ್ನ ಪೇಸಬುಕ್ ಸ್ನೇಹಿತರು. ಮಲ್ಲಿಗೆ ನಗೆಯ ತುಂಬು ಮುಖದ ಹುಡುಗಿ. ನೀಲಿ ಸೀರೆಯಲ್ಲಿ ಆಗಾಗ ಮುಖಪುಸ್ತಕದಲ್ಲಿ ಭೇಟಿಯಾಗುತ್ತಾರೆ. ನೀಲಿಸೀರೆಯಲ್ಲಿ ಹೊಳೆವ ಅವರ ತುಂಬುನಗೆಯಂತೆ ಅವರ ಕಾವ್ಯವೂ ಇರಬಹುದೇ ಎಂದು ಸಂಕಲನ ಓದಿದೆ. ಮುನ್ನುಡಿಯಲ್ಲಿ ಯುವ ವಿಮರ್ಶಕರಾದ ದಿಲೀಪಕುಮಾರರು ಬರೆದ ವಿಶ್ಲೇಷಣಾತ್ಮಕ ಬರಹ ನನ್ನ ಓದಿಗೆ ಒಜ್ಜೆಯಾಗದಿರಲಿ ಎಂದು ಪ್ರಾರಂಭದಲ್ಲಿ ಅರ್ಧಕ್ಕೆ ನಿಲ್ಲಿಸಿ ಸಂಕಲನ ಓದಿದೆ. ಆದರೆ ಆನಂತರ ಮುನ್ನುಡಿಯನ್ನು ಓದಿದಾಗ ಈ ಮುನ್ನುಡಿ ಈ ಸಂಕಲನಕ್ಕೆ ಔಚಿತ್ಯಪೂರ್ಣ ಪ್ರವೇಶಿಕೆ ಎನ್ನಿಸಿತು.
ಇರಲಿ.. ಸಾಚಾ ಅನುಭವಗಳನ್ನು ಕಟ್ಟಿಕೊಡುವುದು ಕವಿತೆ. ಇಂತಹ ಕವಿತೆ ಬರೆಯುವ ಹುಡುಗಿ ಮಂತ್ರದಂಡದ ಮುಂದೆ ಕುಳಿತುಕೊಳ್ಳಬೇಕೆ? ಇದು ದೊಡ್ಡವರ ಪ್ರಶ್ನೆ. ಆದರೆ ನಾಗಶ್ರೀ ಮಗು ಮನಸ್ಸಿನಿಂದ ಹೊರಬಂದಿಲ್ಲ. ಹಾಗಾಗಿ ಅಜ್ಜಿ ಹೇಳುವ ಕಥೆಗಳಲ್ಲಿಯ ಮಂತ್ರದಂಡ ತನಗೆ ಕವಿತೆ ಬರೆಯುವ ಮ್ಯಾಜಿಕ್ ಉಪಾಯವನ್ನಾದರೂ ಹೇಳಬಹುದು ಎಂಬ ಆಸೆಯನ್ನು ಕನಸನ್ನು ಜೊತೆಗೆ ಇಟ್ಟುಕೊಂಡಿದ್ದಾರೆ ಎನಿಸುತ್ತಿದೆ.. ಈ ಕವಿತೆ ಸಂಕಲನದ ಮೊದಲ ಕವಿತೆ. ಕವಿಯೊಬ್ಬನಿಗೆ ಬೇಕಾದ ಈ ಬೆರಗುಗಣ್ಣು ನಿಧಾನಕ್ಕೆ ಸೂಕ್ಷ್ಮ ಕಣ್ಣಾಗಿ ಬದಲಾಗುತ್ತಾ ಪದಗಳ ಬೇಟೆಯಾಡುತ್ತಾ ಕವಿತೆಯಾಗುತ್ತಿದೆ. ಆಶಾವಾದಿ ನಡೆ ಕೂಡಾ ಕವಿತೆಯಲ್ಲಿದೆ. ಮಂತ್ರದಂಡದ ಪ್ರಸಾದ ಸಿದ್ಧಿಸಿತೋ ಒಟ್ಟು ಹುಡುಗಿ ಕವಿತೆ ಬರೆದಳು, ಖುದ್ದೂ ಕವಿತೆಯೂ ಆದಳು.
ಎಳೆಹುಡುಗಿ
ಕಾಗದದ ಮೇಲಿನ ಕವಿತೆಯಾದಳು
ಆಮೇಲೆ ರದ್ದಿಮುದ್ದೆಯಾಗದೆ
ಗಾಳಿಪಟವಾದರೂ ಸರಿಯೆಂದು
ನೂರು ಹರಕೆ ಹೊತ್ತಳು. ನಾಗಶ್ರೀ ಕವಿತೆಗಳು ಇಂತಹ ಚಿಂತನೆಗಳಿಂದಲೇ ಇಷ್ಟವಾಗುತ್ತವೆ. ಇಡೀ ಕವಿತೆ ಓದಿದರೆ ಸಾರವನ್ನು ಹರಡಿ ಹಂಚಿದಂತೇ ಭಾಸವಾಗುತ್ತದೆ. ಆದರೆ ಆ ಕವಿತೆಗಳ ಕೆಲವು ಸಾಲುಗಳಲ್ಲಿ ಗಹನವಾದ ಸಂಗತಿಗಳ ಕಡೆ ಕಾವ್ಯ ಪ್ರಿಯರ ಗಮನ ಸೆಳೆಯುತ್ತಾರೆ.
ಕವಿತೆಯಲ್ಲಿ ಅನುಭವ ಮಾತ್ರವೇ ಉಳಿದುಬಿಟ್ಟರೆ ಅದು ಕಾವ್ಯವಾಗದು. ಆಶಯ ಮತ್ತು ಆಕೃತಿಯ ದೃಷ್ಟಿಯಿಂದಲೂ ಕವಿತೆ ತನ್ನನ್ನು ಬೆಳಗಿಸಿಕೊಳ್ಳಬೇಕು. ಇಲ್ಲಿಯ ಕವಿತೆಗಳು ಆಕೃತಿಗಿಂತ ಆಶಯದ ಕಡೆಗೆ ಗಮನ ಹರಿಸುತ್ತವೆ. ಮತ್ತು ಅನುಭವದ ನೈಜ ನಿರೂಪಣೆಯಿಂದ ಮನ ಗೆಲ್ಲುತ್ತವೆ. ಕಾವ್ಯದ ಆಕೃತಿಯಲ್ಲಿ ಈ ಕವಿತೆ ಇನ್ನಷ್ಟು ಹೇಳಬಹುದಿತ್ತೇ? ಅಥವಾ ತೀರಾ ಶಬ್ದಗಳ ಸಂತೆಯನ್ನೆ ಈ ಕವಿತೆ ಮೈಮೇಲೆ ಹೊದ್ದುಕೊಂಡಿದೆ ಎಂದೆನ್ನಿಸುವಷ್ಟರಲ್ಲಿ ಕವಿತೆ ಮೌನವಾಗುತ್ತದೆ.
ಇದ್ದದ್ದು ಇದ್ದಂತೆ ಕವಿತೆಯಂತೂ ಮಾಮರ್ಿಕವಾಗಿದೆ. ವಿಡಂಬನೆ ಶೈಲಿಯಲ್ಲಿ ಇರುವ ಈ ಕವಿತೆ
ಬಹಳ ಗೊತ್ತೆಂಬ ಹಮ್ಮಿನಲಿ
ಹೊಸ ಬಣ್ಣಗಳ ಹುಡುಕುವೆವು
ಸೃಜಿಸಿದ ಮತ್ತಾವ ಬಣ್ಣಕ್ಕೂ
ಸ್ವತಂತ್ರ ಅಸ್ತಿತ್ವವಿಲ್ಲ
ಇದರ ಹೆಸರಿಗೆ ಅದರ ಉಲ್ಲೇಖ
ಅದರ ಚಿತ್ತಾರಕ್ಕೆ ಇದರ ಸಹಯೋಗ
ಹೊಸತು ಹಳೆತು ಹೆಸರಿಗಷ್ಟೇ ವಿರುದ್ಧ
ನನ್ನ ತಿಳುವಳಿಕೆಗದು ಜೋಡಿಪದ’ ಬದುಕು ಇಷ್ಟೇ ಸರಳ.
‘ದಿನದಿನವೂ ಹೊಸತಹುದು/ದಿನದಿನವೂ ಹಳೆತಹುದು
ಹೊಸತದುವೆ/ ಹಳೆತದುವೆ
ಬೇಧವುಂಟೇನು?
ಇರುವುದೆಂಬುದು ಹಳಮೆ ಬರುವುದೆಂಬುದು ಹೊಸಮೆ
ಒಂದೇ ಕಾಲದ ಮಾತು ಹಿಂದೆ ಮುಂದೆ’ ಎಂಬ ಕವಿವಾಣಿ ಇದೆ. ವಿರುದ್ಧ ಪದವನ್ನು ಜೋಡಿಪದವಾಗಿಸಿಕೊಳ್ಳುವ ಕಲೆ ನಮಗೆ ಸಿದ್ದಿಸಿದಾಗ ಬದುಕು ಸುಂದರ. ಆದರೆ ನಾವು ಬದುಕನ್ನು ಎಷ್ಟು ಸಂಕೀರ್ಣ ಮಾಡಿಕೊಳ್ಳುತ್ತೇವೆ. ಬದುಕಿನ ಬಣ್ಣವು ಹೀಗೆ. ಯಾವುದೂ ಮೇಲಲ್ಲ, ಕೀಳಲ್ಲ. ಇಂತಹ ನೈಸಗರ್ಿಕ ಹೊಂದಾಣಿಕೆ ತಿಳಿದಿದ್ದಲ್ಲಿ ಎಲ್ಲವೂ ಸುಂದರ. ಆ ಸರಳತೆಯನ್ನು ಮೈಗೂಡಿಕೊಂಡರಷ್ಟೇ ಬದುಕು ಬಣ್ಣಗಳ ಮೋಹ, ಹೆಸರಿನ ಮೋಹ, ಇತ್ಯಾದಿ ಇತ್ಯಾದಿ ಮೋಹಗಳಿಗೆ ಹೊರತಾದ ಸಹಜ ಬದುಕಿನ ಮೋಹ ಬಲಿಯುತ್ತದೆ. ಅತಿ ಆಧುನಿಕತೆಯ ಔಟ್ ಡೆಟೇಡ್’ ಎಂಬ ಪರಿಕಲ್ಪನೆಗೆ ನಿಸರ್ಗದಲ್ಲಿ ಸ್ಥಾನವಿಲ್ಲ. ಹೊಂದಾಣಿಕೆ ಮತ್ತು ಸಹ ಅಸ್ತಿತ್ವ ಇದು ಪ್ರಕೃತಿಯ ತಾತ್ವಿಕತೆ. ಅದನ್ನು ನಾವು ಮೈಗೂಡಿಸಿಕೊಳ್ಳುವುದನ್ನು ಕಲಿಯಬೇಕಿದೆ. ಆದರೆ ನಾವು ಬದುಕೆಂದರೆ ಮ್ಯಾಚಿಂಗ ಸೆಂಟರ್ನಂತೆ ಮಾಡಿಕೊಂಡಿದ್ದೇವೆ. ಕೆಲವು ಬಣ್ಣಗಳಿಗೆ ಮಾರು ಹೋಗಿದ್ದೇವೆ. ನನಗೆಲ್ಲಾ ಗೊತ್ತೆಂಬ ಅಹಂನಲ್ಲಿ ಸದಾ ಹೊಸದರ ಹುಡುಕಾಟಕ್ಕೆ, ಚಿಂತನೆಗೆ ತೊಡಗುತ್ತೇವೆ. ಇಂತಹ ಹಲವು ಬಹಳ ಆಪ್ತ ಸಂಗತಿಗಳನ್ನು ನಮ್ಮ ಮುಂದಿಟ್ಟು ಕವಯತ್ರಿ ಚಿಂತನೆಗೆ ದೂಡುತ್ತಾರೆ.

ಸಣ್ಣ ಪಟ್ಟಣದ ಸಕ್ಕರೆಬೊಂಬೆಯ ಗುಟ್ಟು’ ಹೆಸರಿನಷ್ಟೇ ಗುಟ್ಟು ಸಿಹಿಯುಣಿಸುತ್ತದೆ. ಹಳ್ಳಿ ಅಥವಾ ಸಣ್ಣ ಊರಿನ ಕೆಲವು ಸುಂದರ ಹುಡುಗಿಯರು ಪ್ರೇಮವನ್ನು ಸಂಭಾಳಿಸುವಾಗ ಪಡುವ ಪಡಿಪಾಟಲು, ದೊಟ್ಟ ಪಟ್ಟಣದ ಹುಡುಗಿಯರಿಗೆ ಆ ಚತುರತೆ ಮತ್ತು ಅನುಭವ ಇರದ ಪರಿಯನ್ನು ಕಣ್ಣಿಗೆ ಕಟ್ಟುವಂತೆ ಹೇಳಿದ್ದಾರೆ.
ಸಣ್ಣ ಊರಿನ ಹೆಂಗಳೆಯರ
ಬುದ್ಧಿ ಬ್ರಹ್ಮಾಂಡ ಬೆಳೆಯುವುದು ಹೀಗೆ
ಪ್ರೀತಿಸಿದಾಗ ಬುದ್ದಿ ಕಳೆಯದೆ
ಜೋಪಾನ ಮನೆಗೊಯ್ಯುವ ಕಲೆ
ನೊಸಲ ಮೇಲಿನ ಮುತ್ತು
ಕೆನ್ನೆರಂಗಿಗೆ ಇಳಿಯದಂತೆ
ತೋರುವ ಹುಷಾರು
ಉಹೂಂ!
ಅರ್ಥವಾಗುವುದಿಲ್ಲ ಹುಡುಗಿಯರೆ
ಮಹಾನಗರದ ಅನಾಮಿಕ ಸುಖದಲಿ
ಪ್ರೇಮಿಸುವ ನಿಮಗೆ
ಕವಿತೆ ಸಂಭವಿಸಬೇಕು. ಅಂತಹ ಒಂದು ಕಾವ್ಯ ಬದ್ಧತೆಗೆ ಇಲ್ಲಿಯ ಕೆಲವು ಕವಿತೆಗಳು ನಿಲ್ಲುತ್ತದೆ. ಮೋಡವನ್ನು ಮಾತನಾಡಿಸುವ, ನಡೆವ ದಾರಿಯನ್ನೇ ಎದ್ದು ನಡೆಯುವಂತೆ ಮಾಡುವ ಶಕ್ತಿ ಕೆಲವು ಗಳಿಗೆಗಳಿಗೆ ಇರುತ್ತದೆ ಎನ್ನುತ್ತಾರೆ. ಕವಿತೆಗೂ ಅಂತಹ ಶಕ್ತಿ ಇದೆ. ಅದು ಸತ್ಯವೂ ಹೌದು. ಇಲ್ಲಿಯ ಕವಿತೆಗಳು ವಿಡಂಬನೆಯ ದನಿಯನ್ನೇ ಹೊಂದಿದ್ದರೂ ದಾಟಿಯಲ್ಲಿ ಮೃದುತನವನ್ನೇ ಮೈತಾಳಿವೆ. ಆ ಮೃದುತ್ವವೇ ಕವಿಯ ಸೂಕ್ಷ್ಮ ಕಣ್ಣುಗಳಿಗೆ ವಸ್ತುವನ್ನೂ ದಾಟಿಸುತ್ತವೆ.
‘ಸಂಬಂಧಗಳು ಅನ್ನದಂತೆ’ ಕವಿತೆ ಸಾಲುಗಳ ಉಲ್ಲೇಖಿಸುವ ಮೂಲಕ ನಾಗಶ್ರೀಯವರಿಗೆ ಶುಭ ಕೋರುತ್ತೇನೆ.
ಸಂಬಂಧಗಳು ಅನ್ನದಂತೆ
ಬಿಸಿಯಲ್ಲಿ ರುಚಿ
ಆರಿದಾಗ ಆರಾಮು
ಹಳಸಿದಾಗ ಹುಳಿನಾತ…..
- ನಾಗರೇಖಾ ಗಾಂವಕರ
