‘ನಮಗೊಂದು ಸೊಸೆ ಬೇಕು’ ಕೃತಿ ಪರಿಚಯ

ಕಾದಂಬರಿಕಾರರಾದ ಕೆ ಸತ್ಯನಾರಾಯಣ ಅವರ ಹೊಸ ಕಾದಂಬರಿ ‘ನಮಗೊಂದು ಸೊಸೆ ಬೇಕು’ ಕೃತಿಯ ಕುರಿತು ಲೇಖಕರಾದ ಡಾ ಗಿರಿಜಾ ಶಾಸ್ತ್ರಿ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಪುಸ್ತಕ : ‘ನಮಗೊಂದು ಸೊಸೆ ಬೇಕು’
ಲೇಖಕರು : ಸತ್ಯನಾರಾಯಣ
ಪ್ರಕಾಶನ : ಅಮೂಲ್ಯ ಪ್ರಕಾಶನ
ಬೆಲೆ : 180.00

‘ನಮಗೊಂದು ಸೊಸೆ ಬೇಕು’ ಇದು ಸತ್ಯನಾರಾಯಣ ಅವರ ಹೊಸ ಕಾದಂಬರಿ. ‘ಒಂದು ಸೊಸೆ’ಎನ್ನುವುರಲ್ಲಿಯೇ ಅದೊಂದು ವಸ್ತುವಾಗಿರುವ ಭಾವವನ್ನು ಮೊದಲಿಗೇ ಕೊಡುತ್ತದೆ. ಒಟ್ಟು ಮನುಷ್ಯ ಸಂಬಂಧವೆಂಬುದು ಕೂಡ ಭಾವನಾರಹಿತ್ಯವಾದ ಒಂದು ವಸ್ತುವಾಗಿ ಪರಿವರ್ತನೆಯಾಗಿರುವ ಸದ್ಯದ ಸ್ಥಿತಿಯನ್ನು ಹೇಳುತ್ತದೆ. ಇದಕ್ಕೆ ಬಳಸಿರುವ ಯಾವುದೇ ಭಾವನಾತ್ಮಕ ಪಸೆ ಇಲ್ಲದ ಭಾಷೆಯೂ ಕೂಡ ಈ ಕೃತಿಯ ಆಶಯಕ್ಕೆ ಒತ್ತಾಸೆಯಾಗಿದೆ.

ಏಕತಾನತೆಯನ್ನು ಮೀರಲು ಸಾಧ್ಯವಾಗದ,ದೈನಂದಿನ ಬದುಕಿನ ಯಾಂತ್ರಿಕತೆಯಲ್ಲಿ ಹೊಸತನವನ್ನು ಕಂಡುಕೊಳ್ಳಲಾರದ , ಹೊಸತನಬೇಕೆಂಬ ಈ ಸಮಸ್ಯೆ ಕೇವಲ ದಂಪತಿಗಳದ್ದು ಮಾತ್ರವಾಗಿಬೇಕಿಲ್ಲ.

ಬೇಸರ (boredom) ಎನ್ನುವುದು ಆಧುನಿಕ ಕಾಲದ ದೊಡ್ಡ ರೋಗ ಎಂದು ಡಿ.ಆರ್ ಎನ್. ಹೇಳುತ್ತಿದ್ದರು. ಅವರು ಸುಮಾರು ೩೦ ವರುಷಗಳ ಹಿಂದೆ ಹೇಳಿದ ಮಾತಿದು. ಆ ಮಾತನ್ನು ಪುಷ್ಠಿಗೊಳಿಸಲೆಂಬಂತೆ ಈ ಕಾದಂಬರಿಯ ನಾಯಕಿ ಮಾಲಿನಿಯ ಪಾತ್ರವಿದೆ. ಕೌಟುಂಬಿಕ ವ್ಯವಸ್ಥೆ ಬಿರುಕುಬಿಡುತ್ತಿರುವ ಸದ್ದನ್ನು ನಮ್ಮ ನವ್ಯಲೇಖಕರೇ ಗಮನಿಸಿದ್ದರು. ಅದಕ್ಕೆ ಮುಖ್ಯಕಾರಣಗಳಲ್ಲಿ ಈ ‘ಬೇಸರ’ವೂ ಒಂದಾಗಿದೆ ಎನಿಸುತ್ತದೆ.

ಒಂದುವರ್ಷದಲ್ಲಿಯೇ ಮಾಲಿನಿಗೆ ಗಂಡನೊಡನೆ ಸಂಬಂಧ ಯಾಂತ್ರಿಕವಾಗುತ್ತದೆ, ಏಕತಾನತೆ ಬೇಸರ ತರಿಸುತ್ತದೆ. ಆ ಕಾರಣಕ್ಕಾಗಿಯೇ ಅವಳು ಗಂಡನಿಂದ ವಿಚ್ಛೇದನ ಪಡೆದುಕೊಳ್ಳುತ್ತಾಳೆ. ಹಾಗೆ ಬೇರೊಬ್ಬನಿಂದ (ವೀರ್ಯಬ್ಯಾಂಕಿನ ಸಹಾಯದಿಂದ) ಮಗುವನ್ನು ಪಡದುಕೊಳ್ಳಲು ನಿರ್ಧರಿಸುತ್ತಾಳೆ. ಅವಳಿಗೆ ತಾಯಿಯಾಗುವುದರಲ್ಲಿ ಮಾತ್ರ ಆಸಕ್ತಿ ಇದೆ. ತಂದೆತನವನ್ನು ಸಂಪೂರ್ಣ ನಿರಾಕರಿಸುತ್ತಾಳೆ. ಅವಳ ಈ ನಿಲುವಿನಲ್ಲಿ ಒಂದು ತಾರ್ಕಿಕ ಗೊಂದಲವಿದೆ.

ಏಕತಾನತೆಯನ್ನು ಮೀರಲಾರದ, ದಿನದಿನದ ಯಾಂತ್ರಿಕತೆಯಲ್ಲಿ ಹೊಸತನ್ನು ಕಂಡುಕೊಳ್ಳಲಾರದ ಈ ‘ಬೇಸರ’ ವೇ ಮನುಷ್ಯ ಸಂಬಂಧಗಳಿಗೆ ದೊಡ್ಡ ಪಿಡುಗಾಗಿದೆ-ಹಾಗೆಂದು ಲೇಖಕರು ತಮ್ಮ ನಿಲುವನ್ನು ತೆಗೆದುಕೊಳ್ಳುವುದಿಲ್ಲ. ಇದು ಈ ಕಾಲದ ಸತ್ಯ ಎಂಬಂತೆ , ಈ ಕಾಲದ ಸಂಕೀರ್ಣ ಸಮಸ್ಯೆಯನ್ನು ವಸ್ತುನಿಷ್ಠವಾಗಿ ಓದುಗರ ಮುಂದೆ ಇಡುತ್ತಾರೆ.

 

ಏಕತಾನತೆ, ಯಾಂತ್ರಿಕತೆ ಎನ್ನುವುದು ಎಲ್ಲ ದುಡಿಮೆಗಳಲ್ಲಿ, ಎಲ್ಲ ರೀತಿಯ ಮನುಷ್ಯ ಸಂಬಂಧಗಳಲ್ಲಿ ಇರುವುದು ಸತ್ಯ. ಹಳೆಯದನ್ನು ಬಿಟ್ಟು ಹೊಸತನ್ನು ಹಿಡಿಯಹೋದರೆ ಅದೂ ಕಾಲಕ್ರಮೇಣ ಹಳೆಯದಾಗಬಹುದು ಬೋರುಹೊಡೆಸಬಹುದು. ಇದಕ್ಕೆ ಕೊನೆಯಾದರೂ ಎಲ್ಲಿ? ಇನ್ನು ಓಟ ಎಲ್ಲಿಗೆ? ಸಂಬಂಧಗಳಲ್ಲಿ ಹೊಸತನವನ್ನು ಕಂಡುಕೊಳ್ಳಬೇಕೆನ್ನುವುದು ವೈಯಕ್ತಿಕ ಸೃಜನಶೀಲತೆಯಲ್ಲಿ ಅಡಗಿದೆಯೋ ಅಥವಾ , ಅದರಿಂದ ಪಲಾಯನ ಗೈಯುವುದರಲ್ಲಿದೆಯೋ ಈ ಪ್ರಶ್ನೆಗಳನ್ನು ಈ ಕಾದಂಬರಿ ಓದುಗರಲ್ಲಿ ಹುಟ್ಟುಹಾಕುತ್ತದೆ.


  • ಡಾ ಗಿರಿಜಾ ಶಾಸ್ತ್ರಿ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW