ಶ್ರೀ ಸಾ ನಾ ರಮೇಶ್ ಅವರು ಓರ್ವ ಯಶಸ್ವಿ ವಾಸ್ತುಶಿಲ್ಪಿ, ಪ್ರವಾಸೋದ್ಯಮಿ, ಕವಿ, ಭರತನಾಟ್ಯ, ರಂಗಭೂಮಿ ಕಲಾವಿದ ಹಾಗೂ ನಟರಾದ ಇವರ ಸರಳ ಬದುಕಿನ ಪಯಣದ ಆತ್ಮಕಥನ ” ನನಸುಗಾರನ ಸ್ವಗತ “. ಪುಸ್ತಕದ ಕುರಿತು ಹೆಚ್ ವಿ ಮೀನ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…
ಪುಸ್ತಕ : ನನಸುಗಾರನ ಸ್ವಗತ ( ಸಾಗಿ ಸರಿದ ಬದುಕಿನ ಸ್ಮರಣಿಗಳು )
ಲೇಖಕರು : ಶ್ರೀ ಸಾ ನಾ ರಮೇಶ್
ಪ್ರಕಾಶನ : ರಾಜಮಾರ್ಗ ಸಾಹಿತ್ಯ ಸಂಸ್ಕೃತಿ
ಬೆಲೆ : 350/-
ಮೊ. 8880660347
“ಅಲೌಕಿಕದಿಂದ ಲೌಕಿಕಕ್ಕೆ ಬಂದರೆ ಅನಂತವಾಗಿದ್ದು ಗ್ರಹಿಸಲೇ ಆಗದ ಈ ಶೂನ್ಯ ಎಂಬುದು ಒಂದು ಸೊನ್ನೆ. ಸೊನ್ನೆಯ ಎಡಭಾಗಕ್ಕೆ ಒಂದನ್ನು ತಂದು ಸೊನ್ನೆಗೆ ಒಂದು ಬೆಲೆಯನ್ನು ತರುವುದು ಮೊಟ್ಟ ಮೊದಲ ಸಾಧನೆ ಯಾಗುತ್ತದೆ. ಅದೇ ಆರಂಭಿಕ…… ಪ್ರಾರಂಭದಲ್ಲಿ ಪ್ರಾರಂಭದ ಸಂಖ್ಯೆಯ ನಂತರ ಸೊನ್ನೆಯನ್ನು ಸೇರಿಸುತ್ತಾ ಹೋಗುವುದೇ ಬೆಳೆವಣಿಗೆ.”…..ಹೀಗೆಂದು ತಮ್ಮ ಬೆಳವಣಿಗೆಗೆ ಆಧ್ಯಾತ್ಮಿಕ ಚಿಂತನೆಗಳನ್ನು ಬೆಳೆಸಿಕೊಂಡು ಹೆಮ್ಮರವಾಗಿ ಬೆಳೆದುನಿಂತ ಇವರು “ಆರ್ ಸ್ಕ್ವಯರ್ ಡಿಸೈನ್ಸ್ ಪ್ರೈವೇಟ್ ಲಿಮಿಟೆಡ್ ” ಎಂಬ ಸ್ವಂತ ಸಂಸ್ಥೆಯ ಉದ್ಯಮಿಯಾಗಿ ಗುಹಾಂತರ, ಝರಿ, ಶಿಲಾಂದರ, ಸಿರಿ ಎಂಬ ರೆಸಾರ್ಟ್ ಗಳ ಮಾಲೀಕರಾದರು. ಕ್ರೀಡಾ ಕಲಾಗ್ರಾಮ , ಶಾಲೆಗಳನ್ನು ನಿರ್ಮಿಸಿದ್ದಾರೆ. ಇಂತಹ ಅನೇಕ ಹೊಸ ಪ್ರವಾಸೋದ್ಯಮ ಯೋಜನೆಗಳು ನಿರ್ಮಾಣ ಹಂತದಲ್ಲಿದೆ. ಇವರ ಕೃತಿಯ ಪರಿಚಯವನ್ನು ಓದಿ ಕೃತಿಯನ್ನು ಕೊಂಡು ಪ್ರೋತ್ಸಾಹಿಸಿ.

“ನನಸುಗಾರನ ಸ್ವಗತ”….ನಿಮ್ಮ ಕನಸು ನನಸಾದ ದಾರಿಯ ಪರಿಚಯವು ಓದುಗರ ಅಂತರಂಗದಲ್ಲಿ ಆತ್ಮಶಕ್ತಿಯನ್ನು ತುಂಬುವ ಪ್ರಯತ್ನವನ್ನು ಸ್ವಾಗತಿಸಿದೆ.
ಚಿಕ್ಕಮಗಳೂರಿನ ಪುಟ್ಟ ಗ್ರಾಮ ಸಾದರಹಳ್ಳಿಯ ಕುರುಬರ ಹಟ್ಟಿಯ ಅಜ್ಜನ ಆರೈಕೆಯಲ್ಲಿ ಕುರಿಯ ಬದಲಿಗೆ ಮೇಕೆಯನ್ನು ಮೇಯಿಸುವ ಇಚ್ಛೆ ಉಳ್ಳ ನೀವು, ಓರ್ವ ಪ್ರಾಮಾಣಿಕ ಸರಳ ವ್ಯಕ್ತಿತ್ವದ ಗುಣಗಳನ್ನು ತನ್ನದಾಗಿಸಿಕೊಂಡು, ಮುಗ್ಧತೆಯಿಂದ ತನ್ನ ತಾತನ ಹೆಜ್ಜೆಯ ನೆರಳಿನಲ್ಲಿ ಪರಿಸರವನ್ನು ಆರಾಧಿಸುತ್ತಾ ಕಲ್ಪನಾ ಲೋಕದಲ್ಲಿ ನನಸುಗಾರನಾಗಲು ಕನಸನ್ನು ಕಂಡಿರಿ.
ಓರ್ವ ವ್ಯಕ್ತಿ ಸಾಧನೆಯ ಹಾದಿಯಲ್ಲಿ ಬೆಳಕನ್ನು ಕಾಣಲು ತವಕಿಸುವಾಗ ಆತನ ಇಚ್ಛಾ ಶಕ್ತಿ, ಆತ್ಮಬಲ, ಶ್ರಮ, ಗುರಿ ಛಲ, ಪ್ರಾಮಾಣಿಕತೆ ಎಂಬ ಈ ಗುಣಗಳೇ ಆತನಿಗೆ ಯಶಸ್ಸನ್ನು ದೊರಕಿಸಿಕೊಡುತ್ತದೆ. ಇಲ್ಲಿ ಯಾವುದೇ ಸಮುದಾಯದ ಛಾಯೆ ಕಾಡುವುದಿಲ್ಲ. ಗುರು ಶಂಕರಾಚಾರ್ಯರು ತಿಳಿಸಿರುವಂತೆ ನಮ್ಮ ಆತ್ಮವೇ ದೇವರು. ಆ ಆತ್ಮದ ಶಕ್ತಿಯನ್ನು ಅರಿತರೆ ಸಾಧನೆಯ ಕಠಿಣ ಹಾದಿಯನ್ನು ಧೈರ್ಯದಿಂದ ಎದುರಿಸಬಹುದು. ಇದಕ್ಕೆ ನಿಮ್ಮ ಜೀವನವೇ ಒಂದು ಉದಾಹರಣೆ ಎಂದರೆ ತಪ್ಪಾಗಲಾರದು.
ಮಗನನ್ನು “ದಡ್ಡ” ಎಂದು ಕರೆದರೆ ಸಹಿಸದ ತಾಯಿಯ ಮುದ್ದಿನ ಮಗನಾದ ನೀವು ಸಿವಿಲ್ ಡಿಪ್ಲೋಮಾ ಮಾಡಿ ಡ್ರಾಫ್ಟ್ಸ್ ಮ್ಯಾನ್ ಆಗಿ ಒಂದು ಚಿಕ್ಕ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿಕೊಂಡ ನಂತರ ನಿಮ್ಮ ಜೀವನದಲ್ಲಾದ ಬದಲಾವಣೆಗಳಿಗೆ ನಿಮ್ಮ ಮಾರ್ಗದರ್ಶಿಗಳ ಹಾರೈಕೆಗಳು ಹಾಗೂ ನಿಮ್ಮ ಕ್ರಿಯಾತ್ಮಕ ಶಕ್ತಿ ಕಾರಣವೆಂದು ಹೇಳಲು ಇಚ್ಚಿಸುತ್ತೇನೆ.
ಉಪವಾಸ, ಅವಮಾನ, ಅಸಹಾಯಕತೆ, ನೋವು, ಸೋಲುಗಳೇ ನಿಮ್ಮ ಜೀವನದ ಅಭಿವೃದ್ಧಿಗೆ ಮೆಟ್ಟಿಲುಗಳು.

ದೇವನಿದ್ದಾನೆ ಎಂಬ ವಿಚಾರದಲ್ಲಿ ನಂಬಿಕೆ ಇರುವುದು, ಇಲ್ಲದೇ ಇರುವುದು ವ್ಯಕ್ತಿಯ ವೈಯಕ್ತಿಕ ವಿಚಾರ. ನಿಮ್ಮ ತಾತನವರು ಆರಾಧಿಸುತ್ತಿದ್ದ ದೇವನು ಅವರ ಜೀವನದಲ್ಲಿ ಸಕಾರಾತ್ಮಕ ಚಿಂತನೆಗಳನ್ನು ಬಿತ್ತಿದ್ದನು. ಕಾಲಕ್ಕೆ ತಕ್ಕಹಾಗೆ ಆಚಾರ ವಿಚಾರಗಳು ಬದಲಾದರೂ ನಿಮ್ಮಲ್ಲಿದ್ದ ಒಳ್ಳೆಯ ಗುಣಗಳೇ ನಿಮ್ಮನ್ನು ಕಾಪಾಡುತ್ತಾ, ದೇವನಿದ್ದಾನೆ ಎಂಬ ನಂಬಿಕೆಗೆ ಹಾಲುಣಿಸಿತು.
ಇನ್ನು, ನಿಮ್ಮ ಪ್ರಾಯದ ದಿನಗಳು, ನಿಮ್ಮನ್ನು ಸುಂದರಿಯ ನಗುವಿನ ಮೋಡಿಗೆ ಸೆಳೆದು, ನೀವು ಆ ಸುಂದರಿಯನ್ನೇ ನೋಡುತ್ತಾ ಕೂರುವ ಆಸೆಯು ಆ ವಯಸ್ಸಿಗೆ ಸಹಜವಾದದ್ದು. ಆದರೇ… ಒಂದಂತೂ ಸತ್ಯ…ನೀವು ಕೂಡ ನೋಡಲು ಮನ್ಮಥನೆಂದು ಆ ಸುಂದರಿಯು ಅರಿಯದೇ ಹೋದಳು…
ಅಕ್ಕನ ಅಕ್ಕರೆ, ಕಾಳಜಿ ನಿಮಗೆ ದೊರಕಿದ್ದು ನಿಮ್ಮ ಅದೃಷ್ಟ. “ಸಂಬಂಧಗಳ ಕೊಂಡಿಗಳು ಬಾಳುವಂತವು” ಎಂಬ ನಿಮ್ಮ ಗುಣ ಶ್ರೇಷ್ಠವಾದದ್ದು. ಮೊದಲ ಸಂಬಳದಿಂದ ನೀವು ಅಪ್ಪನಿಗೆ ಕೊಡಿಸಿದ ಸೈಕಲ್ ಹಾಗೂ ಅವರು ಪಟ್ಟ ಸಂತೋಷ ಚಿರಸ್ಮರಣೀಯ.
ಜಾತಿ ಪದ್ಧತಿಯ ವಿಷ ಕೂಪಕ್ಕೆ ಸಿಲುಕಿಕೊಂಡು ಪ್ರೀತಿಯನ್ನು ತ್ಯಜಿಸಿ ದೂರ ಸರಿದ ನಿಮ್ಮ ಪ್ರೇಮ ಪ್ರಣಯ ಕಡಿದು ಬಿದದ್ದು ಆ ಸಂದರ್ಭದಲ್ಲಿ ಅನಿರ್ವಾಯವಾಗಿತ್ತು. ಕೆಲವೊಮ್ಮೆ ಆಗುವುದೆಲ್ಲವೂ ಒಳ್ಳೆಯದಕ್ಕೆನೇ ಎಂದು ಸರಿದು ಹೋಗಬೇಕು. ಯಾವುದು ನಮ್ಮ ಭಾಗ್ಯದಲ್ಲಿ ಬರೆದಿರುವುದಿಲ್ಲವೋ ಅದು ನಮಗೆ ದೊರಕುವುದಿಲ್ಲ.
ಬೆಂಗಳೂರಿನ ನಿಮ್ಮ ವೃತ್ತಿ ಜೀವನದ ಅನಾವರಣ ಎಲ್ಲರಿಗೂ ಮಾದರಿಯಾಗಿದೆ. ಬಡತನದಿಂದ ವ್ಯಕ್ತಿಯ ಪ್ರತಿಭೆ ಮಣ್ಣಾಗಿಹೋಗುತ್ತದೆ. ಹೀಗೆ ಆಗಬಾರದೆಂದು ನೀವು ಪಟ್ಟ ಕಷ್ಟಗಳು ಹಾಗೂ ಕಷ್ಟಗಳಲ್ಲೂ ನಿಮ್ಮ ಕನಸನ್ನು ಸಕಾರಗೋಳಿಸಿಕೊಂಡ ನಿಮ್ಮ ಧ್ಯೆಯ ಶ್ಲಾಘನೀಯ.
ಚಿನ್ನದಂತ ಮಡದಿ, ಆಪ್ತ ಗೆಳೆಯರ ಸಹಾಯ ಇವೆಲ್ಲವೂ ನೀವು ಪಡೆದ ಅದೃಷ್ಟದ ಕಾಣಿಕೆಗಳು. ಕಷ್ಟಗಳ ಮಧ್ಯೆಯೂ ನೀವು ಮೌನವಹಿಸಿ ಸಂಬಂಧಗಳಿಗೆ ಬೆಲೆ ಕೊಟ್ಟು, ಓರ್ವ ಉದ್ಯಮಿಗೆ ಹಣದ ಅವಶ್ಯಕತೆ ಎಷ್ಟರಮಟ್ಟಿಗೆ ಇರುತ್ತದೆ ಎಂಬುದನ್ನು ಸೂಕ್ಷ್ಮವಾಗಿ ತಿಳಿಸಿಕೊಟ್ಟಿದ್ದೀರ. ಗುಹಾಂತರಾಳವೂ ಮನದಂತರಾಳವೂ ಒಂದಾದವು ಎಂಬ ನಿಮ್ಮ ಅನುಭವಗಳನ್ನು ನವೋದ್ಯಮಿಗಳೊಂದಿಗೆ ಸಮಾಲೋಚನೆ ನಡೆಸಿದರೆ, ಅವರಿಗೂ ಕೂಡ ನಿಮ್ಮಂತೆ ತಾಳ್ಮೆ, ಶಿಸ್ತು, ವಿವೇಚನೆ, ಧೈರ್ಯಗಳಿಂದ ಹೇಗೆ ವ್ಯವಹಾರದ ತೊಡರುಗಳಿಂದ ಪಾರಾಗಿ,ಯಶಸ್ಸನ್ನು ಪಡೆಯಬಹುದು ಎಂದು ತಿಳಿಯಲು ಸಹಾಯವಾಗುವುದು ಎಂಬ ಅನಿಸಿಕೆ ನನ್ನದು.
ಎಲ್ಲಾ ಕಲೆಗಳಲ್ಲೂ ನಿಪುಣರಾದ ನಿಮ್ಮ ಬದುಕಿನ ಚಿತ್ರವನ್ನು ತಿಳಿದು ನಿಮ್ಮ ಬಗ್ಗೆ ಮತ್ತಷ್ಟು ಹೆಮ್ಮೆ ಹೆಚ್ಚಿತು. ನಿಮ್ಮ ಮುಂದಿನ ಹಾದಿ ಸುಗಮವಾಗಿರಲಿ ಎಂದು ಹಾರೈಸುತ್ತಾ….ನಿಮಗೂ ಹಾಗೂ ನಿಮ್ಮ ಕುಟುಂಬದವರಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳು.
- ಹೆಚ್ ವಿ ಮೀನ – ಬೆಂಗಳೂರು.
