‘ನನ್ನಕ್ಕ ನಿಲೂಫರ್’ ಕೃತಿ ಪರಿಚಯ

ಕುಂದಾಪುರ ಮೂಲದವರಾದ ಲೇಖಕಿ ಮಿತ್ರಾ ವೆಂಕಟ್ರಾಜ ಅವರು ನೆಲೆಸಿರುವುದು ಮುಂಬಯಿಯಲ್ಲಿ. ಇದು ಅವರ ನಾಲ್ಕನೆಯ ಕಥಾ ಸಂಕಲನ. ಇಲ್ಲಿನ ವಿಭಾಗದಲ್ಲಿ ೮ ಸಣ್ಣ ಕಥೆಗಳು ಮತ್ತೆ ೮ ಕಿರುಗಥೆ ಹೀಗೆ ಒಟ್ಟೂ ೧೬ ಕಥೆಗಳು ಇವೆ. ಎಲ್ಲವೂ ಒಂದಕ್ಕಿಂತ ಒಂದು ಚೆಂದವಾಗಿವೆ. ಅವರ ‘ನನ್ನಕ್ಕ ನಿಲೂಫರ್’ ಕೃತಿಯ ಕುರಿತು ಮಾಲತಿ ರಾಮಕೃಷ್ಣ ಭಟ್ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…

ಕೃತಿ : ನನ್ನಕ್ಕ ನಿಲೂಫರ್.
ಲೇಖಕರು: ಮಿತ್ರಾ ವೆಂಕಟ್ರಾಜ.
ಅಂಕಿತ ಪುಸ್ತಕ ಪ್ರಕಾಶನ ಬೆಂಗಳೂರು.
ಮುದ್ರಣದ ವರ್ಷ:೨೦೨೪.
ಪುಟಗಳು: ೧೬೦.
ಬೆಲೆ: ರೂ. ೧೯೫.

* ಈದ್ ಕಾ ಚಾಂದ್ 
ಬಿಲ್ಕೀಸ್ ಮಾ ಚಿಕ್ಕಂದಿನಲ್ಲಿಯೇ ತಾಯಿಯನ್ನು ಕಳೆದು ಕೊಂಡ ಹುಡುಗಿ. ತಂದೆ ಎರಡನೇ ಮದುವೆ ಮಾಡಿ ಕೊಂಡ ಮೇಲೆ ಅವಳಿಗೆ ಕಷ್ಟವಾಗಿತ್ತು. ಆದರೆ ಒಳ್ಳೇ ಕಡೆ ಸಂಬಂಧ ಬಂದು ಖಾಸಿಮನೊಡನೆ ಅವಳ ಮದುವೆಯಾಗಿತ್ತು. ಅವಳು ಗಂಡ ಮಕ್ಕಳೊಂದಿಗೆ ಸುಖವಾಗಿರುವುದು ತಂದೆಗೆ ಸಂತೋಷವಾಗಿತ್ತು. ಅಲ್ಲಿ ಚಿಕ್ಕಮ್ಮನ ಉಪಟಳ ಜಾಸ್ತಿಯಾಗಿ ತಂದೆ ಮನೆ ಮಠ ಬಿಟ್ಟು ದೇಶಾಂತರ ತಿರುಗಲು ಶುರು ಮಾಡಿದ್ದರೂ, ಆಗಾಗ ಮಗಳನ್ನು ಕಾಣಲು ಊರಿಗೆ ಬರುತ್ತಿದ್ದ. ಮುಂದೆ ಚಿಕ್ಕಮ್ಮ ಮನೆ ಮಾರಿ ತನ್ನ ಪಾಲು ತೆಗೆದುಕೊಂಡು ತನ್ನ ಒಡ ಹುಟ್ಟಿದವರ ಜೊತೆ ಪಾಕಿಸ್ಥಾನದಲ್ಲಿ ನೆಲೆಸಿದ್ದಳು.ತಂದೆ ಬರುವ ಸುದ್ದಿ ಗೊತ್ತಾದರೆ ಬಿಲ್ಕೀಸ್ ಮಾಳಿಗೆ ಸಂತೋಷದಿಂದ ನೆಲವೇ ಕಾಣುತ್ತಿರಲಿಲ್ಲ. ಅಪ್ಪ-ಮಗಳ ಬಾಂಧವ್ಯದ ಈ ಕಥೆಯನ್ನು ನಾನು ಹೇಳುವುದಕ್ಕಿಂತ ಓದಿದರೇ ಸೊಗಸು.

* ಮಲ್ಲಿಗೆ ಮಾಲೆಯ ಕಾರು
ಪವನ ಮತ್ತು ಶಮಾ ಒಂದೇ ವಾರಿಗೆಯ ಆಪ್ತ ಗೆಳತಿಯರು. ಖಾಸಗೀ ಕಂಪನಿಯ ದೊಡ್ಡ ಹುದ್ದೆಯಲ್ಲಿ ಕೆಲಸ ಮಾಡುತ್ತಾ, ವಯಸ್ಸು ೩೦ ದಾಟಿದರೂ ಇನ್ನೂ ಅವಿವಾಹಿತೆಯಾಗಿಯೇ ಉಳಿದಿದ್ದರು. ಮನೆಯಲ್ಲಿ ಹೆತ್ತವರಿಗೆ ಈ ಬಗ್ಗೆ ಚಿಂತೆ ಇತ್ತು. ಹೀಗಿರುವಾಗ ಗೆಳತಿ ಶಮಾಳಿಗೆ ಮದುವೆ ಗೊತ್ತಾಗಿ ತನ್ನ ಸಂತಸ ಹಂಚಿ ಕೊಳ್ಳುತ್ತಾ…ಪವನಳಿಗೆ ಮದುವೆಗೆ ಊರಿಗೆ ಬರುವಂತೆ ಕರೆದಿದ್ದಳು. ಅಲ್ಲಿ ಹೋದಾಗ ಪವನ ಎದುರಿಸಿದ ಪ್ರಸಂಗವೇನು? ಮದುವೆಯ ಕುರಿತು ಅವಳ ಮನಸ್ಸು ಬದಲಾಯಿತೇ?….

ಹೆಚ್ಚೆಚ್ಚು ಓದಿ ದೊಡ್ಡ ಹುದ್ದೆಗಳನ್ನು ಅಲಂಕರಿಸಿದ ಇಂದಿನ ಆಧುನಿಕ ಹೆಣ್ಣುಮಕ್ಕಳಿಗೆ ಮದುವೆ ಹಾಗೂ ಮಕ್ಕಳ ಬಗ್ಗೆ ಇರುವ ಅಭಿಪ್ರಾಯವೇ ಬೇರೆ.ಇದು ಅವರ ಹೆತ್ತವರಿಗೆ ನೆಮ್ಮದಿ ಇಲ್ಲದಂತೆ ಮಾಡುತ್ತದೆ. ವಾಸ್ತವಕ್ಕೆ ತುಂಬಾ ಹತ್ತಿರವಾದ ಹಾಗೂ ಚೆಂದವಾಗಿ ನಿರೂಪಿಸಿದ ಕಥೆ.

*ರೈಲು ಪಟ್ಟಿಯ ಗೆರೆಗಳು 
ಜಾತಕದಲ್ಲಿ ಶನಿ ದೋಷವಿದೆಯೆಂದು ಲಲಿತಾಂಬೆಯ ಹೆತ್ತವರು ಶನಿದೇವರ ಸ್ತುತಿ, ದೇವಾಲಯ ಎಂದು ಅವಳಿಗೆ ಆಗ್ರಹ ಮಾಡಿ ಭಕ್ತಿಯ ಪೂಜೆ ಹಿಡಿಸಿದ್ದರು.
ತಂಗಿಯರ ಮದುವೆಯಾದ ಮೇಲೆ ಅಂತೂ ತಡವಾಗಿ ಅವಳಿಗೆ ಮದುವೆಯ ಯೋಗ ಒದಗಿತ್ತು. ಆದರೆ ಗಂಡ ಬೇಜವಾಬ್ದಾರಿಯವನು. ಮದುವೆಯ ಬಂಧನ ಬೇಡವೆಂದು ಸನ್ಯಾಸಿಯಾಗಲು ಹೊರಟವನಿಗೆ ಅವನಣ್ಣ ಲಗ್ನ ಮಾಡಿದ್ದರು. ಆಗಲೇ ಅವನಿಗೆ ೪೦ ವರ್ಷವಾಗಿತ್ತು. ಒಂದು ಸ್ವಂತ ಸೂರು ಇಲ್ಲದೇ, ಸಂಸಾರದ ಜಂಜಡಗಳಿಂದ ಬೇಸತ್ತು ರೈಲು ಪಟ್ಟಿಗೆ ತಲೆಗೊಟ್ಟು ಸಾಯಲು ಹೊರಟ ಲಲಿತಾಂಬೆಯ ಜೀವ ಉಳಿದಿದ್ದು ಹೇಗೆ?…ಆಕೆಯೀಗ ತೊಂಬತ್ತು ವರ್ಷದ ಮುದುಕಿಯಾಗಿ ಹಳೆಯ ನೆನಪನ್ನು ಹಂಚಿ ಕೊಳ್ಳುವ ರೀತಿ ಬಲು ಸೊಗಸಾಗಿದೆ.

* ನನ್ನಕ್ಕ ನಿಲೂಫರ್
ಇಸ್ತಾಂಬುಲ್ ಗೆ ಕಛೇರಿ ಕೆಲಸದ ಪ್ರಯುಕ್ತ ಹೋಗಿದ್ದವಳಿಗೆ….ಅಲ್ಲಿನವಳೇ ಆಗಿದ್ದ ಪರ್ವೀನ್ ಎಂಬಾಕೆ ‘ನೀವು ಪಕ್ಕಾ ನನ್ನಕ್ಕ ನಿಲೂಫರ್ ಹಾಗೇ ಕಾಣುತ್ತೀರಿ. ಆ ಸ್ವರ ಕೂಡಾ ಹಾಗೇ’…ಎಂದು ಪದೇ ಪದೇ ಹೇಳುತ್ತಿದ್ದಳು. ಅವಳ ಅಕ್ಕನ ಗುಣಗಾನ ಮಾಡುತ್ತಾ ಕಣ್ತುಂಬಿ ಕೊಳ್ಳುತ್ತಿದ್ದಳು. ಆಕೆ ನಡೆದು ಕೊಳ್ಳುವ ರೀತಿ ನೋಡಿ ಈಕೆ ಅವಳ ಅಕ್ಕ ಈಗ ಬದುಕಿಲ್ಲವೆನೋ… ಎಂದು ಕೊಂಡಿದ್ದಳು.

ಅವಳು ಕೆಲಸ ಮುಗಿಸಿ ವಾಪಸ್ ಹೋಗುವ ದಿನಗಳು ಸನ್ನಿಹಿತವಾದಾಗ ಶಾಪಿಂಗ್ ಮುಗಿಸಿ, ಪರ್ವೀನ್ ಜೊತೆ ಅವರ ಮನೆಗೆ ಹೋದಾಗ ಕಂಡ ದೃಶ್ಯವೇನು?.. ಪರ್ವೀನ್ ಮನೋರೋಗಿಯೇ?…ಅವಳ ಬಗ್ಗೆ ಸಹೋದ್ಯೋಗಿ ಹೇಳಿದ್ದೇನು? ಅವಳಕ್ಕನಿಗೆ ಆದದ್ದಾದರೂ ಏನು?… ಕುತೂಹಲವಿದ್ದರೆ ಮುಂದೆ ಓದಿ…..

ಮುಂಬಯಿ ಹಾಗೂ ಕುಂದಾಪುರದ ಪ್ರಾದೇಶಿಕ ಭಾಷೆಯ ಸೊಗಡು ಇಲ್ಲಿ ಎದ್ದು ಕಾಣುವ ಅಂಶ. ಕುಟುಂಬ ಜೀವನದ ಸೂಕ್ಷ್ಮ ಸಂಬಂಧಗಳ ಜೊತೆ ಜೊತೆಗೇ ಸಂಕೀರ್ಣತೆಯನ್ನು ತಮ್ಮ ನಿರೂಪಣೆಯಲ್ಲಿ ಲೇಖಕಿ ಬಳಸಿಕೊಂಡ ರೀತಿ ಆಕರ್ಷಣೀಯ. ಮೇಲ್ನೋಟಕ್ಕೆ ಉತ್ತಮ ಗುಣಮಟ್ಟದ ಈ ಪುಸ್ತಕದ ಒಳಗಿರುವ ಕಥೆಗಳೂ ಸಹಾ ಅಷ್ಟೇ ಗುಣಮಟ್ಟದ್ದು ಎನ್ನಬಹುದು.
ಇನ್ನಷ್ಟು ಕಥೆಗಳಿಗಾಗಿ ನೀವೂ ಪುಸ್ತಕ ಓದಿ…ಹೇಳಿ….

ಮಾಲತಿ ರಾಮಕೃಷ್ಣ ಭಟ್ ಅವರು ಸಾಕಷ್ಟು ಪುಸ್ತಕಗಳನ್ನು ಓದಿ ಓದುಗರಿಗೆ ಪರಿಚಯವನ್ನು ಮಾಡಿಕೊಟ್ಟಿದ್ದಾರೆ. ಅವರು ಮಾಡಿದ ಪುಸ್ತಕಗಳ ಪರಿಚಯ : 


  • ಮಾಲತಿ ರಾಮಕೃಷ್ಣ ಭಟ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW