ಜೀವ ಜಾಲದ ಇನ್ನೊಬ್ಬ ಮಾನವ – ʻನರ ವಾನರʼ

ಡಾ ಪ್ರದೀಪ್‌ ಕೆಂಜಿಗೆ ಅವರು ಬರೆದ ʻನರ ವಾನರʼ ಪುಸ್ತಕದಲ್ಲಿ ಮಂಗಗಳ ಲೋಕದಲ್ಲಿ, ಅದರಲ್ಲೂ ಚಿಂಪಾಂಜಿಯ ಜೀವನ ಶೈಲಿಯಲ್ಲಿ ಬರುವ ಮಾನವನ ನಡವಳಿಕೆಗಳ ಸಾಮ್ಯತೆಯನ್ನು ನೋಡಿ ದಂಗಾಗಿ ಹೋದೆ. ʻನರ ವಾನರʼ ಕೃತಿಯ ಕುರಿತು ಪತ್ರಕರ್ತರಾದ ಮಾಕೋನಹಳ್ಳಿ ವಿನಯ್‌ ಮಾಧವ ಅವರು ತಮ್ಮ ಅಭಿಪ್ರಾಯವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಎಂಬತ್ತನೇ ದಶಕದ ಕೊನೆಯ ಭಾಗ. ಯಾವುದೋ ಪತ್ರಿಕೆಯಲ್ಲಿ ಆಸ್ಕರ್‌ ಪ್ರಶಸ್ತಿಯನ್ನು ಅಕ್ಯುಸ್ಡ್‌ ಎನ್ನುವ ಚಿತ್ರದಲ್ಲಿ ನಟಿಸಿದಕ್ಕಾಗಿ ಜೂಡಿ ಫಾಸ್ಟರ್‌ಗೆ ಕೊಡಲಾಯಿತು ಎಂದು ಓದಿದೆ. ಅದರ ಜೊತೆ ನಾಮ ನಿರ್ದೇಶನವಾಗಿದ್ದು ಸಿಗೋರ್ನಿ ವೀವರ್‌ ಎಂಬ ನಟಿ – ದಿ ಗೊರಿಲ್ಲಾಸ್‌ ಇನ್‌ ದಿ ಮಿಸ್ಟ್‌ ಎಂಬ ಚಿತ್ರದ ನಟನೆಗೆ.

ಗೂಗಲ್‌ ಇಲ್ಲದ ಕಾಲ. ದಿ ಗೊರಿಲ್ಲಾಸ್‌ ಇನ್‌ ದಿ ಮಿಸ್ಟ್‌ ಸಿನೆಮಾದ ಬಗ್ಗೆ ಬಹಳ ಕಷ್ಟ ಪಟ್ಟು ತಿಳಿದುಕೊಂಡೆ. ಏಕೆಂದರೆ, ಆಗೆಲ್ಲ ಇಂಗ್ಲಿಷ್‌ ಸಿನೆಮಾಗಳು ಅಮೆರಿಕಾ, ಯೂರೋಪ್‌ ನಲ್ಲಿ ಬಿಡುಗಡೆಯಾಗಿ ಸ್ವಲ್ಪ ಸಮಯದ ನಂತರ ಭಾರತಕ್ಕೆ ಬರುತ್ತಿದ್ದವು. ಒಂದು ವರ್ಷದ ನಂತರ ಬೆಂಗಳೂರಿನಲ್ಲಿ ಆ ಸಿನೆಮಾ ನೋಡಿದೆ. ಆ ಸಿನೆಮಾಗೆ ಆಸ್ಕರ್‌ ಬರದಿದ್ದಕ್ಕೆ ನನಗೆ ಬಹಳಷ್ಟು ಬೇಸರವಾಗಿದ್ದು ಸುಳ್ಳಲ್ಲ.

ತನ್ನ ಜೀವನವನ್ನೇ ಗೊರಿಲ್ಲಾಗಳ ಬಗ್ಗೆ ಸಂಶೋಧನೆ ನಡೆಸಲು ಮುಡುಪಾಗಿಟ್ಟು, ಉಗಾಂಡದ ಸರ್ಕಾರಿ ಅಧಿಕಾರಿಗಳ ಜೊತೆಗೆ ಸಂಘರ್ಷಕ್ಕಿಳಿದು ಕೊಲೆಯಾಗಿ ಹೋಗಿದ್ದ ಡಾ ಡಯಾನ್‌ ಫಾಸೆಯ ಆತ್ಮ ಕಥೆ ಅದು. ನ್ಯೂಯಾರ್ಕ್‌ ನಗರದಲ್ಲಿ ಪುರಾತನ ಶಾಸ್ತ್ರಜ್ಞ ಡಾ ಲೂಯಿಸ್‌ ಲೀಕಿಯ ಭಾಷಣ ಕೇಳಿ ಪ್ರಭಾವಿತಳಾಗಿದ್ದ ಡಾ ಫಾಸೆ, ಒಮ್ಮೆಯೂ ನೋಡದ ಕಾಡಿನಲ್ಲಿ ಗೊರಿಲ್ಲಾಗಳನ್ನು ಹುಡುಕುತ್ತಾ ಹೊರಟಿದ್ದಳು. ಗೊರಿಲ್ಲಾಗಳ ಜೊತೆಯಲ್ಲಿ ಎಷ್ಟು ಬೆರೆತು ಹೋಗಿದ್ದಳೆಂದರೆ, ಆಕೆ ಒಮ್ಮೆ ಗರ್ಭಿಣಿಯಾದಾಗ, ತಾನು ಸಂಸಾರಿಯಾದರೆ ಗೊರಿಲ್ಲಾಗಳನ್ನು ಬಿಟ್ಟು ಹೋಗಬೇಕಾಗುತ್ತದೆ ಎನ್ನುವ ಭಯದಿಂದ ಗರ್ಭಪಾತ ಸಹ ಮಾಡಿಸಿಕೊಂಡು, ತನ್ನ ಪ್ರೇಮಿಯನ್ನು ಇನ್ನೆಂದೂ ಕಾಡಿಗೆ ಬರಬೇಡ ಎಂದು ಹೊರಗೆ ಅಟ್ಟಿದ್ದಳು.

ಆಕೆ ಕೊಲೆಯಾಗಿದ್ದು ಉಗಾಂಡಾದ ರುಹಂಗೇರಿ ಪ್ರಾಂತ್ಯದ ಆಕೆಯ ಸಂಶೋಧನಾ ಕೇಂದ್ರದಲ್ಲಿಯೇ ಮತ್ತು ಆಕೆಯನ್ನು ಕೊಲೆ ಮಾಡಿಸಿದ್ದು ಆ ಪ್ರಾಂತ್ಯದ ರಾಜ್ಯಪಾಲ ಎಂಬ ಆರೋಪವಿದೆ. ಉಗಾಂಡ ಸರ್ಕಾರವು ಆಕೆಯನ್ನು ಗೊರಿಲ್ಲಾ ಕೊಂದು ಹಾಕಿತು ಎಂದು ಸಬೂಬು ಹೇಳಿತ್ತು. ಆಕೆಯನ್ನು ಕೊಲೆ ಮಾಡಿದ್ದು ಯಾರು ಎನ್ನುವುದನ್ನು ಸಿನೆಮಾದಲ್ಲೂ ತೋರಿಸಿಲ್ಲ. ಇಂತಹ ಅದ್ಭುತ ಚಿತ್ರಕ್ಕೆ ಆಸ್ಕರ್‌ ಕೊಡಲಿಲ್ಲ ಎನ್ನುವುದು ನನ್ನ ಕೊರಗಾಗಿತ್ತು.

ಆ ಸಿನೆಮಾದಲ್ಲಿ ನಾನು ಡಾ ಫಾಸೆಯ ತ್ಯಾಗವನ್ನು ನೋಡಿದ್ದೆನೇ ಹೊರತು, ಆಕೆಯು ಗೊರಿಲ್ಲಾಗಳ ಬಗ್ಗೆ ಮಾಡಿದ ಸಂಶೋಧನೆಯ ವಿವರಗಳನ್ನು ತಿಳಿದುಕೊಳ್ಳಲು ಹೋಗಲಿಲ್ಲ. ಮೊದಲನೆಯದಾಗಿ ಆಗಿನ ಕಾಲದಲ್ಲಿ ಅವುಗಳನ್ನು ಪಡೆದುಕೊಳ್ಳುವುದು ಎಲ್ಲಿ ಎನ್ನುವುದು ತಿಳಿದಿರಲಿಲ್ಲ. ನ್ಯಾಷನಲ್‌ ಜಿಯಾಗ್ರಫಿಕ್‌ ಮ್ಯಾಗಝಿನ್‌ ನಲ್ಲಿ ಬಂದರೂ, ಅದನ್ನು ಕೊಳ್ಳುವಷ್ಟು ಪಾಕೆಟ್‌ ಮನಿ ಇರುತ್ತಿರಲಿಲ್ಲ ಮತ್ತು ಅದು ಯಾವ ತಿಂಗಳು ಬಂದಿತ್ತು ಎಂದು ತಿಳಿದುಕೊಳ್ಳುವ ವಿಧಾನಗಳೂ ಇರಲಿಲ್ಲ.

ಮುಂದೆ ನಾನು ಚಿಣ್ಣಪ್ಪನವರ ಬಾಲ ಹಿಡಿದುಕೊಂಡು ನಾಗರಹೊಳೆಯಲ್ಲಿ ಆನೆ, ಹುಲಿಗಳ ಹಿಂದೆ ಓಡಾಡಲು ಆರಂಭಿಸಿದೆ. ಅಲ್ಲೇ ಸಿಗುತ್ತಿದ್ದ ಮಂಗ (ಬಾನೆಟ್‌ ಮಂಕಿ) ಮತ್ತು ಲಂಗೂರ್‌ ಗಳನ್ನು ಬಿಟ್ಟರೆ, ಅಷ್ಟೇನು ವಾನರ ಜಾತಿಗಳ ಬಗ್ಗೆ ಆಸಕ್ತಿ ಇರುತ್ತಿರಲಿಲ್ಲ. ಒಮ್ಮೆ ನಾನು ಬ್ರಹ್ಮಗಿರಿಗೆ ಹೋಗಿ ಬಂದವನೇ, ಚಿಣ್ಣಪ್ಪನವರ ಜೊತೆ ನಾನು ಸಿಂಗಳೀಕ (ಲಯನ್‌ ಟೈಲ್ಡ್‌ ಮಕಾಕ್)‌ ನೋಡಿದ್ದಾಗಿ ಹೇಳಿದೆ.

ʻಎಲ್ಲಿ ನೋಡಿದ್ದು? ನೀವು ವಾಲ್ಪರೆ ಕಡೆ ಇಳಿದಿರಾ?ʼ ಎಂದು ಚಿಣ್ಣಪ್ಪ ಕೇಳಿದರು.

ʻಇಲ್ಲ… ಕೆಂಜರಿ ಕಾಡು ಮುಗಿದ ಮೇಲೆ ಕೇರಳ ಗಡಿ ಇದೆಯಲ್ಲ… ಅಲ್ಲಿ,ʼ ಎಂದೆ.

ʻಸರಿಯಾಗಿ ನೋಡಿದ್ರಾ? ಅಲ್ಲಿ ಅವು ಬರೋದಿಲ್ಲ. ಅದರ ಕಾಲ್‌ (ಕೂಗು) ಕೇಳಿಸಿಕೊಂಡಿರಾ? ನೀವು ನೀಲಗಿರಿ ಲಂಗೂರ್‌ ನೋಡಿರಬೇಕು,ʼ ಎಂದು ಹೇಳಿದರು.

ಅದೇ ಮೊದಲ ಬಾರಿಗೆ ನಾನು ಚಿಣ್ಣಪ್ಪನವರೊಂದಿಗೆ ಮಂಗಗಳ ಬಗ್ಗೆ ಚರ್ಚೆ ಮಾಡಿದ್ದು. ಅವರ ಸ್ನೇಹಿತರಾಗಿದ್ದ ಡಾ ಅಜಿತ್‌ ಎನ್ನುವವರು ಮಂಗಗಳ ಜೀವನ ಶೈಲಿ ಬಗ್ಗೆ ಸಂಶೋಧನೆ ನಡೆಸುತ್ತಿದ್ದರಂತೆ. ಹಾಗಾಗಿ, ಆ ಸಂಶೋಧನೆಯಲ್ಲಿ ಹೊರ ಬಂದ ಅವುಗಳ ಸಾಮಾಜಿಕ ಜೀವನದ ಬಗ್ಗೆ ಚಿಣ್ಣಪ್ಪ ನನಗೆ ಕೆಲವು ವಿಷಯಗಳನ್ನು ಹೇಳಿದರು. ಕರ್ನಾಟಕದಲ್ಲಿ ಕಂಡು ಬರುವ ನಾಲ್ಕೂ ಪ್ರಭೇದದ ಮಂಗಗಳು ಒಟ್ಟಿಗೇ ಕಂಡು ಬರುವುದು ಬ್ರಹ್ಮಗಿರಿಯಲ್ಲಿ ಮಾತ್ರ.

ಮಂಗಗಳ ಗುಂಪಿನಲ್ಲಿ ನಾಯಕತ್ವಕ್ಕಾಗಿ ಉಗ್ರ ಹೋರಾಟವೇ ನಡೆಯುತ್ತದೆ. ಹಳೇ ನಾಯಕನಿಗೆ ಸೋಲಾದರೆ, ಹೊಸ ನಾಯಕನು ಮಾಡುವ ಮೊದಲ ಕೆಲಸ ಎಂದರೆ, ಹಳೇ ನಾಯಕನಿಗೆ ಹುಟ್ಟಿರುವ ಪುಟ್ಟ ಪುಟ್ಟ ಮರಿಗಳನ್ನು ಕೊಲ್ಲುವುದು. ಬಹಳಷ್ಟು ಸಲ ಹೆಣ್ಣು ಮಂಗಗಳು ತಮ್ಮನ್ನು ಹೊಸ ನಾಯಕನಿಗೆ ಶರಣಾಗಿ ತಮ್ಮ ಮರಿಗಳನ್ನು ಉಳಿಸಿಕೊಳ್ಳುವ ಪ್ರಯತ್ನವನ್ನೂ ಮಾಡುತ್ತವೆ. ಕೆಲವೊಮ್ಮೆ ಮಾತ್ರ ಸಫಲವಾಗುತ್ತವೆ.

ಅಲ್ಲಿಗೆ ಮಂಗಗಳ ಬಗ್ಗೆ ನನ್ನ ತಿಳುವಳಿಕೆ ಹೆಚ್ಚೂ ಕಡಿಮೆ ಮುಗಿದು ಹೋಗಿತ್ತು. ಇನ್ನು ಹೆಚ್ಚಿನ ತಿಳುವಳಿಕೆ ಎಂದರೆ, ಒರಾಂಗೋಟಾಂಗ್‌ ಮತ್ತು ಚಿಂಪಾಂಜಿಗಳು ಮಾನವನಿಗೆ ಜೀವತಂತು (ಜೆನಿಟಿಕ್ಸ್)ನಲ್ಲಿ ಹತ್ತಿರದ ಸಂಬಂಧಿಗಳು ಎನ್ನುವುದು ಮಾತ್ರ. ಅವುಗಳಲ್ಲಿ ಚಿಂಪಾಂಜಿಗಳು ಮಾಂಸಹಾರಿಗಳು ಎನ್ನುವುದು ಸಹ ಗೊತ್ತಿತ್ತು.

ಹೋದ ವಾರ ಡಾ ಪ್ರದೀಪ್‌ ಕೆಂಜಿಗೆ ಅವರು ಬರೆದ ʻನರ ವಾನರʼ ಪುಸ್ತಕ ಬಿಡುಗಡೆಯಾಯಿತು. ಊರಿಗೆ ಹೋಗಿದ್ದ ನಾನು ಅವರನ್ನು ಭೇಟಿಯಾಗಬೇಕು ಎಂದಿದ್ದೆ. ಆದರೆ ಕೆಲಸದ ಒತ್ತಡದಲ್ಲಿ ಭೇಟಿಯಾಗಲು ಸಾಧ್ಯವಾಗಲಿಲ್ಲ. ಫೋನ್‌ ಮಾಡಿ ಪುಸ್ತಕದ ಬಗ್ಗೆ ಮಾತನಾಡಿದೆ. ಬೆಂಗಳೂರಿಗೆ ಬಂದವನಿಗೆ ಗುರುವಾರ ಪುಸ್ತಕ ನನ್ನ ಕೈಗೆ ತಲುಪಿತು. ಪುಸ್ತಕವನ್ನು ಕೈಗೆತ್ತಿಕೊಂಡು, ಅದರ ಹಿಂದೆ ನಾಗೇಶ್‌ ಹೆಗ್ಡೆ, ಡಾ ಕೆ ಎನ್‌ ಗಣೇಶಯ್ಯ, ಡಾ ವಿ ವಿ ಬೆಳವಾಡಿಯವರು ಬರೆದ ಅವರವರ ಅನಿಸಿಕೆಯನ್ನು ಓದಿದೆ. ಏಕೋ ಹೊಸದೊಂದು ವಿಷಯ ಅನ್ನಿಸಲು ಆರಂಭಿಸಿತು. ಓದಲು ಕುಳಿತವನು, ಕೊನೆಯ ಪುಟ ಮುಗಿಯುವವರೆಗೆ ಪುಸ್ತಕ ಮುಚ್ಚಲಾಗಲಿಲ್ಲ.

ಮಂಗಗಳ ಲೋಕದಲ್ಲಿ, ಅದರಲ್ಲೂ ಚಿಂಪಾಂಜಿಯ ಜೀವನ ಶೈಲಿಯಲ್ಲಿ ಬರುವ ಮಾನವನ ನಡವಳಿಕೆಗಳ ಸಾಮ್ಯತೆಯನ್ನು ನೋಡಿ ದಂಗಾಗಿ ಹೋದೆ. ಮನುಷ್ಯನ ಜೀವತಂತುಗಳಿಗೆ ಶೇಕಡಾ ತೊಂಬತ್ತೊಂಬತ್ತು ಸಾಮ್ಯತೆ ಹೊಂದಿರುವ ಚಿಂಪಾಂಜಿಗಳು ಸಹ ಮನುಷ್ಯರಂತೆಯೇ ನುರಿತ ರಾಜಕಾರಣಿಗಳು ಎಂಬ ಅಂಶವನ್ನು ಪ್ರತಿಪಾದಿಸಿರುವ ರೀತಿಯನ್ನು ನೋಡಿ ಮೂಕ ವಿಸ್ಮಿತನಾದೆ. ಓದುತ್ತಾ ಹೋದಂತೆ, ನನ್ನ ವೃತ್ತಿ ಜೀವನದಲ್ಲಿ ನಾನು ನೋಡಿದ ಬಹಳಷ್ಟು ರಾಜಕಾರಣಿಗಳ ಮುಖ ನನ್ನ ಕಣ್ಣ ಮುಂದೆ ಬಂದಂತಾಗಿ, ಹಾಗೇ ಮುಗುಳ್ನಕ್ಕೆ.

ಹಾಗಂತ, ಇದು ಚಿಂಪಾಂಜಿಗಳ ಬದುಕಿನ ವೈಜ್ಞಾನಿಕ ವಿಶ್ಲೇಷಣೆ ಅಲ್ಲ. ಇದೊಂದು ಕ್ರೈಂ ಥ್ರಿಲ್ಲರ್‌ ಕಾದಂಬರಿಯಂತೆ ಆರಂಭವಾಗುತ್ತದೆ. ಒಂದು ಕೊಲೆ ಮತ್ತು ಆತ್ಮಹತ್ಯೆ ಮಾಡಿಕೊಂಡ ಕೊಲೆಗಾರ. ನಿರ್ಲಿಪ್ತ ಮಾಜಿ ನಾಯಕ. ಎಲ್ಲರೂ ಚಿಂಪಾಂಜಿಗಳೇ… ಆದರೆ, ಆ ಕೊಲೆಯ ಹಿಂದೆ ಅಡಗಿರುವ ರಾಜಕೀಯ ಮತ್ತು ಆ ರಾಜಕೀಯವನ್ನು ಬಹಳಷ್ಟು ವರ್ಷಗಳ ಕಾಲ ದಾಖಲು ಮಾಡಿದ್ದ ಹಾಲೆಂಡ್‌ ದೇಶದ ಆರ್ನ್‌ಹ್ಯಾಂ ಮೃಗಾಲಯದ ಸಿಬ್ಬಂಧಿಗಳಿಗೆ ಒಂದು ಸಲಾಂ ಹೇಳಲೇ ಬೇಕು.

ಚಿಂಪಾಂಜಿಗಳ ಜೀವನ ಶೈಲಿಯನ್ನು ಕಾಡಿನಲ್ಲಿ ಸಂಶೋಧನೆ ನಡೆಸಲು ಆರಂಭಿಸಿದ್ದು ಡಾ ಜೇನ್‌ ಗುಡಾಲ್. ಡಾ ಡಯಾನ್‌ ಫಾಸೆಯನ್ನು ಗೊರಿಲ್ಲಾಗಳ ಬೆನ್ನ ಹಿಂದೆ ಬಿಟ್ಟಂತೆಯೇ, ಡಾ ಲೂಯಿಸ್‌ ಲೀಕಿ ಈ ಹುಡುಗಿಯನ್ನು ಚಿಂಪಾಂಜಿಗಳ ಹಿಂದೆ ಬಿಟ್ಟರು. ಬಹಳಷ್ಟು ವರ್ಷಗಳ ಕಾಲ ಸಂಶೋಧನೆ ನಡೆಸಿದ ಮೇಲೆ, ಅಲ್ಲಿಯವರೆಗೆ ಚಿಂಪಾಂಜಿಗಳ ಬಗ್ಗೆ ಇದ್ದ ಎಲ್ಲಾ ನಂಬಿಕೆಗಳು ಸಹ ತಲಕೆಳಗಾಗಿ ಹೋಗಿದ್ದವು.

ಬೇರೆ ಪ್ರಾಣಿಗಳಲ್ಲಿ ನಡೆದಂತೆ, ಚಿಂಪಾಂಜಿಗಳ ನಾಯಕತ್ವದ ಕದನ ಒಂದೆರೆಡು ಹೊಡೆದಾಟಗಳಲ್ಲಿ ಮುಗಿಯುವಂತಹ ವಿಷಯವಲ್ಲ. ಅದು ಮನುಷ್ಯರು ನಾಯಕತ್ವಕ್ಕೆ ಹೋರಾಡುವಂತೆ ಬಹಳಷ್ಟು ಕಾಲ ನಡೆಯುತ್ತಲೇ ಇರುತ್ತದೆ. ಶಕ್ತಿಯೊಂದೇ ಇಲ್ಲಿಯ ಸಾಧನವಲ್ಲ. ಪ್ರತಿಯೊಂದಕ್ಕೂ ಸೂಕ್ತ ಸಮಯ ಬರಬೇಕು. ನಾಯಕನಾಗುವವನಿಗೆ ಜನಬಲ (ಗುಂಪಿನ ಬಲ) ಇರಲೇ ಬೇಕು. ಇದು ಚಿಂಪಾಂಜಿಗಳಿಂದ ಮಾನವನಿಗೆ ಬಂದ ಗುಣದಂತೆ ಕಾಣುತ್ತದೆ.

ಆದರೆ, ಬೇರೆ ಮಂಗಗಳ ಪ್ರಬೇಧಗಳಿಗಿಂತ ವಿಭಿನ್ನವಾದ ಒಂದು ಗುಣ ಚಿಂಪಾಂಜಿಗಳಿಗೆ ಇದೆ. ಬೇರೆ ನಾಯಕನಿಗೆ ಹುಟ್ಟಿದ ಮಕ್ಕಳನ್ನು ಅಥವಾ ಬೇರೆ ಗಂಡುಗಳಿಗೆ ಹುಟ್ಟಿದ ಮಕ್ಕಳನ್ನು ಗಂಡು ಚಿಂಪಾಂಜಿಗಳು ತಮ್ಮ ಮಗುವಿನಂತೆಯೇ ಪ್ರೀತಿಯಿಂದ ನೋಡಿಕೊಳ್ಳುತ್ತವೆ. ಹೆಣ್ಣು ಚಿಂಪಾಂಜಿಗಳೂ ಸಹ ಇದಕ್ಕೆ ಹೊರತಲ್ಲ.

ಈ ಕಾದಂಬರಿಯ ಮೂಲ ಆರ್ನ್‌ಹ್ಯಾಂ ಮೃಗಾಲಯದಲ್ಲಿ ಕೆಲಸ ಮಾಡಿ, ಅವುಗಳ ನಡವಳಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಿ, ʻಚಿಂಪಾಂಜಿ ಪಾಲಿಟಿಕ್ಸ್‌ʼ ಎಂಬ ಪುಸ್ತಕ ಬರೆದ ಫ್ರಾನ್ಸ್‌ ಡಿ ವಾಲ್‌ ಆದರೂ, ಡಾ ಪ್ರದೀಪ್‌ ಅವರು ಚಿಂಪಾಂಜಿಗಳ ಮತ್ತು ವಾನರ ಸಂಕುಲಗಲ ಬಗ್ಗೆ ನಡೆದ ಬಹಳಷ್ಟು ಸಂಶೋಧನೆಗಳನ್ನು ಕಾದಂಬರಿಯ ಮಧ್ಯೆ, ರಸಭಂಗವಾಗದಂತೆ ಬಳಸಿಕೊಂಡಿರುವುದು ಇನ್ನೊಂದು ವಿಶೇಷ. ಅದರಲ್ಲಿ ಮುಖ್ಯರಾದವರು ಜೇನ್‌ ಗುಡಾಲ್‌, ಡಾ ಟೋಷಿಸಾಡ ನಿಷಿಡಾ ಮತ್ತು ಡಾ ಡಯಾನ್‌ ಫಾಸೆ.

ಈ ಕಾದಂಬರಿಯ ಆರಂಭದಲ್ಲಿ, ಡಾ ಕೆಂಜಿಗೆ ಅವರು, ಮಾಂಸಹಾರಿ ಪ್ರಾಣಿಗಳನ್ನು ʻದುಷ್ಟ ಮೃಗʼ, ʻಕ್ರೂರ ಮೃಗʼ ಎಂದೆಲ್ಲಾ ಸಂಬೋಧಿಸಿದ್ದಾರೆ. ಹಾಗೇನೂ ಇಲ್ಲ. ಅವು ಹಸಿದಾಗ ಮಾತ್ರ ಆಕ್ರಮಣಕಾರಿಯಾಗಿರುತ್ತವೆ ಹೊರತು, ಇನ್ನುಳಿದಂತೆ ಯಾರಿಗೂ ತೊಂದರೆ ಕೊಡುವುದಿಲ್ಲ. ನನ್ನ ಪ್ರಕಾರ, ಕ್ರೂರ ಮತ್ತು ದುಷ್ಟ ಎನ್ನುವ ಎರಡು ಪದಗಳು ಮನುಷ್ಯರಿಗೆ ಮಾತ್ರ ಅನ್ವಯ ಹೊರತು ಯಾವುದೇ ಪ್ರಾಣಿಗಳಿಗಲ್ಲ. ಈ ಕಾದಂಬರಿಯನ್ನು ಓದಿದ ಮೇಲೆ, ಅದಕ್ಕೆ ಇನ್ನೊಂದು ಹೆಸರು ಸೇರ್ಪಡೆ ಮಾಡಬಹುದೇನೋ ಎಂದು ಅನ್ನಿಸಲು ಶುರುವಾಗಿದೆ.

ಒಂದಂತೂ ನಿಜ. ಈ ಪುಸ್ತಕವನ್ನು ಓದಿ ಮುಗಿಸುತ್ತಿದ್ದಂತೆ ನನಗೆ ಅನ್ನಿಸಿತು: ಎಂದಾದರೊಂದು ದಿನ, ನಾನೂ ಇಂತಹ ಅದ್ಭುತ ಕಥೆ ಬರೆಯಬಲ್ಲೆನೇ?


  • ಮಾಕೋನಹಳ್ಳಿ ವಿನಯ್‌ ಮಾಧವ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW