‘ಅರಕಲಗೂಡು ನರಸಿಂಗರಾವ್ ಕೃಷ್ಣರಾವ್’ ಕನ್ನಡ ಕುಲಕೋಟಿಗೆ ಅನಕೃ ಎಂದೇ ಚಿರಪರಿಚಿತರು. ಅವರ “ನಟಸಾರ್ವಭೌಮ” ಕೃತಿಯ ಕುರಿತು ಸೂರ್ಯ ಶೋಭಿತೆ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಸಮಯ ಸಿಕ್ಕಿದಾಗಲೆಲ್ಲ ಓದುವುದೇ ನನ್ನ ಹವ್ಯಾಸ. ಆದರೆ ಓದಿದ ಪ್ರತಿ ಪುಸ್ತಕದ ಪರಿಚಯ ಮಾಡಲಾಗದು. ಯಾವ ಮತ್ತು ಯಾರ ಸಾಹಿತ್ಯವೂ ಮೌಲ್ಯವಾದದ್ದಲ್ಲ ಎಂದು ನಾ ಭಾವಿಸಿಲ್ಲ. ಪ್ರತಿ ಪುಸ್ತಕದ ಪರಿಚಯ ಮಾಡುವುದು ಕೂಡ ಕಷ್ಟ. ಅಷ್ಟೇ… ಆದರೆ ಅನಕೃ ಬರೆದ ಈ “ನಟಸಾರ್ವಭೌಮ” ಎಂಬ ಮೇರು ಕೃತಿಯ ಪರಿಚಯ ಮಾಡದಿರಲಾಗಲಿಲ್ಲ. ಕಾರಣ ಇಂತಹ ಮೇರುಕೃತಿಯ ಪರಿಚಯ ಮಾಡದೆ ಇದ್ದರೆ ಒಬ್ಬ ಓದುಗಳಾಗಿ ಕರ್ತವ್ಯಚ್ಯುತಿಯ ದೋಷಕ್ಕೆ ಗುರಿಯಾಗಬೇಕಾದೀತು ಎಂದು ನನಗೇ ಅನ್ನಿಸಿತು.ಅದಕ್ಕೆಂದೇ ತೋಚಿದ್ದನ್ನು ಇಲ್ಲಿ ಇಳಿಸಿದ್ದೇನೆ.
ಅನಕೃ ಎಂದರೆ ಯಾರಿಗೆ ಗೊತ್ತಿಲ್ಲ. ಕನ್ನಡ ಕಾದಂಬರಿಗಳ ಪಿತಾಮಹ ಎಂದೇ ಕರೆಸಿಕೊಂಡವರು. ಬಾಳುವೆಯ ಕಿರುದಾರಿಯಲ್ಲಿ ಕಾಲಿಡದೆ ನೇರವಾದ ಸತ್ಯಪಥದಲ್ಲಿ ಹೋಗಬೇಕೆಂದು ಹಾತೊರೆದ ಜೀವಿ.
ಈ ಕೃತಿಯನ್ನು ವಿಟಸಾರ್ವಭೌಮ ಎಂದು ಯಾರೇ ಕರೆದರು, ನನ್ನ ಮಟ್ಟಿಗೆ ಹೇಳುವುದಾದರೆ ಇದು ಸಾರ್ವಭೌಮ ಕೃತಿ. ಈ ಕಾದಂಬರಿಯಲ್ಲಿ ಕೇವಲ ಲೈಂಗಿಕ ನೀತಿಯನ್ನು ಪ್ರತಿಪಾದಿಸಿಲ್ಲ.ಮನುಷ್ಯನ ವಯೋಸಹಜ,ನೈಸರ್ಗಿಕ ಪ್ರಕ್ರಿಯೆಯನ್ನು ಪ್ರತಿಪಾದಿಸಿದ್ದಾರೆ..ಮತ್ತದಕ್ಕೆ ಸೂಕ್ತ ಕಾರಣ ಕೊಟ್ಟಿದ್ದಾರೆ. ಇಲ್ಲಿಯ ಈ ಪ್ರಯೋಗವೇ ನನ್ನ ಗಮನ ಸೆಳೆದದ್ದು ಮತ್ತು ಇಷ್ಟವಾಗಿದ್ದು. ಇದರಲ್ಲಿ ಕೇವಲ ರಸನಿರೂಪಣೆಗೆ (estatic) ಪಕ್ಕಾಗದೇ ಸಂದರ್ಭೋಚಿತವಾಗಿ ವಿಚಾರನಿರೂಪಣೆಯನ್ನು(Didactic)ತಂದೊಡ್ಡಿದ್ದು ಚಂದದ ಪ್ರಯೋಗ.
ಇರಲಿ.

ಕೃತಿಯ ಬಗ್ಗೆ ಹೇಳುವುದಾದರೆ ಒಂದು ವಿಚಿತ್ರ ಪರಿಸ್ಥಿತಿಗೆ ಸಿಕ್ಕಿದ ವ್ಯಕ್ತಿ ತನ್ನ ಜೀವನ ಸಾಗಿಸಿದ ಬಗೆಯನ್ನ, ಆತ್ಮೋಲ್ಲಾಸ, ಉತ್ಕ್ರಾಂತಿ ಪಡೆದ ಮಾರ್ಗವನ್ನು ನಿರೀಕ್ಷಕನಂತೆ ನೋಡಿದ್ದಾರೆ, ಚಿಕಿತ್ಸಕನಂತೆ ಪ್ರತಿಪಾದಿಸಿದ್ದಾರೆ. ಇಲ್ಲಿ ಕಥಾನಾಯಕ ರಾಜನ ಜೀವನ ಆದರ್ಶ ಜೀವನವಲ್ಲ.. ಇಲ್ಲಿ ಆದರ್ಶ ವ್ಯಕ್ತಿಯನ್ನು ಕಡೆದು ನಿಲ್ಲಿಸಲೇಬೇಕು ಎಂದು ಲೇಖಕರು ಪ್ರಯತ್ನ ಪಟ್ಟಿಲ್ಲ ಕೂಡ. ಅವನ ಶ್ರದ್ಧೆ, ತ್ಯಾಗ, ಸಾಹಸಪರತೆ, ಅನಾಸಕ್ತಿ, ಆಸಕ್ತಿ , ಕಲಾತಪಸ್ಸು, ಆದರ್ಶ ಗುಣಗಳು, ತನ್ನ ಆದರ್ಶದ ಶಿಖರ ಮುಟ್ಟುವುದಕ್ಕೆ ನಾಯಕ ಪಟ್ಟಪಾಡು ಇವೆಲ್ಲ ಕರುಣಾಜನಕವಾಗಿದೆ. ಅವನು ಹೋದ ಹಾದಿ ನಮ್ಮೆಲ್ಲರ ಹಾದಿಯಾಗಬೇಕೆಂದೇನು ಇಲ್ಲ ನಿಜ ಆದರೆ ಆರ್ಜವತೆ ಅನುಕರಣೀಯವಲ್ಲ ಎಂದು ಈ ಕೃತಿ ಓದಿದ ಯಾರೂ ಕೂಡ ಹೇಳಲು ಸಾಧ್ಯವಿಲ್ಲ. ಏಕೆಂದರೆ ಪ್ರತಿಯೊಬ್ಬ ಕಲಾವಿದನಲ್ಲಿಯೂ ಕೂಡ (ಕಲೆ, ಸಾಹಿತ್ಯ, ಸಂಗೀತ, ನೃತ್ಯ ಯಾವುದೇ ಇರಬಹುದು) ಕಲೆಯ ಕುರಿತಾದ ಅಂತಹ ಆದರ್ಶ ಇರುವುದು ಅತ್ಯವಶ್ಯಕ. ಕೇವಲ ಕಲೆಯಿದ್ದರೆ ಸಾಲದು, ಕಲೆಯ ಕೆಲವು ಆದರ್ಶಗಳನ್ನಾದರು ಅನುಸರಿಸಲೇಬೇಕು. ಇಲ್ಲದಿದ್ದರೆ ಕಲಾವಿದ ಏನನ್ನೂ ಕೂಡ ಸಾಧಿಸಲಾರ.
ಜೊತೆಗೆ ಕಲಾವಿದನೊಬ್ಬನಿಂದ ಎಲ್ಲವೂ ಸಾಧ್ಯವಿಲ್ಲ. ಪ್ರತಿಯೊಬ್ಬ ಕಲಾವಿದನಿಗೂ ವೆಂಕಣ್ಣನವರಂಥ ಆತ್ಮಬಂಧು, ಮೇಸ್ಟ್ರಂಥ ಗುರು, ತ್ರೀಮೂರ್ತಪ್ಪನಂತ ಅಣ್ಣನಂತಹ ಆತ್ಮೀಯ ಗೆಳೆಯ, ಸೀತೆಯಂತಹ ಸತಿ, ಮೋಹನಳಂತ ಆತ್ಮಿಯ ಗೆಳತಿ, ದೇವು, ಅಚ್ಚು,ತಿರುಮಲ,ಸೀತಾರಾಮನವರಂತಹ ಪ್ರಾಣ ಸ್ನೇಹಿತರು ಬೇಕು. ಕೇವಲ ಅವನ ಕಲೆಗೆ ಅವನ ಒಳ್ಳೆಯತನಕ್ಕೆ ಬೆಲೆಕೊಟ್ಟು, ಅವನಲ್ಲಿಯ ಅಲ್ಪ ದೋಷವನ್ನು ಬದಿಗಿಟ್ಟು ಎಂತಹ ಪರಿಸ್ಥಿತಿಯಲ್ಲಿಯೂ ಜೊತೆನಿಂತ ಅವರ ವ್ಯಕ್ತಿತ್ವಗಳನ್ನು ತೋರಿಸಿದ ರೀತಿ ಇಷ್ಟವಾಯ್ತು. ನಮ್ಮವರಲ್ಲೇ ಅಂಥವರನ್ನು ಕಂಡಿದ್ದೇವೆ. ಅಂಥವರ ಬಗ್ಗೆ ಎನ್ನ ಮನದಲ್ಲಿ ಕೃತಜ್ಞತೆ ಅಂತೂ ಯಾವಾಗಲೂ ಇದ್ದೇ ಇದೆ.

ಯಶಸ್ಸಿಗೆ ಕೇವಲ ಮಿತ್ರರ ಅವಶ್ಯಕತೆ ಬೇಕಂತೇನೂ ಇಲ್ಲ. ಹಿತಶತೃಗಳು,ವಂಚಕರು,ಜೊತೆಗಿದ್ದು ಕಾಲೆಳೆಯುವವರು, ಉಪಯೋಗಿಸಿಕೊಳ್ಳುವವರು ತೀರಾ ಅವಶ್ಯಕ. ಆಗಲೇ ನಮ್ಮಲ್ಲಿಯೂ ಛಲ ಬೆಳೆಯಲು ಸಾಧ್ಯವೆಂದು ವೆಂಕಟ ಸುಬ್ಬಣ್ಣ,ರುದ್ರಪ್ಪ,ಬುಲ್ಲಪ್ಪ, ಅನ್ವಾರಿ ಅಂತಹ ಪಾತ್ರಗಳ ಮೂಲಕ ತೋರಿಸಿದ್ದಾರೆ. ಜೀವನಕ್ಕೊಂದು ಎಚ್ಚರಿಕೆಯ ಗಂಟೆಯನ್ನು ಓದುಗರಿಗೆ – ಕಲಾವಿದರಿಗೆ ಕೊಟ್ಟಿದ್ದಾರೆ. ಅಂಥವರು ನಮ್ಮ ಬದುಕಲ್ಲಿಯೂ ಬಂದು ಹೋಗಿರುತ್ತಾರೆ. ಅವರಿಗೊಂದು ನಮಸ್ಕಾರ…
ಒಟ್ಟಿನಲ್ಲಿ ಎಲ್ಲರೂ ಓದಲೇಬೇಕಾದ ಕಾದಂಬರಿ ಇದು. ಯಶಸ್ಸಿಗೆ ಎಲ್ಲವೂ ಎಲ್ಲರೂ ಬೇಕು ಎಂದು ತೋರಿಸಿಕೊಟ್ಟ ಕಾದಂಬರಿ.ಕುಂತಲ್ಲೇ ಇಂತಹ ಮಹಾದ್ಕಾದಂಬರಿ ಓದಿದ ಖುಷಿ ಇದೆ. ಒಂದು ಸಾರ್ಥಕ ಸಾವು ಮೆರೆದ ಕಥಾನಾಯಕ ರಾಜ ನನ್ನಿಷ್ಟದ ಪಾತ್ರವಾದನು.ಇಂತಹ ಕಾದಂಬರಿ ಓದಿದ ನನ್ನ ಓದು ಸಾರ್ಥಕ ಓದು…..
- ಸೂರ್ಯ ಶೋಭಿತೆ
