‘ನವರಾತ್ರಿಯ ದಿನಗಳಲಿ, ದೇವಿಯದೇ ಬಹುರೂಪ ದರ್ಶನ… ಎಲ್ಲ ಕ್ಲೇಶವ ಚೆಲ್ಲಿ ಬನ್ನಿ…ಆಚರಿಸೋಣ ಸಂಭ್ರಮ’….ಎಲ್ಲರಿಗೂ ಶ್ರೀದುರ್ಗಾಮಾತೆ ಅನುಗ್ರಹವಿರಲಿ …ಶಿವದೇವಿ ಅವನೀಶಚಂದ್ರ ಅವರ ಲೇಖನಿಯಲ್ಲಿ ಅರಳಿದ ಕವನ ತಪ್ಪದೆ ಮುಂದೆ ಓದಿ…
ಧಾತ್ರಿಯಿದು ಬೆಡಗು
ಈ ನವರಾತ್ರಿಯಲ್ಲಿ
ಖಾತ್ರಿಯಿದು ಮಂಗಳದ
ಆಚರಣೆಯಲ್ಲಿ
ದುಷ್ಟ ಮರ್ದನ
ಶಿಷ್ಟ ಸಂರಕ್ಷಣೆಯಲ್ಲಿ
ಕಟಿಬದ್ಧ ಮಾತೆಯ
ಆಶ್ವಾಸನೆಯಲ್ಲಿ
ನವರಾತ್ರಿ ವೈಭವವು
ಜನಮನದಿ ನವೋಲ್ಲಾಸವು
ಪೂಜೆಯದು ದೇವಿಗೆ
ವಿವಿಧ ರೂಪದಲ್ಲಿ
ಶ್ರದ್ಧೆ ಭಕ್ತಿಯ ಅನಾವರಣ
ಹಾಡು ಹಸೆ,ನರ್ತನಗಳ ಪ್ರದರ್ಶನ
ಕುಸ್ತಿ,ಕ್ರೀಡೋತ್ಸವಗಳ
ಬಹುವಿಧದ ಸಂಭ್ರಮ
ಪ್ರದರ್ಶನವೆಲ್ಲೆಲ್ಲೂ
ಶೃಂಗಾರದೀ ಇಳೆಯಲ್ಲಿ
ಸೊಬಗು ಮೈಚೆಲ್ಲಿ
ಹರುಷದಾಟ
ಮನರಂಜನೆಗಳ
ಬಹುಮುಖದ ಸಂಭ್ರಮ
ಇಲ್ಲಿ ಜನರೆದೆಯಲಿ
ಬೆಳಕಿನಾ ನರ್ತನ
ರಾಮ ಸ್ತೋತ್ರ ಜಪಸ್ತುತಿಗಳ
ನಿತ್ಯ ಸಂಕೀರ್ತನ
ಉಲ್ಲಾಸದ ಓಕುಳಿಯಲ್ಲಿ
ಸ್ನಾತರಾಗುವ ಜನಮನ
ನವರಾತ್ರಿಯ ದಿನಗಳಲಿ
ದೇವಿಯದೇ ಬಹುರೂಪ ದರ್ಶನ
ಎಲ್ಲ ಕ್ಲೇಶವ ಚೆಲ್ಲಿ ಬನ್ನಿ
ಆಚರಿಸೋಣ ಸಂಭ್ರಮ
ನಾಡಹಬ್ಬವಿದು
ಮನೆಮನೆಯಲಿ ಜನರ
ಉತ್ಸಾಹದ ಕಾರಣ
ತನುಮನಗಳಲಿ ಭರವಸೆಯ
ಹೊಸ ಸಂಚಲನ
ಬೊಂಬೆಗಳ ಪ್ರದರ್ಶನ
ದೀಪಾಲಂಕಾರ ವಿಭ್ರಮ
ಕಾಯುವ ದೇವಿಯ
ಶಕ್ತಿ ಪ್ರದರ್ಶನ
ರಾಜರಾಜರ ಸದಭಿರುಚಿಯ
ಸಂಸ್ಕೃತಿಯ ಆವರ್ತನ
ವಿಶ್ವಹೃದಯವ ಸೆಳೆಯುವ
ವಿಶಿಷ್ಟ ಸಂಚಲನ
ಬನ್ನಿ ಹಂಚುತ ತನ್ನವರಾಗಿಸುವ
ಅನುಬಂಧದ ಹೂರಣ
ನಾಡನೆಲ್ಲ ತಬ್ಬಿ ನಲಿಸುವ
ಉಲ್ಲಾಸದ ಕಾರಣ
ಸ್ತುತಿಸಿ ಧನ್ಯರಾಗುವ ಬನ್ನಿ
ನವರಾತ್ರಿಯಲಿ
ಶುಭಕರಿ ಶಂಕರಿಯ ಭಕ್ತಿಯಲಿ ತನ್ಮಯರಾಗುತಲಿ!
- ಶಿವದೇವಿ ಅವನೀಶಚಂದ್ರ
