ಅಣು-ಅಣುವಿನ ಕಣಕಣವು ನಿನ್ನಲ್ಲೇ ಐಕ್ಯವಾಗಿರುವಾಗ ಉಸಿರಾಟದ ಹಂಗಿಲ್ಲ ಸಖಿಯೇ…!! ದೀಪಿಕಾ ಬಾಬು ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…
ನಾ….!!
ನೀನೊಂದು ಗೂಢ ಪೆಟ್ಟಿಗೆ ನಿರ್ಮಿಸಿ
ಅಲ್ಲಿಯೇ ನನ್ನಿರಿಸು
ನೀ ಜಗದ ಬೆಳಕೊತ್ತು ಬಾ
ನಾ ನಿನ್ನ ಕಣ್ಣಿನಾಳಕ್ಕಿಳಿದು
ಬೆಳಕ ಕಣ್ತುಂಬಿಕೊಳ್ಳುತ್ತೇನೆ
ಅತಿ ಎನಿಸಬಹುದು
ನನಗೆ ಕತ್ತಲೇ ಹೆಚ್ಚು ಪ್ರಿಯ
ಬಿದಿರ ಚಂದ್ರಮ ನೀ
ನನ್ನೊಂದಿಗಿರಲು
ಇರುಳ ಬೆಳದಿಂಗಳು ಬರಡೆನಗೆ ಸಖನೇ
ನೀ…!!
ಕತ್ತಲಲ್ಲೇ ಸವಿ ಬೆಳಕ ಬೆಳಗಿಸುವೆ
ನಿನ್ನ ಮೈ ಮನಗಳ ಹೊಕ್ಕು
ಸಾಕಾಗಿದೆ ಬೆಳಕನ್ನು ನನ್ನಲ್ಲೇ ಹಿಡಿದಿಟ್ಟು
ಅವಕಾಶ ನೀಡುವೆಯ ಸಖಿ
ನಿನ್ನ ಉಸಿರ ಉಸಿರಾಡಲು
ಈ ಜೀವಭಾವದೊಡನೆ ನೀ ಬೆರೆತಾಗ
ಮೂಡುವ ಅನುರಾಗ ಪುಷ್ಪದೊಳಗಿನ ಮಕರಂಧಕ್ಕೆ
ಕೋಟಿ ಸೂರ್ಯ ಪ್ರಭೆಯ ತೇಜಸ್ಸು
ಅಣು-ಅಣುವಿನ ಕಣಕಣವು ನಿನ್ನಲ್ಲೇ ಐಕ್ಯವಾಗಿರುವಾಗ
ಉಸಿರಾಟದ ಹಂಗಿಲ್ಲ ಸಖಿಯೇ…!!
ನಾವು….!!
ಒಲವಿನೂರಲರಳಿದ ಸೌಗಂಧಿಕೆಗೂ
ಒಲವಿನಲಾಪನೆಯ ಭ್ರಮರಿ
ಬೆಚ್ಚನುಸಿರಿನಾಳದಿ ಬೆವರ್ಗುಟ್ಟಿದಂತಹ
ಸವಿಜೇನ ಜಿಹ್ವೆಯೊಡಲ ಹಟ್ಟಿಯು
ಸುತ್ತೇಳು ಲೋಕದಿಂದಿಕ್ಕಿಯೇ
ಅಪ್ಪಳಿಸಿ ಬಂದಿಹುದು ನಮ್ಮನರಸಿ
ನಾ….ನೀ…..
ನಾವಾಗುವಾಗ….
ತಲೆದೂಗುತಿಹುದು ಕಾಲವು
ಹಗಲಿರುಳಿನೆಲ್ಲ ತನ್ಮಯವು
ಪ್ರೇಮಲಾಪನೆಯಗೈಯ್ಯುವಾಗ
ಭೂಮಂಡಲವೇ ಹೀಗೆ
ಒಲವಿನೂರಲಿ ಬಂದಿಯಾಗಿ
ನಲಿದುದು…..!!
- ದೀಪಿಕಾ ಬಾಬು
