ರಂಗಭೂಮಿ ನಿಸ್ವಾರ್ಥ ನಿರ್ದೇಶಕ : ಶಾಮಮೂರ್ತಿ

ರಂಗಕರ್ಮಿ, ರಂಗ ಸಂಘಟಕ ಶಾಮಮೂರ್ತಿ ಅವರ ಮಗಳು ಡಾ.ಶ್ವೇತಾ ಅವರು  ಬಾಗಲಕೋಟೆಯ ಆಶ್ರಯ ಆಸ್ಪತ್ರೆಯ ನಿರ್ದೇಶಕಿ, ಪ್ರಸೂತಿ ತಜ್ಞೆ ಅವರನ್ನು ಭೇಟಿಯಾದಾಗ ಹಳೆಯ ನೆನಪುಗಳು ಮರುಕಳಿಸಿತು. ನನ್ನ ನೆನಪಿನಂಗಳದಲ್ಲಿ ರಂಗಭೂಮಿ ನಿರ್ದೇಶಕ ಶಾಮಮೂರ್ತಿ, ತಪ್ಪದೆ ಮುಂದೆ ಓದಿ…

ಕೆಲವು ಸ್ನೇಹ ಹೇಗಿರುತ್ತೆ ಎಂದರೆ ಆ ಸ್ನೇಹ ಮರೆಯುವುದು ಕಷ್ಟ. ಅವರಿಂದ ಪ್ರೀತಿ ಸಿಕ್ಕಿರಲಿ ಅಥವಾ ನೋವೇ ಕೊಟ್ಟಿರಲಿ ಅವರನ್ನು ನಮ್ಮ ಉಸಿರು ಇರೋವರೆಗೂ ಮರೆಯಲಾಗದು.

ನನ್ನ ಅಪ್ಪನಿಗೆ ಸಿಕ್ಕಂತಹ ಅಪರೂಪದ ಗೆಳೆಯ ಶಾಮಮೂರ್ತಿ ಅವರು. ಇಬ್ಬರೂ ಜೊತೆಗೆ ಕೂತು ಗುಂಡು ಹಾಕಿಲ್ಲ, ಹರಟೆ ಹೊಡೆದಿಲ್ಲ, ಫೋನ್ ನಲ್ಲಿ ತಾಸು ಗಂಟೆಲೇ ಹರಟೆ ಹೊಡೆದ ನೆನಪುಗಳಂತಹ ಇಲ್ಲವೇ ಇಲ್ಲಾ. ಆದರೆ ಅವರ ನಡುವಿನ ಬಾಂಧವ್ಯ ಗಟ್ಟಿಯಾದದ್ದು. ಇಬ್ಬರ ನೆನಪಿನಲ್ಲಿ ಉಳಿದಿದ್ದು ಹೂಲಿ ಶೇಖರ್ ಅಂದ್ರೆ ಅತ್ತ್ಯದ್ಭುತ ನಾಟಕಕಾರ, ಶಾಮಮೂರ್ತಿ ಅಂದ್ರೆ ಅತ್ಯದ್ಬುತ ನಾಟಕ ನಿರ್ದೇಶಕ.

ಶಾಮಮೂರ್ತಿ ಅವರ ರಂಗಭೂಮಿಯನ್ನೇ ಜೀವವಾಗಿಸಿಕೊಂಡವರು. ಅವರು ಭದ್ರಾವತಿಯಲ್ಲಿ ನಾಟಕ ತಂಡ ಕಟ್ಟಿ ತಮ್ಮ ತಂಡಕ್ಕೆ ನಾಟಕವನ್ನು ನಿರ್ದೇಶನ ಮಾಡುತ್ತಾ ನಿಸ್ವಾರ್ಥವಾಗಿ ರಂಗಭೂಮಿಗೆ ಸೇವೆ ಸಲ್ಲಿಸಿ ಕಣ್ಮರೆಯಾದ ಅಪ್ರತಿಮ ನಿರ್ದೇಶಕರು.

ಅವರು ಬರೀ ನಾಟಕಕಾರರ ಕೃತಿಗೆ ನಿರ್ದೇಶಕರಾಗಿದ್ದರೆ ಇಷ್ಟೆಲ್ಲಾ ಬರಿಯುವ ಅವಶ್ಯಕತೆ ಬರುತ್ತಿರಲಿಲ್ಲ. ತಮ್ಮ ತಂಡಕ್ಕಾಗಿ ನಾಟಕವನ್ನು ಕೇಳುತ್ತಾ ನಾಟಕಕಾರರ ಮನೆ ಮನೆ ಸುತ್ತಿದ್ದು, ಲೆಕ್ಕವಿಲ್ಲದಷ್ಟು. ನಾಟಕಕಾರರು ತಮ್ಮ ನಾಟಕವನ್ನು ಕೊಟ್ಟಾಗ ಅತ್ಯಂತ ಗೌರವದಿಂದ ತಂದು ತಮ್ಮ ತಂಡಕ್ಕೆ ನಿರ್ದೇಶನ ಮಾಡಿ ಬಹುಮಾನ, ಪ್ರಶಸ್ತಿಗಳನ್ನು ತಂದು ಕೊಟ್ಟವರು ಶಾಮಮೂರ್ತಿ ಅವರು.

ಸದಾ ಶಿಸ್ತಿನ ಸಿಪಾಯಿಯಂತೆ ನಾಟಕದ ತಂಡವನ್ನು ಬೆನ್ನಿಗೆ ಕಟ್ಟಿಕೊಂಡು ಸದಾ ಊರೂರು ಓಡಾಡುತ್ತಿದ್ದರು. ಅವರ ಗಡಕ್ ಮಾತಿನಿಂದ ಅವರ ನಾಟಕ ತಂಡದವರು ನಡಗುತ್ತಿದ್ದರೆ ಮನಸ್ಸಿನಲ್ಲಿ ತಂಡದ ಸದಸ್ಯರ ಮೇಲೆ ಅಗಾದ ಪ್ರೀತಿಯನ್ನು ಹುಡುಗಿಟ್ಟುಕೊಂಡಿದ್ದರು. ಸದಾ ನಾಟಕ, ರಂಗಭೂಮಿಯ ಕುರಿತು ಚಿಂತಿಸುತ್ತಿದ್ದರು.

ಅವರ ರಂಗಭೂಮಿ ಸೇವೆಯನ್ನು ಪರಿಗಣಿಸಿ 1994 ರಲ್ಲಿ ನಾಟಕ ಅಕಾಡೆಮಿ ಪ್ರಶಸ್ತಿ ಅವರಿಗೆ ಅರಸಿಕೊಂಡು ಬಂದಿತು. ಸದಾ ಲವಲವಿಕೆಯಿಂದ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದ ಅವರಿಗೆ 62 ವರ್ಷದಲ್ಲಿ ಅನಾರೋಗ್ಯವು ಬಿಟ್ಟು ಬಿಡದೆ ಕಾಡಿತು. ದಿನ ನಿತ್ಯ ಮೈಮೇಲೆ ಮೆಡಿಸಿನ್ ಆರ್ಭಟಕ್ಕೆ ಶಾಮಮೂರ್ತಿ ತತ್ತರಸಿ ಕೊನೆಗೊಂದು ದಿನ ರಂಗಭೂಮಿಯಿಂದಷ್ಟೆ ಅಲ್ಲ ಜಗತ್ತನೆ ತೊರೆದರು.

ಅವರು ತೀರಿಕೊಳ್ಳುವ ಮುಂಚೆ ಅವರ ತಂಡದ ಸಾಮಗ್ರಿಗಳು ವ್ಯವಸ್ಥಿತವಾಗಿ ಹೊಂದಿಸಿಟ್ಟದ್ದು ನೋಡಿದಾಗ ಒಬ್ಬ ವ್ಯಕ್ತಿ ನಿಸ್ವಾರ್ಥವಾಗಿ ರಂಗಭೂಮಿಗೆ ಇಷ್ಟೆಲ್ಲಾ ಕೆಲಸ ಮಾಡಲು ಸಾಧ್ಯವೇ? ಎಂದು ಅಚ್ಚರಿ ಪಟ್ಟೆ. ಅಷ್ಟೇ ಅಲ್ಲ ಅವರು ತೀರಿಕೊಂಡ ಮೇಲೆ ಅವರ ಮನೆಯವರು ಅವರ ಬ್ಯಾಂಕ್ ಪಾಸ್ ಬುಕ್ ಪರಿಶೀಲಿಸಿದಾಗ ಬ್ಯಾಂಕ್ ಬ್ಯಾಲೆನ್ಸ್ ಇದ್ದದ್ದು ಕೇವಲ 3000 ರೂಪಾಯಿಗಳು ಮಾತ್ರ. ಸದಾ ರಂಗಭೂಮಿ ಉಸಿರಾಗಿಸಿಕೊಂಡ ಶ್ಯಾಮಮೂರ್ತಿ ರಂಗಭೂಮಿಗಾಗಿಯೇ ಹುಟ್ಟಿದ ಅಪರೂಪದ ಅಪ್ಪಟ ನಿಸ್ವಾರ್ಥ ಆತ್ಮ ಎಂದರೆ ತಪ್ಪಾಗಲಾರದು.

ಕುಟುಂಬಕ್ಕಾಗಿ ಮಾಡಿದ ಆಸ್ತಿ ಎಂದರೆ ಮಗನನ್ನು ಇಂಜಿನಿಯರ್ ನ್ನಾಗಿ ಹಾಗೂ ಎರಡು ಹೆಣ್ಣುಮಕ್ಕಳನ್ನು ವೈದ್ಯರಾಗಿ ಮಾಡಿದ್ದಾರೆ.

ಇಂದು ಅವರು ನಮ್ಮೊಂದಿಗಿಲ್ಲ, ಆದರೆ ಅವರು ರಂಗಭೂಮಿಯಲ್ಲಿ ಸದಾ ಅಮರರಾಗಿದ್ದಾರೆ.


  • ಶಾಲಿನಿ ಹೂಲಿ ಪ್ರದೀಪ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading