ಜೀವನದ ಜಂಜಾಟದಲ್ಲಿ ನಮ್ಮ ಬಾಲ್ಯ ಹೇಗಿತ್ತು ಎನ್ನುವುದನ್ನೇ ಬಹುತೇಕ ಜನ ಮರೆತೇ ಹೋಗಿರುತ್ತಾರೆ. ” Meiyazhagan,” ಸಿನಿಮಾ ನೋಡಿದಾಗ ಬಾಲ್ಯ ನೆನಪುಗುವುದಷ್ಟೇ ಅಲ್ಲ. ಬಾಲ್ಯದ ಸಹಪಾಠಿಗಳ ಪ್ರೀತಿ, ಬೆಚ್ಚಗಿನ ಅಪ್ಪುಗೆ ಎಲ್ಲವು ಸಂತೋಷ ಕೊಡುತ್ತದೆ. ಲಾವಣ್ಯ ಪ್ರಭಾ ಅವರ ಈ ಸಿನಿಮಾ ಕತೆಯನ್ನು ತಪ್ಪದೆ ಮುಂದೆ ಓದಿ…
”ನನಗಾಗಿ…ದಯವಿಟ್ಟು ನನಗಾಗಿ ಅವರು ನಾಲ್ವರನ್ನು ಕ್ಷಮಿಸಿಬಿಡು. ಇಲ್ಲವಾದರೆ ಅವರಿಗೆ ಕೆಟ್ಟದ್ದಾಗಬಹುದು. ನಮ್ಮಿಂದ ಯಾವತ್ತಿಗೂ ಯಾರಿಗಾದರೂ ಒಳ್ಳೆಯದೇ ಆಗಬೇಕು. ಅವರು ಹೇಗಾದರೂ ಇರಲಿ , ವರ್ತಿಸಲಿ.”
ಅವನು ಇವನಿಗೆ ಹೇಳುತ್ತಾನೆ. ಇವನು ಮೌನವಾಗಿ ನೋಡುತ್ತಲೇ ಕೆಲ ಸೆಕೆಂಡುಗಳ ನಂತರ ” ಓಕೆ” ಅಂತಾನೆ. “ಊಹೂಂ…ಸುಮ್ಮನೇ ಮಾತಿಗೆ ಓಕೆ ಅನ್ನಬೇಡ , ನಿಜವಾಗ್ಲೂ ಹೇಳು ಮನಸ್ಸಿನಿಂದ ” ಅವನು ಪಟ್ಟುಹಿಡಿದಾಗ ಇವನ ಬಿಗಿದುಕೊಂಡಿದ್ದ ಮುಖ ಸಡಿಲವಾಗುತ್ತದೆ , “ಆಗಲಿ” ಎಂಬ ಶಬ್ದ ಸರಾಗವಾಗಿ ಅವನ ತುಟಿಯೊಳಗಿಂದ ತೇಲಿಬರುತ್ತದೆ. ಅವಾ ಹರ್ಷಗೊಳ್ಳುತ್ತಾನೆ , ಇವಾ ನಿರಾಳನಾಗಿ ಮುಗುಳ್ನಗುತ್ತಾನೆ.
ಸೋಷಿಯಲ್ ಮೀಡಿಯಾಗಳಲ್ಲೋ ಅಥವಾ ನಿಮ್ಮ ಜೀವನದ ಹಲವು ಪರಿಸ್ಥಿತಿಗಳಲ್ಲಿ ಹಲವಾರು ಜನರ ಸ್ನೇಹವುಂಟಾದರೂ ಅದು ನಮ್ಮ ಬಾಲ್ಯ ಸ್ನೇಹಿತರ ಸ್ನೇಹದಂತೆ ಗಾಢವಾಗಿರದೆ ಇರುವ ಹಿಂದಿನ ಕಾರಣವೆಂದರೆ ಹೊಸ ಸ್ನೇಹಗಳಿಗೆ ಬದ್ಧತೆ, ನಿಷ್ಠೆ, ಗೌರವ, ಅನ್ ಕಂಡಿಷನಲ್ ಪ್ರೀತಿ ಮತ್ತು ಕಾಳಜಿಗಳ ಬೇರು ಸದೃಢವಾಗಿರುವುದಿಲ್ಲ. ಹಳೆಯದಾದರೆ ಬಹುಶಃ ಅವುಗಳೂ ಸದೃಢವಾಗುವುದರಲ್ಲಿ ಅನುಮಾನವೂ ಇಲ್ಲ.
” Meiyazhagan,” ಮೂವಿ ಬಗ್ಗೆ ಒಂದಿಬ್ಬರು ಹೇಳಿದ್ದರೆ ನೋಡುತ್ತಿರಲಿಲ್ಲವೇನೋ….ಹಲವಾರು ಜನ ಮತ್ತೆ ಮತ್ತೆ ಈ ಮೂವಿ ಬಗ್ಗೆ ರಿವ್ಯೂ ಬರೆದದ್ದು ನೋಡಿದೆ ಜೊತೆಗೆ ಎಂ ಆರ್ ಕಮಲಾ ಮೇಡಂ ಅವರು ನಾನೂ ನೋಡಿದೆ… ಮಾತಿಲ್ಲದವಳಾದೆ ಅಂತ ಬರೆದದ್ದು ಓದಿ, ನೆನ್ನೆಯಿಡೀ ಬೋರ್ ಹೊಡೆಸುವ ಸಂಜೆಯಲ್ಲಿ ಮೂವಿ ನೋಡತೊಡಗಿದೆ. ಅಷ್ಟೇ….. ಮೇಲಿನ ಪ್ಯಾರಾದಲ್ಲಿರುವ ಇಬ್ಬರು ಬಾಲ್ಯ ಸ್ನೇಹಿತರ ಸಂಭಾಷಣೆಗೆ ಸೋತದ್ದು. Meiyazhagan ಗೆದ್ದು ನಕ್ಕು ನನ್ನೆಡೆ ನೋಡಿದಂತಾಯ್ತು.
ಅಷ್ಟೇ….ನೋಡಿ ಮಾರ್ರೆ… ಕೆಲವು ಸಂದರ್ಭದಲ್ಲಿ ಕಣ್ಣಲ್ಲಿ ನೀರು ತುಂಬಿ ತುಳುಕಿ ಕನ್ನಡಕದ ಗಾಜು ಮಬ್ಬಾಗಿ ಕಣ್ಣಿಗೂ ಮಂಜು ಮುಸುಕಿದಂತಾಯ್ತು.
ಐವತ್ತರ ನಂತರದ ದಿನಗಳಲ್ಲಿ ಹೈಸ್ಕೂಲ್ ಪ್ರೈಮರಿ ಸ್ಕೂಲಿನ ನನ್ನ ಸಹಪಾಠಿಗಳು ಅನೇಕರು ಫೋನ್ ಮಾಡಿ ಮಾತಾಡುವಾಗ ಎಷ್ಟೋ ಬಾರಿ ನನಗೆ ಅವರ ಮುಖ ನೆನಪಿಗೆ ಬರುವುದಿಲ್ಲ. ಒಮ್ಮೊಮ್ಮೆ ಪೇಚಿಗೆ ಸಿಕ್ಕು ತಲೆಕೆರೆದುಕೊಂಡು ಒದ್ದಾಡಿ ಆ ದಿನಗಳ ನೆನಪಿಗೆ ಜಾರುತ್ತೇನೆ. ಒಂದ್ನಾಲ್ಕು ಜನ ನೆನಪಾದರೂ ಮತ್ತು ಕೆಲವರನ್ನು ನೆನಪು ಮಾಡಿಕೊಳ್ಳದೆ ಒದ್ದಾಡಿದರೂ ಸೌಜನ್ಯದಿಂದಲೇ ಉಭಯ ಕುಶಲೋಪರಿ ಮಾತಾಡಿದ ನಂತರ ಬೇರೊಬ್ಬ ಸ್ಬೇಹಿತೆಗೆ ಕಾಲ್ ಮಾಡಿ ಆಕೆಯ ಬಗ್ಗೆ ಕೇಳಿ , ಆಕೆ ಕಳಿಸಿದ ಫೋಟೋ ನೋಡಿ ಕಣ್ಣಗಲಿಸಿಕೊಂಡು ಎಲ್ಲಾ ಕೋನಗಳಲ್ಲೂ ತಲೆತಿರುಗಿ ಕೊನೆಗೂ ಅವಳನ್ನು ನೆನಪಿಸಿಕೊಂಡಾಗ ಆಗುವ ಖುಷಿಯೇ ಬೇರೆ.
ಒಂದರಿಂದ ಹತ್ತನೇ ಕ್ಲಾಸಿನ ತನಕವೂ ನಾನೇ ಕ್ಲಾಸ್ ಲೀಡರ್ ಯೂನಿಯನ್ ಲೀಡರ್ ಇದ್ದಿದ್ರಿಂದ ನೂರಾರು ಸಹಪಾಠಿಗಳಿಗೆ ನನ್ನ ನೆನಪಿದ್ದರೂ ನನಗೆ ಅವರೆಲ್ಲರನ್ನೂ ನೆನಪಿಟ್ಟುಕೊಳ್ಳುವ ಕಷ್ಟವಂತೂ ಆಗಿದ್ದಿದೆ. ತೀರಾ ಹತ್ತಿರದವರ ಒಡನಾಟದಿಂದ ಅವರುಗಳು ನೆನಪಿದ್ದರೂ ಇತರರನ್ನು ನೆನಪಿಸಿಕೊಳ್ಳಲು ಹೀಗೆ ಒದ್ದಾಡಬೇಕಾಗುತ್ತದೆ. ಪ್ರೈಮರಿ ಮಿಡಲ್ ಹೈಸ್ಕೂಲ್ ಹೆಣ್ಮಕ್ಕಳ ಶಾಲೆಯಲ್ಲೇ ಕಲಿತಿದ್ರಿಂದ ಈಗವರಲ್ಲಿ ಹೆಚ್ಚು ಗೆಳತಿಯರು ಬೆಂಗಳೂರಿನಲ್ಲೇ ಇದ್ದು ವಾಟ್ಸಪ್ ಗ್ರೂಪ್ ಗಳ ಮೂಲಕ ಮತ್ತೆ ದೊರೆತಿದ್ದಾರೆ. ಕಾಲೇಜಿನ ಫ್ರೆಂಡ್ ಗ್ರೂಪ್ ಗಳಲ್ಲೂ ಗೆಳೆಯ ಗೆಳತಿಯರು ಮತ್ತೊಮ್ಮೆ ದೊರಕಿರುವುದೇ ಅಮೂಲ್ಯ ನಿಧಿ ಸಿಕ್ಕಹಾಗಾಗಿದ್ದಂತೂ ನಿಜ.
” ನಾವೆಲ್ಲಾ ತಿಂಗಳಿಗೊಮ್ಮೆ ಗೆಟ್ ಟುಗೆದರ್ ಮಾಡ್ಕೊತೇವೆ. ನೀನೋಬ್ಳೇ ಮಿಸ್ ಆಗ್ತಿದ್ದೀ…ಏನೇನೋ ಚಟುವಟಿಕೆಗಳು ಯಾವಾಗಲೂ busy ಇರ್ತೀಯಾ ಹಾಗಾಗಿ ಪದೆ ಪದೆ ಫೋನ್ ಮಾಡಿದ್ರೆ ನಿನಗೆ ತೊಂದ್ರೆಯಾಗಬಹುದೇನೋ ” ಎಂದಾಗ ” ಅಯ್ಯೋ ಹಾಗೇನಿಲ್ಲ ಕಣ್ರೇ , ಮಾತಾಡಬೇಕೆನಿಸಿದಾಗ ಕಾಲ್ ಮಾಡಿ. busy ಇದ್ರೆ ನಾನೇ ಮತ್ತೆ ಮಾಡ್ತೇನೆ. ಅದ್ರಲ್ಯಾಕೆ ಸಂಕೋಚ ಎಂದು ಹೇಳುತ್ತಿದ್ದೆ. ” ಯಾವಾಗ ಬರ್ತೀ? ನಾವೆಲ್ಲಾ ನಿನಗಾಗಿ ಕಾಯ್ತಿದ್ದೇವೆ. ಬೆಂಗಳೂರಿಗೆ ಬರುವುದಿದ್ರೆ ಮೊದಲೇ ತಿಳಿಸು ಎಲ್ಲಾದ್ರೂ ಒಂದೆಡೆ ಸೇರುವಾ ” ಅಂತ ವಿಡಿಯೋ ಕಾಲ್ ಮಾಡಿ ” ನೋಡು ನನ್ನ ಪಕ್ಕ ಕೂತಿರೋಳನ್ನ ಗುರುತಿಸು ನೋಡೋಣ ” ಎನ್ನುವುದು ನಾನು ನಿಧಾನವಾಗಿ ಒಬ್ಬೊಬ್ಬರನ್ನೇ ಗುರುತಿಸಿ ಕುಣಿದಾಡುವುದು…..ಕಂಡು ನನ್ನ ಮಕ್ಕಳಿಬ್ರೂ ” ಅಮ್ಮಾ ಇದೇನಿದು ಈ ಅವತಾರ ನಾವೆಂದೂ ಕಂಡಿಲ್ಲ” ಅಂತ ಬೆರಗಾದಾಗ ಮತ್ತಷ್ಟು ಜೋರಾಗಿ ನಗುತ್ತೇನೆ.
ಮೂವಿ ಆರಂಭದಲ್ಲಿ ಕಾಣುವ ಅರವಿಂದ ಸ್ವಾಮಿ ಸ್ವಭಾವದವಳನ್ನು ಆನಂತರದಲ್ಲಿ ಅವನು ಬದಲಾಗುವ ವ್ಯಕ್ತಿತ್ವದ ಮಗ್ಗುಲಿಗೆ ನನ್ನನ್ನು ಕರೆದೊಯ್ದು ನನ್ನೊಳಗನ್ನು ತೋರುತ್ತಿರುವ ಶುದ್ಧ ಅಂತಃಕರಣ ಮತ್ತು ಸ್ನೇಹದ ಗೆಳತಿ ಮತ್ತು ಗೆಳೆಯರೆಲ್ಲರೂ Meiyazhgan ಒಬ್ಬನಲ್ಲೇ ಕಾಣಿಸಿ ಖುಷಿಯಿಂದ ಬಿಕ್ಕಿ ಹಗುರಾದೆ….ನಿರಾಳವಾದೆ.
ನೀವೂ ನೋಡಿ ಮೂವಿ…
ಏನನಿಸಿತು ಬರೆಯಬಹುದಲ್ವೇ?
- ಲಾವಣ್ಯ ಪ್ರಭಾ
