‘ಕಣ್ಣೋಟ’ ಪಲ್ಲಟಗಳ ಅನಾವರಣ

ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಪಾತ್ರರಾಗಿರುವ ಸತ್ಯನಾರಾಯಣ ಎಚ್.ಎಸ್.ಅವರ ‘ಕಣ್ಣೋಟ’ ಕೃತಿಯ ಕುರಿತು ಹಿರಿಯ ಸಾಹಿತಿಗಳಾದ ರಘುನಾಥ್ ಕೃಷ್ಣಮಾಚಾರ್ ಅವರು ತಮ್ಮ ಅಭಿಪ್ರಾಯವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಆಧುನಿಕ ಕನ್ನಡ ಸಾಹಿತ್ಯದ ಮೂಲಕ ನಮ್ಮ ಬದುಕಿನ ವಿವಿಧ ಕ್ಷೇತ್ರಗಳಲ್ಲಿ ಆದ ಪಲ್ಲಟಗಳನ್ನು ಲೇಖಕರು ತಮ್ಮ ಸೂಕ್ಷ್ಮಗ್ರಾಹಿ ವ್ಯಾಖ್ಯಾನಗಳ ಮೂಲಕ ಅನಾವರಣ ಮಾಡಿದ್ದಾರೆ. ಅವನ್ನು ಅಭ್ಯಾಸದ ಅನುಕೂಲಕ್ಕಾಗಿ ವ್ಯಕ್ತಿಕೇಂದ್ರಿತ, ಸಮುದಾಯ ಕೇಂದ್ರಿತ, ಸಮಾಜ ಕೇಂದ್ರಿತ , ಗ್ರಾಮೀಣ, ನಾಗರಿಕ, ಮಹಾಕಾವ್ಯ ಕೇಂದ್ರಿತ, ಸ್ತ್ರೀ ಕೇಂದ್ರಿತ, ಪರಿಸರ ಕೇಂದ್ರಿತ, ಅಲ್ಪಸಂಖ್ಯಾತ ಕೇಂದ್ರಿತ ಎಂದು ವಿಂಗಡಿಸಬಹುದು.

೧. ವ್ಯಕ್ತಿಕೇಂದ್ರಿತ: ಪಲ್ಲಟಗಳನ್ನು ನನ್ನ ಗೆಳತಿ ಕಮಲಾ ಅವರ ‘ಮಾರಿಬಿಡಿ’ ಕವನ ಸಂಕಲನವನ್ನು ಕುರಿತು ಬರೆದ ಲೇಖನದಲ್ಲಿ ಕಾಣಬಹುದು. ಇದರಲ್ಲಿ ‌ಕವಿಯ ಸ್ವೋಪಜ್ಞತೆ ಬೆಳೆದು ಬಂದ ಬಗೆಯನ್ನು, ಈ ಕವನ ಸಂಕಲನದಲ್ಲಿ ಬಾಲ್ಯದ ತಮ್ಮ ಗ್ರಾಮೀಣ ಬದುಕಿನ ನೆನಪುಗಳಿಗೆ ತಮ್ಮ ಕಾವ್ಯದ ಮೂಲಕ ಮರಳುವ ಬಗೆಯಲ್ಲಿ ಗುರುತಿಸಿ ಇದ್ದಾರೆ. ಅಲ್ಲದೆ ಇಂದು ಎಲ್ಲವೂ ವ್ಯಾಪಾರೀಕರಣಗೊಳ್ಳುತ್ತಿರವುದನ್ನು ‘ ಮಾರಿಬಿಡಿ’ ಎನ್ನುವ ಅವರ ಸಂಕಲನದ ಶೀರ್ಷಿಕೆಯ ಸಾರ್ಥಕತೆಯನ್ನು ಬಿಂಬಿಸುವದನ್ನು ಎತ್ತಿ ತೋರಿಸಿದ್ದಾರೆ.

೨. ಸಮುದಾಯ ಕೇಂದ್ರಿತ: ಮೂಡ್ನಾಕೂಡು ಚಿನ್ನಸ್ವಾಮಿ ಅವರ ಕಾವ್ಯ ಹೇಗೆ ಏರುದನಿಯ ಸಿದ್ದಲಿಂಗಯ್ಯನವರ ಕಾವ್ಯಕ್ಕಿಂತ ಭಿನ್ನವಾಗಿ ಮೆಲುದನಿಯಲ್ಲಿ ತಮ್ಮ ಜನಾಂಗದ ನೋವನ್ನು ಸ್ಪೋಟಿಸಿದ ವೈಶಿಷ್ಟ್ಯದ ಮೇಲೆ ಬೆಳಕು ಚೆಲ್ಲಿದ್ದಾರೆ .ಅವರ ” ನಾನೊಂದು ಮರವಾಗಿದ್ದರೆ’ ಕವನ ಇದಕ್ಕೆ ಅತ್ಯುತ್ತಮ ನಿದರ್ಶನ. ಅವರನ್ನು ಕುರಿತು ಅಭಿನಂದನ ಗ್ರಂಥದ ವೈಶಿಷ್ಟ್ಯದ ಕುರಿತ ಲೇಖನ, ಕೆ.ಬಿ.ಸಿದ್ದಯ್ಯನವರ ಕಾವ್ಯ ವಿಮರ್ಶೆಯ‌ ಸಮೀಕ್ಷೆಗಳು ಇದಕ್ಕೆ ಸೇರಬೇಕು.

೩. ಸಮಾಜ ಕೇಂದ್ರಿತ: ನಮ್ಮ ಮೇಷ್ಟ್ರು ಬರಗೂರು ರಾಮಚಂದ್ರಪ್ಪನವರ ಕಾಂಟೆಸಾ ಮತ್ತು ಕಾವ್ಯದಲ್ಲಿ,ಅದರಲ್ಲಿ ಪಯಣಿಸುವಾಗಲೂ ಬಸ್ ನಲ್ಲಿ ಹಣವಿಲ್ಲದೆ, ಬರಿಗಾಲಿನಲ್ಲಿ ನಡೆದ ದಿನಗಳ ಮರೆಯದೆ ಉಲ್ಲೇಖ ಮಾಡಿದ್ದಾರೆ. ಕರ್ಣನೊಂದಿಗೆ ಕನ್ನಡವನ್ನು ಅವರ ಸಮೀಕರಣವನ್ನು ವಿವರಗಳೊಂದಿಗೆ ಸ್ಪಷ್ಟಪಡಿಸಬಹುದಿತ್ತು.

೪. ಗ್ರಾಮೀಣ ಕೇಂದ್ರಿತ: ಕುರುವ ಬಸವರಾಜು ಅವರ ಪ್ರಶಸ್ತಿ ವಿಜೇತ ಕೃತಿ ‘ ಕೋಳಿ ಅಂಕ’ ಅಲ್ಲಿನ ವಾಸ್ತವಗಳಿಗೆ ಕನ್ನಡಿ ಹಿಡಿದ ಬಗೆಗೆ ಸೂಕ್ಷ್ಮವಾಗಿ ವಿಶ್ಲೇಷಣೆ ಮಾಡಿದ್ದಾರೆ. ಇದರ ಜತೆಗೆ ಕಪಿಲ ಹುಮನಾಬಾದೆ ಅವರ ‘ ಹಾಣಾದಿ’ ಕಾದಂಬರಿಯನ್ನು ಸೇರ್ಪಡೆ ಮಾಡಬಹುದು ಸಿ.ಎಂ..ಗೋವಿಂದ ರೆಡ್ಡಿಯವರ ‘ ಸವುಡಿ’ ಕಥಾಸಂಕಲನ ಗ್ರಾಮೀಣ ಜಗತ್ತಿನ ತಲ್ಲಣಗಳ ಚಿತ್ರಣವಾಗಿರುವುದನ್ನು ಗುರುತಿಸಿದ್ದಾರೆ ‘ಭೂಮಿ ದುಂಡಾಗಿಯೆ ಇರಲಿ’ ಎನ್ನುವ ತೆಲುಗು ಅನುವಾದಿತ ಕೃತಿ ಗ್ರಾಮೀಣ ಪ್ರದೇಶದ ಪಲ್ಲಟವನ್ನು ಸೆರೆಹಿಡಿಯುವುದನ್ನು ಗುರುತಿಸಿದ್ದಾರೆ . ( ಮಾಸ್ತಿ ಕೃಷ್ಣಪ್ಪ)

೫. ನಾಗರಿಕ : ಪ್ರಯೋಗಶೀಲತೆಯನ್ನು ತಮ್ಮ ಕಾವ್ಯದ ಕೇಂದ್ರ ಮಾಡಿಕೊಂಡ ಕೆ.ವಿ.ತಿರುಮಲೇಶರ ನಾಗರಿಕ ಜಗತ್ತಿನ ಪಲ್ಲಟಗಳನ್ನು ಸೆರೆಹಿಡಿದ ಬಗೆಯನ್ನು ‌ ನಿರೂಪಿಸಿದ್ದಾರೆ. ಅದಕ್ಕೆ ನಿದರ್ಶನವಾಗಿ ಅವರ ‘ ಸೀಸನ್ ಟಿಕೆಟ್’ ಕವನದ ಉಲ್ಲೇಖ ಇಲ್ಲಿ ಬಿಟ್ಟು ಹೋಗಿರುವುದು ಈ ಲೇಖನದ ಪ್ರಧಾನ ಮಿತಿಯಾಗಿದೆ.

೬. ಮಹಾಕಾವ್ಯ ಕೇಂದ್ರಿತ; ಎಚ್.ಲಕ್ಷ್ಮೀನಾರಾಯಣ ಸ್ವಾಮಿ ‘ಕರ್ಣ ‘ಕೇಂದ್ರಿತ ಮಹಾಕಾವ್ಯದ ಮೂಲಕ ಅವರ ಮಹಾಭಾರತ ಕುರಿತು ಬರೆದ ಇಲ್ಲಿಯವರೆಗೆ ಬಂದ ಕಾವ್ಯಗಳಿಗಿಂತ ಭಿನ್ನವಾದ ದರ್ಶನವನ್ನು, ಅವರು ಕೊಟ್ಟ ಬಗೆಯನ್ನು ಲೇಖನದ ಕೊನೆಯಲ್ಲಿ ಪಟ್ಟಿ ಮಾಡಲಾಗಿದೆ. ಅದರ ಪ್ರಕಾರ ಕರ್ಣ ದ್ರೌಪದಿಯ ವಸ್ತ್ರಾಪಹರಣದ ವಿರುದ್ಧ ಸಿಡಿದು ನಿಂತು ಅದನ್ನು ನಿಲ್ಲಿಸುವಲ್ಲಿ ಯಶಸ್ವಿಯಾಗುತ್ತಾನೆ. ಮತ್ತು ಅವಳ ಕೃತಜ್ಞತೆಗೆ ಪಾತ್ರನಾಗುತ್ತಾನೆ. ಕೃಷ್ಣ ಇಲ್ಲಿ ದೇವರಲ್ಲ.ಸಾಮಾನ್ಯ ಮನುಷ್ಯ. ಹಾಗಾಗಿ ಕರ್ಣನಿಂದ ಯುದ್ಧದಲ್ಲಿ ಹತನಾಗುತ್ತಾನೆ. ದುರ್ಯೋಧನನ ಹೆಂಡತಿ ಭಾನುಮತಿ ಅವನಿಗೆ ಒಲಿದುದಕ್ಕೆ ಸಾಕ್ಷಿಯಾಗಿ ಅವರ ಆಟವನ್ನು ಇಲ್ಲಿ ತಂದಿದ್ದಾರೆ. ಅವನು ಮಾದಾರರ ಮನೆಯಲ್ಲಿ ಬೆಳೆದವನು. ಇತ್ಯಾದಿಗಳನ್ನು ದಾಖಲಿಸುವಾಗ ಲೇಖಕರ ಹೊಸದರ ಕುರಿತ ಇತ್ಯಾತ್ಮಕ ದೃಷ್ಟಿಕೋನಕ್ಕೆ ನಿದರ್ಶನ. ಇದರಂತೆ ವೇಣುಗೋಪಾಲ ವಹ್ನಿಯವರು ಮಕ್ಕಳಿಗೆ ಬರೆದ ‘ ಸರಳ ರಾಮಾಯಣ ‘ಮಹಾಕಾವ್ಯದಲ್ಲಿ ಹಲವಾರು ಬದಲಾವಣೆಗಳನ್ನು ಮಾಡಿದ್ದಾರೆ- ಮಕ್ಕಳ ದೃಷ್ಟಿಯಿಂದ. ಇಲ್ಲಿ ಬರುವ ಎಲ್ಲಾ ಸ್ತ್ರೀ ಪಾತ್ರಗಳು ಶೂರ್ಪಣಖಿ ಮೊದಲುಗೊಂಡು -ಯುದ್ಧ ವಿರೋಧಿಗಳು.ಹಾಗಾಗಿ ಇದೊಂದು ಯುದ್ಧ ವಿರೋಧಿ ಕಾವ್ಯ ಎಂದು ಅದರ ಸಮಕಾಲೀನ ಮಹತ್ವವನ್ನು ಎತ್ತಿ ಹಿಡಿದಿದ್ದಾರೆ. ಎಂ.ಎಸ್.ವೇದಾ ಅವರ ‘ಜಯ’ ಕಾದಂಬರಿ ಮಹಾಭಾರತದ ಪುನಾರಚನೆ ಆಗಿದ್ದು ಅದರಲ್ಲಿ ಭೀಷ್ಮರಿಗೆ ಮಹತ್ವ ನೀಡುತ್ತದೆ.

೭. ಸ್ತ್ರೀ ಕೇಂದ್ರಿತ: ಮೇಲೆ ಉಲ್ಲೇಖ ಮಾಡಿದ ಎಂ.ಎಸ್.ವೇದಾ ಅವರು ‘ ದೊಡ್ಡತಾಯಿ’ ಎಂಬ ಮಹಾನ್ ಕಾದಂಬರಿಯನ್ನು ಬರೆದಿದ್ದಾರೆ. ಅದು ಬಹುತೇಕ ಸ್ತ್ರೀ ಕೇಂದ್ರಿತ ಕಾದಂಬರಿ ಆಗಿದ್ದು ಗ್ರಾಮೀಣ ಜಗತ್ತಿನಿಂದ ನಾಗರಿಕ ಜಗತ್ತಿನಲ್ಲಿ ಬಂದಾಗ ಅವು ಎದುರಿಸುವ ಸವಾಲುಗಳನ್ನು ನಂಜನಗೂಡಿನ ಉಪಭಾಷೆಯ ಮೂಲಕ ಅನನ್ಯವಾಗಿ ಸೆರೆಹಿಡಿದಿದ್ದು ಕನ್ನಡದ ಇತರ ಮಹಾಕಾದಂಬರಿಗಳ ಜತೆಗೆ ತೌಲನಿಕ ಅಧ್ಯಯನ ಮಾಡಬಹುದು ಎಂದು ಸೂಚಿಸುತ್ತಾರೆ.

೮.  ಪರಿಸರ ಕೇಂದ್ರಿತ: ಚಂದ್ರಶೇಖರ ನಂಗಲಿ ಅವರ ‘ ಕಾಡು ಮತ್ತು ತೋಪು ” ಕೃತಿ ಇದಕ್ಕೆ ನಿದರ್ಶನ. ಕಾಡು ನಿಸರ್ಗದ ಸಹಜ ಪ್ರಕ್ರಿಯೆ .ಆದರೆ ‘ತೋಪು’ ಮನುಷ್ಯ ನಿರ್ಮಿತ. ನಾವು ಗಮನಹರಿಸಬೇಕಾದ್ದು ಕಾಡಿನ ಕಡೆಗೆ ಹೊರತು ತೋಪಿನ ಕಡೆಗೆ ಅಲ್ಲ. ಕಾಡಿನ ಸಂರಕ್ಷಣೆ ಸರ್ಕಾರದ ಆದ್ಯತೆ ಆಗಬೇಕಾದ ಕಡೆಗೆ ಲೇಖಕ ಗಮನ ಸೆಳೆಯುವುದರ ಮಹತ್ವವನ್ನು ಲೇಖಕ ಸರಿಯಾಗಿ ಗುರುತಿಸಿದ್ದಾರೆ.

೯. ಅಲ್ಪಸಂಖ್ಯಾತ ಕೇಂದ್ರಿತ: ವಿಲ್ಸನ್ ಕಟೀಲು ಮತ್ತು ಮಕಾನ್ ಅವರ ಕಾವ್ಯಗಳು ಕನ್ನಡ ಕಾವ್ಯ ಪರಂಪರೆಗೆ ಹೊಸ ನುಡಿಗಟ್ಟುಗಳ ಸೇರಿಸಿದ ಕುರಿತ ಲೇಖನಗಳು ಸೂಕ್ಷ್ಮಜ್ಞತೆಯಿಂದ ಕೂಡಿವೆ. ಲೈಂಗಿಕ ಅಲ್ಪಸಂಖ್ಯಾತರ ಕುರಿತು ಕಾದಂಬರಿಯ ವಸ್ತುನಿಷ್ಠ ವಿಶ್ಲೇಷಣೆಯಿದ್ದು ಅದನ್ನು ಕುರಿತು ಬರೆದ ಲೇಖಕರ ಪಟ್ಟಿಯಲ್ಲಿ ಕೆ.ಸತ್ಯನಾರಾಯಣ ಅವರ ‘ಲೈಂಗಿಕ ಜಾತಕ’ ಬಿಟ್ಟು ಹೋಗಿದೆ. ಇವೆಲ್ಲ ನಮ್ಮ ಹೊಸ ಕನ್ನಡ ಸಾಹಿತ್ಯಕ್ಕೆ ಹೊಸ ಆಯಾಮಗಳನ್ನು ಜೋಡಿಸಿ ವಿಸ್ತರಿಸಿವೆ.

೧೦. ಸಂಶೋಧನೆ- ಶಿಕ್ಷಣ ಕೇಂದ್ರಿತ: ಗೆಳೆಯರಾದ ಜನಾರ್ದನ ಭಟ್ ರ ಕಾದಂಬರಿ : ಕಲ್ಲುಕಂಬವೇರಿದ ಹುಂಬ ಸಂಶೋಧನೆ ಮತ್ತು ಶಿಕ್ಷಣ ಕ್ಷೇತ್ರಗಳು ಇಲ್ಲಿ ತಲುಪಿದ ಅಧೋಗತಿಗೆ ಹಿಡಿದ ಒಂದು ರೂಪಕವಾಗಿದೆ.

ಈ ಕೃತಿಯ ಕೆಲವು ವೈಶಿಷ್ಟ್ಯಗಳು :

ಅ) ಹಿರಿಯ ಲೇಖಕರಿಂದ ಹಿಡಿದು ಇಂದಿನ ಹೊಸ ಲೇಖಕರವರೆಗೆ ಸಮಾನವಾದ ಆಸಕ್ತಿಯಿಂದ ‌ ಅವರ ಕೃತಿಗಳಿಗೆ ನ್ಯಾಯ ಸಲ್ಲಿಸಿರುವುದು ( ಡಿ.ವಿ.ಜಿ.ಕಗ್ಗ, ಬೇಂದ್ರೆ,( ವಿಮರ್ಶಾ ಕೃತಿ ಸಮೀಕ್ಷೆ) ಎಸ್.ಎಲ್ ಭೈರಪ್ಪ, ( ಕಾದಂಬರಿ) ಕೆ.ಎಸ್.ನಿಸಾರ ಅಹಮದ್.(ಅಧ್ಯಕ್ಷ ಉಪನ್ಯಾಸ )ಕೆ.ವಿ.ತಿರುಮಲೇಶ ,ಬಿ.ಆರ್.ಎಲ್, ಡುಂಡಿರಾಜ ಸಮಗ್ರ ಕಾವ್ಯದ ಸಮೀಕ್ಷೆಯ ಜತೆಗೆ ಈಗ ಬರೆಯಲಾರಂಭಿಸಿ ಒಂದೆರಡು ಕೃತಿ ಪ್ರಕಟಿಸಿದವರ ಕುರಿತು ಅದೆ ಬಗೆಯ ಉತ್ಸಾಹದಿಂದ ಬರೆದಿರುವುದು)

ಬ) ಹೊಸ ಹೊಸ ಪ್ರಯೋಗಗಳನ್ನು ಗುರುತಿಸಿ ಅವನ್ನು ಸ್ವಾಗತಿಸುವ ಇತ್ಯಾತ್ಮಕ ಮನೋಧರ್ಮ ( ಕಾವ್ಯ ರೂಪ ಗಳಾದ ಗಜಲ್ ,ಹಾಯ್ಕು, ಹನಿಗವನಗಳೊಂದಿಗೆ ಪುರಾಣಗಳ ವಸ್ತುಗಳನ್ನು ಮುರಿದು ಕಟ್ಟುವ ಮನೋಧರ್ಮವನ್ನು ಸ್ವಾಗತಿಸುವ)

ಕ) ಸೂಕ್ಷ್ಮಗ್ರಾಹಿಯಾದ ಸಂವೇದನಾ ಶೀಲತೆ‌ ಬಹುತೇಕ ಬರಹಗಳಲ್ಲಿ ಎದ್ದು ಕಾಣಿಸುತ್ತದೆ.

ಡ) ಮಿತಿಗಳನ್ನು ‌ಸೌಮ್ಯವಾದ ಮಾತುಗಳಲ್ಲಿ ಸೂಚಿಸುವುದು.

ಮಿತಿಗಳು:

೧. ಅನಾವಶ್ಯಕವಾಗಿ ಇಂಗ್ಲಿಷ್ ಶಬ್ದಗಳ ಬಳಕೆ ( ಮೆಟಫರ್, ಐರನಿ, ಕ್ಯಾಚಿ, ಇತ್ಯಾದಿ – ಅವುಗಳಿಗೆ ಸಮಾನ ಕನ್ನಡ ಶಬ್ದಗಳು ಇರುವಾಗಲೂ) ೨: ಹಲವಾರು ಮುದ್ರಣ ದೋಷಗಳು ಉಳಿದುಕೊಂಡು ಬಂದಿರುವುದು. ಧ್ಯೋತಕ,ಅಧಮ್ಯ ಇತ್ಯಾದಿ.

ಗೌರವ ಪೂರ್ವಕವಾಗಿ ಪುಸ್ತಕ ಕಳಿಸುವ ಮೂಲಕ ನನ್ನ ಅರಿವಿನ ವಿಸ್ತಾರಕ್ಕೆ ಕಾರಣರಾದ ಗೆಳೆಯ ಎಚ್ .ಎಸ್.ಸತ್ಯನಾರಾಯಣ ಅವರಿಗೆ ಕೃತಜ್ಞತೆ. ಅಭಿನಂದನ.


  • ರಘುನಾಥ್ ಕೃಷ್ಣಮಾಚಾರ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW