‘ಕಿಲಿಗ್ ‘ ಕಾದಂಬರಿ ಕೃತಿ ಪರಿಚಯ

ಜಯರಾಮಚಾರಿ ಅವರ ‘ಕಿಲಿಗ್’ ಕಾದಂಬರಿ ಕುರಿತು ಕಥೆಗಾರರಾದ ಮಾರುತಿ ಗೋಪಿಕುಂಟೆ ಅವರು ತಮ್ಮ ಅಭಿಪ್ರಾಯವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ… 

ಪುಸ್ತಕ : ಕಿಲಿಗ್
ಲೇಖಕರು : ಜಯರಾಮಚಾರಿ
ಪ್ರಕಾರ : ಕಾದಂಬರಿ

ಕಿಲಿಗ್ ‘ಬಹಳ ದಿನಗಳಿಂದ ಹೆಸರಿನಿಂದಲೆ ಕಾಡಿತ್ತು. ಜಯರಾಮಚಾರಿ ಯವರು ನನಗೆ ಪೇಸ್ ಬುಕ್ ಫ್ರೆಂಡ್ ಮತ್ತು ಅವರ ಕೆಲವು ಕತೆಗಳನ್ನು ಕುತೂಹಲದಿಂದಲೆ ಓದುತ್ತಾ ಬಂದ ನನಗೆ ಈ ಕಾದಂಬರಿಯಲ್ಲಿ ಏನಿರಬಹುದು ಎಂದು ಬುಕ್ ತರಿಸಿಕೊಂಡಿದ್ದೆ ಅದು ನನ್ನ ಕೈ ಸೇರಿದ ದಿನವೆ ಓದಲು ಶುರು ಮಾಡಿದೆ. ಅದೂ ರಾತ್ರಿ ಹತ್ತೂವರೆ ಸಮಯ ಓದುತ್ತಾ ಸಮಯ ಹೋಗಿದ್ದೆ ತಿಳಿಯಲಿಲ್ಲ ಕಾದಂಬರಿ ಓದಿ ಮುಗಿಸಿದಾಗ ಸಮಯ ಒಂದು ಘಂಟೆಯಾಗಿತ್ತು.

ಬಹುಶಃ ಪ್ರೇಮ ಕಾಮದ ನಡುವೆ ಬದುಕಿನ ಬೇರೆ ಬೇರೆ ಘಟನೆಗಳು ಅವರ ನಿರೂಪಣೆ ಅದಕ್ಕೆ ಕಾರಣವೂ ಇರಬಹುದು. ಓದಿ ಮುಗಿಸಿದ ಮೇಲೆ ನಾಯಕ ಮತ್ತು ರಂಜಿತ ಬದುಕಿನ ಸಾಂಗತ್ಯದ ಕುರುಹಾಗಿ ಬಂದ ಮಗುವಿನ ಸಂತಸದ ಅಲೆಯಲ್ಲೂ ‘ಸಾರಿ’ ಎಂಬ ಕೊನೆಯಾಗದ ತಪ್ಪಗಳಿಗೆ ಬಿಡುಗಡೆಗೆ ಮುಲಾಮಿನ ಪದ ಒಮ್ಮೆ ನಾಯಕನೊಂದಿಗೆ ನಮ್ಮಲ್ಲೂ ನಿಟ್ಟುಸಿರೊಂದನ್ನು ಬಿಡುವಂತೆ ಮಾಡಿಬಿಡುತ್ತದೆ. ಇಲ್ಲಿ ರಂಜಿತಾಳ ನಗುವಿಗೂ ನಾಯಕ ಸತೀಶನ ಅಳುವಿಗೂ ಹೇಳಲಾರದ ಬದುಕಿನ ಸೆಲೆಯೊಂದು ರಪ್ಪನೆ ಪಾಸಾದಂತೆ ಅನಿಸಿಬಿಡುತ್ತದೆ.

ಕಾದಂಬರಿಯ ಗೆಲುವು ಅದೆ ಅನಿಸಿಬಿಡುತ್ತದೆ. ಕಾಮದ ಸೆಳೆವಿಗೆ ಸಿಕ್ಕ ವ್ಯಕ್ತಿತ್ವವೊಂದು ಬಿಡುಗಡೆಯಾಗುವುದು ಇಂತಹ ಸಂತಸಗಳಲ್ಲೆ ಅದು ಬದುಕಿನ ಪ್ರತಿರೂಪವಾಗಿ ಬಂದ ಅಮ್ಮನ ರೂಪ ಎಂಬುದು ಕಾರಣವಾಗಿರಬಹುದು. ಅದು ಓದುಗನನ್ನು ಕಾಡದೆ ಬಿಡದು. ಬದುಕಿನ ನಾಗಾಲೋಟದಲ್ಲಿ ಆ ಕ್ಷಣದ ಘಟನೆಗಳು ವ್ಯಕ್ತಿತ್ವವೊಂದನ್ನು ಅದು ಪ್ರೇಮವೊ ಕಾಮವೊ ಎಂಬಂತೆ ಕಾಡಿ ಸ್ವಚ್ಛ ಬೆಳಕೊಂದನ್ನು ಮಿಂಚು ಸುಳಿದಂತೆ ಬೆರಗು ಮೂಡಿಸಿ ಬದುಕನ್ನು ಇನ್ನಷ್ಟು ಆಪ್ತವಾಗುವಂತೆ ಮಾಡುವ ಬದುಕಿಗೆ ಪಾಠಹೇಳಿಕೊಟ್ಟವರು ಯಾರು!? ಅದೊಂದು ಸೋಜಿಗವೆ ಸರಿ ಅಲ್ಲಿ ಗೆಲ್ಲುವುದು ಪ್ರೇಮವೊ ಕಾಮವೊ ಆಕರ್ಷಣೆಯೊ ಅದನ್ನು ಕಾಲವೆ ಉತ್ತರಿಸಬೇಕು ಉತ್ತರಿಸುತ್ತದೆ ಕೂಡಾ ಎಂಬುದನ್ನು ಕಾದಂಬರಿ ಹೇಳಿದೆ ಅನಿಸುತ್ತದೆ.

ಇನ್ನು ಕೌಟುಂಭಿಕವಾಗಿ ಗಂಡು ಹೆಣ್ಣಿನ ನಡುವೆ ನಡೆಯುವ ಸರಸವಿರಸವನ್ನೆಲ್ಲಾ ಸತೀಶ ರಂಜಿತ ದಾಂಪತ್ಯದ ಪಾತ್ರಗಳು ಉಣಬಡಿಸುತ್ತವೆ. ಅಲ್ಲಲ್ಲಿ ಕಾಣುವ ಪ್ರೀತಿಯ ಪರಕಾಷ್ಟೆಯ ಸನ್ನಿವೇಶಗಳು ಅಶ್ಲೀಲತೆಯ ಮುಸುಕಿನಲ್ಲೂ ಗೌರವದ ಚೌಕಟ್ಟಿನಲ್ಲಿಯೆ ನಡೆದುಹೋಗುತ್ತವೆ.

ಲೇಖಕರ ಸಂಯಮ ಪದಮಿತಿಯಲ್ಲಿ ಎಲ್ಲಿಯೂ ವಲ್ಗರ್ ಅನ್ನಿಸದೆ ಓದುಗನಿಗೆ ಕಚಗುಳಿ ಇಡುತ್ತವೆ. ಮಧ್ಯೆದಲ್ಲಿಯೆ ಬರುವ ಮೆಟ್ರೋ ಹಳಿಗೆ ದುಮುಕುವ ಹುಡುಗ ಬದುಕುವುದು ಇನ್ನೊಬ್ಬ ಸತ್ತವನ ನೆನಪು ಮೆಟ್ರೋದಲ್ಲಿ ಉಳಿಯುವ ಮಗು ಅದರ ಹಿಂದೆಯೆ ಬಿಚ್ಚಿಕೊಳ್ಳುವ ಅಕ್ಷತಾಳ ಪಾತ್ರ ಅವಳ ಬದುಕಿನಲ್ಲಿ ಬಂದುಹೋಗುವ ಮೋಹನ ನಾಯಕನಿಗೆ ಸಿಕ್ಕುವ ಹಾಡಿನ ಗುಂಗಿನಲ್ಲಿಯೆ ದುರಂತನಾಗುವ ಸುಹಾಸನ ಬದುಕಿನ ಕತೆ ಅದರಿಂದಲೇ ಇನ್ನೊಂದು ಬದುಕಿನ ಘಟನೆಗೆ ಕಾರಣವಾಗುವ ತಂತ್ರಗಾರಿಕೆ ಕಾದಂಬರಿಯ ಓಘವನ್ನು ಹಿಮ್ಮಡಿಗೊಳಿಸಿದೆ. ನಗರದ ಬಣ್ಣದ ಬದುಕಿನಂತೆ ನಡೆಯುವ ಸನ್ನಿವೇಶಗಳು ಒಂದು ವಿಕ್ಷಿಪ್ತ ಬದುಕಿನ ಪುಟದಂತೆ ಪಟಪಟನೆ ಘಟಿಸಿ ಮಾಯವಾಗಿಬಿಡುತ್ತವೆ. ಅಕ್ಷತಾಳ ಕಾಮದಂತಿದ್ದ ಪ್ರೇಮ ಅಥವಾ ಪ್ರೇಮದಂತಿದ್ದ ಕಾಮ ಎಲ್ಲೆಲ್ಲೂ ಓಡಾಡಿ ಬದುಕಿನ ತಿರುವುಗಳಲ್ಲಿ ವ್ಯಕ್ತಿತ್ವದ ಬೇರೆಬೇರೆ ಮುಖಗಳನ್ನು ಪರಿಚಯಿಸಿ ನೆಲೆಗೊಳ್ಳುವ ಹಂತದಲ್ಲಿ ಆ ಪಾತ್ರವೆ ಹೇಳುವಂತೆ “ನಗರದಲ್ಲಿ ಸುರಿವ ಮಳೆಗೆ ಅಮ್ಮನ ಪ್ರೀತಿ ಇರುತ್ತೆ” ಕೊನೆಗೂ ಪ್ರೀತಿ ಗೆಲ್ಲುತ್ತೆ ಮತ್ತು ಕಾಡುತ್ತೆ ಅನಿಸುವ ಹಾಗೆ ಕೊನೆಗೊಳ್ಳುತ್ತದೆ.

ಇಲ್ಲಿ ಇಷ್ಟವಾಗುವುದು ಕಾದಂಬರಿಯ ಸರಳವಾದ ನಿರೂಪಣೆ ತನ್ನ ಇತಿಮಿತಿಯಲ್ಲಿಯೆ ನೀಡುವ ವಿವರಗಳು ಎಲ್ಲಿಯೂ ಬೋರು ಎನಿಸುವುದಿಲ್ಲ. ಪಾತ್ರಗಳೆ ಓದಿಸಿಕೊಂಡು ಹೋಗುವ ಗುಣ. ಲೇಖಕ ಜಯರಾಮಚಾರಿಯವರ ಯಾವ ಪುಸ್ತಕಗಳನ್ನು ಓದಿಲ್ಲವಾದರೂ ಅವರ ಬರವಣಿಗೆಯ ಬಗ್ಗೆ ಆಳವಾಗಿ ಹೇಳಲು ನಾನು ಶಕ್ತನಲ್ಲ ಇದನ್ನು ಓದಿದ ಮೇಲೆ ನನಗನಿಸಿದ್ದು ಕಾದಂಬರಿಯನ್ನು ಬರೆದು ಓದುಗನನ್ನು ಮುಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಅವರು ಇನ್ನಷ್ಟು ಕಾದಂಬರಿಯನ್ನು ಬರೆಯಲಿ. ಅದು ಓದುಗನನ್ನು ತಲುಪಲಿ ಎಂಬುದು ನನ್ನ ಆಶಯವು ಆಗಿದೆ. ಅವರಿಗೆ ಶುಭವಾಗಲಿ.


  •  ಮಾರುತಿ ಗೋಪಿಕುಂಟೆ 

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW