‘ರಾಜಮಾತೆ ಕೆಂಪನಂಜಮ್ಮಣ್ಣಿ’ ಕೃತಿ ಪರಿಚಯ

ಡಾ. ಗಜಾನನ ಶರ್ಮಾ ಅವರ ರಾಜಮಾತೆ ಕೆಂಪನಂಜಮ್ಮಣ್ಣಿ ಕೃತಿಯ ಕುರಿತು ಡಾ. ಸುವರ್ಣಿನಿ ಕೊಣಲೆ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಪುಸ್ತಕದ ಹೆಸರು: ರಾಜಮಾತೆ ಕೆಂಪನಂಜಮ್ಮಣ್ಣಿ
ಲೇಖಕರು : ಡಾ. ಗಜಾನನ ಶರ್ಮಾ
ವರ್ಷ : ೨೦೨೪
ಪ್ರಕಾಶನ : ಅಂಕಿತ ಪುಸ್ತಕ

ಝಾನ್ಸೀರಾಣಿ, ರಾಣಿ ಚೆನ್ನಮ್ಮ, ರಾಣಿ ಚೆನ್ನಭೈರಾದೇವಿ, ರಾಣಿ ಪದ್ಮಾವತಿ ಹೀಗೆ ಭಾರತದ ನೆಲದ ಹೆಮ್ಮೆಯ ಮಗಳಂದಿರ ಪರಿಚಯ ನಮಗಿದೆ. ಆದರೆ ನಾವು ಮರೆತಿರುವ, ಹಲವರಿಗೆ ತಿಳಿದೇ ಇರದ ಪೂಜ್ಯ ಮಾತೆಯೊಬ್ಬರು ಮೈಸೂರು ರಾಜ್ಯದಲ್ಲಿದ್ದರು. ಅವರೇ ರಾಜಮಾತೆ ಕೆಂಪನಂಜಮ್ಮಣ್ಣಿ. ನಾಡು ಕಂಡ ಶ್ರೇಷ್ಠ ದೊರೆ ನಾಲ್ವಡಿ ಕೃಷ್ಣರಾಜ ಒಡೆಯರ ತಾಯಿ. ಮಾದರಿ ಮೈಸೂರಿನ ತಾಯಿಬೇರು!

ಹನ್ನೆರಡಕ್ಕೆ ವಿವಾಹ, ಇಪ್ಪತ್ತೆಂಟಕ್ಕೆ ವೈಧವ್ಯ, ಹೆಗಲ ಮೇಲೆ ಐದು ಮಕ್ಕಳ ಹಾಗೂ ಇಡಿಯ ರಾಜ್ಯದ ಜವಾಬ್ದಾರಿ. ಜೊತೆಗೆ ತಲೆಯ ಮೇಲೆ ಬ್ರಿಟಿಷ್ ಸಾರ್ವಭೌಮ ಸರ್ಕಾರವೆಂಬ ತೂಗುಗತ್ತಿ. ಸಾಮಾನ್ಯ ಜೀವವೊಂದು ನಲುಗಿಯೇ ಹೋದೀತು. ಇಂತಹ ಸಂದರ್ಭದಲ್ಲಿ ಅವರು ರಾಜ್ಯವನ್ನೂ, ಮಕ್ಕಳನ್ನೂ ಉಳಿಸಿದ ಮತ್ತು ಬೆಳೆಸಿದ ಕಥೆ ಸ್ಫೂರ್ತಿದಾಯಕ. ಮಹಾರಾಜರು ಇದ್ದಾಗಲೂ, ಅವರು ಕಾಲವಾದ ಅನಂತರ ರೀಜೆಂಟರಾಗಿಯೂ ಮಹಾರಾಣಿಯವರು ಕೈಗೊಂಡ ಹಲವು ಜನಪರ ಯೋಜನೆಗಳು, ಕಾಯ್ದೆಗಳು ಇಂದಿಗೂ ಮಹತ್ತ್ವದ್ದಾಗಿವೆ. ವಾಣಿವಿಲಾಸ ಅಣೆಕಟ್ಟು, ಬೆಂಗಳೂರಿನ IISc, ಭಾರತದ ಮೊದಲ ಜಲವಿದ್ಯುತ್ ಯೋಜನೆ, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ, ಬೆಂಗಳೂರಿಗೆ ಕುಡಿಯುವ ನೀರಿನ ವ್ಯವಸ್ಥೆ, ಹೆಣ್ಣುಮಕ್ಕಳ ಶಿಕ್ಷಣ, ಬಾಲ್ಯವಿವಾಹ ರದ್ಧತಿ… ಒಂದೇ ಎರಡೇ ಈ ತಾಯಿ ನೀಡಿದ ವರಗಳು!

ಅವುಗಳ ವಿವರಗಳನ್ನೊಳಗೊಂಡ ಈ ಕೃತಿ ಹಲವು ಕಾರಣಗಳಿಂದ ಮಹತ್ತ್ವದ್ದಾಗುತ್ತದೆ. ಚಿನ್ನದ ಕಿರೀಟದ ವೈಭವವನ್ನೂ, ಚುಚ್ಚುವ ಅದರ ಮುಳ್ಳುಗಳನ್ನೂ; ಅರಮನೆಯ ಒಳಹೊರಗಿನ ಜನರ ಮನಸ್ಥಿತಿಯನ್ನೂ; ಆ ಕಾಲಘಟ್ಟದ ರಾಜಕೀಯ ಸೂಕ್ಷ್ಮತೆಯನ್ನೂ; ಮೈಸೂರು ರಾಜಪ್ರಭುತ್ವದ ದೂರದೃಷ್ಟಿಯನ್ನೂ ಸಮೀಪದಿಂದ ನೋಡಲು ಇದು ನಮಗೆ ಸಹಾಯ ಮಾಡುತ್ತದೆ. ಈ ವಿವರಗಳೆಲ್ಲ ನಮಗೆ ಒಂದಲ್ಲ ಒಂದು ದಾಖಲೆಯ ರೂಪದಲ್ಲಿ ಸಿಗಬಹುದು, ಆದರೆ ಅದು ಕೇವಲ ಛಾಯಾಚಿತ್ರ ಮಾತ್ರ ಆದೀತು. ಈ ಕಾದಂಬರಿ ಆ ಕಾಲಘಟ್ಟವೇ ಜೀವತಳೆದಂತಿದೆ.

ಇಲ್ಲಿ ನಾವು ಗಮನಿಸಬೇಕಾದ್ದು ರಾಜಮಾತೆ ಕೆಂಪನಂಜಮ್ಮಣ್ಣಿಯವರ ಬದುಕನ್ನು, ಅವರ ಚಿಂತನೆಯ ಎತ್ತರವನ್ನು. ಮಕ್ಕಳನ್ನು ಸತ್ಪ್ರಜೆಗಳಾಗಿ ಬೆಳೆಸುವ ಮತ್ತು ಪ್ರಜೆಗಳನ್ನು ಮಕ್ಕಳಂತೆ ನೋಡಿಕೊಳ್ಳುವ ಅವರ ಮನಸ್ಸೂ ತಪಸ್ಸೂ ಅನುಕರಣೀಯ. ಜೀವನವೇ ಪಾಠ ಎಂಬಂತೆ ಬದುಕಿದ ರಾಜಮಾತೆಯವರ ಕೊನೆಯ ಎರಡು ಸುದೀರ್ಘ ಸಂವಾದಗಳು ನಮಗೆ ಜವಾಬ್ದಾರಿಗಳನ್ನು ನಿಭಾಯಿಸುವ ಬದ್ಧತೆಯನ್ನೂ, ಧರ್ಮಸಂಕಟಗಳನ್ನು ಎದುರಿಸುವ ಸೂಕ್ಷ್ಮತೆಯನ್ನೂ, ಲೌಕಿಕ ಬದುಕಿನ ಮಿತಿಯನ್ನೂ, ಅಲೌಕಿಕದ ಅಗತ್ಯವನ್ನೂ ದರ್ಶಿಸುತ್ತವೆ.

Version 1.0.0

ಐರೋಪ್ಯದ ಪ್ರಭಾವದೊಂದಿಗೆ ಮುನ್ನಡೆಯುತ್ತಿದ್ದ ಆಧುನಿಕ ಜಗತ್ತಿನೊಂದಿಗೆ ಮೈಸೂರು ರಾಜ್ಯವೂ ಎಡವದೇ ಹೆಜ್ಜೆಯಿಡಬೇಕಾದ ಅಗತ್ಯವಿದ್ದ ಕಾಲಘಟ್ಟದಲ್ಲಿ ಭಾರತೀಯತೆಯ ಬೇರನ್ನು ಬಿಡದೇ, ಪಾಶ್ಚಿಮಾತ್ಯ ಬಿಳಲುಗಳನ್ನೂ ಚಾಚಿ ಆಧುನಿಕ ಭಾರತದ ಭವಿಷ್ಯಕ್ಕೆ ಬುನಾದಿ ಕಟ್ಟಿದವರು ತಾಯಿ ಕೆಂಪನಂಜಮ್ಮಣ್ಣಿ.

ಒಬ್ಬ ಮಹಿಳೆಯಾಗಿ, ಪತ್ನಿಯಾಗಿ, ತಾಯಿಯಾಗಿ, ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿದ ರೀಜೆಂಟರಾಗಿ ಅವರ ಪ್ರತಿಯೊಂದು ನಡೆಯೂ ಇಂದಿನ ಹೆಣ್ಣುಮಕ್ಕಳಿಗೆ ಬದುಕು ನಿಭಾಯಿಸುವ ಒಳನೋಟಗಳನ್ನು ಕೊಡುತ್ತದೆ ಎನ್ನುವುದು ಮಹಿಳೆಯಾಗಿ ನನ್ನ ಅಭಿಪ್ರಾಯ.

ಲೆಕ್ಕವಿಟ್ಟು ಹಾಕಿದ ಚುಕ್ಕಿಗಳ ರಂಗೋಲಿ ಬಿಡಿಸಬೇಕಾದಲ್ಲಿ ಹೆಚ್ಚು ಸ್ವಾತಂತ್ರ್ಯವಿಲ್ಲ. ಚುಕ್ಕಿಗಳನ್ನು ಬಿಡುವಂತಿಲ್ಲ, ಹೊಸ ಚುಕ್ಕಿ ಇಡುವಂತಿಲ್ಲ. ಒಂದು ರೇಖೆ ಹೆಚ್ಚು ಕಡಿಮೆಯಾದರೂ ಪೂರ್ತಿ ರಂಗೋಲಿ ಹಾಳಾದಂತೆ. ಇದು ಸವಾಲಿನ ಕೆಲಸ. ಈ ಸವಾಲನ್ನು ಸಮರ್ಥವಾಗಿ ನಿಭಾಯಿಸಿರುವ ಲೇಖಕರು ಅಭಿನಂದನಾರ್ಹರು.


  • ಡಾ. ಸುವರ್ಣಿನಿ ಕೊಣಲೆ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading