‘ಚೌಚೌ ಬಾತ್’ ಅಂಕಣ (ಭಾಗ – ೪೭)

ಶೌಚಾಲಯ ಸೌಲಭ್ಯ ಇಲ್ಲದ ಹಳ್ಳಿ ಮನೆಗೆ ಅಕ್ಕ ಸೇರಿದ್ದಳು. ಆದರೆ ಆ ಕಾಲಕ್ಕೆ ಅವರ ಮನೆಯಲ್ಲಿ ಶೌಚಾಲಯ ಇಲ್ಲದ್ದು ಅಷ್ಟು ದೊಡ್ಡ ವಿಷಯ ಆಗಿರಲಿಲ್ಲ. ಆದರೆ ನನಗದು ಗಂಭೀರ ವಿಷಯವಾಗಿತ್ತು, ಮುಂದೇನಾಯಿತು ಸರ್ವಮಂಗಳ ಜಯರಾಮ್ ಅವರ ‘ಚೌಚೌ ಬಾತ್’ ಅಂಕಣದಲ್ಲಿ ‘ಬಯಲು ಬಹಿರ್ದೆಸೆ’. ತಪ್ಪದೆ ಮುಂದೆ ಓದಿ…

ಚಿಕ್ಕವಳಿದ್ದಾಗ ನಾನು ಸಾಮಾನ್ಯವಾಗಿ ಯಾರ ಊರಿಗೂ ಅಷ್ಟಾಗಿ ಹೋಗುತ್ತಿರಲಿಲ್ಲ. ಹೋದರೂ ಒಂದು ದಿನದ ಮಟ್ಟಿಗೆ ಅಜ್ಜಿ ಊರಿಗೆ ಅಥವಾ ನೆಂಟರ ಊರುಗಳಿಗೆ ಹೋಗುತ್ತಿದ್ದದು ಅಷ್ಟೇ. ಎರಡು ಮೂರು ದಿನಗಳಂತೂ ಯಾವ ಊರಿನಲ್ಲಿಯೂ ಇರುತ್ತಿರಲಿಲ್ಲ. ಕಾರಣ ಏನೆಂದರೆ ಶೌಚಾಲಯದ ಸಮಸ್ಯೆ. ಆಗಿನ ಕಾಲದಲ್ಲಿ ಸಾಮಾನ್ಯವಾಗಿ ಯಾರ ಮನೆಗಳಲ್ಲೂ ಶೌಚಾಲಯ ಇರುತ್ತಿರಲಿಲ್ಲ. ಆದರೆ ನಮ್ಮ ಮನೆಯಲ್ಲಿ ಶೌಚಾಲಯ ಇತ್ತು. ಆ ಕಾಲಕ್ಕೆ ಸ್ವಲ್ಪ ಅನುಕೂಲಸ್ಥರಾದ್ದರಿಂದ ಎಲ್ಲಾ ಸೌಲಭ್ಯಗಳು ನಮಗೆ ದೊರೆತಿದ್ದವು. ಟಿವಿ, ನ್ಯೂಸ್ ಪೇಪರ್, ಕರೆಂಟ್ ಸ್ಟವ್, ಮಿಕ್ಸಿ ,ವಾಟರ್ ಬಾಯ್ಲರ್ ಮುಂತಾದ ಆಧುನಿಕ ಸೌಲಭ್ಯಗಳು ನಮ್ಮ ಮನೆಯಲ್ಲಿ ಇದ್ದವು. ಅಪ್ಪ ಎಲೆಕ್ಟ್ರಿಕಲ್ ಕಾಂಟ್ರಾಕ್ಟರ್ ಆಗಿದ್ದರಿಂದ ಇಷ್ಟೆಲ್ಲ ವ್ಯವಸ್ಥೆ ಮಾಡಿದ್ದರು. ನಮಗಂತೂ ಬಡತನದ ಛಾಯೆ ಕೂಡ ಸೋಕದಂತೆ ಬೆಳೆಸಿದ್ದರು.

ನಾನು ಚಿಕ್ಕವಳಾಗಿದ್ದಾಗಿನಿಂದಲೂ ಶೌಚಾಲಯ ಬಳಸುತ್ತಿದ್ದರಿಂದ ಬಯಲು ಬಹಿರ್ದೆಸೆ ನನಗೆ ಒಲ್ಲದ ವಿಷಯ. ಅದರಲ್ಲೂ ನಾಚಿಕೆ ಸ್ವಭಾವದವಳಾದ ನಾನು ಎಲ್ಲಾದರೂ ಹೊರಗಡೆ ಹೋದರೆ ಸರಿಯಾಗಿ ಊಟ ತಿಂಡಿ ಕೂಡ ತಿನ್ನು ತಿನ್ನುತ್ತಿರಲಿಲ್ಲ, ನೀರು ಸಹ ಕುಡಿಯದೆ ಹಾಗೇ ಇರುತ್ತಿದ್ದೆ. ಕಾರಣ…. ಎಲ್ಲಿ ಶೌಚಾಲಯಕ್ಕೆ ಹೋಗಬೇಕಾದೀತೋ ಎಂಬ ಅಳುಕಿನಿಂದ. ಅಂದರೆ ನಮ್ಮ ಮನೆಯಲ್ಲಿ ಮಾತ್ರ ನನಗೆ ನಿರಾಳತೆ ಈ ವಿಷಯದಲ್ಲಿ. ಬೇರೆಲ್ಲೂ ನನಗೆ ಕಂಫರ್ಟ್ ಅನಿಸುತ್ತಿರಲಿಲ್ಲ. ಹಾಗೆ ನೋಡಿದರೆ ಈಗಲೂ ಕೂಡ ಹಾಗೇ ನಾನು.

ಫೋಟೋ ಕೃಪೆ : google

ನಾನಾಗ ಆರನೇ ತರಗತಿಯಲ್ಲಿ ಓದುತ್ತಿದ್ದೆ. ನನಗಿಂತ ಏಳೆಂಟು ವರ್ಷ ಹಿರಿಯವಳಾದ ಅಕ್ಕನಿಗೆ ಮದುವೆ ಆಗಿತ್ತು. ಶೌಚಾಲಯ ಸೌಲಭ್ಯ ಇಲ್ಲದ ಹಳ್ಳಿ ಮನೆಗೆ ಅಕ್ಕ ಸೇರಿದ್ದಳು. ಆದರೆ ಆ ಕಾಲಕ್ಕೆ ಅವರ ಮನೆಯಲ್ಲಿ ಶೌಚಾಲಯ ಇಲ್ಲದ್ದು ಅಷ್ಟು ದೊಡ್ಡ ವಿಷಯ ಆಗಿರಲಿಲ್ಲ. ಆದರೆ ನನಗದು ಗಂಭೀರ ವಿಷಯ. ಮುಖ್ಯವಾಗಿ ಹೆಣ್ಣು ಮಕ್ಕಳ ಮರ್ಯಾದೆ ವಿಷಯ. ಶೌಚಕ್ಕೆ ಹೊರಗೆ ಹೋಗುವುದೆಂದರೆ ತೀರಾ ಅವಮಾನ ಎಂಬ ಭಾವನೆ. ಹಾಗಾಗಿಯೇ ನಾನು ಅಕ್ಕನ ಊರಿಗೆ ಹೋಗುತ್ತಿದ್ದುದು ಅಪರೂಪಕ್ಕೊಮ್ಮೆ. ಹೋದರೂ ಒಂದೇ ದಿನಕ್ಕೆ ವಾಪಸ್ಸು ಬರುತ್ತಿದ್ದೆವು.ಕಾರಣ ಅಲ್ಲಿ ಶೌಚಕ್ಕೆ ಪಕ್ಕದ ಮನೆಗೆ ಹೋಗಬೇಕಿತ್ತು. ಮುಂದೆ ಒಂದೆರಡು ವರ್ಷಗಳಲ್ಲಿ ಅಕ್ಕನ ಮನೆಯಲ್ಲೂ ಶೌಚಾಲಯ ಕಟ್ಟಿಸಿದರು.

ಈಗಲೂ ಹಳ್ಳಿಗಳಲ್ಲಿ ಅದೆಷ್ಟೋ ಮನೆಗಳಲ್ಲಿ ಶೌಚಾಲಯ ಇರುವುದಿಲ್ಲ. ಹಳ್ಳಿಯ ಹೆಣ್ಣು ಮಕ್ಕಳು ರಾತ್ರಿಯಾಗುವುದನ್ನೇ ಕಾಯುತ್ತಿರುತ್ತಾರೆ. ರಸ್ತೆ ಬದಿಯಲ್ಲಿಯೋ , ತಿಪ್ಪೆ ಪಕ್ಕದಲ್ಲಿಯೋ ಕುಳಿತು ತಮ್ಮ ಕೆಲಸ ಮುಗಿಸಿಕೊಂಡು ಬರಬೇಕು. ಆಗ ಯಾರಾದರೂ ಗಂಡಸರು ನೋಡಿಯಾರು ಎಂಬ ಆತಂಕದಲ್ಲಿ ಎದ್ದು ಎದ್ದು ಕುಳಿತುಕೊಳ್ಳಬೇಕು. ಸಂಜೆಯ ಮಬ್ಬು ಕತ್ತಲಿನಲ್ಲಿ ಚೊಂಬು ಹಿಡಿದು ಹೊರಗೆ ಹೋಗುವ ಹೆಂಗಸರ ಚಿತ್ರಣ ಹಳ್ಳಿಗಳಲ್ಲಿ ಈಗಲೂ ಸಾಮಾನ್ಯ. ಆದರೆ ಗಂಡಸರಿಗೆ ಇದ್ಯಾವ ಆತಂಕವೂ ಇರುವುದಿಲ್ಲ. ಅವರು ಎಲ್ಲಾದರೂ ಸರಿ ಹೇಗಾದರೂ ಸರಿ ಬೆಳಕೇ ಇರಲಿ ಕತ್ತಲೇ ಇರಲಿ, ಸಲೀಸಾಗಿ ಕೆಲಸ ಮುಗಿಸಿಕೊಂಡು ಬರುತ್ತಾರೆ. ಆದರೆ ಹೆಂಗಸರಿಗೆ ಹಾಗಾಗುವುದಿಲ್ಲ. ಯಾರಾದರೂ ಹೆಂಗಸರು ಚೊಂಬು ಹಿಡಿದು ಹೊರಗೆ ಹೊರಟರೆಂದರೆ ಅವರನ್ನು ಹಿಂಬಾಲಿಸುವ ಕಣ್ಣುಗಳು ಹಲವಾರು. ಆ ಕಣ್ಣುಗಳನ್ನು ತಪ್ಪಿಸಿ ತಮ್ಮ ಕಾರ್ಯ ಮುಗಿಸಿಕೊಳ್ಳಲು ಪಾಪ ಹೆಣ್ಣು ಮಕ್ಕಳು ಹರಸಾಹಸ ಪಡಬೇಕಾಗುತ್ತದೆ.

ಫೋಟೋ ಕೃಪೆ : google

ತುಂಬಾ ಹಿಂದಿನ ಕಾಲದಲ್ಲಿ ಆ ರೀತಿ ಒಬ್ಬೊಬ್ಬರೇ ಬಯಲು ಬಹಿರ್ದೆಸೆಗೆ ಹೋಗಿ ಅದೆಷ್ಟೋ ಹೆಣ್ಣುಮಕ್ಕಳು ಅತ್ಯಾಚಾರಕ್ಕೆ ಈಡಾಗಿರುತ್ತಾರೆ. ಅದು ಈಗಲೂ ನಡೆಯುತ್ತಿರುವ ವಿದ್ಯಮಾನ. ಒಟ್ಟಾರೆಯಾಗಿ ಬಯಲು ಬಹಿರ್ದೆಸೆ ಎಂಬುದು ಹೆಣ್ಣು ಮಕ್ಕಳಿಗೆ ಒಂದು ರೀತಿಯ ದುಃ ಸ್ವಪ್ನ. ನನಗೆ ನೆನಪಿರುವಂತೆ ನಮ್ಮ ಮನೆಯ ಸಮೀಪ ಇದ್ದ ಸರ್ಕಾರಿ ಆಸ್ಪತ್ರೆಯ ಹಿಂಭಾಗದಲ್ಲಿದ್ದ ಬೇಲಿ ಹಾಗೂ ಕತ್ತಾಳೆಯ ಹಿಂದಕ್ಕೆ ಸಂಜೆಯಾಗುತ್ತಿದ್ದಂತೆ ಹೆಣ್ಣು ಮಕ್ಕಳ ಸಾಲು ಚೊಂಬು ಹಿಡಿದು ಹೊರಡುತ್ತಿತ್ತು. ಆಗ ಅಲ್ಲೇ ಆಸ್ಪತ್ರೆಯ ಬಯಲಿನಲ್ಲಿ ಕ್ರಿಕೆಟ್ ಹಾಗೂ ಚೆಂಡಾಟ ಆಡುತ್ತಿದ್ದ ಪುಂಡು ಪೋಕರಿಗಳ ಗುಂಪು ಅವರನ್ನು ಹಿಂಬಾಲಿಸುತ್ತಿತ್ತು. ಆಗ ಅವರಲ್ಲಿ ಯಾರಾದರೂ ಒಬ್ಬರು ಅಡ್ಡಲಾಗಿ ನಿಂತು ಮರೆಮಾಡಿ ನಿಲ್ಲುತ್ತಿದ್ದರು.ಪಾಪ ಆ ಹೆಣ್ಣು ಮಕ್ಕಳ ಸ್ಥಿತಿ ನೋಡಿ ನನಗೆ ಮರುಕ ಉಂಟಾಗುತ್ತಿತ್ತು. ಪೋಕರಿಗಳಿಗೆ ಇದು ತಮಾಷೆಯ ವಿಷಯವಾಗಿತ್ತು. ಇದೊಂದು ರೀತಿ ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣ ಸಂಕಟ ಎಂಬಂತೆ ಆಗಿತ್ತು. ಮೊದಲಿನ ದಿನಗಳಿಗೆ ಹೋಲಿಸಿದರೆ ಹಳ್ಳಿಗಳಲ್ಲಿ ಈಗ ಶೌಚಾಲಯದ ವ್ಯವಸ್ಥೆ ಸ್ವಲ್ಪ ಉತ್ತಮ ಎಂದೇ ಹೇಳಬಹುದು. ಈಗ ಎಲ್ಲರ ಮನೆಗಳಲ್ಲೂ ಶೌಚಾಲಯಗಳಿವೆ. ಆದರೆ ಸಮರ್ಪಕವಾದ ನೀರಿನ ಸೌಲಭ್ಯ ಇರುವುದಿಲ್ಲ.ಒಟ್ಟಿನಲ್ಲಿ ಈಗ ಬಯಲು ಬಹಿರ್ದೆಸೆಯಿಂದ ಹೆಣ್ಣು ಮಕ್ಕಳು ಸ್ವಲ್ಪ ಪ್ರಮಾಣದಲ್ಲಿ ಮುಕ್ತರಾಗಿದ್ದಾರೆ ಎಂದು ಹೇಳಬಹುದು.

ಅಂಕಣದ ಹಿಂದಿನ ಸಂಚಿಕೆಗಳು :


  • ಸರ್ವ ಮಂಗಳ ಜಯರಾಂ – ಗೌರಿಬಿದನೂರು

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading