ಅಪರಾಧಿಗಳಿಗೆ ಆಶ್ರಯ ಕೊಡುವುದು ಕೂಡಾ ಅಪರಾಧವೇ, ಕತ್ತಲೆ ಆಗೊ ತನಕ ಇದ್ದು ಬಿಡಲಿ, ಆಮೇಲೆ ಒಂದು ಕ್ಷಣ ಇರ್ತಿನಿ ಅಂದ್ರು, ಪೋಲಿಸಿನವರಿಗೆ ತಿಳಿಸಿ ಬಿಡುತ್ತೆನೆ. ನಿರ್ಧಾರ ಮಾಡಿಯೇ ಮೇಲೆದ್ದಳು. ಕತೆಗಾರ್ತಿ ಶೈಲಜಾ ಹಾಸನ ಅವರ ‘ನಕ್ಸಲೈಟ್’ ಸಣ್ಣಕತೆಯನ್ನು ತಪ್ಪದೆ ಮುಂದೆ ಓದಿ…
ಲಗೇಜ್ ಆಟೋಗೆ ಬಾಳೆಗೊನೆಗಳ ಜೊತೆಗೆ ಶುಂಠಿ, ನಿಂಬೆಹಣ್ಣು, ಹೆರಳಿಕಾಯಿ, ಅನಾನಸ್ಸುಗಳಿದ್ದ ಮೂಟೆಗಳನ್ನು ತುಂಬಿ ಕೊಂಡ ಶಮಂತ ” ಅಪ್ಪಯ್ಯ,,ಇವತ್ತೂ ಮಳೆ ಬರೊ ಹಾಗೆ ಕಾಣ್ತಿಲ್ಲ, ಕಾಫಿ ಗಿಡಗಳಿಗೆ ನೀರು ಹೊಡಿಸಿ ಬಿಡು, ನಾನು ಗೊಬ್ಬರ ತಗೋಂಡು ಬರ್ತಿನಿ. ” ಅಂತ ಹೇಳುತ್ತ ಆಟೋ ಸ್ಟಾರ್ಟ ಮಾಡಿದಳು. ಗೊಬ್ಬರ ಸಿಗುತ್ತೊ ಇಲ್ಲವೊ, ಹಾಳು ಈ ಗೊಬ್ಬರ ಬಿಡೋಣವೆಂದರೆ ಈ ಅಪ್ಪಯ್ಯ ನನ್ನ ಮಾತು ಕೇಳೋ ಹಾಗಿಲ್ಲ, ಸಾವಯುವ ಕೃಷಿಮೇಳಕ್ಕೆ ಹೋಗಿ ಬಂದಾಗಿನಿಂದಲೂ ಎರೆಹುಳು ಗೊಬ್ಬರ , ಜೀವಮೃತ ಜಲ ಇವೇ ಕಾಡತೊಡಗಿದ್ದಾವೆ. ಮುಂದಿನ ವರ್ಷದಿಂದಲೇ ಈ ಅಪ್ಪಯ್ಯ ಒಪ್ಪಲಿ ಬಿಡಲಿ ನಮ್ಮ ತೋಟವನ್ನು ಸಾವಯುವ ಕೃಷಿಗೆ ಒಳಪಡಿಸ ಬೇಕು, ಎಲ್ಲದಕ್ಕೂ ಅಪ್ಪಯ್ಯ ಕೊಂಕು ತೆಗಿತಾರೆ. ಮೊದ್ಲೆ ನನ್ನ ಮೇಲೆ ಬ್ರಹ್ಮಾಂಡ ಕೋಪ, ನಾನು ಮಾಡೊ ಕೆಲ್ಸ ಅಂದ್ರೆ ಸಿಡಿದು ಬೀಳ್ತಾರೆ. ಬೀಳ್ಲಿ, ಬೀಳ್ಲಿ, ನಾನು ತಪ್ಪು ಮಾಡಿದ್ದಿನಲ್ಲ. ಬಗ್ಗಲೇ ಬೇಕು. ಅಮ್ಮಂಗಾದ್ರು ಒಂಚೂರು ಕರುಣೆ ಇದೆ. ಅದನ್ನೆ ಬಂಡವಾಳ ಮಾಡ್ಕೊಬೇಕು. ಆಲೋಚನೆ ಮಾಡ್ತನೇ ಪೇಟೆ ಮುಟ್ಟಿದಳು.
ಮಂಡಿಗೆ ಬಾಳೆಗೊನೆ ಹಾಕಿ ಹಣ ಇಸ್ಕೊಂಡು, ಸೀದಾ ತರಕಾರಿ ಮಾರ್ಕೆಟ್‍ಗೆ ಬಂದು’ ದುಡ್ಡು ಮಾತ್ರ ಇವತ್ತೆ ಬೇಕು, ಇಲ್ಲದಿದ್ದರೆ ಬೇರೆಯವರಿಗೆ ಕೊಟ್ಟು ಬಿಡ್ತನಿ’ ಅಂತ ಹೇಳಿ,ಮಾಮೂಲಿಯವರಿಗೆ ಶುಂಠಿ, ನಿಂಬೆಹಣ್ಣು, ಹೆರಳಿ, ಅನಾನಸ್ಸುಗಳಿದ್ದ ಮೂಟೆಗಳನ್ನು ಇಳಿಸಿದಳು. ಗಂಡಸಿನಂತೆ ಅವಳು ಮೂಟೆಗಳನ್ನು ಇಳಿಸುತ್ತಿದ್ದರೆ ಕೆಲವರು ಆಶ್ಚರ್ಯದಿಂದ ಅವಳತ್ತಲೇ ನೋಡುತ್ತಿದ್ದರು. ಈ ನೋಟಗಳೇನು ಅವಳಿಗೆ ಹೊಸದಲ್ಲ. ಯಾರ ನೋಟಗಳಿಗೂ, ಯಾರಮಾತುಗಳಿಗೂ ಅವಳಿಂದೇನೂ ಪ್ರತಿಕ್ರಿಯೆ ಇರುತ್ತಿರಲಿಲ್ಲ.
ಮನೆಗೆ ಬೇಕಾದ ಸಾಮಾನು ಕೊಂಡು ಆಟೋಗೆ ಹಾಕಿಕೊಂಡು ಗೊಬ್ಬರ ಕೊಡುವ ಜಾಗಕ್ಕೆ ಬಂದ್ರೆ ಅಲ್ಲಾಗಲೇ ಜನ ಕ್ಯೂ ನಿಂತು ಬಿಟ್ಟಿದ್ದಾರೆ. ಸದ್ಯ ಗೊಬ್ಬರ ಕೊಡ್ತ ಇದ್ದಾರೆ. ಅಪ್ಪಯ್ಯ ಸಿಡಿಮಿಡಿಗುಟ್ಟುವುದು ತಪ್ಪಿತು ಅಂತ ತಾನೂ ಕ್ಯೂನಲ್ಲಿ ಸೇರಿಕೊಂಡಳು. ಗಲಾಟೆಗಳಾವುದೂ ನಡೆಯದೆ ಗೊಬ್ಬರ ಸಿಕ್ಕಿದಾಗ ನೆಮ್ಮದಿಯ ಉಸಿರು ಬಿಟ್ಟಳು. ಮನೆಗೆ ಹೊರಟು ಬೀಡೊಣ ಅಂತ ಅಂದ್ಕೊಂಡು ಗಾಡಿ ತಿರುಗಿಸಿದರೆ ಗಣೇಶನ ಸಿನಿಮಾದ ಪೋಸ್ಟರ್ ಕಾಣಿಸ ಬೇಕೇ, ಹೇಗೂ ಸಮಯ ಇದೆ, ಸಿನಿಮಾ ನೋಡ್ಕೊಂಡೆ ಹೋಗಿ ಬಿಡೋಣ ಅಂತ ಆಟೋವನ್ನು ಥೀಯೆಟರಿನತ್ತ ಓಡಿಸಿದಳು. ಸಿನಿಮಾ ನೋಡ್ತಾ ನೋಡ್ತಾ, ಈ ಹಾಳು ಸಿನಿಮಾಗಳನ್ನು ನೋಡಿಯೇ ನಾನು ಕೆಟ್ಟಿದ್ದು. ಕನಸಿನ ಲೋಕದೊಳಗೆ ಕರ್ಕೊಂಡು ಹೋಗೋ ಈ ಸಿನಿಮಾಗಳು ನಿಜ ಜೀವನದಲ್ಲೂ ಹಾಗೆ ಅನ್ನೊ ಭ್ರಮೆ ಹುಟ್ಟಿಸಿಬಿಡುತ್ತೆ. ಮುಂಗಾರು ಮಳೆ ನೋಡಿಯೆ ಅಲ್ಲವೇ ನಾನು ಜೀವನ್ ಬಗ್ಗೆ ಹುಚ್ಚಳಾಗಿದ್ದು. ಥೂ ಈಗ್ಯಾಕೆ ಅವನ ನೆನಪು ಅಂತ ಬಲವಂತವಾಗಿ ಅವನನ್ನು ಮನಸ್ಸಿನಿಂದ ತಳ್ಳಿದಳು.
ಮನೆಗೆ ಬರುವಷ್ಟರಲ್ಲಿ ಕತ್ತಲಾಗಿಯೇ ಬಿಟ್ಟಿತ್ತು.ಅಪ್ಪಯ್ಯ ರಸ್ತೆ ಹತ್ತಿರ ಬಂದು ಚಡಪಡಿಸುತ್ತ ನಿಂತಿರುತ್ತಾರೆ ಅನ್ನೊ ಸತ್ಯ ಗೊತ್ತಿದ್ದ ಶಮಂತ ಅಪ್ಪಯ್ಯನ ಕೋಪವನ್ನು ಎದುರಿಸಲು ಮಾನಸಿಕವಾಗಿ ಸಿದ್ದಳಾದಳು. ಅವಳು ಅಂದು ಕೊಂಡಂತೆ ಶಾಲು ಹೊದ್ದು ಇತ್ತಲೇ ದೃಷ್ಟಿ ನೆಟ್ಟು ನಿಂತಿದ್ದ ಅಪ್ಪಯ್ಯನ ಮುಂದೆ ಆಟೊ ನಿಲ್ಲಿಸಿದಳು. ಧುಮುಗುಡುತ್ತಲೇ ಆಟೋ ಹತ್ತಿ ಸ್ವಲ್ಪವೂ ತನ್ನನ್ನು ತಾಗದಂತೆ ಪಕ್ಕದಲ್ಲಿ ಅಪ್ಪಯ್ಯ ಕುಳಿತಾಗ ಮನದಲ್ಲಿಯೇ ನರಳಿದಳು. ಪಾಪ ಅಪ್ಪಯ್ಯ ನನ್ನ ಬಗ್ಗೆ ಅದೆಷ್ಟು ಕನಸು ಕಂಡಿದ್ದರು. ಅವರ ಕನಸನ್ನು ನನಸು ಮಾಡೋ ಹುಮ್ಮಸ್ಸು ಕೂಡಾ ನಂಗಿತ್ತು. ಆದರೆ ನನ್ನ ಹಣೆ ಬರಹನಾ ನಾನೆ ಬರ್ಕೊಂಡು ಬಿಟ್ಟೆನಲ್ಲ, ರಾಣಿಯಂತೆ ಇರಬಹುದಾಗಿದ್ದ ನಾನು ಇಷ್ಟು ಹೊತ್ತಿನಲ್ಲಿ ಹೀಗೆ ಆಟೋ ಓಡಿಸಿಕೊಂಡು ಬರ್ತ ಇರೋದು ಸ್ವಯಂಕೃತ ಅಪರಾದ, ಯೋಚನೆಯಲ್ಲಿ ಬಿದ್ದವಳನ್ನು ಅಪ್ಪಯ್ಯನ ಹುಸಿ ಕೆಮ್ಮು ಎಚ್ಚರಿಸಿತು. ಆಟೋ ಸ್ಟಾರ್ಟ ಮಾಡಿದಳು.
ಮನೆ ಮುಂದೆ ಆಟೋ ನಿಲ್ಲಿಸಿದಾಗ ಅಪ್ಪಯ್ಯ ಒಂದೂ ಮಾತಾಡದೆ ಒಳನಡೆದು ಬಿಟ್ಟಿದ್ದನ್ನು ಪೆಚ್ಚಾಗಿ ನೋಡಿದಳು. ಮೂಟೆಗಳನ್ನು ಇಳಿಸುವ ಉತ್ಸಾಹ ಉಡುಗಿ ಹೋಯಿತು. ಆಟೋವನ್ನು ಶೆಡ್ಡಿನಲ್ಲಿ ನಿಲ್ಲಿಸಿ ಶೆಡ್ಡಿಗೆ ಬೀಗ ಹಾಕಿ ಒಳಬಂದಳು.
ಮಗಳನ್ನು ಕಂಡ ಕೂಡಲೇ ಸುಂದರಮ್ಮ “ಅಲ್ವೆ, ಸ್ವಲ್ಪನಾದ್ರೂ ಬುದ್ದಿ ಬೇಡ್ವಾ ನಿಂಗೆ, ಟೈಂ ಎಷ್ಟು ಗೊತ್ತಾ ಈಗ, ಇಷ್ಟು ಹೊತ್ತಿಗೆ ಬರ್ತಾ ಇದ್ದಿಯಲ್ಲ, ನೀನು ಹೆಣ್ಣು ಅನ್ನೊದನ್ನೆ ಮರೆತು ಬಿಟ್ಟಿದ್ದಿಯಾ, ನಿಮ್ಮ ಅಪ್ಪಯ್ಯ ಅಂತೂ ಸಂಜೆಯಿಂದಲೇ ಕುಣಿತಿದ್ದರು. ಈ ತೋಟನೂ ಬೇಡಾ, ನಿನ್ನ ದರ್ಬಾರೂ ಬೇಡಾ, ಎಲ್ಲಾನೂ ಮಾರ್ಕೊಂಡು ಹೋಗಿ ಬೀಡೊಣ ಅಂತ ಕೂಗಾಡ್ತ ಇದ್ರು” ಒಂದೇ ಸಮ ರೇಗಿದಾಗ
‘ಅಮ್ಮಾ , ತುಂಬಾ ಹಸಿವಾಗ್ತ ಇದೆ, ಬೆಳಗ್ಗೆ ತಿಂಡಿ ತಿಂದಿದ್ದು” ಸೋತ ದನಿಯಲಿ ಹೇಳಿದಳು.
” ಅಯ್ಯೊ ನನ್ನ ಬುದ್ದಿಗಷ್ಟು, ಬೇಗ ಕೈಕಾಲು ತೊಳ್ಕಂಡು ಬಾ, ಮೊದ್ಲು ಊಟ ಕೊಡ್ತಿನಿ, ಇಷ್ಟು ಹೊತ್ತಾದ್ರೂ ಏನೂ ತಿಂದಿಲ್ವಲ್ಲ, ತಿನ್ನೊಕೆ ಮಾತ್ರ ಒಬ್ಳೆ ಹೋಗಲ್ಲ, ಅದೆಲ್ಲ ಮಡಿ ಮಾತ್ರ ಇದೆ, ಮುಖ್ಯವಾದದ್ದನ್ನೆ ಬಿಟ್ಟು ಬಿಟ್ಟೆಯಲ್ಲೆ’ ಹಾಗೆಂದವರೇ ಕಣ್ಣಿರು ಹಾಕ್ತನೇ ಬಿಸಿಬಿಸಿಯಾದ ಅನ್ನನ ತಟ್ಟೆಗೆ ಹಾಕಿ, ಬೇಡಾ ಅಂತ ಕೈ ಅಡ್ಡ ಹಿಡಿದ್ರೂ ತುಪ್ಪ ಸುರಿದು ಸಾಂಬಾರು ಹಾಕಿದರು. ಅಮ್ಮನ ಕಣ್ಣಿರು ಅವಳ ಹೃದಯಕ್ಕೆ ತಾಕಲೇ ಇಲ್ಲ. ಯಾರ ಕಣ್ಣಿರಿಗೂ, ಯಾರ ಕೋಪಕ್ಕೂ ಸ್ಪಂದಿಸದ ನಿರ್ದಯಿಯಾಗಿದ್ದಳು.
ಬೆಳಗ್ಗೆ ಬೇಗ ಎದ್ದ ಶಮಂತ ಅಪ್ಪಯ್ಯ ಏಳುವ ಮುಂಚೆಯೇ ಅವರಿಗೆ ಕಾಣುವಂತೆ ಗೊಬ್ಬರದ ಮೂಟೆಗಳನ್ನು ಇಟ್ಟು ಬಿಡೋಣವೆಂದು ಶೆಡ್ ಬಾಗಿಲು ತೆಗೆದಳು. ಒಳ ಬಂದು ಆಟೋ ಹಿಂದೆ ಬಂದು ಮೂಟೆಗೆ ಕೈ ಹಾಕಬೇಕು ಎನ್ನುವಷ್ಟರಲ್ಲಿ ಸರಕ್ಕನೇ ಮುಂದೆ ಬಂದ ಕೈಯೊಂದು ಅವಳ ಬಾಯಿ ಮುಚ್ಚಿ ‘ಬಿಡಿಸಿ ಕೊಳ್ಳೊಕೆ ಪ್ರಯತ್ವಿಸಬೇಡಾ, ನಾನು ಹೇಳೊದನ್ನ ನಿಧಾನವಾಗಿ ಕೇಳಿಸ್ಕೊ, ನಾನು ನಿಂಗೆನೂ ಮಾಡಲ್ಲ’ ಗಡಸು ಸ್ವರ ಹಿಂದಿನಿಂದ ಕೇಳಿಬಂದಾಗ ಬೆಚ್ಚಿದಳು. ಹೆದರಿಕೆಯಿಂದ ಮಾತೇ ಹೊರಡಲಿಲ್ಲ. ”ನಾನು ಇಲ್ಲಿರೋದು ಯಾರಿಗೂ ಗೊತ್ತಾಗ ಬಾರದು. ರಾತ್ರಿಯಾದ ಕೊಡಲೆ ಹೊರಟು ಬಿಡ್ತಿನಿ,” ಶಮಂತ ಮಿಸುಕಾಡಲಿಲ್ಲ.
‘ಗುಡ್, ನನ್ನ ಮಾತು ಕೇಳ್ತಿ ಅನ್ನೊ ನಂಬಿಕೆಯಿಂದ ನಿನ್ನ ಬಿಡ್ತ ಇದ್ದಿನಿ” ಬಿಡುಗಡೆ ಹೊಂದಿದ ಶಮಂತ ಸರಕ್ಕನೆ ಹಿಂದೆ ತಿರುಗಿದಳು.
‘ ಯಾರು ನೀನು, ಇಲ್ಲಿಗ್ಯಾಕೆ ಬಂದೆ, ಹೇಗೆ ಬಂದೆ, ನಿಂಗೇನು ಬೇಕು” ನಡುಗುವ ದನಿಯಲಿ ಕೇಳಿದಳು,
‘ಮೆಲ್ಲಗೆ ಮಾತಾಡು ,” ಗಡುಸಾಗಿ ಹೇಳಿದ. ಧ್ವನಿಗೆ ತಕ್ಕ ಕಾಯವಲ್ಲದ ಅವನು ಸಣ್ಣಗೆ ಎತ್ತರವಾಗಿದ್ದ. ಕ್ಷಣ ಅಧಿರಳಾದರೂ ಸಾವರಿಸಿಕೊಂಡು ”ನೀನು ಕಳ್ಳನೋ,ಕೊಲೆಗಾರನೋ? ಬಚ್ಚಿಟ್ಟುಕೊಳ್ಳಕೊ ಈ ಮನೆನೇ ಬೇಕಿತ್ತಾ,” ತಿರಸ್ಕಾರವಾಗಿ ನೋಡುತ್ತಾ ಕೇಳಿದಳು.
”ಈ ಮನೆನೇ ಬೇಕು ಅಂತ ಹುಡುಕಿಕೊಂಡು ಬರಲಿಲ್ಲ, ನೀನೇ ನನ್ನ ಕರ್ಕೊಂಡು ಬಂದಿದ್ದು” ಅವಳತ್ತ ನೋಡದೆ ನುಡಿದ.
”ನಾನು ಕರ್ಕೊಂಡು ಬಂದ್ನ, ನಿಂಗೇನು ತಲೆ ಕೆಟ್ಟಿದ್ಯಾ, ,ನೀನ್ಯಾರು ಅನ್ನೊದೇ ನಂಗೆ ಗೊತ್ತಿಲ್ಲ. ನಾನ್ಯಾಕೆ ಕರ್ಕೊಂಡು ಬರ್ಲಿ’ ಗಾಭರಿಯಾದಳು.
”ಪೋಲಿಸಿನವರು ಬಂದ್ರು ಅಂತ ನಿನ್ನ ಆಟೋ ಹತ್ತಿ ಗೊಬ್ಬರದ ಚೀಲಗಳ ನಡುವೆ ಮುಚ್ಚಿಟ್ಟುಕೊಂಡಿದ್ದೆ. ನಾನಿದ್ದದ್ದು ನಿಂಗೆ ಗೊತ್ತಾಗಲೇ ಇಲ್ಲ.ಸೀದಾ ನೀನೆ ನಿನ್ನ ಮನೆಗೆ ಕರ್ಕೊಂಡು ಬಂದು ಈ ಶೆಡ್ಡಿನಲ್ಲಿ ಕೂಡಿ ಹಾಕಿದೆ”ವಿವರ ನೀಡಿದ.
ಇವನ್ಯಾವಾಗ ಆಟೋ ಹತ್ತಿಕೊಂಡ, ತಾನು ಎಲ್ಲೆಲ್ಲಿ ಆಟೊ ನಿಲ್ಲಿಸಿದ್ದೆ ಅಂತ ಯೋಚನೆಗೊಳಗಾದಳು. ರಾತ್ರೆಯೆಲ್ಲಾ ಇಲ್ಲೆ ಇದ್ದನೆ, ಯಾರಿವನು,
” ನಾನು ಹಗಲಿನಲ್ಲಿ ಹೊರಗೆ ಹೋಗೊ ಹಾಗಿಲ್ಲ, ಕತ್ತಲಾದ ಕೂಡಲೇ ಹೋಗಿ ಬಿಡ್ತಿನಿ. ಈಗ ನಂಗೆ ತುಂಬಾ ಹಸಿವಾಗಿದೆ, ಏನದ್ರೂ ತಿನ್ನೊಕೆ ತರ್ತಿಯಾ” ದ್ವನಿಯಲ್ಲಿ ಕಾಠಿಣ್ಯತೆ ಇದ್ದರೂ, ಬೇಡಿಕೆಯೂ ಇಣುಕಿತು.
ಅಯ್ಯೊ ಗಂಡಸೆ, ಹಸಿವಿನ ಮುಂದೆ ಯಾವ ಪೌರುಷವೂ ನಿಲ್ಲೊಲ್ಲ, ಸೋತು ಬಸವಳಿದಿದ್ದ ಮುಖದಲ್ಲಿ ಹಸಿವಿನ ಸಂಕಟ ಎದ್ದು ಕಾಣುತ್ತಿತ್ತು., ಅಯ್ಯೊ ಎನಿಸಿದರೂ, ಯಾರೋ ಎನೋ, ಎಂತ ಅಪಾಯಕಾರಿ ಮನುಷ್ಯನೋ, ನನ್ನ ಕನಿಕರಕ್ಕೆ ಅರ್ಹನೋ ಅಲ್ಲವೊ, ಹಿಂದೆ ಮುಂದೆ ಯೋಚಿಸದೆ ದುಡುಕಬಾರದು, ಒಂದು ಸಲ ದುಡುಕಿದ್ದಕ್ಕೆ ಇಡೀ ಬದುಕಿನ ತುಂಬ ಸಾಕಷ್ಟು ಅನುಭವಿಸುತ್ತಿದ್ದೆನೆ. ಛೆ.ಅದಕ್ಕೂ ಇದಕ್ಕೂ ಹೋಲಿಕೆಯೇ, ಪ್ಯಾದೆಯಂತಿರುವ ಇವನು ನನಗೇನು ಮಾಡಬಲ್ಲ. ಕೈಯಲ್ಲಿ ಯಾವ ಆಯುಧವೂ ಇದ್ದಂತಿಲ್ಲ. ಯಾವ ಕ್ರಿಮಿನಲ್ ಕೆಲಸ ಮಾಡಿ ಓಡಿ ಬಂದಿದ್ದನೋ, ಯಾರನ್ನಾದರೂ ಕೊಲೆ ಮಾಡುವ ಶಕ್ತಿ ಇದೆಯೆ ಈ ಲೂಸ್ ಮಾದನಿಗೆ, ಪಕಪಕನೆ ನಗು ಬಂತು ತನ್ನ ಹೋಲಿಕೆಗೆ.
ಇಂತ ಪರಿಸ್ಥಿತಿಯಲ್ಲೂ ನಕ್ಕ ಅವಳತ್ತ ಆಶ್ಚರ್ಯದಿಂದ ನೋಡುತ್ತ” ಎಯ್ ಹುಡುಗಿ, ನನ್ನ ಹಸಿವು ನಿಂಗೆ ನಗು ತರಿಸುತ್ತಾ ಇದೆಯೆ, ಒಂದು ಸಲ ಹಸಿವಿನ ಸಂಕಟ ಏನೂ ಅಂತ ತಿಳ್ಕೊ, ಆಗ ನಿಂಗೆ ಗೊತ್ತಾಗುತ್ತೆ, ಹಸಿವಿನ ಸಂಕಟದ ಮುಂದೆ ಬೇರ್ಯಾವ ಸಂಕಟವೂ ಇಲ್ಲ ಅಂತ,ನಿನಗೆ ಹೇಗೆ ಗೊತ್ತಾಗ ಬೇಕು ಹಸಿವಿನ ಸಂಕಟ”ಕ್ರೋಧದಿಂದ ನುಡಿದ.
”ನನ್ನ , ಹುಡುಗಿ ಅನ್ನಬೇಡ, ನನ್ನ ಹೆಸರು ಶಮಂತ, ಇರು ಬರ್ತಿನಿ”ಅಂದವಳೇ ಹೊರಗೋಡಿದಳು. ಕ್ಷಣ ಗಾಭರಿಯಾಗಿ ಸಿಕ್ಕಿಹಾಕಿಕೊಳ್ಳುವೆನೇನೊ ಎಂದು ಆತಂಕಿಸಿದ. ಹೊರಗಿನಿಂದ ಬಾಗಿಲು ಹಾಕಿಕೊಂಡು ಹೋಗಿದ್ದರಿಂದ ವಿಧಿ ಇಲ್ಲದೆ ಮೂಲೆಯನ್ನು ಆಶ್ರಯಿಸಿದ.
ಅಡುಗೆ ಮನೆಯಲ್ಲಿ ಬೆಳಗಿನ ತಿಂಡಿಗೆ ಕಡುಬು ಚಟ್ನಿ ಸಿದ್ದವಾಗಿತ್ತು. ಅಮ್ಮಾ ಅಂದ್ರೆ ಅಮ್ಮಾನೇ ಸಾಕ್ಷತ್ ಅನ್ನಪೂರ್ಣೆಶ್ವರಿ, ಅಮ್ಮಾ ಕೊಟ್ಟಿಗೆಗೆ ಹೋಗಿರಬೇಕು. ಅವಳು ಬರೋ ಅಷ್ಟರಲ್ಲಿ ತನ್ನ ಕೆಲಸವಾಗಬೇಕು ಅಂತ ಅಂದು ಕೊಳ್ಳುತ್ತ ಒಂದು ತಟ್ಟೆಗೆ ಬಿಸಿಬಿಸಿ ಕಡುಬು ಹಾಕಿಕೊಂಡು, ಮೇಲೆ ಚಟ್ನಿ ಸುರಿದು ಕೊಂಡು ತನ್ನ ವೇಲ್ನಿಂದ ಮುಚ್ಚಿಕೊಂಡು ಸರಸರನೇ ಶೆಡ್ಡಿನತ್ತ ಬಂದಳು. ಶಬ್ದವಾಗದಂತೆ ಬಾಗಿಲು ತೆಗೆದು ಒಳಬಂದು ” ತಿಂಡಿ ತಂದಿದ್ದಿನಿ,” ಅಂದಳು. ತಿಂಡಿ ಅನ್ನೊ ಪದ ಕಿವಿಗೆ ಬಿದ್ದ ಕೊಡಲೇ ಮೂಲೆಯಲ್ಲಿ ಅವಿತಿದ್ದವನು ಸರ್ರನೇ ಬಂದು ಅವಳ ಕೈಯಿಂದ ತಟ್ಟೆಯನ್ನು ಕಸಿದುಕೊಂಡವನೇ ಗಬಗಬನೇ ತಿನ್ನತೊಡಗಿದ. ಒಮ್ಮೆಲೆ ತಿಂದಿದ್ದರಿಂದ ನೆತ್ತಿಹತ್ತಿ ಕೆಮ್ಮತೊಡಗಿದ. ‘ಎಯ್, ಜೋರಾಗಿ ಕೆಮ್ಮ ಬೇಡ,ನೀರು ತರ್ತಿನಿ ಇರು”ಹಾಗೆಂದವಳನ್ನು ತಡೆಯುತ್ತ ‘ಬೇಡ, ನೀರು ಇಲ್ಲೆ ಇದೆ ”ಎಂದು ಆಟೊದಲ್ಲಿದ್ದ ನೀರಿನ ಬಾಟಿಲು ತೋರಿಸಿದ. ತಕ್ಷಣವೇ ಬಾಟಿಲು ತೆಗೆದುಕೊಂಡು ಮುಚ್ಚಳ ತೆಗೆದು ನೀರು ಕೊಟ್ಟಳು. ನೀರು ಕುಡಿದು ಕೃತಙ್ಞತೆ ನೋಟ ಬೀರಿ ಮತ್ತೆ ತಿನ್ನುವುದರಲ್ಲಿ ತಲ್ಲೀನನಾದ. ಆತಂಕವಿಲ್ಲದೆ ಕುಳಿತು ಅವನು ತಿನ್ನುವುದನ್ನೆ ನೋಡುತ್ತ ನಿಂತಳು.
ತಟ್ಟೆಯಲ್ಲಿದ್ದ ಕಡುಬುಗಳನ್ನೆಲ್ಲವನ್ನು ತಿಂದು ತೃಪ್ತಿಯಿಂದ ತೇಗಿ ಬೆರಳುಗಳಿಗೆ ಅಂಟಿದ್ದನ್ನು ನೆಕ್ಕುತ್ತ ‘ನಿನ್ನ ಉಪಕಾರನ ಯಾವ ರೀತಿ ತೀರಿಸಬೇಕೊ ಗೊತ್ತಾಗ್ತ ಇಲ್ಲ. ಹಸಿವಿನಿಂದ ಸತ್ತೆ ಹೋಗ್ತಿನಿ ಅಂತ ಅಂದು ಕೊಂಡಿದ್ದೆ. ನಿಜಾ ಹೇಳ್ತಿನಿ ನಾನು ಏನೂ ತಿನ್ನದೆ ಮೂರು ದಿನವಾಗಿತ್ತು. ” ರಿಲ್ಯಾಕ್ಸ ಆದವನಂತೆ ತಟ್ಟೆಯಲ್ಲಿ ಕೈ ತೊಳೆದು ಗೊಬ್ಬರದ ಚೀಲಗಳ ಮೇಲೆ ಆರಾಮಾಗಿ ಒರಗಿದ.
” ಈಗ ನೀನು ಹೋಗ್ತಿಯಾ, ಯಾರದ್ರು ನೋಡಿದ್ರೆ ಕಷ್ಟ. ನಮ್ಮ ಅಪ್ಪಯ್ಯನ ಕಣ್ಣು ತಪ್ಪಿಸೊದು ತುಂಬ ಕಷ್ಸ. ನೀನೀಗ ಹೊರಟು ಬಿಡು”ಅವಸರಿಸಿದಳು.
”ಅಯ್ಯೊ , ಈಗ ನಾನು ಹೋಗೋಕೆ ಆಗುತ್ತ, ನೀನು ಶಡ್ ಬೀಗ ಹಾಕಿದ್ರಿಂದ ನಾನು ಇಲ್ಲೆ ಉಳಿಯೊ ಹಾಗಾಯ್ತು. ಇಲ್ಲದಿದ್ದರೆ ರಾತ್ರಿನೇ ನನ್ನ ದಾರಿ ಹಿಡಿದು ಹೊರಟು ಬಿಡುತ್ತಿದ್ದೆ. ಇನ್ನು
ಕತ್ತಲಾದ ಮೇಲೆ ನಾನು ಹೊರಡೊದು”ಆತಂಕವಿಲ್ಲದೆ ಹೇಳಿದಾಗ, ಅವನ ಆತಂಕ ಅವಳಿಗೆ ವರ್ಗಯಿಸಿತು.
”ರಾತ್ರಿಯವರೆಗೆ ಇರ್ತಿಯಾ, ಇಲ್ಲಿ ಹೇಗೆ ಇರ್ತಿಯಾ, ಆಳುಗಳು ಬರ್ತಾ ಇರ್ತಾರೆ, ಇದು ಅಷ್ಟು ಸೇಫ್ ಜಾಗ ಅಲ್ಲ”ತಲೆ ಮೇಲೆ ದೊಡ್ಡ ಹೆಬ್ಬಂಡೆ ಕುಳಿತಂತೆ ಚಡಪಡಿಸಿದಳು. ಕ್ಷಣ ಯೋಚಿಸಿ ಈಗ ಇವನು ಹೊರ ಬರುವುದು ಸರಿ ಅಲ್ಲ ಅಂತ ತಿರ್ಮಾನಿಸಿ”ಕತ್ತಲಾಗುವತನಕ ಇಲ್ಲಿರೊಕೆ ಅವಕಾಶ ಕೊಡ್ತಿನಿ, ಕತ್ತಲಾದ ಕೊಡಲೇ ಹೊರಟು ಬಿಡಬೇಕು , ಈ ಮೂಟೆಗಳನ್ನೆಲ್ಲ ಹೊರಗೆ ತೆಗೆಯ ಬೇಕು, ಒಂಚೂರು ಹೆಲ್ಪ ಮಾಡು, ಆಟೋನ ಇವತ್ತು ಹೊರಗೆ ತೆಗೆಯೊದಿಲ್ಲ, ಶಬ್ದ ಮಾಡದಂತೆ ಇರಬೇಕು, ಗೊತ್ತಾಯ್ತ”ಹಾಗೆಂದವಳೆ, ಮೂಟೆಗಳನ್ನು ಒಂದೊಂದಾಗಿ ಅವನು ಬಾಗಿಲಿಗೆ ತಂದು ಕೊಟ್ಟಂತೆ ಹೊರಗಡೆ ಇರಿಸಿದಳು. ಯಾರಾದ್ರು ನೋಡಿದ್ರೆ ಅನ್ನೂ ಆತಂಕ ಕಾಡ್ತಾನೆ ಇತ್ತು. ಮೂಟೆಗಳನ್ನು ಹೊರ ತಂದ ಮೇಲೆ ಶೆಡ್ಡಿಗೆ ಬೀಗ ಹಾಕಿದಳು. ಮನೆಯೊಳಗೆ ಹೋಗುವ ಮನಸ್ಸಿಲ್ಲದೆ, ಶೆಡ್ಡಿನ ಬಾಗಿಲ ಬಳಿಯೆ ಕುಳಿತು ಯೋಚಿಸಿದಳು. ನಂಗ್ಯಾಕೆ ಇಲ್ಲದ ತಾಪತ್ರಯ ,ಪೋಲಿಸ್ನೋರಿಗೆ ಫೋನ್ ಮಾಡಿ ಬಿಡಲೇ, ಹಿಡ್ಕೊಟ್ಟು ಬಿಟ್ಟರೆ ಒಳ್ಳೆ ಕೆಲಸ ಮಾಡಿದ ಹಾಗೂ ಆಗುತ್ತೆ, ನಂಗೂ ರಿಸ್ಕ್ ತಪ್ಪುತ್ತದೆ. ಅದರೆ ನಂಬಿಕೆ ದ್ರೋಹ ಮಾಡಿದಂತಾಗುವುದಿಲ್ಲವೇ. ಒಳಗೆ ನಾನು ರಕ್ಷಿಸುತ್ತಿದ್ದೆನೆ ಎಂಬ ಭಾವದಿಂದ ನಿಶ್ಚಿಂತೆಯಿಂದ ಇದ್ದಾನೆ. ವಿದ್ಯಾವಂತನ ಹಾಗೆ ಕಾಣಿಸುತ್ತಿದ್ದಾನೆ, ಯಾವ ಅಪರಾಧ ಮಾಡಿ ಬಚ್ಚಿಟ್ಟುಕೊಂಡಿದ್ದಾನೊ, ಸುತ್ತ ಮುತ್ತ ಎಲ್ಲೂ ಕೊಲೆ ದರೋಡೆ ಆದ ಸುದ್ದಿ ಇಲ್ಲಾ, ಯಾರೀವನು? ಈ ಲೂಸ್ ಮಾದ, ನಮ್ಮ ಮನೆಗೇ ಬಂದು ಗಂಟು ಬೀಳಬೇಕಿತ್ತೆ. ನನ್ನ ಕರ್ಮ, ಯಾವ ಸಮಸ್ಯೆಯನ್ನು ಸೃಷ್ಟಿಸದೆ ಹೊರಟು ಬಿಟ್ಟರೆ ಸಾಕು, ನನ್ನ ಸಮಸ್ಯೆಗಳೇ ಬೇಕಾದಷ್ಟು ಇರುವಾಗ ಈ ಹೊಸ ಸಮಸ್ಯೆಯ ಗೊಡವೆ ಯಾಕೆ, ಹಸಿವು ಅಂದ ಕನಿಕರ ತೋರಿಸಿದೆ.
ಅಪರಾಧಿಗಳಿಗೆ ಆಶ್ರಯ ಕೊಡುವುದು ಕೂಡಾ ಅಪರಾಧವೇ, ಕತ್ತಲೆ ಆಗೊ ತನಕ ಇದ್ದು ಬಿಡಲಿ, ಆಮೇಲೆ ಒಂದು ಕ್ಷಣ ಇರ್ತಿನಿ ಅಂದ್ರು, ಪೋಲಿಸಿನವರಿಗೆ ತಿಳಿಸಿ ಬಿಡುತ್ತೆನೆ. ನಿರ್ಧಾರ ಮಾಡಿಯೇ ಮೇಲೆದ್ದಳು.
ತೋಟದ ಕೆಲಸದ್ದಲ್ಲಿ ಮುಳುಗಿದ್ದವಳಿಗೆ ಲೂಸ್ ಮಾದನ ನೆನಪೇ ಆಗಲಿಲ್ಲ. ಮಧ್ಯಾಹ್ನ ಅವಸರವಾಗಿಯೇ ಊಟ ಮುಗಿಸಿ ತೋಟಕ್ಕೆ ಓಡಿದ್ದಳು. ನೀರು ಹೊಡೆಸಿದ್ದರಿಂದ ಭೂಮಿ ಹದವಾಗಿತ್ತು. ಗೊಬ್ಬರ ಹಾಕುವ ಕೆಲಸ ಮುಗಿಸಿ ಮನೆಗೆ ಬರುವಷ್ಟರಲ್ಲಿ ಹೈರಾಣಾಗಿದ್ದಳು. ಇವತ್ತು ಜೋರು ಮಳೆ ಬರುವುದು ಬೇಡಪ್ಪ, ಜೋರು ಮಳೆ ಬಂದ್ರೆ ಗೊಬ್ಬರ ಹಾಕಿದ್ದೆಲ್ಲಾ ಕೊಚ್ಚಿ ಹೋಗಿಬಿಡುತ್ತದೆ ಅಂತ ಯೋಚಿಸುತ್ತ ಅಮ್ಮ ಕೊಟ್ಟ ಕಾಫಿ ಹೀರುತ್ತಿರುವಾಗಲೇ, ತಟ್ಟನೆ ಲೂಸ್ ಮಾದ ನೆನಪಾದ, ಅಯ್ಯೊ, ,ಅವನಿಗೆ ಮಧ್ಯಾಹ್ನ ಊಟವನ್ನೆ ಕೊಡಲಿಲ್ಲವಲ್ಲ. ಪಾಪ ಮೊದ್ಲೆ ಹಸಿದಿದ್ದ’ ಮನಸ್ಸು ಅನುಕಂಪ ತಾಳಿತು.
ಕುಡಿಯುತ್ತಿದ್ದ ಕಾಫಿ ಲೋಟವನ್ನು ಅಲ್ಲಿಯೇ ಇರಿಸಿ ಸೀದಾ ಅಡುಗೆ ಮನೆ ಹೊಕ್ಕಳು. ” ಅಮ್ಮಾ ಹೊಟ್ಟೆ ಹಸಿತಿದೆ ಮಧ್ಯಾಹ್ನದ ಅನ್ನ ಮಿಕ್ಕಿದ್ರೆ ಹಾಕಿ ಕೊಡು” ಅಂತ ಕೇಳಿದಳು. ”ತಣ್ಣಗಿರೊ ಅನ್ನ ಯಾಕೆ, ಇರು, ಬೇಗ ಎನಾದ್ರು ತಿಂಡಿ ಮಾಡ್ತಿನಿ” ಅಂದ ಅಮ್ಮಾನಿಗೆ” ಸಾಂಬಾರು ತುಂಬ ಚೆನ್ನಾಗಿತ್ತು, ಅನ್ನನೇ ಹಾಕಿ ಕೊಡಮ್ಮ” ಅಂತ ಒತ್ತಾಯಿಸಿ, ತಟ್ಟೆಗೆ ಅನ್ನ ಸಾಂಬಾರು ಹಾಕಿಸಿಕೊಂಡು ಹೊರನಡೆದಾಗ ”ಇಲ್ಲೆ ಊಟ ಮಾಡೇ, ಈ ಥಂಡಿಲ್ಯಾಕೆ ಹೊರಗೆ ಹೊಗ್ತಿಯಾ” ಅಮ್ಮನ ಪ್ರಶ್ನೆಗೆ ‘ಸ್ವಟರ್ ಹಾಕಿದ್ದಿನಲ್ಲ,ಅಂತ ಚಳಿ ಏನೂ ಇಲ್ಲ” ಉತ್ತರಿಸಿ ಹೊರ ಬಂದಳು.
ಸುತ್ತ ಮುತ್ತ ನೋಡಿ ಯಾರಿಗೂ ಕಾಣ್ತ ಇಲ್ಲ ಅಂತ ದೃಢ ಪಡಿಸಿಕೊಂಡು ಶಡ್ಡಿನ ಬಾಗಿಲು ತೆಗೆದು ”ಊಟ ತಂದಿದ್ದಿನಿ, ಮಧ್ಯಾಹ್ನ ತರೊಕೆ ಆಗಲಿಲ್ಲ, ಶೆಡ್ಡಿಗೆ ಬೀಗ ಹಾಕಿರಲ್ಲ, ಕತ್ತಲೆ ಆದ ಕೊಡಲೇ ನಿನ್ನ ಪಾಡಿಗೆ ನೀನು ಹೋಗಿ ಬಿಡು, ಬೇಗ ಊಟ ಮಾಡಿ ತಟ್ಟೆ ಕೊಡು” ಬಾಗಿಲಲ್ಲೆ ಹೇಳಿ ತಟ್ಟೆ ಒಳಗೆ ತಳ್ಳಿದಳು. ಅವನ ಊಟ ಮುಗಿಯುವ ತನಕ ಅಲ್ಲೆ ನಿಂತಿದ್ದು ಅವನು ತಟ್ಟೆ ಹಿಂತಿರುಗಿಸಿದ ಕೊಡಲೇ ‘ನಾನು ಹೇಳಿದ್ದು ನೆನಪಿರಲಿ, ನನಗೆ ಮತ್ತೆ ತೊಂದ್ರೆ ಕೊಡ ಬೇಡ” ಅಂತ ಹೇಳಿ ಮನೆಗೆ ಬಂದಳು.
ಇಡೀ ರಾತ್ರಿ ನಿದ್ರೆ ಬರಲಿಲ್ಲ. ಈ ಲೂಸ್ ಮಾದ ಹೋಗ್ತನೋ, ಇಲ್ಲವೊ, ಹೋದ್ರೆ ಎಲ್ಲಿಗೆ ಹೋಗ್ತನೆ, ಎಲ್ಲಿಗಾದ್ರು ಹೋಗಲಿ. ಅವನ ಉಸಾಬರಿಯೇ ನಂಗೆ ಬೇಡಾ, ತಕ್ಷಣವೇ ಜೀವನ್ ನೆನಪಾದ, ಪಾಪಿ ಎಲ್ಲಿದ್ದಾನೋ, ನನ್ನ ಈ ಸ್ಥಿತಿಗೆ ತಲುಪಿಸಿ ಹಾಯಾಗಿ ಮೆರಿತಿರ್ತನೆ. ಅಪ್ಪಯ್ಯ, ,ಅಮ್ಮಾ ,ಅಪ್ಪಯ್ಯನ ಕನಸುಗಳು,ಎಲ್ಲವನ್ನು ಮರೆತು ಎಲ್ಲರನ್ನು ತೊರೆದು ಅವನ ಹಿಂದೆ ಓಡಿಹೋದೆನಲ್ಲ, ಅವನ ಮಾತಿಗೆ ಅವನ ಡ್ರಸ್ಸಿಗೆ, ನಾಟಕಕ್ಕೆ ಮರುಳಾಗಿ ನನ್ನ ಸರ್ವಸ್ವವೇ ಅವನೆಂದು ಕೊಂಡಿದ್ದಕ್ಕೆ ತನಗೆ ಸರಿಯಾದ ಶಿಕ್ಷೆಯಾಗಿತ್ತು. ಒಂದೆರಡು ತಿಂಗಳಿಗೇ ಅವನ ಬಣ್ಣ ಬಯಲಾಗಿತ್ತು. ತಾಳಿ ಕಟ್ಟಿದ ಗಂಡನೇ , ಹಣಕ್ಕಾಗಿ ಹೆಂಡತಿಯನ್ನೇ ಗೆಳೆಯನಿಗೆ ಒಪ್ಪಿಸಲು ಮುಂದಾದಾಗ ಪ್ರೀತಿಯ ಅಮಲು ಇಳಿದಿತ್ತು. ಅಲ್ಲಿರಲಾರದೆ ವಾಪಸ್ಸು ಬಂದು ಬಿಟ್ಟಿದ್ದೆ. ಆವತ್ತಿಗೆ ಆ ಅಧ್ಯಾಯ ಮುಗಿದು ಹೋಗಿತ್ತು.
ನನ್ನ ಬದುಕನ್ನು ಕಂಡು ಆಡಿಕೊಂಡವರೆಷ್ಟೊ, ತಿರಸ್ಕಾರವಾಗಿ ನೋಡಿದವರೆಷ್ಟೊ, ತುಚ್ಛಿಕರಿಸಿದವರೆಷ್ಟೊ, ಎಲ್ಲವನ್ನು ನುಂಗಿ ವಿಷ ಕನ್ಯೆ ಆಗಿದ್ದೆನೆ. ಅಪ್ಪಯ್ಯ ಇವತ್ತಿಗೂ ನನ್ನ ಕ್ಷಮಿಸಿಲ್ಲ. ಭಂಡತನ ಮೈ ಹೊಕ್ಕಿ ಬಿಟ್ಟಿದೆ. ಎದೆ ಕಿಚ್ಚು ಹತ್ತಿ ಉರಿದರೂ, ಛಲ ನೆತ್ತರಿಗೆ ಹತ್ತಿದೆ. ಬದುಕಬೇಕು, ಬದುಕಬೇಕು ಅಷ್ಟೆ,
ಯಾವಾಗ ನಿದ್ದೆ ಹತ್ತಿತೊ, ಎಚ್ಚರವಾದಾಗ ಬೆಳಕಾಗಿತ್ತು. ಲೂಸ ಮಾದ ಹೋಗಿರ್ತಾನಲ್ವ, ಗಡಬಡಿಸಿ ಎದ್ದವಳೇ ಶೆಡ್ಡಿಗೆ ಓಡಿ ಬಂದಳು. ಬಾಗಿಲು ತೆಗೆದು ಒಳ ಬಂದರೆ ಲೂಸ ಮಾದ ಮೂಲೆಯಲ್ಲಿ ಗೋಡೆಗೊರಗಿ ಕುಳಿತು ನರಳುತ್ತಿದ್ದಾನೆ. ಗಾಭರಿಯಾಗಿ ಹತ್ತಿರ ಬಂದು ನೋಡಿದರೆ ಕಾಲಿನಲ್ಲಿ ರಕ್ತ ಸುರೀತಾ ಇದೆ. ತನ್ನ ಅಂಗಿಯನ್ನೆ ಬಿಚ್ಚಿ ರಕ್ತ ಹರಿಯದಂತೆ ಕಾಲಿಗೆ ಕಟ್ಟಿದ್ದಾನೆ. ಅಂಗಿಯೆಲ್ಲಾ ಕೆಂಪಗಾಗಿ ರಕ್ತ ನಿಂತೇ ಇಲ್ಲ.
”ಏನಾಯ್ತು, ಏನು ಮಾಡಿಕೊಂಡೆ, ಯಾಕೆ ಇಷ್ಟೊಂದು ರಕ್ತ ಸುರೀತಾ ಇದೆ, ರಾತ್ರಿನೇ ಹೊರಟು ಹೋಗು ಅಂತ ಹೇಳಿರಲಿಲ್ಲವೆ” ಕೋಪದಿಂದ ರೇಗಿದಳು. ಅವನಿನ್ನು ಇಲ್ಲೆ ಇದ್ದಾನೆ ಅನ್ನೊ ಕೋಪ, ಮತ್ತೆನು ಗ್ರಹಚಾರ ಕಾದಿದೆಯೋ ಅನ್ನೊ ಆತಂಕ, ಅವನಿಗೆ ಇಂತ ಪರಿಸ್ಥಿತಿಯಲ್ಲಿ ತಾನೇನು ಮಾಡಲಾರೆ ಅನ್ನೊ ಅಸಹಾಯಕತೆ, ತನಗಿಂತ ಪರಿಸ್ಥಿತಿ ತಂದಿಟ್ಟ ಅವನ
ಮೇಲೆ ಆಕ್ರೋಶ ಎಲ್ಲಾ ಒಟ್ಟಿಗೆ ಮೂಡಿ ಅವಳನ್ನು ದಂಡಿಸಿದವು.
‘ಸಾರಿ, ರಾತ್ರೆನೇ ಹೊರಟು ಬಿಡೋಣ ಅಂತ ಹೊರಗೆ ಬಂದೆ. ರಸ್ತೆವರೆಗೂ ಹೋದೆ, ಯಾವುದೋ ಕಾರು ಬರ್ತ ಇತ್ತು. ಡ್ರೈವರ್ ಕುಡಿದಿದ್ದ ಅಂತ ಕಾಣುತ್ತೆ. ನನ್ನ ಮೇಲೇ ನುಗ್ಗೊ ಹಾಗೆ ಬಂದು ಬಿಟ್ಟ. ತಪ್ಪಿಸಿ ಕೊಳ್ಳೊಕೆ ಹೋಗಿ ಗುಂಡಿಗೆ ಬಿದ್ದೆ,ಕಾಲಿಗೆ ತುಂಬಾ ಏಟಾಯ್ತು. ಈ ನೋವಲ್ಲಿ ನಡೆಯೊಕೆ ಆಗದೆ ಮತ್ತೆ ವಾಪಸ್ಸು ಬಂದು ಬಿಟ್ಟೆ” ಅಪರಾಧಿ ಭಾವದಿಂದ ನುಡಿದು, ನೋವಿನಿಂದ ನರಳಿದ.
ಕಾಲಿನ ಗಾಯದಿಂದ ರಕ್ತ ಸುರಿಯುತ್ತಲೇ ಇದೆ, ತಕ್ಷಣ ಚಿಕಿತ್ಸೆ ಕೊಡಿಸಲೇ ಬೇಕು, ಇಲ್ಲದಿದ್ದಲ್ಲಿ ಸತ್ತೇ ಹೋದಾನು. ಏನಪ್ಪ ಮಾಡಲಿ, ಅಪ್ಪಯ್ಯಂಗೆ ಗೊತ್ತಾದ್ರೆ ನನ್ನ ಸುಮ್ನೆ ಬಿಟ್ಟಾರಾ, ಯಾರಿಗೂ ಗೊತ್ತಾಗದ ಹಾಗೆ ಡಾಕ್ಟರ್‍ನ ಕರ್ಕೊಂಡು ಬಂದು ಇವನಿಗೆ ಚಿಕಿತ್ಸೆ ಕೊಡಿಸೊಕೆ ಸಾದ್ಯನಾ. ಇವನಿಲ್ಲೇ ಸತ್ತು ಹೋಗಿ ಬಿಟ್ಟರೆ, ನೆನಸಿಕೊಂಡೆ ನಡುಗಿದಳು.
ತಲೆ ಮೇಲೆ ಕೈಹೊತ್ತು ಕುಳಿತು ಚಿಂತಿಸುತ್ತಿದ್ದವಳನ್ನೆ ನೋಡುತ್ತ ” ಇವತ್ತೊಂದು ದಿನ ಇಲ್ಲಿರೊಕೆ ಬಿಡು, ನಾಳೆ ನೋವು ಸ್ವಲ್ಪ ಕಡಿಮೆ ಆಗಿರುತ್ತೆ. ಹೊರಟು ಬಿಡ್ತಿನಿ, ಯಾವ ಕಾರಣಕ್ಕೂ ಇಲ್ಲಿರೊಲ್ಲ” ಅಂಗಲಾಚಿ ಬೇಡಿದ.
ಅವನನ್ನೆ ನೋಡುತ್ತಿದ್ದವಳು ಏನನ್ನೊ ನಿರ್ಧಾರ ಮಾಡಿ ತಟ್ಟನೆ ಎದ್ದು ನಿಂತಳು. ”ನಾಳೆವರೆಗೂ ನಿನ್ನ ಈ ಸ್ಥಿತಿಲೀ ಇಲ್ಲೆ ಬಿಟ್ಟು ಬಿಟ್ಟರೆ, ಶಿವನ ಪಾದ ಸೇರ್ಕೊಂಡು ಬಿಟ್ಟಿರ್ತಿಯಾ. ಆಮೇಲೆ ನಿನ್ನ ಹೆಣನಾ ಏನು ಮಾಡಲಿ? ಏಳು ಮೇಲೆ’ ಅವನನ್ನು ಎಬ್ಬಿಸಿಲು ಸಿದ್ದವಾದಾಗ ಹೆದರಿದ ಅವನು ”ಏನು ಮಾಡ್ತ ಇದ್ದಿಯಾ, ನನ್ನ ಹೊರಗೆ ಆಕ್ತಿಯಾ, ನನ್ನ ಈ ಸ್ಥಿತಿ ನೋಡಿಯೂ ನಿಂಗೆ ಕನಿಕರ ಬರ್ತ ಇಲ್ವ” ತುಂಬಾ ಗಾಭರಿಗೊಂಡವನನ್ನು ಸಮಾಧಾನಿಸುತ್ತಾ “ಹೆದರ ಬೇಡಾ, ನಿನ್ನನ್ನು ಸೇಫಾದ ಜಾಗಕ್ಕೆ ತಲುಪಿಸುತ್ತೆನೆ. ಧೈರ್ಯವಾಗಿ ನನ್ನ ಜೊತೆ ಬಾ, ಮೊದಲು ನಿನ್ನ ಗಾಯ ವಾಸಿ ಆಗಲಿ” ಅವನನ್ನು ಹಿಡಿದು ಮೆಲ್ಲನೇ ನಡೆಸಿದಳು. ಏನಾದರೂ ಆಗಲಿ ನನ್ನ ಹಣೆಬರಹ ಎಂದು ಎಲ್ಲಾ ಭಾರವನ್ನು ಅವಳ ಮೇಲೆ ಹಾಕಿ ಅವಳ ಜೊತೆ ನಡೆಯಲು ಸಿದ್ದನಾದ.
ಮಗಳು ಯಾರನ್ನೋ ಹಿಡಿದುಕೊಂಡು ಬರುತ್ತಿರುವುದನ್ನು ನೋಡಿದ ಅವಳ ಅಪ್ಪಯ್ಯ ಓಡಿ ಹತ್ತಿರ ಬಂದರು” ಏನಾಯ್ತು, ಯಾರು ಇವರು, ಯಾಕೆ ಕಾಲಲ್ಲಿ ರಕ್ತ ಸುರಿತಾ ಇದೆ” ತಮ್ಮ ಕೋಪವನ್ನೂ ಮರೆತು ಮಗಳೊಂದಿಗೆ ಮಾತನಾಡಿ ಬಿಟ್ಟಿದ್ದರು, ಅಚ್ಚರಿಯಿಂದಲೇ ಅಪ್ಪಯ್ಯನ ನೋಡಿ ”ಅಪ್ಪಯ್ಯ ಇವ್ರು ಇಲ್ಲಿಗೆ ಬರುವಾಗ ಗುಂಡಿಗೆ ಬಿದ್ದು ಗಾಯ ಮಾಡಿ ಕೊಂಡಿದ್ದಾರೆ, ಪಾಪ ರಾತ್ರೆಯೆಲ್ಲಾ ಅಲ್ಲೆ ಬಿದ್ದಿದ್ದರು, ಈಗ ನಾನು ನೋಡಿ ಕರ್ಕೊಂಡು ಬರ್ತ ಇದ್ದಿನಿ. ಬೇಗ ಆಸ್ಪತ್ರೆಗೆ ಕರ್ಕೊಂಡು ಹೋಗಬೇಕು” ಅಂದಳು.
” ಅಯ್ಯೊಯ್ಯೋ , ಆಸ್ಪತ್ರೆಗೆಲ್ಲಾ ಬೇಡಾ , ಇಲ್ಲೆ ಏನಾದ್ರು ಔಷದಿ ಮಾಡಿ, ಅಲ್ಲಿವರೆಗೂ ಹೋಗೊ ಶಕ್ತಿ ನಂಗಿಲ್ಲ”ನರಳುತ್ತ ಹೇಳಿದಾಗ ಹತ್ತಿರಕ್ಕೆ ಬಂದು ನೋಡಿದ ಅಪ್ಪಯ್ಯ ”ಓಹೋ ದೊಡ್ಡ ಗಾಯನೇ ಆಗಿದೆ. ಇರಿ ಈಗ ಬಂದು ಬಿಟ್ಟೆ”ಅಂತ ತೋಟದೊಳಗೆ ಸರ ಸರ ನಡೆದರು. ”ಇನ್ನು ನಿಶ್ಚಿಂತೆಯಾಗಿರು, ಅಪ್ಪಯ್ಯ ಒಳ್ಳೆ ನಾಟಿ ವೈದ್ಯ ಮಾಡ್ತರೆ. ಆದರೆ ಇಷ್ಟು ದೊಡ್ಡ ಗಾಯಕ್ಕೆ ಯಾವತ್ತೂ ಔಷಧಿ ಮಾಡಿಲ್ಲ, ದೇವರ ಮೇಲೆ ಭಾರ ಹಾಕು”ನಿಧಾನವಾಗಿ ನಡೆಸಿಕೊಂಡು ಮನೆಯೊಳಗೆ ಬಂದು ದೀವಾನಕಾಟಿನ ಮೇಲೆ ಅವನನ್ನ ಮಲಗಿಸುವಷ್ಟರಲ್ಲಿ ಅಪ್ಪಯ್ಯ ಯಾವುದೊ ಸೊಪ್ಪು ತಂದೇ ಬಿಟ್ಟರು. ಅಮ್ಮನನ್ನು ಕರೆದು ತಾವೇ ಎಲ್ಲವನ್ನು ಹೇಳುತ್ತ ಸೊಪ್ಪನ್ನು ಅರೆದು ತರಲು ತಿಳಿಸಿದಾಗ ಶಮಂತಳಿಗೆ ಅವನ ಬಗ್ಗೆ ಹೇಳುವ, ಅವಳ ಅನುಮಾನದ ನೋಟವನ್ನು ಎದುರಿಸುವ ದೊಡ್ಡ ಹೊರೆ ತಪ್ಪಿದಂತಾಗಿ ಸಮಾಧಾನದ ಉಸಿರು ಬಿಟ್ಟಳು.
ಗಾಯಕ್ಕೆ ಪಟ್ಟು ಹಾಕುವುದರೊಳಗಾಗಿ, ಅಮ್ಮ ಬಿಸಿಬಿಸಿ ಕಷಾಯ ಮಾಡಿ ತಂದು” ಬೇಗ ಕುಡಿಯಪ್ಪ, ನೋವೆಲ್ಲಾ ಕಡಿಮೆಯಾಗಿ ಬಿಡುತ್ತದೆ” ಎಂದು ಕಾಳಜಿ ತೋರಿದಾಗ, ಶಮಂತಳಿಗೆ ಆತಂಕ ಕಡಿಮೆಯಾಯಿತು.
” ಅಲ್ವೆ ಶಮಂತ,ಇವರು ಬರೊದು ನಿಂಗೆ ಮುಂಚೇನೆ ಗೊತ್ತಿತ್ತೆನೇ?” ಅಮ್ಮಾ ಕೇಳಿದ ಪ್ರಶ್ನೆಗೆ ತಬ್ಬಿಬ್ಬಾಗಿ ತಕ್ಷಣಕ್ಕೆ ಉತ್ತರ ಹೊಳೆಯದೆ”ಯಾಕಮ್ಮ ಹಾಗೆ ಕೇಳ್ತಿ” ಅಂತ ಕೇಳಿದಳು.
”ಮತ್ತೆ ಬೆಳಗ್ಗೆನೇ ಹೊರಗೆ ಹೋಗೆದ್ದೆಯಲ್ಲೆ” ಅವಳಲ್ಲಿ ಉತ್ತರವಿಲ್ಲದಾಗಿತ್ತು.
ಅವಳ ಮೌನ ಕಂಡ ಅಪ್ಪಯ್ಯ ”ಗೊತ್ತಿದ್ರು ಹೇಗೆ ಹೇಳ್ತಳೆ. ನಾವು ಸಿಟ್ಟು ಮಾಡಿಕೊಳ್ತಿವಿ ಅಂತ ನಮಗೆ ಹೇಳಿಲ್ಲ, ಹೋಗ್ಲಿ ಬಿಡು, ಮನೆಗೆ ಕರ್ಕೊಂಡು ಬಂದಳಲ್ಲ ಹಿಂಗಾದ್ರು ನಾವು ಅವನನ್ನ ನೋಡೊ ಹಾಗಾಯ್ತಲ್ಲ,” ಅಂದಾಗ ಅರ್ಥವಾಗದೆ ಅಪ್ಪಯ್ಯನನ್ನೆ ಮಿಕಿಮಿಕಿ ನೋಡಿದಳು.
”ನೋಡು ಹೇಗೆ ಮಳ್ಳಿ ಹಾಗೆ ನೋಡ್ತಳೆ, ಕಳ್ಳಿ, ಗಂಡ ಅಂತಾನೂ ಪರಿಚಯ ಮಾಡಿ ಕೊಡದೆ ಹೇಗಿದ್ದಾಳೆ ನೋಡು” ಅಂದಾಗ ಬೆಚ್ಚಿದಳು.
”ಶಮಂತ, ನೋಡು ನಿನಗೆ ನಿನ್ನ ಗಂಡನ ಮೇಲೆ ಏನೇ ಕೋಪ ಇದ್ದರೂ ಈಗ ಅದನ್ನ ತೋರಿಸಬೇಡ, ನೋಡು ಅಳಿಯಂದ್ರು ಹೇಗೆ ಪೆಚ್ಚಾಗಿದ್ದಾರೆ, ಬಂದಾಗ್ಲಿಂದಲೂ ಒಳ್ಳೆ ಮಾತಾಡಿಲ್ಲ ನೀನು, ಅವರಿಗೆ ಏಟಾಗಿದೆ ಅಂತ ಮನೆಗೆ ಕರ್ಕೊಂಡು ಬಂದಿದ್ದಿಯಾ ಅಂತ ನಮಗೆ ಗೊತ್ತು, ಇಲ್ಲದಿದ್ದರೆ ಅವರನ್ನ ಹಾಗೆ ಬೈದು ವಾಪಸ್ಸು ಕಳಿಸಿ ಬಿಡುತ್ತಿದ್ದೆ. ಹೇಗೊ ಸೋತು ನಿನ್ನ ಹುಡುಕಿಕೊಂಡು ಬಂದಿದ್ದಾರೆ, ನಿನ್ನ ಕೆಟ್ಟ ಹಟದಿಂದ ಅವರಿಗೆ ಬೇಸರ ಮಾಡಬೇಡ’ ಅಂತ ಮಗಳಿಗೆ ಹೇಳಿ, ಅವರ ಮಾತುಗಳನ್ನು ಕೇಳಿ ಶಾಕ್ ಆಗಿದ್ದ ಲೂಸ್ ಮಾದನತ್ತ ತಿರುಗಿ”ನೋಡಪ್ಪ, ನಿನ್ನನ್ನು ಬಿಟ್ಟು ದೂರ ಬಂದ ಮೇಲೆ ಶಮಂತ ನೆಮ್ಮದಿಯಾಗಿಯೇ ಇಲ್ಲ, ತನ್ನ ದುಃಖನೆಲ್ಲ ತೋಟದ ಕೆಲ್ಸ ಮಾಡ್ತ ಮರಿತಾ ಇದ್ದಳು. ಹೇಗೂ ನೀವು ಬಂದಿದ್ದಿರಾ, ಇನ್ನಾದರೂ ಇಬ್ಬರೂ ಚೆನ್ನಾಗಿರ ಬೇಕು” ಅಪ್ಪಯ್ಯ ಹೇಳುತ್ತಿದ್ದುದನ್ನು ಕೇಳುತ್ತ ದಿಗ್ಭ್ರಾಂತಿಯಿಂದ ಕುಳಿತು ಬಿಟ್ಟಳು. ಇರುವ ವಿಚಾರವನ್ನೂ ಹೇಳಲಾರದೆ, ಅಪ್ಪಯ್ಯನ ಮಾತುಗಳನ್ನು ಒಪ್ಪಿಕೊಳ್ಳಲೂ ಆಗದೆ ತಳಮಳಿಸುತ್ತ ಪೆಚ್ಚು ಪೆಚ್ಚಾಗಿ ಅವನನ್ನೆ ನೋಡಿದಳು. ಓಹೋ ಅಪ್ಪಯ್ಯ ಅದಕ್ಕೆ ಅಷ್ಟೋಂದು ಕಾಳಜಿ ತೋರುತ್ತಿರುವುದು, ಇವನನ್ನೆ ಅಳಿಯ ಅಂತ ತಿಳ್ಕೊಂಡು ಬಿಟ್ಟಿದ್ದಾರೆ. ಅಳಿಯ ಮಗಳನ್ನು ಹುಡುಕಿಕೊಂಡು ಮನೆಗೇ ಬಂದು ಬಿಟ್ಟಿದ್ದಾನೆ ಅಂತ ಅಪ್ಪಯ್ಯಂಗೆ ತುಂಬಾ ಖುಷಿಯಾಗಿ ಬಿಟ್ಟಿದೆ. ಅಮ್ಮನೂ ಸಡಗರದಿಂದ ಅವನಿಗೆ ಉಪಚಾರ ಮಾಡ್ತ ಇದ್ದಾಳೆ. ನಾನು ನಿಜ ಹೇಳಿ ಬಿಟ್ಟರೆ ಇವರಿಬ್ಬರ ಸಂತೋಷನಾ ನಾನೇ ಹಾಳು ಮಾಡಿದಂತಾಗುತ್ತದೆ, ಆಮೇಲೆ ಇನನು ಯಾರು ಅಂತ ಹೇಳಬೇಕಾಗುತ್ತದೆ, ಇವನು ಯಾರು ಅಂತ ನಂಗೆ ಗೊತ್ತಿದ್ರೆ ತಾನೆ ಹೇಳೊದು. ಸದ್ಯಕ್ಕೆ ಸತ್ಯ ಹೇಳೊದು ಬೇಡಾ ಅಂತ ನಿರ್ಧರಿಸಿ ಕೊಂಡಳು.
ಅಪ್ಪಯ್ಯ ಹಾಕಿದ ಪಟ್ಟು ಬೇಗ ಕೆಲಸ ಮಾಡಿತ್ತು. ಲೂಸ್ ಮಾದÀನ ಗಾಯ ಮಾಯುತ್ತಿತ್ತು. ಅಪ್ಪ ಅಮ್ಮ ಪೈಪೋಟಿ ಮೇಲೆ ಲೂಸ್ ಮಾದನನ್ನು ಉಪಚರಿಸುತ್ತ ಸಂಭ್ರಮಿಸುತ್ತಿರುವುದನ್ನು ಕಂಡು ಅಯ್ಯೊ ಎಂದು ಕೊಂಡಳು. ಪಾಪ ಅಪ್ಪಯ್ಯ ಮತ್ತೆ ನಿರಾಶೆ ಕೂಪದಲ್ಲಿ ಬೀಳ ಬೇಕು. ಗಾಯ ವಾಸಿ ಆದಕೂಡಲೇ ಅವನು ಹೊರಟು ಬಿಡುತ್ತಾನೆ. ಆಗ ಏನು ಹೇಳುವುದು ಚಿಂತಿತಳಾದಳು.
ಲೂಸ್ ಮಾದ ಬಂದು ಎಂಟು ದಿನ ಕಳೀತು. ಅವನು ಯಾರು, ಎತ್ತ ಅನ್ನೊದನ್ನು ಕೇಳಲು ಸಮಯಕ್ಕಾಗಿ ಕಾಯುತ್ತಿದ್ದಳು. ಅವತ್ತು ಅಪರೂಪಕ್ಕೆ ಅಮ್ಮ ಅಪ್ಪಯ್ಯ ಮದುವೆಗೆಂದು ಹೊರಟಾಗ ಶಮಂತಳಿಗೆ ಖುಷಿಯಾಗಿತ್ತು. ಹಾಗೆ ಅವರಿಬ್ಬರು ಹೊರಗೆ ಹೋಗಿ ಅದೇಷ್ಟು ದಿನಗಳಾಗಿತ್ತೊ, ಯೌವನ ಮರುಕಳಿಸಿತ್ತು ಇಬ್ಬರಿಗೂ. ‘ಹುಶಾರಾಗಿ ನೋಡ್ಕೊ’ ಅಂತ ಸಾರಿ ಸಾರಿ ಹೇಳುತ್ತ ಮನೆ ಬಿಟ್ಟಿದ್ದರು.
ಅವರನ್ನೆ ಅಭಿಮಾನದಿಂದ ನೋಡುತ್ತ ನಿಂತವನಿಗೆ ಶಮಂತ ” ನೋಡು, ಈ ಪ್ರೀತಿ, ವಿಶ್ವಾಸ ಶಾಶ್ವತವಲ್ಲ, ಸತ್ಯ ಗೊತ್ತಾಗಿ ಬಿಟ್ಟರೆ ಒಂದು ನಿಮಿಷ ಕೂಡ ಇಲ್ಲಿರೋಕೆ ಬಿಡಲ್ಲ, ಯಾವಾಗ ಹೋಗ್ತಿಯಾ? ” ಕೇಳಿದಳು.
” ಗಾಯ ವಾಸಿಯಾಗ್ತಾಯಿದೆ, ಹೊರಟು ಬಿಡ್ತಿನಿ, ಆದ್ರೆ ನಿಮ್ಮ ಅಪ್ಪ ಅಮ್ಮ ತೋರುಸ್ತಿರೊ ಪ್ರೀತಿಗೆ ಹೇಗೆ ಕೃತಜ್ಞತೆ ತೋರಿಸಬೇಕೊ ಅಂತ ಗೊತ್ತಾಗುತ್ತಿಲ್ಲ.’ ಭಾರವಾದ ದನಿಯಲ್ಲಿ ಹೇಳಿದನು.
‘ನೀನು ಈ ಮನೆ ಅಳಿಯ ಅಂತ ಅಂದು ಕೊಂಡು ಅವರು ಪ್ರೀತಿ ತೋರಿಸ್ತ ಇರೊದು, ಅವರ ದುರದೃಷ್ಟ ನೋಡು, ಈವರೆಗೆ ಅಳಿಯನನ್ನೆ ನೋಡಿಲ್ಲ. ಮೆಚ್ಚಿ ಅವನ ಜೊತೆ ಓಡಿಹೋದೆ, ಆರೇ ತಿಂಗಳಿಗೆ ಅವನ ಸಹವಾಸ ಸಾಕಾಗಿ ಬಿಟ್ಟು ಬಂದು ಬಿಟ್ಟೆ, ತಪ್ಪು ಮಾಡಿದ್ದಿನಿ. ಅಪ್ಪಯ್ಯನಿಗೆ ಕೋಪ ನನ್ನ ಮೇಲೆ, ನೀನು ಬಂದ ಮೇಲೆ ಕೋಪ ಕಡಿಮೆ ಆಗಿದೆ. ಆದರೆ ಸತ್ಯ ಒಂದು ದಿನ ಗೊತ್ತಾಗಲೇ ಬೇಕಲ್ಲ. ಅದಿರ್ಲಿ ನಿನ್ನ ಕತೆ ಏನು?’ ಪ್ರಶ್ನಿಸಿದಳು.
ಶಮಂತಳ ಪ್ರಶ್ನೆಗೆ ಉತ್ತರಿಸಲು ತಡವರಿಸಿದ. ಹೇಗೆ ಹೇಳುವುದೆಂದು ಚಡಪಡಿಸಿದ. ಆದರೆ ಹೇಳದೆ ಇರದಾದ. ತನ್ನ ಬಗ್ಗೆ ಹೇಳಲೇ ಬೇಕಾದ ಸಂದರ್ಭ ಬಂದೇ ಬರುತ್ತೆ ಅಂತ ಅವನಿಗೆ ಗೊತ್ತಿತ್ತು.ಅದಕ್ಕೆ ಸಿದ್ದವಾಗಿಯೂ ಇದ್ದ. ತಾನು ಕೆಳವರ್ಗದ, ಅತಿ ಬಡತನದ ಕುಟಂಬದಲ್ಲಿ ಹುಟ್ಟಿದ್ದು, ಹೆತ್ತವರ ಪರಿಶ್ರಮದಿಂದ ಓದಿ ವಿದ್ಯಾವಂತನಾಗಿ, ಕಾಲೇಜೊಂದರಲ್ಲಿ ಉಪನ್ಯಾಸಕನಾಗಿ ಕೆಲಸಕ್ಕೆ ಸೇರಿದ್ದು, ತನ್ನಂತಹ ಕೆಳವರ್ಗದ ಜನರಿಗೆ ಉಳ್ಳವರಿಂದ ಆಗುತ್ತಿದ್ದ ಕಿರುಕುಳ, ಶೋಷಣೆ, ದೌರ್ಜನ್ಯ ಕಂಡು ಸಿಡಿದೆದ್ದು, ನೊಂದವರ ಪರ ಹೋರಾಟಕ್ಕಿಳಿದಿದ್ದವರ ಗೆಳೆತನದಿಂದಾಗಿ ಅವರೊಂದಿಗೆ ಸೇರಿ ತಾನೂ ಕೈ ಜೋಡಿಸಿ ರಕ್ತಕ್ರಾಂತಿಗಿಳಿದಿದ್ದುದು, ಆ ಹೋರಾಟದಿಂದಾಗಿ ಮನೆ, ಮಠ, ಕೆಲಸ ತೊರೆದು ಸಂಪೂರ್ಣ ಲೀನವಾಗಿದ್ದು, ಅಂತಹ ಹೋರಾಟವೊಂದರಲ್ಲಿ ತನÀ್ನವರೆಲ್ಲಾ ಪೋಲೀಸರಿಗೆ ಸಿಕ್ಕಿಬಿದ್ದು ಸೆರೆಯಾದಾಗ, ತಾನು ತಪ್ಪಿಸಿಕೊಂಡು ಪಟ್ಟಣಕ್ಕೆ ಬಂದಿದ್ದು, ಅಲ್ಲಿ ಪೋಲಿಸರನ್ನು ಕಂಡು ಮರೆಯಾಗಲು ಆಟೋ ಹತ್ತಿ ಇಲ್ಲಿವರೆಗೆ ಬಂದಿದ್ದನ್ನು ವಿವರವಾಗಿ ಬಿಚ್ಚಿಟ್ಟ.
” ಅಂದ್ರೆ ನೀನು ಪೋಲೀಸಿನವರಿಗೆ ಬೇಕಾದವನು, ನಿನ್ನ ಕಡೆಯವರೆಲ್ಲಾ ಆರೆಷ್ಟಾಗಿದ್ದಾರಲ್ಲ, ಈಗ ನೀನು ಎಲ್ಲಿಗೆ ಹೋಗ್ತಿಯ?’ ಇಂತಹದೊಂದು ಹಿನ್ನೆಲೆ ಇರಬಹುದು ಅಂತ ಊಹಿಸಿದ್ದವಳಿಗೆ ಅವನ ಕತೆ ಕೇಳಿ ಆಶ್ಚರ್ಯವಾಗಲಿಲ್ಲ.
”ಎಲ್ಲಿಗಾದ್ರೂ ಹೋಗಲೇ ಬೇಕು, ಮನೆಗಂತೂ ಹೋಗೊ ಆಗಿಲ್ಲ, ಅವರ ಪಾಲಿಗೆ ನಾನು ಸತ್ತು ಹೋಗಿದ್ದೆನೆ, ನನ್ನ ಜೊತೆಯವರೂ ಇಲ್ಲ. ಆದ್ರೆ ಹೋರಾಟ ಬಿಡೋ ಹಾಗಿಲ್ಲ” ವಿಶಾದವಿತ್ತು ದನಿಯಲ್ಲಿ.
”ಏನು, ಹೋರಾಟ ಮಾಡ್ತಿಯಾ, ಬೇಕಾ ಈ ಹೋರಾಟ?’
”ಬೇಕು, ಹೋರಾಟ ಮಾಡಲೇ ಬೇಕು. ಶ್ರೀಮಂತರಿಗೂ, ಬಡವರಿಗೂ ಅಂತರ ಎಷ್ಟೊಂದು ಇದೆ. ಅಂತಹ ಅಂತರವಿರಬಾರದು, ಸಂಪತ್ತು ಎಲ್ಲರಿಗೂ ಸಮನಾಗಿ ಹಂಚಿಕೆಯಾಗ ಬೇಕು. ಅದಕ್ಕೆ ಅದನ್ನ ಶ್ರೀಮಂತರಿಂದ ಕಿತ್ತು ಕೊಂಡು ಬಡವರಿಗೆ ಕೊಡಬೇಕು.” ಆವೇಶದಿಂದ ನುಡಿದ.
”ಅಂದ್ರೆ ದರೋಡೆ ಮಾಡ್ತಿಯಾ. ಎಷ್ಟು ಜನರಿಂದ ಕಿತ್ತು ಬಡವರಿಗೆ ಕೊಡೊಕಾಗುತ್ತೆ, ಎಲ್ಲೊ ಕೆಲವು ಜನ ಹೋರಾಟ ಮಾಡಿದ್ರೆ, ನ್ಯಾಯ ಸಿಕ್ಕಿ ಬಿಡುತ್ತಾ. ಹೋಗ್ಲಿ ಇಷ್ಟು ದಿನ ಹೋರಾಟ ಮಾಡಿದ್ರಲ್ಲ, ನೀವು ಗೆದ್ದಿದ್ದಿರಾ. ಇಷ್ಟೋಂದು ಓದ್ಕೊಂಡು, ಒಳ್ಳೆ ಸಮಾಜವನ್ನು ಸೃಷ್ಟಿಸೊ ಅವಕಾಶನಾ ಬಿಟ್ಟು ಕಾನೂನಿನಾ ವಿರುದ್ದ ಹೋಗೋ ಹಣೆಬರಹ ನಿಂಗ್ಯಾಕೆ. ಈ ಅಜ್ಞಾತವಾಸ ಬೇಕಾ, ನಿಮ್ಮ ಅಪ್ಪ ಅಮ್ಮ ನೀನು ಹೀಗಾಗಲಿ ಅಂತನೇ ಜೀವ ತೇಯ್ದು ಓದಿಸಿದ್ರಾ. ನೀನು ದರೋಡೆ ಮಾಡಿ ಎಲ್ಲರಿಗೂ ಹಂಚಲಿ ಅಂತ ಬಯಸಿದ್ರಾ. ನೀನು ಹೋಗ್ತ ಇರೋ ದಾರಿ ಸರಿನಾ” ದೀರ್ಘವಾಗಿ, ಆದರೆ ತೂಕವಾಗಿ ಆಡಿದಳು.
”ಸರಿ ಇಲ್ಲದೆ ಇರಬಹುದು. ಆದರೆ ನೊಂದವರ ನೋವು, ನೋಯದವರಿಗೆ ಹೇಗೆ ಅರ್ಥವಾಗ ಬೇಕು. ಉಳ್ಳವರ ಅಟ್ಟಹಾಸದಿಂದಾಗಿ ಅದೆಷ್ಟು ಜನರ ಬದುಕು ನಾಶವಾಗಿದೆಯೊ, ಅವರ ದರ್ಪ ಅದೆಷ್ಟು ಜನರಿಗೆ ಶಾಪವಾಗಿದೆಯೊ, ನೋಡ್ತ, ನೋಡ್ತ ಸುಮ್ನೆ ಕೂರೊ ಮನಸ್ಥಿತಿ ನನ್ನದಲ್ಲ” ತನ್ನನ್ನು ಸಮರ್ಥಿಸಿಕೊಂಡ.
” ನೋಡ್ತ ಸುಮ್ನೆ ಕೂರೊದು ಯಾಕೆ, ನಿನ್ನ ವಿದ್ಯಾರ್ಥಿಗಳಲ್ಲಿ ಆ ಭಾವನೆ ತುಂಬಿ, ಅನ್ಯಯವಾಗದಂತೆ ಬೆಳಸಬಹುದಿತ್ತು. ಅವರಲ್ಲಿ ಒಳ್ಳೆತನ ಬೆಳಸಿ ಒಳ್ಳೆ ಪ್ರಜೆಗಳನ್ನು ಸೃಷ್ಟಿಸೊ ಬದುಕನ್ನ ಬಿಟ್ಟು. ಪೋಲೀಸರಿಗೆ ಎದೆಯೊಡ್ಡುವ ಬದುಕು ಬೇಕೇ,ನಿನ್ನ ಈ ಸ್ಥಿತಿಲೀ ನೋಡೀ ನಿನ್ನ ಹೆತ್ತವರ ಹೃದಯ ಅದೆಷ್ಟು ನರಳುತ್ತ ಇದೆಯೋ, ನೀನು ನಿನ್ನ ಮನೆಯವರಿಗೆ ಅನ್ಯಾಯ ಮಾಡಿ, ಬೇರೆಯವರಿಗೆ ನ್ಯಾಯ ಕೊಡಿಸುತ್ತಿಯ” ಹಂಗಿಸಿಳು.
”ನೋಡು ನಾನು ಯಾಕೆ ಹೀಗೆ ಹೇಳ್ತ ಇದ್ದಿನಿ ಗೊತ್ತಾ, ನಾನೂ ಕೂಡ ನನ್ನ ಹೆತ್ತವರ ಒಡಲಿಗೆ ಕಿಚ್ಚು ಹತ್ತಿಸಿದವಳು. ಅವರ ಆಸೆ ಕನಸುಗಳನ್ನು ಮಣ್ಣುಪಾಲು ಮಾಡಿದವಳು. ನಾನೂ ನೊಂದು , ಅವರನ್ನೂ ನೋಯಿಸುತ್ತಿರುವವಳು. ಅವರ ದುಃಖ ಏನು ಅಂತ ಈಗ ನನಗೆ ಅರ್ಥವಾಗಿದೆ, ಹೋದ ಅವರ ವiರ್ಯಾದೆ, ಗೌರವವನ್ನು ವಾಪಸ್ಸು ತಂದು ಕೊಡಲು ನನ್ನಿಂದ ಅಸಾದ್ಯ.. ಆ ನೋವು ನಿರಂತರವಾಗಿ ನನ್ನ ಕಾಡುತ್ತಲೇ ಇರುತ್ತದೆ, ಅಂತಹ ನೋವನ್ನ ನೀನಾಗಿಯೇ ತಂದು ಕೊಳ್ಳುತ್ತಾ ಇದ್ದಿಯಾ,”ನೋವು ತುಂಬಿದ ದನಿಯಲ್ಲಿ ಹೇಳಿದಳು.
” ನಿಂಗೆ ಅರ್ಥವಾಗಲ್ಲ, ಈಗ ನಾನು ಬದಲಾಗೊದು ಸಾಧ್ಯಾನಾ, ಬದಲಾದ್ರೂ ಪೋಲೀಸಿನವರು ನನ್ನ ಬಿಟ್ಟಾರೆಯೇ, ಮುಂದೆ ಬಂದು ಬಿಟ್ಟಿದ್ದೆನೆ. ಹಿಂತಿರುಗುವ ಮಾತೇ ಇಲ್ಲ, ನಾನೇ ಆರಿಸಿ ಕೊಂಡ ಬದುಕಿದು. ಅದೇ ಬದುಕಿನಲ್ಲಿಯೇ ನನಗೆ ನೆಮ್ಮದಿ , ಸಂತೋಷ. ಆಕಸ್ಮಿಕವಾಗಿ ನಾನು ಇಲ್ಲಿಗೆ ಬರೊ ಹಾಗಾಯ್ತು. ನನ್ನ ಜೀವ ಉಳಿಸಿದ್ದಕ್ಕೆ ಜನ್ಮ ಪೂರ್ತಿ ನಿಂಗೆ ಋಣಿಯಾಗಿರುತ್ತೆನೆ,ಮತ್ತೆ ನಿಂಗೆ ತೊಂದರೆ ಕೊಡಲ್ಲ. ನಾಳೆನೇ ಹೊರಟು ಹೋಗ್ತಿನಿ” ಭಾವುಕನಾದ.
“ಅಪ್ಪ ನೀನು ಬಂದ ಮೇಲೆ ಖುಷಿಯಾಗಿದ್ದರು. ನನ್ನ ಮೇಲಿನ ಕೋಪ ಕಡಿಮೆಯಾಗಿತ್ತು, ನಾಳೆ ನೀನು ಹೊರಟುಹೋದ್ರೆ ಅವರು ಹೇಗಿರ್ತರೋ, ಮಗಳ ಬದುಕು ನೆಟ್ಟಾಗಾಯ್ತು ಅಂತ ನೆಮ್ಮದಿಯಾಗಿತ್ತು. ಹೋಗುವಾಗ ಮತ್ತೆ ಬರ್ತಿನಿ ಅಂತ ಹೇಳಿ ಹೋಗು, ಆ ಭರವಸೆಯ ಬೆಳಕ ಹಿಡಿದು ತಮ್ಮ ಕೊನೆ ದಿನಗಳನ್ನು ಕಳೆದು ಬಿಡಲಿ” ವಿಶಾದ ತುಂಬಿ ಹೇಳಿದಳು.
‘ ಖಂಡಿತ ಮತ್ತೆ ಬರ್ತಿನಿ, ಈ ಮನೆಯ ಋಣ ನನ್ನ ಮತ್ತೆ ಬರೋ ಹಾಗೆ ಮಾಡುತ್ತೊ ಏನೊ, ಆ ಬದುಕು ಸಾಕೆನಿಸಿದಾಗ ಇಲ್ಲಿಗೆ ಓಡೋಡಿ ಬಂದು ಬಿಡ್ತಿನಿ” ಅವನ ಮಾತುಗಳಲ್ಲಿ ಬದಲಾಗುವ ಸೂಚನೆ ಕಂಡಂತಾಗಿ ,ಈ ಮನೆಯ ಸೆಳೆತ ಅವನನ್ನು ಆ ಬದುಕಿಗೆ ಬೇಗ ವಿದಾಯ ಹೇಳಿ ಇಲ್ಲಿ ಬರುವಂತೆ ಮಾಡಲಿ ಎಂದು ಮನಸ್ಸು ಬಯಸಿತು.
- ಶೈಲಜಾ ಹಾಸನ
