‘ನೀಲಕಂಠ್’ ಮಹಾದೇವ್ ೧೩೩೦ ಮೀಟರುಗಳ ಎತ್ತರದಲ್ಲಿರುವ ‘ಮಣಿಕುಂಟ್’ ಬೆಟ್ಟದ ಮೇಲಿದ್ದು, ಹೃಷಿಕೇಶದಿಂದ ಸುಮರು೩೨ ಕಿಮೀ ದೂರದಲ್ಲಿರುವ ಒಂದು ಸಣ್ಣ ಹಳ್ಳಿ. ಲೇಖಕಿ ಗಿರಿಜಾ ಶಾಸ್ತ್ರೀ ಅವರು ತಮ್ಮ ಪ್ರವಾಸ ಕಥನವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ ತಪ್ಪದೆ ಮುಂದೆ ಓದಿ…
ಆದಿ ದೇವ ಮಹಾದೇವ ಹೇ ದಯಾನಿಧೇ!
“ಸಮುದ್ರಮಥನದ ಸಮಯದಲ್ಲಿ ಶಿವ ವಿಷ ಕುಡಿದಿದ್ದನಲ್ಲ?ಅದೇ ಜಾಗ ಇದು! ಅದಕ್ಕೇ ಈ ಊರಿನ ಹೆಸರು ‘ನೀಲಕಂಠ್ ‘ ಎಂದು. ಇಲ್ಲಿರುವ ದೇವರು ‘ನೀಲಕಂಠ್ ಮಹಾದೇವ’ ಸ್ವಯಂಭೂ ಕಿಸೀನೇ ಬನಾಯ ನಹೀ”
ನಮ್ಮ ಕಾರಿನ ಚಾಲಕ ಅತಿ ಉತ್ಸಾಹದಿಂದ ಹೇಳುತ್ತಿದ್ದ.
” ಶಿವ ವಿಷ ಕುಡಿದದ್ದು ಸಮುದ್ರ ಮಥನದ ಸಂದರ್ಭದಲ್ಲಿ. ಇಲ್ಲಿ ಸಮುದ್ರ ಎಲ್ಲಿದೆ?”
“ಮೇಡಂ ಶಿವನಿಗೆ ನಮ್ಮ ಹಾಗೆ ಏರೋಪ್ಲೇನ್ ಬೇಕಾ? ಅವನು ಮನಸ್ಸು ಮಾಡಿದರೆ ಎಲ್ಲಿಗಾದರೂ (ಮನೋವೇಗದಲ್ಲಿ) ಹೋಗಬಹುದಲ್ಲ?” ಅವನನ್ನು ಹುಡುಕುತ್ತಾ ಬಂದ ಪಾರ್ವತಿ ಅವನನ್ನು ಕೈಲಾಸಕ್ಕೆ ಕರೆದೊಯ್ಯುವಾಗ ಇಲ್ಲಿಗೆ ಬಂದ ನೆನಪಾಗಿ ಶಿವ ತನ್ನ ರೂಪವನ್ನು ಬಿಟ್ಟು ಹೋದ”
“ಇಂತಹ ಕಾಡಿನ ಮಧ್ಯೆ ಅದನ್ನು ಕಂಡುಹಿಡಿದವರಾರು?”
“ಸಾಬ್ ಜೀ, ಹಿಂದೆ ಇಲ್ಲೆಲ್ಲಾ ಋಷಿಮುನಿಗಳು ಇದ್ದರಲ್ಲ. ಅವರುಗಳು ಕಂಡುಕೊಂಡು ಹೇಳಿರಬಹುದು”
“ಶಿವ ಬಂದಿರುವ ಸಾಧ್ಯತೆ ಇದೆ , ಬಿಡು! ವಿಷ ಕುಡಿದನಂತರ, ಬೇಸತ್ತು ಗಂಗೆಯನ್ನು ಬಯಸಿ ಬಂದಿರಬಹುದು. ಅವನನ್ನು ಹುಡುಕಿಕೊಂಡು ಬಂದ ಪಾರ್ವತಿ ಇಪ್ಪತ್ತು ವರ್ಷಗಳ ಕಾಲ ಇಲ್ಲೇ ತಪಸ್ಸು ಮಾಡಿದಳು ಎಂದು ಹೇಳ್ತಿದಾನಲ್ಲ” ಎಂದು ಪಕ್ಕದಲ್ಲಿ ಕುಳಿತು ಇವನು ಹಗುರಾಗಿ ನಕ್ಕ. ನಾವು ಕನ್ನಡದಲ್ಲಿ ಮಾತನಾಡಿಕೊಂಡ ಜೋಕ್ ನ್ನು ಡ್ರೈವರನಿಗೆ ಹಿಂದಿಯಲ್ಲಿ ಹೇಳಿದೆ. ಪಾಪ ಅವನು ನಗಲಿಲ್ಲ. ಗಂಭೀರನಾದ. ಒಬ್ಬರ ನಂಬಿಕೆಯನ್ನು ಹೀಗೆ ಒಡೆಯಬಾರದು! ಭಾವಕೋಶಕ್ಕೆ ಲಗ್ಗೆ ಹಾಕಬಾರದು ನೋಡಿ!
‘ನೀಲಕಂಠ್’ ಹೃಷಿಕೇಶದಿಂದ ಸು.೩೨ ಕಿಮೀ ದೂರದಲ್ಲಿರುವ ಒಂದು ಸಣ್ಣ ಹಳ್ಳಿ. ಅಲ್ಲಿರುವ ಶಿವನ ಮಂದಿರ. ೧೩೩೦ ಮೀಟರುಗಳ ಎತ್ತರದಲ್ಲಿರುವ ‘ಮಣಿಕುಂಟ್’ ಬೆಟ್ಟದ ಮೇಲಿದೆ. ಪರ್ವತದ ದಾರಿಯಾದ್ದರಿಂದ ಹೃಷಿಕೇಶದಿಂದ ಅಲ್ಲಿಗೆ ತಲಪಲು ಒಂದೂಕಾಲು ತಾಸಾದರೂ ಬೇಕು. ವಾಹನಗಳು ಬೆಟ್ಟ ಹತ್ತಿ ಇಳಿವ ದಾರಿ ಮಾತ್ರ ಬಹಳ ರಮಣೀಯ! ಕೆಳಗೆ ‘ಪಂಕಜ’ ಮತ್ತು ‘ಮಧುಮತಿ’ ಯರ ಸಂಗಮವಿದೆ. ಅದರ ಮೇಲೆ ಯುವಕರು ನಡೆಸುವ rafting ಸಾಹಸಗಳು ಕಣ್ಣಿಗೆ ಬೀಳುತ್ತವೆ. ಅವುಗಳ ಮೂಲ ಹುಡುಕಿದೆ. ಸಿಕ್ಕಲಿಲ್ಲ . ನದೀ ಮೂಲ ಹುಡುಕುವ ನನ್ನ ಮೇಲೆ ಗೂಗಲ್ ಮಾಮಿಗೂ ಕೋಪ ಬಂದಿರಬೇಕು!
ಆಶ್ಚರ್ಯವೆಂದರೆ ಈ ದೇವಸ್ಥಾನ ( ಗೋಪುರ/ ಶಿಖರ) ದ್ರಾವಿಡ ಶೈಲಿಯಲ್ಲಿದೆ ಎಂದು ಅದೇ ಗೂಗಲ್ ಹೇಳುತ್ತದೆ.ಅದನ್ನು ಓದಿ ರೋಮಾಂಚನವಾಯಿತು. ಓದುವ ಹೊತ್ತಿಗೆ ಮನೆಗೆ ಬಂದಾಗಿತ್ತು. ಅಲ್ಲಿಯ ಜನ ಜಂಗುಳಿ, ಕಿರಿದಾದ ಸುಗಮ ಪ್ರಯಾಣಕ್ಕೆ ತಕ್ಕುದಲ್ಲದ ರಸ್ತೆಗಳು, ಮೈಲುಗಟ್ಟಲೆ ಟ್ರ್ಯಾಫಿಕ್ ಜಾಮ್, ಅಲ್ಲಿಯ ಜನರ ವ್ಯಾಪಾರ ಬುದ್ಧಿಯಿಂದ ನಿರಾಶಳಾಗಿ ದೇವಸ್ಥಾನವನ್ನು ಸರಿಯಾಗಿ ನೋಡದೇ ಹೊರಗೆ ಬಂದು ಬಿಟ್ಟಿದ್ದೆ.
ನನ್ನ ನಿರಾಶೆಗೆ ಇನ್ನೂ ಒಂದು ಕಾರಣವಿತ್ತು. ಮೂವತ್ತೈದು ವರುಷಗಳ ಹಿಂದೆ ಇಲ್ಲಿಗೆ ಬಂದಾಗ ಗಂಗಾತೀರದ ಉದ್ದಕ್ಕೂ ಸಣ್ಣ ಸಣ್ಣ ಕುಟೀರಗಳಿದ್ದವು. ಅಲ್ಲಿ ಸಾಧು ಸಂತರು ವಾಸಮಾಡುತ್ತಿದ್ದರು. ಆ ಆಶ್ರಮಗಳಲ್ಲೇ ಪ್ರವಾಸಿಗಳು ಬಯಸಿದರೆ ತಂಗುವ ಅವಕಾಶ ಕೂಡ ಇತ್ತು. ಅಂತಹ ನಿರ್ಜನ , ನೀರವದಲ್ಲಿ ಕಾಲಕಳೆಯುವ ಬಯಕೆಯಿಂದ ಬಂದಿದ್ದೆ. ಆದರೆ ಈಗ ಬಂದಾಗ ನಾನು ಕಂಡದ್ದು ಸಾಲು ಹೊಟೇಲುಗಳು , ಅಂಗಡಿ ಬೀದಿಗಳು ! ಮುಂಬಯಿಯಿಂದ ತಪ್ಪಿಸಿಕೊಂಡು ಬಂದ ನಮಗೆ ಮತ್ತೊಂದು ಮುಂಬಯಿ ಇಲ್ಲಿ ಎದುರಾಗಿತ್ತು “ಲಾಟ್ ಅಂಡ್ ಸೇಲ್! ಲಾಟ್ ಅಂಡ್ ಸೇಲ್. ಆವೋ ಆವೋ ದೇಖನೇಕಿ ಪೈಸಾ ನಹೀ…ಪಚ್ಚಾಸ್ ….ಸೌ….” ಕೂಗುತ್ತಿತ್ತು.
“ಇದು ದೇವ ಭೂಮಿ! ಸಾಧು ಸಂತರು, ಆಶ್ರಮಗಳು ಎಲ್ಲಿ ಕಾಣುತ್ತಿಲ್ಲವಲ್ಲ?” ಎಂದು ಚಾಲಕನನ್ನು ಕೇಳಿದೆ.
“ಈಗ ಎಲ್ಲಿದ್ದಾರೆ ಮೇಡಂ ಸಾಧುಸಂತರು? ಫ್ಲ್ಯಾಟುಗಳ ಎ.ಸಿ. ರೂಮಗಳಲ್ಲಿ ಕುಳಿತು ಹೊಟೆಲ್ ಧಂಧೆ ನಡೆಸುತ್ತಿದ್ದಾರೆ. ಆಶ್ರಮಗಳೆಲ್ಲ ದೊಡ್ಡ ದೊಡ್ಡ ಕಟ್ಟಡಗಳಾಗಿವೆ. ಎಲ್ಲೋ ಒಬ್ಬಿಬ್ಬರು ಮಹಾತ್ಮರು ಕಣ್ಣಿಗೆ ಕಾಣದೇ ಓಡಾಡಿಕೊಂಡಿರಬಹುದು” ಎಂದು ಡ್ರೈವರ್ ಹೇಳಿದ.
ಈ ಎಲ್ಲವೂ ಮನಸ್ಸನ್ನು ಕಹಿ ಮಾಡಿತ್ತು. ವಿಪರೀತ ಜನ, ಅಸಾಧ್ಯ ಸೆಕೆ ಇಲ್ಲಿಗೆ ಬರಬಾರದಿತ್ತು ಎನಿಸಿಬಿಟ್ಟಿತು. ಆದರೆ ಈಗ ಎನಿಸುತ್ತಿದೆ ನೀಲಕಂಠ ಮಂದಿರದ ದ್ರಾವಿಡ ಶೈಲಿಯ ಗೋಪುರವನ್ನು, ಅಲ್ಲಲ್ಲಿ ಕೆತ್ತಿರುವ ಸಮುದ್ರ ಮಥನದ ಕಥಾನಕಗಳನ್ನು ನೋಡಬೇಕಿತ್ತು.
“ಬಂ ಬಂ ಭೋಲೇನಾಥ್ ” ಕೂಗುವ ಭಕ್ತರಂತೂ ಶಿಖರವನ್ನಾಗಲೀ ವಾಸ್ತುವನ್ನಾಗಲೀ ಗಮನಿಸುವುದಿಲ್ಲ. ಆದರೆ ನಾನು ಭಕ್ತಳೂ ಆಗದೇ ಶೋಧಕಿಯೂ ಆಗದೇ ಜೀವನವನ್ನೆಲ್ಲ ಹೀಗೆ ಬರಿದೇ ಕಳೆದು ಬಿಟ್ಟೆನಲ್ಲ !
ಕೌಶಿಕಿಯ “ಆದಿ ದೇವ ಮಹಾದೇವ ಹೇ ದಯಾನಿಧೇ” ಆನ್ ಮಾಡಿದೆ. ಖಿನ್ನತೆ ಕಳೆದು ಗಾಡಿ ಹಳಿಯಮೇಲೆ ಬಂತು. ಬೆಟ್ಟಗಳೆಲ್ಲ ಆದಿ ದೇವ ಮಹಾದೇವ ಹೇ ದಯಾನಿಧೇ…ಮಾರ್ದನಿಗುಡುತ್ತಿದ್ದವು. ಶಿವನಂತಹ ಸೀಮಾತೀತ ವ್ಯಕ್ತಿತ್ವದ ಕಲ್ಪನೆಯೇ ಎಷ್ಟು ಅದ್ಭುತ!!!
- ಗಿರಿಜಾ ಶಾಸ್ತ್ರೀ