ಗೋಕರ್ಣದಲ್ಲಿ ಓಂ ಬೀಚ್ ಮತ್ತು ಕೂಡ್ಲೆ ಬೀಚ್ ನೋಡಿದರೆ ಸಾಲದು, ದ್ರಾವಿಡ ಶೈಲಿಯಲ್ಲಿರುವ ಮಹಾಬಲೇಶ್ವರ ದೇವಸ್ಥಾನವನ್ನು ತಪ್ಪದೆ ನೋಡಿ, ಜೊತೆಗೆ ಇನ್ನೊಂದು ಮುಖ್ಯವಾದ ವಿಷಯ ಅಲ್ಲಿಗೆ ಹೋಗುವಾಗ ಗಂಡಸರು ಪಂಚೆ ಹಾಗೂ ಹೆಸರು ಸೀರೆ ಅಥವಾ ಚೂಡಿದಾರ ಕಡ್ಡಾಯವಾಗಿ ಧರಿಸಿಕೊಂಡು ಹೋಗಬೇಕು ಎಂದು ಮಾಹಿತಿ ನೀಡುತ್ತಾ ನನ್ನ ಗೋಕರ್ಣ ಪ್ರವಾಸ ಕಥನವನ್ನು ತಪ್ಪದೆ ಓದಿ…
ಗೋಕರ್ಣಕ್ಕೆ ಭೇಟಿ ನೀಡಿದ್ಮೇಲೆ ಮಹಾಬಲೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ನಮ್ಮ ಪಾಪ ವಿಮೋಚನೆ ಮಾಡ್ಕೋಳಿಲ್ಲ ಅಂದ್ರೆ ಹೆಂಗೆ ಅಂತ ಪಾಪ ವಿಮೋಚನೆಗಾಗಿ ಸಾಯಂಕಾಲ ದೇವರ ದರ್ಶನಕ್ಕೆ ಹೊರಟೆವು.
ಯಪ್ಪಾ… ಎಂಥ ದೊಡ್ಡ ಕ್ಯೂ ಅಂತೀರಾ. ದೇವಸ್ಥಾನದ ಒಳಗೆ ಹೋಗ್ಬೇಕಾದ್ರೆ ಒಂದೇ ಕ್ಯೂ ಇದ್ದದ್ದು ಮುಂದೆ ಮುಂದೆ ಹೋದ ಹಾಗೆ ಪಕ್ಕಕ್ಕೆ ಎರಡನೇಯ ಸಾಲು ಆಯ್ತು, ಆಮೇಲೆ ಮೂರನೇಯ ಸಾಲು ಆಯ್ತು, ಆಮೇಲೆ ಕೈಯಲ್ಲೇ ತಳ್ಳೋದು, ಆಮೇಲೆ ಮೈಮೇಲೆ ಬೀಳೋದು, ಆಮೇಲೆ ಹೀಗೆ ಒಬ್ಬರಿಗೊಬ್ಬರು ಅಟ್ಟಿಕೊಂಡು ಸಾಲಲ್ಲಿ ನಡೆಯೋದು ಉಫ್… ಏನ್ ಕೇಳ್ತಿರಾ ನಮ್ಮ ಭಕ್ತಿನಾ. ಅದೇ ಬಸ್ ಲ್ಲಿ ಹೀಗೆ ಮೈ ಮೇಲೆ ಬಿದ್ದಿದ್ರೆ ಅದರ ಕತೇನೇ ಬೇರೆ ಇರೋದು… ಆದರೆ ಇದು ದೇವಸ್ಥಾನ ಅಲ್ವಾ…ಜೈ ಮಹಾಬಲೇಶ್ವರ…ಜೈ ಮಹಾಬಲೇಶ್ವರ… ಅಂತ ಭಕ್ತಿಯಲ್ಲಿ ತೇಲಿ ಮುಂದೆ ಹೆಜ್ಜೆ ಹಾಕಿದ್ದು ಆಯ್ತು.
ಇನ್ನೇನು ಭಕ್ತಿಯಿಂದ ದೇವರೇ….ನಾವು ಮಾಡಿದ ಪಾಪನ್ನೆಲ್ಲ ನಿನ್ನ ಹೊಟ್ಟೆಗೆ ಹಾಕೋ ಬಿಡು…. ಅಂತ ಸಾಲಲ್ಲಿ ನಿಂತು ಭಕ್ತಿಯಿಂದ ಕೇಳೋಣ ಅನ್ನೋಷ್ಟರಲ್ಲಿ ದಿ ವಿಲನ್ ತರ ಕಾವಲುದಾರ ಎಂಟ್ರಿ ಕೊಟ್ಟಾ…ನೋಡ್ರಪ್ಪಾ ಯಾರ್ ಯಾರು ಪ್ಯಾಂಟ್ ಹಾಕೊಂಡು ಬಂದಿದ್ದೀರಿ ಅವರೆಲ್ಲ ಪಂಚೆ ಹಾಕಿಕೊಂಡು ದೇವರ ದರ್ಶನ ಮಾಡಬೇಕು, ಇಲ್ಲದ್ರೆ ಒಳಕ್ಕೆ ಬಿಡೋಲ್ಲ ಅಂದ. ಪ್ಯಾಂಟ್ ಹಾಕಿಕೊಂಡು ಬಂದ ಹೆಣ್ಮಕ್ಕಳು, ಗಂಡ್ಮಕ್ಕಳು ಎಲ್ಲ ಕಂಗಾಲ ಆಗಿ ನಿಂತರು. ಸದ್ಯ ನಾನು ಚೂಡಿದಾರ ಹಾಕಿದ್ದೆ, ನಮ್ಮ ಯಜಮಾನಪ್ಪ ಸೆಕೆ ಅಂತ ಮೊದಲೇ ಪಂಚೆ ಮೇಲೆ ಗೋಕರ್ಣ ಸುತ್ತಾಡ್ತಿದ್ದ, ನಮಗೆ ಈ ವಿಷ್ಯ ದೊಡ್ಡದಾಗಲಿಲ್ಲ. ಆದರೆ ಬೇರೆಯವರು ಗೋಕರ್ಣ ಅಂತ ಬಂದವರೆಲ್ಲ ಬೀಚ್ ಲೆಕ್ಕ ಹಾಕಿ ಪ್ಯಾಂಟು, ಶರ್ಟು, ಚಡ್ಡಿ, ವಿದೇಶಿ ಬಟ್ಟೆ ಅಂತೆಲ್ಲ ಬಟ್ಟೆ ನೇತು ಹಾಕೊಂಡು ಬಂದಿದ್ದರು.. ಈಗ ಪ್ಯಾಂಟ್ ಬ್ಯಾನ್… ಪಂಚೆ ಅಂದ್ರೆ ಹೇಗೆ ಅಂತ ಮುಖ ಮುಖ ನೋಡ್ತಿದ್ದವರಿಗೆ ಕಾವಲುದಾರ ಹೊರಗೆ ಪಂಚೆ ಮಾರಾಟಕ್ಕಿದೆ, ತಕೊಂಡು ಹಾಕೊಳ್ಳಿ. ಪ್ಯಾಂಟ್ ಲ್ಲಿ ಒಳಕ್ಕೆ ಮಾತ್ರ ಬಿಡೋಲ್ಲ ಅಂದ. ಅಲ್ಲಿಗೆ ಪಂಚೆ ವ್ಯಾಪಾರ ಜೋರಾಗಿಯೇ ನಡಿಯುತ್ತೆ ಅಂತ ನಾನು ಲೆಕ್ಕ ಹಾಕಿದ್ದೆ . ದೇವಸ್ಥಾನ ಆಡಳಿತ ಮಂಡಳಿಯವರು ಜನಕ್ಕೆ ಬುದ್ದಿ ಕಲಿಸೋಕೆ ಹೋದ್ರೆ ಅಷ್ಟು ಸಲೀಸಾಗಿ ಕೇಳ್ತಾರ ನಮ್ಮ ಜನ, ಅವರು ಮೊದಲೇ ಬುದ್ದಿವಂತರು. ಒಬ್ಬ ಭಕ್ತ ಪಂಚೆ ಖರೀದಿ ಮಾಡಿ ತಗೆದುಕೊಂಡು ಬಂದ, ಅವನು ಪಂಚೆ ಉಟ್ಟಿ ಒಳಕ್ಕೆ ಹೋಗಿ ದೇವರ ದರ್ಶನ ಪಡೆದು ಹೊರಗೆ ಬಂದು ಇನ್ನೊಬ್ಬನಿಗೆ ಅದೇ ಪಂಚೆ ಕೊಟ್ಟ, ಹೀಗೆ ಒಂದೇ ಪಂಚೆ ಒಬ್ಬರಿಂದ ಒಬ್ಬರಿಗೆ ಸಾಗಿ ಅವರ ಮನೆ ಕುಟುಂಬದವರೆಲ್ಲ ದೇವರ ದರ್ಶನ ಪಡೆದರು. ಅದನ್ನು ನೋಡಿದ ಬೇರೆ ಪ್ಯಾಂಟಿನ ಭಕ್ತಾದಿಗಳು ಅವರಂತೆ ಒಂದೇ ಪಂಚೆಯಲ್ಲಿಯೇ ದೇವರ ದರ್ಶನ ಮಾಡಿದರು. ನಾವು ಅವರನ್ನು ನೋಡಿ ಪಾಪದ ವಿಮೋಚನೆ ಅಂದ್ರೆ ಹೀಗೂ ಮಾಡಬಹುದಾ?… ಅಂತ ಅರ್ಥ ಮಾಡ್ಕೊಂಡೆವು.
*******
ಫೋಟೋ ಕೃಪೆ : google
ಮಹಾಬಲೇಶ್ವರ ದೇವಸ್ಥಾನ ಹಿನ್ನೆಲೆ :
ಗೋಕರ್ಣದ ಮಹಾಬಲೇಶ್ವರ ದೇವಸ್ಥಾನಕ್ಕೆ ಇತಿಹಾಸವಿದೆ. ಅದನ್ನು ಪುರಾಣದಲ್ಲಿ, ಇಂಟರ್ನೆಟ್ ಗಳಲ್ಲಿ ಓದಿದ್ದೇವೆ. ನಾನು ತಿಳಿದು ಕೊಂಡ ಕತೆಯ ಪ್ರಕಾರ ರಾವಣನ ವ್ಯಕ್ತಿತ್ವ ಹೇಗೆ ಇದ್ದರೂ ಆತ ಒಬ್ಬ ಶಿವನ ಭಕ್ತನಾಗಿದ್ದ. ತನ್ನ ತಾಯಿಯ ಆಸೆಯನ್ನು ಈಡೇರಿಸುವ ಸಲುವಾಗಿ ಶಿವನ ತಪಸ್ಸನ್ನು ಕೈಗೊಂಡನಂತೆ. ಶಿವನ ಪ್ರೀತಿಯ ಪಾತ್ರನಾಗಿ ರಾವಣನು ಶಿವನಿಂದ ಆತ್ಮಲಿಂಗವನ್ನು ಪಡೆದುಕೊಂಡನಂತೆ. ಅದನ್ನು ಖುಷಿಯಿಂದ ಮನೆಗೆ ವಾಪಾಸ್ ಆಗುವ ವೇಳೆಯಲ್ಲಿ ಸಂಧ್ಯಾ ಕಾಲವಾದ್ದರಿಂದ ಆ ಪವಿತ್ರ ಸಮಯದಲ್ಲಿ ಅರ್ಘ್ಯವನ್ನು ನೀಡುವ ಸಲುವಾಗಿ ಅಲ್ಲಿಯೇ ಇದ್ದ ಒಬ್ಬ ಹುಡುನ ಕೈಯಲ್ಲಿ ಆತ್ಮಲಿಂಗವನ್ನು ಹಿಡಿದುಕೊಳ್ಳಲು ಹೇಳಿದನಂತೆ. ಆತ್ಮ ಲಿಂಗವನ್ನು ಹಿಡಿದುಕೊಂಡವನು ಮತ್ಯಾರು ಅಲ್ಲ ಬಾಲಕನ ರೂಪದಲ್ಲಿದ್ದ ಗಣೇಶ. ಅದರ ಭಾರ ಹೊರಲಾರದೆ ಆತ್ಮಲಿಂಗವನ್ನು ಭೂಮಿಯಲ್ಲಿ ಇಟ್ಟನಂತೆ, ಅದನ್ನು ಕಂಡ ರಾವಣ ಸಿಟ್ಟಿನಿಂದ ಗಣೇಶನ ತಲೆಗೆ ಬಲವಾಗಿ ಕುಟ್ಟಿದನಂತೆ. ಆ ಗಣೇಶನ ವಿಗ್ರಹ ಅಲ್ಲಿಯೇ ನೋಡಬಹುದಾಗಿದೆ. ಆಮೇಲೆ ರಾವಣ ಲಿಂಗವನ್ನು ನೆಲದಿಂದ ಬಿಡಿಸಲು ಎಷ್ಟೇ ಪ್ರಯತ್ನಿಸಿದರು ಸಾಧ್ಯವಾಗದೆ ವಿಫಲವಾಗುತ್ತಾನೆ. ಆದರೆ ಆತ್ಮಲಿಂಗವು ಚೂರು ಚೂರಾಗಿ ರಾವಣನ ಕೈಗೆ ಬಂದಾಗ ಅದನ್ನು ಸಿಟ್ಟಿನಿಂದ ದೂರ ದೂರದ ಸ್ಥಳಗಳಿಗೆ ಎಸೆಯುತ್ತಾನೆ ಅಂತೆ, ಆ ಲಿಂಗದ ಚೂರು ಯಾವ ಸ್ಥಳದಲ್ಲಿ ಬಿದ್ದಿತೋ ಅಲ್ಲೆಲ್ಲಾ ಶಿವನ ದೇವಸ್ಥಾನವನ್ನು ನಿರ್ಮಿಸಲಾಯಿತು ಅಂತಹ ಒಂದು ಹಿನ್ನೆಲೆಯನ್ನು ಹೊಂದಿರುವ ದೇವಸ್ಥಾನಗಳಲ್ಲಿ ಮಹಾಬಲೇಶ್ವರ ದೇವಸ್ಥಾನವು ಒಂದು ಎಂದು ಹೇಳಲಾಗುತ್ತದೆ.
ಫೋಟೋ ಕೃಪೆ : google
ಅಂತಹ ಪುಣ್ಯ ಕ್ಷೇತ್ರದಲ್ಲಿದ್ದಾಗ ಮನಸ್ಸು ತುಂಬಾ ಪ್ರಸನ್ನವಾಗಿತ್ತು. ದೇವರಲ್ಲಿ ಇನ್ನಷ್ಟು ದುಡ್ಡು, ಆಡಿ- ಬೆಂಜ್ ಕಾರ್ ಕೊಡಪ್ಪಾ, ಶುಗರ್, ಬಿಪಿ, ಥೈರಾಡ್ ಯಾವ ಪ್ಯಾಕೇಜ್ ಬೇಡಪ್ಪಾ ಅಂತ ಭಕ್ತಿಯಿಂದ ಬೇಡಿಕೊಂಡೆ.
ಗೋಕರ್ಣದಲ್ಲಿ ಒಂದು ಕಡೆ ಬೀಚ್ ನಲ್ಲಿ ವಿದೇಶಿ ಸಂಸ್ಕೃತಿಯನ್ನು ನೋಡಿದೆ, ಅದೇ ಗೋಕರ್ಣದ ಒಳಗೆ ಪೂಜೆ ಪುನಸ್ಕಾರದಿಂದ ತುಂಬಿದ ಸಂಸ್ಕಾರವನ್ನು ಕೂಡಾ ನೋಡಿದೆ. ಒಂದೇ ಸ್ಥಳದಲ್ಲಿ ಎರಡನ್ನು ನೋಡಿವ ಭಾಗ್ಯ ಸಿಕ್ಕಿದ್ದು ಪುಣ್ಯವೇ ಸರಿ. ನನ್ನ ಕಣ್ಣುಗಳಂತೂ ಪಾವನವಾಯಿತು. ಆದರೆ ಪಾಪ ಪದ್ದಣ್ಣ ಏಕ ಪತ್ನಿವ್ರತಸ್ಥನಾಗಿ ಗೋಕರ್ಣ ಬಿಸಿಲಿಗೆ ತಂಪು ಪಾನೀಯ ಕುಡ್ಕೊಂಡು ಸುತ್ತಾಡಿದ್ದು ನನಗಂತೂ ಬಲು ಬೇಜಾರಾಯಿತು.
(ಗೋಕರ್ಣ ಪ್ರವಾಸ ಇನ್ನೂ ಮುಗಿದಿಲ್ಲ)…
- ಶಾಲಿನಿ ಹೂಲಿ ಪ್ರದೀಪ್