ಶ್ರೀಯುತ ಪೂರ್ಣ ಚಂದ್ರ ತೇಜಸ್ವಿಯವರು ‘ಡೇರ್ ಡೆವಿಲ್ ಮುಸ್ತಾಫ’ ಕತೆ ಶಶಾಂಕ್ ಸೊಗಾಲ್ ನಿರ್ದೇಶನದಲ್ಲಿ ಸಿನಿಮಾ ಆದಾಗ, ಎಲ್ಲರ ಮನ ಗೆದ್ದಿದ್ದಷ್ಟೇ ಅಲ್ಲ, ಇದು ‘ಪ್ಯಾನ್-ಇಂಡಿಯಾ’ ಆಗಬೇಕಾಗಿದ್ದ ಸಿನಿಮಾ ಅನಸಿದ್ದು ಸುಳ್ಳಲ್ಲ – ರಘುರಾಂ, ಮುಂದೆ ಓದಿ…
ಶ್ರೀಯುತ ಪೂರ್ಣ ಚಂದ್ರ ತೇಜಸ್ವಿಯವರು ‘ಅಬಚೂರಿನ ಫೋಸ್ಟ್ ಆಫೀಸ್’ ಪುಸ್ತಕ ಬರೆದು ನಾಲ್ಕು ದಶಕಗಳೇ ಕಳೆದಿದೆ. ಅದರಲ್ಲಿ ಕೆಲವು ಪುಟಗಳ ಸಣ್ಣ ಕಥೆಯೇ ‘ಡೇರ್ ಡೆವಿಲ್ ಮುಸ್ತಾಫ’. ಅಂದು ಸಣ್ಣ ಊರಿನ ಕಾಲೇಜ್ ಒಂದರಲ್ಲಿ ನಡೆಯುವ ಘಟನೆಗಳ ಸುತ್ತ ಕಟ್ಟಿರುವ ಕಥೆ. ಇಂದಿನ ಬದಲಾದ ಕಾಲಘಟ್ಟದಲ್ಲಿ ಈ ರೀತಿಯ ಕಥೆಯನ್ನು ಚಲನಚಿತ್ರವಾಗಿ ಮಾಡುವುದು ನಿರ್ಮಾಪಕ ‘ಡೇರ್ ಡೆವಿಲ್’ ಆಗಿದ್ದರೆ ಮಾತ್ರ ಸಾಧ್ಯ. ಅದರ ಜೊತೆಗೆ ಸಿನಿಮಾ ಮಾಡವುದಕ್ಕೆ ಈಗ ಕೋಟಿಗಳು ಬೇಕು. ಎಷ್ಟು ಕೋಟಿ ಹಾಕಿದರೂ, ಎಂತಹ ಸ್ಟಾರ್ ನಾಯಕರ ಬಲವಿದ್ದರೂ ಹಾಕಿದ ಬಂಡವಾಳ ಕೈ ಹಿಡಿಯುವ ಖಾತರಿಯಿಲ್ಲ. ಹೀಗಿರುವಾಗ ಹೊಸಬರ ದಂಡನ್ನೇ ಕಟ್ಟಿಕೊಂಡು ಚಲನಚಿತ್ರ ಮಾಡುವಾಗ ನಿರ್ಮಾಪಕರು ‘ಡೇರ್ ಡೆವಿಲ್’ ಆಗಿರಲೇ ಬೇಕು! ಈ ‘ಡೇರ್ ಡೆವಿಲ್’ ಕೆಲಸ ಮಾಡಿರುವುದು ನೂರಕ್ಕೂ ಹೆಚ್ಚು ಜನ ತೇಜಸ್ವಿಯವರ ಅಭಿಮಾನಿಗಳು. ಹಾಗಾಗಿ ಇದು ಒಂದು ರೀತಿಯ ಹೊಸ ಪ್ರಯೋಗವೂ ಹೌದು.
ಅಬಚೂರಿನ ಕಾಲೇಜ್ನಲ್ಲಿ ಶೈಕ್ಷಣಿಕ ವರ್ಷ ಪ್ರಾರಂಭವಾಗುವ ದೃಶ್ಯಗಳಿಂದ ಪ್ರಾರಂಭವಾಗುವ ಚಲನಚಿತ್ರ ಕೆಲವೇ ಸೆಕೆಂಡುಗಳಲ್ಲಿ ವೀಕ್ಷಕರನ್ನು ಹಿಡಿದಿಟ್ಟುಕೊಂಡು ಕಥೆಯ ಅನಾವರಣ ಮಾಡುತ್ತಾ ಹೋಗುತ್ತದೆ. ಚರಿತ್ರೆಯ ಮೇಷ್ಟ್ರು ಮುಸ್ತಾಫ ಹೆಸರನ್ನು ಹಾಜರಿ ಪುಸ್ತಕದಿಂದ ಓದಿ ಕರೆದಾಗ ಕಾಲೇಜ್ಗೆ ಪ್ರಥಮಬಾರಿಗೆ ಮುಸ್ಲಿಂ ವಿದ್ಯಾರ್ಥಿಯೊಬ್ಬ ಸೇರಿ ಕೊಂಡಿರುವ ವಿಷಯ ಎಲ್ಲರಿಗೂ ತಿಳಿಯುತ್ತದೆ. ಆದರೆ ಆ ವಿದ್ಯಾರ್ಥಿಯೇ ಕಾಲೇಜಿಗೆ ಬಂದಿರುವುದಿಲ್ಲ! ಇಪ್ಪತ್ತು ದಿನಗಳ ನಂತರ ಬರುವ ವಿದ್ಯಾರ್ಥಿ ಮುಸ್ತಾಫನ ಆಗಮನ ಆ ಕಾಲೇಜಿನಲ್ಲಿ ಸೃಷ್ಟಿಸಿದ ಕುತೂಹಲದ ಜೊತೆಗೆ ಅವನು ‘ಸೆಂಟ್ನಲ್ಲಿ ಸ್ನಾನ ಮಾಡುತ್ತಾನೆ’, ‘ನೀರಿಲ್ಲದೆ ಪಂಚರ್ ಹಾಕುತ್ತಾನೆ’ ಎಂಬ ಉದ್ಗಾರಗಳು ಈಗಾಗಲೇ ಇರುವ ಪೂರ್ವಾಗ್ರಹ ಅನಿಸಿಕೆಗಳಿಂದ ಆತನ ಕಡೆ ನೋಡುವ ರೀತಿ ತೆಗೆದಿಡುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ತನ್ನನ್ನು ತಾನೇ ‘ಡೇರ್ ಡೆವಿಲ್’ ಎಂದು ಕರೆದುಕೊಳ್ಳುವ ಸ್ಪುರದ್ರೂಪಿ ಮುಸ್ತಾಫನನ್ನು ‘ಎಷ್ಟು ಮುದ್ದು ಮುದ್ದಾಗಿದಾನೆ ನೋಡ್ರೆ’ ಎಂದು ಹೇಳುತ್ತಾ ವಿದ್ಯಾರ್ಥಿನಿಯರು ಅವನನ್ನು ನೋಡುವ ರೀತಿ ಇತರೆ ವಿದ್ಯಾರ್ಥಿಗಳಿಗೆ ನುಂಗಲಾರದ ತುತ್ತಾಗುತ್ತದೆ!
ಕ್ರಮೇಣ ಎಲ್ಲ ವಿದ್ಯಾರ್ಥಿಗಳು ಹೊಂದಿಕೊಳ್ಳಲು ಪ್ರಾರಂಭವಾಗುವ ಹೊತ್ತಿಗೆ ಒಂದು ದಿನ ಮುಸ್ತಾಫ ತನ್ನ ಉದ್ದವಾದ ಫೆಜ್ ಟೋಪಿಯನ್ನು ಹಾಕಿಕೊಂಡು ಬಂದು ಮೊದಲ ಬೆಂಚಿನಲ್ಲಿ ಕೂರುತ್ತಾನೆ. ಆಗ ಹಿಂದುಗಡೆ ಕೂರುವವರು ‘ಬೋರ್ಡ್’ ಕಾಣುವುದಿಲ್ಲ ಎಂದು ಗಲಾಟೆ ಮಾಡುತ್ತಾರೆ. ಆತ ಹಿಂದುಗಡೆ ಹೋಗಲು ಒಪ್ಪದೇ ಹೋದಾಗ ಗಲಾಟೆ ಜಾಸ್ತಿಯಾಗುತ್ತದೆ. ಕೊನೆಗೆ ಪ್ರಿನ್ಸಿಪಾಲ್ ಬಂದು ಆತ ಟೋಪಿ ತೆಗೆದು ಮುಂದುಗಡೆ ಕೂರಬಹುದು ಅಥವ ಹಿಂದಿನ ಬೆಂಚಿನಲ್ಲಿ ಟೋಪಿ ಧರಿಸಿ ಕೂರಬಹುದು ಎಂದಾಗ ಮುಸ್ತಾಫ ಹಿಂದಿನ ಬೆಂಚಿಗೆ ಹೋಗುತ್ತಾನೆ. ಆದರೆ ಆದೇ ಟೋಪಿಯನ್ನು ಆತ ಆಟದ ಮೈದಾನದಲ್ಲಿ ಹಾಕಿಕೊಂಡು ಹೋದಾಗ ಎನಾಯಿತು? ಅದನ್ನು ಸಿನಿಮಾದಲ್ಲಿ ನೋಡಿದರೆ ಮಾತ್ರ ಚಂದ. ಹಾಗಂತ ಇದು ಒಂದು ಟೋಪಿಯ ಸುತ್ತ ಸುತ್ತುವ ಸಿನಿಮಾ ಮಾತ್ರ ಅಲ್ಲ!
ಊರಿನಲ್ಲಿ ಹಿಂದೆ ನಡೆದ ಒಂದು ಘಟನೆಯಿಂದ ಈ ಸಾರಿಯ ಗಣಪತಿ ವಿಸರ್ಜನೆಯ ಮೆರವಣಿಗೆ ಹೋಗುವ ಸಮಯದಲ್ಲಿ ಗಲಾಟೆ ಆಗದೇ ಇರುವ ಹಾಗೆ ನೋಡಿಕೊಳ್ಳಲು ಪೋಲಿಸ್ ನವರ ಜೊತೆ ಕಾಲೇಜಿನ ಎನ್.ಸಿ.ಸಿ.ಯವರು ಸೇರಿಕೊಳ್ಳುತ್ತಾರೆ. ಮೆರವಣಿಗೆ ಅದ್ದೂರಿಯಾಗಿ ಸಾಗುತ್ತಿರ ಬೇಕಾದಾಗ ಇದ್ದಕ್ಕಿದ್ದಂತೆ ಗಲಾಟೆ ಪ್ರಾರಂಭವಾಗುತ್ತದೆ. ಆನಂತರ ಏನಾಯಿತು? ಈ ಗಲಾಟೆಗೆ ಕಾರಣವಾದ ಘಟನೆಯಾದರೂ ಏನು?, ನಮ್ಮ ‘ಡೇರ್ ಡೆವಿಲ್’ ಅಥವ ‘ಅಯ್ಯಂಗಾರಿ ಪಟಲಾಂ’ ಅಲ್ಲಿ ಇದ್ದರೆ? ಅವರೇನು ಮಾಡಿದರು? ತನಗೆ ತಾನೇ ‘ಡೇರ್ ಡೆವಿಲ್’ ಎಂದು ಕರೆದುಕೊಳ್ಳುವ ಮುಸ್ತಾಫ ನಿಜವಾಗಲೂ ಮಾಡಿದ ‘ಡೇರ್ ಡೆವಿಲ್’ ಕೆಲಸವಾದರೂ ಏನು? ಇತ್ಯಾದಿ ಪ್ರಶ್ನೆಗಳಿಗೆ ಉತ್ತರವನ್ನು ಸಿನಿಮಾದಲ್ಲಿ ಕಂಡು ಕೊಂಡರೆ ಚೆಂದ.
ಕಾಲೇಜಿನಲ್ಲಿ ಅವರದೇ ರಾಜ್ಯ ಕಟ್ಟಿಕೊಂಡಿದ್ದ ರಾಮಾನುಜ ಅಯ್ಯಂಗಾರಿ ಮತ್ತು ಅವನ ಪಟಾಲಂನ ಸದಸ್ಯರಾದ ಶಂಕರ, ಕುಮಾರ, ಪುಲಕೇಶಿ ಮತ್ತು ಶೀನ, ಮುಸ್ತಾಫನನ್ನು ಎಲ್ಲದರಲ್ಲೂ ಪ್ರತಿಸ್ಪರ್ಧಿಯಾಗಿ ಕಾಣುವುದರಿಂದ ಉಂಟಾಗುವ ಸಂದರ್ಭಗಳು ಕಥೆಯ ಜೊತೆಗೆ ಜೊತೆ ಜೊತೆಯಾಗಿ ಒಂದೆಡೆ ಸಾಗುತ್ತದೆ. ಇನ್ನೊಂದೆಡೆ ಕಾಲೇಜಿನಲ್ಲಿ ಹಾಜರಿ ಹಾಕುವಾಗ ‘ರಾಮಾನುಜ’ ಎಂದು ಕರೆದಾದ ಮೇಲೆ ‘ರಮಾಮಣಿ’ ಎಂದು ಕರೆದರೆ ತನ್ನ ಲಗ್ನ ಪತ್ರಿಕೆಯನ್ನೇ ಒದುತ್ತಿದ್ದಾರೆ ಎಂದು ಸಂತೋಷ ಪಡುತ್ತಿದ್ದಾ ‘ಅಯ್ಯಂಗಾರಿ’ಗೆ ಈಗ ರಮಾಮಣಿ ಮುಸ್ತಾಫನ ಕಡೆ ಬೀರುವ ನೋಟ ಅರಗಿಸಿಕೊಳ್ಳಲಾಗದೇ ಹೋಗುತ್ತದೆ. ಇಂಗ್ಲೀಷ್ನಲ್ಲಿ ಪಾಠ ಮಾಡುವ ಟೀಚರ್ ಗೆ ಹತ್ತಿರ ಆಗಲು ಪ್ರಯತ್ನಿಸುವ ಕನ್ನಡ ಮೇಷ್ಟ್ರು, “… ಆರಂಕುಶವಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ’ ಕನ್ನಡ ಪದ್ಯವನ್ನು ಸರಿಯಾಗಿ ಹೇಳಲಿಲ್ಲವೆಂದು ರಮಾಮಣಿ ಕೈಯಲ್ಲಿ ವಿಶೇಷವಾದ ರೀತಿಯಲ್ಲಿ ಮುಸ್ತಾಫನಿಗೆ ಕಪಾಳಮೋಕ್ಷ ಶಿಕ್ಷೆ ಕೊಡಿಸುವ ಕನ್ನಡ ಮೇಷ್ಟು, ಆಟದ ಮಹತ್ವ ಹೇಳುತ್ತಾ ವಿದ್ಯಾರ್ಥಿಗಳ ಜೊತೆ ನಿಲ್ಲುವ ಪಿ.ಟಿ.ಮೇಷ್ಟ್ರು ಕಥೆಯಲ್ಲಿ ಬೆರೆತ್ತಿದ್ದಾರೆ.
ಆ ಕಾಲೇಜಿನ ವಾರ್ಷಿಕೋತ್ಸವದ ಸಂದರ್ಭದಲ್ಲಿ ಮುಸ್ತಾಫ ತನ್ನ ಮ್ಯಾಜಿಕ್ ಮಾಡುವ ಕಲೆಯ ಜೊತೆಗೆ ತಲಿಸ್ಮಾನ್ ಜಾದು ಮಾಡುವ ನೆಪದಲ್ಲಿ ಅಯ್ಯಂಗಾರಿಗೆ ಮಾಡುವ ಕೀಟಲೆ ದೊಡ್ಡಾಟವೇ ಆಗುತ್ತದೆ. ಅವನೇನು ಮಾಡಿದ? ಆ ನಂತರ ಏನಾಯಿತು? ಇವೆಲ್ಲ ಚಲನಚಿತ್ರದಲ್ಲಿಯೇ ನೋಡಬೇಕು.
ಹೀಗೆ ಪ್ರತಿ ಹಂತದಲ್ಲೂ ಕಾಲೇಜಿನ ಸುತ್ತ ಹೆಣೆದಿರುವ ಕಥೆಯಲ್ಲಿ ಸಾಗುತ್ತಿರುವಾಗ ಕ್ರಿಕೆಟ್ ಆಡುವ ವಿಷಯದಲ್ಲಿ ಊರಿನ ಸುಲ್ತಾನ್ ಕೇರಿಯವರ ಆಗಮನವಾಗುತ್ತದೆ. ಆಗ ಕಾಲೇಜಿನ ತಂಡ ಮತ್ತು ಸುಲ್ತಾನ ಕೇರಿಯವರ ತಂಡದ ನಡುವೆ ನಡೆಯುವ ಜಿದ್ದಾ ಜಿದ್ದಿನ ಕ್ರಿಕೆಟ್ ಆಟ ಪ್ರೇಕ್ಷಕರನ್ನು ಹಿಡಿದಿಡುತ್ತದೆ. ಮುಸ್ತಾಫ ಯಾರ ಪರವಾಗಿ ಆಡಿದ? ಕಾಲೇಜ್ ಟೀಂನ ನಾಯಕ ಯಾರು? ಕಪ್ ಯ್ಯಾರ ಪಾಲಾಯಿತು? ಇದೆಲ್ಲಾ ಸಿನಿಮಾದಲ್ಲೇ ನೋಡಬೇಕು.
ತಿಳಿ ಹಾಸ್ಯದಲ್ಲಿ ಸಾಗುವ ಕಥೆಗೆ ನವಿರಾದ ಭಾವನೆಗಳಿಂದ ಪ್ರೀತಿ ವ್ಯಕ್ತಪಡಿಸುವ ಪರಿಯೂ ಸೇರಿ ಪ್ರೇಕ್ಷಕರು ಆ ಸಿನಿಮಾದ ಭಾಗವೇ ಆಗುತ್ತಾರೆ. ಆ ಗುಂಗಿನಿಂದ ಹೊರ ಬರಲು ಇಷ್ಟವಿಲ್ಲದೇ ಸಿನಿಮಾ ಮುಗಿದ ಮೇಲೂ ತಕ್ಷಣ ಕುರ್ಚಿಯಿಂದ ಏಳದೇ ಇರುವುದು ಆ ಸಿನಿಮಾ ಮಾಡುವ ಮೋಡಿಯ ಬಗ್ಗೆ ಹೇಳುತ್ತದೆ.
ಇಷ್ಟೆಲ್ಲಾ ಸರಿಯಾದರೂ ಚಿತ್ರವೊಂದು ಸಂದೇಶ ಕೊಡದಿದ್ದರೆ ಅದು ಅಪೂರ್ಣವೆನಿಸುತ್ತದೆ. ತೇಜಸ್ವಿಯವರು ಬರೆದ ಸಣ್ಣ ಕಥೆ ಆಧರಿಸಿ ಬಂದಿರುವ ಈ ಚಿತ್ರ ಕುವೆಂಪುರವರ ‘ಸರ್ವ ಜನಾಂಗದ ಶಾಂತಿಯ ತೋಟ’ದ ಸಾಲುಗಳನ್ನು ತನ್ನದೇ ಆದ ರೀತಿಯಲ್ಲಿ ಅನಾವರಣಮಾಡಿದೆ.
ನಟನೆ, ಚಿತ್ರಕಥೆ, ಸಂಭಾಷಣೆ, ಅರ್ಥ ಪೂರ್ಣ ಹಾಡುಗಳು, ಸಂಕಲನ, ನಿರ್ದೇಶನ ಹೀಗೆ ಎಲ್ಲ ವಿಭಾಗಗಳೂ ಒಂದು ಗೂಡಿ ಕೆಲಸ ಮಾಡಿರುವುದರಿಂದ ಒಂದು ಅತ್ಯುತ್ತಮ ಚಲನಚಿತ್ರ ಪ್ರೇಕ್ಷಕರ ಮುಂದೆ ಬಂದಿದೆ.
ಶಶಾಂಕ್ ಸೊಗಾಲ್ ನಿರ್ದೇಶನ ಈ ಚಿತ್ರದಲ್ಲಿ ಶಿಶಿರ ಭೈಕಾಡಿ ಮುಸ್ತಾಫನಾಗಿ, ಆದಿತ್ಯ ಆಶ್ರೀ ರಾಮಾನುಜನಾಗಿ, ಪ್ರೇರಣ ಗೌಡ ರಮಾಮಣಿಯಾಗಿ ನಟಿಸಿದ್ದಾರೆ. ಹಾಗೇ ನೋಡಿದರೆ ಇವರು ಯಾರು ಎಂದು ಬಹು ಜನರಿಗೆ ಗೊತ್ತಿಲ್ಲ. ಆದರೆ ಈ ಸಿನಿಮಾ ನೋಡಿದ ಮೇಲೆ ಜನರು ಇವರ ಮುಂದಿನ ಸಿನಿಮಾಗಳನ್ನು ಹುಡುಕಿಕೊಂಡು ನೋಡಲು ಹೋಗುವುದು ಮಾತ್ರ ಖಾತರಿ. ಮಂಡ್ಯ ರಮೇಶ್, ಎಸ್.ಉಮೇಶ್, ವಿಜಯ್ ಸೊಬರಾಜ್, ನಾಗಭೂಷಣ್, ಪೂರ್ಣಚಂದ್ ಮುಂತಾದವರು ಹೊಸಬರ ಜೊತೆ ಸೇರಿ ನಟಿಸಿರುವ ಅಭಿನಯ ಸೊಗಸಾಗಿದೆ. ನವನೀತ್ ಶ್ಯಾಮ್ ರವರ ಸಂಗೀತ ಮತ್ತು ರಾಹುಲ್ ರಾಯ್ ಯವರ ಚಿತ್ರೀಕರಣ ಚಿತ್ರಕ್ಕೆ ಪೂರಕವಾಗಿದೆ.
ತೇಜಸ್ವಿಯವರ ಕಥೆಗೆ ಕೆಲವು ಎಳೆಗಳನ್ನು ಸೇರಿಸಿ ಮಾಡಿರುವ ಈ ‘ಕಮರ್ಷಿಯಲ್ ಚಿತ್ರ’ ಎಲ್ಲೂ ಮೂಲ ಕಥೆಯ ಆಶಯಗಳಿಗೆ ದಕ್ಕೆ ಮಾಡಿಲ್ಲವೆಂದು ನನ್ನ ಅನಿಸಿಕೆ. “ನೀನು ಮರ ನಾನು ಲತೆ…” ಎಂದು ರಮಾಮಣಿ ಬರೆದ ಪ್ರೇಮ ಸಂದೇಶ ಓದಿದ ಪಟಾಲಂ ಸದಸ್ಯ, “ಇದೊಂದು ಪರಿಸರದ ಕಥೆ” ಎಂದು ಹೇಳುತ್ತಾನೆ. ತೇಜಸ್ವಿಯವರು ಪರಿಸರ ಪ್ರಿಯರು ಎಂದು ಎಲ್ಲರಿಗೂ ತಿಳಿದಿರುವುದರಿಂದ ಆ ಅನಿಸಿಕೆ ಬಂದಿದೆ ಅನಿಸುತ್ತದೆ. ಆದರೆ ಈ ಪರಿಸರವೆಂದರೆ ಗಿಡ, ಮರ, ಬಳ್ಳಿ ಮಾತ್ರವಾಗಿರದೆ, ಎಲ್ಲ ಜನರನ್ನು ಒಳಗೊಂಡಿರುವ ಪರಿಸರವೆಂದು ತಿಳಿದುಕೊಂಡಾಗ, ಕಥೆಯ ಮೂಲ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಯಶಸ್ವಿಯಾಗಿರುವುದು ಪ್ರತಿ ಫ್ರೇಮಿನಲ್ಲೂ ಕಾಣುತ್ತದೆ. ರಾಮಾನುಜ ಮನೆಯ ಕೋಟಿ ಬಾರಿ ಬರೆದ ರಾಮನಾಮದ ಪುಸ್ತಕವೇ ಇರಲಿ ಅಥವ ಮುಸ್ತಾಫ ಜೇಬಿನಲ್ಲಿ ಇರುವ ಉತ್ತುತ್ತೆ (ಒಣ ಕರ್ಜೂರ)ಯೇ ಇರಲಿ ಪ್ರೀತಿಯ ಹಸ್ತ ಚಾಚುವ ಸಂಕೇತಗಳಾಗಿ ಬಂದಿರುವುದು ನಿರ್ದೇಶಕರ ಜ್ಞಾಣ್ಮೆ ತೋರಿಸುತ್ತದೆ.
ಪ್ರಾರಂಭದಲ್ಲಿ “ಡೇರ್ ಡೆವಿಲ್ ಮುಸ್ತಾಫ vs ರಾಮಾನುಜ ಅಯ್ಯಂಗಾರಿ ಪಟಾಲಂ” ಎಂದೆನಿಸುವ ಸಿನಿಮಾ ನಂತರ ಕ್ರಮೇಣವಾಗಿ “ಡೇರ್ ಡೆವಿಲ್ ಮುಸ್ತಾಫ ಮತ್ತು ರಾಮಾನುಜ ಅಯ್ಯಂಗಾರಿ ಪಟಾಲಂ” ಚಿತ್ರವಾಗಿ ಬದಲಾಗಿರುತ್ತದೆ. ಆ ಬದಲಾವಣೆಯಲ್ಲಿಯೇ ಚಿತ್ರದ ಸಂದೇಶ ಅಡಗಿರುತ್ತದೆ. ಬದಲಾದ ಕಾಲಘಟ್ಟದಲ್ಲಿ ಈ ರೀತಿಯ ಸಿನಿಮಾ ನಮ್ಮಲ್ಲಿ ಬರುವುದು ಯಾಕೆ ಕಡಿಮೆಯಾಯಿತು ಎಂದು ಯೋಚಿಸುವಂತೆಯೂ ಮಾಡುತ್ತದೆ. ಯಾವುದಾದರೂ ಒಂದು ‘ಪ್ಯಾನ್-ಇಂಡಿಯಾ’ ಆಗಬೇಕಾಗಿದ್ದ ಸಿನಿಮಾ ಇದ್ದರೆ ಅದು ಈ ಸಿನಿಮಾ.
ಸಿನಿಮಾ ನೋಡಿದ ನಂತರ ಹೊರಗಿನ ಕಲುಷಿತ ವಾತಾವರಣಕ್ಕೆ ಬಂದ ಮೇಲೂ ‘ಆರಂಕುಶವಿಟ್ಟೊಡಂ ನೆನೆವುದೆನ್ನ ಮನಂ ಡೆರ್ ಡೆವಿಲ್ ಮುಸ್ತಾಫ ಚಿತ್ರವಂ” ಎಂದು ಅನಿಸುವುದರಲ್ಲಿ ಯಾವುದೇ ಅತಿಶಯೋಕ್ತಿಯಿಲ್ಲ.
- ಎನ್.ವಿ.ರಘುರಾಂ, ನಿವೃತ್ತ ಅಧೀಕ್ಷಕ ಅಭಿಯಂತರ(ವಿದ್ಯುತ್) ಕ.ವಿ.ನಿ.ನಿ.