ದೊರೆತಂತಹ ಬದುಕನ್ನು ಸ್ವೀಕರಿಸದೇ ಪ್ರವಾಹಕ್ಕೆ ವಿರುದ್ಧವಾಗಿ ಈಜಿ, ತನ್ನ ಗೊಂದಲಗಳನ್ನು ಮೀರಿ ದೃಢವಾಗಿ ನಿಂತು ತನಗೆ ಬೇಕಾದ ಬದುಕನ್ನೇ ಆಯ್ಕೆ ಮಾಡಿದ ವಿದ್ಯಾಭೂಷಣರ ಆತ್ಮಕಥನವಿರುವ ಪುಸ್ತಕದ ಹೆಸರೇ ನೆನಪೇ ಸಂಗೀತ. ಪುಸ್ತಕದ ಕುರಿತು ರಶ್ಮಿ ಉಳಿಯಾರು ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…
ಪುಸ್ತಕ : ನೆನಪೇ ಸಂಗೀತ
ಲೇಖಕರು: ವಿದ್ಯಾಭೂಷಣ
ಪ್ರಕಟನೆ: ಉದ್ಗೀಥ ಪ್ರಕಾಶನ, ಬೆಂಗಳೂರು
ಪುಟಗಳು: ೧೫೨
ಬೆಲೆ: ೧೮೦/-
ಮುದ್ರಣ: ೨೦೧೮, ೨೦೧೯, ೨೦೧೯, ೨೦೨೦
ಆಗಿನ್ನೂ ಕಿರಿಯ ಪ್ರಾಥಮಿಕ ತರಗತಿಯಲ್ಲಿದ್ದಿರಬೇಕು ನಾನು. ಅದೊಮ್ಮೆ ನಮ್ಮೂರಲ್ಲಿ ವಿದ್ಯಾಭೂಷಣ ಸ್ವಾಮೀಜಿ ಸನ್ಯಾಸತ್ವ ಬಿಟ್ಟು ಮದುವೆಯಾದರಂತೆ. ಪ್ರೇಮ ವಿವಾಹ. ಹುಡುಗಿ ಅವರಿಗಿಂತಲೂ ಬಹಳ ಚಿಕ್ಕವಳಂತೆ ಎಂಬ ಮಾತು. ದೊಡ್ಡ ಗುಲ್ಲಾಗಿತ್ತು. ಪತ್ರಿಕೆಗಳಲ್ಲೂ ಬಂದಿತ್ತು. ಇದೆಲ್ಲಾ ಅರ್ಥವಾಗುವಷ್ಟು ವಯಸ್ಸಲ್ಲ. ಅಷ್ಟ ಮಠಗಳಲ್ಲಿ ಒಂದು ಮಠದ ಸ್ವಾಮೀಜಿ ಅವರು ಎಂಬ ಕಲ್ಪನೆ ಆಗ. ಅವರು ದೂರದ ಸುಬ್ರಹ್ಮಣ್ಯ ಮಠಾಧೀಶರು, ಪೇಜಾವರ ಶ್ರೀಗಳ ಆಪ್ತ ಶಿಷ್ಯರಾದ ಕಾರಣ ನಮ್ಮ ಉಡುಪಿಯಲ್ಲೂ ಬಹು ಪ್ರಸಿದ್ಧರು ಎಂಬ ವಿಷಯ ಗೊತ್ತಿರಲಿಲ್ಲ. ರಥಬೀದಿಯ ಪಕ್ಕದ ದೊಡ್ಡ ಕ್ಯಾಸೆಟ್ ಅಂಗಡಿಯಲ್ಲಿ (ಹೆಸರು ಮರೆತಿದೆ) ಯಾವಾಗಲೂ ಭಕ್ತಿಗೀತೆಗಳ ಧ್ವನಿ ಸುರುಳಿ ತರಲು ಹೋಗುವುದಿತ್ತು ಅಪ್ಪನೊಂದಿಗೆ. ಅದರಲ್ಲಿ ವಿದ್ಯಾಭೂಷಣರ ಕನ್ನಡ ಮತ್ತು ತುಳು ಭಕ್ತಿಗೀತೆಗಳು ತುಂಬಾ ಖುಷಿಕೊಡುತ್ತಿದ್ದವು. ಆದರೆ ಈ ಘಟನೆಯ ನಂತರ ಶ್ರೀಶ್ರೀಶ್ರೀ ವಿದ್ಯಾಭೂಷಣ ಸ್ವಾಮೀಜಿ ಎಂದು ಬರೆಯುವುದರ ಬದಲು ವಿದ್ಯಾಭೂಷಣ ಎಂದಷ್ಟೇ ಆ ಕ್ಯಾಸೆಟ್’ಗಳ ಮೇಲೆ ಬರೆದಿರುತ್ತಿತ್ತು ಎಂಬ ವ್ಯತ್ಯಾಸ ಈ ಘಟನೆಯ ಬಗ್ಗೆ ನನಗಿರುವ ನೆನಪು. ಅವರು ಏಕೆ ಹಾಗೆ ಮಾಡಿದರು ಎಂಬ ಚಿಕ್ಕ ಕುತೂಹಲ ಹಾಗೂ ಮಾಡಬಾರದಿತ್ತು ಎಂಬ ಅಸಮಾಧಾನ ಬಹುತೇಕ ಎಲ್ಲರಲ್ಲೂ ಇತ್ತು. ಆದರೆ ಸ್ವಾಮೀಜಿಗಳಾಗಿ ಅವರು ಸಾರ್ವಜನಿಕ ವ್ಯಕ್ತಿಯಾಗಿದ್ದರೂ ಅವರ ಬದುಕಿನ ಬಗ್ಗೆ ಜನರು ತಮ್ಮ ವೈಯಕ್ತಿಕ ಅಭಿಪ್ರಾಯ ನೀಡುವುದು ಸರಿಯಲ್ಲ ಎಂಬುದನ್ನು ಅರಿಯಬೇಕಿತ್ತು.
ಅದಕ್ಕೆಲ್ಲ ಉತ್ತರ ರೂಪವಾಗಿ ‘ನೆನಪೇ ಸಂಗೀತ’ ಪುಸ್ತಕವಿದೆ. ಆದರೆ ಲೇಖಕರದೇ ಮಾತಿನಂತೆ ಇಲ್ಲಿ ಬೇಕಂತಲೇ ಹೇಳದೇ ಉಳಿದುದು ಬಹಳಷ್ಟಿದೆ. ಹೇಳುವಷ್ಟನ್ನು ಅತ್ಯಂತ ಪ್ರಾಂಜಲವಾಗಿ ಅವರದೇ ವಿಶಿಷ್ಟವಾದ ಶೈಲಿಯಲ್ಲಿ ನಿರೂಪಿಸಿದ್ದಾರೆ. ಅವರ ಈ ಪ್ರಾಮಾಣಿಕ ನಿವೇದನೆ ಮನ ಮುಟ್ಟುತ್ತದೆ.

ಯೋಗೀಂದ್ರನೆಂಬ ಬಾಲಕನಾಗಿದ್ದವರು ಬಲವಂತವಾಗಿ ಅಥವಾ ಅನಿವಾರ್ಯವಾಗಿ ಹದಿನೈದನೇ ವಯಸ್ಸಿಗೆ ಬಾಲ ಸನ್ಯಾಸಿಯಾಗಿ ಪೀಠಾರೋಹಣ ಮಾಡಬೇಕಾಗಿ ಬಂದುದು, ಒಲ್ಲದ ಮನಸ್ಸಿನ ಅವರ ಮಾನಸಿಕ ತಳಮಳ, ಬುದ್ಧಿ, ತಿಳುವಳಿಕೆ ಬಂದ ಮೇಲೆ ತಾನು ಅಲ್ಲಿಗೆ ಸೇರಿದವನಲ್ಲ ಎಂಬ ತೀವ್ರ ಭಾವನೆ, ದ್ವಂದ್ವ ಮನೋಭಾವ, ಹಾಗಿದ್ದರೂ ಉಸಿರಾದ ಸಂಗೀತ, ಮೂಲ ಪಟ್ಟ ದೇವರ ಆರಾಧನೆಯಲ್ಲಿ ಶ್ರದ್ಧೆ, ಮುಂದೆ ತನ್ನೊಲವು ಎತ್ತವಿದೆ ಎಂಬ ಬಗ್ಗೆ ಸ್ಪಷ್ಟತೆ, ಗೆಳೆಯ ತೋಳ್ಪಾಡಿಯವರಲ್ಲಿ ಮನದ ಮಾತು ಬಿಚ್ಚಿಡುವುದು, ಆತ್ಮಸಾಕ್ಷಿಗೆ ಅನುಗುಣವಾಗಿ ನಡೆಯುವತ್ತ ದೃಢತೆ, ತಾನಿಲ್ಲದೇ ಹೋದಾಗ ಮಠ ನಡೆಯಲು ಸಕಲವನ್ನೂ ಸಿದ್ಧಪಡಿಸಿ ನಡೆಯುವ ಬದ್ಧತೆ, ಸರಳ ಲೌಕಿಕ ಬದುಕಿನ ಆಕಾಂಕ್ಷೆ… ಎಲ್ಲದರ ಚಿತ್ರಣ ತುಂಬ ಸುಂದರವಾಗಿ ಮೂಡಿ ಬಂದಿದೆ.
ಸನ್ಯಾಸತ್ವದ ಬಗ್ಗೆ ಅಪಾರ ಗೌರವ ಹೊಂದಿದ್ದರೂ ಅದು ವ್ಯಕ್ತಿಯ ಸ್ವಯಿಚ್ಛೆಯಿಂದಲೇ ಆಗಬೇಕು ಹೊರತು ಏನನ್ನೂ ಅರಿಯದ ವಯಸ್ಸಿನಲ್ಲಿ ಅಲ್ಲ ಎಂಬುದು ಅವರ ಮಾತು. ತಂದೆ ಗೋವಿಂದಾಚಾರ್ಯರು ಪಾರುಪತ್ತೆಗಾರರಾಗಿದ್ದ ಸುಬ್ರಹ್ಮಣ್ಯ ಮಠದಲ್ಲಿ ಮಗ ಸ್ವಾಮೀಜಿಗಳಾಗುವುದು ಅವರ ಕುಟುಂಬದಲ್ಲಿ ಎಲ್ಲರಿಗೂ ಇಷ್ಟವಿತ್ತು. ತಾಯಿ ಮಾತ್ರ ಅಳುತ್ತಿದ್ದರು. ಲೇಖಕರ ಮಾತಿನ ಪ್ರಕಾರ ಪೂರ್ವಾಶ್ರಮವೆಂಬುದು ಮಠಗಳಿಗಂಟಿದ ಶಾಪ. ಸ್ವಾಮಿಗಳಾದವರ ಸಂಬಂಧಿಕರ ನಡುವೆ ಮಠಗಳ ಅಪಾರ ಸ್ವತ್ತು, ಸಂಪತ್ತು, ಅಧಿಕಾರ, ಮನ್ನಣೆ, ಸೌಲಭ್ಯಗಳು ತಮ್ಮೊಳಗೇ ಉಳಿಯಬೇಕೆಂಬ ಆಶಯವಿದು. ಅಬೋಧ ಬಾಲಕನಿಗೆ ಯಾವ ಸಿದ್ಧತೆಯೂ ಇಲ್ಲದೇ ಸನ್ಯಾಸ ನೀಡುವುದರಿಂದ ಯಾವ ಆಧ್ಯಾತ್ಮ ಸಾಧನೆ ಅಥವಾ ದೇವ ಪ್ರೀತಿಯೂ ಕಾಣದು! ಒಲ್ಲದ ವೈರಾಗ್ಯವಾಗಿದ್ದರೂ ಆ ನಿರ್ಮಲ ಹಸಿರಿನ ಪರಿಸರ ಅವರ ಮನಕ್ಕೆ ಮುದ ನೀಡಿತ್ತು.
ಪಲಿಮಾರು ಮಠದ ರಘುವಲ್ಲಭ ತೀರ್ಥರ ಪೀಠ ಮತ್ತು ಸನ್ಯಾಸ ತ್ಯಾಗದ ಘಟನೆಯು ವಿದ್ಯಾಭೂಷಣರ ಮನದಲ್ಲಿ ಹಿಡಿದ ಸನ್ಯಾಸವನ್ನು ಬಿಡಲೂಬಹುದೆಂಬ ಪುಟ್ಟ ಅಲೆಯನ್ನು ಮೂಡಿಸಿತ್ತು. “ಮನಶುದ್ಧಿ ಇಲ್ಲದವಗೆ ಮಂತ್ರ ಫಲವೇನು?” ಎಂಬಂತೆ ಅವರ ಮನಸ್ಸಿನ ಹೊಯ್ದಾಟ ಮತ್ತು ಬಯಕೆ ಬ್ರಹ್ಮ ಜಿಜ್ಙಾಸೆಗೆ ಮತ್ತು ಅಧ್ಯಯನಕ್ಕೂ ತಡೆಯುಂಟು ಮಾಡಿತ್ತು. ಅವರಿಗೆ ಅದರ ಸ್ಪಷ್ಟ ಅರಿವಿತ್ತು.
ಈ ಮಧ್ಯೆ ಅವರು ಹಲವಾರು ಮನಸ್ಸಿಗೆ ತೃಪ್ತಿ ನೀಡಿದ ಅಭಿವೃದ್ಧಿ ಕಾರ್ಯಗಳನ್ನು ನಡೆಸಿದರು. ಅದರಲ್ಲಿ ಮುಖ್ಯವಾಗಿ ಬಿಳಿನೆಲೆಯಲ್ಲಿ ಪ್ರೌಢಶಾಲೆ ಸ್ಥಾಪನೆಗೊಂಡದ್ದು. ಅದಕ್ಕೆ ಧ್ವನಿ ಸುರುಳಿಗಳಿಂದ ಮತ್ತು ಸಂಗೀತ ಕಛೇರಿಗಳಿಂದ ಬಂದ ಸಂಭಾವನೆ ಬಳಸಿದರು. ಮರಣ ಹೊಂದಿದ ತಂದೆಯವರ ಸ್ಮರಣೆಯಲ್ಲಿ ಗೋವಿಂದ ಗಾನ ಸಭಾದ ಸ್ಥಾಪನೆ ಮತ್ತು ತೋಳ್ಪಾಡಿಯವರೊಡಗೂಡಿ ಪ್ರಮತಿ ಪ್ರಕಾಶನ ಎಂಬ ಪುಸ್ತಕ ಪ್ರಕಾಶನ ಸಂಸ್ಥೆ ಸ್ಥಾಪಿಸಿದರು.

ವಿದ್ಯಾಭೂಷಣರು ‘ಬರಿಗಾಲ ಭಾಗವತ’ ಎಂದೇ ಹೆಸರಾಗಿದ್ದ ಸಂಗೀತ ವಿದ್ವಾಂಸ ಪಾದೂರು ನಾರಾಯಣ ಐತಾಳರಲ್ಲಿ ನಾಲ್ಕೈದು ವರ್ಷ ಸಂಗೀತಾಭ್ಯಾಸ ಮಾಡಿದರು. (ಇವರು ನಮ್ಮ ಪಕ್ಕದ ಪಾದೂರಿನವರಾಗಿದ್ದು ಈ ಉಲ್ಲೇಖ ನನಗೆ ಬಹಳ ಸಂತೋಷದ ಜೊತೆಗೆ ಬೆರಗನ್ನೂ ನೀಡಿತು. ಗುರುಗಳಾದ ಐತಾಳರಲ್ಲಿ ನಾವೆಲ್ಲ ಏಳನೇ ತರಗತಿಯಲ್ಲಿ ಇರುವಾಗ ಒಂದಿಷ್ಟು ಸಂಗೀತಾಭ್ಯಾಸ ಮಾಡಿದ್ದೆವು. ಪ್ರತಿಫಲದ ಅಪೇಕ್ಷೆ ಇರದ ಅವರು ಇಷ್ಟೊಂದು ಪ್ರಸಿದ್ಧರಾದವರು ಎಂದು ನಿಜವಾಗಿಯೂ ಗೊತ್ತಿರಲಿಲ್ಲ. ಸರಳ ಸ್ವಭಾವದ ಅವರು ತೋರಿಸಿಕೊಂಡೂ ಇರಲಿಲ್ಲ. ಮುಂದೆ ಕಾಲೇಜಿನಲ್ಲಿ ಇರುವಾಗ ಕಾಲೇಜು ವಾರ್ಷಿಕ ಪತ್ರಿಕೆಗೆ ಅವರ ಪುಟ್ಟ ಸಂದರ್ಶನ ಮಾಡಿದ್ದೆ.) ಹೀಗೆಯೇ ವಿದ್ಯಾಭೂಷಣರದು ಅನೇಕ ವಿದ್ವಾಂಸರಲ್ಲಿ ಸಂಗೀತ ಸಾಧನೆ ನಡೆಯಿತು.
ಮಠಕ್ಕೆ ಆಶೀರ್ವಾದ ಪಡೆಯಲು ಬರುವ ನೂತನ ದಂಪತಿಗಳನ್ನು ಕಂಡರೆ ತನಗೀ ಭಾಗ್ಯವಿಲ್ಲದೇ ಹೋಯಿತಲ್ಲಾ ಎಂಬ ನೋವು. ಇಂತಹ ಮುಗ್ಧ ಮನದ ಲೇಖಕರಿಗೆ ಇದ್ದದ್ದು ಸಾಧಾರಣವಾದ ಜೀವನ್ಮುಖಿ ಆಸೆಗಳು. ಮೆಚ್ಚಿನ ಮಡದಿ, ಬೆಚ್ಚನೆಯ ಮನೆ ಮತ್ತು ವೆಚ್ಚಕ್ಕೆ ಹೊನ್ನು… ಸಂಗೀತ ಮತ್ತು ಸಾಹಿತ್ಯ ಜೊತೆಗೆ.ಇವೆಲ್ಲವೂ ಸಾತ್ವಿಕವಾಗಿ ಸಹಜವಾಗಿ ಬರಲಿ ಎಂಬ ಆದರ್ಶ. ಇಷ್ಟೊಂದು ಮಾನಸಿಕ ತೊಳಲಾಟದ ಬದಲು ಪೀಠದಲ್ಲಿ ಇದ್ದಂತೆಯೇ ಗುಟ್ಟಾಗಿ ಅಥವಾ ಒಂದಿಷ್ಟು ಮರ್ಯಾದೆಗಟ್ಟರೆ ಗೊತ್ತಾಗಿಯೋ ಇವೆಲ್ಲವುಗಳನ್ನು ಪಡೆಯಬಹುದಿತ್ತು. ಆದರೆ ಅವರ ಆದರ್ಶ ಮತ್ತು ಹಿರಿಯರಿಂದ ಬಂದ ಜೀವನ ಮೌಲ್ಯಗಳು ಹಾಗೆ ಮಾಡಲು ಒಪ್ಪಲೇ ಇಲ್ಲ. ಒಂದೊಮ್ಮೆ ಲೌಕಿಕ ಬದುಕು ನಡೆಸುವಾಗ ಹೆಂಡತಿ ಮಕ್ಕಳನ್ನು ಸಾಕಲು ತಾನು ಸಂಪಾದಿಸಲು ಯೋಗ್ಯನಾಗಬಲ್ಲೆನೇ ಎಂಬ ಅನುಮಾನಕ್ಕೆ ಸಂಗೀತ ಕೈ ಹಿಡಿಯುತ್ತದೆ ಎಂಬ ನಂಬಿಕೆಯೇ ಭರವಸೆ.
ಮುಂದೆ ಬಳ್ಳಾರಿಯ ಸಂಗೀತ ಕಚೇರಿಯಲ್ಲಿ ಮನದನ್ನೆ ರಮಾರೊಂದಿಗಿನ ಭೇಟಿ. ಪೇಜಾವರರೂ ಸೇರಿದಂತೆ ಅನೇಕ ಗಣ್ಯರು ಅನುನಯಿಸಿದರೂ ಅವರನ್ನೇ ಮದುವೆಯಾಗುವನೆಂಬ ದೃಢತೆ. ಆ ಕಡೆಯಲ್ಲಿ ರಮಾರೂ ಅಷ್ಟೇ. ತನ್ನ ಲೌಕಿಕ ಬದುಕಿನ ಆಕಾಂಕ್ಷೆಗೆ ಅಂತಸ್ತು, ವಿದ್ಯೆ ಮತ್ತು ವಯಸ್ಸು ಎಲ್ಲದರಲ್ಲೂ ಅಂತರವಿರುವ ಮುಗ್ಧೆಯ ಬದುಕನ್ನು ಎಳೆಸುವುದು ಸರಿಯೇ ಎಂಬ ಅಳುಕು. ಕೈಯಲ್ಲಿ ಕಾಸಿಲ್ಲದ ಹೊತ್ತಲ್ಲಿ ಎಲ್ಲವನ್ನೂ ಮೀರಿ ನಡೆದ ಮದುವೆ. ಅದಕ್ಕೆ ಮೊದಲು ಮಠದಲ್ಲಿ ಸರ್ವ ವ್ಯವಸ್ಥೆಗಳೊಡನೆ ನೂತನ ಸ್ವಾಮೀಜಿಯವರ ಪೀಠಾರೋಹಣ. ಅವರಿಗೆ ಇರುವ ಒಂದು ಸಂತೋಷವೆಂದರೆ ಎಲ್ಲರೂ ಅವರ ಈ ಬದುಕನ್ನೂ ಒಪ್ಪಿ ಗೌರವಿಸಿದ್ದು. ಇಬ್ಬರು ಮುದ್ದಾದ ಮಕ್ಕಳು ಜನಿಸಿ ಕುಟುಂಬ ಸಂಪೂರ್ಣವಾಗಿದ್ದು. ಆ ಮಕ್ಕಳೂ, ಮೇಧಾ ಮತ್ತು ಅನಿರುದ್ಧ,ಈಗ ದೊಡ್ಡವರಾಗಿದ್ದು ತಮ್ಮ ಕ್ಷೇತ್ರಗಳಲ್ಲಿ ಹೆಸರು ಪಡೆದಿದ್ದಾರೆ.
ದೊರೆತಂತಹ ಬದುಕನ್ನು ಸ್ವೀಕರಿಸದೇ ಪ್ರವಾಹಕ್ಕೆ ವಿರುದ್ಧವಾಗಿ ಈಜಿ, ತನ್ನ ಗೊಂದಲಗಳನ್ನು ಮೀರಿ ದೃಢವಾಗಿ ನಿಂತು ತನಗೆ ಬೇಕಾದ ಬದುಕನ್ನೇ ಆಯ್ಕೆ ಮಾಡಿದ ವಿದ್ಯಾಭೂಷಣರ ಈ ಆತ್ಮಕಥನ ಹಾಗೂ ಆಗಿರುವ ಒಳ್ಳೆಯ ಪರಿಣಾಮಗಳೆಲ್ಲವೂ ಹಾಡುವ ಹರಿ ಸಂಕೀರ್ತನೆಯ ಅಮೃತ ಫಲವೆಂದೇ ತನ್ನ ನಂಬಿಕೆ ಎಂಬ ಆ ವಿನಮ್ರತೆಯೂ ನಮಗೆ ಉತ್ತಮ ಸಂದೇಶವನ್ನು ನೀಡುತ್ತದೆ. ಈ ಪುಸ್ತಕದಲ್ಲಿ ವಿದ್ಯಾಭೂಷಣರ ಕುಟುಂಬದ ಜೊತೆಗಿನ ಒಂದಾದರೂ ಚಿತ್ರ ಇರಬೇಕಿತ್ತೆನ್ನುವುದು ನನ್ನ ಚಿಕ್ಕ ತಕರಾರು. ಒಟ್ಟಿನಲ್ಲಿ ಒಂದು ಸುಮನೋಹರವಾದ ಓದಿಗೆ ನಮ್ಮನ್ನು ಕರೆದೊಯ್ಯುವ ಚಂದದ ಪುಸ್ತಕವಿದು. ಓದಿ ನೋಡಿ.
- ರಶ್ಮಿ ಉಳಿಯಾರು
