ಪರಿಸರವಾದಿ ಚಿದಾನಂದ್ ಯುವ ಸಂಚಲನ ಅವರು ಇತ್ತೀಚಿಗೆ ನೇತ್ರಾವತಿ ಶಿಖರದಲ್ಲಿ ಚಾರಣಕ್ಕೆ ಹೋದಾಗ ತಮ್ಮ ಕ್ಯಾಮರಾ ಕಣ್ಣುಗಳಲ್ಲಿ ಸೆರೆ ಹಿಡಿದ ಕೆಲವು ಚಿತ್ರಗಳನ್ನು ಚಿತ್ರರಸಿಕರ ಮುಂದೆ ಇಡುವುದರ ಜೊತೆಗೆ ತಮ್ಮ ಅನುಭವದ ಬುತ್ತಿಯನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಓದಿ…
ಪ್ರಕೃತಿ ಅಗಾಧವಾದದ್ದು ತಮ್ಮ ಮಡಿಲಿನಲ್ಲಿ ಏನೆಲ್ಲಾ ವಿಸ್ಮಯ ವಿಚಿತ್ರಗಳನ್ನು ಅಡಗಿಸಿಕೊಂಡಿದೆ ಎಂದು ತಿಳಿದುಕೊಳ್ಳಲು ಈ ಜೀವನ ಸಾಗದು ಆದರೆ ನಾವು ಬದುಕಿದ ಸಮಯದಲ್ಲಿ ಏನನ್ನೆಲ್ಲ ಗಮನಿಸಿದ್ದೇವೆ ಅದನ್ನು ಅರಿತುಕೊಂಡಿದ್ದೇವೆ ಎಂಬುದು ಸಹ ತುಂಬಾ ಮುಖ್ಯ ಅನಿಸುತ್ತದೆ ನನಗೆ.
ಎಲ್ಲವೂ ಕಣ್ಣ ಮುಂದೆಯೇ ಇರುತ್ತದೆ, ಕೆಲವು ಕಿವಿಗೆ ಕೇಳುವಂತೆ ಇರುತ್ತದೆ, ಇನ್ನು ಕೆಲವು ವಾಸನೆ ಮೂಲಕ ಗ್ರಹಿಸುವುದಾಗಿರುತ್ತದೆ, ಸ್ಪರ್ಶದ ಗುರುತಿಸುವಿಕೆಯು. ಇವೆಲ್ಲವೂ ಮೌನದ ನಡಿಗೆಗೆ ಹತ್ತಿರವಾಗಿರುತ್ತದೆ, ಚಾರಣ ಎಂದರೆ ಯಾವುದೋ ನಿಗದಿತ ಸ್ಥಳಕ್ಕೆ ತಲುಪಿ ಹಿಂತಿರುಗುವುದಲ್ಲ ಚಾರಣದ ಪ್ರತಿಯೊಂದು ಹೆಜ್ಜೆಯೂ ಹೊಸ ಕಲಿಕೆಯ ಸ್ಥಿತಿ ಆಗಿರಬೇಕು, ಆಗ ಸಣ್ಣ ಸಣ್ಣ ಸಂಗತಿಯು ಅಚ್ಚರಿಯ ಸೆಲೆಯಾಗಿ ಆಶ್ಚರ್ಯ ಪಡುವಂತೆ ನಮ್ಮನ್ನು ಮೂಕವಿಸ್ಮಿತವಾಗಿ ಬೆರಗುಗೊಳಿಸುತ್ತದೆ.

ನಿರ್ಜೀವಿಯಂತೆ ಕಾಣುವ ಆಕೃತಿಗಳು ಸಹ ಜೀವವಿರುವ ಜೀವಿಗಳಾಗಿರುತ್ತದೆ, ಕೆಲವೊಮ್ಮೆ ಜೀವವೇ ಇಲ್ಲದ ಜೀವಿಯ ಗುಣಲಕ್ಷಣಗಳುಳ್ಳ ಆಕೃತಿಯಂತೆ ಕಂಡು ಬೆರಗುಗೊಳಿಸಲೂ ಬಹುದು, ಜೊತೆಗೆ ನಮ್ಮ ಜೀವ ಬಾಯಿಗೆ ಬರುವಂತೆ ಬೆಚ್ಚಿಬಿಳಿಸಬಹುದು ಸಹ. ಇಂತಹ ಅನುಭವಗಳು ತಮ್ಮೆಲ್ಲರಿಗೂ ಒಂದಲ್ಲ ಒಂದು ರೀತಿಯಲ್ಲಿ ಎದುರಾಗಿರುತ್ತದೆ.
ಇದುವರೆಗೂ ಭೂಮಿಯ ಮೇಲೆ ಗುರುತಿಸಲಾಗಿರುವ ಜೀವಿಗಳ ಸಂಖ್ಯೆ – 1,672,000, ಭಾರತದ ವ್ಯಾಪ್ತಿಯಲ್ಲಿ ಪ್ರಧಾನ ಜಾತಿ ಹಾಗೂ ಒಳ ಜಾತಿಗೆ ಸೇರಿದ 30,000ಕ್ಕೂ ಮೇಲ್ಪಟ್ಟ ಕೀಟ ಜಾತಿಗಳಿವೆ, 2,500ಕ್ಕೂ ಹೆಚ್ಚು ಜಾತಿಯ ಸರ್ಪಗಳು ಪ್ರಪಂಚದಲ್ಲಿ ಗುರುತಿಸಲಾಗಿದೆ (ಕೆಲವು ಅಂಕಿ ಅಂಶಗಳನ್ನು ಮಾತ್ರ ಉದಾಹರಣೆಗೆ ತೆಗೆದುಕೊಂಡಿದ್ದೇನೆ) ಇದರಲ್ಲಿ ನಮಗೆಷ್ಟು ಗೊತ್ತು ಎಂದು ಪ್ರಶ್ನೆ ಮಾಡಿಕೊಂಡರೆ ಬೆರಳೆಣಿಕೆ ಉತ್ತರದ ಜೊತೆಗೆ ನಾವುಗಳು ತಬ್ಬಿಬ್ಬಾಗುವುದು ಸಹಜ. ಹಾಗೆಂದು ಇವೆಲ್ಲವೂ ಒಂದೇ ಕಡೆ ಇರುತ್ತದೆ ಎಂದಲ್ಲ, ಆಯಾ ಸ್ಥಳಕ್ಕೆ ಸೂಕ್ತವಾಗಿ ಬದುಕಲ್ಲ ಜೀವಿಗಳು ಕಾಣಬಹುದು. ಎಲ್ಲವೂ ನಮಗೆ ತಿಳಿದರು ಬೇಕೆಂದು ಏನು ಇಲ್ಲ. ಚಾರಣದ ಹಾದಿಯಲ್ಲಿ ಕಲ್ಲು ಮುಳ್ಳುಗಳಲ್ಲದೆ ಬೇರೇನು ಸಿಗುತ್ತದೆ ಎಂದು ಪ್ರಶ್ನೆ ಮಾಡಿಕೊಂಡರೆ ಏನನ್ನೆಲ್ಲ ತಿಳಿದುಕೊಳ್ಳಲು ಅವಕಾಶವಿದೆ ಎಂದು ಹೇಳಲು ಪ್ರಯತ್ನಿಸುತ್ತಿದ್ದೇನೆ ಅಷ್ಟೇ.
5600 ಪ್ರಾಣಿಗಳು ಹಾಗೂ 30,000 ಸಸ್ಯಗಳು ವಿವಿಧ ದೇಶಗಳಲ್ಲಿ ಅಪಾಯದ ಅಂಚಿನಲ್ಲಿರುವ, ನಿರ್ವಂಶವಾಗುವ ಹಂತಕ್ಕೆ ತಲುಪಿದೆ. ಇಂತಹ ವಿಚಾರಗಳು ನಮ್ಮನ್ನು ಕಾಡಬೇಕಿದೆ, ಜಿಗಣೆಯ ಹಿಡಿತವು ನಮಗೆ ಹೇಗೆ ತಿಳಿಯುವುದಿಲ್ಲವೋ ಹಾಗೆ ಕಳೆದುಕೊಳ್ಳುತ್ತಿರುವ ಜೀವಿಗಳ ಮೌಲ್ಯವು ನಮಗೆ ಅರಿಯದಂತೆ ಕಳೆದುಕೊಂಡ ನಂತರ ಅನುಭವಕ್ಕೆ ಬಂದರೆ ಪ್ರಯೋಜನವೂ ಇಲ್ಲದಂತಾಗುತ್ತದೆ. ಬಹುಶಃ ನಾವು ಎಲ್ಲವನ್ನು ತಿಳಿದುಕೊಳ್ಳುವುದಕ್ಕಿಂತ ನಮಗೆ ತಿಳಿಯದಂತೆ ಬದುಕುತ್ತಿರುವ ಜೀವಿಗಳಿಗೆ ತೊಂದರೆ ಕೊಡದಂತೆ ನಮ್ಮಿಂದ ಅವುಗಳಿಗೆ ಅಪಾಯ ಬರದಂತೆ ಎಚ್ಚರ ವಹಿಸಬೇಕಾದರೂ ನಮ್ಮ ಸುತ್ತಮುತ್ತಲು ಏನೆಲ್ಲ ಇದೆ ಎಂಬುದು ಅರಿತುಕೊಳ್ಳುವುದು, ಅರಿತುಕೊಳ್ಳಲು ಪ್ರಯತ್ನಿಸುವುದು ಉಳಿವಿಗೆ ದಾರಿಯಾಗುತ್ತದೆ.
ಚಾರಣದ ಹಾದಿ ಅಧ್ಯಾತ್ಮದ ದಾರಿಯಾಗಿರಬಹುದು ಕೆಲವರಿಗೆ ನೆಮ್ಮದಿಯ ಹಾದಿಯಾಗಬಹುದು, ಪ್ರಶ್ನೆಗೆ ಉತ್ತರವಾಗಬಹುದು, ಜೀವನಕ್ಕೆ ಸ್ಫೂರ್ತಿಯಾಗಬಹುದು, ಕಳೆದುಕೊಳ್ಳ ಬಹುದು ಕಳೆದು ಹೋಗಿದ್ದು ಸಿಗಬಹುದು, ಒಂಚೂರು ಯಾಮಾರಿದರೆ ಚಟಕ್ಕೆ ಹೆಣವಾಗಬಹುದು, ಅನುಭವಕ್ಕೆ ಬಂದಂತೆ ಅನುಭವಿಸಿದಂತೆ ಒಬ್ಬರಿಗೂ ಒಂದೊಂದು ಆಯಾಮಗಳು.
ಕಳೆದ ವಾರ ನೇತ್ರಾವತಿ ಶಿಖರದ ಚಾರಣದ ಹಾದಿಯಲ್ಲಿ ಕಂಡಂತಹ ಕೆಲ ಚಿತ್ರಣಗಳ ಜೊತೆ ಒಂದಷ್ಟು ಮಾಹಿತಿ ಹಂಚಿಕೊಳ್ಳೋಣವೆನಿಸಿತು ಹಾಗಾಗಿ ಕ್ಷಣಕ್ಕೆ ಬಾಸವಾದ ಪದಗಳನ್ನು ಪೋಣಿಸಿ ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ.
- ಕ್ಯಾಮರಾ ಹಿಂದಿನ ಕಣ್ಣು, ಲೇಖನ : ಚಿದಾನಂದ್ ಯುವ ಸಂಚಲನ (ಪರಿಸರವಾದಿಗಳು, ಲೇಖಕರು, ಛಾಯಾಗ್ರಾಹಕರು) ದೊಡ್ಡಬಳ್ಳಾಪುರ.
