ಹಾಸ್ಯ ಕತೆಗಾರ್ತಿ ಸುಮಾ ರಮೇಶ್ ಅವರ ಹಾಸ್ಯ ಪ್ರಜ್ಞೆ ಹಾಗು ನಿಂಗಿಯ ನಾಗರೀಕ ಪ್ರಜ್ಞೆಯನ್ನು ಈ ಪುಟ್ಟ ಸಂಭಾಷಣೆಯಲ್ಲಿ ತಿಳಿಯಬಹುದು. ತಪ್ಪದೆ ಮುಂದೆ ಓದಿ…
‘ ಅಕ್ಕಾ ಟಿವಿ ನೋಡಿದ್ರಾ ರಾತ್ರಿ? ‘ ಗುಡಿಸಿದ ಕಸವನ್ನು ಮೊರಕ್ಕೆತ್ತಿದ ನಿಂಗಿ ಪೊರಕೆಯನ್ನು ಕೈಯಲ್ಲಿ ಹಿಡಿದೇ ನನ್ನೆಡೆಗೆ ತಿರುಗಿದಳು.
‘ ಟಿವಿಲೇನು ಬಿಗ್ ಬಾಸಾ ? ‘
‘ ಅಲ್ಲ ಕಣಕ್ಕ ಬಂದರೋ ಬಂದರೋ…ಭಾವ ಬಂದರೋ…ಅಂತ ‘
‘ ಓ…ಸು ಫ್ರಂ ಸೋ ನಾ…? ‘
‘ ಏ, ಆ ಸೂಸು ಪಿಚ್ಚರ್ ಅಲ್ಲ ಕಣಕ್ಕಾ ನ್ಯೂಸು, ನ್ಯೂಸು…!
‘ ಪರ್ವಾಗಿಲ್ವೇ.. ನೀನೂ ನ್ಯೂಸ್ ನೋಡ್ತೀಯೇನೇ ನಿಂಗಿ ?’
‘ ಹ್ಞೂಂ ಕಣಕ್ಕ ಇನ್ನೇನ್ ಮಾಡನ ಏಳಿ ? ಬಿಗ್ ಬಾಸ್ ನಾಗೆ ಎಲ್ಲಾ ಒಳ್ಳೆ ನಾಯ್ ಕಿತ್ತಾಡ್ದಂಗೆ ಕಿತ್ತಾಡ್ತವೆ. ಇನ್ನ ಆ ಧಾರಾವಾಯಿ ಏನ್ ನೋಡ್ತೀರಾ… ಬರೀ ಮನೆಮುರಿಯ ಕತೆನೇ ಇರ್ತದೆ , ಆ ಸಾಸ್ತ್ರ ಏಳರಂತು ಕೇಳ್ಳೇ ಬೇಡಿ ಅಮಾಸೆ, ಗ್ರಾಣ ಅಂತ ದಿನುಕ್ಕೊಂದ್ ಏಳಿ ಎದ್ರುಸ್ತರೆ… ಅದುಕ್ಕೆ ಈಗೀಗ ಅದುನ್ನೆಲ್ಲಾ ಬುಟ್ಟು ಬರೀ ವಾರ್ತೆ ನೋಡ್ತಾ ಇದೀನಿ ‘
‘ ಬಿಡು ಒಳ್ಳೇದಾಯ್ತು ‘
‘ ನೆನ್ನೆ ನ್ಯೂಸಲಿ ಬೀದಿನಾಗೆ ಕಸ ಎಸೀತರಲಕ್ಕಾ ಅವ್ರಿಗೆಲ್ಲಾ ಚೆನಾಗಿ ಬುದ್ದಿ ಕಲುಸ್ತಾ ಇದ್ರು ‘
‘ ಏನು ದಂಡ ಹಾಕಿದ್ರಾ ?’
‘ ದಂಡುಕ್ಕೆಲ್ಲಾ ಯಾರೂ ಬಗ್ಗಲ್ಲ ಅಂತ ಅವ್ರಿಗೂ ಗೊತ್ತು ಅದುಕ್ಕೆ ಬೀದಿಗ್ ಕಸ ಎಸ್ದವ್ರುನ್ನೆಲ್ಲಾ ಸಿಸಿ ಟೀವಿನಾಗೆ ನೋಡಿ ಅವ್ರ್ ಮನೆ ಮುಂದುಕ್ಕೆ ಪೂರ್ತಿ ಒಂದ್ ವ್ಯಾನಿನ್ ಕಸನೆಲ್ಲಾ ಸುರೀತಾ ಅವ್ರೆ ‘
‘ ಅಯ್ಯೋ ದೇವ್ರೆ …ಯಾರು ?’
‘ ಇನ್ಯಾರಕ್ಕಾ ಅದೇ ಮುನ್ಸಿಪಾಲ್ಟಿಯವ್ರು ! ವ್ಯಾನ್ ನಾಗೆ ಕಸ ತಂದು ತಮ್ಟೆ ಬಾರುಸ್ಕಂಡು ಬಂದರೋ ಬಂದರೋ… ಬಾವ ಬಂದರೋ… ಅಂತ ಆಡೇಳ್ಕಂಡು ಕುಣಿಯದುನ್ನ ಟಿವಿ ನಾಗೆ ತೋರ್ಸಿದ್ರು ‘
‘ ಅಯ್ಯೋ, ಅದುನ್ನ ತೆಗ್ಸಕೆ ಮತ್ತೆ ಅದೇ ವ್ಯಾನುನ್ನೇ ಕರೀಬೇಕು ಅಷ್ಟೇ ‘
‘ ಅಕ್ಕಾ ತೆಗ್ಸ ಕತೆ ಇರ್ಲಿ ಅದ್ರಾಗೆ ಕಸ ಮುಸ್ರೆ, ಡೇಪರ್ರು ಪ್ಯಾಡು ಬಾಡು ಎಲ್ಲಾ ಮಿಕ್ಸಾಗಿ ನಾರ್ತಾ ಇತ್ತು. ಅವ್ರು ಇನ್ಮೇಕೆ ಕಸ ಬುಡಿ ಕತ್ರುಸಿದ್ ಉಗ್ರುನೂ ಆಚಿಗೆಸಿಯಕಿಲ್ಲ. ಕಸ ರೋಡಿಗೆಸಿತರಲ್ಲಾ ಆಗ ಅವ್ರ್ ಪೋಟವ, ವಿಡಿಯೋವ ತೆಗ್ದು ಕಳ್ಸಿದ್ರೆ ಗೋರ್ಮೆಂಟರು ದುಡ್ಡ್ ಬೇರೆ ಕೊಡ್ತರಂತೆ ಕಣಕ್ಕಾ. ನಮ್ಮನೆ ಮೂದೇವಿಗೆ ಆ ಕೆಲ್ಸನಾದ್ರೂ ಮಾಡು ಅನ್ಬೇಕು ‘
‘ ಆದ್ರು ಈ ವ್ಯಾನು ಟೈಮಿಗ್ ಸರ್ಯಾಗಿ ಬರಲ್ಲ ಬಿಡು. ಗಂಡ ಹೆಂಡ್ತಿ ಇಬ್ರೂ ಕೆಲ್ಸಕ್ಕೆ ಹೋಗವ್ರು ಏನ್ ಮಾಡ್ತಾರೆ ಹೇಳು ?’
‘ ಏನಿಲ್ಲಾ ಅಕ್ಕ ಗೇಟೊಳ್ಗೆ ಕಸ ಇಟ್ಟೋದ್ರೆ ವ್ಯಾನರೇ ಒಳಿಕ್ ಬಂದು ತಗ ಓಯ್ತರೆ. ಒಂದೈವತ್ತೋ ನೂರೋ ಜಾಸ್ತಿ ಕೊಟ್ರಾತು. ಅವ್ರು ದುಡ್ ಬಿಚ್ದಲೆ ಬೀದಿನಾಗೆ ಎಸ್ದೋಗದೇ ಸುಲ್ಭ ಅಂತ ಆಕೋಯ್ತರೆ. ಒಂದಿಬ್ರಿಗೆ ಇಂಗ್ ಮಾಡಿದ್ರೆ ಎಲ್ರೂ ಬುದ್ಧಿ ಕಲ್ತ್ ಗತರೆ ಬುಡಿ ‘
‘ ಗೇಟ್ ಹತ್ರ ಕಸ ಇಟ್ರೆ ನಾಯಿ ಕಾಗೆ ಎಲ್ಲಾ ಎಳ್ದಾಕಿ ರಂಪ ಮಾಡಿರ್ತವೆ ಕಣೇ ‘
‘ ಅದೂ ಸರೀನೆ ಕಣಕ್ಕ. ಈ ಮುನ್ಸಿಪಾಲ್ಟಿಯರ್ದೂ ತಪ್ಪದೆ ಬುಡಿ. ಕಸುದ್ ವ್ಯಾನುನ್ನ ಟೇಮಿಗ್ ಸರೀಗೆ ಕಳುಸ್ಬೇಕು ಇಲ್ದಿದ್ರೆ ಬೇರೆ ಎವಸ್ಥೆ ಮಾಡ್ಬೇಕು ‘
‘ ಎಲ್ಲಾ ಕಳ್ರು ಬಿಡು ಎಲೆಕ್ಷನ್ ಹತ್ರ ಬಂದಾಗ ಮಾತ್ರ ಎಲ್ಲಾ ವ್ಯವಸ್ಥೆ ಮಾಡ್ತಾರೆ ‘
‘ ನ್ಯೂಸ್ ನಾಗೆ ಆ ರಂಗಣ್ಣ ಏಳ್ತಾ ಇದ್ರು ಕಣಕ್ಕಾ ಈ ಆಪೀಸರ್ಗಳು ಅತ್ತ್ ವ್ಯಾನ್ ಬುಡತಕೆ ಎಲ್ಡೋ ಮೂರೋ ವ್ಯಾನ ಬುಟ್ಟು ಎಂಟು ಅತ್ತು ಕಳ್ಸಿದಿವಿ ಅಂತ ಲೆಕ್ಕ ತೋರುಸ್ತರಂತೆ. ಥೋ…! ಆ ಕಸುದ್ ದುಡ್ನೂ ತಿಂತವಲಕ್ಕ ಅದೇನು ಒಟ್ಟೆನೋ ಕಸುದ್ ತೊಟ್ಟಿನೋ ಅಂತ!’
‘ ದುಡ್ಡು ಅಂದ್ಮೇಲೆ ಎಲ್ಲಾ ಒಂದೇ ಕಣೇ…ಕಸುದ್ದಾದ್ರೇನು ಬೆಸುದ್ದಾದ್ರೇನು ಅನ್ನೋ ಕಾಲ ಇದು ‘
‘ ನಮ್ ಜನನು ಅಂತರೆಯ ಬುಡಿ…ನೆಟ್ಟುಗೆ ಅಸಿ ಕಸ ಒಣ್ಗಿದ್ ಕಸ ಬ್ಯಾರೆ ಮಾಡಿ ಆಕಿ ಅಂತ ವ್ಯಾನಿಗೆ ಮೈಕ್ ಆಕಿ ಬಡ್ಕಂಡ್ರೂ ಎಲ್ಲನೂ ಬೆರ್ಕೆ ಮಾಡಿ ಆಕ್ತರೆ. ನಾನೊಬ್ಳೇ ಕಣಕ್ಕಾ ಬ್ಯಾರೆ ಮಾಡಿ ತಗಂಡೋಗದು ‘
‘ ನೀನ್ ಬಿಡು ನಿಂಗಿ… ಎಲ್ರಿಗೂ ನಿನ್ನಂಗೆ ನಾಗರಿಕ ಪ್ರಜ್ಞೆ ಇರ್ಬೇಕಲ್ಲಾ ? ಏನೇ ಆದ್ರೂ ನ್ಯೂಸ್ ನೋಡೋಕೆ ಶುರು ಮಾಡಿದ್ಮೇಲೆ ಭಾರೀ ಬುದ್ವಂತೆ ಆಗಿದೀಯ ಬಿಡು ‘
‘ ಪಕ್ಕುದ್ಮನೆ ಅಕ್ಕನೂ ಅಂಗೇ ಅಂತು ಕಣಕ್ಕಾ. ಇನ್ನೂ ಬುದ್ವಂತೆ ಆಗ್ಬೇಡ ನಿಂಗಿ ನಮಿಗೆಲ್ಲಾ ಪ್ರಾಬ್ಲಮ್ ಆಯ್ತದೆ ಅಂತ ಬೇರೆ ಅಂದ್ರು …’ ಎನ್ನುತ್ತಾ ನನ್ನ ಮುಖವನ್ನೇ ದಿಟ್ಟಿಸಿದಳು. ನಾನು ಹೆಗಲು ಮುಟ್ಟಿಕೊಳ್ಳುತ್ತಾ ಮೆಲ್ಲನೆ ಮೇಲೆದ್ದೆ.
- ಸುಮಾ ರಮೇಶ್, ಹಾಸನ.
