ನೀನಿಲ್ಲದ ಹಾದಿ, ಬತ್ತಿ ಬರಿದಾದ ನದಿ, ಹರಿದುಹೋದ ಕೌದಿ…ಪ್ರೇಮಿಯ ದಿನದಂದು ಖ್ಯಾತ ಕತೆಗಾರ ಕೇಶವ ರೆಡ್ಡಿ ಹಂದ್ರಾಳ ಅವರ ಮನದಾಳದಲ್ಲಿ ಮೂಡಿದ ಕವಿತೆ, ತಪ್ಪದೆ ಮುಂದೆ ಓದಿ…
ನೀನಿಲ್ಲದ ಮನೆ
ಕಾಳಿಲ್ಲದ ತೆನೆ
ಹಣ್ಣಿಲ್ಲದ ಗೊನೆ
ನೀಲ್ಲದ ಊರು
ನೀರಿಲ್ಲದ ಬೇರು
ರಥವಿಲ್ಲದ ತೇರು
ನೀನಿಲ್ಲದ ಬೀಡು
ಜೇನಿಲ್ಲದ ಗೂಡು
ಹಸಿರಿಲ್ಲದ ಕಾಡು
ನೀನಿಲ್ಲದ ಕ್ಷಣ
ಒಕ್ಕಲಿಲ್ಲದ ಕಣ
ಬಿಲ್ಲಿಲ್ಲದ ಬಾಣ
ನೀನಿಲ್ಲದ ನೆರಳು
ಕಗ್ಗತ್ತಲ ಇರುಳು
ದ್ವನಿಯಿಲ್ಲದ ಕೊರಳು
ನೀನಿಲ್ಲದ ಹಾದಿ
ಬತ್ತಿ ಬರಿದಾದ ನದಿ
ಹರಿದುಹೋದ ಕೌದಿ
ನೀನಿಲ್ಲದ ನಾನು
ನೀರ ಹೊರಗಿನ ಮೀನು
ಚುಕ್ಕಿ ಚಂದ್ರಮರಿಲ್ಲದ ಬಾನು
ನೀನಿಲ್ಲದ ಪಯಣ
ಒಣಗಿಹೋದ ತೋರಣ
ಸಿಹಿಯಿಲ್ಲದ ಹೂರಣ
- ಕೇಶವ ರೆಡ್ಡಿ ಹಂದ್ರಾಳ
