‘ನೀನು ನಿನ್ನೊಳಗೆ ಖೈದಿ’ ಕೃತಿ ಪರಿಚಯ

ಅನುಷ್ ಶೆಟ್ಟಿಯವರ ‘ನೀನು ನಿನ್ನೊಳಗೆ ಖೈದಿ’ ಕೃತಿಯ ಕುರಿತು ಗೌತಮಿ ಗಿರೀಶ್ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಕೃತಿ : ನೀನು ನಿನ್ನೊಳಗೆ ಖೈದಿ
ಲೇಖಕರು : ಅನುಷ್ ಎ ಶೆಟ್ಟಿ
ಪ್ರಕಟಣೆ : ಅನುಗ್ರಹ ಪ್ರಕಾಶನ
ಪುಟಗಳು : ೨೪೦
ಬೆಲೆ : ೧೮೦/-

ಅನುಷ್ ಶೆಟ್ಟಿಯವರ ಯಾವ ಪುಸ್ತಕವೂ ಓದಿಲ್ಲದ ನನಗೆ ಬಲವಂತ ಮಾಡಿ ಓದುವಂತೆ ಮಾಡಿದ್ದು ನನ್ನ ಸ್ನೇಹಿತ. ಅದಕ್ಕೆ ಅವನಿಗೆ ನಾನು ಕೃತಜ್ಞಳೂ ಹೌದು , ಇಲ್ಲವೆಂದಿದ್ದರೆ ಇಷ್ಟು ಒಳ್ಳೆಯ ಕೃತಿ ಓದದೇ ಮೋಸ ಮಾಡಿಕೊಳ್ಳುತ್ತಾ ಇದ್ದೆ. ಅವನಿಗೆ ಈ ಪುಸ್ತಕದ ಬಗ್ಗೆ ಗೊತ್ತಾದ ಕೂಡಲೇ ನನ್ನ ಬಳಿ ಹೇಳಿದ ಮಾತು ” ನಿಂಗ್ ಈ ಕಾನ್ಸೆಪ್ಟ್ ತುಂಬಾ ಇಷ್ಟ ಆಗತ್ತೆ ಮಿಸ್ ಮಾಡ್ಕೋಬೇಡ ಮೊದ್ಲು ಓದು” ಅಂತ. ನನ್ನ ಹತ್ತಿರ ಪುಸ್ತಕವಿಲ್ಲವೋ ಎಂದಾಗ ಅವನೇ ಕಳಿಸಿ ಸಹ ಕೊಟ್ಟ.

ಅವನ ಕಾಟಕ್ಕೆ ಮಣಿದು ೪ ಗಂಟೆಗೆ ಒಂದು ಕಾಫೀ ಲೋಟದ ಜೊತೆ ಪುಸ್ತಕ ಹಿಡಿದು ಕೂತ ನನಗೆ ಕಾಲದ ಪರಿವೇ ಇಲ್ಲದೇ ಒಂದೇ ಬಾರಿ ಇಡೀ ಪುಸ್ತಕ ಓದಿದೆ. ಆಹಾ ಎಷ್ಟು ಚಂದದ ಪುಸ್ತಕ ಅಂತ ಪುಸ್ತಕ ಮುಚ್ಚಿ ಟೈಂ ನೋಡಿದಾಗ ಆಗಲೇ ೭ ಗಂಟೆ ಆಗಿತ್ತು.

ಪುಸ್ತಕ ಓದಿ ತಿಂಗಳಾದರೂ ಕಾಡುವ ವಿಚಾರಗಳು , ಹಾಗಾದ್ರೆ ಪುಸ್ತಕದ ಒಳಗೆ ಏನಿದೆ? ನೋಡುವ ಬನ್ನಿ. ಅದಕ್ಕೂ ಮೊದಲು ಲೇಖಕರ ಬಗ್ಗೆ ಒಂದೆರಡು ವಿಷಯಗಳನ್ನು ಹಂಚಿಕೊಳ್ಳುವೆ.

ಲೇಖಕರಾದ ಅನುಷ್ ಶೆಟ್ಟಿ ಅವರು ಮೂಲತಃ ಮಂಗಳೂರಿನವರು ಸದ್ಯಕ್ಕೆ ಮೈಸೂರಿನಲ್ಲಿ ನೆಲೆಸಿದ್ದಾರೆ. ಹಾಡುತ್ತಾ, ಊರೂರು ಅಲೆದು ಪ್ರಕೃತಿಯನ್ನು ಬೆರಗುಗಣ್ಣಿನಿಂದ ನೋಡುವ ಇವರು ಅದನ್ನು ಬಣ್ಣಿಸಿ ನಮಗೆ ಹೇಳುವ ಪರಿ ನಿಜಕ್ಕೂ ಸುಂದರ. ಇವರೇ ಮುನ್ನುಡಿಯಲ್ಲಿ ಹೇಳಿರುವಂತೆ ಮೈಸೂರು ಜೈಲಿನ ನಾಟಕವೊಂದಕ್ಕೆ ಸಂಗೀತಗಾರನಾಗಿ ಹೋದಾಗ ಅಲ್ಲಿರುವ ಖೈದಿಗಳ ಜೊತೆ ಬೆರೆತ ಮೇಲೆ ಭಾವನಾತ್ಮಕ ನಂಟು ಸಹ ಬೆಳೀತು ಹಾಗೆ ಹಲವು ಪ್ರಶ್ನೆಗಳು ಸಹ ಜೊತೆಯಲ್ಲಿಯೇ ತಲೆ ಹೊಕ್ಕಿದವು. ಈ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನದಲ್ಲಿ ತೊಡಗಿರುವಾಗಲೇ ಬೇರೆ ವಿಷಯಗಳ ಬಗ್ಗೆ ಸಹ ಕೂತೂಹಲ ಮೂಡಿದ ಕಾರಣ ಲೇಖಕರು “ಮಾನವನ ಸಂಬಂಧ ಮತ್ತು ನಿರ್ಧಾರಗಳು , ಪ್ರಕೃತಿ, ವಿಜ್ಞಾನ” ಎಲ್ಲವನ್ನೂ ಒಂದೇ ಕಡೆ ಬರಮಾಡಿಕೊಂಡು ಹದವಾಗಿ ಬೆರೆಸಿ ಒಂದು ಒಳ್ಳೆಯ ಸೈನ್ಸ್ ಫಿಕ್ಷನ್ ಗೆ ಜನ್ಮ ನೀಡಿದರು.

(ನೀವು ಈ ಪುಸ್ತಕ ಓದುವ ಮುನ್ನ ಕೆಲವೊಂದು ವಿಷಯಗಳು ಅರಿತರೆ ಪುಸ್ತಕ ಖಂಡಿತ ರುಚಿಸುವುದು.ಹಾಗಾಗಿ ಕೆಲವೊಂದು ಅಗತ್ಯವಿರುವ ವಿಷಯಗಳನ್ನು ಇಲ್ಲಿ ತಿಳಿಸಿರುವೆ.)

ಕೃತಿಯ ವಿಷಯ :

ಕ್ವಾಂಟಮ್ ಭೌತಶಾಸ್ತ್ರ ಒಂದು ಆಗರ , ಅದರಲ್ಲಿ ಸಮಯ ಪ್ರಯಾಣ ( time travel) , ಸಮಾನಾಂತರ ಜಗತ್ತಿನ ( parallel universe) ಪರಿಕಲ್ಪನೆ ಸಹ ಸೇರಿದೆ , ಇದು ಸದ್ಯಕ್ಕೆ ಬರೀ ಸಿದ್ಧಾಂತವಾದರೂ ಸಹ ಚಲನಚಿತ್ರ, ವೆಬ್ ಸರಣಿ, ಪುಸ್ತಕ ಎಲ್ಲದರಲ್ಲಿಯೂ ಇದರ ಬಳಕೆ ಅಗಾಧ.

ಸಮಾನಾಂತರ ಜಗತ್ತು:

ಆಂಗ್ಲ ಭಾಷೆಯಲ್ಲಿ ಹೇಳುವ parallel universe. ಇದು ನಮ್ಮ ಜೊತೆಯಲ್ಲಿಯೇ ಶುರುವಾದ ಒಂದು ತದ್ರೂಪದ ಜಗತ್ತು, ಇಡೀ ಜಗತ್ತಿಗೆ ಒಂದು ಕನ್ನಡಿ ಹಿಡಿದರೆ ಹೇಗೆ ಒಂದು ತದ್ರೂಪ ಸೃಷ್ಟಿ ಆಗತ್ತೆ ಹಾಗೆ ಈ ಸಮಾನಾಂತರ ಜಗತ್ತು. ಆದರೆ ಒಮ್ಮೆ ಸೃಷ್ಟಿ ಆದ ನಂತರ ಇದಕ್ಕೆ ಇದರದೆ ಆದ ಅಸ್ತಿತ್ವ ಬರುವುದು ಎನ್ನುವುದು ಕೆಲವರ ಅಭಿಪ್ರಾಯ. ಈ ಜಗತ್ತು ನಮ್ಮದೇ ಜಗತ್ತಿನ ಹಾಗೆ ಇದ್ದರೂ ಸಹ ಅದು ಕಾಲಮಾನದಲ್ಲಿ ಹಿಂದೆ / ಮುಂದೆ ಸಹ ಇರಬಹುದು. ಹಲವಾರು ವೆಬ್ ಸರಣಿ, ಪುಸ್ತಕಗಳಲ್ಲಿ ನೋಡಿ, ಓದಿ ತಿಳಿದಿರುವಂತೆ ಈ ಜಗತ್ತಿಗೆ ಹೋಗಲು ಟೈಂ ಮೆಷಿನ್ ಬೇಕು ಹಾಗೂ ಆ ಯಂತ್ರ ಬೆಳಕಿಗಿನ್ನ ವೇಗವಾಗಿ ಚಲಿಸಬೇಕು ಅಥವಾ ಎರಡೂ ಜಗತ್ತಿಗೆ ಕೊಂಡಿ ಬೆಸೆಯುವ ಪೋರ್ಟಲ್ ಇರಬೇಕು ಎನ್ನುವ ಥಿಯರಿಯಗಳು.

ದೇಜಾವು :

ನಮಗೆಲ್ಲರಿಗೂ ಒಂದಲ್ಲ ಒಂದು ಬಾರಿ ದೇಜಾವು ( dejavu ) ಸಂಭವಿಸಿರುತ್ತೆ, ನಾವು ಇದನ್ನ ಎಲ್ಲೋ ನೋಡಿದೀವಿ, ಕೇಳಿದೀವಿ, ಈ ವ್ಯಕ್ತಿಯನ್ನು ಎಲ್ಲೋ ನೋಡಿದ ಹಾಗಿದ್ಯಲ್ಲ?? ಈ ಜಾಗಕ್ಕೆ ಇದೇ ಬಣ್ಣದ ಉಡುಪು ಧರಿಸಿ ಬಂದ ನೆನಪು!! ಹೌದಲ್ಲ?? ಯಾವಾಗ??? ಎಷ್ಟೇ ಯೋಚಿಸಿದರೂ ನೆನಪಿಗೆ ಬಾರದು , ಯಾಕೆ?? ಆ ನೆನಪು ನೆನೆಯುವ ಹಾಗೆ ಇಲ್ಲದೇ ಹೋದರೆ, ನೆನಪು ಎಲ್ಲಿಂದ ತಾನೇ ಬಂದೀತು??? ಆದರೆ ನಾವು ನೋಡಿದ್ದೆ ಮತ್ತೆ ನೋಡಿದರೆ? ಹೇಳಿದ್ದನ್ನೇ ಮತ್ತೆ ಹೇಳಿದರೆ?? ಓದಿದದ್ದನ್ನೆ ಮತ್ತೆ ಮತ್ತೆ ಓದುತ್ತಿದ್ದರೆ???ಸಮಯ ಸಹ ಮತ್ತೆ ಅಲ್ಲೇ ಮರುಕಳಿಸುತ್ತಿದ್ದರೆ?! ಮರುಕಳಿಸುವುದು ಆದರೂ ಏತಕೆ?? ಇದರ ಅರಿವು ಇಲ್ಲದೆ ಸಹ ನಮಗೆ ಆಗುವ ಅನುಭವ ಸೋಜಿಗ. ಇದನ್ನೇ ಹಲವರು ” ದೇಜಾವು ” ಎಂದರು . ಇದರ ಬಗ್ಗೆ ಹಲವು ಬೇರೆಯ ಅಭಿಪ್ರಾಯಗಳು ಇರುವುದು ನಿಜ ಆದ್ರೆ ಕೆಲವೊಮ್ಮೆ ನಾವು ಅಂದುಕೊಂಡಿರುವ ಎಷ್ಟೋ ವಿಷಯಗಳು ವಾಸ್ತವದಲ್ಲಿ ಹಾಗಿರುವುದೇ ಇಲ್ಲ ಎಂಬುದು ಸಹ ಅಷ್ಟೇ ಸತ್ಯ .

ಕಥೆಯ ಬಗ್ಗೆ:

ನಾನು ಮೇಲೆ ಹೇಳಿದ ದೇಜಾವು ವಸ್ತುವನ್ನೇ ಮೂಲವಾಗಿ ಇಟ್ಟು ಅದಕ್ಕೆ ಸಮಯ ಪ್ರಯಾಣ, ಸಮಾನಾಂತರ ಜಗತ್ತು ಸೇರಿಸಿ ಹೆಣೆದ ಕಥೆ .
ಕಥೆ ಶುರುವಾಗುವುದೇ ಕಾಲಘಾಟಿಯ ಜೈಲಿನಲ್ಲಿದ್ದ ಗಿಲ್ಬರ್ಟ್ ರಾತ್ರೋ ರಾತ್ರಿ ‘ ಮಾಯ ‘ ಆದಾಗಿನಿಂದ.

ಅದೊಂದು ಮಧ್ಯರಾತ್ರಿ , ಡೈರಿಯಲ್ಲಿ ಏನೇನೋ ಬರೆಯುತ್ತಿದ್ದ ಗಿಲ್ಬರ್ಟ್, ಜ್ಞಾನೋದಯ, ಸಮಯ ಹೀಗೆ ಆ ಕತ್ತಲ ಕೋಣೆಯಲ್ಲಿ ಚಂದ್ರನ ಬೆಳಕಿನಲ್ಲಿ ಬರೀತಾ ಇದ್ದ , ಸಮಯ ಮೀರುತ್ತ ಇದೆ ಅಂತ ಚಡಡಿಸುತ್ತಲೇ ಇನ್ನೇನು ತನ್ನ ಕೊನೆಯ ಸಾಲು ಪೂರ್ತಿಗೊಳಿಸಬೇಕು ಅನ್ನುವಾಗಲೇ ಮಾಯವಾಗಿದ್ದ.

ಬೆಳಗ್ಗೆ ಎದ್ದ ನಂತರ ಇಡೀ ಕಾಲಘಾಟಿಯಲ್ಲಿ ಅಲ್ಲೋಲ್ಲ ಕಲ್ಲೋಲ ಯಾಕೆಂದರೆ ಗಿಲ್ಬರ್ಟ್ ತಪ್ಪಿಸಿಕೊಂಡಿರಲಿಲ್ಲ , ಜೈಲಿನ ಕಂಬಿ, ಬಾಗಿಲು ಯಾವುದೂ ಸಹ ಮುರಿದಿರಲಿಲ್ಲ. ಗೋಡೆ , ನೆಲ ಕೊರೆದಿರಲಿಲ್ಲ. ಆದ್ರೆ ” ಮಾಯ” ವಾಗಿದ್ದ.

ಅಲ್ಲಿರುವ ಪೊಲೀಸ್ ಗಳಿಗೆ ಈ ರಹಸ್ಯ ಭೇದಿಸಲು ಆಗಲೇ ಇಲ್ಲ ಅದಕ್ಕೊಸ್ಕರವೇ ಪತ್ತೇದಾರಿಗಳಾದ ಚೇತನ್ ಮತ್ತು ಮಾಧವ್ ರ ಸಹಾಯ ಕೋರಿದರು. ಚೇತನ್ ಮತ್ತು ಮಾಧವ್ ಇಬ್ಬರೂ ಗಿಲ್ಬರ್ಟ್ ಇದ್ದ ಕೋಣೆ ಹೊಕ್ಕು ತಪಾಸಣೆ ನಡೆಸುವ ವೇಳೆ ಅವನ ಡೈರಿ ಸಿಗುವುದು. ಗಿಲ್ಬರ್ಟ್ ನ ಸ್ನೇಹಿತನಾದ ಗಣೇಶನ ಸಹಾಯದಿಂದ ಇಬ್ಬರೂ ಡೈರಿ ಓದುತ್ತಾ ಗಿಲ್ಬರ್ಟ್ ನ ಜೀವನದ ಬಗ್ಗೆ ಬಿಚ್ಚಿಡುತ್ತಾ ಹೋಗುತ್ತಾರೆ.

ವಿಜ್ಞಾನದಲ್ಲಿ ಆಸಕ್ತಿ ಇರುವ ಇರ್ಪುವಿನ ಹುಡುಗನಾದ ಗಿಲ್ಬರ್ಟ್ , ಒಡೆದ ಕನ್ನಡಿ ಇಂದ ಮಾಡಿದ ಪ್ರಿಸಂ ಶಾಲೆಯಲ್ಲಿರುವ ಎಲ್ಲರ ಗಮನ ಸೆಳೆದಿತ್ತು. ಇದರಿಂದಲೇ ಅವನು ರಾವ್’ರ ಕಣ್ಣಿಗೆ ಬಿದ್ದಿದ್ದು ಮತ್ತು ಅಂದಿನಿಂದಲೇ ಶಿಷ್ಯನೂ ಆದ . ತನ್ನ ಜೊತೆಗೆ ಕಳಿಸಿ ಎಂದು ಕೇಳಿದ ರಾವ್ ಅವರ ನಿವೇದನೆಗೆ ಮೊದಮೊದಲು ಒಪ್ಪದ ಗಿಲ್ಬರ್ಟ್ ನ ತಾಯಿ ಕೊನೆಗೆ ವಿಧಿಯಿಲ್ಲದೆ ಅವರ ಜೊತೆ ಕಳಿಸಲು ಒಪ್ಪಿದಳು. ಅಂದಿನಿಂದ ಗಿಲ್ಬರ್ಟ್ ರಾವ್ ಅವರ ಶಿಷ್ಯನಾಗಿ ಅವರ ಮನೆಯಲ್ಲಿಯೇ ಉಳಿದ.

ಸುಬ್ರಹ್ಮಣ್ಯ ರಾವ್ ಎನ್ನುವವರು ಓರ್ವ ವಿಜ್ಞಾನಿ, ಮನುಷ್ಯನ ಒಂದು ತದ್ರೂಪ ಸೃಷ್ಟಿಸಿ ಅದನ್ನ ಇನ್ನೊಂದು ಕಾಲಘಟ್ಟಕ್ಕೆ ಕಳಿಸಿ ( ಸಮಾನಾಂತರ ಜಗತ್ತು ಯಾವ ಕಾಲಮಾನದಲ್ಲಿ ಬೇಕಾದರೂ ಇರಬಹುದು) ದೇಜಾವೂ ಇರುವಿಕೆಯ ಬಗ್ಗೆ ತಿಳಿಯುವುದೇ ಇವರ ಆಶಯ. ಭಾರತದ ಹೆಸರನ್ನು ವಿಜ್ಞಾನದ ಇತಿಹಾಸ ಪುಟಗಳಲ್ಲಿ ಸೇರಿಸುವ ಹಂಬಲ ಉಳ್ಳವರು. ಈ ಕನಸನ್ನು ನನಸು ಮಾಡಲು ರಾವ್’ ಅವರಿಗೆ ಜೊತೆಯಾಗಿದ್ದು ಗಿಲ್ಬರ್ಟ್ ಮತ್ತು ಶಾರದಾ.

ಇನ್ನು ಶಾರದಾಳ ಬಗ್ಗೆ ಹೇಳಿದರೆ ಒಂದು ಒಳ್ಳೆಯ ತಿರುವು ಮಿಸ್ ಮಾಡಿಕೊಳ್ಳುವಿರಿ ಹಾಗಾಗಿ ಸಧ್ಯಕ್ಕೆ ಆಕೆಯ ಬಗ್ಗೆ ಗೌಪ್ಯತೆ ಕಾಪಾಡಿಕೊಂಡಿರುವೆ.

ಪೊನ್ನಣ್ಣ ಊರಿನಲ್ಲಿ ಇರುವ ಜಮೀನ್ದಾರ, ಮೋಸ ವಂಚನೆ ಮಾಡುವಲ್ಲಿ ಎತ್ತಿದ ಕೈ . ಊರಿನ ಜನರ ಭೂಮಿ ಕಬಳಿಸಿ ಎಲ್ಲರನ್ನೂ ಜೀತದ ಆಳಾಗಿ ದುಡಿಸಿಕೊಂಡ ಮಹಾನ್ ಪಾತಕಿ.

ಹೀಗೆ ಒಂದು ದಿನ ರಾವ್, ಗಿಲ್ಬರ್ಟ್ , ಶಾರದೆ ಮೂವರು ಸಂಶೋಧನೆ ನಡೆಸುವ ವೇಳೆ ಪೊನ್ನಣ್ಣ, ರಾವ್ ಅವ್ರ ಮನೆಗೆ ಬಂದು ಒಂದು ದೊಡ್ಡ ಅನಾಹೂತವೆ ಮಾಡಿದ ,ಇದರ ಫಲಿತಾಂಶವಾಗಿ ಗಿಲ್ಬರ್ಟ್ ಜೈಲು ಸೇರಿದ, ಆದರೆ ಈಗ ಮಾಯವೇ ಆಗಿರುವ.

ಹಾಗಾದರೆ ಗಿಲ್ಬರ್ಟ್ ಹೇಗೆ ಮಾಯವಾದ? ಪೊನ್ನಣ್ಣ ಮಾಡಿದ ಅನಾಹೂತವೇನು? ಪೊನ್ನಣ್ಣ ಹಾಗೆ ಮಾಡಲು ಕಾರಣವೇನು? ಸಂಶೋಧನೆ ಯಶಸ್ಸು ಕಂಡಿತಾ? ರಾವ್ ಮತ್ತು ಶಾರದೆ ಏನಾದರು? ದೇಜಾವು , ಸಮಯ ಪ್ರಯಾಣ, ಸಮಾನಾಂತರ ಜಗತ್ತು ಎಲ್ಲವನ್ನೂ ಹೇಗೆ ಒಂದರ ಜೊತೆಗೊಂದು ಬೆಸೆದಿದ್ದಾರೆ? ಎಲ್ಲವನ್ನೂ ತಿಳಿಯಲು ನೀವು ಪುಸ್ತಕ ಒಮ್ಮೆ ಓದಲೇ ಬೇಕು .

ಸೈನ್ಸ್, ಥ್ರಿಲ್ಲರ್ ಜೊತೆಗೆ ಇರ್ಪುವಿನ ಝರಿ, ಕಾಡು , ಮಳೆ ಎಂಬ ಪ್ರಕೃತಿ ಸೌಂದರ್ಯ ಉಣಬಡಿಸುತ್ತಾ ಅದರ ಸವಿ ಸವಿಯುವಾಗಲೇ, ನೀ ಯಾವತ್ತೂ ಸ್ವತಂತ್ರನಾಗಲಾರೆ ಪ್ರತಿಯೊಂದಕ್ಕೂ ಜೈಲಿನಲ್ಲಿರುವ ಹಾಗೆ ಒಂದು ಗೋಡೆ ಇದೆ , ನಿನ್ನ ಒಳಗೆ ಸಹ ಎನ್ನುವ ಚಿಂತೆ ಹಚ್ಚುತ್ತಾರೆ.

ಇಡೀ ಪುಸ್ತಕ ಒಂದು ಗುಕ್ಕಿನಲ್ಲಿ ಓದಿ ಮುಗಿಸಬಹುದು, ತಲೆಯನ್ನು ಕೆಲಸಕ್ಕೆ ಹಚ್ಚುವ ಒಂದು ಒಳ್ಳೆಯ ಕೃತಿಯಿದು . ಈ ಪುಸ್ತಕ ” ಆರಂಭಂ ” ಎನ್ನುವ ತೆಲುಗು ಚಿತ್ರವಾಗಿ ಸಹ ಮೂಡಿಬಂದಿದೆ.

ಕೊನೆಯಮಾತು :

ಸಮಯ ಎನ್ನುವ 4 ನೇ ಆಯಾಮದ ಬಗ್ಗೆ ಸಹ ಒಂದು ಚಿಕ್ಕ ವಿವರಣೆ ಈ ಪುಸ್ತಕದಲ್ಲಿ ನಾವು ಕಾಣಬಹುದು. ಹಾಗೂ ಕೃತಿಯಲ್ಲಿ ಯಾವುದೇ ಕೆಟ್ಟ ಪದಗಳು, ಚಿತ್ರಣಗಳು ಇಲ್ಲದೇ ಇರುವುದರಿಂದ, ವಯಸ್ಸಿನ ಮಿತಿಯಿಲ್ಲದೆ ಎಲ್ಲರೂ ಓದಬಹುದು . ಸೈನ್ಸ್ ಫಿಕ್ಷನ್ ಪುಸ್ತಕಗಳು ಕನ್ನಡ ಸಾಹಿತ್ಯದಲ್ಲಿ ವಿರಳವಾದ ಕಾರಣ ಎಲ್ಲರೂ ಒಮ್ಮೆ ಆದರೂ ಓದಿ ಮತ್ತು ಬೇರೆಯವರಿಗೆ ಸಹ ಓದಿಸುವುದನ್ನು ಮರೆಯಬೇಡಿ.

ಧನ್ಯವಾದಗಳೊಂದಿಗೆ


  • ಗೌತಮಿ ಗಿರೀಶ್

 

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW