
ಕವಿ ಡಾ.ಲಕ್ಷ್ಮಣ ಕೌಂಟೆ ಅವರ ‘ನಿತ್ಯ ಯಾತ್ರೋತ್ಸವಿ ನೀ ‘… ಕವನದ ಸುಂದರ ಸಾಲುಗಳು, ಮುಂದೆ ಓದಿ…
ಎಲ್ಲಿಗೆ ಹೊರಡುವುದು?
ಯಾವ ಧಾಮಕ್ಕೆ ತೆರಳುವುದು?
ನಿತ್ಯ ಯಾತ್ರೋತ್ಸವಿ ನೀ..
ಸುಂದರ ಹೂಬನ
ಹಸಿರುಟ್ಟು ನಗುವ
ವಿವಿಧ ವರ್ಣರಾಶಿಯ
ಕುಸುಮ ಹೊತ್ತ ವೃಕ್ಷ ಲತಾದಿಗಳು..
ಎಲ್ಲವೂ ನೀನೇ ಆಗಿರುವಿ ನೋಡು!!
ನಿನ್ನ ಕಂಗಳೋ…
ಅವಿನಾಶಿ ಜ್ವಾಜ್ವಲ್ಯ
ಸಾಲುದೀಪದ ಪ್ರಣತೆಗಳು..
ಮೈ ಮನಗಳೋ
ವ್ಯಾಪಿಸಿಕೊಂಡ
ಪುಷ್ಪ ಸಂಗಮಿತ ವಿರಾಮ ಧಾಮ
ನೀ ಪ್ರಣಯಗಂಧ
ಕುಸುಮಕಾಮಿನಿ ಮನೋಹರಿ..
ಎನಗಾಗಿ
ಕಾಯುವುದೇ ಬೇಕಿಲ್ಲ ನೀ..
ಮನದಾಳದ ಒಂದು ಕೂಗು..
ಕಡೆಗಣ್ಣ ಕರೆನೋಟಗಳೇ ಸಾಕು.
ಉಪನದಿಯೊಂದು
ಮಹಾನದಿಯಲಿ ಸಂಗಮಗೊಂಡಂತೆ
ಓಡೋಡಿ ಬಂದು ಸೇರುವುದೊಂದೇ ಉಳಿಕೆ..
ಜ್ಯೋತಿರ್ಲತೆಯೇ..
ನಿನ್ನ ನೀ ಆಗಾಗ ಹಳಿದುಕೊಂಡು
ಅವಮಾನಿಸದಿರು
ಅನುಪಮೆ ಸೌಂದರ್ಯ ದೇವತೆಗೆ..
ನೀನು ಸುರದೇವಿ!!
ನಾನಿನ್ನ ಆರಾಧಿಸುವ ಪೂಜಾರಿ
ಒಪ್ಪಿಸಿಕೊ ಎನ್ನ ಫಲ ಪುಷ್ಪಗಳನ್ನ
ನಿನ್ನ ದಿವ್ಯ ಸಾಮಿಪ್ಯಕ್ಕೆ…
- ಡಾ. ಲಕ್ಷ್ಮಣ ಕೌಂಟೆ (ಕವಿ, ಲೇಖಕರು, ಉಪನ್ಯಾಸಕರು) ಕಲಬುರಗಿ.
