‘ನಿತ್ಯ ನಿನ್ನಯ ಜಪನೆ ಆರಾಧನೆ…ಹೇಳು ಯಾವ ಪ್ರೇಮ ಪುಷ್ಪಗಳಿಂದ ಅರ್ಚಿಸುತ ಅರ್ಪಿಸುತ ಪೂಜಿಸಲಿ?’ …ರಶ್ಮಿಪ್ರಸಾದ್ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನ ತಪ್ಪದೆ ಮುಂದೆ ಓದಿ…
ನನ್ನೊಲವ ಮನೋಮಂದಿರದಿ
ನಿತ್ಯ ನಿನ್ನಯ ಜಪನೆ ಆರಾಧನೆ
ನಿನ್ನನುಷ್ಟಾನ ಅನುಭಾವ ತಪನೆ
ದೈವವಾಗಿ ಪ್ರತಿಷ್ಠಾಪಿಸಿಹೆ ನಿನ್ನನೆ.!
ಹೇಳು ಯಾವ ಪ್ರೇಮ ಪುಷ್ಪಗಳಿಂದ
ಅರ್ಚಿಸುತ ಅರ್ಪಿಸುತ ಪೂಜಿಸಲಿ.?
ಹೇಳು ಮತ್ತಿನ್ನೆಷ್ಟು ಅನುರಕ್ತಳಾಗಿ
ನನ್ನ ಪ್ರೀತ್ಯಾನುರಾಗ ಸಮರ್ಪಿಸಲಿ.?
ಅನುಕ್ಷಣ ನಿನ್ನಯ ಆರಾಧಕಳಾಗಲ.?
ಪ್ರತಿಕ್ಷಣ ಪ್ರೀತಿಸುವ ಪ್ರೇಮಿಯಾಗಲ.?
ಜೀವಭಾವ ಅರ್ಪಿಸುತ ಐಕ್ಯವಾಗಲ.?
ಅಡಿಗಡಿಗು ನಿನ್ನೆದೆಯ ಸಖ್ಯವಾಗಲ.?
ನೀನೇ ನಿರ್ಧರಿಸಿ ಆದರಿಸು ಇನಿಯ
ತಿಳಿಸಿ ತಣಿಸಿ ತಂಪಾಗಿಸು ಹೃದಯ
ದೂರಾಗಿಸು ಗೊಂದಲಗಳ ಹನನ
ನಿರಾತಂಕವಾಗಲಿ ನನ್ನಯ ಹೃನ್ಮನ.!
- ರಶ್ಮಿಪ್ರಸಾದ್ (ರಾಶಿ)
