ರೈತನೊಬ್ಬನ ಹಚ್ಚ ಹಸಿರಿನ ಜಮೀನಿನ ಪಕ್ಕ ಉದ್ಯಮಿಯೊಬ್ಬ ಟೈರ್ ಪೈರೋಲಿಸಿಸ್ ಘಟಕದ ಬೋರ್ಡ್ ತೆರೆದಾಗ ಅದರಿಂದ ವಾಯುಮಾಲಿನ್ಯ ಆರಂಭವಾಯಿತು. ಹಸಿರಿನಿಂದ ಕಂಗೊಳಿಸುತ್ತಿದ್ದ ತೋಟದ ಬೆಳೆ ಕೆಮಿಕಲ್ ಧೂಳಿನಿಂದ ಮುರುಟಿ ಹೋದವು. ಇದರಿಂದ ಆ ರೈತ ಬೇಸತ್ತು ಮೊರೆಹೋಗಿದ್ದು ವಕೀಲ ಪ್ರಕಾಶ ವಸ್ತ್ರದ ಅವರ ಬಳಿ, ಅವರ ‘ನ್ಯಾಯದ ಕಣ್ಣು’ ಅಂಕಣವನ್ನು ತಪ್ಪದೆ ಮುಂದೆ ಓದಿ…
ಪುಸ್ತಕ : ”ಅಡ್ವೋಕೇಟ್ ಡೈರಿ ವೃತ್ತಿ ಬದುಕಿನ ಬುತ್ತಿ”
ಬೆಲೆ : 200/
ಖರೀದಿಗಾಗಿ : 9448015613
ಪ್ರತಿಭಟನೆ ನಡೆದಾಗ, ನಟ್ಟ ನಡು ರಸ್ತೆಯಲ್ಲಿ ಪ್ರತಿಭಟನಾಕಾರರು ಹಳೆ ಟೈಯರ್ ಸುಟ್ಟು ತಮ್ಮ ಕಿಚ್ಚನ್ನು ಆರಿಸಿಕೊಂಡು, ಅಂದಿನ ತಮ್ಮ ಒಂದು ಟಾಸ್ಕ್ ಕೊನೆಗೊಳಿಸುತ್ತಾರೆ. ಅವರೆಲ್ಲ ಹೋದ ನಂತರ ಬಡಪಾಯಿ ಟೈಯರ್ ಮೊದಲೆ ಸವೆದು ಹೋದ ತನ್ನ ಮೈಯನ್ನು ಬೆಂಕಿಗೆ ಆಹುತಿ ಕೊಟ್ಟು, ರಸ್ತೆ ತುಂಬೆಲ್ಲ ಸುಟ್ಟ ಎಣ್ಣೆ ಹರಡಿ, ಕಬ್ಬಿಣ ತಂತಿ ರಾಶಿ, ಕಪ್ಪು ಒರಟು ಬೂದಿ ಹೊರಹೊಮ್ಮಿ ಲೀನವಾಗುತ್ತದೆ. ನಿಗಿ ನಿಗಿ ಜ್ವಾಲೆ ಮೇಲೆದ್ದು ಮೂಗು ಮುಚ್ಚಿಕೊಳ್ಳುವಂತ ಹಸಿ ಹಸಿ ಸಹಿಸಲಾಗದ ರಬ್ಬರ ಮಿಶ್ರಿತ ದುರ್ಗಂಧ ಇಡಿ ಪರಿಸರದಲ್ಲಿ ಹರಡಿ ವಾಯು ಮಾಲಿನ್ಯವಾಗಿಸುತ್ತದೆ. ಕಪ್ಪು ಬಣ್ಣದ ಎಣ್ಣೆಯ ಕಲೆ ರಸ್ತೆಯ ಸರ್ಕಲ್ ಮಧ್ಯೆ ದೃಷ್ಟಿ ಚುಕ್ಕೆ ಹಾಗೆ ಉಳಿದು ಬಿಡುತ್ತದೆ.
ಅದೊಂದು ರೈತ ಸಹೋದರರ ಮನೆತನ. ಹಳ್ಳಿಯಿಂದ ಸುಮಾರು 1 ಕಿಲೋ ಮೀಟರ್ ಅಂತರದಲ್ಲಿ ಫಲವತ್ತಾದ ನೀರಾವರಿ ಜಮೀನು ಇದೆ. ಅಲ್ಲಿ ದೊಡ್ಡ ತೋಟದ ಮನೆ ತಲೆ ಎತ್ತಿದೆ. ಇದೊಂದು ಒಂಟಿ ಮನೆ. 85 ವಯಸ್ಸಿನ ಮನೆಯ ಯಜಮಾನ, 80 ವಯಸ್ಸಿನ ಯಜಮಾನಿಗೆ 3 ಜನ ಗಂಡು ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು, ಮರಿ ಮಕ್ಕಳು. ಮನೆ ತುಂಬ 40 ಜನರ ಕೂಡು ಕುಟುಂಬ. ಮನೆ ಮುಂದೆ ದನದ ಕೊಟ್ಟಗೆ. ಅದರಲ್ಲಿ ಎತ್ತು, ಎಮ್ಮೆ, ಆಕಳು, ದನ ಕರುಗಳ ಹಿಂಡು ಇವೆ. ತೋಟದಲ್ಲಿ ಸರ್ವ ಋತುವಿನಲ್ಲಿ ಬತ್ತದ 2 ಬಾವಿ, 3 ಬೋರೆವೆಲ್ಲಗಳು ಸದಾ ಬೆಳೆಗೆ ನೀರು ಕೊಡುತ್ತವೆ.
ಒಂದು ದಿನ 3 ಜನ ಸಹೋದರರು, ನಾನು ಕೋರ್ಟ್ ಕಲಾಪದಲ್ಲಿ ತೊಡಗಿಕೊಂಡಾಗ ಬಂದರು. ಬಿಡುವು ಮಾಡಿಕೊಂಡು ಭೇಟಿಯಾಗಿ, ಪ್ರಸಕ್ತ ಸ್ಥಳದಲ್ಲಿ ಕೂಡಿಸಿಕೊಂಡು ವಿಚಾರಿಸಿದೆ. ತಮ್ಮ ಗೋಳನ್ನು ತೋಡಿಕೊಂಡರು. ಅವರ ಜಮೀನಿನ ಪಕ್ಕದ ಮಾಲೀಕ ತನ್ನ ಜಮೀನು ಮಾರಾಟ ಮಾಡಿದ್ದಾನೆ. ಖರೀದಿ ಪಡೆದವನು ಜಮೀನಿನಲ್ಲಿ ದೊಡ್ಡ ಗೊಡಾವನ್ ಕಟ್ಟಲಾರಂಭಿಸಿದನು. ವಿಚಾರಿಸಿದಾಗ ತಾನು ಹಳೆ ಟೈಯರ್ ವ್ಯಾಪಾರ ಮಾಡುವುದಾಗಿ ಅವುಗಳನ್ನು ಸಂಗ್ರಹಿಸಿ ಇಟ್ಟು ನಂತರ ಬೇರೆಡೆಗೆ ಸಾಗಿಸುವದಾಗಿ ಸಮಜಾಯಿಸಿ ನೀಡಿದನು. ಕೊನೆಗೆ ಮಸೀನ, ಬಾಯ್ಲರ್, ಕಿಲ್ನ್ ಕೂಡಿಸಿ ಟೈರ್ ಪೈರೋಲಿಸಿಸ್ ಘಟಕ ಬೋರ್ಡ್ ಹಾಕಿ ಪ್ರಾರಂಭಿಸಿದನು.

ಹಳೆಯ ಟೈರಗಳನ್ನು ಆಮ್ಲಜನಕ ರಹಿತ ವಾತಾವರಣದಲ್ಲಿ, 500 ಡಿಗ್ರಿ ಸೆಂಟಿಗ್ರೆಡ್ ಬೆಂಕಿಯಲ್ಲಿ ಸುಟ್ಟು ಅದರಿಂದ ಕಬ್ಬಿಣದ ತಂತಿ, ಎಣ್ಣೆ, ಕಪ್ಪು ಪವಡರನ್ನು ಮರು ಬಳಕೆಗೆ ಪ್ರತ್ಯೇಕಿಸಿ, ಬೆರ್ಪಡಿಸುವದು ಪೈರೋಲಿಸಿಸ್ ವಿಧಾನ. ವಾಹನಗಳಿಂದ ಬಳಕೆಯಾದ ಟೈಯರ್ ತ್ಯಾಜ್ಯವನ್ನು ನಾಶಮಾಡಿ ನಿಸರ್ಗ, ವಾಯುಮಾಲಿನ್ಯ ಕಾಪಾಡುವುದು ಪೈರೋಲಿಸಿಸ್ ಕ್ರಿಯೆ. ಆದರೆ ಪೈರೋಲಿಸಿಸ ವಿಧಾನದಿಂದ ಹೊರಡುವ ತ್ಯಾಜ್ಯದಿಂದ ವಾಯುಮಾಲಿನ್ಯ ತಡೆಗಟ್ಟುವುದು ಅವಶ್ಯಕತೆ ಇದೆ. ಇಂತಹ ಘಟಕ ಪ್ರಾರಂಭಿಸಲು. ಕೇಂದ್ರ ರಾಜ್ಯ ಸರಕಾರಗಳು ಹಲವಾರು ಕಾನೂನು, ನಿಯಮ, ಮಾರ್ಗದರ್ಶಿ ರಚಿಸಿವೆ.
ಘಟಕದ ಚುಮಣಿಯಿಂದ ಕಪ್ಪು ಒರಟಾದ, ದುರ್ಗಂಧ ಸೂಸುವ ಹೊಗೆ ಬರಲಾರಂಭಿಸಿತು. ಹಸಿರಿನಿಂದ ಕಂಗೊಳಿಸುತ್ತಿದ್ದ ತೋಟದ ಬೆಳೆ ಕೆಮಿಕಲ್ ಧೂಳಿನಿಂದ ಮುರುಟಿ ಹೋದವು. ಮನೆಯ ಹಿರಿಯರಿಗೆ ಮಕ್ಕಳಿಗೆ ಆರೋಗ್ಯದಲ್ಲಿ ಏರುಪೇರಾಗಿ, ಉಸಿರಾಟದ ತೊಂದರೆ ಪ್ರಾರಂಭವಾಯಿತು. ಘಟಕದಿಂದ ಹೊಮ್ಮುವ ದುರ್ಗಂಧ ಕಕ್ಷಿದಾರರ ಬದುಕನ್ನು ಅಸಹನೀಯ ನರಕಮಯ ಮಾಡಿತು. ದನಕರುಗಳು ಮೇವು ತಿನ್ನುವುದು ನಿಲ್ಲಿಸಿ ಸೊರಗಿದವು. ಬಾವಿ, ಬೋರವೆಲ್ ನೀರು ಕಪ್ಪು ರಾಡಿ ಬಣ್ಣಕ್ಕೆ ತಿರುಗಿದವು. ಕಕ್ಷಿದಾರರು ವೈದ್ಯಾಧಿಕಾರಿಗಳಿಗೆ, ಪಶು ವೈದ್ಯಕೀಯ, ಕೃಷಿ ಅಧಿಕಾರಿ, ವಾಯುಮಾಲಿನ್ಯ ಇಲಾಖೆಗೆ ದೂರು ನೀಡಿದರು. ಅಧಿಕಾರಿಗಳು ಸ್ಥಾನಿಕ ವಿಚಾರಣೆ ನಡೆಸಿ ಘಟಕದಿಂದ ಹೊಮ್ಮವ ಧೂಳು, ದುರ್ಗಂಧ ಮಾನವರ, ದನಕರುಗಳ ಆರೋಗ್ಯಕ್ಕೆ, ಬೆಳೆಗೆ, ನಿಸರ್ಗಕ್ಕೆ ಹಾನಿಕಾರಕ ಎಂದು ವಾಯುಮಾಲಿನ್ಯ ಇಲಾಖೆಗೆ ವರದಿ ನೀಡಿದರು. ಘಟಕದ ಮಾಲೀಕರಿಗೆ ಪಾಲಿಸಬೇಕಾದ ನಿಯಮ, ತಾಂತ್ರಿಕ ಬದಲಾವಣೆಗಳನ್ನು ಮಾಡಿ, ಸರಿಪಡಿಸಿ ವರದಿ ನೀಡಲು ಸೂಚನೆ ನೀಡಿದರು. ಮಾಲೀಕ ವಾಯುಮಾಲಿನ್ಯ ತಡೆಗಟ್ಟುವ ಬದಲಾವಣೆ ಕ್ರಮ ಕೈಗೊಳ್ಳಲಿಲ್ಲ.
ಕಕ್ಷಿದಾರರ ಆರೋಗ್ಯ, ಬದುಕು ನೆಮ್ಮದಿ ಕಾಪಾಡಲು ಶೀಘ್ರವಾಗಿ, ಪೈರೋಲಿಸಿಸ್ ಘಟಕದ ಮೇಲೆ ವಾಯುಮಾಲಿನ್ಯ ತಡೆಯುವಂತೆ ಶಾಶ್ವತ ತಡೆಯಾಜ್ಞೆ ದಾವೆ ಸಿವಿಲ್ ನ್ಯಾಯಾಲಯದಲ್ಲಿ ದಾಖಲಿಸಿದೆ. ಮಧ್ಯಂತರ ತಡೆಯಾಜ್ಞೆ ಕೋರಿದೆ. ಪ್ರತಿವಾದಿ ಕೊರ್ಟ್ ನೋಟೀಸು ಪಡೆದು ವಕೀಲರ ಮುಖಾಂತರ ಹಾಜರಾಗಿ, ತಾನು ವಾಯುಮಾಲಿನ್ಯ ಆಗದಂತೆ ಕ್ರಮ ಕೈಗೊಂಡಿರುವುದಾಗಿ ಪ್ರತಿವಾದಿಸಿದ.

ಫೋಟೋ ಕೃಪೆ : ಅಂತರ್ಜಾಲ
ನ್ಯಾಯಾಲಯ, ಪ್ರಕರಣದ ಗಂಭೀರತೆ ಅರಿತು ಮಧ್ಯಂತರ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡಿತು. ವಾದಿ ಪ್ರತಿವಾದಿಯರ, ವಾದ ಆಲಿಸಿ, ವಾದಿ ಹಾಜರುಪಡಿಸಿದ ಇಲಾಖೆಗಳ ವರದಿ, ಪ್ರತಿವಾದಿ ವಾಯುಮಾಲಿನ್ಯ ತಡೆ ಕ್ರಮ ಕೈಗೊಳ್ಳಲಾರದ್ದನ್ನು ಅವಲೋಕಿಸಿ, ಪ್ರತಿವಾದಿ ಪೈರೋಲಿಸಿಸ್ ಕ್ರಿಯೆಯನ್ನು ದಾವೆಯ ಅಂತಿಮ ತೀರ್ಮಾನ ಆಗುವವರೆಗೆ ನಿಲ್ಲಿಸಲು ಮಧ್ಯಂತರ ತಡೆಯಾಜ್ಞೆ ಆದೇಶ ನೀಡಿತು. ಪೈರೋಲಿಸಿಸ್ ಕಾರ್ಯ ಸ್ಥಗಿತಗೊಂಡಿತು.
ಪ್ರತಿವಾದಿ ಆಪಿಲು ದಾಖಲಿಸಿದ. ಹಸ್ತಕ್ಷೇಪ ಅ ವಶ್ಯ ಇಲ್ಲವೆಂದು, ಆಪಿಲ ವಜಾಗೊಂಡಿತು. ಕಾನೂನು ಪ್ರಕ್ರಿಯೆಗೆ ವರ್ಷಗಳು ಗತಿಸಿದವು. ಘಟಕಕ್ಕೆ ತುಕ್ಕು ಹಿಡಿಯಿತು. ಶಾಶ್ವತವಾಗಿ ಮುಚ್ಚಿ ಹೋಯಿತು. ಪ್ರತಿವಾದಿ ಘಟಕದ ಪರಿಕರಗಳು ಎತ್ತಂಗಡಿ ಮಾಡಿದನು. ದಾವೆ ಮುಂದುವರೆಸುವದು ಕಕ್ಷಿದಾರರಿಗೆ ಅವಶ್ಯ ತೋರಲಿಲ್ಲ, ವಜಾಗೊಂಡಿತು. ರೈತ ಕುಟುಂಬದ ಬದುಕು ಮಾಲಿನ್ಯ ರಹಿತವಾಗಿ ಹಸನಾಗಿದೆ, ಮುಖದಲ್ಲಿ ಮುಗುಳು ನಗೆ ಹೊಮ್ಮಿದೆ. ತೋಟ ಹಸಿರಿನಿಂದ ನಳಿ ನಳಿಸುತ್ತಿದೆ.
‘ನ್ಯಾಯದ ಕಣ್ಣು’ ಅಂಕಣದ ಹಿಂದಿನ ಸಂಚಿಕೆಗಳು :
- ‘ನ್ಯಾಯದ ಕಣ್ಣು’ ಅಂಕಣ – (ಭಾಗ -೧)
- ‘ನ್ಯಾಯದ ಕಣ್ಣು’ ಅಂಕಣ – (ಭಾಗ -೨)
- ‘ನ್ಯಾಯದ ಕಣ್ಣು’ ಅಂಕಣ – (ಭಾಗ -೩)
- ‘ನ್ಯಾಯದ ಕಣ್ಣು’ ಅಂಕಣ – (ಭಾಗ -೪)
- ‘ನ್ಯಾಯದ ಕಣ್ಣು’ ಅಂಕಣ – (ಭಾಗ -೫)
- ‘ನ್ಯಾಯದ ಕಣ್ಣು’ ಅಂಕಣ – (ಭಾಗ -೬)
- ‘ನ್ಯಾಯದ ಕಣ್ಣು’ ಅಂಕಣ – (ಭಾಗ -೭)
- ‘ನ್ಯಾಯದ ಕಣ್ಣು’ ಅಂಕಣ – (ಭಾಗ -೮)
- ‘ನ್ಯಾಯದ ಕಣ್ಣು’ ಅಂಕಣ – (ಭಾಗ -೯)
- ಪ್ರಕಾಶ ವಸ್ತ್ರದ – ವಕೀಲರು, ಲೇಖಕರು, ಮುಧೋಳ
