ತಾಯಿ ಮತ್ತು ಹೆಣ್ಣುಮಕ್ಕಳ ಮಧ್ಯೆ ಮನಸ್ಸು ಮುರಿದು ಹೋಯಿತು.ಇದರಿಂದ ಹೆಣ್ಣುಮಕ್ಕಳು ತವರು ಮನೆಗೆ ಬರುವುದನ್ನು ನಿಲ್ಲಿಸಿದರು. ಕೊನೆಗಾಲದಲ್ಲಿ ವಯೋಸಹಜ ಕಾಯಿಲೆಯಿಂದ ತಾಯಿ ಹಾಸಿಗೆ ಹಿಡಿದಳು. ಹೆಣ್ಣುಮಕ್ಕಳು ತಾಯಿಯ ಆರೋಗ್ಯವನ್ನು ವಿಚಾರಿಸಲು ಬರಲಿಲ್ಲ. ತಾಯಿ ಮೃತಳಾದಾಗ ಅಂತ್ಯಕ್ರಿಯೆಗೂ ಬರಲಿಲ್ಲ. ಇಂತವರಿಗೆ ಪಾಲು ಏಕೆ ಕೊಡಬೇಕಾ? … ಮುಂದೇನಾಯಿತು, ವಕೀಲ ಪ್ರಕಾಶ ವಸ್ತ್ರದ ಅವರ ‘ನ್ಯಾಯದ ಕಣ್ಣು’ ಅಂಕಣವನ್ನು ತಪ್ಪದೆ ಮುಂದೆ ಓದಿ…
ಪುಸ್ತಕ : ”ಅಡ್ವೋಕೇಟ್ ಡೈರಿ ವೃತ್ತಿ ಬದುಕಿನ ಬುತ್ತಿ”
ಬೆಲೆ : 200/
ಖರೀದಿಗಾಗಿ : 9448015613
ನ್ಯಾಯಾಧೀಶರು, ಪ್ರಕರಣದ ಈ ಹಂತದಲ್ಲಿ ಪ್ರತಿ ವಾದಿಯರಿಗೆ ಹಾಜರಾಗಿ ತಮ್ಮ ಕೈಫಿಯತ್/ಲಿಖಿತ ಹೇಳಿಕೆ ಸಲ್ಲಿಸಲು ಪರವಾನಿಗೆ ನೀಡಿದರು. ನ್ಯಾಯಾಲಯದಿಂದ ಪ್ರತಿವಾದಿಯರಿಗೆ ದಾವೆ ಸಮನ್ಸ್ ಜಾರಿ ಆಗಿರುವಾಗ, 1ನೆ ಪ್ರತಿವಾದಿ ಆಸ್ಪತ್ರೆಗೆ ದಾಖಲಾಗಿದ್ದಳು. ಆಸ್ಪತ್ರೆಯಿಂದ ಬಿಡುಗಡೆಯಾಗಿ ಬರಲು ಹಲವು ತಿಂಗಳುಗಳು ಗತಿಸಿದವು. ಉಳಿದ ಪ್ರತಿವಾದಿ ಮಕ್ಕಳು ಆರೈಕೆಗೆ ನಿಂತಿದ್ದರು. ಆದ್ದರಿಂದ ಪ್ರತಿವಾದಿಯರು ಕೋರ್ಟಿಗೆ ಗೈರು ಹಾಜರು ಉಳಿದಿದ್ದರು.ಈ ಗಾಗಲೆ ವಾದಿಯ ಅವರ ಪರ ಸಾಕ್ಷಿದಾರರ ಸಾಕ್ಷಿ ಹೇಳಿಕೆ ಹಂತ ಮುಕ್ತಾಯವಾಗಿತ್ತು. ವಾದಿಯ ಪರ ವಾದಕ್ಕೆ ಕೇಸನ್ನು ಮುಂದೂಡಲಾಗಿತ್ತು.

ವಾದಪತ್ರದ ಸಂಗತಿಯನ್ನು ಸಂಪೂರ್ಣವಾಗಿ ಪರಿಶೀಲನೆ ಮಾಡಿದೆ.ವಾದಿ ಪ್ರತಿವಾದಿಯರ ಮೂಲ ಪುರುಷಳು ಬಸಮ್ಮ. ಸಹೋದರರ ನಡುವೆ ತವರಿನ ಪಿತ್ರಾರ್ಜಿತ ಆಸ್ತಿಯ ಸಲುವಾಗಿ ಸಿವಿಲ್ ವ್ಯಾಜ್ಯ ನಡೆಯಿತು. ಕೊನೆಗೆ ರಾಜಿಯಲ್ಲಿ ಅಂತ್ಯವಾಗಿ 4 ಎಕರೆ ಜಮೀನು ಬಸಮ್ಮಳ ಪಾಲಿಗೆ ಬಂದಿತು. ಬಸಮ್ಮನ ಮರಣದ ನಂತರ ತಾವು ಆಸ್ತಿಗೆ ಹಕ್ಕುದಾರ ರಾಗಿದ್ದು ತಮಗೆ ಪಾಲು ಪಾಲು ಕೊಡಲು ಕೋರಿ ಹೆಣ್ಣು ಮಕ್ಕಳು ಈ ದಾವೆ ದಾಖಸಿದ್ದರು. ಇಷ್ಟು ವಿವರಣೆಯನ್ನು ವಾದಿಯರ ಅಣ್ಣನ ಹೆಂಡತಿ 1 ನೆ ಪ್ರತಿವಾದಿಗೆ ತಿಳಿಸಿ ಹೇಳಿ, ನಿಮ್ಮ ಅಭಿಪ್ರಾಯ ಏನು ಎಂದು ಪ್ರಶ್ನಿಸಿದೆ.” ಸರ್, ಅಣ್ಣ ತಮ್ಮಂದಿರ ದ್ವೇಷದಲ್ಲಿ ಯಾರನ್ನು ಬೆಂಬಲಿಸಬೇಕು ಅನ್ನುವ ದ್ವಂದ್ವದಲ್ಲಿ ಬಸಮ್ಮ ಪಡಬಾರದ ಕಷ್ಟವನ್ನು ಪಟ್ಟಳು. ಪ್ರಕರಣವು ಹಿರಿಯರ ಮಧ್ಯಸ್ತಿಕೆಯಿಂದ ಲೋಕ ಅದಾಲತದಲ್ಲಿ ರಾಜಿ ಆಯಿತು. ದಾವೆ ಜಮೀನು ಬಸಮ್ಮನ ಹಿಸ್ಸೆಗೆ ಬಂದಿದೆ. ಗಂಡನ ಮನೆತನಕ್ಕೆ ಯಾವುದೇ ಸ್ಥಿರಾಸ್ತಿ ಇರಲಿಲ್ಲ. ಗಂಡ ಬಹಳ ವರ್ಷಗಳ ಹಿಂದೆ ಮೃತನಾಗಿದ್ದನು. ಬಸಮ್ಮಳಿಗೆ ಇಬ್ಬರು ಹೆಣ್ಣುಮಕ್ಕಳು ಒಬ್ಬನೇ ಗಂಡು ಮಗ, ಅವನೆ ನನ್ನ ಗಂಡ. ಹೆಣ್ಣು ಮಕ್ಕಳನ್ನು ಬಹಳ ವರ್ಷಗಳ ಹಿಂದೆ ಲಗ್ನಮಾಡಿಕೊಟ್ಟಿದ್ದರು. ನನ್ನ ಗಂಡ ಮೃತನಾದನು. ನಂತರ ಬಸಮ್ಮ ನನ್ನ ಹಾಗು ಮೂರು ಮೊಮ್ಮಕ್ಕಳೊಂದಿಗೆ ವಾಸವಾಗಿದ್ದಳು. ಬಸಮ್ಮನ ಹೆಣ್ಣುಮಕ್ಕಳು ತನ್ನ ತಾಯಿಯ ಜೊತೆಗೆ, ನೀನು ನಿನ್ನ ತವರು ಮನೆಯಿಂದ ಆಸ್ತಿಯನ್ನು ಪಡೆದುಕೊಂಡು ಬಂದಿದ್ದಿ, ಅದನ್ನು ನಮ್ಮ ಹೆಸರಿಗೆ ಬಿಟ್ಟು ಕೊಡಬೇಕು, ನಿನ್ನ ನಂತರ ಹೆಣ್ಣುಮಕ್ಕಳಿಗೆ ಸೇರುವದು ಎಂದು ಖ್ಯಾತೆ ತೆಗೆದರು. ತವರು ಮನೆಯ ಆಸ್ತಿ ನನ್ನ ಸ್ತ್ರೀಧನ ಆಸ್ತಿ, ನನ್ನ ಮರಣದ ನಂತರ ನಿಮಗೆ, ನನ್ನ ಸೊಸೆ, ಮೊಮ್ಮಕ್ಕಳಿಗೆ ಸೇರುತ್ತದೆ. ನನ್ನ ಜೀವತ ಅವಧಿಯಲ್ಲಿ ನಿಮಗೆ ಕೊಡುವುದಿಲ್ಲ ಎಂದು ಸ್ಪಷ್ಟವಾಗಿ ನಿರಾಕರಿಸಿದಳು. ತಾಯಿ ಮತ್ತು ಹೆಣ್ಣು ಮಕ್ಕಳ ಮಧ್ಯೆ ಮನಸ್ಸು ಸರಿ ಉಳಿಯಲಿಲ್ಲ. ಹೆಣ್ಣುಮಕ್ಕಳು ತವರು ಮನೆಗೆ ಬರುವುದನ್ನು ನಿಲ್ಲಿಸಿದರು.ಕೊನೆಗಾಲದಲ್ಲಿ , ಬಸಮ್ಮ ವಯೋಸಹಜ ಕಾಯಿಲೆಯಿಂದ ಹಾಸಿಗೆ ಹಿಡಿದಳು. ನಾನೆ ಆರೈಕೆ ಮಾಡಿದೆ. ಹೆಣ್ಣುಮಕ್ಕಳು ತಾಯಿಯ ಆರೋಗ್ಯವನ್ನು ವಿಚಾರಿಸಲು ಬರಲಿಲ್ಲ. ತಾಯಿ ಮೃತಳಾದಾಗ ಅಂತ್ಯಕ್ರಿಯೆಗೂ ಬರಲಿಲ್ಲ. ಇಂತವರಿಗೆ ಪಾಲು ಏಕೆ ಕೊಡಬೇಕು? ” ಎಂದು ನನ್ನನ್ನು ಪ್ರಶ್ನಿಸಿ ಮನ ಮಿಡಿಯುವಂತೆ ಭಾವುಕಳಾಗಿ ವಿವರಿಸಿದಳು. ತಂದೆ ತಾಯಿಯನ್ನು ಕೊನೆಗಾಲದಲ್ಲಿ ನೋಡಿಕೊಂಡಿಲ್ಲ, ಅಂತ್ಯಕ್ರಿಯೆಗೆ ಬಂದಿಲ್ಲ ಅನ್ನುವದು ವಾರಸುದಾರಿಕೆಯ ಹಕ್ಕನ್ನು ನಷ್ಟಗೊಳಿಸುವದಿಲ್ಲ ಎಂದು ಮನದಟ್ಟು ಮಾಡಿಕೊಟ್ಟು, ದಾವೆಯ ತಾಂತ್ರಿಕ ಲೋಪ ದೋಷಗಳನ್ನು ಎತ್ತಿ ತೋರಿಸಿ ಲಿಖಿತ ತಕರಾರು ಹೇಳಿಕೆ ಪತ್ರ ಸಲ್ಲಿಸಿದೆ.
ವಾದಿ ಪ್ರತಿವಾದಿಯರು ತಮ್ಮ ಹಾಗು ತಮ್ಮ ಪರ ಸಾಕ್ಷಿದಾರರ ಸಾಕ್ಷಿ ಹೇಳಿಕೆ ಸಲ್ಲಿಸಿದರು, ಅವು ಪಾಟಿ ಸವಾಲಿಗೆ ಒಳಪಟ್ಟವು. ಉಭಯ ಪಕ್ಷದ ವಕೀಲರು ನಮ್ಮ ವಾದ ಪ್ರತಿವಾದ ಮಂಡಿಸಿದೆವು.
ನ್ಯಾಯಾಲಯವು, ವಾದಿ ಪ್ರತಿವಾದಿಯರ ಸಾಕ್ಷಿ ಹೇಳಿಕೆ. ವಕೀಲರ ವಾದ ಪ್ರತಿವಾದಗಳನ್ನು ಅವಲೋಕಿಸಿ ಹೆಣ್ಣುಮಕ್ಕಳಾದ ವಾದಿಯರಿಗೆ ತಲಾ1/3 ಹಿಸ್ಸೆ, ಗಂಡು ಮಗನ ವಾರಸುದಾರರಾದ ಪ್ರತಿವಾದಿಯರಿಗೆ ಜಂಟಿಯಾಗಿ 1/3 ಹಿಸ್ಸೆ ಆದೇಶ ಮಾಡಿ ತೀರ್ಪು ನೀಡಿತು. ಕೊನೆಗಾಲದಲ್ಲಿ ತಂದೆ ತಾಯಿಯನ್ನು ನಿರ್ಲಕ್ಷಿಸಿ ಆರೈಕೆ ಮಾಡಿಲ್ಲ, ಅಂತ್ಯಕ್ರಿಯಲ್ಲಿ ಭಾಗವಹಿಸಿಲ್ಲ ಅನ್ನುವುದು ಉತ್ತರಾಧಿರಿಕೆ ಹಕ್ಕನ್ನು ನಷ್ಟ ಮಾಡುವದಿಲ್ಲ. ದಾವೆ ಆಸ್ತಿ ಸ್ತ್ರೀಧನ ಆಸ್ತಿ. ಬಸಮ್ಮ ಯಾವುದೆ ಅಂತಿಮ ವ್ಯವಸ್ಥೆ ಪತ್ರ ಮಾಡದೆ ಮೃತ ಳಾಗಿದ್ದಾಳೆ. ಹಿಂದೂ ಹೆಣ್ಣುಮಗಳ ಉತ್ತರಾಧಿಕಾರಿಗಳು ಯಾರು ಅನ್ನುವದನ್ನು ಕಲಂ 15 ಹಿಂದೂ ಉತ್ತರಾಧಿಕಾರಿ ಕಾನೂನು ಅಡಿಯಲ್ಲಿ ಮಗ, ಹೆಣ್ಣು ಮಕ್ಕಳು, ಮೃತ ಮಗನ ವಾರಸುದಾರರು ಎನ್ನುವುದು ಸ್ಪಷ್ಟ ಇದೆ ಅನ್ನುವ ಅಭಿಪ್ರಾಯ ವ್ಯಕ್ತಪಡಿಸಿತು.
‘ನ್ಯಾಯದ ಕಣ್ಣು’ ಅಂಕಣದ ಹಿಂದಿನ ಸಂಚಿಕೆಗಳು :
- ‘ನ್ಯಾಯದ ಕಣ್ಣು’ ಅಂಕಣ – (ಭಾಗ -೧)
- ‘ನ್ಯಾಯದ ಕಣ್ಣು’ ಅಂಕಣ – (ಭಾಗ -೨)
- ‘ನ್ಯಾಯದ ಕಣ್ಣು’ ಅಂಕಣ – (ಭಾಗ -೩)
- ‘ನ್ಯಾಯದ ಕಣ್ಣು’ ಅಂಕಣ – (ಭಾಗ -೪)
- ‘ನ್ಯಾಯದ ಕಣ್ಣು’ ಅಂಕಣ – (ಭಾಗ -೫)
- ‘ನ್ಯಾಯದ ಕಣ್ಣು’ ಅಂಕಣ – (ಭಾಗ -೬)
- ‘ನ್ಯಾಯದ ಕಣ್ಣು’ ಅಂಕಣ – (ಭಾಗ -೭)
- ‘ನ್ಯಾಯದ ಕಣ್ಣು’ ಅಂಕಣ – (ಭಾಗ -೮)
- ‘ನ್ಯಾಯದ ಕಣ್ಣು’ ಅಂಕಣ – (ಭಾಗ -೯)
- ‘ನ್ಯಾಯದ ಕಣ್ಣು’ ಅಂಕಣ – (ಭಾಗ -೧೦)
- ಪ್ರಕಾಶ ವಸ್ತ್ರದ – ವಕೀಲರು, ಲೇಖಕರು, ಮುಧೋಳ.
