ನಿಂಗಮ್ಮ ತನ್ನ ಹೊಟ್ಟೆ ಬಟ್ಟೆ ಕಟ್ಟಿ ಮಗನಿಗೆ ಚನ್ನಾಗಿ ಓದಿಸಿದ್ದಳು. ಅವನಿಗೂ ಒಳ್ಳೆ ಕೆಲ್ಸವೇನೋ ಸಿಕ್ಕಿತು. ತಾಯಿಗೆ ಹೇಳದೆಯೇ ಮದುವೆನೂ ಆದ. ಕೊನೆಗೆ ಸಾಯುವಾಗ ತಾಯಿಯನ್ನು ನೋಡಲು ಬರಲೇ ಇಲ್ಲ…ಮುಂದೇನಾಯಿತು ಕತೆಗಾರ್ತಿ ಶೋಭಾ ನಾರಾಯಣ ಹೆಗಡೆ ಅವರ ‘ಒಡಲ ಪ್ರೀತಿ’ ಕಥಾಸಂಕಲನದಿಂದ ಆಯ್ದ ಕತೆಯನ್ನು ತಪ್ಪದೆ ಮುಂದೆ ಓದಿ…
ಏ ಬಸಮ್ಮ ನಿಲ್ಲಬೇ…ಒಸಿ. ಈ ಪತ್ರ ಓದ್ಕೊಡಲ ಲಗೂನ. ನನ್ನ ಮಗ ಸಂಗ್ಯ ಪ್ಯಾಟಿಂದ ಪತ್ರ ಕಳಸ್ಯಾನ. ನಂಗ ಓದಾಕ ಬರ್ಯಾಕ ಬರವಲ್ದೂ. ಏನ್ ಬರದು ಕಳಸ್ಯಾನ. ಏನೋ ವಸಿ ಓದಿ ಹೇಳ್ ತಾಯಿ …ಅನ್ನುತ್ತಾ ಅವಸರದಲ್ಲಿ ಚೀಲದಿಂದ ಪತ್ರ ತೆಗೆದು ಶಾಲೆಗೆ ಹೋಗುತ್ತಿದ್ದ ಬಸಮ್ಮನನ್ನು ಕರೆದು ಅವಳ ಕೈಗೆ ಪತ್ರ ಕೊಟ್ಟಳು ನಿಂಗಮ್ಮ. ಏ ಬಿಡು ಕಾಕಿ. ನಂಗ ಸಾಲಿಗೆ ಹೋಗಾಕ ಹೋತ್ತಾಗ್ತೈತಿ. ಮೇಸ್ಟ್ರು ಕೂಡ ಬೈಸಿಕೊಳ್ಳಿ ನಾನು. ನಿಂದೊಳ್ಳೆ ಕಥಿ ಬಿಡಬೇ. ಎನ್ನುತ್ತ ನಿಂಗಮ್ಮನ ಕೈಯಿಂದ ಪತ್ರ ಇಸಿದುಕೊಂಡು ಓದಿ ಹೇಳಿದಳು ಬಸಮ್ಮ .
ನಿನ್ನ ಮಗ ಸಂಗ್ಯಗ ಸ್ವಲ್ಪ ರೊಕ್ಕ ಬೇಕಾಗೇದಂತ. ಕಳ್ಸಕೊಡು ಅಂದಾನ. ಬಾಕಿ ಎಲ್ಲ ಕ್ಷೇಮ ಅದಾನಂತ. ಇಷ್ಟೇ, ಮತ್ತೇನಿಲ್ಲ ಈ ಕಾಗದದೊಳಗ. ಅನ್ನುತ್ತ ಬಸಮ್ಮ, ಆ ಪತ್ರನ ನಿಂಗಮ್ಮನ ಕೈಯಲ್ಲಿ ಕೊಡುತ್ತಾ, ನಾ ಬರ್ತೀನಿ ಕಾಕಿ. ಹೊತ್ತು ಬ್ಯಾರೆ, ಆತು. ಸಾಲ್ಯಾಗ ಹೊರಗ ನಿಂದ್ರ ಬೇಕ್ ಮತ್ತ…ಅನ್ನುತ್ತ ಲಗುಬಗೆಯಿಂದ ಶಾಲಿ ಕಡಿ ಹೊರಟಳು ಬಸಮ್ಮ.
ಇತ್ತ ನಿಂಗಮ್ಮ ಅಲ್ಲೇ ಇದ್ದ ಅಂಗನವಾಡಿಗೆ, ಹೊಕ್ಕಿ, ಬಾಯಾರ , ಬಾಯಾರ ಅಂತ ಅಂಗನವಾಡಿ ಟೀಚರಮ್ಮ ನ ಕರೆದಳು .ನಿಂಗಮ್ಮನ ಧ್ವನಿ ಕೇಳಿ ಹೊರಗೆ ಬಂದ ಟೀಚರ್ ಕಮಲ , ಏನ್ ನಿಂಗಮ್ಮ , ಈ ಕಡಿ ನಿನ್ನ ಸವಾರಿ. ಮಗ್ನ ಪತ್ರ ಗಿತ್ರ ಬಂತೇನು ಎನ್ನುತ್ತ ಕೇಳಿದರು.
ಹ್ಮ್ ಬಾಯಾರ , ನನ್ನ ಮಗ ಕಾಗ್ದ ಕಳಸ್ಯಾನ. ಅವಂಗ ಸ್ವಲ್ಪ ರೊಕ್ಕ ಬೇಕಂತ ಬಾಯಾರ, ಎಲ್ಲಾದ್ರೂ ಇನ್ನೂ ನಾಕ್ ಮನಿ ಕೆಲ್ಸ ಇದ್ರ ಹೇಳ್ರಿ ಮತ್ತ. ನಂಗೂ ಕೈಯಾಗ ನಾಕ್ ಕಾಸು ಆದ್ರ ಮಗನ ಚೊಲೋ ಓದ್ಸಿ ದೊಡ್ಡ ಮನುಷ್ಯನ ಮಾಡಾಕ ಆಗ್ತೈತಿ .ಇಲ್ಲ ಅಂದ್ರ ಶ್ಯಾನೆ ಕಷ್ಟ ಆಗ್ತೈತಿ ನೋಡ್ರಿ .ನಿಂಗಮ್ಮ ಅಂದಾಗ , ಏನ್ ನಿಂಗಮ್ಮ ನಿಂಗೆ ತಲಿ ಗೆಲಿ ಕೆಟ್ಟೈತಿ ಏನ್ ಮತ್ತ ?. ಈ ಪಾಟಿ ಹಗಲು ರಾತ್ರಿ ದುಡಿಮೆ ಸಾಕಾಂಗಿಲ್ಲೇನು? ಇನ್ನೂ ದುಡೀಬೇಕು ಅಂತಿ. ನಿನ್ನ ಅರೋಗ್ಯ ಕೆಟ್ರ ಏನ್ ಗತಿ ನಿಂಗಮ್ಮ… ಎಂದು ಕಳಕಳಿಯಿಂದ ಟೀಚರ್ ಕಮಲಮ್ಮ ನುಡಿದರು. ಏ ನಾನ್ ಗಟ್ಟಿ ಕಲ್ಲು ಗುಂಡು ಬಿಡ್ರಿ ಬಾಯಾರ.

ನನ್ನ ಮಗ ಓದಿ ಶ್ಯಾಣ ಆದ್ಮ್ಯಾಕ, ಚೊಲೋ ನೌಕರಿ ಮಾಡಾಕ್ ಹತ್ತಿ ಬಿಟ್ರೆ ನಾ ಆರಾಮ್ ಅಲ್ಲೇನು ಬಾಯಾರ… ಅಲ್ಲಿಗಂಟ ದುಡ್ಮೇ ಮಾಡ್ತೀನಿ ಬಿಡ್ರಲ. ಅಂತ ನಕ್ಕೋತ ತನ್ನ ಗುಡಿಸಲ ಕಡೆ ಹೆಜ್ಜೆಹಾಕಿದಳು ನಿಂಗಮ್ಮ .
ಅವಳ ಛಲ ಕಂಡು ಟೀಚರ್ ಕಮಲಾಗೆ ಖುಷಿ ಆಯಿತು. ನಿಂಗಮ್ಮ ಸ್ವಾಭಿಮಾನದ ಹೆಣ್ಣು. ಯಾರ ಬಳಿಯಲ್ಲೂ ಕೈ ಚಾಚಲಾರಳು. ಅವಳ ಈ ಗುಣ ಎಲ್ಲರಿಗೂ ಅಚ್ಚುಮೆಚ್ಚು. ಇದಾಗಿ ಕೆಲ ತಿಂಗಳುಗಳ ನಂತರ ಮತ್ತೆ ಮಗನ ಪತ್ರ ಹಿಡಿದು ಅಂಗನವಾಡಿ ಹೊಕ್ಕಳು ನಿಂಗಮ್ಮ. ಬಾಯಾರ ಸ್ವಲ್ಪ ಓದಿ ಹೇಳ್ರಿ ಮತ್ತ. ಆ ಹುಚ್ಚಕೋಡಿ ಸಾಲಿಗೆ ಹೊತ್ತಾತು ಅಂತ ಹೋಗ್ಬಿಟ್ಳು ನೋಡ್ರಿ ಬಾಯಾರ. ಬಸಮ್ಮಗೆ ಬೈಯ್ಯುತ್ತಾ, ಪತ್ರ ಕೈಗೆ ಕೊಟ್ಟಳು. ಟೀಚರ್ ಕಮಲ ಪತ್ರ ತೆಗೆದು ಓದಿದರು. ತನಗೆ ಒಳ್ಳೆಯ ಕೆಲ್ಸ ಸಿಕ್ಕಿದೆ, ತಾನು ಚೆನ್ನಾಗಿ ಇದ್ದೇನೆ. ತನಗೆ ಕೆಲಸ ಕೊಟ್ಟ ಮ್ಯಾನೇಜರ್ ಮಗಳು ಮತ್ತು ತಾನು ಪ್ರೀತಿ ಮಾಡಿ ಮದುವೆ ಆಗಿರುವುದಾಗಿಯೂ, ಅಲ್ಲಿಂದನೇ ಆಶೀರ್ವಾದ ಮಾಡಲು ಕೋರಿದ್ದ. ಹಾಗೇ ತನಗೆ ಊರಿಗೆ ಬರಲಾಗುವುದಿಲ್ಲ, ನಿನಗೆ ಎಷ್ಟು ಹಣ ಬೇಕೋ ಅಷ್ಟು ಹಣ ಕಳಿಸುವುದಾಗಿಯೂ ಹೇಳಿದ್ದ. ಓದಿ ಟೀಚರ್ ಕಮಲರ ಕಣ್ಣು ಮಂಜಾಯಿತು. ನಿಂಗಮ್ಮ, ಮಗನ ಮೇಲೆ ಎಷ್ಟೊಂದು ಆಸೆ ಕನಸು ಹೆಣೆದಿದ್ದಳು. ಎಲ್ಲ ನುಚ್ಚುನೂರು ಆಗಿ ಹೋಯಿತು.
ಏನಂತ ಹೇಳಲಿ?, ಈ ಮುದಿ ಜೀವಕ್ಕೆ. ಮಗನಿಗಾಗಿ ತನ್ನ ಸರ್ವಸ್ವವನ್ನೇ ಧಾರೆ ಎರೆದ ಮಹಾತಾಯಿ. ಬಾಯಾರ.. ಹೇಳ್ರಿ ಏನ್ ಬರ್ದಾನ ಅಂತ. ಅಂತ ನಿಂಗಮ್ಮ ಮತ್ತೆ ಕೇಳಿದಾಗಲೆ, ಕಮಲ ಎಚ್ಚೆತ್ತುಕೊಂಡಿದ್ದು. ನಿಂಗಮ್ಮ, ನಿನ್ನ ಮಗಂಗೆ ಚೊಲೋ ನೌಕರಿ ಸಿಕ್ಕದಂತ. ಅಂದಾಗ ಆ ತಾಯಿಯ ಮುಖ ಕಮಲದಂತೆ ಅರಳಿತು. ಹಾಗೇ ಅವ ಮದ್ವೆ ಆಗ್ಯಾನಂತ. ಅವನಿಗೆ ಕೆಲ್ಸ ಕೊಟ್ಟ ಧಣಿ ಮಗಳಂತ. ನಿನ್ನ ಆಶೀರ್ವಾದ ಕೇಳ್ಯಾನ ಅಂದಾಗ, ಪಾಪ ಆ ಮುದಿ ಜೀವ ಸಂಕಟದಿಂದ ಒದ್ದಾಡಿತು. ಕಣ್ಣಲ್ಲಿ ನೀರ ಧಾರೆ. ಏನ್ರೀ ಬಾಯಾರ. ಹೊಟ್ಟೆ ಬಟ್ಟೆ ಕಟ್ಟಿ ಓದ್ಸಿ ದೊಡ್ಡ ಮನುಷ್ಯನ ಮಾಡಾಕ ಎಷ್ಟ್ ಕಷ್ಟ ಪಟ್ಟೀನಿ ಹೌದಿಲ್ಲೋ. ನನ್ನ ಮಗ ಶ್ಯಾನೆ ದೊಡ್ಡ ಮನುಷ್ಯ ಆಗ್ಬುಟ್ಟವ್ನೇ ಬಾಯಾರ. ಹೊತ್ತು ಹೆತ್ತಿದ ಈ ಅವ್ವನ ನೆನಪು ಬಂದಿಲ್ಲ ಅಂದ್ರ ಹ್ಯಾಂಗ ಬಾಯಾರ. ನನ್ನ ಮಗ ಹಾಂಗ ಹಿಂಗ ಅಂತ ಹಾದಿ ಬೀದಿಯೊಳಗ ಬೀಗತಿದ್ದೆ. ಚೊಲೋ ಬಹುಮಾನ ಕೊಟ್ಟ ನೋಡ್ರಿ ಮತ್ತ…ಅಂತ ಗಳ ಗಳನೇ ಅಳತೊಡಗಿದಳು. ಟೀಚರ್ ಕಮಲಮ್ಮ ಹೇಗೋ ಸಮಾಧಾನ ಮಾಡಿ ಮನೆಗೆ ಕಳುಹಿಸಿದರು. ಕಮಲರಿಗೂ ತುಂಬಾ ಬೇಜಾರ್ ಆಗಿತ್ತು. ನಿಂಗಮ್ಮನ ಮಗ ಈತರ ಮಾಡ್ತಾನೆ ಅಂತ ಕನಸು, ಮನಸಿನಲ್ಲೂ ಎಣಿಸಿರಲಿಲ್ಲ. ಇದಾಗಿ ಕೆಲ ದಿನಗಳೇ ಉರುಳಿದ್ದವು… ನಿಂಗಮ್ಮ ಅಂಗನವಾಡಿ ಕಡೆ ಸುಳಿದಿರಲಿಲ್ಲ.
ಊರವರ ಬಳಿ ವಿಚಾರಿಸಿದಾಗ ಇತ್ತೀಚೆಗೆ ಮಗನ ಪತ್ರ ಕೂಡ ಬರುತ್ತಿರಲಿಲ್ಲ ಎನ್ನುವುದು ತಿಳಿಯಿತು ಕಮಲಾರಿಗೆ. ಪಾಪ ಮುದುಕಿ, ಇರುವಷ್ಟು ದಿನ ಚೆನ್ನಾಗಿರಲಿ ಅನ್ನೋ ಕಾರಣಕ್ಕೆ, ನಿಂಗಮ್ಮನ ಮಗನಂತೆಯೇ ಪತ್ರ ಬರೆದು ಸ್ವಲ್ಪ, ಸ್ವಲ್ಪ ದುಡ್ಡು ಕಳುಹಿಸಿ ಕೊಡ ತೊಡಗಿದರು. ಅಂಚೆಯವನ ಬಳಿ ಎಲ್ಲವನ್ನೂ ಹೇಳಿಕೊಂಡು ಇದು ನಿಂಗಮ್ಮನಿಗೆ ತಲುಪಿಸಿ, ಓದಿ ಹೇಳಿ ಬಾ ಎಂದರು ಟೀಚರ್ ಕಮಲಮ್ಮ.
ಒಂದು ದಿನ ಇದ್ದಕ್ಕಿದ್ದಂತೆ ನಿಂಗಮ್ಮನ ಆರೋಗ್ಯ ತುಂಬಾ ಹದಗೆಟ್ಟಿದೆ ಅಂತ ಅಂಚೆಯವ ಬಂದು ಹೇಳಿದಾಗ, ಖುದ್ದಾಗಿ ಟೀಚರ್ ಕಮಲ ನಿಂಗಮ್ಮನ ಮನೆಗೆ ಹೋದರು. ಆ ಪರಿಸ್ಥತಿಯಲ್ಲಿ ನಿಂಗಮ್ಮನ ನೋಡಿ ಕಮಲಾರಿಗೆ ಕರುಳು ಚುರುಕ್ ಎಂದಿತು. ಅಸ್ಥಿ ಪಂಜರವಾಗಿದ್ದ ನಿಂಗಮ್ಮಳನ್ನು ನೋಡಿ, ಏನಾಯ್ತು ನಿಂಗಮ್ಮ? ಅಂತ ಕೈ ಹಿಡಿದು ವಿಚಾರಿಸಲು, ಅಳು ನುಂಗುತ್ತ ಬಾಯಾರ, ನನ್ನ ಆಯಸ್ಸು ಇಷ್ಟೇ ಅಂತೀನಿ. ನೀವು ನನ್ನ ಹೊಟ್ಟೇಲಿ ಹುಟ್ಟಿಲ್ಲ ಕಣ್ ತಾಯಿ. ಆದ್ರೂ ಶ್ಯಾನೆ ಕಾಳಜಿ ಮಾಡೀರಿ. ತಗಳಿ ನಿಮ್ಮ ರೊಕ್ಕ. ನನ್ನ ಮಗ ಪತ್ರ ಬರ್ದಾನ ಅಂತ ಅಂಚೆ ಅಣ್ಣನ ಹತ್ರ ಕಳ್ಸಿ ಕೋಟ್ಟ್ರಲ್ಲ ತಾಯಿ. ಪರಮಾತ್ಮನ ಹತ್ರ ಹೋಗ ಮುಂದ ನಂಗ್ಯಾಕವ್ವ ಈ ರೊಕ್ಕ. ನಾ ಹೆತ್ತ ಮಗ ನನ್ನ ಮರೆತು ಬಿಟ್ಟ ನೋಡ್ರಿ ಮತ್ತ. ಹೊರಲಿಲ್ಲ, ಹೆರಲಿಲ್ಲ. ನೀವ್ ನನ್ನ ಮಗಳೇ ಆಗ್ಬಿಟ್ರಲ್ಲ ಯವ್ವ. ಈ ಜೀವಕ್ಕ ಇಷ್ಟ್ ಸಾಕ್ ತಾಯಿ. ಒಂದೇ ಒಂದ್ ಆಸೆ ಅದ ಬಾಯಾರ. ನನ್ನ ಜೀವಕ್ಕ ನೀವೇ ಕೊಡ್ರಿ ಮುಕ್ತಿ. ನನ್ನ ಮಗಂಗ ತಿಳಿಸ್ಬ್ಯಾಡ್ರಿ ಮತ್ತ. ಮುಂದಿನ ಜನುಮ ಅಂತ ಇದ್ರ ನೀವ್ ನನ್ನ ಹೋಟ್ಯಾಗ ಹುಟ್ರಿ. ಇಲ್ಲ ನಾನೇ ನಿಮ್ಮ ಹೋಟ್ಯಾಗ ಹುಟ್ಟತೇನ್ರೀ ಬಾಯಾರ… ಅನ್ನುತ್ತಿದ್ದ ಹಾಗೇ ನಿಂಗಮ್ಮನ ಪ್ರಾಣ ಪಕ್ಷಿ ಹಾರಿ ಹೋಗಿತ್ತು. .ಆ ಪರಮಾತ್ಮನ ಪಾದ ತಳದಲ್ಲಿ ಲೀನವಾಗಿತ್ತು.
- ಶೋಭಾ ನಾರಾಯಣ ಹೆಗಡೆ – (‘ಒಡಲ ಪ್ರೀತಿ’, ಕಥಾಸಂಕಲನ ದಿಂದ ಆಯ್ದುಕೊಂಡ ಕಥೆ. ಚಿತ್ರ ವಿನ್ಯಾಸ : ನಾಗಶ್ರೀ ಹೆಗಡೆ) ಶಿರಸಿ.
