ಪ್ರೀತಿ ಎಂದರೆ ಪ್ರೀತಿಯ ಹೆಸರಲ್ಲಿ ಆಗುತ್ತಿರುವ ಹೇರಿಕೆಗಳು…ಬಿಡಲು ಆಗದೆ, ಮುಂದುವರೆಯಲು ಆಗದೆ ಸೆಣೆದಾಡುತ್ತಿರುವ ಯುವ ಜನತೆಯ ಮುಗಿಯದ ಪಾಡು. ಶಿಕ್ಷಕಿ ಅಮೃತ ಎಂ ಡಿ ಅವರ ಲೇಖನದಲ್ಲಿ ಪ್ರೀತಿ ಪ್ರೇಮ…ತಪ್ಪದೆ ಮುಂದೆ ಓದಿ…
ಇವತ್ತು ಪ್ರೇಮಿಗಳ ದಿನವಂತೆ, ಅಷ್ಟಕ್ಕೂ ಪ್ರೇಮಿ ಅಂದರೆ ಯಾರು..? ಪ್ರೇಮ ಎಂದರೆ ಏನು? ಕೇವಲ ಒಂದು ಹೆಣ್ಣು ಗಂಡಿನ ನಡುವಿನ ಆಕರ್ಷಣೆ ಸೋಲು – ಗೆಲುವು, ಕಳೆದು ಪಡೆದು ಕೊಳ್ಳುವ ಕೊಡು ಕೊಳ್ಳುವಿಕೆ ಪ್ರೇಮವಾದರು ಹೇಗೆ ಆದೀತು..? ಅಷ್ಟಕ್ಕೂ ಪ್ರೀತಿ ಎಂದರೆ ಏನು..? ಮುಗಿಯದ ಮಾತುಗಳಿಗೆ ಕಿವಿ ಆಗುವುದೇ..? ಅರ್ಥವಿಲ್ಲದ ಸಂಭಾಷಣೆಗಳಿಗೆ ಗಂಟೆ ಗಂಟೆಲೆ ಕೂರುವುದೆ ? ಇಲ್ಲ ಸಂಬಂಧವೇ ಇಲ್ಲದ ಮಾತು ಕಥೆ ಹರಟೆಯಲ್ಲಿ ದಿನ ಕಳೆದು ಬಿಡುವುದೇ..?
ನನ್ನ ಪ್ರಕಾರ ಇದ್ಯಾವುದು ಪ್ರೀತಿಯೇ ಅಲ್ಲ.. ಪ್ರೀತಿ ಹೆಸರಲ್ಲಿ ಆಗುತ್ತಿರುವ ಹೇರಿಕೆಗಳು.. ಬಿಡಲು ಆಗದೆ ಮುಂದುವರೆಯಲು ಆಗದೆ ಸೆಣೆದಾಡುತ್ತಿರುವ ಯುವ ಜನತೆಯ ಮುಗಿಯದ ಪಾಡು.

ಫೋಟೋ ಕೃಪೆ : google
ಇಲ್ಲಿ ಪ್ರೀತಿ ಕೇವಲ ಒಂದು ಹೆಣ್ಣು ಗಂಡಿನ ದೈಹಿಕ ಆಕರ್ಷಣೆಗೋ ,ಮನಸ್ಸಿನ ಮನಸ್ಥಿತಿಯ ಘರ್ಷಣೆಗೋ ಸೀಮಿತ ಆಗಿ ಉಳಿದಿದ್ದು ಅಲ್ಲ.. ಆ ತರ ಇದ್ರೆ ಉಳಿಯುವುದು ಇಲ್ಲ..
ಪ್ರೀತಿ ಕಾಮ ಒಂದೇ ನಾಣ್ಯದ ಎರಡು ಮುಖಗಳು ಎನ್ನ ಬಹುದಾದರೆ ಅಲ್ಲಿ ಪರಿಪೂರ್ಣ ಒಲವಿನ ಸಿಂಚನ ಆದರೂ ಎಲ್ಲಿ..?
ಎಲ್ಲರ ಬದುಕಿಗೂ ಅಮ್ಮ – ಅಪ್ಪ, ಅಕ್ಕ – ತಮ್ಮ, ಅಣ್ಣ – ತಂಗಿ, ಸ್ನೇಹಿತರು, ಅಜ್ಜಿ – ತಾತ, ಸ್ನೇಹಿತರು ಹೀಗೆ ಹತ್ತಾರು ಬಂಧಗಳು ಬಂದು ಹೋಗಿರುತ್ತವೆ.. ಕೆಲವು ಹಾಗೆ ಉಳಿದಿರುತ್ತವೆ. ಅವರೆಲ್ಲ ನೀಡಿದ್ದು ಪ್ರೀತಿಯೇ ಅಲ್ಲವಾ ಹಾಗಾದ್ರೆ,.? ಅವರ ಪ್ರೀತಿಯ ಸ್ಪರ್ಶದಲ್ಲಿ ಕಳೆದು ಹೋದ ಕ್ಷಣಗಳು ಸ್ಮರಣೆಯಲ್ಲಿ ಉಳಿದಿಲ್ಲವೆ.. ?
ಹಾಗಾದ್ರೆ ಪ್ರೀತಿ ಅಂದ್ರೆ ಏನು?? ಹುದುಗಿರುವ ಭಾವಗಳ ಬಡಿದೆಬ್ಬಿಸಬೇಕು. ಕಣ್ಣಲ್ಲಿ ಖುಷಿಯ ಪನ್ನೀರ ಜೊತೆಗೆ ಕಣ್ಣೀರು ಹಾಕಿಸುವ ಭಂಡತನ ಇರ್ಬೇಕು ,ಆ ಕಂಬನಿಯ ಒರೆಸುವ ಗಟ್ಟಿತನವು ಇರಬೇಕು. ಸರಿ ತಪ್ಪುಗಳ ತುಲನೆಯಲ್ಲಿ ಸಮಾಜಾಷಿಸಿ ಆಗಿರಬೇಕು. ಕಳೆದು ಹೋಗುತ್ತಿರುವ ಅಸ್ತಿತ್ವವ ಗಟ್ಟಿಗೊಳಿಸಬೇಕು. ಅವನೋ ಅವಳೋ ಬದುಕಿಗೆ ಹಣತೆ, ಬೆಂಕಿ, ಬತ್ತಿ ಎಲ್ಲವೂ ಆಗಬೇಕು.
ಎಲ್ಲವನ್ನೂ ಕಳೆದು ಕೊಳ್ಳಲು, ಅದೆ ಜಾಗದಲ್ಲಿ ನಿಂತು ಎಲ್ಲವನ್ನೂ ಪಡೆಯೋಕೆ ಆದ್ರೂ ಸಿದ್ದ ಆಗಿರಬೇಕು. ಉಸಿರುಗಟ್ಟುವ ಸಮಯದಲ್ಲಿ ಉಸಿರಂತೇ ಉಳಿಯಬೇಕು ಎನ್ನುವ ಉದ್ದಟತನಗಳ, ಅಥವಾ ಆ ಒತ್ತಡ ಏರುವಷ್ಟು ಪ್ರಭುದ್ದತೆ ನನಗೆ ಇಲ್ಲ. ಮುಚ್ಚಿಟ್ಟ,ಬಚ್ಚಿಟ್ಟ, ಕಾಪಿಟ್ಟ ಎಲ್ಲ ಭಾವಗಳೂ ಪದವಾಗುವಾಗ, ಅನುಭವಕ್ಕೆ ತೆರೆದುಕೊಳ್ಳುವಾಗ ನಿಂತಲ್ಲೇ ಕಳೆದು ಹೋಗುವ ಅದ್ಬುತ ಪ್ರೀತಿ ಆಗಬಹುದೇ.?
ಇಷ್ಟೇನಾ ಒಲವೆಂದರೆ ನೀನು ನಾನಾಗುವ ನಾನು ನೀನಾಗುವ , ಇಲ್ಲ ನಿನ್ನೊಳಗಿನ ನನ್ನನ್ನು ನನ್ನೊಳಗಿನ ನಿನ್ನನ್ನು ಪ್ರತಿ ಕ್ಷಣ ಉಸಿರಾಡಿ ನಲಿವಾಗುವುದಾ..?
ಪ್ರೀತಿ ಎಂದರೆ ಇದಿಷ್ಟೇ :
ತೀರ ಸೇರದ ದಡದ ಕೋರಿಕೆ, ಮುಗಿಲ ಹಬ್ಬದ ಬೆಳಕಿನ ವ್ಯಥೆ. ಭುವಿಯ ಸೇರದ ಬಾನುವಿನ ಕಥೆ..
ಆ ಲೋಕದೊಳ್ಗೆ ಇಳಿದವರು ಎದ್ದಿದ್ದು ಬಹಳ ಕಡಿಮೆ ಅನ್ನಿಸುತ್ತೆ..
ಇಷ್ಟೆಲ್ಲಾ ಆದ್ರೂ ಪ್ರೀತಿಗೆ ಎಲ್ಲವನ್ನೂ ಸೈರಿಸುವಷ್ಟು ಶಕ್ತಿ ಇದೆ,
ತಿಂಗಳು ಗಟ್ಟಲೆ ಮಾತು ಬಿಡುವಷ್ಟು,
ಎಂದು ಬಿಡದ ಹಠ ಸಾಧಿಸುವಷ್ಟು,
ಎಂದು ಸೋಲದಷ್ಟು ಸೋಲುವಷ್ಟು ,.
ಎಂದು ಮಣಿಯದೆ ಕರಗುವಷ್ಟು.
ಮಡಿಲಲ್ಲಿ ಮಗುವಾಗುವಷ್ಟು ..
ಕೊನೆಗೆ ಮಡಿಲಲ್ಲೇ ಮಣ್ಣಾಗುವಷ್ಟು…
ನಮ್ಮೊಳಗೆ ಪ್ರೀತಿ – ಪ್ರೇಮ ಎನ್ನುವುದು ಏನಾದ್ರೂ ಉಳಿದಿದ್ದರೆ ಅದು ಪ್ರಿಯತಮೆ / ಪ್ರಿಯತಮನ ಪ್ರೀತಿಯೇ ಅಲ್ಲವೆ ಅಲ್ಲ, ಸಂಪೂರ್ಣ ಒಲವಿನ ಒಲವು ನಮ್ಮ ಒಳಗೂ ಹೊರಗೂ ಹರಿಯಲಿ. ಬದುಕು ತುಂಬಾ ಭರವಸೆಯ,ಆತ್ಮವಿಶ್ವಾಸವ ತುಂಬುವ ಹೂ ಮನಗಳೆ ನಮ್ಮ ಜೀವನದ ಪರಿಶುದ್ಧ ಒಲವ ಹೊತ್ತ ಕುಸುಮಗಳು ಎಂದೇಳುತ್ತ ಬದುಕಿನ ಪ್ರತಿ ಹೆಜ್ಜೆಗಳನ್ನು ಗುರಿಯಾಗಿಸಿ ಸದಾ ಕಾಲ ಬೆಚ್ಚಗಿನ ಭಾವ ಸೃಷ್ಟಿಸಲು ಪ್ರಯತ್ನಿಸುತ್ತಿರುವ ಪ್ರತಿ ಹೃದಯಕ್ಕೂ ಪ್ರೇಮಿಗಳ ದಿನಾಚರಣೆಯ ಶುಭಾಶಯಗಳು.
- ಅಮೃತ ಎಂ ಡಿ
