ಈ ಮನೆಗೂ ನನಗೂ ಆತ್ಮೀಯ ಬಂಧವಿದೆ. ನನ್ನ ಬಾಲ್ಯದಲ್ಲಿ ತುಂಟಾಟ, ಹಾಳು ಹರಟೆ ಹೆಚ್ಚು ಮಾಡಿದಂತಹ ಅಂಬಿಕಾನಗರದ ‘ಡಿ ಟೈಪ್’ ಮನೆಯಿದು. ಇದರಲ್ಲಿ ಎರಡು ಮನೆಗಳಿವೆ, ಒಂದು ಸಿಲ್ವಿಯಾ ಎನ್ನುವ ಗೆಳತಿಯ ಮನೆಯಾದರೆ – ಇನ್ನೊಂದು ಮರಿಯಾ ಎನ್ನುವ ಗೆಳತಿಯ ಮನೆ. ಈ ಮನೆಯಿಂದ ಕೂಗಳತೆಯಲ್ಲಿ ನನ್ನ ಮನೆಯಿತ್ತು.

ಸಿಲ್ಲಿ, ಮರಿ ಹಾಗು ರೇಣು ಈ ತ್ರಿಮೂರ್ತಿಗಳ ಜೊತೆ ದಿನ ಶುರುವಾಗುತ್ತಿತ್ತು. ಇವರುಗಳ ಜೊತೆ ಇರುವುದೇ ಮಸ್ತ ಮಜಾ. ಮಾತ್ ಮಾತಿನಲ್ಲಿ ಕಾಲ್ ಎಳೆತ, ನಗು, ಹರಟೆ, ತುಂಟಾಟ ಎಲ್ಲವೂ ಇರುತ್ತಿತ್ತು. ಎಷ್ಟೋ ಬಾರಿ ನಾವು ಇದ್ದೇವೆಯೆಂದರೆ ಹುಡುಗರು ನಮ್ಮ ಮುಂದೆ ಹಾಯುತ್ತಲೇ ಇರಲಿಲ್ಲ. ಅದರಲ್ಲೂ ಸಿಲ್ಲಿ -ಮರೀ ಇದ್ದರೇ ಮುಗಿತು, ಹುಡುಗರು ಬೇರೆ ದಾರಿಯೇ ಹುಡುಕುತ್ತಿದ್ದರು.
ಎಷ್ಟೇ ಬೇಜಾರಿರಲಿ, ಅವರೊಂದಿಗೆ ಇದ್ದರೇ ಎಲ್ಲವೂ ಕೂಲ್… ಕೂಲ್ …. ಮರಿಯಾ ತಂದೆ- ತಾಯಿ (ವಿಕ್ಟರ್ ಸರ್- ಸ್ಟೆಲ್ಲಾ ಮಾಮ್) ನಮ್ಮ ಪ್ರೈಮರಿ ಶಿಕ್ಷಕರು. ಸ್ಟೆಲ್ಲಾ ಮಾಮ್ ಪ್ರಕಾಶ ರೈಯವರ ಸ್ವತಃ ಚಿಕ್ಕಮ್ಮ, ತಾಯಿಯ ತಂಗಿ. ಪ್ರಕಾಶ ರೈ ಅವರು ಡಿಸೆಂಬರ್ ತಿಂಗಳು ಈ ಮನೆಯಲ್ಲೇ ಹೆಚ್ಚಾಗಿಯೇ ಕಳೆಯುತ್ತಿದ್ದರು. ನಮ್ಮ ತುಂಟಾಟ ಎಷ್ಟಿತ್ತು ಎಂದರೆ ಪ್ರಕಾಶ ರೈ ಅವರಿಗೂ ಬಿಡುತ್ತಿರಲಿಲ್ಲ. ಈ ಮನೆ ಮುಂದೆ ಒಂದು ಟೀಪಾಯಿ, ಖುರ್ಚಿ ಇಟ್ಕೊಂಡು ವಿಕ್ಟರ್ ಸರ್ , ಪ್ರಕಾಶ ರೈ ಧಮ್ ಹೊಡೆಯುತ್ತಿದ್ದರು. ಸರ್ ಮನೆಯೊಳಕ್ಕೆ ಹೋಗೋದೇ ಕಾಯುದ್ದೆವು, ಪ್ರಕಾಶ್ ರೈ ಒಬ್ಬರೇ ಇರೋದು ನೋಡಿ ಗುಡ್ಡದ ಭೂತ …. ಗುಡ್ಡದ ಭೂತ … ಯಾರು ? ಅವರ್ಯಾರು …((ಗುಡ್ಡದ ಭೂತ ಧಾರವಾಹಿಯಲ್ಲಿ ಅವರು ನಟಿಸಿದ್ದರು) ಎಂದು ಅವರಿಗೆ ಕಿರಿ ಕಿರಿ ಆಗೋ ಹಾಗೆ ಕಿರುಚಿ ಓಡಿ ಹೋಗುತ್ತಿದ್ದೆವು.

(ಸಿಲ್ವಿಯಾ ,ಮರಿಯಾ, ರೇಣುಕಾ ಮತ್ತು ಶಾಲಿನಿ)
ಕೆಲವೊಮ್ಮೆ ಪ್ರಕಾಶ್ ಅವರು ಅಪ್ಪನನ್ನು ಭೇಟಿಯಾಗಲು ಮನೆಗೆ ಬರುತ್ತಿದ್ದರು. ಆಗ ನನ್ನ ಎದೆ ಬಾಯಿಗೆ ಬಂದ ಹಾಗೆ ಆಗೋದು. ಅಪ್ಪನ ಮುಂದೆ ನಮ್ಮನ್ನ ಜಾಸ್ತಿ ಪ್ರಶಂಸೆ ಮಾಡಿಬಿಟ್ಟರೆ ಎನ್ನೋ ಭಯಕ್ಕೆ ಧೈರ್ಯಕ್ಕಾಗಿ ಸಿಲ್ಲಿ-ಮರೀ ಮನೆಯತ್ತ ಓಡಿ ಹೋಗುತ್ತಿದ್ದೆ. ಇದರಲ್ಲಿ ಸಾಕಷ್ಟು ಪಳಗಿದ ಜೀವಗಳು ಅವು. ‘ಧೈರ್ಯ ಇಲ್ಲದ್ರೆ, ಯಾಕೆ ಕಾಡಸ್ತಿಯಾ…ನಾವು ಕಾಡಸಿದ್ರು ನಮ್ಮನ್ನ ಎದುರು ಹಾಕೋ ಧೈರ್ಯ ಯಾರಿಗೂ ಇಲ್ಲ, ನೀನು ಸುಮ್ನೆ ನಮ್ಮ ಹಿಂದೆ ಇರು’ ಅನ್ನೋರು. ಮರೀ ‘ಅಯ್ಯೋ …ನಮ್ಮಣ್ಣ ತಲೇನೆ ಕೊಡಿಸ್ಕೊಳಲ್ಲ ಬಿಡು’ ಅಂತ ಸಮಾಧಾನ ಮಾಡಿ ಕಳಿಸುತ್ತಿದ್ದಳು. ಅದರಂತೆ ಪ್ರಕಾಶ ರೈಯವರು ಕೂಡಾ ಬೇಸರ ಮಾಡಿಕೊಳ್ಳುತ್ತಿರಲಿಲ್ಲ , ನಮ್ಮನ್ನು ನೋಡಿದಾಗ ಸಣ್ಣ ನಗು ಮುಖದ ಮೇಲಿರುತ್ತಿತ್ತು.
ಹೀಗೆ ಸಾಕಷ್ಟು ನೆನಪುಗಳು ಈ ಮನೆಯ ಸುತ್ತ ಇದ್ದವು. ಆದರೆ ಈಗ ಇದು ಪಾಳು ಬಿದ್ದಿದೆ. ನೋಡಲು ಕಷ್ಟವಾಗುತ್ತದೆ. ಒಮ್ಮೊಮ್ಮೆ ಬಾಲ್ಯದಲ್ಲಿ ಆಡಿದ ಮನೆ, ಬಾಲ್ಯದ ನೆನಪು ಹಸಿರಾಗಿರಲಿ ಎಂದೇ ಮನೆ ಸುತ್ತ, ಮನೆ ಮೇಲೆ, ಕೆಳಗೆ ಹುಲ್ಲು ಬೆಳದಿರಬೇಕೇನೋ ಅಂದುಕೊಂಡು ಸಮಾಧಾನ ಮಾಡಿಕೊಳ್ಳುತ್ತೇನೆ.
ಅಂದ ಹಾಗೆ ಸಿಲ್ಲಿ ಆಸ್ಟ್ರೇಲಿಯಾದಲ್ಲಿದ್ದರೆ, ಮರೀ ಅಮೆರಿಕದಲ್ಲಿದ್ದಾಳೆ, ರೇಣು ಇಲ್ಲೇ ಬೆಂಗಳೂರಿನಲ್ಲಿದ್ದಾಳೆ. ಆಗಾಗ ರೇಣು ನಾನು ಕಷ್ಟ ಸುಖ ಮಾತಾಡುವಾಗ ಈ ಎಲ್ಲ ವಿಷಯಗಳನ್ನ ನೆನಪು ಮಾಡಿಕೊಂಡು ನಗುತ್ತೇವೆ, ಬೇಸರವೂ ಪಟ್ಟಿಕೊಳ್ಳುತ್ತೇವೆ.
ಆದರೆ ಈ ಮನೆ ಇಂದು ದೆವ್ವ ಭೂತಗಳ ಮನೆಯಂತೆ ಕಾಣುವುದಂತೂ ನಿಜ.ಮನೆ ಪೂರ್ತಿ ಕಾಣೆಯಾಗುವುದರೊಳಗೆ ಅಲ್ಲಿಗೆ ಹೋಗಿ ಮುಂದೇನಾಯಿತು ಹೇಳುವೆ…
- ಶಾಲಿನಿ ಹೂಲಿ ಪ್ರದೀಪ್
